ಜತೆಯಾಗಿ ಸಮಯ ಕಳೆಯಲು ಟೆರೇಸ್ ಮೇಲೆ ಬಂದು ಪತ್ನಿಯನ್ನೇ ಕಳೆದುಕೊಂಡ ಗಂಡ; ಅಷ್ಟಕ್ಕೂ ಆಗಿದ್ದೇನು?
ಗಂಡನೊಂದಿಗೆ ತಮಾಷೆ ಮಾಡುತ್ತಿದ್ದ ಹೆಂಡತಿ ಕಾಲು ಜಾರಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ನಾನು ಕೆಳಗೆ ಬಿದ್ದರೆ ಹಿಡಿಯುತ್ತಿಯಾ ಎಂದು ಗಂಡನ ಬಳಿ ಕೇಳುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ.


ಚಂಡೀಗಢ: ಗಂಡನೊಂದಿಗೆ (Odisha couple) ತಮಾಷೆ ಮಾಡುತ್ತಿದ್ದ ಹೆಂಡತಿ ಕಾಲು ಜಾರಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ (Fell down) ದುರಂತ ಘಟನೆ ಗುರುಗ್ರಾಮದಲ್ಲಿ (Gurugram) ನಡೆದಿದೆ. ನಾನು ಕೆಳಗೆ ಬಿದ್ದರೆ ಹಿಡಿಯುತ್ತಿಯಾ? ಎಂದು ಗಂಡನ ಬಳಿ ಕೇಳುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಬೋರಿಂಗಿ ಪಾರ್ವತಿ (22) ಎಂದು ಗುರುತಿಸಲಾಗಿದೆ. ಅವರು ತನ್ನ ಪತಿ ದುರ್ಯೋಧನ ರಾವ್ ಎದುರೇ ದುರಂತವಾಗಿ ಕೊನೆಯುಸಿರೆಳೆದಿದ್ದಾರೆ. ಪತಿ ದುರ್ಯೋದನ ರಾವ್ ಅವರು ಪಾರ್ವತಿಯನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೋರಿಂಗಿ ಪಾರ್ವತಿ ಅವರು ಪತಿ ದುರ್ಯೋದನ ರಾವ್ ಬಳಿ ನನ್ನನ್ನು ಹಿಡಿಯುತ್ತೀಯಾ? ಎಂದು ತಮಾಷೆಯಾಗಿ ಕೇಳುತ್ತ ಟೆರೇಸ್‌ನ ಮೇಲೆ ಹತ್ತಿದ್ದಾರೆ. ಆದರೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದರು. ಅವರನ್ನು ಉಳಿಸಲು ದುರ್ಯೋದನ ರಾವ್ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪಾರ್ವತಿ ಅವರ ಸಾವಿನಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ಸಂಗತಿಗಳು ಕಂಡು ಬಂದಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೋರಿಂಗಿ ಪಾರ್ವತಿ ಮತ್ತು ದುರ್ಯೋದನ ರಾವ್ ದಂಪತಿ ಒಡಿಶಾದ ಗಂಜಾಮ್‌ನವರಾಗಿದ್ದು ಗುರುಗ್ರಾಮದ ಡಿಎಲ್‌ಎಫ್ ಹಂತ 3ರ ನಾಲ್ಕು ಅಂತಸ್ತಿನ ಕಟ್ಟಡದ ಎರಡು ಕೋಣೆಗಳ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ರಾವ್ ಖಾಸಗಿ ಸಂಸ್ಥೆಯಲ್ಲಿ ಸಾಮಾಜಿಕ ಮಾಧ್ಯಮ ವಿಷಯ ಮಾಡರೇಟರ್ ಆಗಿ ಕೆಲಸ ಮಾಡುತ್ತಿದ್ದು, ಪಾರ್ವತಿ ಕಾಲ್ ಸೆಂಟರ್‌ನಲ್ಲಿ ಕಾರ್ಯನಿರ್ವಾಹಕರಾಗಿದ್ದರು.
ಇತ್ತೀಚೆಗೆ ರಾತ್ರಿ 10.30ರ ಸುಮಾರಿಗೆ ದಂಪತಿ ಊಟ ಮುಗಿಸಿ ತಂಪಾದ ಗಾಳಿಯನ್ನು ಆನಂದಿಸಲು ಟೆರೇಸ್‌ಗೆ ಬಂದಿದ್ದರು. ಈ ವೇಳೆ ಪಾರ್ವತಿ ಟೆರೇಸ್ ಗೋಡೆಯ ಮೇಲೆ ಹತ್ತಿ ಕುಳಿತರು. ಅಲ್ಲದೇ ತಾನು ಬಿದ್ದರೆ ರಕ್ಷಿಸುವೆಯಾ ಎಂದು ಗಂಡನನ್ನು ಅವರು ಕೇಳಿದ್ದಾರೆ. ಆಗ ರಾವ್ ಅವರನ್ನು ಕೆಳಗೆ ಇಳಿಯಲು ಕೇಳಿದ್ದಾರೆ. ಮಾತ್ರವಲ್ಲದೆ ಅವರನ್ನು ಹಿಂದಕ್ಕೆ ಎಳೆಯಲು ಧಾವಿಸಿದ್ದಾರೆ.
ಈ ವೇಳೆ ಪಾರ್ವತಿ ಟೆರೇಸ್ ಗೋಡೆಯಿಂದ ಕೆಳಗೆ ಇಳಿಯಲು ನಿರ್ಧರಿಸಿದ್ದು, ಸಮತೋಲನ ಕಳೆದುಕೊಂಡು ಬಿದ್ದರು. ಆಗ ರಾವ್ ಅವರ ಕೈ ಹಿಡಿದುಕೊಂಡರು. ಇಬ್ಬರೂ ಸಹಾಯಕ್ಕಾಗಿ ಕೂಗಿದರು. ಆದರೆ ಹತ್ತಿರದಲ್ಲಿ ಯಾರೂ ಇರಲಿಲ್ಲ. ರಾವ್ ಸುಮಾರು ಎರಡು ನಿಮಿಷಗಳ ಕಾಲ ಪತ್ನಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಬಳಿಕ ಅವರು ರಾವ್ ಕೈಗಳಿಂದ ಜಾರಿ ಕೆಳಗೆ ಬಿದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.
ಪಾರ್ವತಿ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ರಾವ್ ಅವರ ಮುಂಗೈ ಮತ್ತು ಎದೆಯ ಮೇಲೆ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸುವಾಗ ಆಗಿರುವ ಗಾಯಗಳಿವೆ. ಅವರು ಪತ್ನಿಯನ್ನು ಉಳಿಸಲು ಸಾಕಷ್ಟು ಹೋರಾಡಿದ್ದಾರೆ. ಪಾರ್ವತಿಯವರ ಕುಟುಂಬವು ಯಾವುದೇ ಶಂಕೆ ವ್ಯಕ್ತಪಡಿಸಿಲ್ಲ ಎಂದು ಗುರುಗ್ರಾಮ್ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಗುರುಗ್ರಾಮ್‌ನಲ್ಲಿ ಇತ್ತೀಚೆಗೆಷ್ಟೇ ದಂಪತಿ ತಮ್ಮ ವಿವಾಹದ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಮದುವೆಯ ಬಳಿಕ ಅವಳಿಗೆ ಉತ್ತಮ ಭವಿಷ್ಯವನ್ನು ಕೊಡಲು ಒಡಿಶಾದಿಂದ ತಾವು ಇಲ್ಲಿಗೆ ಬಂದಿರುವುದಾಗಿ ರಾವ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ವತಿ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.