ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿವೆ 5387 ಜೀವಗಳು

ಅಂಗಾಂಗ ಕಸಿ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆರೋಗ್ಯ ಇಲಾಖೆ 82 ಆಸ್ಪತ್ರೆಗಳಿಗೆ ಮಾನ್ಯತೆ ನೀಡಿದೆ. ಅವುಗಳಲ್ಲಿ ಬೆಂಗಳೂರು ನಗರದಲ್ಲಿಯೇ 51 ಆಸ್ಪತ್ರೆಗಳಿವೆ. ಮೈಸೂರು 8, ಹುಬ್ಬಳ್ಳಿ/ಧಾರವಾಡದಲ್ಲಿ 7, ಕಲಬುರಗಿ 4, ಮಂಗಳೂರು 12 ಆಸ್ಪತ್ರೆ ಅಂಗಾಂಗ ಕಸಿಗೆ ನೋಂದಣಿ ಯಾಗಿವೆ.

ಅಂಗಾಂಗ ದಾನದಲ್ಲಿ ದೇಶದಲ್ಲೇ ರಾಜ್ಯಕ್ಕೆ 3ನೇ ಸ್ಥಾನ

ಜೀವಸಾರ್ಥಕತೆ ಸಂಸ್ಥೆ ಅವಿರತ ಶ್ರಮ

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಸದ್ಯ 5387 ಮಂದಿ ಅಂಗಾಂಗಗಳಿಗಾಗಿ ಎದುರು ನೋಡುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಜೀವಸಾರ್ಥಕತೆ ಸಂಸ್ಥೆ ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ. ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸುವ ಜತೆಗೆ ಅಂಗಾಂಗ ವೈಫಲ್ಯ ಆಗಿರುವ ರೋಗಿಗಳಿಗೆ ಅಂಗಾಂಗಗಳನ್ನು ಒದಗಿಸಲು ನೆರವಾಗುತ್ತಿದೆ.

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಪಡೆಯಲಾದ ಅಂಗಾಂಗಗಳನ್ನು ಸಂಸ್ಥೆಯಡಿ ಹೆಸರು ನೋಂದಾಯಿಸಿದವರಿಗೆ ಒದಗಿಸಲಾಗುತ್ತಿದೆ. ದಾನಿಗಳ ಕೊರತೆ, ಹೊಂದಾಣಿಕೆ ಆಗದಿರುವುದು ಇತ್ಯಾದಿ ಕಾರಣಗಳಿಂದ ಹಲವರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಅಂಗಾಂಗ ಕಸಿ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆರೋಗ್ಯ ಇಲಾಖೆ 82 ಆಸ್ಪತ್ರೆಗಳಿಗೆ ಮಾನ್ಯತೆ ನೀಡಿದೆ. ಅವುಗಳಲ್ಲಿ ಬೆಂಗಳೂರು ನಗರದಲ್ಲಿಯೇ 51 ಆಸ್ಪತ್ರೆಗಳಿವೆ. ಮೈಸೂರು 8, ಹುಬ್ಬಳ್ಳಿ/ಧಾರವಾಡದಲ್ಲಿ 7, ಕಲಬುರಗಿ 4, ಮಂಗಳೂರು 12 ಆಸ್ಪತ್ರೆ ಅಂಗಾಂಗ ಕಸಿಗೆ ನೋಂದಣಿ ಯಾಗಿವೆ.

ಇದನ್ನೂ ಓದಿ: Vishweshwar Bhat Column: ದೇಶದ ಪ್ರಪ್ರಥಮ ಮತದಾರ

ಬೆಂಗಳೂರಿನಲ್ಲಿಯೇ ಅಧಿಕ ಆಸ್ಪತ್ರೆಗಳು ನೋಂದಣಿಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ರಾಜಧಾನಿಗೆ ಕಸಿ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದಾರೆ. ಜೀವಸಾರ್ಥಕತೆಯಡಿ ಅಂಗಾಂಗ ಕಸಿಗೆ ಹೆಸರು ನೋಂದಾಯಿಸಿಕೊಂಡವರಲ್ಲಿ ಬಹುತೇಕರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೇ ಆಗಿದ್ದಾರೆ. ಜನರಲ್ಲಿ ಅರಿವಿನ ಕೊರತೆಯು ಅಂಗಾಂಗ ದಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಸಕಾಲಕ್ಕೆ ಕಸಿ ಮಾಡದಿದ್ದಲ್ಲಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇಲಾಖೆಯಡಿ ಕಸಿಗೆ ಮಾನ್ಯತೆ ಪಡೆದ ಆಸ್ಪತ್ರೆಗಳ ವೈದ್ಯರೂ ಮಿದುಳು ನಿಷ್ಕ್ರಿಯ ಗೊಂಡ ವ್ಯಕ್ತಿಯ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿ, ಸಂಗ್ರಹಿಸಿದ ಅಂಗಾಂಗವನ್ನು ನೋಂದಾಯಿತ ರೋಗಿಗಳಿಗೆ ಕಸಿ ಮಾಡುತ್ತಿದ್ದಾರೆ. ಇಷ್ಟಾಗಿಯೂ ಅಂಗಾಂಗಗಳ ಬೇಡಿಕೆ ಪೂರೈಕೆ ನಡುವಿನ ಅಂತರವು ಹೆಚ್ಚುತ್ತಲೇ ಇದೆ.

Human Body 2

ಮೂತ್ರಪಿಂಡಕ್ಕೆ ಬೇಡಿಕೆ: ಜೀವಸಾರ್ಥಕತೆ ಸಂಸ್ಥೆಯ ಪ್ರಕಾರ, ಅಂಗಾಂಗ ವೈಫಲ್ಯ ಕಾರಣ ಹೆಸರು ನೋಂದಾಯಿಸಿದವರಲ್ಲಿ ಅರ್ಧಕ್ಕೂ ಅಧಿಕ ಮಂದಿ ಮೂತ್ರಪಿಂಡ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದವರಾಗಿದ್ದಾರೆ. ಬದಲಾದ ಜೀವನ ಶೈಲಿ ಸೇರಿ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯಕ್ಕೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಯಕೃತ್ತು, ಹೃದಯ, ಶ್ವಾಸಕೋಶ ಕಸಿಗೂ ಅಧಿಕ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮಾನವ ಅಂಗಾಂಗ ದಾನ ಕಸಿ ಕಾಯಿದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಇದು ಕಾನೂನು ಬದ್ಧವಾಗಿದೆ. ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

121 ಮಂದಿ ಅಂಗಾಂಗ ದಾನ

ಜೀವಸಾರ್ಥಕತೆ ಪ್ರಕಾರ ರಾಜ್ಯದಲ್ಲಿ ಈ ವರ್ಷ 121 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಇವರಿಂದ 195 ಮೂತ್ರಪಿಂಡ ಸೇರಿ 200ಕ್ಕೂ ಹೆಚ್ಚು ಅಂಗಾಂಗಗಳನ್ನು ಸ್ವೀಕರಿಸಲಾಗಿದೆ. ಚರ್ಮ ಹೃದಯದ ಕವಾಟ ಸೇರಿ 180ಕ್ಕೂ ಹೆಚ್ಚು ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ. ಐದು ವರ್ಷ ಗಳಲ್ಲಿ 6829 ಮಂದಿ ದಾನ ಮಾಡಿದ್ದಾರೆ.

ಸಂಸ್ಥೆಯ ಪ್ರಕಾರ ಒಬ್ಬ ದಾನಿಯು ಹೃದಯ ಮೂತ್ರಪಿಂಡ, ಶ್ವಾಸಕೋಶ, ಯಕೃತ್, ಸಣ್ಣ ಕರುಳು, ಮೇದೋಜೀರಕ ಗ್ರಂಥಿ, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ ಹಲವು ಮಂದಿಗೆ ನೆರವಾಗಬಹುದಾಗಿದೆ.

ಅಂಗಾಂಗದಾನಕ್ಕೆ ಪ್ರತಿಜ್ಞೆ: ರಾಜ್ಯಕ್ಕೆ ಮೂರನೇ ಸ್ಥಾನ ವ್ಯಕ್ತಿಯು ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದು. 2025ರ ಜುಲೈ 30ರವರೆಗೆ ಒಟ್ಟಾರೆಯಾಗಿ 43,221 ಮಂದಿ ಸಾರ್ವಜನಿಕರು ಅಂಗಾಂಗದಾನಕ್ಕಾಗಿ ಪ್ರತಿಜ್ಞೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 11,186 ಮಂದಿ ಪ್ರತಿಜ್ಞೆ ಮಾಡಿ, ಜಿಮಟ್ಟದಲ್ಲಿ ರಾಜ್ಯದ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಅಂತಿಮ ಹಂತದ ಅಂಗವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವವನ್ನು ಉಳಿಸಲು ಬೇಕಾ ಗುವ ಅವಶ್ಯಕತೆಗೆ ಹೋಲಿಸಿದರೆ ಮಾನವ ಅಂಗಗಳು ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಕಾರ್ನಿಯಾಗಳು, ಹೃದಯ ಕವಾಟಗಳು, ಚರ್ಮ ಮತ್ತು ವಿವಿಧ ಅಂಗಾಂಶಗಳ ಅಗತ್ಯವಿರುವ ಹಲವಾರು ವ್ಯಕ್ತಿಗಳು ಕೂಡ ಇದಕ್ಕೆ ಸೇರಿದ್ದಾರೆ