ಶಿಮ್ಲಾ: ಇಬ್ಬರು ನರ್ಸ್‌ಗಳು ರಾತ್ರಿ ಕರ್ತವ್ಯದ ಸಮಯದಲ್ಲಿ ಮದ್ಯಪಾನ ಮಾಡಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ನರ್ಸ್‌ಗಳು ಮದ್ಯಪಾನ ಮತ್ತು ಸಿಗರೇಟ್ ಸೇದುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ (Viral News). ಸದ್ಯ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಆಗಸ್ಟ್ 5ರ ರಾತ್ರಿ ನಡೆದ ಈ ಘಟನೆಯ ಬಳಿಕ ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಒಬ್ಬರು ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು. ವರದಿಗಳ ಪ್ರಕಾರ, ಒಬ್ಬ ನರ್ಸ್ ವೈದ್ಯಕೀಯ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಇನ್ನೊಬ್ಬರು ಶಸ್ತ್ರಚಿಕಿತ್ಸಾ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ರಾತ್ರಿ ಪಾಳಿಯ ಸಮಯದಲ್ಲಿ ಮದ್ಯಪಾನ ಮಾಡುತ್ತಿದ್ದರು ಎಂದು ವರದಿಯಾಗಿದೆ. ಒಬ್ಬ ನರ್ಸ್ ಡೆಪ್ಯುಟೇಶನ್ ಮೇಲೆ ಕೆಲಸ ಮಾಡುತ್ತಿದ್ದರು.
ಇಬ್ಬರು ನರ್ಸ್‌ಗಳು ಸತತ ಎರಡು ದಿನಗಳಿಂದ ಆಸ್ಪತ್ರೆ ಆವರಣದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದರು. ಆಗಸ್ಟ್ 4ರ ರಾತ್ರಿ, ಅವರು ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ವಾರ್ಡ್‌ಗಳಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ತಮ್ಮ ಕರ್ತವ್ಯಗಳನ್ನು ಮತ್ತು ರೋಗಿಗಳನ್ನು ನಿರ್ಲಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
ತರಬೇತಿ ಪಡೆಯುವ ದಾದಿಯರು ನೀಡಿದ ದೂರುಗಳ ನಂತರ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಆಸ್ಪತ್ರೆ ಕಟ್ಟಡದೊಳಗೆ ರಾತ್ರಿ 10ರಿಂದ ಮುಂಜಾನೆ 2ರವರೆಗೆ ನರ್ಸ್‌ಗಳು ಮದ್ಯಪಾನ ಮಾಡುತ್ತಿದ್ದರು ಎಂದು ತರಬೇತಿ ಪಡೆಯುವವರೊಬ್ಬರು ತಿಳಿಸಿದ್ದಾರೆ. ಒಬ್ಬ ನರ್ಸ್ ಕುಡಿದು ವಾಂತಿ ಮಾಡಲು ಪ್ರಾರಂಭಿಸಿದಾಗ ಪರಿಸ್ಥಿತಿ ಹದಗೆಟ್ಟಿತು. ಇದು ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕವನ್ನುಂಟು ಮಾಡಿತು.
ಇನ್ನು ಈ ಘಟನೆ ಬಗ್ಗೆ ಉನಾ ಪ್ರಾದೇಶಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಮಂಕೋಟಿಯಾ ಮಾತನಾಡಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಪೂರ್ಣ ವರದಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು. ಇಬ್ಬರ ವಿರುದ್ಧವೂ ತನಿಖೆ ನಡೆಯುತ್ತಿದ್ದು, ಮದ್ಯಪಾನ ಸೇವಿಸಿದ್ದು ನಿಜ ಎಂದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.