ಧರ್ಮಸ್ಥಳ: ನ್ಯಾಯ ಒದಗಿಸುವ ಸೌಜನ್ಯ ಜನಪ್ರತಿನಿಧಿಗಳಿಗಿಲ್ಲವೇ ?
ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲದ ಕಾರಣ ಇಡೀ ಪ್ರಕರಣವು ಸಾಂದರ್ಭಿಕ ಸಾಕ್ಷಿಗಳನ್ನು ಅವಲಂಬಿ ಸಿತ್ತು. ಒಟ್ಟು 86 ಸಾಕ್ಷಿಗಳಲ್ಲಿ ಆರಂಭಿಕ 7 ಮಂದಿ ಸೌಜನ್ಯ ಮನೆಯವರು, ಸಂಬಂಧಿಕರೇ ಸಾಕ್ಷಿ ಗಳಾಗಿದ್ದರು. ಆದರೆ ವಿಚಾರಣೆ ವೇಳೆ ಇವರು ಪ್ರತಿಕೂಲ ಸಾಕ್ಷಿಗಳಾಗಿ, ಆರೋಪಿ ಪರವಾಗಿ ಸಾಕ್ಷ್ಯ ನುಡಿದಿದ್ದರು. ಜತೆಗೆ ಆರಂಭದಲ್ಲಿ ಸಮರ್ಪಕ ದಾಖಲೆ ಸಂಗ್ರಹದಲ್ಲಿ ಪೊಲೀಸರು ಎಡವಿರುವುದನ್ನು ನ್ಯಾಯಾಲಯವೂ ಉಲ್ಲೇಖಿಸಿದೆ.


ಜಿತೇಂದ್ರ ಕುಂದೇಶ್ವರ, ಮಂಗಳೂರು
ಧರ್ಮಸ್ಥಳದಲ್ಲಿ ತಲೆ ಬುರುಡೆ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ವಿಧಾನಸಭೆ ಅಧಿವೇಶನ ದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ್ ಕಥೆಗೆ ಒಂದು ಮಂಗಳ ಹಾಡಲಿದ್ದಾರೆ. ಆದರೆ ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕಾದರೆ ಕಾಂತಾರ ಸಿನಿಮಾ ಬಂದ ಬಳಿಕ ಅದರ ಪೂರ್ವದ ಕಥೆ ತೋರಿಸುವ ಕಾಂತಾರ 1 ಸಿನಿಮಾದಂತೆ ಸದ್ಯಕ್ಕೆ ದುಃಖಾಂತ್ಯಗೊಂಡಿರುವ ಸೌಜನ್ಯ ಪ್ರಕರಣ ಕ್ಕೊಂದು ನ್ಯಾಯಯುತ ಅಂತ್ಯ ತೋರಿಸಬೇಕಾಗಿದೆ.
ನೂರಾರು ಹೆಣ ಹೂತ ಪ್ರಕರಣ ಕಥೆ ಹೊರ ಬರಲು ಸೌಜನ್ಯ ಅತ್ಯಾಚಾರ ಹತ್ಯೆಗೆ ನಿಜವಾದ ನ್ಯಾಯ ಸಿಗದೇ ಇರುವುದೇ ಆಗಿದೆ. ಪ್ರಕರಣದಲ್ಲಿ ಬಂಧಿತ ಕಾರ್ಕಳ ಕುಕ್ಕುಂದೂರಿನ ಸಂತೋಷ್ ವಿರುದ್ಧದ ಆರೋಪವನ್ನು ಪ್ರಾಸಿಕ್ಯೂಶನ್ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿತ್ತು.
ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲದ ಕಾರಣ ಇಡೀ ಪ್ರಕರಣವು ಸಾಂದರ್ಭಿಕ ಸಾಕ್ಷಿಗಳನ್ನು ಅವಲಂಬಿಸಿತ್ತು. ಒಟ್ಟು 86 ಸಾಕ್ಷಿಗಳಲ್ಲಿ ಆರಂಭಿಕ 7 ಮಂದಿ ಸೌಜನ್ಯ ಮನೆಯವರು, ಸಂಬಂಧಿ ಕರೇ ಸಾಕ್ಷಿಗಳಾಗಿದ್ದರು. ಆದರೆ ವಿಚಾರಣೆ ವೇಳೆ ಇವರು ಪ್ರತಿಕೂಲ ಸಾಕ್ಷಿಗಳಾಗಿ, ಆರೋಪಿ ಪರವಾಗಿ ಸಾಕ್ಷ್ಯ ನುಡಿದಿದ್ದರು. ಜತೆಗೆ ಆರಂಭದಲ್ಲಿ ಸಮರ್ಪಕ ದಾಖಲೆ ಸಂಗ್ರಹದಲ್ಲಿ ಪೊಲೀಸರು ಎಡವಿರುವುದನ್ನು ನ್ಯಾಯಾಲಯವೂ ಉಲ್ಲೇಖಿಸಿದೆ.
ಇದನ್ನೂ ಓದಿ: BJP Delegation visits Dharmasthala: ಧರ್ಮಸ್ಥಳಕ್ಕೆ ಬಿಜೆಪಿ ಶಾಸಕರ ನಿಯೋಗ ಭೇಟಿ; ವೀರೇಂದ್ರ ಹೆಗ್ಗಡೆ ಜತೆ ಮಾತುಕತೆ
ಇದಾದ ಬಳಿಕ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸೌಜನ್ಯಳ ತಂದೆ ಚಂದಪ್ಪ ಗೌಡ ಸೇರಿದಂತೆ ಹೈಕೋರ್ಟಿನಲ್ಲಿ ಮೂರು ರಿಟ್ ಅರ್ಜಿ ದಾಖಲಾಗಿತ್ತು. “ ಪ್ರಕರಣ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ವೈದ್ಯಕೀಯ ಪುರಾವೆಗಳನ್ನು ಸುಧಾರಿಸಲು ಸಾಧ್ಯ ವಿಲ್ಲ, ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಹ ಸುಧಾರಿಸಲು ಸಾಧ್ಯವಿಲ್ಲ. ಗೋಲ್ಡನ್ ಅವರ್‌ನಲ್ಲಿ ಸಂಗ್ರಹಿಸಲಾಗದ ಪುರಾವೆಗಳು ಇನ್ನೂ ಲಭ್ಯವಿದೆಯೇ ಎಂಬುದು ಸಂದೇಹವಾಗಿದೆ ಎಂದು ಹೇಳಿ ಮರು ತನಿಖೆ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಈ ಪ್ರಕರಣಕ್ಕೆ ಸರಿಯಾದ ನ್ಯಾಯ ಸಿಗದೇ ಇದ್ದಾಗ ನ್ಯಾಯ ಸಿಗಲು ಏನು ದಾರಿ ಎನ್ನುವುದನ್ನು ಶಾಸಕಾಂಗ ಆಲೋಚಿಸಬೇಕು. ಈಗ ಪ್ರಕರಣಕ್ಕೆ ಜೀವ ಬರುವಂತೆ ವಿಧಾನಸಭೆಯಲ್ಲಿ ಇರುವ ಜನಪ್ರತಿನಿಧಿಗಳು ಮಾಡಬೇಕೇ ಹೊರತು ಧರ್ಮಸ್ಥಳ ಚಲೋ ಮಾಡುವುದು ಅವರ ಕಾರ್ಯವಲ್ಲ.
ವಿಧಾನಸಭೆಯಲ್ಲಿ ಯಾರೂ ಕೂಡಾ ಈ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗದ ಹೋದರೆ, ಧರ್ಮಸ್ಥಳ ವಿರುದ್ಧದ ಸುಳ್ಳು ಸುದ್ದಿಗಳು ಮುಂದುವರಿಯಬಹುದು.
ಗೆದ್ದೆತ್ತಿನ ಬಾಲ: ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರವಿದೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ‘ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತಾದ ಅಪಪ್ರಚಾರಕ್ಕೆ ಕಡಿವಾಣ ಹಾಕದೇ ಇರುವುದು ಕಾಂಗ್ರೆಸ್ ಸರಕಾರದ ಪ್ರಮಾದ. ಇದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು’ ಎಂದು ಬಿ.ವೈ.ವಿಜಯೇಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಧರ್ಮಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬಿಜೆಪಿಯವರು ದೂರು ದಾಖಲಾದಾಗ ಯಾಕೆ ಮಾತನಾಡಲಿಲ್ಲ? ಈಗ ರಾಜಕೀಯಕ್ಕಾಗಿ ಧರ್ಮ ಸ್ಥಳಕ್ಕೆ ಚಲೋ ಎಂದು ರ‍್ಯಾಲಿಗಳನ್ನು ಆಯೋಜಿಸುತ್ತಿದ್ದಾರೆ ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಯಾಗಿ ಗುಡುಗಿದ್ದಾರೆ. ಆದರೆ ಇದರ ಬೆನ್ನಲ್ಲೇ, ಕಾಂಗ್ರೆಸ್ ಶಾಸಕರೂ ಧರ್ಮ ಸ್ಥಳದ ಪರ ಮಾತನಾಡುತ್ತಿದ್ದಾರೆ. ಸಂಚು ಹೂಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳುತ್ತಿದ್ದಾರೆ.
ಧರ್ಮಸ್ಥಳ ಪರ ಹೋರಾಟದಲ್ಲಿ ಹಿಂದುತ್ವವಾದಿಗಳು ಅನೇಕರಿದ್ದರು. ಇದೇ ರೀತಿ ಸೌಜನ್ಯಪರ ಹೋರಾಟದಲ್ಲೂ ಹಿಂದುತ್ವ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಕಾರಣದಿಂದ ಬಿಜೆಪಿ ಮತ್ತು ಆರೆಸ್ಸೆಸ್ ಆರಂಭದಲ್ಲಿ ಸ್ಪಷ್ಟ ಹೆಜ್ಜೆ ಇಟ್ಟಿರಲಿಲ್ಲ. ಇತ್ತೀಚೆಗೆ ಆರೆಸೆಸ್ಸ್ ವರಿಷ್ಠ ಬಿಎಲ್. ಸಂತೋಷ್ ಅವರು ಜಾಲತಾಣದಲ್ಲಿ ಹಾಕಿದ ಎರಡು ಪೋಸ್ಟ್‌ಗಳು ಧರ್ಮಸ್ಥಳ ಪರ ಹೋರಾಟಗಾರರಿಗೆ ಬಲ ನೀಡಿದೆ.
ಸಮೀರ ಎಂಬಾತನ ಕಪೋಲ ಕಲ್ಪಿತ ಅತ್ಯಾಚಾರ, ಸಾಮೂಹಿಕ ದಫನದ ಕಥೆಗಳಿಂದಾಗಿ ರಾಜ್ಯಾ ದ್ಯಂತ ಬೆಂಬಲದ ಮಹಾಪೂರ ಬಂದಾಗ ಹುಚ್ಚೆದ್ದು ಕುಣಿದಿದ್ದ ಹೋರಾಟಗಾರರು ಬದಲಾದ ಸನ್ನಿವೇಶ ನೋಡಿ ಕಂಗಾಲಾಗಿದ್ದಾರೆ. ಇದೀಗ ಹಿಂದೂಜಾಗರಣ ವೇದಿಕೆ ಮುಖಂಡ ತಿಮರೋಡಿ ಮಹೇಶ್ ಶೆಟ್ಟಿ ಸಂಘ ಪರಿವಾರದ ವರಿಷ್ಠ ಆರೆಸ್ಸೆಸ್ ವರಿಷ್ಠ ಬಿ.ಎಲ್. ಸಂತೋಷ್ ವಿರುದ್ಧ ಕೆಂಡ ಕಾರಿದ್ದಾರೆ. ನಮ್ಮ ಪರವಾಗಿದ್ದ ಹೋರಾಟವನ್ನು ಹಿಂದೂ ಭಾವನೆ ಬಳಸಿ ಧರ್ಮಸ್ಥಳ ಪರವಾಗಿ ಸಿದ್ದಾರೆ ಎಂದು ಗುಡುಗಿದ್ದಾರೆ.
ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಕೂಡ ಪೊಲೀಸ್ ಅಧಿಕಾರಿಗಳು ಶಾಮೀಲು ಎಂದು ಆರೋಪಿಸುವ ಮೂಲಕ ತಲೆ ಬುರುಡೆ ಪ್ರಕರಣದಿಂದ ಹಿನ್ನಡೆಯಾಗುವುದನ್ನು ತಪ್ಪಿಸಲು ಹೊಸ ವಿಷಯ ಎತ್ತಿದ್ದಾರೆ. ಅನಾಮಿಕ ಮುಸುಕುಧಾರಿಯೂ ಆಯ್ದ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾನೆ. ಇದೆಲ್ಲವೂ ಹೋರಾಟಗಾರರ ವ್ಯವಸ್ಥಿತ ಅಪಪ್ರಚಾರದ ಉದ್ದೇಶ ಎನ್ನುವುದು ಬಹಿರಂಗವಾಗುತ್ತಿದೆ
ಇದರೊಂದಿಗೆ ಬುರುಡೆ ಪ್ರಕರಣವನ್ನು ಜೀವಂತವಾಗಿಡಲು ಸತತ ಪ್ರಯತ್ನಗಳು ನಡೆಯುತ್ತಿವೆ. ಹೊಸ ಕಥೆಯೊಂದಿಗೆ ಬಂದಿರುವ ಜಯಂತ್ ಟಿ. ಎನ್ನುವ ದೂರುದಾರ ಧರ್ಮಸ್ಥಳ ಗ್ರಾಮದಲ್ಲಿ 13-15 ವರ್ಷದ ಬಾಲಕಿಯ ಶವವನ್ನು ಯಾವುದೇ ಮಹಜರು ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ದೂರು ನೀಡಿದ್ದರು. ಇದೀಗ, 15 ವರ್ಷದ ಹಿಂದೆ ಗ್ರಾಮದ ವಸತಿಗೃಹ ಒಂದರಲ್ಲಿ 35-40 ವರ್ಷದ ಮಹಿಳೆಯ ಕೊಲೆಯಾಗಿದ್ದು ಪ್ರಕರಣವನ್ನು ತರಾತುರಿಯಲ್ಲಿ ಮುಗಿಸಲಾಗಿದೆ .ಇದು ಕೊಲೆ ಮತ್ತು ಸಾಕ್ಷಿ ನಾಶದ ಪ್ರಕರಣ ಎಂದು ಮತ್ತೊಂದು ದೂರು ನೀಡಿದ್ದಾರೆ.
ದೂರಿನ ಹೆಸರಲ್ಲಿ ದಿನಕ್ಕೊಂದು ಕಥೆ
ಅನನ್ಯಾ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿಯ ಕಥೆ ಹಿಡಿದುಕೊಂಡು ಬಂದಿದ್ದ ಸುಜಾತ ಭಟ್ ಎಂಬ ಮಹಿಳೆ ದಿನಕ್ಕೊಂದು ಕಥೆ ಹೆಣೆಯುತ್ತಿದ್ದಾರೆ. ಅನನ್ಯಾ ಮಣಿಪಾಲದ ಕೆಎಂಸಿಯಲ್ಲಿ ವೈದ್ಯ ವಿದ್ಯಾರ್ಥಿನಿಯಾಗಿದ್ದಳು ಎಂದು ಹೇಳಿಕೆ ನೀಡಿದ್ದ ಸುಜಾತ ಭಟ್, ಕನಿಷ್ಠ ಪಕ್ಷ ತನಗೆ ಈ ಹೆಸರಿನ ಮಗಳಿದ್ದಳು ಎಂಬುದನ್ನು ಸಾಬೀತುಪಡಿಸುವ ದಾಖಲೆಯನ್ನೂ ಸಲ್ಲಿಸಿಲ್ಲ. ಮಣಿಪಾಲ ಕೆಎಂಸಿಯಲ್ಲಿ 2002, 2003 ರಲ್ಲಿ ಅನನ್ಯಾ ಭಟ್ ಎಂಬ ವಿದ್ಯಾರ್ಥಿನಿಯೇ ಇರಲಿಲ್ಲ ಎಂಬ ಸತ್ಯ ಹೊರ ಬಿದ್ದಿದೆ. ಕಮಲವಾಣಿ ಪತ್ರಿಕೆಗೆ 22 ವರ್ಷಗಳ ಹಿಂದೆ ನೀಡಿರುವ ಸಂದರ್ಶನದಲ್ಲಿ ಸುಜಾತ ಭಟ್, ‘ನನಗೇ ಮಕ್ಕಳೇ ಇಲ್ಲ, ಸಾಕುನಾಯಿಗಳೇ ನನ್ನ ಮಕ್ಕಳು’ ಎಂಬ ಹೇಳಿಕೆ ನೀಡಿದ್ದ ದಾಖಲೆ ಯೂ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ನಡುವೆ ಸುಜಾತ ಪರ ವಕೀಲರು, ‘ ಸುಜಾತ ಭಟ್ ತೋರಿಸಿದ ಮಗಳ ಪೋಟೊ ನೋಡಿ ನಾನು ವಾದಕ್ಕೆ ಒಪ್ಪಿಕೊಂಡಿದ್ದೇನೆ’ ಎಂದು ಹೇಳಿ ಇಡೀ ಪ್ರಕರಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಹೋರಾಟಗಾರರ ದಂತ ಕಥೆಗಳೀಗ ಅಜ್ಜಿ ಕಥೆಗಳಾಗಿ ಮಾರ್ಪಾಟಾಗಿ ಕೊನೆಯಲ್ಲಿ ವದಂತಿಯೂ ಆಗದೆ ಷಡ್ಯಂತ್ರದ ಭಾಗವಾಗ ತೊಡಗಿದೆ.