ನವದೆಹಲಿ: ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು, ವಿಶೇಷವಾಗಿ ಆಸ್ತಿ ಖರೀದಿಸುವಾಗ ಎರಡು ಬಾರಿ ಯೋಚಿಸಬೇಕು ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಯಾವುದೇ ಯೋಚನೆ ಮಾಡದೆ ಖರೀದಿಸಿದ ಆಸ್ತಿಯು ದುಸ್ವಪ್ನವಾಗಿ ಪರಿಣಮಿಸಬಹುದು. ಇದೇ ರೀತಿ ಯುನೈಟೆಡ್ ಕಿಂಗ್‌ಡಂನ ಖ್ಯಾತ ಫ್ಯಾಷನ್ ಡಿಸೈನರ್ ದಂಪತಿ ಚಾರ್ಲ್ಸ್ ಮತ್ತು ಪೆಟ್ರೀಷಿಯಾ ಲೆಸ್ಟರ್ ಅವರಿಗೆ, ಅವರ ಕನಸಿನ ಮನೆ ದಶಕಗಳ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಏನಿದು ಸ್ಟೋರಿ? ಇಲ್ಲಿದೆ ಓದಿ.
1971 ರಲ್ಲಿ, ದಂಪತಿಗಳು ಯುನೈಟೆಡ್ ಕಿಂಗ್‌ಡಂನ ವೇಲ್ಸ್‌ನಲ್ಲಿರುವ ಲ್ಯಾನ್‌ಫೋಯಿಸ್ಟ್ ಬಂಗಲೆಯನ್ನು ಕೇವಲ ಪೌಂಡ್ 9,000 (ಸುಮಾರು ರೂ. 10.5 ಲಕ್ಷ) ಕ್ಕೆ ಖರೀದಿಸಿದ್ದರು. ಈಗ ಇದರ ಮೌಲ್ಯ ಪೌಂಡ್ 1.2 ಮಿಲಿಯನ್ (ಅಂದರೆ ಸುಮಾರು ರೂ. 14 ಕೋಟಿಗೂ ಹೆಚ್ಚು) ಆಗಿದ್ದು, ಈ ಆಸ್ತಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹತ್ತಿರದ ಕಾಲುವೆಯಲ್ಲಿ ಆಗಾಗ ಭೂಕುಸಿತ ಉಂಟಾಗುವುದು ಇದಕ್ಕೆ ಕಾರಣ.
1690ರ ಸುಮಾರಿಗೆ ನಿರ್ಮಿಸಲಾದ ಈ ಐತಿಹಾಸಿಕ 20 ಕೋಣೆಗಳ ಎಸ್ಟೇಟ್, ದಕ್ಷಿಣ ಅಬರ್ಗವೆನ್ನಿಯಲ್ಲಿರುವ ಮಾನ್ಮೌತ್‌ಶೈರ್ ಮತ್ತು ಬ್ರೆಕಾನ್ ಕಾಲುವೆಯ ಬಳಿ ಇದೆ. ಮನೆ ಸ್ವತಃ ಭವ್ಯವಾಗಿದ್ದರೂ, ಕಡಿದಾದ ಇಳಿಜಾರಿನಲ್ಲಿ ಕೇವಲ 70 ಅಡಿ ಎತ್ತರದಲ್ಲಿ ಹರಿಯುವ ಕಾಲುವೆ ದಂಪತಿಗಳಿಗೆ ಭಯವನ್ನು ತಂದಿದೆ.
ವರದಿಯ ಪ್ರಕಾರ, ಇಲ್ಲಿ ಹಲವಾರು ತೀವ್ರ ಪ್ರವಾಹಗಳು ಮತ್ತು ಭೂಕುಸಿತಗಳು ದಾಖಲಾಗಿವೆ. 1975 ಮತ್ತು 2014 ರಲ್ಲಿ ಅತ್ಯಂತ ವಿನಾಶಕಾರಿ ಘಟನೆಗಳು ಸಂಭವಿಸಿವೆ. 1975 ರಲ್ಲಿ ಸಂಭವಿಸಿದ ಭೂಕುಸಿತವು ಬಹಳ ಅಪಾಯಕಾರಿಯಾಗಿತ್ತು. “ನಾವು ದೊಡ್ಡ ಘರ್ಜನೆಯನ್ನು ಕೇಳಿದೆವು. ಕಾಲುವೆಯ ದಂಡೆಯ ಮೂಲಕ ನೀರು ಒಡೆದು ಮುನ್ನುಗಿತು. ಸುಮಾರು 20,000 ಟನ್ ನೀರು, ಮರಗಳು ಮತ್ತು ಕಲ್ಲುಗಳು ಉರುಳಿಬಿದ್ದವು. ದೊಡ್ಡ ಮರಗಳು ಬಿದ್ದವು, ಅವುಗಳ ಬೇರುಗಳು ಗೋಡೆಗೆ ಬಡಿದು ಅಣೆಕಟ್ಟಿನಂತೆ ನಿಂತಿದ್ದರಿಂದ ನಮ್ಮ ಜೀವ ಉಳಿಯಿತು” ಎಂದು ಕರಾಳ ಕ್ಷಣವನ್ನು ಚಾರ್ಲ್ಸ್ ನೆನಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Black Magic: ಮಾಟ ಮಂತ್ರ ಮಾಡುವುದಾಗಿ ಜನರಿಗೆ ಮೋಸ; ಸ್ವಯಂ ಘೋಷಿತ ದೇವಮಾನವ ಅರೆಸ್ಟ್
ಈಗ 83 ಮತ್ತು 82 ವರ್ಷ ವಯಸ್ಸಿನ ಚಾರ್ಲ್ಸ್ ಮತ್ತು ಪೆಟ್ರೀಷಿಯಾ, ಪ್ರತಿನಿತ್ಯ ಭಯದ ವಾತಾವರಣದಲ್ಲಿ ಬದುಕುವುದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. “ನನಗೆ ಇನ್ನೂ ಸರಿಯಾಗಿ ನಿದ್ರೆ ಬರುತ್ತಿಲ್ಲ. ರಾತ್ರಿಯಲ್ಲಿ ಅಂಥದ್ದೇನಾದರೂ ಸಂಭವಿಸಿದರೆ ಏನು ಮಾಡುವುದು? ಯಾವಾಗಲೂ ಭಯದಲ್ಲೇ ಕಾಲಕಳೆಯುವಂತಾಗಿದೆ. ನಾನು ದಿವಾಳಿಯಾಗಬಹುದು ಅಥವಾ ನನ್ನ ಜೀವನವನ್ನು ಕಳೆದುಕೊಳ್ಳಬಹುದು ಎಂದು ನನಗೆ ಅನಿಸುತ್ತದೆ” ಎಂದು ಪೆಟ್ರೀಷಿಯಾ ಹೇಳಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಂಗಲೆಯನ್ನು ಮಾರಾಟ ಮಾಡಲು ಪ್ರಯತ್ನಿಸಿದರೂ, ದಂಪತಿ ವಿಫಲರಾಗಿದ್ದಾರೆ. ಅವರು ಪೌಂಡ್ 850,000 (ಸುಮಾರು ರೂ. 9.93 ಕೋಟಿ) ಕಡಿಮೆಗೆ ಕೊಡುತ್ತೀವೆಂದರೂ ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲವಂತೆ.