ತಿರುಚಿ: ರಾವಣನನ್ನು ಸ್ತುತಿಸಿ ಎನ್ನುತ್ತಾ ರಾಮನ (Lord ram) ಪ್ರತಿಕೃತಿಯನ್ನು ದಹಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಪೊಲೀಸರು (Tamil Nadu police) ಓರ್ವನನ್ನು ಬಂಧಿಸಿದ್ದಾರೆ. ಅಲ್ಲದೇ ಇಂತಹ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಘಟನೆ ತಿರುಚಿಯಲ್ಲಿ ನಡೆದಿದ್ದು, ಐದನೇ ತಮಿಳು ಸಂಗಮ್ (Fifth Tamil Sangam) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿತ್ತು. ಬಳಿಕ ಇದು ತ್ವರಿತವಾಗಿ ವೈರಲ್ ಆಗಿತ್ತು.
ತಿರುಚಿಯಲ್ಲಿನ ಕೆಲವು ವ್ಯಕ್ತಿಗಳು ಇತ್ತೀಚೆಗೆ ರಾಮನ ಪ್ರತಿಕೃತಿಯನ್ನು ಸುಟ್ಟು ರಾವಣನನ್ನು ಸ್ತುತಿಸಿ ಎನ್ನುವ ಘೋಷಣೆಯನ್ನು ಕೂಗುತ್ತ ಇರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಐದನೇ ತಮಿಳು ಸಂಗಮ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಂಡಿರುವ ಈ ವಿಡಿಯೊ ಭಾರಿ ವೈರಲ್ ಆಗಿದ್ದರಿಂದ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ.
ಈ ವಿಡಿಯೊದಲ್ಲಿ ಕೆಲವು ವ್ಯಕ್ತಿಗಳು ರಾವಣನನ್ನು ಸ್ತುತಿಸಿ ಎನ್ನುತ್ತಾ ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುವುದನ್ನು ನೋಡಬಹುದು. ಈ ಕ್ಲಿಪ್‌ನಲ್ಲಿ ಸುಟ್ಟ ರಾಮನ ಪ್ರತಿಕೃತಿಯ ಬದಲಿಗೆ ಹತ್ತು ತಲೆಯ ರಾವಣನು ವೀಣೆಯನ್ನು ಹಿಡಿದಿರುವ ಚಿತ್ರ ಕೂಡ ಇದೆ.
ಈ ಕುರಿತು ಪ್ರಕರಣ ದಾಖಲಿಸಿರುವ ಸೈಬರ್ ಕ್ರೈಮ್ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 192, 196 (1) (ಎ), 197, 299, 302 ಮತ್ತು 353 (2) ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Murder Case: ಶಾಕಿಂಗ್ ಘಟನೆ, ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಪ್ರಕರಣಕ್ಕೆ ಸಂಬಂಧಿಸಿ ಗುರುವಾರ 36 ವರ್ಷದ ಅಡೈಕಳರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇತರರಿಗಾಗಿ ತನಿಖೆ ಆರಂಭಿಸಿದ್ದಾರೆ. ಇಂತಹ ಪೋಸ್ಟ್‌ಗಳ ರಚನೆ ಅಥವಾ ಪ್ರಸಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.