ಲಕ್ನೋ: ಅಪ್ರಾಪ್ತ ಬಾಲಕಿ ಮತ್ತು ಇಬ್ಬರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ(sexual harassment) ಎಸಗಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ, ಆರ್‌ಸಿಬಿ ತಂಡದ ವೇಗಿ ಯಶ್ ದಯಾಳ್(Yash Dayal) ಅವರನ್ನು ಆಗಸ್ಟ್ 17 ರಿಂದ ಪ್ರಾರಂಭವಾಗುವ 2025 ರ ಉತ್ತರ ಪ್ರದೇಶ ಟಿ 20 ಲೀಗ್ ಆವೃತ್ತಿಯಲ್ಲಿ ಪಾಲ್ಗೊಳ್ಳುವುದನ್ನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ನಿಷೇಧಿಸಿದೆ(Yash Dayal banned ) ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ 5 ವರ್ಷ ಸಹಜೀವನ ನಡೆಸಿದ ಬಳಿಕ ದಯಾಳ್ ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿ ದಯಾಳ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಸದ್ಯ ಮಹಿಳೆ ದಾಖಲಿಸಿರುವ ಪ್ರಕರಣದಲ್ಲಿ ದಯಾಳ್ ಬಂಧನಕ್ಕೆ ಹೈಕೋರ್ಟ್ ತಡೆ ನೀಡಿದೆ.
ಆದರೆ ಬಾಲಕಿ ಮೇಲೆ ಅತ್ಯಾಚಾರ ಆರೋಪದಡಿ ಯಶ್ ದಯಾಳ್ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಬಿಎನ್ಎಸ್‌ನ (ಭಾರತೀಯ ನ್ಯಾಯ ಸಂಹಿತಾ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಬಂಧನಕ್ಕೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ರಾಜಸ್ತಾನ ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣದಲ್ಲಿ ಅವರ ಬಂಧನಕ್ಕೆ ತಡೆ ನೀಡಲು ಅಥವಾ ಪೊಲೀಸ್ ವಿಚಾರಣೆಯನ್ನು ನಿಲ್ಲಿಸಲು ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಅವರು ಬಂಧನ ಭೀತಿಯಲ್ಲಿದ್ದಾರೆ.
ದೂರು ನೀಡಿರುವ ಸಂತ್ರಸ್ತೆ ಕ್ರಿಕೆಟ್ ಆಟಗಾರ್ತಿಯಾಗಿದ್ದು, 2023ರಲ್ಲಿ ನಾನು 17 ವರ್ಷದವಳಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಸೀತಾಪುರ ಪ್ರದೇಶದ ಹೋಟೆಲ್‌ನಲ್ಲಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ದಯಾಳ್ ಭರವಸೆ ನೀಡಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಐಪಿಎಲ್ ಪಂದ್ಯಕ್ಕಾಗಿ ಜೈಪುರಕ್ಕೆ ಬಂದಿದ್ದಾಗ ಮತ್ತೆ ನನ್ನನ್ನು ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.