ರಣಥಂಬೋರ್: ಮಾರ್ಗದರ್ಶಕನೊಬ್ಬ ಪ್ರವಾಸಿಗರನ್ನು ಹುಲಿಗಳಿರುವ ಅರಣ್ಯದಲ್ಲಿ ಬಿಟ್ಟು ಬಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕತ್ತಲಿನ ವೇಳೆಯಲ್ಲಿ ಮಕ್ಕಳು, ಮಹಿಳೆಯರ ಸೇರಿದಂತೆ ಹಲವು ಮಂದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆತಂಕದಲ್ಲೇ ಕಾಡಿನಲ್ಲಿ ಕಳೆದಿದ್ದಾರೆ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಸಫಾರಿ ವೇಳೆ ಕ್ಯಾಂಟರ್ ಕೆಟ್ಟು ಹೋಗಿದ್ದರಿಂದ ಪ್ರವಾಸಿಗರಿಗೆ ಅತ್ಯಂತ ಭಯಾನಕ ಅನುಭವವಾಗಿದೆ.
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿದ್ದ ಸಂದರ್ಶಕರ ಕ್ಯಾಂಟರ್ ಹಾಳಾಗಿದ್ದು, ಮಾರ್ಗದರ್ಶಕ ಇನ್ನೊಂದು ಕ್ಯಾಂಟರ್ ತರುವುದಾಗಿ ಹೇಳಿ ಹೋದವನು ಮರಳಿ ಬಾರದೇ ಇದ್ದುದರಿಂದ ಪ್ರವಾಸಿಗರು ಭಯಭೀತರಾಗಿದ್ದಾರೆ. ಹುಲಿಗಳೇ ಹೆಚ್ಚಾಗಿರುವ ಈ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಸಿಲುಕಿಕೊಂಡರು.
ಸಂಜೆ 6 ಗಂಟೆಯ ಸುಮಾರಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ ಕಾಡಿನ ಮಧ್ಯದಲ್ಲಿ ಕೆಟ್ಟು ನಿಂತಿತ್ತು. ದಟ್ಟ ಅರಣ್ಯದಲ್ಲಿ ಪ್ರಾಣ ಭಯದಿಂದ ಅವರೆಲ್ಲ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲಕಳೆದಿದ್ದಾರೆ.
Ranthambore के जंगल में फंसे पर्यटक, अंधेरा होने पर घबराई महिलाएं, रोने लगे बच्चे pic.twitter.com/PAo4NbHgS8
— Rajasthan Patrika (@rpbreakingnews) August 17, 2025
ಇನ್ನೊಂದು ಕ್ಯಾಂಟರ್ ತರುವುದಾಗಿ ಹೇಳಿ ಮಾರ್ಗದರ್ಶಕ ಅಲ್ಲಿಂದ ಹೋಗಿದ್ದು, ಮರಳಿ ಬರಲೇ ಇಲ್ಲ. ಪ್ರವಾಸಿಗರು ತೆಗೆದ ವಿಡಿಯೊಗಳಲ್ಲಿ ಮಕ್ಕಳು ಕತ್ತಲೆಯಲ್ಲಿ ಕುಳಿತು ಭಯದಿಂದ ಅಳುತ್ತಿರುವುದನ್ನು ಕಾಣಬಹುದು. ಮೊಬೈಲ್ ದೀಪಗಳನ್ನು ಬಳಸಿ ಅವರು ಅಲ್ಲಿ ಕಾಲ ಕಳೆದಿದ್ದಾರೆ.
ಇದನ್ನೂ ಓದಿ: Hebbala Flyover: ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಈ ಕಾಡಿನಲ್ಲಿ 60 ಕ್ಕೂ ಹೆಚ್ಚು ಹುಲಿಗಳಿವೆ ಎನ್ನಲಾಗುತ್ತದೆ. ಅಲ್ಲದೇ ಅನೇಕ ಚಿರತೆಗಳು, ಕರಡಿಗಳು ಮತ್ತು ಮೊಸಳೆಗಳೂ ಕೂಡ ಇಲ್ಲಿವೆ.
ಸಂಜೆ ಸುಮಾರು 6 ರಿಂದ 7.30 ರ ನಡುವೆ ಕಾಡಿನಲ್ಲಿ ಸಿಲುಕಿಕೊಂಡ ಪ್ರವಾಸಿಗರನ್ನು ಅರಣ್ಯಾಧಿಕಾರಿಗಳು ರಕ್ಷಿಸಿದರು. ಈ ಕುರಿತು ಮಾಹಿತಿ ನೀಡಿರುವ ರಣಥಂಬೋರ್ ಹುಲಿ ಅಭಯಾರಣ್ಯದ ಕ್ಷೇತ್ರ ನಿರ್ದೇಶಕ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೂಪ್ ಕೆ.ಆರ್., ಉದ್ಯಾನವನದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿರಿಸುವುದು ಪ್ರಮುಖ ಆದ್ಯತೆಯಾಗಿದೆ. ನಿಯಮಗಳನ್ನು ಉಲ್ಲಂಘಿಸಿರುವ ಮಾರ್ಗದರ್ಶಿ ಹಾಗೂ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಅಜಾಗರೂಕತೆಗೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.