ಮುಂಬೈ: ಆಪಲ್ ಕಂಪನಿಯು ತನ್ನ ಹೊಸ ಐಫೋನ್ 17 (iPhone 17) ಶ್ರೇಣಿಯಲ್ಲಿನ ಉನ್ನತ ಮಾದರಿಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಘೋಷಿಸಿದೆ. ಜೊತೆಗೆ ಐಫೋನ್ 17 ಮತ್ತು ಹೊಚ್ಚ ಹೊಸ ಐಫೋನ್ ಏರ್ ಅನ್ನು ಘೋಷಿಸಿದೆ. ಹೀಗಾಗಿ ಇದನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಬೈನ ಬಂದಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆಂಪಲ್ ಅಂಗಡಿಯಲ್ಲಿ ಖರೀದಿದಾರರ ನಡುವೆ ಪರಸ್ಪರ ಜಗಳ ಉಂಟಾಗಿದ್ದು, ಹೊಯ್‍ಕೈ ಮಿಲಾಯಿಸಿದ್ದಾರೆ. ಈ ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವಿಡಿಯೊದಲ್ಲಿ, ಆಪಲ್ ಶೋರೂಂ ಹೊರಗೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು, ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು. ಕೆಂಪು ಶರ್ಟ್ ಧರಿಸಿದ ಒಬ್ಬ ವ್ಯಕ್ತಿಯನ್ನು ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿ ಘರ್ಷಣೆಯಿಂದ ಹೊರಗೆ ಎಳೆದೊಯ್ಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಬಿಳಿ ಶರ್ಟ್ ಧರಿಸಿದ ಮತ್ತೊಬ್ಬ ಖರೀದಿದಾರ ಮಧ್ಯಪ್ರವೇಶಿಸಿ ಗಾರ್ಡ್ ಬಳಿ ಮಾತನಾಡುತ್ತಾನೆ.
ನಂತರ ಕಪ್ಪು-ಬಿಳಿ ಶರ್ಟ್ ಧರಿಸಿದ ಎರಡನೇ ದುಷ್ಕರ್ಮಿಯನ್ನು ಜನಸಂದಣಿಯಿಂದ ಎಳೆದೊಯ್ದು ದೂರ ತಳ್ಳಲಾಗುತ್ತದೆ. ಸಮವಸ್ತ್ರದಲ್ಲಿರುವ ಸಶಸ್ತ್ರ ಸಿಬ್ಬಂದಿ ಅವನನ್ನು ಜನಸಂದಣಿಯಿಂದ ಎಳೆದುಕೊಂಡು ಹೋಗುತ್ತಾರೆ. ಸಶಸ್ತ್ರ ಸಿಬ್ಬಂದಿ ಇಲ್ಲದಿದ್ದಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ವಿಡಿಯೊ ವೀಕ್ಷಿಸಿ:
ಆಪಲ್ ತನ್ನ ಹೊಸದಾಗಿ ಬಿಡುಗಡೆಯಾದ ಐಫೋನ್ 17 ಸರಣಿಯ ಮಾರಾಟವನ್ನು ಭಾರತದಾದ್ಯಂತ ಪ್ರಾರಂಭಿಸಿದೆ. ಇದು ಮುಂಬೈ ಮತ್ತು ದೆಹಲಿಯ ಪ್ರಮುಖ ಅಂಗಡಿಗಳ ಹೊರಗೆ ಹೆಚ್ಚಿನ ಜನಸಂದಣಿ ಮತ್ತು ದೀರ್ಘ ಸರತಿ ಸಾಲುಗಳನ್ನು ಸೃಷ್ಟಿಸಿದೆ.
ಮುಂಬೈನಲ್ಲಿ ನಡೆದ ಈ ಘಟನೆಗೆ ಭದ್ರತೆಯ ಕೊರತೆಯೇ ಕಾರಣ ಎಂದು ಕೆಲವು ಖರೀದಿದಾರರು ತಿಳಿಸಿದ್ದಾರೆ. ಅಹಮದಾಬಾದ್‌ನಿಂದ ಬಂದ ಖರೀದಿದಾರ ಮೋಹನ್ ಯಾದವ್, ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೆ. ಅನೇಕ ಜನರು ಸರತಿ ಸಾಲುಗಳನ್ನು ಮುರಿದು ಮುನ್ನುಗ್ಗಲು ಪ್ರಯತ್ನಿಸಿದರು. ಇದು ಪ್ರವೇಶದ್ವಾರದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು. ನಾನು ಬೆಳಗ್ಗೆಯಿಂದ ಕಾಯುತ್ತಿದ್ದೇನೆ. ಸರತಿ ಸಾಲಿನಲ್ಲಿ ನಿಂತಿದ್ದೇನೆ. ಆದರೆ, ಇಲ್ಲಿನ ಭದ್ರತಾ ಸಿಬ್ಬಂದಿಗೆ ಯಾವುದೇ ಜವಾಬ್ದಾರಿ ಇಲ್ಲ. ಜನರು ಸಾಲುಗಳನ್ನು ತಪ್ಪಿಸುತ್ತಿದ್ದಾರೆ. ಭದ್ರತಾ ಅಧಿಕಾರಿಗಳ ಜವಾಬ್ದಾರಿಯ ಕೊರತೆಯಿಂದಾಗಿ ಹಿಂದೆ ನಿಂತಿರುವವರಿಗೆ ಉತ್ಪನ್ನವನ್ನು ಖರೀದಿಸಲು ಅವಕಾಶ ಸಿಗುತ್ತಿಲ್ಲ ಎಂದು ಅವರು ದೂರಿದರು.
ನವದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿರುವ ಆಪಲ್ ಔಟ್‌ಲೆಟ್‌ನ ಹೊರಗೆ ಇದೇ ರೀತಿಯ ಜನದಟ್ಟಣೆ ಕಂಡುಬಂದಿತು. ಅಲ್ಲಿ ಖರೀದಿದಾರರು ಹೊಸ ಐಫೋನ್‌ಗಳನ್ನು ಪಡೆಯಲು ರಾತ್ರಿಯಿಡೀ ಕಾಯುತ್ತಿದ್ದರು. ಬೆಂಗಳೂರಿನ ಆಪಲ್ ಅಂಗಡಿಯಲ್ಲೂ ಜನದಟ್ಟಣೆ ಕಂಡುಬಂದಿತು.
ಆಪಲ್ ಕಂಪನಿಯು ಸಾಮಾನ್ಯ ಐಫೋನ್ 17 ಮತ್ತು ಹೊಚ್ಚ ಹೊಸ ಐಫೋನ್ ಏರ್ ಜೊತೆಗೆ ಟಾಪ್ ಮಾಡೆಲ್‌ಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಬೆಲೆಗಳು 82,900 ರೂ.ಗಳಿಂದ 2.3 ಲಕ್ಷ ರೂ.ಗಳವರೆಗೆ ಇವೆ.