ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಭವಿಷ್ಯದ ಸಮರ ರಂಗಭೂಮಿಗಿದು ಮುನ್ನೋಟ

ರಷ್ಯಾ-ಉಕ್ರೇನ್ ಯುದ್ಧದಲ್ಲಿ, ಇಸ್ರೇಲ್ -ಪ್ಯಾಲೆಸ್ತೀನ್ ಘರ್ಷಣೆಯಲ್ಲಿ ವ್ಯಾಪಕವಾಗಿ ಇದು ಬಳಕೆ ಯಾಗಿದೆ. ಅಮೆರಿಕ ಸಾಕಷ್ಟು ಮೊದಲಿನಿಂದಲೂ ಡ್ರೋನ್ ಬಳಕೆ ಮಾಡುತ್ತ ಬಂದಿದೆ. ಆದರೆ ಭಾರತಕ್ಕೆ ಇದೇ ಪ್ರಥಮ. ಈ ಡ್ರೋನ್‌ನ ಬೆಲೆ ಹೆಚ್ಚೇನಿಲ್ಲ, 500 ಡಾಲರ್‌ಗಿಂತ ಹೆಚ್ಚಿರ ಲಾರದು. ಆದರೆ ಇದು ಕೋಟ್ಯಂತರ ಬೆಲೆ ಸುರಿದು ಕೊಂಡುಕೊಂಡ ಟ್ಯಾಂಕ್‌ಗಳನ್ನು ಸದ್ದಿಲ್ಲದೆ ಪುಡಿಗಟ್ಟಬಲ್ಲವು. ಪಾಕ್‌ನೊಳಗಿನ ಉಗ್ರ ನೆಲೆಗಳ ಮೇಲೆ ನರಕವನ್ನು ಸುರಿದಿದ್ದು ಇವುಗಳೇ ಅಂತನೂ ಹೇಳಲಾಗ್ತಿದೆ.

ಭವಿಷ್ಯದ ಸಮರ ರಂಗಭೂಮಿಗಿದು ಮುನ್ನೋಟ

ಹರೀಶ್‌ ಕೇರ ಹರೀಶ್‌ ಕೇರ May 8, 2025 7:12 AM

ಕಾಡುದಾರಿ

ಪಾಕಿಸ್ತಾನದಲ್ಲಿರುವ ಟೆರರಿಸ್ಟ್ ಕ್ಯಾಂಪ್‌ಗಳ ಮೇಲೆ ಭಾರತ ನಡೆಸಿರುವ ವಾಯುದಾಳಿ ಒಂದ ನ್ನಂತೂ ಸ್ಪಷ್ಟವಾಗಿ ಸಾರಿದೆ: ಭವಿಷ್ಯದ ಯುದ್ಧ ಭೂಮಿ ಮೊದಲಿನಂತಿರುವುದಿಲ್ಲ. ಆಧುನಿಕ ಸಮರ ರಂಗಭೂಮಿ ನಮ್ಮ ಅಂಗಳಕ್ಕೇ ಬಂದಿದೆ. ಯುದ್ಧಭೂಮಿಯಲ್ಲಿ ಬಳಸಿದ ಅಸ್ತ್ರಗಳನ್ನು ನೋಡಿಯೇ ಇದನ್ನು ಅರ್ಥ ಮಾಡಿಕೊಳ್ಳಬಹುದು. ಮುಖ್ಯವಾಗಿ ದಾಳಿಗೆ ಬಳಕೆಯಾಗಿರುವುದು ಮೂರು-ಸ್ಕಾಲ್ಪ್ ಕ್ರ್ಯೂಸ್ ಕ್ಷಿಪಣಿ, ಹ್ಯಾಮರ್ ಬಾಂಬ್ ಮತ್ತು ಕಮಿಕೇಝ್ ಡ್ರೋನ್ ಗಳು ಮತ್ತು ಈ ಡ್ರೋನ್‌ನಲ್ಲಿ ಅಳವಡಿಸಲಾಗಿರುವ ಎಐ ಅಥವಾ ಕೃತಕ ಬುದ್ಧಿಮತ್ತೆ. ಈ ಡ್ರೋನ್‌ಗಳೇ ಇಂಟರೆಸ್ಟಿಂಗ್ ಪಾಯಿಂಟ್, ಹಿಂದಿನ ಯುದ್ಧಗಳಲ್ಲಿ ಈ ಡ್ರೋನ್‌ಗಳಿರಲಿಲ್ಲ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ, ಇಸ್ರೇಲ್ -ಪ್ಯಾಲೆಸ್ತೀನ್ ಘರ್ಷಣೆಯಲ್ಲಿ ವ್ಯಾಪಕವಾಗಿ ಇದು ಬಳಕೆ ಯಾಗಿದೆ. ಅಮೆರಿಕ ಸಾಕಷ್ಟು ಮೊದಲಿನಿಂದಲೂ ಡ್ರೋನ್ ಬಳಕೆ ಮಾಡುತ್ತ ಬಂದಿದೆ. ಆದರೆ ಭಾರತಕ್ಕೆ ಇದೇ ಪ್ರಥಮ. ಈ ಡ್ರೋನ್‌ನ ಬೆಲೆ ಹೆಚ್ಚೇನಿಲ್ಲ, 500 ಡಾಲರ್‌ಗಿಂತ ಹೆಚ್ಚಿರ ಲಾರದು. ಆದರೆ ಇದು ಕೋಟ್ಯಂತರ ಬೆಲೆ ಸುರಿದು ಕೊಂಡುಕೊಂಡ ಟ್ಯಾಂಕ್‌ಗಳನ್ನು ಸದ್ದಿಲ್ಲದೆ ಪುಡಿಗಟ್ಟ ಬಲ್ಲವು. ಪಾಕ್‌ನೊಳಗಿನ ಉಗ್ರ ನೆಲೆಗಳ ಮೇಲೆ ನರಕವನ್ನು ಸುರಿದಿದ್ದು ಇವುಗಳೇ ಅಂತನೂ ಹೇಳಲಾಗ್ತಿದೆ.

ಈ ಡ್ರೋನ್‌ಗಳನ್ನು ಪರಿಣಾಮಕಾರಿ ಆಗಿಸಿರುವುದು ಗುರಿಯನ್ನು ಸ್ಪಷ್ಟಪಡಿಸುವಲ್ಲಿ ಇವುಗಳ ನಿಖರತೆ, ಸದ್ದಿಲ್ಲದೇ ಶತ್ರುಪ್ರದೇಶದ ಮೇಲೆ ಹಾರಾಡಿ ದಾಳಿ ಎಸಗುವ ಚಾಣಾಕ್ಷತನ. ಕಮಿಕೇಝ್ ಎಂದರೆ ಎರಡನೇ ವಿಶ್ವಯುದ್ಧದಲ್ಲಿ ಆತ್ಮಹತ್ಯೆ ದಾಳಿ ಎಸಗಿದ ಒಂದು ಜಪಾನಿ ಏರ್ ಕ್ರಾಫ್ಟ್‌ ನ ಹೆಸರು. ಈ ಡ್ರೋನ್‌ಗಳೂ ತಮ್ಮ ಗುರಿಯತ್ತ ಎರಗಿ ಸ್ಪೋಟಿಸಿಕೊಂಡು ಪ್ರಾಣತ್ಯಾಗ ಮಾಡಿಕೊಳ್ಳು ತ್ತವೆ.

ಇದನ್ನೂ ಓದಿ: Harish Kera Column: ಟ್ರೋಲ್‌ ಪಾವತಿಸಿ ಮುಂದೆ ಹೋಗಿ !

ಹೀಗಾಗಿ ಇವುಗಳ ಬಳಕೆ ಒಮ್ಮೆ ಮಾತ್ರ. ಇಂಟರೆಸ್ಟಿಂಗ್ ಪಾಯಿಂಟ್ ಎಂದರೆ ಇವು ವೈರಿಗಳ ರೇಡಾರ್‌ಗೆ ಸಿಗುವುದೇ ಇಲ್ಲ. ರೇಡಾರ್ ಗಳನ್ನು ಹೇಗೆ ರೂಪಿಸಲಾಗಿದೆ ಎಂದರೆ ದೊಡ್ಡ ವಿಮಾನ ಗಳನ್ನು, ಕ್ಷಿಪಣಿಗಳನ್ನು ಗುರುತಿಸುವಂತೆ. ಕಮಿಕೇಝ್ ಡ್ರೋನ್‌ಗಳು ಅವುಗಳ ಸಣ್ಣ ಗಾತ್ರ, ನಿಧಾನ ವೇಗ ಮತ್ತು ರೇಡಾರ್‌ಗೆ ಸಿಗದಂಥ ಸ್ಟೆಲ್ತ್ ಟೆಕ್ನಾಲಜಿಗಳಿಂದಾಗಿ ಅವುಗಳ ಮೂಗಿನಡಿ ನುಸುಳುತ್ತವೆ. ಅನಿಯಮಿತವಾಗಿ ಮತ್ತು ಗುಂಪು ಗುಂಪಾಗಿ ಹಾರುವ ಇವುಗಳ ಸಾಮರ್ಥ್ಯ ಕೂಡ ಸಾಂಪ್ರದಾ ಯಿಕ ರೇಡಾರ್ ವ್ಯವಸ್ಥೆಗೆ ತಲೆನೋವಿನದ್ದಾಗಿದೆ.

ಇವು ಹೋಗಿ ಬಹವಾಲ್ಪುರದ ಮುಜಾಹಿದೀನ್ ಕ್ಯಾಂಪ್ ಮೇಲೆ ಆಕಾಶದಲ್ಲಿ ನಿಂತು ದಿಟ್ಟಿಸಿ ನೋಡುತ್ತಿದ್ದರೂ ಯಾರಿಗೂ ಗೊತ್ತಾಗಿಲ್ಲ. ಎರಗಿ ಬೆಂಕಿಯ ಮಳೆ ಸೃಷ್ಟಿಸಿದಾಗಲೇ ಎಚ್ಚರವಾ ದದ್ದು. ಈಗ ಭಾರತ ಬಳಸಿದ ಡ್ರೋನ್ ಯಾವುದು ಎಂಬುದು ಪ್ರಶ್ನೆ. ಭಾರತ ಕೆಲವು ಬಗೆಯ ಡ್ರೋನ್‌ಗಳನ್ನು ಬಳಸುತ್ತಿದೆ.

ಸ್ವತಃ ಭಾರತದ ಸಂಸ್ಥೆಯೊಂದು ’ನಾಗಾಸ’ ಎಂಬ ಕಮಿಕೇಝ್ ಡ್ರೋನ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಮಾರು ಎರಡು ಕಿಲೋ ಭಾರದ ಬಾಂಬ್ ಹೊತ್ತು, 4.5 ಕಿಲೋಮೀಟರ್ ಎತ್ತರ ದಲ್ಲಿ ನಿಂತು ಕೆಳಗಿನ ಪ್ರದೇಶವನ್ನೆಲ್ಲ ಹದ್ದುಗಣ್ಣಿನಿಂದ ಇದು ಗಮನಿಸುತ್ತದೆ. ಇದು ಗುರಿಯಿಟ್ಟರೆ 2 ಮೀಟರ್ ಗಿಂತ ಹೆಚ್ಚು ಗುರಿ ತಪ್ಪುವುದಿಲ್ಲ. 15 ಕಿಲೋ ಮೀಟರ್ ದೂರದಿಂದ ಇದನ್ನು ನಿಯಂತ್ರಿಸಬಹುದು. 30 ಕಿಲೋಮೀಟರ್ ದೂರದವರೆಗೂ ಸ್ವಯಂಚಾಲಿತ ಹಾರಾಟ ನಡೆಸುತ್ತದೆ, ಒಂದು ಗಂಟೆ ಹಾರಾಡಬಲ್ಲದು.

ಬಳಸದೇ ತನ್ನ ನೆಲೆಗೆ ಮರಳಿಸಿಕೊಳ್ಳಲೂಬಹುದು. ಭಾರತ-ಚೀನಾ ಬಾರ್ಡರ್‌ನಲ್ಲಿ ಇದು ಆಗಸದಲ್ಲಿದ್ದು ಚೀನಾ ಸೈನಿಕರ ಚಲನವಲದ ಮೇಲೆ ಕಣ್ಣಿಟ್ಟಿದೆ. ಇದನ್ನು ಒಂದೊಂದಾಗಿ ದಾಳಿಗೆ ಕಳಿಸಬಹುದು. ಮಿಡತೆಗಳ ಗುಂಪಿನಂತೆ ನೂರಾರು ಡ್ರೋನ್‌ಗಳನ್ನು ಒಟ್ಟಾಗಿ ಕಳಿಸಿ ನರಕವನ್ನೇ ಸೃಷ್ಟಿಸಲೂಬಹುದು-ಇದನ್ನು ಸ್ವಾರ್ಮ್ ಎನ್ನುತ್ತಾರೆ.

7 R

ಇದು ಭಾರತದ ಮೊದಲ ದೇಸಿ ದಾಳಿ ಡ್ರೋನ್. ಆದರೆ ಇನ್ನೂ ಪವರ್ ಫುಲ್ ಡ್ರೋನ್‌ಗಳು ಕೂಡ ಭಾರತದ ಬಳಿ ಇವೆ. ಇದಲ್ಲದೇ 500 ಕಿಮೀ ರೇಂಜ್‌ನ ಸ್ಟ್ರೈಕರ್ ಡ್ರೋನ್ ಇದೆ. 6-9 ಗಂಟೆ ಹಾರಾಡಬಲ್ಲ, 900 ಕಿಮೀ ದೂರದವರೆಗೂ ಹೋಗಬಲ್ಲ ಅಸ್ತ್ರದ ತಯಾರಿ ಕೂಡ ನಡೆಯುತ್ತಿದೆ. ರಷ್ಯಾ, ಇಸ್ರೇಲ್ ಬಳಿ ಇದಕ್ಕಿಂತಲೂ ಪವರ್ ಫುಲ್ ಡ್ರೋನ್‌ಗಳಿವೆ.

ಈ ಡ್ರೋನ್‌ಗಳ ಬಳಕೆಯ ದೊಡ್ಡ ಲಾಭ ಏನೆಂದರೆ, ಪೈಲೆಟ್‌ಗಳು ಪ್ರಾಣ ಕಳೆದುಕೊಳ್ಳಬೇಕಿಲ್ಲ. ಹತ್ತಾರು ವರ್ಷಗಳ ಅನುಭವ ಹೊಂದಿ ಪರಿಣತನಾದ ಪೈಲಟ್ ಒಬ್ಬ ಶತ್ರುದೇಶದ ಒಳಗೆ ನುಗ್ಗಿ ದಾಗ ಅಲ್ಲಿನ ಕ್ಷಿಪಣಿ ಹೊಡೆತಕ್ಕೆ ತುತ್ತಾಗುವ ಸಾಧ್ಯತೆ ಇದ್ದೇ ಇದೆ. ಡ್ರೋನ್‌ಗಳಿಗೆ ಪೈಲಟ್ ಇಲ್ಲವಲ್ಲ, ಹೀಗಾಗಿ ಆ ಭಯವಿಲ್ಲ. ಇವು ಜೆಟ್ ಗಳಷ್ಟು ದುಬಾರಿ ಕೂಡ ಅಲ್ಲ. ಎಐ ಮೂಲಕ ದೂರದಿಂದಲೇ ನಿಯಂತ್ರಿಸಬಹುದು.

ಮೊದಲೆಲ್ಲಾ ಶತ್ರುಪ್ರದೇಶದಲ್ಲಿ ಗೂಢಚಾರಿಕೆ ನಡೆಸಲು ಬೇಹುಗಾರರನ್ನು ಕಳಿಸಬೇಕಾಗುತ್ತಿತ್ತು. ಈಗಲೂ ಬಹುದೂರದ ದೇಶಗಳಿಗೆ ಅದು ಬೇಕಾದೀತು. ಆದರೆ ಪಕ್ಕದ ದೇಶಗಳ ಮೇಲೆ ಕಣ್ಣಿಡಲು ಸ್ಯಾಟಲೈಟ್, ಎಐ, ಡ್ರೋನ್‌ಗಳು ಸಾಕು ಎಂಬಂತಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಎಐ ಅನ್ನು ಮುನ್ನಡೆಸುವ ದೇಶ ಜಗತ್ತನ್ನು ಆಳಲಿದೆ ಎಂದಿದ್ದರು. ಈ ಕಾರಣಕ್ಕಾಗಿ ಚೀನಾ ಎಐ ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗಲು 150 ಶತಕೋಟಿ ಡಾಲರ್ ತೆಗೆದಿರಿಸಿದೆ.

2021ರಿಂದ 2023ರವರೆಗೆ ಇದಕ್ಕಾಗಿ ರಷ್ಯಾದ ಖರ್ಚು 181 ಮಿಲಿಯ ಡಾಲರ್, ಅಮೆರಿಕದ ಖರ್ಚು 4.6 ಶತಕೋಟಿ ಡಾಲರ್. 1999 ರಷ್ಟು ಹಿಂದೆಯೇ ಕೊಸೊವೊ ಯುದ್ಧದಲ್ಲಿ ಗುಪ್ತ ಸರ್ಬಿಯನ್ ನೆಲೆಗಳನ್ನು ನ್ಯಾಟೋ ಡ್ರೋನ್ ತಂತ್ರಜ್ಞಾನವನ್ನು ಬಳಸಿತು. ಸೆಪ್ಟೆಂಬರ್ 11ರ ಉಗ್ರ ದಾಳಿಯ ಸೇಡು ತೀರಿಸಲು ಅಮೆರಿಕದ ಡ್ರೋನ್‌ಗಳು ಒಸಾಮಾ ಬಿನ್ ಲಾಡೆನ್ ನೆಲೆಯಲ್ಲಿ ಅಬೊಟ್ಟಾ ಬಾದ್‌ನಲ್ಲಿ ಪತ್ತೆಹಚ್ಚಿದ್ದು ಈ ತಂತ್ರಜ್ಞಾನದ ಯಶಸ್ವೀ ಫಲಿತಾಂಶಗಳಲ್ಲೊಂದು ಎನ್ನಬಹುದು.

2010ರಿಂದ 2020ರವರೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ 14000 ಡ್ರೋನ್ ದಾಳಿಗಳನ್ನು ನಡೆಸಿತ್ತು. 2035ರ ವೇಳೆಗೆ ಅಮೆರಿಕ ವಾಯುಪಡೆಯ ಶೇಕಡಾ 70ರಷ್ಟು ಪಾಲು ರಿಮೋಟ್ ಪೈಲಟ್ ವಿಮಾನ ಗಳು ಇರುತ್ತವೆ ಎಂದು ಪೆಂಟ ಗನ್ ಅಂದಾಜಿಸಿದೆ. ಡ್ರೋನ್ ತಂತ್ರಜ್ಞಾನ ಪ್ರಪಂಚದಾದ್ಯಂತದ ಮಿಲಿಟರಿಗಳಿಗೆ ವೇಗವಾಗಿ ಹರಡುತ್ತಿದೆ.

ಬಹುತೇಕ ಪ್ರತಿಯೊಂದು ನ್ಯಾಟೊ ಸದಸ್ಯ ರಾಷ್ಟ್ರವೂ ಈಗ ಡ್ರೋನ್ ಬಳಸುವ ಸಾಮರ್ಥ್ಯ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ, ಟರ್ಕಿ ಮತ್ತು ಪಾಕಿಸ್ತಾನ ಸಹ ಡ್ರೋನ್ ತಯಾರಿಕೆಗೆ ಮುಂದಾಗಿವೆ. ಇನ್ನೊಂದೆಡೆ ಭಯಂಕರ ಚೀನಾ ಇದೆ. ಅದು ಡ್ರೋನ್ ಹುಟ್ಟಿಸಿ ಹುಟ್ಟಿಸಿ ಯುಎಇ, ಈಜಿಪ್ಟ್, ಸೌದಿ ಅರೇಬಿಯಾ, ನೈಜೀರಿಯಾ, ಇರಾಕ್‌ಗಳಿಗೆಲ್ಲಾ ತನ್ನ ವಿಂಗ್ ಲೂಂಗ್ ಮತ್ತು ಸಿಎಚ್ ಸರಣಿಯ ಡ್ರೋನ್‌ಗಳನ್ನು ಪೂರೈಸುತ್ತಿದೆ.

ಇಷ್ಟೆಲ್ಲ ಆಗುವಾಗ ಭಯೋತ್ಪಾದಕರ ಕೈಗೆ ಅದು ಸಿಗದೇ ಇರುತ್ತದೆಯೆ? ಉಗ್ರರೂ ಅವುಗಳನ್ನು ಬಳಸುತ್ತಿದ್ದಾರೆ. ಹೆಜ್ಬೊಲ್ಲಾ, ಹಮಾಸ್ ಸಂಘಟನೆಗಳು ಇಸ್ರೇಲ್ ವಾಯುಪ್ರದೇಶ ಉಲ್ಲಂಘಿಸಲು ಇರಾನ್ ನಿರ್ಮಿತ ಡ್ರೋನ್‌ಗಳನ್ನು ಬಳಸುತ್ತಿವೆ. ಗಾಜಾದಲ್ಲಿನ ಸಂಘರ್ಷದಲ್ಲಿ ಇಸ್ರೇಲ್ 37000 ಹಮಾಸ್ ಗುರಿಗಳನ್ನು ಗುರುತಿಸಲು ‘ಲ್ಯಾವೆಂಡರ್’ ಎಐ ವ್ಯವಸ್ಥೆಯನ್ನು ಬಳಸಿದೆ.

ಹೀಗಾಗಿ ಇಸ್ರೇಲ್-ಹಮಾಸ್ ನಡುವಿನ ಪ್ರಸ್ತುತ ಸಂಘರ್ಷವನ್ನು ‘ಮೊದಲ ಎಐ ಯುದ್ಧ’ ಎಂದು ಕರೆಯಲಾಗಿದೆ. ಉಕ್ರೇನ್ ತನ್ನ ಸಾವಿರಾರು ಎಐ ಚಾಲಿತ ಡ್ರೋನ್‌ಗಳನ್ನು ಹಾರಿಸಿ ರಷ್ಯಾದ ಸಂಸ್ಕರಣಾಗಾರಗಳ ಮೇಲೆ ಬಾಂಬ್ ಸುರಿದು ಅಂಥ ಬಲಿಷ್ಠ ವೈರಿಯಲ್ಲೂ ನಡುಕ ಹುಟ್ಟಿಸಿದೆ. ಡ್ರೋನ್ ಮತ್ತು ಎಐ ಅಭಿವೃದ್ಧಿಯ ಮೇಲಿನ ಖರ್ಚು ವೇಗವಾಗಿ ಹೆಚ್ಚುತ್ತಿದೆ. ಡ್ರೋನ್‌ಗಳು ಹಾಗೂ ಎಐಯನ್ನು ಪೂರ್ಣ ಕಂಟ್ರೋಲ್‌ಗೆ ಬಿಡುವುದು ಎಂದರೆ ಸಮರದ ನಡುವೆ ಶಾಂತಿ ಮಾತುಕತೆಯ ಸಂಭಾವ್ಯತೆಯನ್ನು ಅಷ್ಟಷ್ಟೇ ಕಡಿಮೆ ಮಾಡುವುದು ಎಂದರ್ಥ, ಏಕೆಂದರೆ ಡ್ರೋನ್‌ಗಳಿಗೆ ದಾಳಿ ಮಾಡುವುದು ಗೊತ್ತೇ ಹೊರತು ಸಂಯಮ, ಮಾತುಕತೆ ಗೊತ್ತಿಲ್ಲ.

ಇದು ಸಮರದ ಭಾರವನ್ನು ಮನುಷ್ಯ ಹೆಗಲಿನಿಂದ ಯಂತ್ರಗಳಿಗೆ ವರ್ಗಾಯಿಸಿದೆ ಕೂಡ. ಆದರೆ ಈ ಯಂತ್ರಗಳ ಚಾಲನೆಯನ್ನು ನಿರ್ಧರಿಸಬೇಕಾದವರು ಮನುಷ್ಯರೇ ಎಂಬುದರಿಂದ, ಯುದ್ಧದ ಅಂತಿಮ ಹೊಣೆ ನಮ್ಮದೇ ಆಗುತ್ತದೆ. ಈಗೇನೋ ನಾವು ನಮ್ಮ ಕಡೆಯಿಂದ ಡ್ರೋನ್ ಬಳಸಿದೆವು. ನಾಳೆ ಚೀನಾದ ಡ್ರೋನ್‌ಗಳನ್ನು ಪಾಕಿಸ್ತಾನ ನಮ್ಮ ಮೇಲೆ ಬಳಸುವುದಿಲ್ಲ ಎಂಬ ಯಾವುದೇ ಖಾತ್ರಿ ಇಲ್ಲ ಅಥವಾ, ಚೀನಾ- ಭಾರತ ಯುದ್ಧ ಶುರುವಾದರೆ, ಡ್ರೋನ್ ತಂತ್ರಜ್ಞಾನದಲ್ಲಿ ನಮಗಿಂತ ಮುಂದಿರುವ ಚೀನಾ ಸಹಜವಾಗಿಯೇ ಆ ವಿಷಯದಲ್ಲಿ ಮೇಲುಗೈ ಸಾಧಿಸಲೂ ಬಹುದು.

ಹೀಗಾಗಿ ಭಾರತ ತನ್ನ ಡ್ರೋನ್ ಸಾಮರ್ಥ್ಯ, ಅದನ್ನು ನಿಯಂತ್ರಿಸುವ ಎಐ ಸಾಮರ್ಥ್ಯ, ಮತ್ತು ಇಂಥ ಡ್ರೋನ್‌ಗಳನ್ನು ಪತ್ತೆಹಚ್ಚಿ ಕೆಡಹಾಕುವ ತಂತ್ರಜ್ಞಾನ-ಈ ಮೂರನ್ನೂ ಬೆಳೆಸಿಕೊಳ್ಳಬೇಕಾ ಗುತ್ತದೆ, ಇದು ಇನ್ನಷ್ಟು ಲಕ್ಷ ಕೋಟಿ ಡಾಲರ್‌ಗಳ ಬಾಬ್ತು. ಹೀಗೆ ತಂತ್ರಜ್ಞಾನ ಹೆಚ್ಚಿದಂತೆ ಅದರ ಮೇಲಿನ ರಕ್ಷಣಾ ಖರ್ಚುವೆಚ್ಚ ಹೆಚ್ಚುತ್ತದೆ. ಶಸ್ತ್ರಾಸ್ತ್ರ ತಯಾರಿಸುವ ಕಂಪನಿಗಳು ಕೊಬ್ಬುತ್ತವೆ, ಅದರ ಟ್ಯಾಕ್ಸು ಪ್ರಜೆಗಳ ಮೇಲೆ. ಕಿಲ್ಲರ್ ರೋಬೋಟ್‌ಗಳು ಎಂದು ಕರೆಯಲ್ಪಡುವ ಈ ಡ್ರೋನ್‌ ಗಳ ಬಳಕೆ ಬಗ್ಗೆ ಆತಂಕಗಳು ಹೆಚ್ಚಾದಂತೆ, ಯುದ್ಧದಲ್ಲಿ ಎಐ ಬಳಕೆ ಹಲವು ನೈತಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಡ್ರೋನ್‌ಗಳು ಯೋಧರು ಮತ್ತು ಸಾಮಾನ್ಯ ನಾಗರಿಕರ ನಡುವಿನ ವ್ಯತ್ಯಾಸವನ್ನು ಪ್ರತ್ಯೇಕಿಸಲು ಸಾಧ್ಯವಾಗದಿರಬಹುದು. ಅದೃಷ್ಟವಶಾತ್ ಅನೇಕ ಎಐ ತಂತ್ರಜ್ಞಾನಗಳು ಇನ್ನೂ ಮೊದಲ ಹಂತ ದಲ್ಲಿವೆ. ಸದ್ಯ ಈ ಕಿಲ್ಲರ್ ರೋಬೋಟ್‌ಗಳು ಮನುಷ್ಯನ ನಿಯಂತ್ರಣದಿಂದ ಮಾತ್ರ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಭವಿಷ್ಯದಲ್ಲಿ ಹೋರಾಡಲು ಮನುಷ್ಯನೇ ಅಗತ್ಯವಿಲ್ಲದ, ಆದರೆ ಮನುಷ್ಯನೇ ಗುರಿಯಾಗಿರುವ ಯುದ್ಧಗಳು ನಡೆಯುವುದಂತೂ ಖಂಡಿತ.

ಯಂತ್ರಗಳು ನೈತಿಕ, ತಾತ್ವಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥ. ಇಂಥ ತಾಂತ್ರಿಕ ಪ್ರಗತಿ ಹೇಗೆ ಮುಂದುವರಿಯುತ್ತದೆ, ಎಲ್ಲಿ ನಿಲ್ಲುತ್ತದೆ ಎಂದು ಊಹಿಸಲು ಅಸಾಧ್ಯ. ಭಯೋತ್ಪಾ ದಕರ ನೆಲೆಗಳನ್ನು ನಾಶ ಮಾಡಿದಲ್ಲಿಗೆ ಭಾರತದ ಯುದ್ಧ ಮುಗಿದಂತಲ್ಲ, ಅದು ಈಗಷ್ಟೇ ಆರಂಭ ವಾಗಿದೆ ಎನ್ನಬಹುದಷ್ಟೆ.

ಕ್ರಿಸ್ತಪೂರ್ವ 5ನೇ ಶತಮಾನದ ಸತ್ ತ್ಸು ಎಂಬ ಚೀನೀ ಸೇನಾ ತಂತ್ರಗಾರ ಬರೆದ ‘ಆರ್ಟ್ ಆಫ್‌ ವಾರ್’ ಎಂಬ ಪುಸ್ತಕದಲ್ಲಿ, ಗೆರಿಲ್ಲಾ ಯುದ್ಧಕಲೆಯ ಬಗ್ಗೆ ತಿಳಿಸಲಾಗಿದೆ. ನಿಮ್ಮ ತಂತ್ರಗಳು ನಿಗೂಢವಾಗಿ ಕತ್ತಲಿನಂತಿರಲಿ, ಆದರೆ ದಾಳಿ ಮಾಡುವಾಗ ಸಿಡಿಲಿನಂತೆ ಎರಗಿ. ಯುದ್ಧಕಲೆಯ ಪರಮೋನ್ನತ ಸಿದ್ಧಿ ಎಂದರೆ ಶತ್ರುವಿನ ನಿಲುವನ್ನು ಹೋರಾಡದೆಯೇ ಭೇದಿಸುವುದು. ವಿಜಯ ಶಾಲಿ ಧೀರರು ಮೊದಲೇ ಯುದ್ಧವನ್ನು ಗೆದ್ದು ನಂತರ ರಣರಂಗಕ್ಕೆ ತೆರಳುತ್ತಾರೆ.

ಪರಾಜಿತರು ಮೊದಲು ಕದನಕಣಕ್ಕಿಳಿದು ಗೆಲುವು ಸಾಧಿಸಲು ಮುಂದಾಗುತ್ತಾರೆ. ನಿಮ್ಮ ಶತ್ರುವಿನ ಶಕ್ತಿ ಹೆಚ್ಚಿದ್ದರೆ ಅವನ ಗಮನ ತಪ್ಪಿಸಿ. ಅವನು ಎಲ್ಲಿ ಸಜ್ಜಾಗಿಲ್ಲವೋ ಅಲ್ಲಿ ದಾಳಿ ಮಾಡಿ. ಅವನು ನಿರೀಕ್ಷಿಸದೆ ಇರುವಲ್ಲಿ ಪ್ರತ್ಯಕ್ಷರಾಗಿ ಎಂದೆಲ್ಲ ಅದು ಭೋಧಿಸುತ್ತದೆ. ಈ ಮಾತುಗಳು ಆಧುನಿಕ ಪರೋಕ್ಷ ಯುದ್ಧಕ್ಕೆ ಹೆಚ್ಚು ಒಪ್ಪುವಂತಿವೆ.