ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Sajangadde Column: ದೇಶಕ್ಕಾಗಿಯೇ ಬಾಳಿದ ಸಂಘ ದಕ್ಷ ಪ್ರೊಫೆಸರ್

25 ಮೇ 1932ರಂದು ಬೆಂಗಳೂರಿನ ಶ್ರೀರಾಂಪುರದ ಕೃಷ್ಣಪ್ಪ ಹಾಗೂ ಸುಂದರಮ್ಮ ದಂಪತಿಯ ಮಗನಾಗಿ ನರಹರಿಯವರು ಜನಿಸಿದರು. ಬಿಇ ಪದವಿಯನ್ನು ಪೂರ್ಣಗೊಳಿಸಿ 1930ರಿಂದ 1984 ರವರೆಗೆ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು.

ದೇಶಕ್ಕಾಗಿಯೇ ಬಾಳಿದ ಸಂಘ ದಕ್ಷ ಪ್ರೊಫೆಸರ್

-

Ashok Nayak Ashok Nayak Oct 9, 2025 8:04 AM

ರವೀ ಸಜಂಗದ್ದೆ

ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಬೀಜ-ಸಂದೇಶಗಳನ್ನು ಸಮಾಜದ ನಡುವೆ ಬಿತ್ತಿ, ಆರೆಸ್ಸೆಸ್ಸಿನ ಚಟುವಟಿಕೆ ಮತ್ತು ರಾಷ್ಟ್ರ ಸೇವೆಯಲ್ಲಿ ಅಸಂಖ್ಯಾತ ಯುವಕರು-ಕಾರ್ಯಕರ್ತರು ತೊಡಗಿಸು ವಂತಾಗಲು ಪ್ರೇರೇಪಿಸಿದ ‘ಸಂಘ ದಕ್ಷ’ ಪ್ರೊಫೆಸರ್ ಕೃಷ್ಣಪ್ಪ ನರಹರಿ (93) ನಮ್ಮನ್ನಗಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರಿಯ ಕಾರ್ಯನಿರ್ವಾಹಕರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ, ಪ್ರೊಫೆಸರ್ ಆಗಿ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

25 ಮೇ 1932ರಂದು ಬೆಂಗಳೂರಿನ ಶ್ರೀರಾಂಪುರದ ಕೃಷ್ಣಪ್ಪ ಹಾಗೂ ಸುಂದರಮ್ಮ ದಂಪತಿಯ ಮಗನಾಗಿ ನರಹರಿಯವರು ಜನಿಸಿದರು. ಬಿಇ ಪದವಿಯನ್ನು ಪೂರ್ಣಗೊಳಿಸಿ 1930ರಿಂದ 1984 ರವರೆಗೆ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. ಈಗಿನ ಶ್ರೀರಾಂಪುರದ ಸಾಂದೀಪಿನಿ ವಿದ್ಯಾ ಸಂಸ್ಥೆಯು ಇವರ ಮನೆ ಮತ್ತು ಸುತ್ತಲಿನ ಪರಿಸರವಾಗಿತ್ತು. ಅದನ್ನು ಉದಾರವಾಗಿ-ಉಚಿತವಾಗಿ ಶಿಕ್ಷಣ ಸಂಸ್ಥೆ ನಡೆಸಲು ಸಂತಸಾಭಿಮಾನದಿಂದ ನೀಡಿದ್ದು ಶ್ರೀಯುತರ ಶ್ರೇಷ್ಠ ‘ದಾನ ಗುಣ’ಕ್ಕೆ ಸಾಕ್ಷಿ!

ತನ್ನ ಹರೆಯದರ ಆರೆಸ್ಸೆಸ್ಸಿನ ವಿಚಾರಧಾರೆಗಳು ಮತ್ತು ‘ದೇಶ ಮೊದಲು’ ಆಲೋಚನೆಗಳಿಂದ ಪ್ರಭಾವಿತರಾಗಿ ತಮ್ಮ ಹೆಚ್ಚಿನ ಸಮಯ ಮತ್ತು ಶ್ರಮವನ್ನು ಈ ದೆಸೆಯಲ್ಲಿ ವ್ಯಯಿಸಿದ ಕೀರ್ತಿಯೂ ನರಹರಿಯವರಿಗೆ ಸಲ್ಲುತ್ತದೆ.

ನಮ್ಮ ಮಕ್ಕಳಿಗೆ ಕೀಳರಿಮೆ ಬರುವ, ಪರಕೀಯರನ್ನು ಹೊಗಳುವ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಿರುವುದರ ವಿರುದ್ಧ ದನಿಯೆತ್ತಿ, ಭಾರತೀಯ ಶಿಕ್ಷಣ ಪದ್ದತಿಯನ್ನು ಶಿಕ್ಷಣದಲ್ಲಿ ಅಳವಡಿಸಲು ಹೋರಾಡಿದರು. ಸದ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ತನ್ನ ಅಸಮಾಧಾನವನ್ನು ನೇರ ಮಾತುಗಳ ಮೂಲಕ ಎಲ್ಲಾ ವೇದಿಕೆಗಳಲ್ಲಿ ಪ್ರಸ್ತುತ ಪಡಿಸುತ್ತಿದ್ದರು.

‘ಈಗಿನ ಶಿಕ್ಷಣ ವ್ಯವಸ್ಥೆ ಮನುಷ್ಯನಲ್ಲಿ ಮನುಷ್ಯತ್ವ ನಿರ್ಮಾಣ ಮಾಡುತ್ತಿಲ್ಲ. ಅದು ಕೇವಲ ಸ್ವಾರ್ಥ ಮತ್ತು ವೃತ್ತಿ ಸಂಬಂಧಿತ ಜ್ಞಾನವನ್ನು ಮಾತ್ರ ಬೆಳೆಸುತ್ತದೆ. ರಾಷ್ಟ್ರೀಯ ಮೌಲ್ಯಗಳೂ ಜನರಲ್ಲಿ ಕುಂಠಿತವಾಗಿವೆ. ಪರಸ್ಪರತೆ (mutuallity) ನಶಿಸಿ, ವೈಯಕ್ತಿಕತೆ (individuality) ಮುನ್ನೆಲೆಗೆ ಬಂದು ಪ್ರಾಮುಖ್ಯತೆ ಪಡೆದುಕೊಂಡಿದೆ. ಸ್ನೇಹ, ಪರಸ್ಪರ ಸಹಕಾರ, ಔದಾರ್ಯ, ಒಳ್ಳೆಯ ಮೌಲ್ಯ ಗಳು ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ.

ಸಮಾಜ ಉದ್ಧಾರವಾದಾಗ ದೇಶವೂ ಶ್ರೇಷ್ಠವಾಗಲಿದೆ’ ಎಂದು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳುತ್ತಿದ್ದರು. ಅವರ ದೇಶಪ್ರೇಮದ ಪರಿಭಾಷೆಯ ಸೊಬಗು ಮತ್ತು ಸೊಗಡು ಸರ್ವಶ್ರೇಷ್ಠ. ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸೇವೆ, ಶಿಕ್ಷಣ, ಸಂಸ್ಕಾರ, ಸಾಂಸ್ಕೃತಿಕ ಚಟುವಟಿಕೆ ಮತ್ತು ದೇಶ ಪ್ರೇಮದ ವಿವಿಧ ಕಾರ್ಯಯೋಜನೆಗಳನ್ನು ನಡೆಸಿ ಸಮಾಜ ಮತ್ತು ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಬಾಲ್ಯದಿಂದಲೂ ನರಹರಿಯವರನ್ನು ಮಾದರಿಯಾಗಿ ನೋಡುತ್ತಾ, ಅವರ ಜೀವನ ಶೈಲಿ ಮತ್ತು ಮಾತುಗಳಿಂದ ಪ್ರಭಾವಿತರಾಗಿ ಬೆಳೆದು, ಈಗ ಭಾಜಪ, ಆರೆಸ್ಸೆಸ್ಸಿನಲ್ಲಿ ಹಲವಾರು ಉನ್ನತ ಹುz ಮತ್ತು ಅಧಿಕಾರವನ್ನು ಅನುಭವಿಸುತ್ತಿರುವವರ ಪಟ್ಟಿ ದೊಡ್ಡದಿದೆ. ಅವರ ಮನೆಯ ಹಿತ್ತಿಲಿ ನಲ್ಲಿಯೇ ದಶಕಗಳ ಕಾಲ ನಿರಂತರವಾಗಿ ಆರೆಸ್ಸೆಸ್ ಶಾಖೆ ನಡೆಯುತ್ತಿತ್ತು.

ಶ್ರೀರಾಂಪುರದ ಅವರ ಮನೆ ಮತ್ತು ಇಡೀ ಪರಿಸರ ಸಂಘದ ಮನೆಯಾಗಿತ್ತು ಮತ್ತು ಹಲವರಿಗೆ ಆಶ್ರಯ ತಾಣವಾಗಿತ್ತು. ‘ಕೃ. ನರಹರಿಯವರ ನಿವಾಸದ ಬಳಿಯ ಮನೆ ಇದ್ದುದರಿಂದ ಅವರೊಂದಿಗೆ ನನ್ನ ಒಡನಾಟವೂ ತುಸು ಜಾಸ್ತಿಯೇ ಇತ್ತು’ ಎನ್ನುವುದನ್ನು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್ ಸ್ಮರಿಸಿಕೊಳ್ಳುತ್ತಾರೆ.

1975ರ ಜೂನ್ 26ರ ಬೆಳಗ್ಗೆ, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆಯ ಮೊದಲ ಮಾಹಿತಿ ಸಿಕ್ಕ ಕೊಡಲೇ, ತನ್ನ ವೆಸ್ಪಾ ಸ್ಕೂಟರಿನಲ್ಲಿ ಬೆಂಗಳೂರಿನಾದ್ಯಂತ ಓಡಾಡಿ, ಬೆಂಗಳೂರು ಪರಿಸರದ ಹಲವರನ್ನು ಹೋರಾಟ ಮತ್ತು ಪ್ರತಿಭಟನೆಗೆ ಒಟ್ಟುಗೂಡಿಸಿದ ಶ್ರೇಯಸ್ಸು ನರಹರಿಯವರಿಗೆ ಸಲ್ಲುತ್ತದೆ.

ನರಹರಿಯವರ ಸೂಚನೆ ತಲುಪಿದ ಕೂಡಲೇ ಸುರೇಶ್ ಕುಮಾರ್, ಪಿ.ಜಿ.ಆರ್.ಸಿಂಧ್ಯಾ, ಪ್ರೊಫೆಸರ್ ಲಕ್ಷ್ಮಿ ಸಾಗರ್, ಪ್ರಮೀಳಾ ನೇಸರ್ಗಿ, ಕೃಷ್ಣ ಅಯ್ಯರ್, ಎಂ.ಚಂದ್ರಶೇಖರ್, ಎಂಎಸ್ ನಾರಾಯಣ್ ರಾವ್ ಮುಂತಾದ ಆಗಿನ ಬಿಸಿರಕ್ತದ ಕಲಿಗಳು ಮೈಸೂರು ಬ್ಯಾಂಕ್ ವೃತ್ತಕ್ಕೆ ಧಾವಿಸಿ ಬಂದರು. ಅಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಮಾಡುವ ಯೋಜನೆ ರೂಪಿಸ ಲಾಯಿತು.

ನೆರೆದಿದ್ದ ಸುಮಾರು 80 ಜನರು ತುರ್ತು ಪರಿಸ್ಥಿತಿಯ ವಿರುದ್ಧ ಕರ್ನಾಟಕದಲ್ಲಿ ಮೊದಲ ಪ್ರತಿಭಟನೆಯ ಕಹಳೆಯನ್ನು ಕೂಗಿದರು. ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೆಪೇಟೆ, ಕೆಂಪೇಗೌಡ ವೃತ್ತದ ಹಾದಿಯನ್ನು ದಾಟಿಕೊಂಡು ಪ್ರತಿಭಟನಾ ಮೆರವಣಿಗೆ ಮೈಸೂರು ಬ್ಯಾಂಕ್ ಬಳಿ ಕೊನೆಗೊಂಡಿತು ಮತ್ತು ಈ ಪ್ರತಿಭಟನೆ ರಾಜ್ಯದ ಅನೇಕ ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಜನರು ಒಗ್ಗೂಡಿ ಹೋರಾಡಲು ನಾಂದಿಯಾಯಿತು ಎಂದೇ ಹೇಳಬಹುದು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕರು ಮುಂದೆ ರಾಜ್ಯಮಟ್ಟದ ಮುಖಂಡರು ಮತ್ತು ರಾಜಕೀಯ ನಾಯಕರಾಗಿ ಗುರುತಿಸಿಕೊಂಡರು. ಇದು ನರಹರಿಯವರ ಸಂಘಟನಾ ಚಾತುರ್ಯ ಮತ್ತು ನಾಯಕರನ್ನು ಬೆಳೆಸುವ ಗುಣಕ್ಕೆ ಒಂದ ಚಿಕ್ಕ ಉದಾಹರಣೆ. 1970ರಿಂದ 1990ರವರೆಗಿನ ಅವಧಿಯ ಕರ್ನಾಟಕದ ಬಹುತೇಕ ಚುನಾವಣೆಗಳ ಸಂದರ್ಭಗಳಲ್ಲಿ ಭಾಜಪ ಮತ್ತು ಆರೆಸ್ಸೆಸ್ಸಿನ ಸಭೆಗಳು, ಚರ್ಚೆಗಳು, ತಂತ್ರಗಾರಿಕೆ, ಪ್ರಣಾಳಿಕೆ ಕುರಿತು ಸಭೆಗಳು, ಅಭ್ಯರ್ಥಿ ಪಟ್ಟಿ ಅಂತಿಮ ಗೊಳಿಸುವ ಪ್ರಕ್ರಿಯೆ ಹೀಗೆ ಎಲ್ಲವೂ ಇವರ ಶ್ರೀರಾಂಪುರ ನಿವಾಸದಲ್ಲಿ ನಡೆಯುತ್ತಿದ್ದುದು ಅವರ ಪ್ರಭಾವ, ಸಹಕಾರಿ ಗುಣಕ್ಕೆ ಹಿಡಿದ ಕೈಗನ್ನಡಿ. ನರಹರಿಯವರು ಆರೆಸ್ಸೆಸ್ಸಿನ ಕ್ಷೇತ್ರಿಯ ಕಾರ್ಯ ವಾಹರಾಗಿ ಸೇವೆ ನಿರ್ವಹಿಸುತ್ತಾ ವಿವಿಧ ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿದ್ದನ್ನು ಗಮನಿಸಿದ ಸಂಘ ಪರಿವಾರ, 1984ರಲ್ಲಿ ಅವರನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಭಾಜಪ ಅಭ್ಯರ್ಥಿಯನ್ನಾಗಿ ಘೋಷಿಸಿತು.

ಸತತವಾಗಿ ಮೂರು ಬಾರಿ (1984ರಿಂದ 2002ರವರೆಗೆ) ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಮೇಲ್ಮನೆಯಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಧ್ವನಿಯಾಗಿ, ಆವರ ಹಕ್ಕು ಗಳಿಗಾಗಿ, ಶಿಕ್ಷಕರ ವೇತನ, ಸೇವಾ ಸಮಸ್ಯೆಗಳು ಹಾಗೂ ಶಿಕ್ಷಣದ ಗುಣಮಟ್ಟದ ಕುರಿತಂತೆ ನಿರಂತರ ವಾಗಿ ಕಾಳಜಿ ವಹಿಸಿ, ಸದನದಲ್ಲಿ ಶಿಕ್ಷಣ-ಶಿಕ್ಷಕರ ಪರವಾಗಿ ಹೋರಾಡುವ ಪ್ರಮುಖ ನಾಯಕರಾಗಿ, ದನಿಯಾಗಿ ಗುರುತಿಸಿಕೊಂಡರು.

ವೃತ್ತಿ ಜೀವನದುದ್ದಕ್ಕೂ ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಲ್ಲದೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಹೋರಾಡಿ ಜೈಲುವಾಸವನ್ನೂ ಅನುಭವಿಸಿದರು. ಉತ್ತಮ ವಾಗ್ಮಿ ಮತ್ತು ಲೇಖಕರೂ ಆಗಿದ್ದ ನರಹರಿಯವರು ‘ಎ ವಿಷನ್ ಅಂಡ್ ಡೈರೆಕ್ಷನ್ ಟು ಎಜುಕೇಶನ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಒಂದು ದೊಗಳೆ ಪ್ಯಾಂಟ್, ಅರ್ಧ ತೋಳಿನ ಅಂಗಿ ಇವರ ಉಡುಪು. ಕಾಲೇಜಿನಲ್ಲಿ ತಿಂಗಳ ವೇತನ ಬಂದ ದಿನದಂದು ತಪ್ಪದೇ ಆರೆಸ್ಸೆಸ್ ಕಛೇರಿ ಕೇಶವ ಕೃಪಾಕ್ಕೆ ತೆರಳಿ, ಒಂದು ಪಾಲನ್ನು ಸಮಾಜೋದ್ಧಾರಕ್ಕೆ ದೇಣಿಗೆ ನೀಡಿ ಅನಂತರವೇ ಮನೆಗೆ ತೆರಳುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ!

ಕರ್ನಾಟಕದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಘದ ಎಲ್ಲಾ ಸ್ತರದವರೊಂದಿಗೆ ಪ್ರೀತ್ಯಾದರದ ಮತ್ತು ಅವಿನಾಭಾವ ಸಂಬಂಧವನ್ನು ಸದಾಕಾಲ ಹೊಂದಿದ್ದ, ಶಿಕ್ಷಣ ಕ್ಷೇತ್ರದ ಉತ್ತೇಜನ ಮತ್ತು ಅಭಿವೃದ್ದಿಗೆ ದಶಕಗಳ ಕಾಲ ದುಡಿದ-ಹೋರಾಡಿದ, ಶಿಕ್ಷಕರ ಹಕ್ಕುಗಳಿಗಾಗಿ ಧೈರ್ಯ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ನರಹರಿಯವರು ಇಹದ ಯಾತ್ರೆ ಮುಗಿಸಿ ಹರಿಪಾದ ಸೇರಿದ್ದಾರೆ.

ಎಂಟು ದಶಕಗಳ ಅವರ ಸಮರ್ಪಣಾ ಮನೋಭಾವ, ಹೋರಾಟ ಮತ್ತು ಸಾಧನೆಗಳು ಮುಂದಿನ ಹಲವಾರು ಪೀಳಿಗೆಗಳಿಗೆ ಪ್ರೇರಣೆ-ಮಾದರಿಯಾಗಿ ಉಳಿಯಲಿವೆ. ‘ಯೋಗೇನಾಂತೇ ತನುತ್ಯಜಾಮ’ ಎನ್ನುವ ಉಕ್ತಿಯಂತೆ, ಭಗವಂತ, ಸಮಾಜ ಮತ್ತು ‘ಸಂಘ’ ತನಗೊಪ್ಪಿಸಿದ ಎಲ್ಲಾ ಕೆಲಸ, ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅಚ್ಚುಕಟ್ಟಾಗಿ, ಉತ್ತಮವಾಗಿ ನಿಭಾಯಿಸಿ, ಕೊನೆಯಲ್ಲಿ ಯೋಗಿಗಳಂತೆ ಇಹಲೋಕದ ಪಯಣ ಮುಗಿಸಿ ಪ್ರೊ.ಕೃ.ನರಹರಿ ಪರಮಾತ್ಮನಲ್ಲಿ ಲೀನವಾಗಿದ್ದಾರೆ.

ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ನರಹರಿ ಅಜ್ಜಾ, ಹೋಗಿ ಬನ್ನಿ.