ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ವಸ್ತುಗಳಿಂದ ಹಿಡಿದು ಆಹಾರ, ದಿನಸಿ, ಎಲೆಕ್ಟ್ರಾನಿಕ್ಸ್ ಮುಂತಾದವು ಮನೆಬಾಗಿಲಿಗೆ ಬರುತ್ತವೆ. ಗ್ರಾಹಕರು ಆರ್ಡರ್ ಬುಕ್ ಮಾಡಿದ ನಂತರ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಡೆಲಿವರಿ ಬಾಯ್‍ಗಳು ಮನೆಬಾಗಿಲಿಗೆ ತಂದುಕೊಡುತ್ತಾರೆ. ಈ ಸೇವೆಗಳು ವಿಶ್ವದೆಲ್ಲೆಡೆ ಕೋಟ್ಯಂತರ ಜನರಿಗೆ ಉಪಯೋಗವಾಗಿದೆ. ಆದರೆ, ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಸಮಯಕ್ಕೆ ಸರಿಯಾಗಿ ಡೆಲಿವರಿ ಬಾಯ್‌ಗಳು ಹೋಗಬೇಕಾಗಿದೆ. ಇದು ಅವರನ್ನು ಸಂಕಷ್ಟಕ್ಕೀಡು ಮಾಡಿದೆ.
ಹೌದು, ಚೀನಾದ ಯುವಕನೊಬ್ಬನ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವನು ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಈ ಕ್ಷೇತ್ರದಲ್ಲಿ ತಾನು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ವಿವರಿಸುವಾಗ ಅವನು ದುಃಖಿತನಾಗಿರುವುದು ಕಂಡುಬಂದಿದೆ.
ತನ್ನ ಕಥೆಯನ್ನು ಹೇಳಿದ ಡೆಲಿವರಿ ಬಾಯ್, ಅವನು ಶಾಲೆಯಲ್ಲಿ ಹೆಚ್ಚು ಶಿಕ್ಷಣ ಪಡೆಯದ ಬಗ್ಗೆ ಖೇದ ವ್ಯಕ್ತಪಡಿಸಿದನು. ಅರ್ಧದಲ್ಲೇ ಶಾಲೆ ಬಿಡದಂತೆ ಶಿಕ್ಷಕರು ಮನವೊಲಿಸಿದರೂ ಕೇಳದ ಈತ ಓದಲು ಆಸಕ್ತಿ ತೋರಲಿಲ್ಲವಂತೆ. ಹೆಚ್ಚು ಶಿಕ್ಷಣ ಪಡೆಯದೇ ಜಗತ್ತಿನಲ್ಲಿ ಗೆಲ್ಲಲು ಹೋದೆ. ಆದರೀಗ ಶಿಕ್ಷಣದ ಮಹತ್ವ ಅರಿವಾಗಿದೆ ಎಂದು ಬೇಸರ ಹೊರಹಾಕಿದ್ದಾನೆ.
10 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ನಾಯಿಯಂತೆ ದಣಿದಿದ್ದೇನೆ ಎಂದು ಅಲವತ್ತುಕೊಂಡಿದ್ದಾನೆ. ನಾನು ಒಂದು ಕ್ಷಣವೂ ಸುಮ್ಮನಾಗುವ ಧೈರ್ಯ ಮಾಡುವುದಿಲ್ಲ, ಏಕೆಂದರೆ ನಾನು ಹಾಗೆ ಮಾಡಿದರೆ ನನ್ನ ಹೊಟ್ಟೆ ತುಂಬಿಸುವುದು ಸಾಧ್ಯವಾಗುವುದಿಲ್ಲ. ಇದು ತನ್ನನ್ನು ಆತಂಕಕ್ಕೆ ದೂಡಿದೆ ಎಂದು ಹೇಳಿದ್ದಾನೆ. ತನ್ನ ಹೆತ್ತವರಿಗೆ ಅರ್ಹವಾದ ಜೀವನವನ್ನು ನೀಡದಿದ್ದಕ್ಕಾಗಿ ತಾನು ಎಷ್ಟು ದುಃಖಿತನಾಗಿದ್ದೇನೆ ಎಂದು ಡೆಲಿವರಿ ಬಾಯ್ ಮತ್ತಷ್ಟು ಹೇಳಿಕೊಂಡಿದ್ದಾನೆ.
ಇಲ್ಲಿದೆ ವಿಡಿಯೊ:
ಡೆಲಿವರಿ ಬಾಯ್ ಹೋರಾಟಕ್ಕೆ ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, ಸಾವಿರಾರು ಜನರು ಅದನ್ನು ವೀಕ್ಷಿಸಿದ್ದಾರೆ ಮತ್ತು ಅನೇಕರು ಆ ವ್ಯಕ್ತಿಗೆ ಸಹಾನುಭೂತಿ ತೋರಿದ್ದಾರೆ. ಕೆಲವರು ಡೆಲಿವರಿ ಬಾಯ್‍ಗಳಿಗೆ ಉತ್ತಮ ವೇತನ ನೀಡಬೇಕೆಂದು ಆಗ್ರಹಿಸಿದರೆ, ಇನ್ನು ಕೆಲವರು ತಮ್ಮ ಹೋರಾಟದ ಕಥೆಗಳನ್ನು ಹಂಚಿಕೊಂಡರು.
ಈ ಸುದ್ದಿಯನ್ನೂ ಓದಿ: Viral Video: ಮೊಬೈಲ್ ಕದ್ದಿದ್ದಕ್ಕೆ ಧರ್ಮದೇಟು- ಚಲಿಸುತ್ತಿದ್ದ ರೈಲಿನಿಂದ ಹಾರಿದ ಕಳ್ಳ; ವಿಡಿಯೊ ಫುಲ್ ವೈರಲ್
ಈ ಕೆಲಸಗಳು ಯೋಗ್ಯವಾದ ವೇತನವನ್ನು ನೀಡಬೇಕು. ಅವು ಜನರಿಗೆ ತರುವ ಅನುಕೂಲ ಹೆಚ್ಚಿನದಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದರು. ಮತ್ತೊಬ್ಬರು, ತಾನು 17 ವರ್ಷಗಳ ಕಾಲ ಕಷ್ಟಪಟ್ಟು ಅಧ್ಯಯನ ಮಾಡಿದ ನಂತರ, ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡೆ. ಈಗ ಆಸ್ಟ್ರೇಲಿಯಾದಲ್ಲಿ ಪ್ರತಿದಿನ 14 ಗಂಟೆಗಳ ದೈಹಿಕ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಪದವಿ ಪಡೆದವರು ಕಷ್ಟಪಡುತ್ತಿದ್ದಾರೆ, ಚಿಂತಿಸಬೇಡಿ ಎಂದು ಇನ್ನು ಕೆಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇಂತಹ ವಿಡಿಯೊಗಳು ಕನಿಷ್ಠ ವೇತನ ಪಡೆಯುತ್ತಿರುವ ಲಕ್ಷಾಂತರ ಕಾರ್ಮಿಕರ ಮೌನ ರೋದನೆಯಾಗಿದೆ. ಅವರು ಕಷ್ಟಪಟ್ಟು ದುಡಿದರೂ ಕಡಿಮೆ ವೇತನ ಪಡೆಯುತ್ತಾರೆ. ಇದು ದೊಡ್ಡ ಕನಸು ಕಾಣುವ ಅಥವಾ ಅವರು ಬಯಸಿದ ಜೀವನವನ್ನು ನಡೆಸುವ ಅವರ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಹಲವು ಬಳಕೆದಾರರು ಬೇಸರವ್ಯಕ್ತಪಡಿಸಿದ್ದಾರೆ.