ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಒಂದು ವಿಲಕ್ಷಣ ದುರಂತ

ಯಾರಾದರೂ ತಮ್ಮ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಕ್ಕೆ ಅಸೋಹ್ ನ ಹೆಸರನ್ನು ಪ್ರಸ್ತಾಪಿಸುವುದುಂಟು. ಈ ಘಟನೆಯ ನಂತರ, ಅಸೋಹ್ ನನ್ನು ಫಸ್ಟ್ ಆಫೀಸರ್ ಆಗಿ ಕೆಳಗಿಳಿಸ ಲಾಯಿತು, ಆದರೆ ನಿವೃತ್ತಿ ಆಗುವವರೆಗೆ ಆತನಿಗೆ ಜಪಾನ್ ಏರ್‌ಲೈನ್ಸ್‌ನಲ್ಲಿ ಹಾರಾಟ ನಡೆಸಲು ಅವಕಾಶ ನೀಡಲಾಯಿತು.

Vishweshwar Bhat Column: ಒಂದು ವಿಲಕ್ಷಣ ದುರಂತ

-

ಸಂಪಾದಕರ ಸದ್ಯಶೋಧನೆ

ನವೆಂಬರ್ 22, 1968. ಜಪಾನ್ ಏರ್ ಲೈನ್ಸ್‌ನ ಡೌಗ್ಲಾಸ್ ಡಿಸಿ-8-62 ವಿಮಾನ ಟೋಕಿಯೊದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುತ್ತಿತ್ತು. ಭಾರಿ ಮಂಜು ಮತ್ತು ಇತರ ಸಮಸ್ಯೆಗಳಿಂದಾಗಿ, ಕ್ಯಾಪ್ಟನ್ ಕೋಹೆಯ್ ಅಸೋಹ್ ರನ್‌ವೇಗೆ ಸುಮಾರು ಎರಡೂವರೆ ಮೈಲುಗಳಷ್ಟು ದೂರದಲ್ಲಿರುವಾಗಲೇ ವಿಮಾನವನ್ನು ಸಮುದ್ರದಲ್ಲಿ ಇಳಿಸಿದ. ವಿಮಾನದ ಯಾಂತ್ರಿಕ ಭಾಗಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ದಟ್ಟವಾದ ಮಂಜು, ಮಸುಕಾದ ದೃಶ್ಯಾವಳಿ ಮತ್ತು ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗದೇ ಹೋದಾಗ, ಆತ ತಾನು ಇಳಿಯುವ ಪ್ರದೇಶವನ್ನು ತಪ್ಪಾಗಿ ಗುರುತಿಸಿದ.

ಸಮುದ್ರದ ಮೇಲೆ ಹಾರುವಾಗ, ಅದನ್ನೇ ರನ್ ವೇ ಎಂದು ತಪ್ಪಾಗಿ ಭಾವಿಸಿ ನೀರಿನಲ್ಲಿ ಇಳಿಸಿ ಬಿಟ್ಟ. ಲ್ಯಾಂಡಿಂಗ್ ಮಾಡುವಾಗ, ಕ್ಯಾಪ್ಟನ್ ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಆ ಯಾವ ಕಾರ್ಯವಿಧಾನಗಳನ್ನೂ ಅನುಸರಿಸಲಿಲ್ಲ. ಇದರಿಂದ ಈ ಘಟನೆ ಸಂಭವಿಸಿತು. ವಿಮಾನ ದಲ್ಲಿದ್ದ ಎಲ್ಲ 107 ಜನರು ಸುರಕ್ಷಿತವಾಗಿದ್ದರು, ಯಾರಿಗೂ ಗಾಯಗಳಾಗಲಿಲ್ಲ. ಘಟನೆಯ ನಂತರ, ಅಮೆರಿಕದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ ತನಿಖೆ ನಡೆಸಿತು. ಕ್ಯಾಪ್ಟನ್ ಅಸೋಹ್ ದೋಷವೇ ಘಟನೆಗೆ ಕಾರಣ ಎಂದು ತನಿಖೆಯಲ್ಲಿ ದೃಢಪಟ್ಟಿತು.

ನೀರಿನಲ್ಲಿ ಇಳಿದರೂ, ವಿಮಾನದ ಮುಖ್ಯ ರಚನೆಗೆ ಯಾವುದೇ ಗಂಭೀರ ಹಾನಿಯಾಗಿರಲಿಲ್ಲ. ಕಾರಣ ವಿಮಾನವು ಸುಮಾರು 7 ಅಡಿಗಳಷ್ಟು ಆಳದಲ್ಲಿ ನಿಂತಿತ್ತು. ಇದರಿಂದ ವಿಮಾನದ ಮುಂಭಾಗದ ಬಾಗಿಲುಗಳು ನೀರಿನ ಮೇಲೆಯೇ ಉಳಿದಿದ್ದವು. ಈ ವಿಮಾನವನ್ನು ನೀರಿನಿಂದ ಹೊರತೆಗೆದು, ಯುನೈಟೆಡ್ ಏರ್ ಲೈನ್ಸ ಕಂಪನಿಯು 4 ದಶಲಕ್ಷ ಡಾಲರ್ ವೆಚ್ಚದಲ್ಲಿ ದುರಸ್ತಿ ಮಾಡಿತು. ದುರಸ್ತಿ ನಂತರ, ವಿಮಾನಕ್ಕೆ ’ಫಿಶರ್‌ಮನ್ ಒನ್’ (Fisherman One) ಎಂಬ ಅಡ್ಡಹೆಸರು ಇಡಲಾಯಿತು.

ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್‌ ಅಂದ್ರೆ...

ಸಾಮಾನ್ಯವಾಗಿ, ಇಂಥ ಘಟನೆಗಳ ನಂತರ ವಿಮಾನಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡುವುದು ಕಷ್ಟ. ಕಾರಣ ವಿಮಾನಕ್ಕೆ ಭಾಗಶಃ ಧಕ್ಕೆಯಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ, ವಿಮಾನವನ್ನು ನಾಶ ( scrapped ) ಪಡಿಸುವುದು ಅನಿವಾರ್ಯವಾಗುತ್ತದೆ. ವಿಮಾನವನ್ನು ಬಹಳ ಕಷ್ಟಪಟ್ಟು ಯುನೈಟೆಡ್ ಏರ್ ಲೈನ್ಸ್ ದುರಸ್ತಿ ಮಾಡಿತು.

ನಂತರ ದುರಸ್ತಿ ಮಾಡಿದ ವಿಮಾನವನ್ನು ಮಾರ್ಚ್ 31, 1969 ರಂದು ಜಪಾನ್ ಏರ್‌ಲೈನ್ಸ್‌ಗೆ ಮರಳಿಸಲಾಯಿತು. ಜಪಾನ್ ಏರ್‌ಲೈನ್ಸ್‌ಗೆ ಮರಳಿದ ವಿಮಾನ ಏಪ್ರಿಲ್ 11, 1969 ರಂದು ತನ್ನ ಮೊದಲ ಯಶಸ್ವಿ ಪರೀಕ್ಷಾ ಹಾರಾಟ ನಡೆಸಿತು. ಗಮನಾರ್ಹ ಸಂಗತಿಯೆಂದರೆ, ಈ ವಿಮಾನವನ್ನು ಜಪಾನ್ ಏರ್ ಲೈನ್ಸ್ 1983 ರವರೆಗೂ ಬಳಸಿತು. ಇದು ವಿಮಾನ ವಿನ್ಯಾಸ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯಕ್ಕೆ ಒಂದು ಉದಾಹರಣೆಯಾಗಿದೆ.

ಜುಲೈ 26, 1989 ರಂದು ಅಟ್ಲಾಂಟಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಈ ವಿಮಾನಕ್ಕೆ ಸಂಪೂರ್ಣ ಹಾನಿಯಾಯಿತು. ಈ ಘಟನೆಯು ವಿಮಾನಯಾನ ಇತಿಹಾಸದಲ್ಲಿ ಒಂದು ವಿಶಿಷ್ಟವಾದ ಕಥೆಯಾಗಿದೆ. ಏಕೆಂದರೆ ಅಪಘಾತಕ್ಕೀಡಾದ ವಿಮಾನವನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ ಮತ್ತೆ ಹಾರಾಟಕ್ಕೆ ಬಳಸಿದ್ದು ಅನನ್ಯ ನಿದರ್ಶನವಾಗಿದೆ.

ಕ್ಯಾಪ್ಟನ್ ಅಸೋಹ್ ನನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಆತ ಈ ದುರಂತದ ಸಂಪೂರ್ಣ ಹೊಣೆ ಹೊರುವುದಾಗಿ ಹೇಳಿದ್ದಲ್ಲದೇ, As you Americans say, I fucked up (ಅಮೆರಿಕನ್ನರು ಹೇಳುವಂತೆ, ನಾನು ಎಡವಿದೆ) ಎಂದು ಪ್ರಾಮಾಣಿಕ ಹೇಳಿಕೆ ನೀಡಿದ. ಇದು ಮುಂದೆ, ವ್ಯವಹಾರ ಮತ್ತು ನಿರ್ವಹಣಾ ಸಿದ್ಧಾಂತಗಳಲ್ಲಿ ‘ಅಸೋಹ್ ಡಿಫೆನ್ಸ್ ’ ಎಂದೇ ಪ್ರಸಿದ್ಧ ವಾಯಿತು.

ಯಾರಾದರೂ ತಮ್ಮ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಕ್ಕೆ ಅಸೋಹ್ ನ ಹೆಸರನ್ನು ಪ್ರಸ್ತಾಪಿಸುವುದುಂಟು. ಈ ಘಟನೆಯ ನಂತರ, ಅಸೋಹ್ ನನ್ನು ಫಸ್ಟ್ ಆಫೀಸರ್ ಆಗಿ ಕೆಳಗಿಳಿಸ ಲಾಯಿತು, ಆದರೆ ನಿವೃತ್ತಿ ಆಗುವವರೆಗೆ ಆತನಿಗೆ ಜಪಾನ್ ಏರ್‌ಲೈನ್ಸ್‌ನಲ್ಲಿ ಹಾರಾಟ ನಡೆಸಲು ಅವಕಾಶ ನೀಡಲಾಯಿತು.