ಬೀಜಿಂಗ್: ಜನನಿಬಿಡ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದ ಮಹಿಳೆಯ ಎದೆಯನ್ನೊತ್ತಿ (ಸಿಪಿಆರ್) ರಕ್ಷಣೆ ಮಾಡಿದ ವ್ಯಕ್ತಿ ವಿರುದ್ಧವೇ ಕೇಸ್ ದಾಖಲಾಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ವ್ಯಕ್ತಿಯೊಬ್ಬ ಸಿಪಿಆರ್ ನಡೆಸುತ್ತಿದ್ದಾಗ ಮಹಿಳೆಯ ಎದೆ ಮುಟ್ಟಿದ ಆರೋಪದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಇದೀಗ ಈ ಘಟನೆ ಭಾರೀ ಸದ್ದು ಮಾಡುತ್ತಿದೆ.
ಏನಿದು ಘಟನೆ?
ಚೀನಾದ ಮಧ್ಯ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್‌ನ ಬೀದಿಯಲ್ಲಿ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದರು. ಕೂಡಲೇ ಅಲ್ಲೇ ಇದ್ದ ಮಹಿಳಾ ವೈದ್ಯೆ ಆಕೆಯ ಸಹಾಯಕ್ಕೆ ಧಾವಿಸಿ ಎದೆಯನ್ನು ಒತ್ತಿದ್ದಾರೆ. ವೈದ್ಯೆ ದಣಿದಿದ್ದರಿಂದ, ಅವರು ಸಹಾಯಕ್ಕಾಗಿ ಬೇರೆಯವರನ್ನು ಕರೆದಿದ್ದಾರೆ. ಈ ವೇಳೆ ಪ್ಯಾನ್ ಎಂಬ ವ್ಯಕ್ತಿ ಮಧ್ಯಪ್ರವೇಶಿಸಿದ್ದು, ಕ್ಲಿನಿಕಲ್ ಮೆಡಿಸಿನ್ ಮತ್ತು ಸಿಪಿಆರ್ ತರಬೇತಿಯಲ್ಲಿ ಪದವಿ ಹೊಂದಿರುವುದಾಗಿ ಹೇಳಿದರು.
ಕೂಡಲೇ ಇಬ್ಬರೂ ಸೇರಿ ಸುಮಾರು ಹತ್ತು ನಿಮಿಷಗಳ ಕಾಲ ಮಹಿಳೆಗೆ ಸಿಪಿಆರ್ ಮಾಡಿದ್ದಾರೆ. ನಂತರ ಅವರು ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಸೂಚಿಸಿದರು. ಅವರಿಬ್ಬರ ಪ್ರಯತ್ನದಿಂದಾಗಿ ಮಹಿಳೆ ಚೇತರಿಸಿಕೊಂಡು ತನ್ನ ಕಣ್ಣುಗಳನ್ನು ತೆರೆದಿದ್ದಾಳೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರ ಬೆನ್ನಲ್ಲೇ ಈ ಘಟನೆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಅಲ್ಲಿ ಕೆಲವು ಬಳಕೆದಾರರು ಸಿಪಿಆರ್ ಸಮಯದಲ್ಲಿ ಮಹಿಳೆ ಎದೆ ಮೇಲೆ ಅವರ ಕೈ ಇಡುವುದು ಅನುಚಿತವಾಗಿದೆ ಎಂದು ಆರೋಪಿಸಿದರು. ಹೀಗಾಗಿ ಸಿಪಿಆರ್ ಮಾಡಿದ ಪ್ಯಾನ್ ವಿರುದ್ಧ ಮಹಿಳೆಯನ್ನು ಮುಟ್ಟಿದ್ದಕ್ಕಾಗಿ ಕೇಸ್ ದಾಖಲಾಗಿದೆ.
ತೀರಾ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದ್ದರೂ ಪ್ರಕರಣ ದಾಖಲಾಗಿರುವುದು ಪ್ಯಾನ್‍ಗೆ ಬೇಸರ ತರಿಸಿದೆ ಅಲ್ಲದೆ ಅವರು ಟೀಕೆಗಳನ್ನು ಎದುರಿಸಬೇಕಾಯ್ತು. ‘ತನಗೆ ಭಯವಾಗುತ್ತಿದೆ. ನನಗೆ ಶಿಕ್ಷೆಯಾಗುತ್ತದೆ ಎಂದು ತಿಳಿದಿದ್ದರೆ, ನಾನು ಸಹಾಯ ಮಾಡಲು ಖಂಡಿತ ಧಾವಿಸುತ್ತಿರಲಿಲ್ಲ. ನಾನು ನೋವಿನಿಂದ ತುಂಬಾ ನಿರಾಶೆಗೊಂಡಿದ್ದೇನೆ. ನನ್ನ ಸಿಪಿಆರ್ ತಂತ್ರಗಳು ತಪ್ಪಾಗಿದ್ದರೆ, ವೈದ್ಯಕೀಯ ಸಿಬ್ಬಂದಿ ಅದನ್ನು ಹೇಳುತ್ತಿದ್ದರು. ಆದರೆ ಇಲ್ಲಿಯವರೆಗೆ ಯಾರೂ ಹೇಳಿಲ್ಲ’ ಎಂದು ಪ್ಯಾನ್ ಹೇಳಿದ್ದಾಗಿ ವರದಿ ತಿಳಿಸಿದೆ.
ಅನೇಕರು ಪ್ಯಾನ್ ಅವರನ್ನು ಬೆಂಬಲಿಸಿದ್ದಾರೆ. ಪ್ಯಾನ್ ಸಮಯಪ್ರಜ್ಞೆ ಹಾಗೂ ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ವರದಿಗಳ ಪ್ರಕಾರ, ಸ್ಥಳೀಯ ಶಿಕ್ಷಕರ ಸಂಘಟನೆಯು ಪ್ಯಾನ್ ವಿರುದ್ಧ ಆಂತರಿಕ ತನಿಖೆ ನಡೆಸಿತು, ಆದರೆ ಆತನ ವಿರುದ್ಧ ಯಾವುದೇ ಔಪಚಾರಿಕ ಆರೋಪಗಳನ್ನು ದಾಖಲಿಸಲಾಗಿಲ್ಲ. ಸಾಕ್ಷಿಗಳಲ್ಲಿ ಒಬ್ಬರಾದ ಡೆಂಗ್ ಎಂಬ ವ್ಯಕ್ತಿ, ಪ್ಯಾನ್ ನಡವಳಿಕೆಯನ್ನು ಸಮರ್ಥಿಸಿಕೊಂಡರು.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಸೇಂಟ್ ಜಾನ್ ಆಂಬ್ಯುಲೆನ್ಸ್ ನಡೆಸಿದ ಸಂಶೋಧನೆಯ ಪ್ರಕಾರ, ಅನುಚಿತ ಸ್ಪರ್ಶ ಅಥವಾ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಒಳಗಾಗುವ ಭಯದಿಂದಾಗಿ ಅನೇಕರು, ವಿಶೇಷವಾಗಿ ಪುರುಷರು ಮಹಿಳೆಯರ ಮೇಲೆ ಸಿಪಿಆರ್ ಮಾಡಲು ಹಿಂಜರಿಯುತ್ತಾರೆ ಎಂದು ತಿಳಿಸಿದೆ.