ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕ್ಷಮೆ ಕೇಳುವುದರಿಂದ ನಾವು ಚಿಕ್ಕವರಾಗುವುದಿಲ್ಲ

ಗುರುಗಳು ಶಾಂತ ಚಿತ್ತದಿಂದ ನೀನು ಬಾಗಿಲ ಮೇಲೆ ಹಾಗೂ ನಿನ್ನ ಶೂಗಳ ಮೇಲೆ ಕೋಪ ಮಾಡಿ ಕೊಂಡೆ ಎಂದ ಮೇಲೆ ಅದುಕೂ ನಿನಗೂ ಏನಾದರು ಸಂಬಂಧವಿರಬೇಕು ಅಲ್ಲವೇ? ನಿನಗೆ ಯಾರ ಮೇಲೆ ಕೋಪ ಮಾಡಿಕೊಳ್ಳುವ ಅರ್ಹತೆ ಇದೆಯೋ ಅವುಗಳ ಮೇಲೆ ನಿನಗೆ ಪ್ರೀತಿಸುವ ಜವಾಬ್ದಾರಿ ಯೂ ಇರಬೇಕು? ಆದ್ದರಿಂದ ನೀನು ಯಾವಾಗ ಯಾವ ವಸ್ತುಗಳ ಮೇಲೆ ಅಥವಾ ವ್ಯಕ್ತಿಗಳ ಮೇಲೆ ಕೋಪ ಮಾಡಿಕೊಳ್ಳುವೆಯೋ ಅವರಿಗೆ ಕ್ಷಮೆ ಕೇಳಲೇಬೇಕು.

ಒಂದೊಳ್ಳೆ ಮಾತು

ಒಮ್ಮೆ ಒಬ್ಬ ವ್ಯಕ್ತಿ ತನ್ನ ಸಮಸ್ಯೆಗೆ ಪರಿಹಾರ ಕೇಳಲು ಝೆನ್ ಗುರುವಿನ ಬಳಿ ಬಂದು ತನ್ನ ಸರದಿಗೆ ಕಾಯುತ್ತಾ ಕುಳಿತನು. ಬಹಳ ಹೊತ್ತು ಕಾದು ಕಾದು ಸಾಕಾಗಿ ಅವನಿಗೆ ಸಿಟ್ಟು ಬಂದಿತ್ತು. ಅಂತೂ ಇವನ ಸರದಿ ಬಂದು ಗುರುಗಳು ಆತನಿಗೆ ಬರಲು ಹೇಳಿ ಕಳಿಸಿದರು. ಕಾದು ಸಾಕಾಗಿದ್ದ ವ್ಯಕ್ತಿಗೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತ್ತು. ಆಶ್ರಮದೊಳಗೆ ಹೋಗುವ ಮೊದಲು ಅವನು ಕಾಲಲ್ಲಿದ್ದ ಶೂಸನ್ನು ಬಿಚ್ಚಿ ಅಲ್ಲೇ ಬಿಸಾಕಿ, ಆಶ್ರಮದ ಬಾಗಿಲನ್ನು ದಡಾರ್ ಅಂತ ತಳ್ಳಿ, ಒಳಗೆ ಬಂದು ಬಾಗಿಲನ್ನು ಟಪ್ ಎಂದು ಹಾಕಿ ಗುರುಗಳ ಬಳಿ ಬಂದನು. ಗುರುಗಳು ಮುಗುಳ್ನಗುತ್ತಾ ಅವನನ್ನೇ ಗಮನಿಸುತ್ತಿದ್ದರು.

ಅವನು ಮಾತನಾಡಲು ಹೊರಟ ತಕ್ಷಣ ಗುರುಗಳು ನೀನು ಏನನ್ನೆ ಹೇಳುವ ಮೊದಲು ನೀನು ಬರುವಾಗ ಹಾಕಿಕೊಂಡು ಬಂದ ಬಾಗಿಲಿಗೆ ಮತ್ತು ನಿನ್ನ ಶೂಗಳಿಗೆ ಕ್ಷಮೆ ಕೇಳಿ ಬಾ ಎಂದರು. ಆ ವ್ಯಕ್ತಿಗೆ ಆಶ್ಚರ್ಯವಾಗಿ ಇದೇನು ಗುರುಗಳೇ, ನಾನು ಕಾಲಲ್ಲಿ ಹಾಕಿಕೊಂಡ ಬಂದ ಶೂಗಳಿಗೆ, ನಿರ್ಜೀವ ಬಾಗಿಲಿಗೆ ಕ್ಷಮೆ ಕೇಳಬೇಕೇ? ಎಂದ.

ಗುರುಗಳು ಶಾಂತ ಚಿತ್ತದಿಂದ ನೀನು ಬಾಗಿಲ ಮೇಲೆ ಹಾಗೂ ನಿನ್ನ ಶೂಗಳ ಮೇಲೆ ಕೋಪ ಮಾಡಿ ಕೊಂಡೆ ಎಂದ ಮೇಲೆ ಅದುಕೂ ನಿನಗೂ ಏನಾದರು ಸಂಬಂಧವಿರಬೇಕು ಅಲ್ಲವೇ? ನಿನಗೆ ಯಾರ ಮೇಲೆ ಕೋಪ ಮಾಡಿಕೊಳ್ಳುವ ಅರ್ಹತೆ ಇದೆಯೋ ಅವುಗಳ ಮೇಲೆ ನಿನಗೆ ಪ್ರೀತಿಸುವ ಜವಾ ಬ್ದಾರಿಯೂ ಇರಬೇಕು? ಆದ್ದರಿಂದ ನೀನು ಯಾವಾಗ ಯಾವ ವಸ್ತುಗಳ ಮೇಲೆ ಅಥವಾ ವ್ಯಕ್ತಿಗಳ ಮೇಲೆ ಕೋಪ ಮಾಡಿಕೊಳ್ಳುವೆಯೋ ಅವರಿಗೆ ಕ್ಷಮೆ ಕೇಳಲೇಬೇಕು.

ಇದನ್ನೂ ಓದಿ: Roopa Gururaj Column: ಉಡುಗೊರೆಗಳ ಹಿಂದಿರುವ ಚಿಕ್ಕ ಸೂಕ್ಷ್ಮ

ಆಗ ಮಾತ್ರ ನಿನ್ನ ಮತ್ತು ಅವುಗಳ ಬಾಂಧವ್ಯ ಗಟ್ಟಿಯಾಗಿರುತ್ತದೆ. ವ್ಯಕ್ತಿಗಳು ಅಥವಾ ವಸ್ತುಗಳ ಮೇಲೆ ಸಂಬಂಧಗಳು ಬರುವುದು ಮನಸ್ಸಿನಿಂದ. ಆದ್ದರಿಂದ ಅವುಗಳ ಮೇಲೆ ಸುಖಾ ಸುಮ್ಮನೆ ಕೋಪ ಮಾಡಿಕೊಂಡರೆ, ಅದಕ್ಕಾಗಿ ಕ್ಷಮೆ ಕೇಳಬೇಕು ಎಂದರು. ಇದೆಲ್ಲವನ್ನೂ ಕೇಳಿದ ವ್ಯಕ್ತಿಗೆ ತಾನು ಬಾಗಿಲು ತಟ್ಟಿದ ಶಬ್ದಕ್ಕಿಂತಲೂ ತನ್ನೊಳಗಿನ ಅಹಂಕಾರದ ಗದ್ದಲ ಹೆಚ್ಚು ಶಬ್ದ ಮಾಡಿದೆ ಎಂದರಿವಾಯಿತು.

ತಾನು ಶೂ ಬಿಸಾಕಿದಷ್ಟೆಲ್ಲಾ ಕೋಪ ತನ್ನೊಳಗೆ ಆಳವಾಗಿ ನಾಟಿಕೊಂಡಿರುವುದೂ ಗೊತ್ತಾಯಿತು. ಗುರುವಿನ ಮಾತುಗಳು ಕೋಪವನ್ನು ಕರಗಿಸಿದವು, ಮನಸ್ಸು ನಿರಾಳವಾಯಿತು. ಅವನು ಮೆಲ್ಲಗೆ ಗುರುಗಳ ಮುಂದೆ ತಲೆಬಾಗಿ, ಹೊರಗೆ ಹೋಗಿ ಶೂಗಳನ್ನು ಎತ್ತಿಕೊಂಡು ಸಣ್ಣ ಮಗುವಿನಂತೆ ಬಾಗಿಲಿಗೆ ಕೈ ಜೋಡಿಸಿ ಕ್ಷಮೆ ಕೇಳಿದ.

ಮನಸ್ಸಿಗೆ ನೋವಾದಾಗ ವ್ಯಕ್ತಿ ಅಥವಾ ವಸ್ತುಗಳ ಮೇಲೆ ಕೋಪ ತೋರಿಸುವುದು ಸ್ವಭಾವ. ಕೆಲವರು ಊಟ ಮಾಡುತ್ತಿರುವ ತಟ್ಟೆ ತೆಗೆದು ದೂರಕ್ಕೆ ಬಿಸಾಕುತ್ತಾರೆ. ವ್ಯಕ್ತಿ ಎದುರಿಗೇ ಇದ್ದರೂ ಕೋಪ ಬಂದಾಗ ಗಟ್ಟಿಯಾಗಿ ಕೂಗುತ್ತಾರೆ. ಒಮ್ಮೆ ಯೋಚಿಸಿ ನೋಡಿ ಇದರಿಂದ ಅವರ ಕೋಪ ಅವರನ್ನು ತಿನ್ನುತ್ತದೆಯೇ ಹೊರತು ಆ ವಸ್ತುಗಳಿಗೆ ಆ ಕೋಪದಿಂದ ಪ್ರಯೋಜನವಿದೆಯೇ? ಅಷ್ಟೇ ಅಲ್ಲ ಕೋಪ ಮಾಡಿಕೊಂಡು ಮಾತನಾಡುವಾಗ ನಮಗೆ ಅರಿವಿಲ್ಲದಂತೆ ಮತ್ತೊಬ್ಬರ ಮನಸ್ಸನ್ನ ನೋಯಿಸಿಬಿಡುತ್ತೇವೆ.

ಕಟುವಾದ ಮಾತುಗಳು ಎಷ್ಟೋ ಮನಸುಗಳನ್ನು ಮುರಿದು ಹಾಕುತ್ತದೆ. ಆದರೆ ನಂತರ ನಿಜವಾಗಿ ಪಶ್ಚಾತಾಪ ಪಟ್ಟು ಹೋಗಿ ಕ್ಷಮೆ ಕೇಳುವ ದೊಡ್ಡ ಮನಸ್ಸು ನಮ್ಮಲ್ಲಿ ಇರುತ್ತದೆಯೇ? ಕೋಪ ಮಾಡಿಕೊಂಡವರು ಮತ್ತೊಬ್ಬರನ್ನು ನೋಯಿಸಿದವರು, ನಂತರ ಕ್ಷಮೆ ಕೇಳಲೂ ಮಾನಸಿಕವಾಗಿ ಸಿದ್ಧರಾಗಿರಬೇಕು.

ರೂಪಾ ಗುರುರಾಜ್

View all posts by this author