ಬೆಂಗಳೂರು: ಅಯ್ಯೋ ಶ್ರದ್ಧಾ (Aiyyo Shraddha) ಎಂದು ಜನಪ್ರಿಯರಾಗಿರುವ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಶ್ರದ್ಧಾ ಜೈನ್ (Shraddha Jain), ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮೊದಲು ಹಂಚಿಕೊಂಡ ‘ಸೋ ಮಿನಿ ಥಿಂಗ್ಸ್’ ವಿಡಿಯೊ ಭಾಷಾ ಭಿನ್ನತೆಯ ಚರ್ಚೆಗೆ ಕಿಡಿ ಹೊತ್ತಿಸಿದೆ. ‘ಎ ವಿಶ್ ಫಾರ್ ಇಂಡಿಯಾ’ ಶೀರ್ಷಿಕೆಯ ಸ್ಕಿಟ್‌ನಲ್ಲಿ, 1988ರ ದೇಶಭಕ್ತಿಯ ಗೀತೆ ‘ಮಿಲೆ ಸುರ್ ಮೇರಾ ತುಮ್ಹಾರಾ’ ಮೂಲಕ ರಾಷ್ಟ್ರೀಯ ಏಕತೆಯನ್ನು ಮಿಮರ್ಶಿಸಿದ್ದಾರೆ.
ಶ್ರದ್ಧಾ, ಈ ಗೀತೆಯಿಂದ ತಾನು ಹಲವು ಭಾರತೀಯ ಭಾಷೆಗಳನ್ನು ಕಲಿತೆ ಎಂದು ಕೃತಜ್ಞತೆ ಸೂಚಿಸಿದ್ದಾರೆ. ಆದರೆ ಈ ಗೀತೆಯನ್ನು ಇಂದು ಬಿಡುಗಡೆ ಮಾಡಿದರೆ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ಹಿಂದಿ ಭಾಷೆಯನ್ನು ವಿರೋಧಿಸುತ್ತಿದ್ದವು ಎಂದಿದ್ದಾರೆ. “ಹಲವು ಭಿನ್ನತೆಗಳಿದ್ದರೂ ಈ ಗೀತೆಯನ್ನು ರಚಿಸಿ ಬಿಡುಗಡೆ ಮಾಡಲಾಯಿತು, ಆಗ ಯಾವುದೇ ವಿರೋಧವಿರಲಿಲ್ಲ” ಎಂದು ಶ್ರದ್ಧಾ ಹೇಳಿದ್ದಾರೆ. ಆದರೆ ಇಂದು “ನಿನ್ನ ಭಾಷೆಯನ್ನು ನಾನು ಏಕೆ ಕಲಿಯಬೇಕು?” ಎಂಬ ಪ್ರಶ್ನೆ ಎದ್ದಿರುತ್ತದೆ ಎಂದು ವಿಡಂಬನೆ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: Dharmasthala case: ಧರ್ಮಸ್ಥಳ ಕೇಸ್ ಹಿಂದಿನ ಮಾಸ್ಟರ್ ಮೈಂಡ್ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್: ಜನಾರ್ದನ ರೆಡ್ಡಿ ಆರೋಪ
ಕೆಲ ನೆಟ್ಟಿಗರು ಶ್ರದ್ಧಾ ಸೂಕ್ಷ್ಮ ವಿಷಯವನ್ನು ಹಾಸ್ಯದ ಜತೆ ಪ್ರಸ್ತುತ ಪಡಿಸಿದ್ದಕ್ಕೆ ಪ್ರಶಂಸಿಸಿದರೆ, ಇತರರು, ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ, ಭಾಷಾ ಪ್ರಾಬಲ್ಯವನ್ನು ವಿರೋಧಿಸುವವರನ್ನು ಗೇಲಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. “ಒಬ್ಬ ಡಮ್ಮಿ ಕಾಮಿಡಿಯನ್ ಗಮನ ಸೆಳೆಯಲು ಯತ್ನಿಸುತ್ತಿದ್ದಾಳೆ!” ಎಂದು ಓರ್ವ ಬಹಳ ಕಟುವಾಗಿ ಕಾಮೆಂಟ್ ಮಾಡಿದ್ದಾರೆ. “ನಿನ್ನ ಉದ್ದೇಶವೇನು? ‘ಮಿಲೆ ಸುರ್’ ಬಳಸಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಸ್ವೀಕರಿಸಲು ಹೇಳುತ್ತಿಯಾ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. “ವೈವಿಧ್ಯತೆ ಎಂದರೆ ಕರ್ನಾಟಕದಲ್ಲಿ ಕನ್ನಡಕ್ಕೆ, ಉತ್ತರ ಪ್ರದೇಶದಲ್ಲಿ ಹಿಂದಿಗೆ ಗೌರವ. ಒಂದು ಭಾಷೆಯನ್ನು ಇನ್ನೊಂದಕ್ಕೆ ಹೇರಬೇಡಿ” ಎಂದು ಕನ್ನಡಿಗರೊಬ್ಬರು ಆಕ್ಷೇಪಿಸಿದ್ದಾರೆ.
ಪರ-ವಿರೋಧದ ಚರ್ಚೆ
ಕನ್ನಡ ಲೇಖಕ ಗುರುಪ್ರಸಾದ್ ಡಿ.ಎನ್. ಎಕ್ಸ್‌ನಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ, ಶ್ರದ್ಧಾ ಅವರ ವಿಡಂಬನೆಯ ಗುರಿ ತಪ್ಪಾಗಿದೆ ಎಂದಿದ್ದಾರೆ. “ಹಿಂದಿ ಹೇರಿಕೆ ಒಂದು ಗಂಭೀರ ಸಮಸ್ಯೆ. ಕೇಂದ್ರ ಸರ್ಕಾರವು ಹಿಂದಿಯನ್ನು ಇತರ ಭಾಷೆಗಳ ಮೇಲೆ ಪ್ರಾಬಲ್ಯಗೊಳಿಸುವ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಹಾಸ್ಯವು ಅಧಿಕಾರವನ್ನು ಟೀಕಿಸಬೇಕು, ವಿರೋಧಿಸುವ ಜನರನ್ನಲ್ಲ” ಎಂದು ಹೇಳಿದ್ದಾರೆ. ಆದರೆ ಕೆಲವರು, “ಶ್ರದ್ಧಾ ಅವರ ಪ್ರದರ್ಶನವು ಈ ಸ್ವಾತಂತ್ರ್ಯ ದಿನಕ್ಕೆ ಸೂಕ್ತ ಸಂದೇಶವನ್ನು ನೀಡಿದೆ” ಎಂದು ಪ್ರಶಂಸಿಸಿದ್ದಾರೆ.