Roopa Gururaj Column: ಭೀಮನ ಅಹಂಕಾರ ಅಡಗಿಸಿದ ಆಂಜನೇಯ
ವಿಧೇಯತೆಯನ್ನು ನೋಡಿ ಸಂತೃಪ್ತನಾದ ಹನುಮಂತನು, ‘ನೀನು ಇದುವರೆಗೆ ಹೇಳುತ್ತಿದ್ದ ಆ ವಾಯುಪುತ್ರ ಹನುಮಂತ ನಾನೇ, ನಾವಿಬ್ಬರೂ ವಾಯುಪುತ್ರರಾದುದರಿಂದ ಸೋದರರಲ್ಲವೇ? ನೀನು ಹೊರಟ ಕಾರ್ಯ ನೆರವೇರುತ್ತದೆ, ಯೋಚಿಸಬೇಡ’ ಎಂದು ಆಶೀರ್ವದಿಸಿದ. ಆ ಮಾತುಗಳನ್ನು ಕೇಳಿ ಸಂತೋಷಗೊಂಡ ಭೀಮಸೇನನು ಅಣ್ಣನ ಪಾದಗಳಿಗೆರಗಿದನು.


ಒಂದೊಳ್ಳೆ ಮಾತು
rgururaj628@gmail.com
ಪಾಂಡವರು ನಾರಾಯಣಾಶ್ರಮದಲ್ಲಿ ಇರುವ ಸಂದರ್ಭದಲ್ಲಿ, ಒಮ್ಮೆ ಎತ್ತಲಿಂದಲೋ ಸೌಗಂಧಿಕ ಪುಷ್ಪದ ಘಮಘಮಿಸುವ ಪರಿಮಳ ತೇಲಿ ಬರತೊಡಗಿತು. ದ್ರೌಪದಿಗೆ ಆ ಪರಿಮಳವೇ ಅಷ್ಟೊಂದು ಅಹ್ಲಾದಕರವಾಗಿರುವಾಗ ಆ ಪುಷ್ಪಗಳು ಎಷ್ಟೊಂದು ಸುಗಂಧ ಭರಿತವಾಗಿರಬಹುದು ಎಂದು ಊಹಿಸತೊಡಗಿದಳು.
ಪತಿ ಭೀಮಸೇನನನ್ನು ಕರೆದು, ‘ಈ ಪರಿಮಳಯುಕ್ತ ಪುಷ್ಪಗಳನ್ನು ನನಗಾಗಿ ಮತ್ತಷ್ಟು ತಂದು ಕೊಡು’ ಎಂದು ಕೇಳಿದಳು. ಭೀಮಸೇನನು ‘ಇಲ್ಲ’ ಎನ್ನುವನೇ? ಗದೆಯುನ್ನೆತ್ತಿಕೊಂಡು ಗರ್ಜಿಸುತ್ತ ಹೊರಟನು. ಅವನು ಗರ್ಜಿಸುವ ಹೊಡೆತಕ್ಕೆ ಭೂಮಿ ಗಡಗಡ ನಡುಗಿತು.
ಕಾನನದ ಪ್ರಾಣಿ-ಪಕ್ಷಿಗಳೆಲ್ಲಾ ದಿಕ್ಕಾಪಾಲಾಗಿ ಓಡುತ್ತಿದ್ದವು, ಮರಗಳೆಲ್ಲಾ ಮುರಿದು ಬೀಳುತ್ತಿದ್ದವು. ಆ ದಟ್ಟಕಾಡಿನ ತಪ್ಪಲಲ್ಲಿ ರಾಮನ ಭಂಟನಾದ ಹನುಮಂತನು ರಾಮನಾಮ ಜಪಿಸುತ್ತಾ ಮಲಗಿದ್ದನು, ಭೀಮನ ಗರ್ಜನೆ ಕೇಳಿ ಎಚ್ಚರಗೊಂಡ. ಆಂಜನೇಯನು ಆಕಳಿಸುತ್ತ ತನ್ನ ಬಾಲ ವನ್ನು ನೆಲಕ್ಕೆ ಬಡಿದನು. ಆ ಶಬ್ದಕ್ಕೆ ಇಡೀ ಕಾಡೇ ನಡುಗಿತು.
ಇದನ್ನೂ ಓದಿ: Roopa Gururaj Column: ಕೃಷ್ಣನ ಕೈಯಲ್ಲಿ ಕೊಳಲಾದ ಬಿದಿರು
ಭೀಮಸೇನನು ಆಶ್ಚರ್ಯದಿಂದ ಆ ಶಬ್ಧವನ್ನು ಅರಸುತ್ತ ಬಂದಾಗ ಬಂಡೆಯ ಮೇಲೆ ಮಲಗಿದ್ದ ವಾನರನನ್ನು ನೋಡಿದನು. ಆಲಸ್ಯದಿಂದ ಮಲಗಿದ್ದ ವಾನರನು ನಿರ್ಲಕ್ಷ್ಯದಿಂದ ‘ನೀನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀಯ? ಶಾಂತವಾಗಿರುವ ಈ ಕಾಡಿಗೆ ಬಂದು ಸುಮ್ಮನೆ ಏಕೆ ದೊಂಬಿ, ಗಲಾಟೆ ಮಾಡುತ್ತಿದ್ದೀಯಾ? ಇಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಅನವಶ್ಯಕವಾಗಿ ತೊಂದರೆ ಕೊಡಬೇಡ, ಬೇಕಾದರೆ ಹಣ್ಣು ಹಂಪಲುಗಳನ್ನು ತಿಂದು ಹಿಂದಿರುಗಿ ಹೋಗು’ ಎಂದನು.
ಅದಕ್ಕೆ ಭೀಮಸೇನನು ಗರ್ವದಿಂದ, ‘ನಾನು ಚಂದ್ರವಂಶದಲ್ಲಿ ಹುಟ್ಟಿದ ಕ್ಷತ್ರಿಯ’ ಎಂದು ತನ್ನ ಪರಿಚಯ ಹೇಳುತ್ತಾ, ‘ನೀನು ದಾರಿ ಮಧ್ಯ ಏಕೆ ಮಲಗಿದ್ದೀಯ? ಎದ್ದೇಳು, ದಾರಿ ಬಿಡು’ ಎಂದು ಗದರಿಸಿದನು. ‘ಅಯ್ಯಾ, ನಾನು ಮುದುಕ. ನನಗೆ ಏಳಲು ಶಕ್ತಿಯಿಲ್ಲ, ತುಂಬ ಆಯಾಸವಾಗಿದೆ. ಹೋಗಲೇ ಬೇಕಾದರೆ ನನ್ನನ್ನು ದಾಟಿಕೊಂಡು ಹೋಗು’ ಎಂದು ಆ ಕಪೀಶ್ವರ ಹೇಳಿದಾಗ, ‘ನಿನ್ನನ್ನು ದಾಟಿ, ನಿನ್ನಲ್ಲಿರುವ ಆ ಪರಮಾತ್ಮನನ್ನು ತಿರಸ್ಕಾರ ಮಾಡಲು ಇಷ್ಟವಿಲ್ಲ, ಇಲ್ಲದಿದ್ದರೆ ಆ ಹನುಮಂತನು ಸಾಗರವನ್ನು ದಾಟಿದಂತೆ ನಿನ್ನನ್ನು ದಾಟಿಕೊಂಡು ಹೋಗುತ್ತಿದ್ದೆ’ ಎಂದ.
‘ಯಾರಪ್ಪ ಆ ಹನುಮಂತ? ಯಾವ ಸಾಗರವನ್ನು ದಾಟಿದ? ನನಗೂ ಸ್ವಲ್ಪ ಅವನ ವಿಷಯ ತಿಳಿಸು ವಿಯಾ?’ಎಂದು ಆ ವಾನರ ನಗುತ್ತ ಕೇಳಿದ. ‘ಹನುಮಂತ ನನ್ನ ಅಣ್ಣ, ಮಹಾ ಗುಣವಂತ, ಬುದ್ಧಿ ವಂತ ಹಾಗೂ ಶಕ್ತಿವಂತ’ ಎನ್ನುತ್ತಾ ಹನುಮಂತನ ವೃತ್ತಾಂತವನ್ನೆಲ್ಲ ಭೀಮ ಹೆಮ್ಮೆಯಿಂದ ಹೇಳಿದ.
ಭೀಮನ ಬಲೋನ್ಮತ್ತತೆಯನ್ನು, ಬಾಹುಗರ್ವವನ್ನೂ ನೋಡಿ ಮನಸ್ಸಿನಲ್ಲಿಯೇ ಆನಂದಪಟ್ಟ ಹನುಮಂತನು, ‘ಅಯ್ಯಾ, ನಾನು ಮುದುಕ, ಏಳಲಾರೆ ನನ್ನ ಮೇಲೆ ಕನಿಕರ ತೋರಿ ಸ್ವಲ್ಪ ಬಾಲವನ್ನು ಅತ್ತ ಸರಿಸಿಕೊಂಡು ಹೋಗು’ ಎಂದು ಬೇಡಿಕೊಳ್ಳುವವನಂತೆ ನಟಿಸಿದನು.
‘ಅಯ್ಯೋ, ಅಷ್ಟೇ ತಾನೇ?’ ಎನ್ನುತ್ತ ಭೀಮಸೇನನು ಬಾಲವನ್ನು ತನ್ನ ಗದೆಯಿಂದ ಸರಿಸಲು ಹೋದ. ಆದರ ಅದು ಸ್ವಲ್ಪವೂ ಅಲುಗಾಡಲಿಲ್ಲ. ಎರಡು ಕೈಗಳಿಂದಲೂ ಎತ್ತಿದ, ಆಗಲಿಲ್ಲ. ಹಲ್ಲುಮುಡಿ ಕಚ್ಚಿ, ಕಣ್ಣರಳಿಸಿ, ಹುಬ್ಬೆತ್ತಿ ಅಲ್ಲಾಡಿಸಿದ. ಉಹೂಂ, ಕಿಂಚಿತ್ತೂ ಅಲುಗಲಿಲ್ಲ. ಮೈಯೆಲ್ಲಾ ಬೆವರಿ ಹೋಯಿತು, ಆದರೆ ಬಾಲ ಮಾತ್ರ ಸಾಸಿವೆ ಕಾಳಿನಷ್ಟೂ ಸರಿಯಲಿಲ್ಲ. ಈಗ ಮಾತ್ರ ಭೀಮನ ದರ್ಪ ತಣ್ಣಗಾಯಿತು ‘ಅಯ್ಯಾ, ಕಪಿಶ್ರೇಷ್ಠ.. ನೀನು ಯಾರು? ದಯವಿಟ್ಟು ಪ್ರಸನ್ನನಾಗು. ನಾನು ಆಡಿದ ದುರ್ಭಾಷೆಯನ್ನು ಕ್ಷಮಿಸು. ನೀನು ಸಿದ್ಧನೋ, ಯಕ್ಷನೋ, ಗಂಧರ್ವನೋ ಆಗಿರಬೇಕು. ದಯಮಾಡಿ ತಪ್ಪನ್ನು ಮನ್ನಿಸಿ ಆಶೀರ್ವದಿಸಬೇಕು’ ಎಂದು ಬೇಡಿಕೊಂಡನು. ಅವನ ವಿಧೇಯತೆಯನ್ನು ನೋಡಿ ಸಂತೃಪ್ತನಾದ ಹನುಮಂತನು, ‘ನೀನು ಇದುವರೆಗೆ ಹೇಳುತ್ತಿದ್ದ ಆ ವಾಯುಪುತ್ರ ಹನುಮಂತ ನಾನೇ, ನಾವಿಬ್ಬರೂ ವಾಯುಪುತ್ರ ರಾದುದರಿಂದ ಸೋದರರಲ್ಲವೇ? ನೀನು ಹೊರಟ ಕಾರ್ಯ ನೆರವೇರುತ್ತದೆ, ಯೋಚಿಸಬೇಡ’ ಎಂದು ಆಶೀರ್ವದಿಸಿದ. ಆ ಮಾತುಗಳನ್ನು ಕೇಳಿ ಸಂತೋಷಗೊಂಡ ಭೀಮಸೇನನು ಅಣ್ಣನ ಪಾದಗಳಿಗೆರಗಿದನು.
ಬದುಕಿನಲ್ಲಿ ನಾವು ಯಾರನ್ನೇ ಎದುರುಗೊಂಡರೂ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು. ನಮಗಿಂತ ನೂರು ಪಟ್ಟು ದೊಡ್ಡ ಸಾಧಕರು ನಮ್ಮ ಸುತ್ತಲೂ ಇರುತ್ತಾರೆ. ಅದರ ಅರಿವಿದ್ದಾಗ ಸದಾ ವಿನಯದಿಂದ ಇರುವ ಸಂಸ್ಕಾರ ನಮ್ಮದಾಗುತ್ತದೆ.