Srivathsa Joshi Column: ಗಣತಂತ್ರ ದಿವಸಕ್ಕೆ ಯ-ಗಣಗಳದೇ ವಿಶೇಷ ಪಥಸಂಚಲನ

ಛಂದಸ್ಸಿನಲ್ಲಿರುವ ರಚನೆಗಳನ್ನು ಹಾಡುವಾಗಿನ ಲಯವು ಹಾವಿನ ಚಲನೆಯಂತಿರುತ್ತದೆ. ಆದ್ದರಿಂದ ಭುಜಂಗಪ್ರಯಾತ ಎಂದು ಹೆಸರು. ತಲಾ 12 ಅಕ್ಷರಗಳ ನಾಲ್ಕು ಸಾಲುಗಳು. ಪ್ರತಿಯೊಂದು ಸಾಲಿನ ಅಕ್ಷರಗಳನ್ನು ತಲಾ ಮೂರಕ್ಷರಗಳ ನಾಲ್ಕು ಗುಂಪುಗಳನ್ನಾಗಿಸಿದರೆ ಪ್ರತಿಗುಂಪಿನಲ್ಲೂ ಮೊದಲಿ ಗೊಂದು ಲಘು, ಆಮೇಲೆರಡು ಗುರು ಅಕ್ಷರ ಗಳಿರುತ್ತವೆ

Srivathsa joshi Column 260125

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ| ನಿರಾನಂದಮಾನಂದಮದ್ವೈತಪೂರ್ಣಂ| ಪರಂ ನಿರ್ಗು ಣಂ ನಿರ್ವಿಶೇಷಂ ನಿರೀಹಂ| ಪರಬ್ರಹ್ಮರೂಪಂ ಗಣೇಶಂ ಭಜೇಮ||’- ಗಣೇಶ ಸ್ತುತಿ ಯಿಂದಲೇ ಪಥಸಂಚಲನ ಆರಂಭ.

ಇದು ಶಂಕರಾಚಾರ್ಯರು ರಚಿಸಿದ ಗಣೇಶಸ್ತವ ಸ್ತೋತ್ರದ ಮೊದಲ ಶ್ಲೋಕ. ಗಣೇಶನು ಜನನ-ಮರಣಗಳಿಲ್ಲದವನು; ಇಂಥಿಂಥ ಗುಣಗಳುಳ್ಳವನೆಂದಾಗಲೀ ಇಂಥ ಆಕಾರದವನೆಂದಾಗಲೀ ಬಣ್ಣಿ ಸಲಿಕ್ಕೆ ಸಿಗದವನು; ಆನಂದಕ್ಕೆ ಅತೀತನಾಗಿಯೂ ನಮಗೆ ಆನಂದ ನೀಡುವವನು; ಕಾಮನೆ ಗಳಿಗೆ ಮಿಗಿಲಾದವನು; ಎಲ್ಲಕ್ಕಿಂತ ಹೆಚ್ಚಾಗಿ ಪರಬ್ರಹ್ಮಸ್ವರೂಪನು. ಅಂಥ ಗಣೇಶನನ್ನು ನಾವು ಭಜಿಸೋಣ ಎಂಬುದು ಇದರರ್ಥ.

ಗಣೇಶನು ನಿರ್ಗುಣ ನಿರ್ವಿಕಲ್ಪನೆಂದಾದರೆ ಅವನಪ್ಪನೂ ಅಂಥವನೇ ಇರಬೇಕಲ್ಲ? ಹೌದೆನ್ನು ತ್ತಾರೆ ತುಲಸೀದಾಸರು, ರುದ್ರಾಷ್ಟಕದ ಈ ಶ್ಲೋಕದಲ್ಲಿ: ‘ನಮಾಮೀಶಮೀಶಾನ ನಿರ್ವಾಣರೂಪಂ| ವಿಭುಂ ವ್ಯಾಪಕಂ ಬ್ರಹ್ಮವೇದಸ್ವರೂಪಮ್| ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ| ಚಿದಾಕಾಶ ಮಾಕಾಶವಾಸಂ ಭಜೇಧಿಹಮ್||’ ಗಣೇಶನನ್ನು ಬಣ್ಣಿಸಿದ ವಿಶೇಷಣಗಳೇ ಇಲ್ಲಿಯೂ ಬಳಕೆ ಯಾಗಿರುವುದು.

ತುಳಸೀದಾಸರು ‘ರಾಮಚರಿತ ಮಾನಸ’ದ ಉತ್ತರಕಾಂಡದಲ್ಲಿ ಇದನ್ನು ಬರೆದಿದ್ದಾರೆ. ಇಂದಿನ ವಿಶೇಷ ಗಣತಂತ್ರ ಪರೇಡ್‌ನಲ್ಲಿ ಇದು ಎರಡನೆಯ ಟ್ಯಾಬ್ಲೊ. ಈಗ ಬರುತ್ತಿರುವುದು ನಮಗೆಲ್ಲ ಸುಪರಿಚಿತವಾದ, ಸುಪ್ರಭಾತವೂ ಸುಬ್ಬುಲಕ್ಷ್ಮಿಯೂ ಸಮಾನಾರ್ಥಕ ಪದಗಳು ಎಂದು ನಾವೆಲ್ಲ ಸ್ವೀಕರಿಸಿರುವ ವೆಂಕಟೇಶ್ವರ ಸುಪ್ರಭಾತದ್ದೇ ಒಂದು ಭಾಗ, ವೆಂಕಟೇಶ್ವರ ಸ್ತೋತ್ರದ ಎರಡು ಶ್ಲೋಕ ಗಳು: ‘ವಿನಾ ವೆಂಕಟೇಶಂ ನನಾಥೋ ನ ನಾಥಃ| ಸದಾ ವೆಂಕಟೇಶಂ ಸ್ಮರಾಮಿ ಸ್ಮರಾಮಿ| ಹರೇ ವೆಂಕಟೇಶ ಪ್ರಸೀದ ಪ್ರಸೀದ| ಪ್ರಿಯಂ ವೆಂಕಟೇಶ ಪ್ರಯಚ್ಛ ಪ್ರಯಚ್ಛ|| ಅಹಂ ದೂರತಸ್ತೇ ಪದಾಂ ಭೋಜಯುಗ್ಮ| ಪ್ರಣಾಮೇಚ್ಛಯಾಗತ್ಯ ಸೇವಾಂ ಕರೋಮಿ| ಸಕೃತ್ಸೇವಯಾ ನಿತ್ಯಸೇವಾ-ಲತ್ವಂ| ಪ್ರಯಚ್ಛ ಪ್ರಯಚ್ಛ ಪ್ರಭೋ ವೆಂಕಟೇಶ||’- ಅಂದರೆ, ವೆಂಕಟೇಶನಿಲ್ಲದೆ ನಾನು ನಿಜವಾ ಗಿಯೂ ಅನಾಥನು. ಸದಾ ವೆಂಕಟೇಶನನ್ನೇ ಸ್ಮರಿಸುತ್ತೇನೆ.

ವೆಂಕಟೇಶನೇ ನನ್ನನ್ನು ಹರಸು, ನನ್ನೆಡೆ ಕೃಪೆಯನ್ನು ಹರಿಸು. ಇದುವರೆಗೂ ನಿನ್ನ ಪಾದಕಮಲ ಗಳಿಂದ ಬಹುದೂರವಿದ್ದೆ. ಆದರೆ ಈಗ ನಿನ್ನ ಸೇವೆ ಮಾಡುವುದರ ಮಹತ್ತ್ವವನ್ನರಿತು ಬಂದಿದ್ದೇನೆ. ಸೇವೆ ಮಾಡುವ ಅವಕಾಶವನ್ನೂ, ಫಲವನ್ನೂ ಕರುಣಿಸು ಪ್ರಭೋ ಎಂದು ಮತ್ತೆಮತ್ತೆ ಕೇಳಿ ಕೊಳ್ಳುತ್ತಿದ್ದೇನೆ ಎಂದರ್ಥ.

ಮತ್ತೊಮ್ಮೆ ಶಂಕರಾಚಾರ್ಯರ ಮೂರು ಅತಿಜನಪ್ರಿಯ ರಚನೆಗಳು. ಶಿವಾಷ್ಟಕಮ್‌ನ ಮೊದಲ ಶ್ಲೋಕ: ‘ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ| ಜಗನ್ನಾಥ ನಾಥಂ ಸದಾನಂದ ಭಾಜಮ್| ಭವದ್ಭವ್ಯ ಭೂತೇಶ್ವರಂ ಭೂತನಾಥಂ| ಶಿವಂ ಶಂಕರಂ ಶಂಭುಮೀಶಾನಮೀಡೇ||’- ಅಂದರೆ, ನಮ್ಮ ಪ್ರಾಣಗಳಿಗೂ ಸಮಸ್ತ ವಿಶ್ವಕ್ಕೂ ಒಡೆಯನಾದ, ಸರ್ವಾಂತರ್ಯಾಮಿಯೂ ಸರ್ವಾನಂದ ಕಾರಕನೂ ಆಗಿ ಭೂತಗಣಗಳಿಗೂ ಸಕಲಚರಾಚರಗಳಿಗೂ ನಾಥನಾಗಿರುವ, ಈಶಾನ್ಯ ದಿಶಾಧಿಪತಿ ಯಾಗಿರುವ ಮಂಗಳಕರ ಶಿವನನ್ನು ಸ್ತುತಿಸಿ ಶರಣಾಗುತ್ತೇನೆ ಎಂದರ್ಥ.

ಇದರ ಹಿಂದಿನಿಂದ ನಿರ್ವಾಣಷಟ್ಕಮ್‌ನ ಮೊದಲ ಶ್ಲೋಕ: ‘ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ| ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ| ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ| ಚಿದಾನಂದರೂಪಃ ಶಿವೋಧಿಹಂ ಶಿವೋಧಿ ಹಂ||’- ಅಂದರೆ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ- ಇವ್ಯಾವುವೂ ನಾನಲ್ಲ; ರೂಪ, ಶಬ್ದ, ರಸ, ಗಂಧ, ಸ್ಪರ್ಶಗಳನ್ನು ಗ್ರಹಿಸುವ ಪಂಚೇಂದ್ರಿಯಗಳು ನಾನಲ್ಲ; ಭೂಮಿ, ಆಕಾಶ, ಅಗ್ನಿ, ಜಲ, ವಾಯುವೆಂಬ ಪಂಚಭೂತಗಳೂ ನಾನಲ್ಲ; ಚಿದಾನಂದ ರೂಪಿ ಶಿವನೇ ನಾನು! ಎಂದರ್ಥ.

ಇನ್ನು, ಗುರ‍್ವಷ್ಟಕಮ್‌ನ ಮೊದಲ ಶ್ಲೋಕ: ‘ಶರೀರಂ ಸುರೂಪಂ ತಥಾ ವಾ ಕಲತ್ರಂ| ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಮ್| ಮನಶ್ಚೇನ್ನ ಲಗ್ನಂ ಗುರೋರಂಪದ್ಮೇ| ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್||’- ಅಂದರೆ, ತಾನು ಸುರದ್ರೂಪಿ; ಪತ್ನಿಯೂ ಸುಂದರಿ; ತನ್ನ ಯಶಸ್ಸೂ ಎಲ್ಲ ಕಡೆ ಹರಡಿದೆ; ಸಂಪತ್ತು ಮೇರುಪರ್ವತದಷ್ಟಿದೆ. ಆದರೆ, ಮನಸ್ಸು ಗುರುಪದಕಮಲದಲ್ಲಿ ಶರಣಾಗ ದಿದ್ದರೆ, ಏನು ಫಲ? ಏನು ಫಲ? ಏನು ಫಲ? ಎಂದರ್ಥ.

ಶಂಕರಾಚಾರ್ಯರದೇ ಇನ್ನೂ ಎರಡು ರಚನೆಗಳು ಇಲ್ಲಿ ಕಂಗೊಳಿಸುತ್ತಿವೆ: ಭವಾನಿ ಅಷ್ಟಕಮ್‌ನ ಈ ಶ್ಲೋಕ- ‘ನ ತಾತೋ ನ ಮಾತಾ ನ ಬಂಧುರ್ನ ದಾತಾ| ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ| ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ| ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ||’ - ಅಂದರೆ, ತಂದೆಯಿಲ್ಲ, ತಾಯಿಯಿಲ್ಲ, ಬಂಧುಗಳಿಲ್ಲ, ಆಶ್ರಯದಾತರಿಲ್ಲ.

ಮಕ್ಕಳಿಲ್ಲ ಗಂಡ/ಹೆಂಡತಿ ಇಲ್ಲ. ವಿದ್ಯೆಯಾಗಲೀ ವೃತ್ತಿಯಾಗಲೀ ಏನೂ ಇಲ್ಲ. ಭವಾನಿ ದೇವಿಯೇ, ನೀನೊಬ್ಬಳೇ ನನಗೆ ಗತಿ ಎಂದರ್ಥ. ಅಂತೆಯೇ ಲೋಕಕ್ಕೆಲ್ಲ ಅಭಿರಾಮನೆನಿಪ ಶ್ರೀರಾಮನನ್ನು ಕುರಿತಾದದ್ದೂ ಒಂದು: ‘ವಿಶುದ್ಧಂ ಪರಂ ಸಚ್ಚಿದಾನಂದರೂಪಂ| ಗುಣಾಧಾರಮಾಧಾರಹೀನಂ ವರೇಣ್ಯಮ್| ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ| ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ||’- ಅಂದರೆ, ಪರಿಶುದ್ಧನೂ ಪರಿಪೂರ್ಣನೂ ಸ್ವತಃ ನಿರಾವಲಂಬಿಯಾಗಿದ್ದೂ ಗುಣಗಳಿಗೆಲ್ಲ ಆಧಾರನಾಗಿರುವವನೂ, ಅವಿಭಾಜ್ಯನೂ ಅಂತರ್ಯಾಮಿಯೂ ಅಗಣಿತಗುಣಗಣಿ ಯೂ ಅಮಿತಾನಂದಕಾರಕನೂ ತಾನೇ ಪರಂಧಾಮನೂ ಆಗಿರುವ ಶ್ರೀರಾಮನನ್ನು ಪೂಜಿಸುತ್ತೇನೆ ಎಂದರ್ಥ.

ಇದೋ ಈಗ ಬರುತ್ತಿದೆ, ಕಾಳಿದಾಸನು ರಚಿಸಿದ್ದೆನ್ನಲಾದ ಗಂಗಾಷ್ಟಕದ ಒಂದು ಶ್ಲೋಕ. ಇದರಲ್ಲಿ ಗಂಗಾ ಎಂಬ ಪದಕ್ಕೆ ಪ್ರಾಸವಾಗಿ ಪದಪದದಲ್ಲೂ ಅನುಪ್ರಾಸ ಸೇರಿ ಎಷ್ಟು ಸುಂದರವಾಗಿದೆ ನೋಡಿ! ‘ನಮಸ್ತೆಧಿಸ್ತು ಗಂಗೇ ತ್ವದಂಗಪ್ರಸಂಗಾ| ದ್ಭುಜಂಗಾಸ್ತುರಂಗಾಃ ಕುರಂಗಾಃ ಪ್ಲವಂಗಾಃ| ಅನಂಗಾರಿರಂಗಾಃ ಸಸಂಗಾಃ ಶಿವಾಂಗಾ| ಭುಜಂಗಾಧಿಪಾಂಗೀಕೃತಾಂಗಾ ಭವಂತಿ||’- ಅಂದರೆ, ಗಂಗೆಯೇ, ನಿನಗೆ ಶಿರಬಾಗಿ ನಮಿಸುತ್ತೇನೆ.

ನಿನ್ನ ಸ್ಪರ್ಶಮಾತ್ರದಿಂದಲೇ ಸಕಲಜೀವಿಗಳೂ- ಹಾವು, ಕುದುರೆ, ಜಿಂಕೆ, ಕೋತಿ... ಎಲ್ಲವೂ, ಅದೆಷ್ಟೇ ದೊಡ್ಡದೊಡ್ಡ ಗುಂಪುಗಳಲ್ಲಿದ್ದರೂ, ಶಿವನದೋ ವಿಷ್ಣುವಿನದೋ ರೂಪವನ್ನು ಧರಿಸುತ್ತವೆ. ಮೋಕ್ಷ ಪಡೆದು ಶಿವೈಕ್ಯವಾಗುತ್ತವೆ ಅಥವಾ ವಿಷ್ಣುವಿನ ಸನ್ನಿಽಯನ್ನು ಸೇರುತ್ತವೆ. ಅಂಥ ಪುಣ್ಯವನ್ನು ದೊರಕಿಸುವವಳು ನೀನು! ಎಂದರ್ಥ.

ಸರಿ, ಗಣತಂತ್ರ ಪರೇಡ್‌ನ ಟ್ಯಾಬ್ಲೊಗಳಾಗಿ ಈ ಶ್ಲೋಕಗಳನ್ನೇ ಆರಿಸಿಕೊಂಡಿದ್ದೇಕೆ ಎಂದು ಕೆಲವ ರಿಗೆ ಅನೂಹ್ಯ ಆಶ್ಚರ್ಯ ಮತ್ತು ಇನ್ನು ಕೆಲವರಿಗೆ ಅಂದಾಜು ಆಗಿರಬಹುದು. ಇಲ್ಲಿದೆ ವಿವರ. ಈ ಎಲ್ಲ ಶ್ಲೋಕಗಳು/ಸ್ತೋತ್ರಗಳು ‘ಭುಜಂಗಪ್ರಯಾತ’ ಎಂಬ ಛಂದಸ್ಸನ್ನು ಅನುಸರಿಸಿ ರಚನೆ ಯಾಗಿರುವವು. ಭುಜಂಗ ಪ್ರಯಾತ ಎಂದರೇನು? ಭುಜಂಗ ಅಂದರೆ ಹಾವು. ಕೈಕಾಲುಗಳಿಲ್ಲದ ಅದು ತನ್ನ ಇಡೀ ದೇಹವನ್ನು ತೆವಳಿಕೊಂಡು ಚಲಿಸುವುದು ತಾನೆ? ಆದರೆ ಸುಮ್ಮನೆ ಉದ್ದಕ್ಕೆ ತೆವಳಿಕೊಂಡು ಹೋಗಲಿಕ್ಕಾಗದು, ದೇಹದ ನಿರ್ದಿಷ್ಟ ಭಾಗವನ್ನೇ ಭುಜಗಳಂತೆ ಬಳಸಿ ನೆಲಕ್ಕೆ ಹಿಮ್ಮುಖ ಒತ್ತಡಹಾಕಿ ಮುಂದಕ್ಕೆ ಚಲಿಸಬೇಕಾಗುತ್ತದೆ.

ಹೀಗೆ ಹಾವು ಭುಜಗಳನ್ನು ಬಳಸಿ ಚಲಿಸುವುದರಿಂದ ಭುಜಂಗ. ಪ್ರಯಾತ ಅಂದರೆ ಚಲನೆ. ಹಾವಿನ ಚಲನೆಗೆ ಅಂಕುಡೊಂಕಿನ ವಿನ್ಯಾಸವಿರುತ್ತದೆ. ಈ ಛಂದಸ್ಸಿನಲ್ಲಿರುವ ರಚನೆಗಳನ್ನು ಹಾಡುವಾಗಿನ ಲಯವು ಹಾವಿನ ಚಲನೆಯಂತಿರುತ್ತದೆ. ಆದ್ದರಿಂದ ಭುಜಂಗಪ್ರಯಾತ ಎಂದು ಹೆಸರು. ತಲಾ 12 ಅಕ್ಷರಗಳ ನಾಲ್ಕು ಸಾಲುಗಳು. ಪ್ರತಿಯೊಂದು ಸಾಲಿನ ಅಕ್ಷರಗಳನ್ನು ತಲಾ ಮೂರಕ್ಷರಗಳ ನಾಲ್ಕು ಗುಂಪುಗಳನ್ನಾಗಿಸಿದರೆ ಪ್ರತಿಗುಂಪಿನಲ್ಲೂ ಮೊದಲಿಗೊಂದು ಲಘು, ಆಮೇಲೆರಡು ಗುರು ಅಕ್ಷರ ಗಳಿರುತ್ತವೆ.

ಛಂದಸ್ಸಿನ ಪರಿಭಾಷೆಯಲ್ಲಿ ಇದನ್ನು ಯ-ಗಣ ಎನ್ನುತ್ತೇವೆ. ಶಾಲೆಯಲ್ಲಿ ಕಲಿತಿದ್ದ ‘ಯಮಾತಾ ರಾಜಭಾನಸಲಗಂ’ ಸೂತ್ರವನ್ನು ನೀವಿಲ್ಲಿ ಒಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ. ಯ-ಗಣವೆಂದರೆ ‘ಯಮಾತಾ’. ಮೊದಲನೆಯದು ಲಘು, ಆಮೇಲಿನೆರಡು ಗುರು. ಹಾಗಾಗಿ ಭುಜಂಗಪ್ರಯಾತ ಪದ್ಯದಲ್ಲಿ ಪ್ರತಿ ಸಾಲಿನ ಲಯ ‘ಯಮಾತಾ ಯಮಾತಾ ಯಮಾತಾ ಯಮಾತಾ’ ಎಂಬಂತೆ ಇರುತ್ತದೆ.

ಸಂಸ್ಕೃತ ಛಂದೋಗ್ರಂಥಗಳಲ್ಲಿ ಇದನ್ನು ‘ಭುಜಂಗಪ್ರಯಾತಂ ಚತುರ್ಭಿರ್ಯಕಾರೈಃ’ ಅಥವಾ ‘ಭುಜಂಗಪ್ರಯಾತಂ ಭವೇದ್ಯೆ ಶ್ಚತುರ್ಭಿಃ’ ಎಂಬ ಸೂತ್ರದಿಂದ ಗುರುತಿಸುತ್ತಾರೆ. ಪ್ರತಿಸಾಲಿನಲ್ಲಿ ನಾಲ್ಕು ಯ-ಗಣಗಳು ಇರುತ್ತವೆಂದು ಸೂತ್ರ ತಿಳಿಸುತ್ತದೆ, ಮತ್ತು ಸಂಸ್ಕೃತ ಸೂತ್ರಗಳ ಸೆಲ್-ರೆಫರೆನ್ಸ್ ಸ್ವಾರಸ್ಯದಂತೆಯೇ ಈ ಸೂತ್ರಕ್ಕೇ ಲಘು-ಗುರು ಪ್ರಸ್ತಾರ ಹಾಕಿದರೂ ನಾಲ್ಕು ಯ-ಗಣಗಳೇ ಕಾಣಿಸಿಕೊಳ್ಳುತ್ತವೆ!

ಶಂಕರಾಚಾರ್ಯರು ರಚಿಸಿದ ಬಹಳಷ್ಟು ಸ್ತೋತ್ರಗಳು ಭುಜಂಗಪ್ರಯಾತ ಛಂದಸ್ಸಿನಲ್ಲಿವೆ. ಕೆಲವೊಮ್ಮೆ ಸ್ತೋತ್ರದ ಹೆಸರೇ ಸೂಚಿಸುವುದೂ ಇದೆ- ಭವಾನಿ ಭುಜಂಗ, ಶ್ರೀರಾಮ ಭುಜಂಗ, ಸುಬ್ರಹ್ಮಣ್ಯ ಭುಜಂಗ, ಶಾರದಾ ಭುಜಂಗ, ಹನೂಮಾನ್ ಭುಜಂಗ ಇತ್ಯಾದಿ. ಇವೆಲ್ಲದರ ಲಯ ಒಂದೇ ಆದರೂ ರಾಗ/ಧಾಟಿ ಒಂದೇ ಇರಬೇಕಂತೇನಿಲ್ಲ. ಮೇಲೆ ಪರೇಡ್‌ನಲ್ಲಿ ಕಾಣಿಸಿಕೊಂಡ ಸ್ತೋತ್ರಗಳು ಬೇರೆಬೇರೆ ಧಾಟಿಗಳಲ್ಲಿ ಪ್ರಚಲಿತದಲ್ಲಿವೆಯಷ್ಟೆ? ಅಲ್ಲದೇ ದೇವರ ಸ್ತೋತ್ರಗಳಷ್ಟೇ ಈ ಛಂದಸ್ಸಿನಲ್ಲಿರುವುದು ಅಂತೇನೂ ಇಲ್ಲ.

17ನೆಯ ಶತಮಾನದಲ್ಲಿ ಬಾಳಿದ್ದ ಜಗನ್ನಾಥ ಪಂಡಿತನೆಂಬ ಸಂಸ್ಕೃತ ಕವಿಯ ರಸಿಕತನ ಪ್ರಸಂಗ ದಲ್ಲಿ ಭುಜಂಗಪ್ರಯಾತ ಛಂದಸ್ಸಿನ ಎರಡು ಪದ್ಯಗಳು ಬರುತ್ತವೆ. ಜಗನ್ನಾಥ ಪಂಡಿತ ಮೊಘಲ್ ದೊರೆ ಜಹಾಂಗೀರನಿಂದ ಆಮೇಲೆ ಶಹಾಜಹಾನದಿಂದಲೂ ಸ್ನೇಹಗೌರವ ಗಳಿಸಿದವನು, ಆಸ್ಥಾನಕ ವಿಯಾದವನು. ಒಮ್ಮೆ ಜಗನ್ನಾಥ ಪಂಡಿತ ಹಾಗೂ ಶಹಾಜಹಾನ್ ರಾಜಮಂದಿರದಲ್ಲಿ ಪಗಡೆ ಯಾಡುತ್ತ ಕುಳಿತಿದ್ದರು. ದೊರೆಗೆ ಬಾಯಾರಿಕೆಯಾಯ್ತು.

ದಾಸಿಯ ಮಗಳೊಬ್ಬಳು ಸುರದ್ರೂಪಿ ತರುಣಿ ಚಿನ್ನದ ಹೂಜಿಯಲ್ಲಿ ನೀರು ತಂದಳು. ಜಗನ್ನಾಥ ಆಟವಾಡುವ ಬದಲು ಬಿಟ್ಟ ಕಣ್ಣು ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದನು. ಅದನ್ನು ಗಮನಿ ಸಿದ ಶಹಾಜಹಾನನಿಗೆ ತುಂಟತನ ಮಾಡುವ ಮನಸ್ಸಾಯಿತು. ಪದ್ಯ ರಚಿಸಿ ಈ ತರುಣಿ ಯನ್ನು ವರ್ಣಿಸು ಎಂದು ಜಗನ್ನಾಥನನ್ನು ಕೇಳಿದಾಗ ಥಟ್ಟನೆ ಬಂದ ಉತ್ತರ ಈ ಶ್ಲೋಕ: ‘ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ| ಕುಸುಂಭಾರುಣಂ ಚಾರು ಚೇಲಂ ವಸಾನಾ| ಸಮಸ್ತಸ್ಯ ಲೋಕಸ್ಯ ಚೇತಃ ಪ್ರವೃತ್ತೀಮ್| ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ||’- ಅಂದರೆ, ಈ ಚೆಲುವೆಯು ಅರುಣಾಗಸದ ಬಣ್ಣದ ಬಟ್ಟೆಯನ್ನುಟ್ಟು ತಲೆಮೇಲೆ ಚಿನ್ನದ ಕುಂಭದಲ್ಲಿ ನೀರನ್ನು ಹೊತ್ತು ತರುತ್ತಿದ್ದಾಳೆ.

ಇನ್ನೆರಡು ಕುಂಭಗಳಲ್ಲಿ ಅಮೃತವಿದೆಯೋ ಏನೋ! ಅಂತೂ ಸಮಸ್ತಲೋಕದ ಚೈತನ್ಯವನ್ನೇ ಹೊತ್ತುತರುತ್ತಿರುವಂತೆ ಮಿಂಚುತ್ತಿದ್ದಾಳೆ ಎಂದರ್ಥ. ಶಹಾಜಹಾನ್ ಸಂತುಷ್ಟನಾದ. ಏನು ಬಹುಮಾನ ಬೇಕೆಂದು ಜಗನ್ನಾಥನನ್ನೇ ಕೇಳಿದ. ಆಗ ಹರಿದುಬಂತು ಮತ್ತೊಂದು ಭುಜಂಗಪ್ರ ಯಾತ: ‘ನ ಯಾಚೇ ಗಜಾಲೀಂ ನ ವಾ ವಾಜಿರಾಜೀಂ| ನ ವಿತ್ತೇಷು ಚಿತ್ತಂ ಮದೀಯಂ ಕದಾಪಿ| ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ| ಲವಂಗೀ ಕುರಂಗೀ ದೃಗಂಗೀಕರೋತು||’- ಅಂದರೆ, ‘ನನಗೆ ಆನೆಗಳ ಹಿಂಡು ಬೇಡ.

ಕುದುರೆಗಳೂ ಬೇಡ. ಸಂಪತ್ತನ್ನು ನಾನು ಬಯಸುವುದಿಲ್ಲ. ಜಿಂಕೆಕಣ್ಣುಗಳುಳ್ಳ ಈ ಪೀನಪಯೋ ಧರಿ ಚೆಲುವೆ ಲವಂಗಿ ನನ್ನವಳಾಗಬೇಕು!’ ಎಂದರ್ಥ. ಕವಿಯ ಮನಸ್ಸಿನಲ್ಲಿದ್ದುದನ್ನು ಅರಿತ ಶಹಜಹಾನ್ ಆ ಮದುವೆಯನ್ನೂ ಏರ್ಪಡಿಸಿದನು.

ಜಗನ್ನಾಥ ಕವಿಯ ರಸಿಕಪದ್ಯಗಳನ್ನೂ ನಾವು ಪಥಸಂಚಲನಕ್ಕೆ ಸೇರಿಸಬಹುದು. ಅಷ್ಟೇಅಲ್ಲ, ಸಂಸ್ಕೃತದ ಈ ಛಂದಸ್ಸು ಹಿಂದಿ ಸಾಹಿತ್ಯದಲ್ಲೂ ಬಳಕೆಯಾಗುತ್ತದೆ ಮತ್ತು ಹಿಂದಿ ಚಿತ್ರಗೀತೆಗಳೂ ಭುಜಂಗಪ್ರಯಾತ ಲಯದವು ಇವೆಯೆಂದರೆ ನಿಮಗೆ ಆಶ್ಚರ್ಯವಾಗಬಹುದು. ‘ಯಮಾತಾ ಯಮಾತಾ ಯಮಾತಾ ಯಮಾತಾ’ ಎಂಬಂತೆ ಲಯ ಎಂದು ಆಗಲೇ ಹೇಳಿದೆನಷ್ಟೇ? ಇಲ್ಲೊಂದಿ ಷ್ಟು ಹಿಂದಿ ಚಿತ್ರಗೀತೆಗಳಿವೆ, ಗುನುಗುನಿಸಿ ದೃಢಪಡಿಸಿಕೊಳ್ಳಿ.

ಆರಜೂ ಚಿತ್ರದ ‘ಅಜೀ ರೂಠಕರ್ ಅಬ್ ಕಹಾಂ ಜಾಇಯೇಗಾ... ’ ಮತ್ತು ‘ಏ ಫಲೋಂಕಿ ರಾನೀ ಬಹಾರೋಂ ಕಿ ಮಲಿಕಾ...’ ಹಾಗೆಯೇ, ‘ವೊ ಜಬ್ ಯಾದ್ ಆಯೇ ಬಹುತ್ ಯಾದ್ ಆಯೇ... ’(ಪಾರಸ್‌ಮಣಿ), ‘ತುಮ್ಹೀ ಮೇರೆ ಮಂದಿರ್ ತುಮ್ಹೀ ಮೇರಿ ಪೂಜಾ...’ (ಖಾನದಾನ್), ‘ಬನೇ ಚಾಹೆ ದುಷ್ಮನ್ ಜಮಾನಾ ಹಮಾರಾ...’ (ದೋಸ್ತಾನಾ) ಇತ್ಯಾದಿ ತುಂಬ ಇವೆ. ಯಾಕೋ ಗೊತ್ತಿಲ್ಲ, ಕನ್ನಡ ಕವಿಗಳಿಗೆ ಭುಜಂಗಪ್ರಯಾತ ಛಂದಸ್ಸು ಅಷ್ಟೇನೂ ಹಿಡಿಸಿಲ್ಲವೆಂದು ಕಾಣುತ್ತದೆ.

ಅಂತರಜಾಲದಲ್ಲಿ ಹುಡುಕಿದಾಗ ಭರ್ತೃಹರಿಯ ಸುಭಾಷಿತವೊಂದನ್ನು ಕನ್ನಡಕ್ಕೆ ಅನುವಾದಿಸಿ ದ್ದು ಸಿಕ್ಕಿತು, ಅದೂ ಬಹುಮಟ್ಟಿಗೆ ಸಂಸ್ಕೃತಭೂಯಿಷ್ಠವೇ ಆಗಿದೆ. ‘ಕರಂಪಾತ್ರೆ ಭೈಕ್ಷಂ ಪವಿತ್ರಾನ್ನ ಮಾಶೋ| ತ್ಕರಂ ವಸಮುರ್ವೀತಲಂ ತಲ್ಪಮಾಗಲ್| ವಿರಕ್ತರ್ ಜನಾಸಂಗದೂರರ್ ಸುತೃಪ್ತರ್| ಕರಂ ಕರ್ಮಮಂ ಕಿಳ್ತು ತಾಂ ಸಂತಮಿರ್ಪ್ಪರ್||’ ಹಳಗನ್ನಡ ಕಷ್ಟಪಟ್ಟು ಅರ್ಥಮಾಡಿ ಕೊಳ್ಳಬೇಕು.

ಅದಕ್ಕಿಂತ ಮಾಡರ್ನ್ ಕನ್ನಡದ್ದೊಂದಿರಲಿ ಎಂದು ನಾನೇ ಒಂದು ರಚಿಸಿದ್ದೇನೆ, ಒಪ್ಪಿಸಿಕೊಳ್ಳಿ: ‘ಮಹಾಕುಂಭಮೇಳಕ್ಕೆ ಹೋಗ್ಬಿಟ್ಟು ಬನ್ನೀ| ವಿಹಾರಾರ್ಥ ಬಾಳಲ್ಲಿ ಸಂತೋಷ ತನ್ನಿ| ಬಿಹಾರಕ್ಕು ಹೋಗೀ ಗಯಾ ನೋಡಿ ಬನ್ನೀ| ಚಹಾಪಾನದಭ್ಯಾಸ ಮಾಡ್ಕೊಂಡೆವೆನ್ನಿ||’ ತೆಲುಗಿನಲ್ಲಿ ಭುಜಂಗ ಪ್ರಯಾತ ಕೃಷಿ ಸಾಕಷ್ಟು ಇದೆಯೆಂದೆನಿಸುತ್ತದೆ. ಮರಾಠಿಯಲ್ಲಿ ಸಮರ್ಥರಾಮದಾಸರ ‘ಮನಾತ್ಚೆ ಶ್ಲೋಕ’ ಭುಜಂಗಪ್ರಯಾತ ಛಂದದಲ್ಲಿದೆ.

ಉರ್ದು ಗಜ಼ಲ್‌ಗಳೂ ಈ ಛಂದಸ್ಸಿನವು ಇವೆಯಂತೆ. ಯಾರೋ ಒಬ್ಬರು ಇಂಗ್ಲಿಷ್‌ನಲ್ಲಿ ಮಾಡಿರುವ ಪ್ರಯೋಗವೂ ಇಂಟರ್ನೆಟ್‌ನಲ್ಲಿದೆ. ಗಂಡನ ಕಿರುಕುಳದಿಂದ ರೋಸಿಹೋದ ಹೆಂಡತಿಯ ರಾಗ, ಇಲ್ಲಿದೆ ನೋಡಿ: ‘ Demanding Demanding, denying the request; Demanding to get love, demanding to get heart; Demanding to worship, demanding to follow; Demanding he always, repeating the same words! ಇಲ್ಲಿ ಅಕ್ಷರಗಳ ಎಣಿಕೆಯಲ್ಲ, ಸಿಲೆಬಲ್‌ಗಳನ್ನು ಎಣಿಸ ಬೇಕು. ಬೇಕಿದ್ರೆ ಕನ್ನಡದಲ್ಲಿ ಬರೆದುಕೊಂಡು ಪ್ರಸ್ತಾರ ಹಾಕಬಹುದು, ಪಕ್ಕಾ ಭುಜಂಗಪ್ರಯಾತ!

ಗಣತಂತ್ರ ದಿವಸದ ಪರೇಡ್‌ನಲ್ಲಿ ಭಾಗವಹಿಸಲಿಕ್ಕೆ ಅತ್ಯಂತ ಯೋಗ್ಯ, ಅರ್ಹ, ಸಮಂಜಸ ಎಂಟ್ರಿ ಯೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆ! ಸಂಘದ ಸ್ಥಾಪಕ ಸರಸಂಘ ಚಾಲಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಮತ್ತು ದ್ವಿತೀಯ ಸರಸಂಘಚಾಲಕ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ನಿರ್ದೇಶನ ಮಾರ್ಗದರ್ಶನದಲ್ಲಿ ನರಹರಿ ನಾರಾಯಣ ಭಿಡೆ ಎಂಬ ಸಂಸ್ಕೃತ ಪಂಡಿತರು 1940ರಲ್ಲಿ ರಚಿಸಿದ ಅತ್ಯುತ್ಕೃಷ್ಟ ದೇಶಭಕ್ತಿಗೀತೆ. ಇದು ಕೂಡ ಭುಜಂಗ ಪ್ರಯಾತ ಛಂದಸ್ಸಿನದೇ!

ಯ-ಗಣ ಪ್ರಭಾತ-ರಿಗೆ, ಪ್ರತಿ ಚರಣದ ಕನ್ನಡ ಅನುವಾದದೊಂದಿಗೆ, ಸೇರಿಸಿಕೊಂಡರೆ ಪಥ ಸಂಚಲನದ ಘನತೆ ಹೆಚ್ಚುತ್ತದೆ:‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದು ಭೂಮೇ ಸುಖಂ ವಽತೋಹಮ್, ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ, ಪತತ್ವೇಷ ಕಾಯೋ ನಮಸ್ತೇ ನಮಸ್ತೇ||’ (ಪ್ರೀತಿಪಾತ್ರ ಮಾತೃಭೂಮಿಯೇ ನಿನಗೆ ಸದಾ ವಂದಿಸುವೆ. ಹಿಂದೂ ಭೂಮಿಯೇ ನಿನ್ನಿಂದಾಗಿ ನಾನು ಸುಖದಲ್ಲಿ ಬೆಳೆದಿರುವೆ. ಮಂಗಳಕಾರಿ ಪುಣ್ಯಭೂಮಿಯೇ ನಿನಗಾಗಿಯೇ ಸವೆಸುವೆ ನನ್ನ ದೇಹವನ್ನು. ಮತ್ತೆ ನಾ ನಮಿಸುವೆ ನಿನ್ನ ನಾ ನಮಿಸುವೆ).

‘ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ, ಇಮೇ ಸಾದರಂ ತ್ವಾಂ ನಮಾಮೋ ವಯಮ್, ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಂ, ಶುಭಾಮಾಶಿಷಂ ದೇಹಿ ತತ್ಪೂರ್ತಯೇ||’ (ಶಕ್ತಿಶಾಲಿ ಭಗವಂತನೇ, ಹಿಂದೂರಾಷ್ಟ್ರದಿ ಹುಟ್ಟಿದ ನಾವು ಗರ್ವ-ಗೌರವಗಳಿಂದ ನಿನಗೆ ನಮಿಸುತಿಹೆವು. ನಿನ್ನ ಆಣತಿಯನ್ನು ನಡೆಸಲು ನಿಂತಿಹೆವು ಟೊಂಕ ಕಟ್ಟಿ, ಪೂರ್ತಿಗೊಳಿಸಿಯೇ ತೀರುವೆವು ಇರಲು ಬೆಂಬಲವು ಗಟ್ಟಿ).‘ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಂ, ಸುಶೀಲಂ ಜಗದ್ಯೇನ ನಮ್ರಂ ಭವೇತ್, ಶ್ರುತಂ ಚೈವ ಯತ್ಕಂಟಕಾಕೀರ್ಣ ಮಾರ್ಗಂ, ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್||’ (ವಿಶ್ವದ ಯಾವ ಶಕ್ತಿಗೂ ಸೋಲದಂಥ ಬಲ, ಜಗವೆಲ್ಲ ಗೌರವದಿಂದ ಬಾಗುವಂತೆ ಗುಣ, ಕಠಿನ ಹಾದಿ ಯನ್ನು ಸುಗಮವಾಗಿ ಕ್ರಮಿಸುವ ಜ್ಞಾನ, ಸವಾಲಾಗಿ ಸ್ವೀಕರಿಸಿದ್ದನ್ನು ಮಾಡಿತೋರಿಸುವ ಛಲ- ಇವೆಲ್ಲವನ್ನೂ ಕರುಣಿಸು). ‘ಸಮುತ್ಕರ್ಷನಿಃಶ್ರೇಯಸಸ್ಯೆ ಕಮುಗ್ರಂ, ಪರಂ ಸಾಧನಂ ನಾಮ ವೀರ ವ್ರತಮ್, ತದಂತಃ ಸುರತ್ವಕ್ಷಯಾ ಧ್ಯೇಯನಿಷ್ಠಾ, ಹೃದಂತಃ ಪ್ರಜಾಗರ್ತುತೀವ್ರಾನಿಶಮ್||’ (ಸ್ಪೂರ್ತಿ ಯಾಗಲಿ ನಮಗೆ ನಿಷ್ಠುರ ನಾಯಕತ್ವದ ಕೆಚ್ಚು. ವೀರತ್ವ ಗಳಿಸಲು ಅದಕಿಂತ ಯಾವುದಿದೆ ಹೆಚ್ಚು? ಸುರಿಸುತಿರಲಿ ಕೊನೆಯಿಲ್ಲದ ಧ್ಯೇಯ ನಿಷ್ಠೆಗಳು; ಹೃದಯದಲಿ ತೀವ್ರತೆ ಜಾಗೃತವಿರಲಿ ಹಗಲಿರುಳು).

‘ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿರ್, ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್, ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಂ, ಸಮರ್ಥಾ ಭವತ್ವಾಶಿಶಾ ತೇ ಭೃಶಮ್||’ (ಜಯಶಾಲಿಯಾಗುತ್ತಲೇ ಸಾಗುವ ನಮ್ಮ ಕಾರ್ಯಶಕ್ತಿ, ಧರ್ಮರಕ್ಷಣೆಗೆ ಮುಡಿಪಾಗಲಿ ಇರಿಸಿ ನಿನ್ನಲಿ ಭಕ್ತಿ. ನಮ್ಮ ಈ ರಾಷ್ಟ್ರ ವನು ವೈಭವದ ಉತ್ತುಂಗಕ್ಕೇರಿಸಿ ಮೆರೆಯುವಂತಾಗಲಿ ಕೀರ್ತಿಪತಾಕೆಯನು ಹಾರಿಸಿ). ಭಾರತ ಮಾತೆಗೆ ಜಯವಾಗಲಿ!

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್