ಲಾಸ್ ಏಂಜಲೀಸ್: ಕಸದ ತೊಟ್ಟಿಯೊಂದರಲ್ಲಿ 20 ಅಡಿ ಬೃಹತ್ ಹೆಬ್ಬಾವು ಪತ್ತೆಯಾದ ಘಟನೆ ಅಮೆರಿಕದ ಲಾಸ್ ಏಂಜಲೀಸ್ ನಗರದ ಮಧ್ಯಭಾಗದಲ್ಲಿರುವ ದಿ ಪಿಯೆರೋ ಅಪಾರ್ಟ್‌ಮೆಂಟ್ಸ್‌ನ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ನಡೆದಿದೆ. ಬೃಹತ್ ಹೆಬ್ಬಾವನ್ನು ನೋಡಿದ ನಿವಾಸಿಗಳು ಆತಂಕಗೊಂಡರು. ಉರಗ ರಕ್ಷಕ ಸ್ಥಳಕ್ಕಾಗಮಿಸಿ ಹೆಬ್ಬಾವನ್ನು ಸೆರೆ(Viral Video) ಹಿಡಿದಿದ್ದಾರೆ.
ಉರಗ ರಕ್ಷಕ ಜೋಸೆಫ್ ಹಾರ್ಟ್ 20 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವನ್ನು ತನ್ನ ಬರಿ ಕೈಗಳಿಂದ ಸೆರೆಹಿಡಿದರು. ಕೇವಲ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿ ಬಂದಿದ್ದ ಜೋಸೆಫ್, ಕಸದ ತೊಟ್ಟಿಗೆ ಹಾರಿ ತಲೆಯ ಕೆಳಗೆ ಹಾವನ್ನು ಎಚ್ಚರಿಕೆಯಿಂದ ಹಿಡಿದು, ಅದು ಕಚ್ಚದಂತೆ ತಡೆದರು. ಬೃಹತ್ ಹೆಬ್ಬಾವು ಕಸದ ತೊಟ್ಟಿಯಲ್ಲಿರುವ ವಿಷಯ ತಿಳಿದು ಬಹಳಷ್ಟು ಮಂದಿ ಅಲ್ಲಿ ನೆರೆದಿದ್ದರು. ಹೀಗಾಗಿ ಅದು ಭೀತಿಗೊಂಡಿತ್ತು ಎಂದು ಜೋಸೆಫ್ ಹೇಳಿದರು.
ಹೆಬ್ಬಾವು ಸೆರೆಹಿಡಿಯಲಾದ ವಿಡಿಯೊವನ್ನು ಜೋಸೆಫ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಹಾವನ್ನು ಕಸದ ತೊಟ್ಟಿಯಲ್ಲಿ ಸಣ್ಣ ಬಿನ್ ಕಂಟೇನರ್‌ನಲ್ಲಿ ಬಿಡಲಾಗಿತ್ತು. ಇದು ಪ್ರಾಣಿಗಳ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯದ ಪ್ರಕರಣವಾಗಿದೆ. ಇದೊಂದು ಸಾಕುಜೀವಿಯಾಗಿದ್ದು, ಯಾರೋ ತಂದು ಇಲ್ಲಿ ಬಿಟ್ಟಿದ್ದಾರೆ. ಈ ಹಾವು ವಿಪರೀತ ಬಾಯಿ ಸೋಂಕಿನಿಂದ ಬಳಲುತ್ತಿದೆ. ಹೀಗಾಗಿ ಅದರ ಚಿಕಿತ್ಸೆಗೆ ಖರ್ಚು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಯಾರೋ ಈ ಕಸದ ತೊಟ್ಟಿಯಲ್ಲಿ ತಂದು ಎಸೆದುಹೋಗಿದ್ದಾರೆ ಎಂದು ಜೋಸೆಫ್ ವಿವರಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಹೆಬ್ಬಾವನ್ನು ಸೆರೆಹಿಡಿದ ನಂತರ, ಜೋಸೆಫ್ ಹಾರ್ಟ್ ನಿವಾಸಿಗಳಿಗೆ ಹಾವಿನ ಬಗ್ಗೆ ಅರಿವು ಮೂಡಿಸಿದರು. ಕಳಪೆ ಆರೈಕೆಯಿಂದಾಗಿ ಅದಕ್ಕೆ ತೀವ್ರವಾದ ಬಾಯಿ ಸೋಂಕು ಇದೆ. ಈಗ ವೈದ್ಯರ ನಿಗಾದಲ್ಲಿದ್ದು, ಸರಿಯಾದ ಆರೈಕೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರಾಣಿಗಳ ಪುನರ್ವಸತಿ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಉತ್ತೇಜಿಸುವುದು ತಮ್ಮ ಧ್ಯೇಯವಾಗಿದೆ ಎಂದು ಜೋಸೆಫ್ ಹಾರ್ಟ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Murder accused escape: ಜೈಲಿನಿಂದ ಕೊಲೆ ಆರೋಪಿ ಎಸ್ಕೇಪ್- ಶಾಕಿಂಗ್ ವಿಡಿಯೊ ವೈರಲ್
ರೆಟಿಕ್ಯುಲೇಟೆಡ್ ಹೆಬ್ಬಾವುಗಳು ವಿಶ್ವದ ಅತಿ ಉದ್ದದ ಹಾವು ಪ್ರಭೇದಗಳಲ್ಲಿ ಒಂದಾಗಿದ್ದು, ಆಗ್ನೇಯ ಏಷ್ಯಾ ಮೂಲದ್ದಾಗಿದೆ ಎಂದು ಹೇಳಲಾಗಿದೆ.