ಇಂದೋರ್: ಗೆಳತಿಯನ್ನು ಭೇಟಿಯಾಗಲು ಹೋದ ಯುವಕನೊಬ್ಬನನ್ನು ಆಕೆಯ ಕುಟುಂಬ ಸದಸ್ಯರು ಹಿಡಿದು, ಕಟ್ಟಿಹಾಕಿ, ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶ (Madhya Pradesh) ದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಶಿಯೋಪುರ ಜಿಲ್ಲೆಯ ದಬೀಪುರ ಗ್ರಾಮದಲ್ಲಿ ನಡೆದಿದೆ. ಆ ವ್ಯಕ್ತಿಯು ಶಿವಪುರಿ ಜಿಲ್ಲೆಯ ಗುರಿಚಾ ಗ್ರಾಮದ ನಿವಾಸಿಯಾಗಿದ್ದು, ಆತ ದಬೀಪುರದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ ಆಕೆಯನ್ನು ಭೇಟಿಯಾಗಲು ಅವಳ ಮನೆಗೆ ಹೋಗಿದ್ದನು. ಈ ವಿಚಾರ ಯುವತಿಯ ಕುಟುಂಬ ಸದಸ್ಯರಿಗೆ ತಿಳಿಯುತ್ತಿದ್ದಂತೆ ಅವನನ್ನು ಹಿಡಿದು ಹಗ್ಗದಿಂದ ಕೈಗಳನ್ನು ಕಟ್ಟಿ, ನಂತರ ಅವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಈ ದೃಶ್ಯದ ವಿಡಿಯೊ ರೆಕಾರ್ಡ್ ಕೂಡ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
ವಿಡಿಯೊದಲ್ಲಿ, ಆ ವ್ಯಕ್ತಿ ಅಳುತ್ತಾ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆದರೂ, ಕೂಡ ಯುವತಿಯ ಕುಟುಂಬಸ್ಥರು ಅವನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದವರು ಅವನಿಗೆ ಸಹಾಯ ಮಾಡುವ ಬದಲು ತಮ್ಮ ಫೋನ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಅದಾಗಲೇ ಆ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದ.
ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ರಾಕೇಶ್ ಶರ್ಮಾ, ವಿಷಯ ಬಹಳ ಗಂಭೀರವಾಗಿದ್ದು, ತನಿಖೆ ನಡೆಯುತ್ತಿದೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ರೀತಿಯ ಪ್ರತ್ಯೇಕ ಘಟನೆಯೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿತ್ತು. ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಆಕೆಗೆ ನಾಲ್ವರು ಮಹಿಳೆಯರು ಥಳಿಸಿರುವ ಆಘಾತಕಾರಿ ಘಟನೆ ನಡೆದಿತ್ತು. ಭೂ ವಿವಾದದಿಂದಾಗಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಕ್ರೂರ ಕೃತ್ಯದ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದರು.
ಇದನ್ನೂ ಓದಿ: Viral Video: ಕಾರ್ಮಿಕನನ್ನು ತಲೆಕೆಳಗಾಗಿ ನೇತುಹಾಕಿ, ಗುತ್ತಿಗೆದಾರನಿಂದ ಥಳಿತ; ಅಮಾನವೀಯ ಕೃತ್ಯದ ವಿಡಿಯೊ ಇಲ್ಲಿದೆ