ಭುವನೇಶ್ವರ: ಸಂರಕ್ಷಿತ ಮತ್ತು ಅಪರೂಪದ ಜಾತಿಯ ಹಲ್ಲಿಯ (Lizard) ಮಾಂಸವನ್ನು ಅಡುಗೆ ಮಾಡಿದ ಆರೋಪದ ಮೇಲೆ ಒಡಿಶಾದ ಯೂಟ್ಯೂಬರ್‌ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ (YouTuber arrested). ಮಾಂಸವನ್ನು ಬೇಯಿಸುವ ವಿಡಿಯೊವನ್ನು ಆತ ಸಾಮಾಜಿಕ ಮಾಧ್ಯಮದಲ್ಲಿ (social media) ಪೋಸ್ಟ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಒಡಿಶಾದ ಯೂರ್‌ಭಂಜ್‌ನಲ್ಲಿ ನಡೆದಿದೆ.
ಬಂಧಿತ ಯೂಟ್ಯೂಬರ್‌ನನ್ನು ರೂಪಾ ನಾಯಕ್ ಎಂದು ಗುರುತಿಸಲಾಗಿದ್ದು, ಈತ ಅಸನ್‌ಬಾನಿ ಗ್ರಾಮದವನು ಎಂದು ತಿಳಿದುಬಂದಿದೆ. ಭದ್ರಕ್‌ನಲ್ಲಿರುವ ತನ್ನ ಪತ್ನಿಯ ತಾಯಿಯ ಮನೆಯಿಂದ ಹಿಂತಿರುಗುವಾಗ ಬಂಟಾ ಪ್ರದೇಶದ ಬಳಿ ರಸ್ತೆಯಲ್ಲಿ ಸತ್ತಿರುವ ಅಪರೂಪದ ಜಾತಿಯ ಹಲ್ಲಿಯನ್ನು ನೋಡಿದ್ದಾರೆ. ಹಲ್ಲಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅದರ ಮಾಂಸವನ್ನು ಬೇಯಿಸುವುದರ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಆ ವಿಡಿಯೊವನ್ನು ಫೇಸ್‍ಬುಕ್ ಮತ್ತು ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೊ ವೈರಲ್ ಆದ ನಂತರ ಅರಣ್ಯ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತು. ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಹಲ್ಲಿಯ ಮಾಂಸವನ್ನು ಬೇಯಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳು ನಾಯಕ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಸೆಕ್ಷನ್ 2(16)(ಎ)(ಬಿ), 9, 39(1)(ಬಿ), 48(ಎ)(ಬಿ), ಮತ್ತು 50(1) ಸೇರಿದಂತೆ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಠಾಕೂರ್ಮುಂಡಾ ಅರಣ್ಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನಾಯಕ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral Post: ಆಕಸ್ಮಿಕವಾಗಿ ಗೂಗಲ್ ಮ್ಯಾಪ್‌ನಲ್ಲಿ ಸೆರೆಯಾಯ್ತು ದಂಪತಿಯ ದಶಕದ ಪ್ರಯಾಣ; ಈಗ ಇಬ್ಬರೂ ಇಲ್ಲ, ಮನೆಯೂ ಕಣ್ಮರೆ!