ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಬೆಂಗಳೂರಿನ ಮಳೆಗೊಂದು ಫಿಲಾಸಫಿ

ನೀನು ಬೆಂಗಳೂರಿನ ಪ್ರಜೆಯಾದರೆ, ಮಳೆಗಾಲದಲ್ಲಿ ಸಂಜೆ ಮನೆಗೆ ಮರಳುತ್ತೇನೆ ಎಂಬ ಯಾವ ಆಸೆ ಯನ್ನೂ ಇಟ್ಟುಕೊಳ್ಳಬೇಡ. ಸಾಯುವ ನಾನಾ ವಿಧಾನಗಳಲ್ಲಿ, ಜೋರು ಮಳೆ ಬರುತ್ತಿರುವಾಗ ಬೆಂಗ ಳೂರಿನಲ್ಲಿ ಅಡ್ಡಾಡುವುದೂ ಒಂದು. ಸುಮ್ಮನೇ ದಾರಿ ಬದಿ ನಿಂತಿದ್ದರೂ ಮೇಲಿನ ಮರದ ಕೊಂಬೆ ಲಟಕ್ಕನೇ ಮುರಿದು ತಲೆ ಮೇಲೆ ಬೀಳಬಹುದು.

ಕಾಡುದಾರಿ

ಪ್ರಿಯ ತಮ್ಮ, ಬೆಂಗಳೂರಿಗೆ ಬಂದು ನೆಲೆಸುತ್ತೇನೆ ಎಂದು ನೀನು ಹೇಳುವಾಗ ನಾನು ‘ನೋ’ ಎನ್ನಲಿಲ್ಲ. ಕಾರಣ, ಬದುಕು. ಭಾರತದ ಯಾವ ಪ್ರಜೆಯೂ ಎಲ್ಲಿಗೂ ಹೋಗಿ ವಾಸಿಸಬಹುದು, ದುಡಿಯಬಹುದು- ಅದು ನನಗೆ ಗೊತ್ತಿಲ್ಲದ್ದೇನಲ್ಲ. ಜೊತೆಗೊಂದು ಸಣ್ಣ ಅಂಕಿ ಅಂಶ ನೋಡು. ವಲ್ಡ ಪಾಪ್ಯುಲೇಷನ್ ರಿವ್ಯೂ ಪ್ರಕಾರ, ಬೆಂಗಳೂರಿನ ಜನಸಂಖ್ಯೆ 2024ರಲ್ಲಿ 1.40 ಕೋಟಿ. 2025ರಲ್ಲಿ ನಗರದ ಜನಸಂಖ್ಯೆ 1.80 ಕೋಟಿ ತಲುಪಬಹುದು ಎಂದು ಅದು ಭವಿಷ್ಯ ಹೇಳಿದೆ. ಅಂದರೆ ವರ್ಷ ದಲ್ಲಿ 40 ಲಕ್ಷ ಜನ ಇಲ್ಲಿಗೆ ಬರುತ್ತಿದ್ದಾರೆ ಅಥವಾ ಹುಟ್ಟುತ್ತಿದ್ದಾರೆ. ಹಾಗೇ ಇದನ್ನು ಭಾಗಿಸಿ ನೋಡಿದರೆ ಪ್ರತಿದಿನ 10959 ಜನ ಸಿಟಿ ಪ್ರವೇಶಿಸುತ್ತಿದ್ದಾರೆ ಎಂದಾಯಿತು. ಇವರೆಲ್ಲ ಎಲ್ಲಿ ಇರು ತ್ತಾರೆ ಮತ್ತು ಹೇಗೆ ಬದುಕುತ್ತಾರೆ ಎಂದು ಯಾರೂ ಆಲೋಚಿಸುವುದಿಲ್ಲ. ಎಲ್ಲೋ ಹೇಗೋ ಬದುಕು ಕಟ್ಟಿಕೊಳ್ಳುತ್ತಾರೆ. ಅವರ ಜೊತೆ ನೀನೂ ಒಬ್ಬನಾಗುತ್ತಿ. ಅದಲ್ಲ ವಿಷಯ. ನಿನ್ನ ಹಾಗೇ ನಾನೂ ದಶಕದ ಹಿಂದೆ ಬೆಂಗಳೂರಿಗೆ ಬಂದವನು.

ಇಂದು ನನಗೆ ನನ್ನೂರಿಗಿಂತ ಬೆಂಗಳೂರು, ಇಲ್ಲಿನ ಬದುಕು ಪ್ರಿಯವಾಗಿದೆ. ನಾವಿರುವ ಊರೇ ನಮ್ಮದಾಗಬೇಕಲ್ಲವೇ. ಈ ವಾರದಲ್ಲಿ ಮಳೆಯಿಂದ ಬೆಂಗಳೂರಿನಲ್ಲಿ ಆದ ಅನಾಹುತ ನೋಡಿ ಇದನ್ನು ಬರೆಯಬೇಕೆನಿಸಿತು. ‘ಬೆಂಗಳೂರಿಗೆ ಬರುವುದಾದರೆ ಕಾರು ತರಬೇಡ, ಒಂದು ದೋಣಿ ತಾ’ ಎಂದು ತಮಾಷೆ ಮಾಡಿದೆ ನಿಜ; ಆ ತಮಾಷೆ ನಿಜವೂ ಆಗಬಹುದು ಎಂಬುದು ನಿನಗೆ ಗೊತ್ತಿರಲಿ. ಕೆಲವು ವರ್ಷಗಳ ಹಿಂದೆ ನಾನು ಇರುವ ತಗ್ಗು ಪ್ರದೇಶದಲ್ಲಿ ರಾಜಕಾಲುವೆಯ ಒಂದು ತಡೆಗೋಡೆ ಒಡೆದು ನೀರು ನುಗ್ಗಿಬಿಟ್ಟಿತ್ತು.

ಮನೆಗಳ ತುಂಬಾ ಎರಡಡಿ ಎತ್ತರಕ್ಕೆ ನೀರು. ವಾಹನ ಓಡಾಡುವ ರಸ್ತೆಗಳಲ್ಲಿ ನಿಂತ ನೀರಿನ ಮೇಲೆ ಬೋಟುಗಳು ಓಡಾಡಿದವು. ಮನೆಗಳಲ್ಲಿ ಸಿಕ್ಕಿಬಿದ್ದವರು ಅವುಗಳಲ್ಲಿ ಏರಿಕೊಂಡು ಪಾರಾದರು. ಮನೆ ತುಂಬಾ ಕೊಳಚೆ ಜಲ, ಕೆಸರು ಮಣ್ಣು- ಪರಿಸ್ಥಿತಿ ಊಹಿಸಿಕೋ. ಬೇಸ್‌ಮೆಂಟ್ ಮತ್ತು ಗ್ರೌಂಡ್ ಫ್ಲೋರ್‌ನಲ್ಲಿದ್ದ ಸಾಮಗ್ರಿಗಳೆ ಎಂದೂ ಸರಿಪಡಿಸಲಾಗದಂತೆ ಹಾಳಾದವು. ಹಾವುಗಳು ಬಂದು ಸೇರಿಕೊಂಡವು. ಮರುದಿನ ಬಂದ ಮುಖ್ಯಮಂತ್ರಿ, ಸಚಿವರು ಪರಿಹಾರ ಕೊಡುವ ಮಾತಾಡಿದರು. ಬೆನ್ನು ಹತ್ತಿ ಹೋದವರಿಗೆ ಅಷ್ಟಿಷ್ಟು ಸಿಕ್ಕಿತು.

ಇದನ್ನೂ ಓದಿ: Harish Kera Column: ಭವಿಷ್ಯದ ಸಮರ ರಂಗಭೂಮಿಗಿದು ಮುನ್ನೋಟ

ಆದರೆ ಮಳೆಯ ಬಗ್ಗೆ ದೊಡ್ಡದೊಂದು ಭಯ ಮನದಲ್ಲಿ ಕುಳಿತಿತು. ಭೂಮಿಗೆ ಬೀಳುವ ಮಳೆ ಮನಸ್ಸನ್ನೂ ಆರ್ದ್ರಗೊಳಿಸಬೇಕು, ಅದರೆ ಇಂಥ ಅನುಭವ ಆದವರಿಗೆ ಅದು ಅಳಿಸಲಾಗದ ಆತಂಕವನ್ನು ಬಿತ್ತಿತು. ಹೀಗಾಗಿ ಈಗ ಜೋರು ಮಳೆ ಬಿದ್ದರೆ ಎದೆ ಢವಢವ ಎನ್ನುತ್ತದೆ. ಹೀಗಾಗಿ ಮೊನ್ನೆ ಮುಳುಗಿದ ಏರಿಯಾಗಳ ಜನರ ಪರಿಸ್ಥಿತಿಯನ್ನು ನಾನು ಊಹಿಸಿಕೊಳ್ಳಬಲ್ಲೆ.

ನೀನು ಬೆಂಗಳೂರಿಗೆ ಬರುವುದಾದರೆ ಬಾ; ಅದರೆ ಮಲೆನಾಡಿನ ಧೋ ಮಳೆಗಾಲವನ್ನೋ ಬಯಲು ನಾಡಿನ ಸೋನೆ ಮಳೆಯನ್ನೋ ನಿರೀಕ್ಷೆಯಿಟ್ಟುಕೊಂಡು ಬರಬೇಡ. ಇಲ್ಲಿನ ಮಳೆಗಾಲ, ಮೇ ತಿಂಗಳ ಬಿಸಿಲಲ್ಲಿ ಬೆಂದವರಿಗೆ ಮೊದಲು ಶಿವಕರುಣೆಯಂತೆ ಕಾಣಬಹುದು. ಅದರೆ ಅದು ರುದ್ರವಿಲಾಸ ಎಂದು ಗೊತ್ತಾಗುವುದು ನಂತರ ಮೋರಿಗಳು ನಾವೇ ಎಸೆದ ಕಸದಿಂದ ಕಟ್ಟಿ ಕೊಂಡಿರುವುದರಿಂದ ನೀರೆಲ್ಲ ರಸ್ತೆಯ ಮೇಲೆ ಬರುತ್ತದೆ. ಜೊತೆಗೆ ಕಸವೂ. ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಎದ್ದು ನೀರಿನಲ್ಲಿ ತೇಲಿಹೋಗುತ್ತವೆ.

ಅದರ ಮೇಲೆ ಹಾದುಹೋಗುವ ದ್ವಿಚಕ್ರಿಗಳು ಗುಳುಂ ಮುಳುಗಿ ಹೋಗಿ ರಾಜಕಾಲುವೆ ಸೇರ ಬಹುದು. ರಾಜಕಾಲುವೆಗಳು ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗುತ್ತವೆ. ಕೆರೆಗಳು ಉಕ್ಕಿ ಪಕ್ಕದಲ್ಲಿರುವ ಕಟ್ಟಡಗಳ ಬೇಸ್‌ಮೆಂಟ್‌ಗಳನ್ನೂ ವ್ಯಾಪಿಸಿ ನಾನು ಇಲ್ಲೂ ಇದ್ದೆ ಎಂದು ನೆನಪಿಸುತ್ತದೆ.

77 R

ನೀನು ಬೆಂಗಳೂರಿನ ಪ್ರಜೆಯಾದರೆ, ಮಳೆಗಾಲದಲ್ಲಿ ಸಂಜೆ ಮನೆಗೆ ಮರಳುತ್ತೇನೆ ಎಂಬ ಯಾವ ಆಸೆಯನ್ನೂ ಇಟ್ಟುಕೊಳ್ಳಬೇಡ. ಸಾಯುವ ನಾನಾ ವಿಧಾನಗಳಲ್ಲಿ, ಜೋರು ಮಳೆ ಬರುತ್ತಿರುವಾಗ ಬೆಂಗಳೂರಿನಲ್ಲಿ ಅಡ್ಡಾಡುವುದೂ ಒಂದು. ಸುಮ್ಮನೇ ದಾರಿ ಬದಿ ನಿಂತಿದ್ದರೂ ಮೇಲಿನ ಮರದ ಕೊಂಬೆ ಲಟಕ್ಕನೇ ಮುರಿದು ತಲೆ ಮೇಲೆ ಬೀಳಬಹುದು. ಈ ಮೊದಲೇ ಹೇಳಿದಂತೆ ಮ್ಯಾನ್‌
ಹೋಲ್ ಬಾಯಿ ತೆರೆದು ನಿನ್ನನ್ನೂ ನಿನ್ನ ದ್ವಿಚಕ್ರವನ್ನೂ ನುಂಗಬಹುದು.

ಪಾದಚಾರಿ ಮಾರ್ಗದಲ್ಲಿ (ಇದು ಇರುವುದೇ ಅಪರೂಪ) ನಡೆಯುತ್ತಿರುವಾಗ ಯಾವುದೋ ಮುಚ್ಚಳ ತೆರೆದ ಟ್ರಾನ್ಸ್ ಫಾರ್ಮರ್ ಶಾರ್ಟ್ ಆಗಿ ನಿನ್ನನ್ನು ಸುಟ್ಟುಹಾಕಬಹುದು. ಬೇಸ್‌ ಮೆಂಟ್‌ನಲ್ಲಿ ನಿಂತ ನೀರು ತೆರವು ಮಾಡಲು ಹೋಗಿ ಕರೆಂಟ್ ಹೊಡೆಯಬಹುದು. ಅಥವಾ ಕಾಲು ಜಾರಿ ಬಿದ್ದದ್ದೇ ನೆವವಾಗಿ ರಾಜಕಾಲುವೆ ಸೆಳೆದುಕೊಂಡು ಬಿಡಬಹುದು. ಮಳೆಗೆ ನೆನೆದುಹೋದ ಪಕ್ಕದ ಬಹುಮಹಡಿ ಕಟ್ಟಡ ನೀನಿರುವ ಶೀಟ್‌ನ ಮನೆಯ ಮೇಲೆ ಕುಸಿದು ಅಪ್ಪಚ್ಚಿ ಮಾಡಬಹುದು. ಇಲ್ಲಿ ಏನೂ ಆಗಬಹುದು.

ಮಳೆಗಾಲದ ಬಗ್ಗೆ ರಮ್ಯ ಯೋಚನೆಗಳು ಇದ್ದರೆ ಅದನ್ನು ನಾಶಪಡಿಸುವುದಕ್ಕೇ ಇರುವುದು ಇಲ್ಲಿನ ಮುಂಗಾರು. ನಿನ್ನಲ್ಲಿ ಈ ಬದುಕಿನ ಕ್ಷಣಿಕತೆಯ ಬಗ್ಗೆ ಅರಿವು ಮೂಡಿಸಿ ಫಿಲಾಸಫರ್ ಆಗಿಸುವ ಅಪಾಯವೂ ಇದೆ. ಜಯಂತ ಕಾಯ್ಕಿಣಿ ಒಂದೆಡೆ ಹೇಳಿದ್ದರು- ಮುಂಬಯಿಯಲ್ಲಿ ರೈಲು ಬಾಂಬ್ ಸ್ಫೋಟ, ಮಳೆ ಅನಾಹುತ ಹೀಗೆ ಏನೇ ಆದರೂ ಬದುಕು ಹಳಿ ತಪ್ಪುತ್ತದೆ, ಆದರೆ ದಿನಾರ್ಧದಲ್ಲಿ ಬದುಕು ಮತ್ತೆ ಹಳಿಗೆ ಬರುತ್ತದೆ. ಕಾರಣ, ಹಳಿಗೆ ಬರದೆ ಬೇರೆ ದಾರಿಯೇ ಇಲ್ಲವಲ್ಲ!

ಇದು ಬೆಂಗಳೂರಿನ ಮಟ್ಟಿಗೂ ನಿಜವಾಗುತ್ತಿದೆ. ಎಲ್ಲ ನಗರಗಳ ಫಿಲಾಸಫಿ ಅವುಗಳ ದುರ್ಬಲ ಪಾಯಿಂಟ್‌ನಲ್ಲಿರುತ್ತದೆ. ನಾಲ್ಕೈದು ದಶಕಗಳ ಹಿಂದೆ ಈ ಊರಿನ ಫಿಲಾಸಫಿಯಲ್ಲಿ ಶಾಂತತೆ, ನೆಮ್ಮದಿ ಪ್ರಧಾನವಾಗಿತ್ತು. ನಿವೃತ್ತರು ತುಂಬ ಶಾಂತವಾಗಿ ಏನನ್ನೋ ಯೋಚಿಸುತ್ತ ರಸ್ತೆ ದಾಟಬಹುದಿತ್ತು. ಎರಡು ದಶಕಗಳ ಹಿಂದೆ ಅದು ಇದ್ದಕ್ಕಿದ್ದಂತೆ ಹಗಲು ರಾತ್ರಿ ಭೇದವೆಣಿಸದ ದುಡಿಮೆಯ ಕಡೆಗೆ ತಿರುಗಿತು. ಅಂದರೆ ಬದುಕಿನ ಅರ್ಥ ಅಂಥ ದುಡಿಮೆಯಲ್ಲಿರುತ್ತದೆ ಎಂದು ಹೇಳಲಾಗುತ್ತಿತ್ತು. ಇಂದು ಆ ತಾತ್ವಿಕತೆಯೂ ಹಳತಾಗಿದೆ.

ಕಷ್ಟಪಟ್ಟು ದುಡಿ, ಆದರೆ ಅದರ ಫಲ ಉಣ್ಣಲು ನೀನಿರುತ್ತಿ ಅಂತ ತಿಳಿದುಕೊಳ್ಳಬೇಡ ಎಂಬ ಫಿಲಾಸಫಿ ಇಂದಿನ ಬೆಂಗಳೂರಿನದ್ದಾಗಿದೆ. ಇದಕ್ಕೆ ಉದಾಹರಣೆಗಳನ್ನು ನೋಡು. ಜೀವಮಾನದ ದುಡಿಮೆಯನ್ನೆಲ್ಲ ಸುರಿದು ಒಂದು ಸೈಟು ಕೊಂಡು ಮನೆ ಕಟ್ಟಿಸುವ ಯೋಚನೆಯಲ್ಲಿರುತ್ತಿ. ಒಂದು ದುರದೃಷ್ಟದ ಮುಂಜಾನೆ ಇನ್ಯಾರೋ ಬಂದು ಈ ಸೈಟು ನನಗೆ ಸೇರಿದ್ದು ಎಂದು ಬಿಡುತ್ತಾನೆ. ಮುಂದಿನ ನಿನ್ನ ಜೀವನವೆಲ್ಲ ಕೋರ್ಟಿಗೆ ಅಲೆಯುವುದಾಗಿರುತ್ತದೆ.

ಶ್ರಮಪಟ್ಟು ಒಂದು ಮನೆ ಕಟ್ಟಿಸಿರುತ್ತಿ. ಒಂದು ಸಂಜೆ ಜೆಸಿಬಿಗಳು ಬಂದು ಕೆಡವಿ ಬಿಡುತ್ತವೆ. ಬೆವರು ಬಸಿದು ಒಂದು ಕಾರು ಕೊಂಡಿರುತ್ತಿ. ಮೈಸೂರು ರೋಡಿನಲ್ಲಿ ಒಂದು ಟ್ರಕ್ಕಿನವನು ಕುಟ್ಟಿ ಜಜ್ಜಿಬಜ್ಜಿ ಮಾಡಿ ಹೋಗಿರುತ್ತಾನೆ. ನೀನು ಜೀವಸಹಿತ ಉಳಿದದ್ದೇ ಪವಾಡವಾಗಿರುತ್ತದೆ. ಸಂಜೆ ಮನೆಗೆ ಹೋಗಿ ಬಿಸಿ ಕಾಫಿ ಕುಡಿಯಬಹುದು ಎಂದುಕೊಂಡಿರುತ್ತೀಯ. ಆ ಸಂಜೆ ಮಳೆಯಲ್ಲಿ ನಿನ್ನ ಟೂವೀಲರ್ ಚರಂಡಿ ಪಾಲಾಗಿರುತ್ತದೆ. ನಿನ್ನ ಪಾಡಿಗೆ ನೀನು ರಸ್ತೆಯಲ್ಲಿ ದ್ವಿಚಕ್ರ ಚಲಾಯಿಸು ತ್ತಿರುತ್ತೀಯ. ಯಾರೋ ಇನ್ನೂ ಮೀಸೆ ಮೊಳೆಯದ ರೌಡಿ ವ್ಹೀಲಿಂಗ್ ಮಾಡುತ್ತ ಪಕ್ಕದ ಹೋಗುತ್ತಾನೆ. ನೀನು ಗಾಬರಿ ಬಿದ್ದು ಗಾಡಿ ಬೀಳಿಸಿ ತರಚಿ ಮೈ ಕೈಯೆಲ್ಲ ಗಾಯವಾಗಿ ಆಸ್ಪತ್ರೆ ಪಾಲಾಗುತ್ತಿ. ವರ್ಷಗಟ್ಟಲೆ ದುಡಿದು ಒತ್ತಡ ತಡೆದುಕೊಂಡು ಮನೆ ಮಕ್ಕಳು ಆಯ್ತು ಇನ್ನು ಆರಾಮಾಗಿರೋಣ ಎಂದುಕೊಂಡರೆ ಒಂದು ರಾತ್ರಿ ಎದೆನೋವು ಶುರುವಾಗಿ ಆಂಬ್ಯುಲೆನ್ಸ್ ಬರುತ್ತದೆ. ಒಂದು ವಾರ ಐಸಿಯು ವಾಸ. ಇಪ್ಪತ್ತು ಲಕ್ಷ ಆಸ್ಪತ್ರೆ ಪಾಲಾಗಿರುತ್ತದೆ. ಇದನ್ನೆಲ್ಲ ನಿನ್ನನ್ನು ಹೆದರಿಸಲು ಹೇಳುತ್ತಿಲ್ಲ. ಇದೇ ಇಂದಿನ ಬೆಂಗಳೂರು ಜೀವನ. ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ನಾನೂ ನೀನೂ ಕೇಳಬಹುದು. ಕೇಳಿ ಏನು ಫಲ? ಉತ್ತರಿಸಬೇಕಾದವರು ನನಗೂ ನಿನಗೂ ಸಿಗುವವರಲ್ಲ. ಸುಲಭವಾಗಿ ನಾವೇ ಉತ್ತರಿಸಿಕೊಳ್ಳಬಹುದು.

ಬೆಂಗಳೂರನ್ನು ಪ್ರೀತಿಸದವರೇ ಇಂಥ ಸ್ಥಿತಿಗೆ ಹೊಣೆ. ಹೊರಗಿನಿಂದ ಎಷ್ಟು ಮಂದಿಯೇ ಬಂದಿರಲಿ, ಈ ಊರನ್ನು ನನ್ನ ಊರು ಎಂದುಕೊಂಡರೆ ಮಾತ್ರ ಇದನ್ನು ಚೆಂದವಾಗಿಡಲು, ಹಾಗಿಟ್ಟುಕೊಂಡು ಮುಂದಿನ ಪೀಳಿಗೆಗೂ ದಾಟಿಸಿ ತೆರಳಲು ಸಾಧ್ಯವಿದೆ. ಇಲ್ಲವಾದರೆ ಇದೇ ಕತೆ. ಬೆಳಗ್ಗೆದ್ದು ಕಸವನ್ನು ಪಕ್ಕದ ಸೈಟಿಗೋ ರಸ್ತೆಬದಿಗೋ ಎಸೆದು ಬರುವವನು, ರಾಜಕಾಲುವೆಗೆ ಡಿಸ್ಕಸ್ ತ್ರೋ ಮಾಡುವವನು, ಖಾಲಿ ಮಾಡಿದ ಬಿಯರ್ ಬಾಟಲಿಯನ್ನು ಪಾದಚಾರಿ ಮಾರ್ಗಕ್ಕೆ ಅಪ್ಪಳಿಸಿ ಚೂರು ಮಾಡಿ ಗಹಗಹಿಸಿ ನಗುವವನು ಇಲ್ಲಿಯವನಾಗಿರಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ಹತ್ತು ವರ್ಷವಾಗಿದ್ದರೂ ಒಂದಕ್ಷರ ಕನ್ನಡ ಮಾತನಾಡದ, ಸ್ಥಳೀಯ ಜನತೆಯ ಭಾಷೆಯ ಬಗ್ಗೆ ಕಿಂಚಿತ್ ಕುತೂಹಲವಿಲ್ಲದವನೂ ಇಲ್ಲಿಯವನಾಗಲಾರ.

ಇಂಥವರು ನಮ್ಮ ಸಿಟಿಯನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದು ಹೇಗೆ ನಿರೀಕ್ಷಿಸಲು ಸಾಧ್ಯ? ಹೆಚ್ಚೆಂದರೆ ತನ್ನ ಮನೆಯ ಗಲೀಜನ್ನು ಬೀದಿಗೆ ತಂದು ಇಡಬಹುದಷ್ಟೆ. ಹೊರಗಿನಿಂದ ಬಂದು ಅಪ್ಪಟ ಬೆಂಗಳೂರಿನವರಾಗಿರುವ, ಈ ನಗರವನ್ನು ತುಂಬ ಚೆಂದವಾಗಿ ಕಟ್ಟಿ ಬೆಳೆಸಿದ ಹಲವರನ್ನು ನೋಡು. ಕಬ್ಬನ್ ಪಾರ್ಕ್‌ ನ ಹಿಂದಿರುವ ಮಾರ್ಕ್ ಕಬ್ಬನ್, ಬೆಂಗಳೂರಿನ ಸಾಲು ಮರಗಳ ಹಿಂದಿರುವ ಜರ್ಮನಿಯ ಗುಸ್ತಾವ್ ಕ್ರುಂಬಿಗಲ್, ಸ್ಯಾಂಕಿ ಕೆರೆಯ ಹಿಂದಿರುವ ಕರ್ನಲ್ ಸ್ಯಾಂಕಿ, ಇಲ್ಲಿನ ಹಲವು ಭವ್ಯ ವಾಸ್ತುಶಿಲ್ಪಗಳ ಹಿಂದಿರುವ ಮೈಸೂರಿನ ಒಡೆಯರು, ಟಿಪ್ಪು ಸುಲ್ತಾನ, ತಮಿಳು- ತೆಲುಗು ಮೂಲದಿಂದ ಬಂದು ನೆಲೆನಿಂತು ಇಲ್ಲಿನ ಕನ್ನಡವನ್ನು ಶ್ರೀಮಂತ ಗೊಳಿಸಿದ ಡಿವಿಜಿ, ಮಾಸ್ತಿ ಪುತಿನ, ನಾಡಿನ ಆಚೆಯವರಾದರೂ ಇಲ್ಲಿನ ಆಡಳಿತ ಕಾನೂನು ಸುವ್ಯವಸ್ಥೆಯನ್ನೆಲ್ಲ ಸೊಗಸಾಗಿ ನಿರ್ವಹಿಸಿದ ಹಲವು ಐಎಎಸ್ ಐಪಿಎಸ್‌ಗಳು- ಇವರೆಲ್ಲರ ಹೃದಯದಲ್ಲಿ ಈ ಬೆಂಗಳೂರು ನಮ್ಮದೆಂಬ ಭಾವನೆ ಇದ್ದಿರಲೇಬೇಕು.

ತಾನು ದುಡಿದು ಹೊತ್ತು ಹೊತ್ತಿನ ತುತ್ತು ಕಾಣುವ ಈ ಊರಿನ ಬಗ್ಗೆ ಪ್ರೀತಿ ಇದ್ದರೆ ಅದನ್ನು ಸೊಗಸಾಗಿ ಉಳಿಸಿಕೊಳ್ಳುವ ದರ್ದು ಕೂಡ ಇರುತ್ತದೆ. ‘ನನ್ನ ದುಡಿಮೆಗೆ ತಕ್ಕ ಟ್ಯಾಕ್ಸ್ ಕಟ್ತೀನಿ, ಉಳಿದದ್ದೆಲ್ಲ ಸರಕಾರ ನೋಡಿಕೊಳ್ಳಬೇಕು’ ಎಂಬುದು ಸೊಕ್ಕು ಮಾತ್ರ. ಈ ಊರನ್ನು ನನ್ನದಾಗಿಸಿ ಕೊಳ್ಳುತ್ತೇನೆ ಎಂಬ ಪ್ರೀತಿ ಇದ್ದರೆ ಮಾತ್ರ ಬೆಂಗಳೂರಿಗೆ ಬಾ, ಅಷ್ಟೆ.

ಹರೀಶ್‌ ಕೇರ

View all posts by this author