ವೆರ್ನಾನ್: ಮಕ್ಕಳಿಗೆ ಪಾರ್ಕ್‍ನಲ್ಲಿ (Park) ಆಟವಾಡುವುದು ಎಂದರೆ ಬಲು ಪ್ರೀತಿ. ಉಯ್ಯಾಲೆಗಳಲ್ಲಿ ತೂಗುವುದು, ಜಾರುಬಂಡಿಯಲ್ಲಿ (Sliding) ಕುಳಿತು ಜಾರುವುದು ಸೇರಿದಂತೆ ಮಕ್ಕಳು ಉದ್ಯಾನವನದಲ್ಲಿ ತಮಗಿಷ್ಟವಾದ ಆಟಗಳನ್ನು ಆಡುತ್ತಾರೆ. ಪ್ರತಿದಿನ ಪಾರ್ಕ್‌ಗೆ ಹೋಗಲು ಸಾಧ್ಯವಾಗದಿದ್ದರೂ, ವಾರಕ್ಕೊಮ್ಮೆಯೋ ಅಥವಾ ತಿಂಗಳಿಗೊಮ್ಮೆಯೋ ಉದ್ಯಾನವನಕ್ಕೆ ಹೋಗಬೇಕೆಂದು ಹಠ ಹಿಡಿಯುತ್ತಾರೆ. ಆದರೆ, ಉದ್ಯಾನವನದಲ್ಲಿ ಕೆಲವು ವಯಸ್ಕರು ಕೂಡ ಮಕ್ಕಳಂತೆ ಆಡುವುದನ್ನು ನೀವು ನೋಡಿರಬಹುದು. ಅದೇ ರೀತಿ, ಇಲ್ಲೊಬ್ಬ ಮಕ್ಕಳ ಹಾಗೆ ಆಟವಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ಹೌದು, 40 ವರ್ಷದ ವ್ಯಕ್ತಿಯೊಬ್ಬ ಮಕ್ಕಳು ಆಡುವ ಸ್ಲೈಡ್‍ನೊಳಗೆ ಸಿಕ್ಕಿಹಾಕಿಕೊಂಡಿದ್ದಾನೆ. ಈತನನ್ನು ರಕ್ಷಿಸಲು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಬರಬೇಕಾಯಿತು. ಅಮೆರಿಕದ ವೆರ್ನಾನ್‍ನಲ್ಲಿನ ಶಾಲೆಯೊಂದರ ಆಟದ ಮೈದಾನದಲ್ಲಿ ಈ ವಿಲಕ್ಷಣ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ವ್ಯಕ್ತಿ ಜಾರುಬಂಡಿಯಲ್ಲಿ ಜಾರಲು ಮುಂದಾಗಿದ್ದಾನೆ. ಆದರೆ, ಅದು ಕಿರಿದಾಗಿದ್ದುದರಿಂದ ಸುರಂಗದೊಳಗೆ ಮಧ್ಯದಲ್ಲಿ ಸಿಲುಕಿಕೊಂಡಿದ್ದಾನೆ. ಅವನು ಮುಂದಕ್ಕೆ ತಿರುಗಿ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಿಗಿಯಾದ ಪ್ಲಾಸ್ಟಿಕ್ ಸ್ಲೈಡ್‍ನೊಳಗೆ ಆತ ಸಿಕ್ಕಿಹಾಕಿಕೊಂಡ, ಹೊರಗೆ ಬರಲು ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ದಳದವರಿಂದ ರಕ್ಷಣಾ ಕಾರ್ಯಾಚರಣೆ
ಇನ್ನು ಬಿಸಿಲಿನ ತಾಪ ಹೆಚ್ಚಿದ್ದರಿಂದ ಪ್ಲ್ಯಾಸ್ಟಿಕ್ ಜಾರುಬಂಡಿ ಕೂಡ ಹೆಚ್ಚು ಬಿಸಿಯಾಗಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಏಕೆಂದರೆ ಸ್ಲೈಡ್‌ನ ಪ್ಲಾಸ್ಟಿಕ್ ಮೇಲ್ಮೈ ಹೆಚ್ಚು ಬಿಸಿಯಾಗಿತ್ತು. ಇದರಿಂದಾಗಿ ಒಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಗೆ ಉಸಿರುಗಟ್ಟಿದ ಮತ್ತು ತಲೆತಿರುಗುವಿಕೆಯ ಅನುಭವವಾಗಿದೆ. ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯವನ್ನು ಸಿದ್ಧಪಡಿಸಿದಾಗ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆತನಿಗೆ ಆಮ್ಲಜನಕ ವ್ಯವಸ್ಥೆಯನ್ನು ಒದಗಿಸಿದರು.

ವೆರ್ನಾನ್‍ನ ಅಗ್ನಿಶಾಮಕ ಇಲಾಖೆಯು ಸ್ಲೈಡ್‌ನ ಮೇಲ್ಭಾಗವನ್ನು ತಮ್ಮ ಟ್ರಕ್‌ನ ಏಣಿಗೆ ಕಟ್ಟಿ, ವಿದ್ಯುತ್ ಉಪಕರಣಗಳನ್ನು ಬಳಸಿ ದಪ್ಪವಾಗಿರುವ ಸ್ಲೈಡಿಂಗ್ ಅನ್ನು ಕತ್ತರಿಸಿತು. ಇದು ಸುಮಾರು 30 ನಿಮಿಷಗಳನ್ನು ತೆಗೆದುಕೊಂಡಿದೆ. ಕೊನೆಗೂ ಆ ವ್ಯಕ್ತಿ ಗಂಭೀರ ಗಾಯಗಳಿಲ್ಲದೆ ಬಚಾವಾಗಿದ್ದಾನೆ. ಆದರೆ, ಸ್ಲೈಡಿಂಗ್ ಮಾತ್ರ ಸಂಪೂರ್ಣ ಹಾನಿಗೊಳಗಾಯಿತು. 40 ವರ್ಷದ ವಯಸ್ಸಿನ ವ್ಯಕ್ತಿಯ ಆಟವಾಡುವ ಬಯಕೆಯಿಂದ ಮಕ್ಕಳು ಆಡುವ ಸ್ಲೈಡಿಂಗ್ ಶಿಥಿಲಗೊಂಡಿದೆ.
ಈ ಸುದ್ದಿಯನ್ನೂ ಓದಿ: ಅಶ್ಲೀಲ ಕಂಟೆಂಟ್ ಮೂಲಕ ಖ್ಯಾತರಾದ ಯುಟ್ಯೂಬರ್ ಸಹೋದರಿಯರಿಂದ ಬೈಕ್ ಸವಾರರ ಜತೆ ಜಗಳ; ವಿಡಿಯೊ ವೈರಲ್