ಭೋಪಾಲ್: ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು ಮಂಚದ ಸಹಿತ ಆಂಬ್ಯುಲೆನ್ಸ್ ಬಳಿ ಕರೆದೊಯ್ಯುತ್ತಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿ ಮನೆಗೆ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದ ಕಾರಣ, ಅವರನ್ನು ಕೆಸರು ತುಂಬಿದ ರಸ್ತೆಯ ಮೂಲಕ ಈ ರೀತಿ ಕರೆದೊಯ್ಯಲಾಗಿದೆ.
ಸೋಮವಾರ ಈ ಘಟನೆ ನಡೆದಿದ್ದು, 30ರ ಹರೆಯದ ದಲಿತ ಮಹಿಳೆಯನ್ನು ಕೆಲವರು ಮಂಚದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಸ್ತೆಯ ದುಸ್ಥಿತಿಯಿಂದಾಗಿ ಆಂಬ್ಯುಲೆನ್ಸ್ ಗರ್ಭಿಣಿಯಿದ್ದ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುನಿಲ್ ದುಬೆ ಮಾತನಾಡಿ, ರಸ್ತೆಯ ದುಸ್ಥಿತಿಗೆ ಯಾವ ಇಲಾಖೆ ಕಾರಣ ಎಂದು ನಿರ್ಧರಿಸಲು ತನಿಖೆ ನಡೆಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Pregnant Madhya Pradesh Woman Carried On Cot Due To Waterlogged Roadhttps://t.co/DKh8k4RON1 pic.twitter.com/JkckH8mBbb
— NDTV (@ndtv) July 29, 2025
ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ಲಹಾರ್ ವಿಧಾನಸಭಾ ಕ್ಷೇತ್ರದ ಬರೋಖ್ರಿ ಗ್ರಾಮದಲ್ಲಿರುವ ಮಹಿಳೆಯ ಮನೆಗೆ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗಲಿಲ್ಲ. ಭಾರಿ ಮಳೆಯಿಂದಾಗಿ ರಸ್ತೆ ಜಲಾವೃತವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮಹಿಳೆಯಂತೆ ಸೀರೆಯುಟ್ಟು ಪೊಲೀಸ್ ಅಧಿಕಾರಿ ಎದುರು ಅಶ್ಲೀಲ ನೃತ್ಯ- ಏನಿದು ವೈರಲ್ ವಿಡಿಯೊ?
ಚಂಚಲ್ ಎಂದು ಗುರುತಿಸಲಾದ ಮಹಿಳೆಗೆ ಸೋಮವಾರ ಬೆಳಗ್ಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಕುಟುಂಬವು ಆಂಬ್ಯುಲೆನ್ಸ್‌ಗೆ ಕರೆ ಮಾಡಿತು. ಆದರೆ, ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಆಂಬ್ಯುಲೆನ್ಸ್ ಮಹಿಳೆಯ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ನಂತರ, ನಾಲ್ವರು ವ್ಯಕ್ತಿಗಳು ಆಕೆಯನ್ನು ಕೆಸರುಮಯ ರಸ್ತೆಯ ಮೂಲಕ ಹಾಸಿಗೆಯ ಮೇಲೆ ಹೊತ್ತುಕೊಂಡು ಆಂಬ್ಯುಲೆನ್ಸ್‌ಗೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ದುಸ್ಥಿತಿಯ ಬಗ್ಗೆ ಮಾತನಾಡಿದ ದುಬೆ, ಗ್ರಾಮ ಪಂಚಾಯಿತಿಗಳು ಸೀಮಿತ ಹಣವನ್ನು ಪಡೆಯುತ್ತವೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.