ಮುಂಬೈ: ಯಾರಿಂದಲೂ ಸಹಾಯ ಸಿಗದ ಕಾರಣ, ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಮೃತದೇಹವನ್ನು ಬೈಕ್ಗೆ ಕಟ್ಟಿ ಸಾಗಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು (Viral Video), ಈ ಘಟನೆ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹಾರಾಷ್ಟ್ರದ ದಿಯೋಲಾಪರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊರ್ಫಾಟಾ ಪ್ರದೇಶದ ಬಳಿಯ ನಾಗ್ಪುರ-ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವೇಗವಾಗಿ ಬಂದ ಟ್ರಕ್, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಗ್ಯಾರ್ಸಿ ಎಂದು ಗುರುತಿಸಲಾಗಿದೆ. ಸಹಾಯಕ್ಕಾಗಿ ದಾರಿಹೋಕರ ಬಳಿ ಮನವಿ ಮಾಡಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಮಹಿಳೆಯ ಪತಿ ಅಮಿತ್ ಯಾದವ್ ಅಸಹಾಯಕರಾಗಿದ್ದರು. ಮೃತದೇಹವನ್ನು ಸಾಗಿಸಲು ಯಾವುದೇ ಸಹಾಯ ಸಿಗದ ಕಾರಣ, ಹತಾಶನಾದ ಅಮಿತ್ ತನ್ನ ಪತ್ನಿಯ ಮೃತದೇಹವನ್ನು ತನ್ನ ದ್ವಿಚಕ್ರ ವಾಹನಕ್ಕೆ ಕಟ್ಟಿ ಮಧ್ಯ ಪ್ರದೇಶದಲ್ಲಿರುವ ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದರು.
ಈ ದಂಪತಿ ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯವರಾಗಿದ್ದರೂ ಕಳೆದ 10 ವರ್ಷಗಳಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು. ಭಾನುವಾರ ಅಮಿತ್ ಮತ್ತು ಅವರ ಪತ್ನಿ ಲೋನಾರದಿಂದ ದಿಯೋಲಾಪರ್ ಮೂಲಕ ಕರಣ್‌ಪುರಕ್ಕೆ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತು. ಅಮಿತ್ ಪತ್ನಿಯ ಮೃತದೇಹವನ್ನು ಬೈಕ್ಗೆ ಕಟ್ಟಿ ಸಾಗಿಸುತ್ತಿರುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.
ವಿಡಿಯೊ ವೀಕ್ಷಿಸಿ
नागपुर-जबलपुर राष्ट्रीय राजमार्ग पर एक दिल दहला देने वाली और इंसानियत को झकझोर देने वाली घटना सामने आई है। एक सड़क दुर्घटना में पत्नी की मौत के बाद जब किसी ने भी मदद नहीं की, तो मजबूर पति ने शव को अपनी मोटरसाइकिल पर बांधकर खुद ही गांव ले जा रहा है। pic.twitter.com/zhuiU9mmu2
— Shabnaz Khanam (@ShabnazKhanam) August 11, 2025
ಆರಂಭದಲ್ಲಿ ಯಾರೂ ಸಹಾಯಕ್ಕೆ ಬರದಿದ್ದರೂ, ಆತ ಮೃತದೇಹವನ್ನು ಬೈಕ್ಗೆ ಕಟ್ಟಿ ಕರೆದುಕೊಂಡು ಹೋಗುತ್ತಿರುವುದನ್ನು ಕಂಡು ಹಲವು ಮಂದಿ ತಡೆಯಲು ಪ್ರಯತ್ನಿಸಿದ್ದಾರೆ. ಜಗಳವಾಗಬಹುದು ಎಂದು ಹೆದರಿದ ಅಮಿತ್, ಬೈಕ್ ನಿಲ್ಲಿಸಿಲ್ಲ. ಇನ್ನು ಹೆದ್ದಾರಿ ಪೊಲೀಸರು ಕೂಡ ಬೈಕ್ ನಿಲ್ಲಿಸುವಂತೆ ಸೂಚಿಸಿದರೂ ಅವರು ಕೇಳಲಿಲ್ಲ. ಕೊನೆಗೆ ಪೊಲೀಸರು ತಡೆಹಿಡಿದು ಬೈಕ್ ನಿಲ್ಲಿಸಿದ್ದಾರೆ. ನಂತರ ಮಹಿಳೆಯ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರದ ಮೇಯೊ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ದುರಂತ ಸಂದರ್ಭಗಳಲ್ಲಿ ಸಹಾನುಭೂತಿ ಮತ್ತು ತುರ್ತು ಪ್ರತಿಕ್ರಿಯೆಯ ಕೊರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.