ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಹಾರದ ಮೇಲೆ ಹೆಚ್ಚಿನ ಶುಲ್ಕ ವಿಧಿಸಿದ ಬಗ್ಗೆ ದೂರು ನೀಡಿದ ರೈಲು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿತ; ವಿಡಿಯೊ ಇಲ್ಲಿದೆ

Viral Video: ಆಹಾರಕ್ಕೆ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ದೂರಿದು ನೀಡಿದ್ದಕ್ಕೆ ರೈಲಿನಲ್ಲಿ ಪ್ರಯಾಣಿಕನೊಬ್ಬನನ್ನು ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 19 ಸೆಕೆಂಡುಗಳಿರುವ ವಿಡಿಯೊ ನೋಡಿ ನೆಟ್ಟಿಗರು ಭಾರಿ ಆಕ್ರೋಶ ಹೊರ ಹಾಕಿದ್ದಾರೆ.

ದೆಹಲಿ: ಆಹಾರಕ್ಕೆ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ದೂರಿದ್ದಕ್ಕೆ ರೈಲಿನಲ್ಲಿ ಪ್ರಯಾಣಿಕನೊಬ್ಬನನ್ನು ಆಹಾರ ವಿತರಕ ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸದ್ಯ ಈ ಘಟನೆ ಸಾರ್ವಜನಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ವಿಡಿಯೋವನ್ನು ಮೊದಲಿಗೆ ರೆಡ್ಡಿಟ್‌ನಲ್ಲಿ r/indianrailwaysನಲ್ಲಿ ಹಂಚಿಕೊಳ್ಳಲಾಯಿತು (Viral Video). ನಂತರ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿಯೂ ವಿಡಿಯೊ ಕಾಣಿಸಿಕೊಂಡಿದೆ.

ಪ್ರಯಾಣಿಕನಿಗೆ ಥಳಿಸಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 19 ಸೆಕೆಂಡುಗಳಿರುವ ವಿಡಿಯೊದಲ್ಲಿ ಪುರುಷರ ಗುಂಪೊಂದು (ಕೆಲವರು ಸಮವಸ್ತ್ರ ಧರಿಸಿದ್ದರು) ಸ್ಲೀಪರ್ ಕೋಚ್‌ನೊಳಗೆ ಪ್ರಯಾಣಿಕನನ್ನು ಸುತ್ತುವರಿದು ಅವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ನೋಡಬಹುದು. ಇತರ ಪ್ರಯಾಣಿಕರು ಈ ದೃಶ್ಯವನ್ನು ನೋಡುತ್ತಿರುವುದನ್ನು ಇಲ್ಲಿ ಕಾಣಬಹುದು. ಆದರೆ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ.

ರೆಡ್ಡಿಟ್ ಪೋಸ್ಟ್ ಪ್ರಕಾರ, ರೈಲಿನ ಅಡುಗೆ ಸಿಬ್ಬಂದಿ ಹೆಚ್ಚಿನ ಶುಲ್ಕ ವಿಧಿಸಿದ ನಂತರ ಪ್ರಯಾಣಿಕನು ರೈಲ್ವೆ ಸೇವಾ ಪ್ಲಾಟ್‌ಫಾರ್ಮ್‌ನಲ್ಲಿ ದೂರು ದಾಖಲಿಸಿದ್ದಾನೆ. ದೂರು ನೀಡಿದ ನಂತರ, ಪ್ರಯಾಣಿಕರ ಟಿಕೆಟ್ ವಿವರಗಳನ್ನು (PNR ಮತ್ತು ಸೀಟ್ ಸಂಖ್ಯೆ) IRCTCಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಪೋಸ್ಟ್ ಹೇಳುತ್ತದೆ. ನಂತರ ಅದು ಆಹಾರ ಗುತ್ತಿಗೆದಾರರಿಗೆ ತಿಳಿಸಿದೆ. ಗುತ್ತಿಗೆದಾರನು ತನ್ನ ಕಡೆಯ ಜನರನ್ನು, ಪ್ರಯಾಣಿಕನಿಗೆ ಬೈಯಲು ಮತ್ತು ಥಳಿಸಲು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.



ಈ ಸುದ್ದಿಯನ್ನೂ ಓದಿ: ಜತೆಯಾಗಿ ಸಮಯ ಕಳೆಯಲು ಟೆರೇಸ್ ಮೇಲೆ ಬಂದು ಪತ್ನಿಯನ್ನೇ ಕಳೆದುಕೊಂಡ ಗಂಡ; ಅಷ್ಟಕ್ಕೂ ಆಗಿದ್ದೇನು?

ಈ ವಿಡಿಯೊ ಇದೀಗ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಬಲ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಜುಲೈ 15ರಂದು ರೈಲು ಬರೋಡಾ ವಿಭಾಗದಲ್ಲಿದ್ದಾಗ ದೂರು ಬಂದಿದೆ. ಈ ರೈಲಿನಲ್ಲಿ ಪ್ಯಾಂಟ್ರಿ ಒಪ್ಪಂದವನ್ನು ರದ್ದುಗೊಳಿಸಲು ಈಗ IRCTCಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಸೋಮನಾಥ್-ಜಬಲ್ಪುರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11463) ಒಳಗೊಂಡಿರುವ ರೈಲು ಇದು ಎಂದು ಹೇಳಲಾಗುತ್ತಿದೆ. ಇಂತಹ ಘಟನೆಗಳು ಸಂಭವಿಸಲು ಅವಕಾಶ ನೀಡಿದ್ದಕ್ಕಾಗಿ ನೆಟ್ಟಿಗರು ವ್ಯವಸ್ಥೆಯನ್ನು ಟೀಕಿಸುತ್ತಿದ್ದಾರೆ. ನೀವು ದೂರುದಾರರ ವಿವರಗಳನ್ನು ಯಾಕೆ ನೀಡಿದ್ದು? ಅದು ಅಸುರಕ್ಷಿತ ಮತ್ತು ಬೇಜವಾಬ್ದಾರಿ ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ದೂರುಗಳನ್ನು ಸ್ವತಂತ್ರ ತಂಡವು ನಿರ್ವಹಿಸಬೇಕು ಮತ್ತು ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸದೆ ಮರುಪಾವತಿ ನೀಡಬೇಕು ಎಂದು ಇತರರು ಆಗ್ರಹಿಸಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ದೂರನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು. ಸಮಸ್ಯೆಯನ್ನು ಪರಿಹರಿಸಲಾಗಿಲ್ಲದಿದ್ದರೂ ಸಹ, ಸಮಸ್ಯೆ ಬಗೆಹರಿಯಿತು ಎಂದು ಹೇಳಲು ಒತ್ತಡ ಹೇರಲಾಯಿತು ಎಂದು ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಭಾರತೀಯ ರೈಲ್ವೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.