ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಬಹಳಷ್ಟು ಮಾತು ಗಳನ್ನು ಕೇಳುತ್ತಲೇ ಇರುತ್ತೇವೆ. ಒಬ್ಬ ಮಹಿಳೆಯನ್ನು ಸಬಲೀಕರಣಗೊಳಿಸಿದರೆ, ಇಡೀ ಕುಟುಂಬ, ಅದರಿಂದ ಇಡೀ ಸಮಾಜ, ಆ ಮೂಲಕ ಇಡೀ ದೇಶ ಶಕ್ತಿಯುತವಾಗುತ್ತದೆ. ಒಂದು ಕುಟುಂಬದ ಆಧಾರ ಸ್ತಂಭವಾಗಿ ಮಹಿಳೆ ಇರುವುದರಿಂದಲೇ, ಆ ಮಹಿಳೆಗೆ ಸಬಲೀಕರಣದ ಸ್ಪರ್ಶ ನೀಡುವುದು ಅಗತ್ಯವಾಗುತ್ತದೆ.
ಯಾವುದೇ ಸಮುದಾಯದ ಏಳಿಗೆಯನ್ನು ಅಳೆಯಬೇಕಾದರೆ, ಆ ಸಮುದಾಯದ ಸ್ತ್ರೀಯರ ಏಳಿಗೆ ಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇ ಡ್ಕರ್ ಹೇಳಿದ್ದರು. ಅಂದರೆ ಇಡೀ ಸಮಾಜದ ಅಭಿವೃದ್ಧಿಗೆ ಮಹಿಳೆಯರ ಪ್ರಗತಿಯೇ ಅಳತೆಗೋಲು ಇದ್ದಂತೆ.
ಪ್ರತಿ ಸರಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ತರುತ್ತವೆ. ಒಂದೋ ಅವು ಬದ್ಧತೆ ಇಲ್ಲದೆ ಬಿದ್ದು ಹೋಗುತ್ತವೆ. ಅಥವಾ ಸರಿಯಾದ ಅನುಷ್ಠಾನ ಇಲ್ಲದೆ ಮೂಲೆ ಸೇರುತ್ತವೆ. ಆದರೆ ಕಾಂಗ್ರೆಸ್ ಸರಕಾರ ತಂದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಇಂದಿಗೂ ಅತಿ ಜನಪ್ರಿಯ ಯೋಜನೆಯಾಗಿ ಸ್ಥಾಪನೆಯಾಗಿದೆ.
ಏಕೆಂದರೆ ಇಂತಹ ಯೋಜನೆಯನ್ನು ತರಲು ಯಾವ ಸರಕಾರಗಳಿಗೂ ಸಾಧ್ಯವಾಗಿಲ್ಲ. ಸಾರ್ವ ಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಉಚಿತ ಮಾಡಿ, ಪ್ರತಿ ತಿಂಗಳು ಆ ಅಪಾರ ವೆಚ್ಚವನ್ನು ಸರಕಾರವೇ ಭರಿಸುವುದು ಸುಲಭದ ಮಾತಲ್ಲ. ಅಂತಹ ಸಾಹಸವನ್ನು ಕಾಂಗ್ರೆಸ್ ಮಾಡಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರಕಾರ ಈ ಯೋಜನೆಯನ್ನು ತಂದಾಗ, ಎಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ: DK Shivakumar: ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗುವುದಾದರೆ ನನ್ನನ್ನು ಟೀಕಿಸಲಿ ಎಂದ ಡಿಕೆಶಿ
ಸಾಮಾನ್ಯವಾಗಿ ಯಾವುದೇ ಯೋಜನೆಗೆ ಆರಂಭದಲ್ಲಿ ಬರುವ ಯಶಸ್ಸು ಅಥವಾ ಮೆಚ್ಚುಗೆ ಮತ್ತೆ ಇರುವುದಿಲ್ಲ. ಆದರೆ ಎರಡೂವರೆ ವರ್ಷ ಕಳೆದರೂ ಶಕ್ತಿ ಯೋಜನೆ ಇಂದಿಗೂ ಖ್ಯಾತಿಯಲ್ಲಿ ಮೇಲಕ್ಕೇರುತ್ತಲೇ ಇದೆ. ಕನ್ನಡ ನಾಡಿನ ಮಹಿಳೆಯರು ನಮ್ಮನ್ನು ಹರಸುತ್ತಲೇ ಇದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ ಕೂಡಲೇ ಮಹಿಳೆಯರು ಬಸ್ ಹತ್ತಿ ನಮಗೆ ಇನ್ನು ಫ್ರೀ ಸರ್ವಿಸ್ ಎಂದು ಕಂಡಕ್ಟರ್, ಚಾಲಕರಿಗೆ ಹೇಳಿದ್ದರು.
ನಮ್ಮನ್ನು ಅಧಿಕಾರಕ್ಕೆ ತಂದ ಆ ನಾರಿಗಳಿಗೆ ಅಂತಹ ಅಧಿಕಾರ ಖಂಡಿತ ಇದೆ. ಆ ಸಮಯದಲ್ಲಿ ಸರಕಾರ ಆಗಷ್ಟೇ ರಚನೆಯಾಗಿತ್ತು. ಆದರೂ ತಡ ಮಾಡದೆಯೇ ಕೂಡಲೇ ಯೋಜನೆಯನ್ನು ಜಾರಿ ಮಾಡಲಾಯಿತು. ಇದರಿಂದಾಗಿ ಮಹಿಳೆಯರ ಕೈಗೆ ಆರ್ಥಿಕ ಶಕ್ತಿ ಸಿಕ್ಕಿದೆ. ಮಹಿಳೆಯರ ಖರ್ಚು ಕಡಿಮೆಯಾಗಿರುವುದು ಮಾತ್ರವಲ್ಲದೆ, ಇಡೀ ಕುಟುಂಬದ ಸಾರಿಗೆಯ ವೆಚ್ಚವೇ ಇಲ್ಲವಾಗಿದೆ.

ಒಟ್ಟಾರೆ ರಾಜ್ಯ ಸರಕಾರದ ಶಕ್ತಿ ಯೋಜನೆ ನಾರಿ ಸಬಲೀಕರಣಕ್ಕೆ ಪ್ರೇರಣೆಯಾಗಿದೆ. ಕೋಟ್ಯಂತರದ ಯಶಸ್ಸು: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 476 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೇವೆ ಪಡೆದಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ದಾಖಲೆ. ಇದಕ್ಕಾಗಿ ನಮ್ಮ ಸರಕಾರ, 12015 ಕೋಟಿ ರು. ಖರ್ಚು ಮಾಡಿದೆ. ಅಂದರೆ ಇಷ್ಟು ಹಣವನ್ನು ನಾಡಿನ ಮಹಿಳೆಯರ ಪ್ರಯಾಣಕ್ಕೆ ಎರಡೂವರೆ ವರ್ಷದಲ್ಲಿ ಖರ್ಚು ಮಾಡಿದ್ದೇವೆ.
ಕೆಎಸ್‌ಆರ್‌ಟಿಸಿಯಲ್ಲಿ 144.46 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಅದಕ್ಕಾಗಿ, 4,563.87 ಕೋಟಿ ರು. ಟಿಕೆಟ್ ವೆಚ್ಚ ಭರಿಸಲಾಗಿದೆ. ಬೆಂಗಳೂರಿನ ಬಿಎಂಟಿಸಿಯಲ್ಲಿ 150.94 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, 2,064.68 ಕೋಟಿ ರು. ವೆಚ್ಚ ಮಾಡಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ 111.27 ಕೋಟಿ ಬಾರಿ ಮಹಿಳೆಯರು ಉಚಿತ ವಾಗಿ ಪ್ರಯಾಣಿಸಿದ್ದು, ಅದರ 2973.46 ಕೋಟಿ ರು. ವೆಚ್ಚ ಭರಿಸಲಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ 68.87 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದು, 2412.26 ಕೋಟಿ ರು. ಭರಿಸಲಾಗಿದೆ. ದುಂದುವೆಚ್ಚವಲ್ಲ, ಅಗತ್ಯದ ವೆಚ್ಚ: ಉಚಿತ ಬಸ್ ಪ್ರಯಾಣ ಎಂದಾಕ್ಷಣ ಇದು ದುಂದುವೆಚ್ಚ, ಮಹಿಳೆಯರು ಸುಖಾಸುಮ್ಮನೆ ಓಡಾಡುತ್ತಾರೆ ಎಂದೆಲ್ಲ ಕೆಟ್ಟ ಟೀಕೆಗಳು ಬಂದಿವೆ. ಆದರೆ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರು ಒಂದು ರೂಪಾಯಿ ಖರ್ಚಿಲ್ಲದೆ ಓಡಾಡಿದ್ದಾರೆ.
ವಿದ್ಯಾರ್ಥಿಗಳು ಹಣದ ಚಿಂತೆ ಇಲ್ಲದೆ ಪ್ರಯಾಣಿಸಿದ್ದಾರೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಆಸೆ ಇಟ್ಟುಕೊಂಡವರು ಅದನ್ನು ಪೂರೈಸಿಕೊಂಡು ಪುಣ್ಯ ಸಂಪಾದಿಸಿದ್ದಾರೆ. ಮಹಿಳೆಯರು ಎಂದರೆ ಅಡುಗೆ ಮನೆಗೆ ಸೀಮಿತವಾದವರು ಎಂಬ ಕೀಳು ಮನಸ್ಥಿತಿಯಿಂದ ಹೊರಬರಬೇಕಿದೆ ಎಂಬ ಸಂದೇಶವನ್ನು ನಮ್ಮ ಯೋಜನೆ ನೀಡಿದೆ.
ದಕ್ಷಿಣ ಏಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಬಡ ಕುಟುಂಬಗಳು ತಿಂಗಳಿನ ಆದಾಯದ ಶೇ.೨೦ ರಷ್ಟು ಹಣವನ್ನು ಸಾರಿಗೆಗೆ ಖರ್ಚು ಮಾಡುತ್ತವೆ ಎಂದು ವಿಶ್ವಬ್ಯಾಂಕ್‌ನ ಒಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಅನೇಕ ಮಹಿಳೆಯರು ಉದ್ಯೋಗಕ್ಕೆ ಅಥವಾ ಬೇರಾ ವುದೇ ಉದ್ದೇಶಕ್ಕೆ ಬಸ್ ನಲ್ಲಿ ಪ್ರಯಾಣ ಮಾಡದೆ ಮನೆಯ ಉಳಿಯುತ್ತಾರೆ. ಉಚಿತ ಬಸ್ ಸೇವೆ ಯಿಂದಾಗಿ ಈಗ ಮಹಿಳೆಯರ ಉದ್ಯೋಗದ ಓಡಾಟ ಸುಲಭವಾಗಿದೆ.
ವಿಜಯಪುರ ಜಿಲ್ಲೆಯ ಇಂಡಿಯ 20 ಮಹಿಳೆಯರು ಒಡಲ ಧ್ವನಿ ಎಂಬ ಸಂಘಟನೆ ರೂಪಿಸಿ ಕೊಂಡು, ಹೋಳಿಗೆ ತಯಾರಿಸಿ, ಬೆಂಗಳೂರಿಗೆ ಉಚಿತ ಬಸ್ ಪ್ರಯಾಣ ಮಾಡಿ ಬಂದು ಹೋಳಿಗೆ ಮಾರಾಟ ಮಾಡುತ್ತಾರೆ. ಮೊದಲು ಪ್ರತಿ ದಿನ 200 ಹೋಳಿಗೆ ಮಾಡುತ್ತಿದ್ದವರು, ಈಗ ಒಂದು ಸಾವಿರ ಹೋಳಿಗೆ ತಯಾರಿಸಿ ಮಾರುತ್ತಿದ್ದಾರೆ. ಇವರಿಗೆ ಉಚಿತ ಬಸ್ ಪ್ರಯಾಣದಿಂದ ಓಡಾಟ ಸುಲಭ ವಾಗಿದೆ.
ಇಂತಹ ಅವೆಷ್ಟೋ ಸ್ವಾವಲಂಬಿ, ಸ್ವಾಭಿಮಾನಿ ಮಹಿಳೆಯರಿಗೆ ಈ ಯೋಜನೆ ಶಕ್ತಿ ನೀಡಿದೆ. ಮಲೆ ಮಾದೇಶ್ವರ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಡ ಮಹಿಳೆಯರು ಇಡೀ ವರ್ಷ ಹಣ ಕೂಡಿ ಇಡುತ್ತಿದ್ದರು. ಕಳೆದೆರಡು ವರ್ಷಗಳಿಂದ ಯಾರೂ ಹಣದ ಬಗ್ಗೆ ಚಿಂತಿಸುತ್ತಿಲ್ಲ.
ಮಹಿಳೆಯರು ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದಲೇ ರಾಜ್ಯದ 34,565 ಮುಜರಾಯಿ ದೇವಸ್ಥಾನಗಳು ಸೇರಿ 1 ಲಕ್ಷಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳ ಆದಾಯದಲ್ಲಿ ಏರಿಕೆಯಾಗಿದೆ. 2022-23 ರಲ್ಲಿ ದೇವಾಲಯಗಳ ಹುಂಡಿಯಿಂದ 8.48 ಕೋಟಿ ರು. ದೊರೆತರೆ, 2023-24ರಲ್ಲಿ 9.59 ಕೋಟಿ ರು. ದೊರೆತಿದೆ.
2024-25ರಲ್ಲಿ ಇದು 18.08 ಕೋಟಿ ರು.ಗೆ ತಲುಪಿದೆ. ಅಂದರೆ ಶಕ್ತಿ ಯೋಜನೆಯಿಂದಾಗಿ ದೇವಸ್ಥಾನ ಗಳ ಅಭಿವೃದ್ಧಿ ಸಾಧ್ಯವಾಗಿದೆ. ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿ ವೇಗವಾಗಿದೆ. ಯೋಜನೆಗೆ ಇನ್ನಷ್ಟು ಚುರುಕು: ಗ್ಯಾರಂಟಿಗಳನ್ನು ಹಿಂದಕ್ಕೆ ಪಡೆಯಲಿ ಎಂದೇ ಪ್ರತಿಪಕ್ಷಗಳು ಕಾಯುತ್ತಿವೆ. ಆದರೆ ಕಾಂಗ್ರೆಸ್ ಎಂದಿಗೂ ಕೊಟ್ಟ ಮಾತನ್ನು ತಪ್ಪಿಲ್ಲ. ಈ ಯೋಜನೆ ಇನ್ನಷ್ಟು ಚುರುಕಾಗಿ ಮುಂದಕ್ಕೆ ಸಾಗಿ ಇಡೀ ದೇಶಕ್ಕೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಡಲಿದೆ. ಶಕ್ತಿ ಯೋಜನೆ ಆರಂಭವಾದಾಗ ವೃದ್ಧೆಯೊಬ್ಬರು ಬಸ್ಸಿನ ಮೆಟ್ಟಿಲಿಗೆ ನಮಸ್ಕಾರ ಮಾಡಿ ನಮ್ಮ ಸರಕಾರವನ್ನು ಹರಸಿದ್ದರು.
ಮಹಿಳೆಯರು ಬಸ್ಸಿನಲ್ಲಿ ಹಾಡು ಹಾಡುತ್ತಾ ಉಚಿತ ಸೇವೆಯ ಸಂಭ್ರಮಾಚರಣೆ ಮಾಡಿದ್ದರು. ಆ ಎಲ್ಲ ಹಾರೈಕೆ, ಆಶೀರ್ವಾದದ ಬಲದೊಂದಿಗೆ ಕಾಂಗ್ರೆಸ್ ಗ್ಯಾರಂಟಿಗಳನ್ನು ಇನ್ನಷ್ಟು ಶಕ್ತಿಯುತ ಗೊಳಿಸಿದೆ. ನುಡಿದಂತೆ ನಡೆಯುವುದು ಎನ್ನುವುದು ಕೇವಲ ಒಂದು ವಾಕ್ಯವಲ್ಲ, ಅದೇ ನಮ್ಮ ಸಂಕಲ್ಪ ಶಕ್ತಿ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ನಮ್ಮ ರಾಷ್ಟ್ರೀಯ ನಾಯಕ ರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರ ಮಾರ್ಗದರ್ಶನದಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಯೋಜನೆಗೆ ಅಗತ್ಯವಾದ ಅನುದಾನವನ್ನು ಒದಗಿಸಿದ್ದಾರೆ.
ನಮ್ಮ ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿಯವರು ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇವರೆಲ್ಲರಿಗೂ ನಾನು ರಾಜ್ಯದ ನಾರಿಯರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.