Ajakkala Girish Bhat Column: ಭಾರತದ ಚಿತ್ರಣ ಮತ್ತು ಬುಕರ್ ಪ್ರಶಸ್ತಿಯ ಸುತ್ತಮುತ್ತ...
‘ಪುನರಾವರ್ತನೆ’ ಎನ್ನುವ ಪದವನ್ನು ಗಮನಿಸಿ. ಅಂದರೆ ಜಗತ್ತಿನ ಇತರ ಅನೇಕ ದೇಶಗಳಲ್ಲಿ ದ್ವೇಷ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ಆಗುತ್ತದೆಯೆಂದಾದರೆ ಅದು ಭಾರತದಲ್ಲಿ ಆಗುವುದರ ‘ಪುನರಾವರ್ತನೆ’! ಒಟ್ಟಿನಲ್ಲಿ, ಭಾರತದಲ್ಲಿ ಕಾಣುವ ದುಷ್ಟತನವನ್ನು ನೋಡಿ ಇತರ ದೇಶಗಳು ಕಲಿಯುವುದು ಅಂತಾಯಿತು!

-

ವಿಶ್ಲೇಷಣೆ
ಅಜಕ್ಕಳ ಗಿರೀಶ ಭಟ್
ಭಾಷಾಂತರ ಮಾಡಿ ಕನ್ನಡದಲ್ಲಿ ಹೇಳಿದರೆ ಮೂಲದ ಅರ್ಥ ಸರಿಯಾಗಿ ವ್ಯಕ್ತವಾಗದೆ ಹೋಗಬಹುದು ಎಂಬ ಕಾರಣದಿಂದ ಇಂಗ್ಲಿಷ್ ಮೂಲವನ್ನೇ ಇಲ್ಲಿ ಕೊಡುತ್ತಿರುವೆ. “ Both (Hassan and Madikeri) are compact in size, and are replete with the distinct socio-linguistic features and rightward political leanings that characterize small town India''… ....""Nonetheless in today’s India, where a decade of far-right politics has descended dangerously into Hindutva led majoritarianism, hatred and severe persecution of minorities – iterations of such violence are found in many other countries of the world too, lest we forget - it is essential to note the milieu that she lives in and works out of.” - from "Translator’s Note’, Heart Lamp ಈ ಮೇಲೆ ಉದ್ಧರಿಸಲಾದುದರ ಪೈಕಿ ಎರಡನೆಯ ಭಾಗದಲ್ಲಿ ಏನು ಹೇಳಲಾಗಿದೆ? ಪದಗಳ ಬಳಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು: ಅಲ್ಲಿ, ‘ಕಳೆದೊಂದು ದಶಕದ ಭಾರತದಲ್ಲಿ, ಅಲ್ಪಸಂಖ್ಯಾತರಿಗೆ ತೀವ್ರವಾದ ಕಿರುಕುಳ ಕೊಡಲಾಗುತ್ತಿದೆ’ ಎಂದಷ್ಟೇ ಹೇಳಿಲ್ಲ. ಬದಲಾಗಿ ‘ಇಂಥ ದ್ವೇಷ ಮತ್ತು ಕಿರುಕುಳ/ಹಿಂಸೆಯ ಪುನರಾವರ್ತನೆಗಳು ಜಗತ್ತಿನ ಬೇರೆ ದೇಶಗಳಲ್ಲೂ ಕಂಡುಬರುತ್ತಿವೆ...’ ಎಂದೂ ಹೇಳಲಾಗಿದೆ.
‘ಪುನರಾವರ್ತನೆ’ ಎನ್ನುವ ಪದವನ್ನು ಗಮನಿಸಿ. ಅಂದರೆ ಜಗತ್ತಿನ ಇತರ ಅನೇಕ ದೇಶಗಳಲ್ಲಿ ದ್ವೇಷ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ಆಗುತ್ತದೆಯೆಂದಾದರೆ ಅದು ಭಾರತದಲ್ಲಿ ಆಗುವುದರ ‘ಪುನರಾವರ್ತನೆ’! ಒಟ್ಟಿನಲ್ಲಿ, ಭಾರತದಲ್ಲಿ ಕಾಣುವ ದುಷ್ಟತನವನ್ನು ನೋಡಿ ಇತರ ದೇಶಗಳು ಕಲಿಯುವುದು ಅಂತಾಯಿತು!
ಇನ್ನು, ಇಲ್ಲಿ ಉದ್ಧರಿಸಿದ ಮೊದಲ ಭಾಗ ಎಷ್ಟು ದೊಡ್ಡ ಸುಳ್ಳು ಎಂದು ಬೇರೆ ಹೇಳಬೇಕಿಲ್ಲ. ಭಾರತದ ರಾಜಕಾರಣದ ಕಿಂಚಿತ್ ಪರಿಚಯ ಇರುವವರಿಗೆ ಕೂಡ ಬಲಪಂಥೀಯ ರಾಜಕಾರಣ ದತ್ತ ವಾಲುವುದು ಈ ದೇಶದಲ್ಲಿ ಸಣ್ಣ ಪಟ್ಟಣ/ನಗರಗಳ ಒಂದು ಗುಣಲಕ್ಷಣ ಏನಲ್ಲ ಎಂಬುದು ಗೊತ್ತಾದೀತು. ಅಷ್ಟಕ್ಕೂ ಬಲಪಂಥೀಯ ಎಂದರೆ ಇವರ ವ್ಯಾಖ್ಯೆ ಏನು? ಭಾರತದಲ್ಲಿ ಅರ್ಥದ ಹಂಗೇ ಇಲ್ಲದೆ ಬಳಸಲಾಗುವ ಪದ ಎಂದರೆ ಬಲಪಂಥ ಅಥವಾ ಬಲಪಂಥೀಯ ಎಂಬುದು!
ಇದನ್ನೂ ಓದಿ: Ajakkala Girish Bhat Column: ಭೈರಪ್ಪ ಅವರ ಸಾಹಿತ್ಯವೂ, ವ್ಯಕ್ತಿತ್ವವೂ
ಎಡವಲ್ಲದ್ದು ಮತ್ತು ಎಡವನ್ನು ಒಪ್ಪದಿರುವುದನ್ನೆಲ್ಲ ಬಲದ ಬದಿಯಲ್ಲಿ ಮಾತ್ರ ಕಾಣುವ ಅರೆಕುರುಡು ದೃಷ್ಟಿ ಇದು. ನಮ್ಮ ಎಡದಲ್ಲಿ ಇಲ್ಲದ್ದು ಬೇರೆ ಇನ್ನೂ ಅನೇಕ ದಿಕ್ಕುಗಳಲ್ಲಿ ಅಥವಾ ಕೋನಗಳಲ್ಲಿ ಇರಬಹುದು. ಹಿಂದೆ ಇದ್ದುದು ಹೇಗೂ ಕಾಣುವುದಿಲ್ಲ; ಕಣ್ಣೆದುರು ಇರುವುದನ್ನು ಕಂಡರೂ ಕಾಣದಂತಿರಬೇಕು, ಕಂಡರೂ ಹೇಳದಂತಿರಬೇಕು ಎಂಬ ದೃಷ್ಟಿ- ಧೋರಣೆ; ಮತ್ತೆ ಉಳಿಯುವುದು ಬಲಬದಿ ಒಂದೇ ಅಲ್ಲವೆ?! ಹಾಗಾಗಿ ಇವರ ದೃಷ್ಟಿಗೆ ಎಡವಲ್ಲದ್ದು ಎಲ್ಲವೂ ಬಲವೇ. ಅದು ಹಾಗಿರಲಿ.
***
ಮೇಲೆ ಉದ್ಧರಿಸಿದ ಎರಡೂ ಭಾಗಗಳು ಸತ್ಯವನ್ನು ಹೇಳುತ್ತಿಲ್ಲ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಹಾಗಿದ್ದರೂ ಇಂಥ ವಾಕ್ಯಗಳು ಈ ಅನುವಾದಕರ ಟಿಪ್ಪಣಿಯಲ್ಲಿ ಯಾಕೆ ಬಂದವು? ಅಂತಾ ರಾಷ್ಟ್ರೀಯ ರಾಜಕಾರಣದ ಭಾಗವಾಗಿ ಭಾಷೆ, ಸಾಹಿತ್ಯ, ಆಚರಣೆ, ನಂಬಿಕೆಗಳಂಥ ಸಾಂಸ್ಕೃತಿಕ ದ್ರವ್ಯಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಸ್ವಲ್ಪ ಅರ್ಥವಾದರೆ ಅನುವಾದಕರ ಟಿಪ್ಪಣಿಯಲ್ಲಿ ಇಂಥ ವಾಕ್ಯಗಳು ಯಾಕೆ ನುಸುಳಿಕೊಂಡವು ಎಂಬುದು ಕೂಡ ಅರ್ಥವಾಗುತ್ತದೆ.
ಯುರೋಪಿನ ಪ್ರಕಾಶಕರು ಪ್ರಕಟಿಸುವ ಮತ್ತು ಇಂಗ್ಲಿಷಿನಲ್ಲಿರುವ ಈ ‘ಅನುವಾದಕರ ಟಿಪ್ಪಣಿ’ ಯನ್ನು ಓದುವವರು ಯಾರು? ಓದುವವರಲ್ಲಿ ಬಹುದೊಡ್ಡ ಪ್ರಮಾಣದಲ್ಲಿರುವವರು ವಿದೇಶಿ ಓದುಗರು; ಅದು ಬಿಟ್ಟರೆ ಭಾರತದ ದೊಡ್ಡ ನಗರಗಳ ‘ಇಲೈಟ್’ ಎನ್ನಬಹುದಾದ ವರ್ಗದವರು. ಅದು ಹೊರತು ಈ ಸಣ್ಣಪುಟ್ಟ ನಗರಗಳಲ್ಲಿ ಬದುಕುವ ಮತ್ತು ಅಲ್ಲಿಯ ವಾಸ್ತವ ವನ್ನು ತಿಳಿದವರ ಪೈಕಿ ಓದುವವರು ತೀರ ಕಡಿಮೆಯೇ.

ಹೀಗಾಗಿ ನಾವು ಊಹಿಸಬಹುದಾದಂತೆ, ಈ ವಾಕ್ಯಗಳ ಮುಖ್ಯ ಉದ್ದೇಶವೇನೆಂದರೆ, ಈ ದೇಶದಲ್ಲಿ ಅಲ್ಪಸಂಖ್ಯಾತರು ಎಷ್ಟು ಅಪಾಯಕರ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅಂತಾರಾಷ್ಟ್ರೀಯ ಓದುಗರಿಗೆ ಮತ್ತು ವಿಮರ್ಶಕರಿಗೆ ಮನದಟ್ಟು ಮಾಡುವುದು!
ದೇಶದ ಎಲ್ಲ ಸಣ್ಣ ಪುಟ್ಟ ನಗರಗಳ ಸಾಮಾನ್ಯ ಲಕ್ಷಣ ಇಂಥದೇ- ಅಂದರೆ ಅವೆಲ್ಲ ಅಪಾಯಕಾರಿ ಬಲಪಂಥೀಯ ರಾಜಕಾರಣದ ಕಡೆಗೆ ವಾಲಿರುವಂಥವು ಎಂದು ತಿಳಿದುಕೊಂಡವರಿಗೆ ಈ ಭಾರತ ದೇಶ ಒಂದು ಭಯಂಕರ ಸ್ಥಿತಿ ಯಲ್ಲಿದೆ ಎನಿಸಬಹುದು. ಅಷ್ಟೇ ಅಲ್ಲ; ಇಲ್ಲಿ ಕಳೆದೊಂದು ದಶಕ ದಿಂದ ನಡೆಯುತ್ತಿರುವ ‘ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ’ವು ಬೇರೆ ದೇಶಗಳಲ್ಲಿ ಪುನರಾವರ್ತನೆಯಾಗುತ್ತದ್ದಾದುದರಿಂದ ಜಗತ್ತಿನ ಇತರ ದೇಶಗಳು ಸುಸ್ಥಿತಿಯಲ್ಲಿ ಇರಬೇಕಾದರೆ ಭಾರತದ ಕುರಿತಾದ ಈ ಎಚ್ಚರ ಇಡೀ ಜಗತ್ತಿಗೆ ಇರಬೇಕಾದುದು ಎಂದು ಅಂಥ ‘ಪರಕೀಯ’ ಓದುಗರಿಗೆ ಮನವರಿಕೆಯಾಗಬೇಕಲ್ಲ? ‘ಇಂಥ ಸತ್ಯವನ್ನು ಹೇಳಿದವರಿಗೆ ಸೂಕ್ತ ಮನ್ನಣೆಯನ್ನೂ ಬಹುಮಾನವನ್ನೂ ಕೊಡಬೇಕಾದುದೇ ನ್ಯಾಯ’ ಎಂಬ ಭಾವವು ಈ ‘ಅನುವಾದಕರ ಟಿಪ್ಪಣಿ’ ಯನ್ನು ಓದಿದವರಿಗೆಲ್ಲ ಬಂದರೂ ಆಶ್ಚರ್ಯವಿಲ್ಲ!
***
ಇನ್ನೊಂದು ಅಂಶವನ್ನೂ ಗಮನಿಸಿ: ಕನ್ನಡದಲ್ಲಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಯಲ್ಲಿರುವ ಕತೆಗಳ ಬಗೆಗೆ ಬಂದ ಅಥವಾ ಬರಬಹುದಾದ ಯಾವುದೇ ಸುದೀರ್ಘ ವಿಮರ್ಶಾ ಲೇಖನವಿರಲಿ, ಸಣ್ಣ ಪುಸ್ತಕ ಸಮೀಕ್ಷೆಯಿರಲಿ, ಅದರಲ್ಲಿ ‘ಇವು ಮುಸ್ಲಿಂ ಜಗತ್ತಿನ/ಸಮುದಾಯದ ಕುರಿತ ಕತೆಗಳಾಗಿವೆ’ ಎಂಬರ್ಥದ ಒಂದು ಸಾಲಾದರೂ ಇಲ್ಲದಿರುವುದನ್ನು ಊಹಿಸಲು ಸಾಧ್ಯವೇ? ಹಾಗೆ ನೋಡಿದರೆ ಯಾವ ವ್ಯಕ್ತಿಗೂ ತನ್ನದಲ್ಲದ ಸಮುದಾಯಗಳ ಜತೆಗಿನ ಸಾಮಾಜಿಕ ಬದುಕು ಇಲ್ಲದಿರಲು ಸಾಧ್ಯವಿಲ್ಲವಾದರೂ ಈ ಸಂಕಲನದ ಕತೆಗಳಲ್ಲಿ ಮುಸ್ಲಿಮೇತರ ಪಾತ್ರವನ್ನು ಭೂತ ಗನ್ನಡಿ ಹಿಡಿದು ಹುಡುಕಬೇಕು.
ಅಷ್ಟರಮಟ್ಟಿಗೆ ಅವು ಮುಸ್ಲಿಂ ಸಮುದಾಯದೊಳಗಿನ ಕತೆಗಳು. ಹೀಗಿದ್ದರೂ, ಅನುವಾದಕರ ಟಿಪ್ಪಣಿ ಏನು ಹೇಳುತ್ತದೆ ನೋಡಿ: ...“ It would be disservice to reduce Banu’s work to her religious identity, for her stories transcend the confines of a faith and its cultural traditions ..." ಭಾರತದ ಅಥವಾ ಜಗತ್ತಿನ ಮಹಿಳೆಯರ ಕಷ್ಟಗಳನ್ನು ಹೇಳುತ್ತವೆ ಎನ್ನುವ ಮೂಲಕ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಸಮಸ್ಯೆಗೆ ಒಳಗಿನ ಕಾರಣಗಳು ಮುಖ್ಯವಲ್ಲ, ಹೊರಗಿನ ಕಾರಣಗಳೇ ಮುಖ್ಯ ಎಂದು ಈ ಟಿಪ್ಪಣಿ ಸೂಚಿಸುತ್ತದೆ.
ಅಂತೆಯೇ, ಈ ಕತೆಗಳು ಕೇವಲ ಮುಸ್ಲಿಂ ಮಹಿಳೆಯರ ಕಷ್ಟವನ್ನಲ್ಲ, ಬದಲಾಗಿ ಒಟ್ಟಾರೆಯಾಗಿ ಮಹಿಳೆಯರ ಕಷ್ಟಗಳನ್ನು, ಇಕ್ಕಟ್ಟು ಬಿಕ್ಕಟ್ಟುಗಳನ್ನು ಹೇಳುತ್ತವೆಯೆಂದಿಟ್ಟುಕೊಳ್ಳುವ. ಆವಾಗ, ಮಹಿಳೆಯರ ಸಬಲೀಕರಣಕ್ಕಾಗಿ ಈ ದೇಶದಲ್ಲಿ ಕಳೆದೊಂದು ದಶಕಗಳಲ್ಲಿ ಕಂಡುಬಂದಿರುವ ಹತ್ತಾರು ಯಶಸ್ವಿ ಯೋಜನೆಗಳಾದರೂ ನೆನಪಾಗಬೇಕಿತ್ತು.
ಭಾರತೀಯ ಮಹಿಳೆಯರ ಬದುಕಿನ ಮೇಲೆ ಧನಾತ್ಮಕ ಪರಿಣಾಮ ಬೀರಿದ ಮತ್ತು ಜಾತಿ-ಮತ ಭೇದವಿಲ್ಲದೆ ಮಹಿಳೆಯರಿಗೆ ಘನತೆಯನ್ನು ತಂದುಕೊಟ್ಟ ಮತ್ತು ಕಳೆದ ಒಂದು ದಶಕದಲ್ಲಿ ಒದಗಿಸಲಾದ ಹತ್ತು ಕೋಟಿಗೂ ಮಿಗಿಲಾದ ಉಜ್ವಲ ಗ್ಯಾಸ್ ಸಂಪರ್ಕಗಳು, ಹನ್ನೊಂದು ಕೋಟಿಗೂ ಮಿಗಿಲಾದ ಶೌಚಾಲಯಗಳು, ಹನ್ನೆರಡು ಕೋಟಿಗಿಂತಲೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇವೆಲ್ಲ ಗಮನಕ್ಕೆ ಬರದೇ ಇರುವುದು ಮತ್ತೊಂದು ವಿಸಂಗತಿ.
***
ಅಂತಾರಾಷ್ಟ್ರೀಯ ಬುಕರ್ ಬಹುಮಾನ ಘೋಷಣೆಯಾದ ಬಳಿಕ ‘ದ ಗಾರ್ಡಿಯನ್’ ಪತ್ರಿಕೆ ನೀಡಿದ ಶೀರ್ಷಿಕೆ ಹೀಗೆ: ‘ Radical translation’ of Heart Lamp by Banu Mushtaq wins International Booker prize. ಇದು ಶೀರ್ಷಿಕೆಯಾದರೆ, ಮುಂದೆ ಹೀಗೆ ಹೇಳಿದೆ: “ Translator Deepa Bhasthi’s pick of 12 of Mushtaq’s ‘life-affirming’ tales about women’s lives in southern India becomes the first short story collection to win the £50,000 award“.
ಮುಂದುವರಿದ ವರದಿ ಹೇಳುತ್ತದೆ: “ Heart Lamp’s 12 tales chronicle the lives of women in patriarchal communities in southern India. ‘
ಎದೆಯ ಹಣತೆ’ ಕೃತಿಯನ್ನು ಇಂಗ್ಲಿಷ್ ಅನುವಾದಕ್ಕೆ ಮತ್ತು ಮೂಲ ಕನ್ನಡ ಕೃತಿಗೆ ಜಂಟಿಯಾಗಿ 2025ರ ಅಂತಾರಾಷ್ಟ್ರೀಯ ಬುಕರ್ ಬಹುಮಾನವನ್ನು ನೀಡಿದ ತೀರ್ಪುಗಾರರ ಪೂರ್ತಿ ಟಿಪ್ಪಣಿ ನನಗೆ ಸಿಗಲಿಲ್ಲ. ಆದರೆ ತೀರ್ಪುಗಾರರ ಸಮಿತಿಯ ಮುಖ್ಯಸ್ಥರಾಗಿದ್ದ ಲೇಖಕ ಮ್ಯಾಕ್ಸ್ ಪೋರ್ಟರ್ ಅವರ ಅಭಿಪ್ರಾಯದ ಬಗೆಗೆ ‘ದ ಗಾರ್ಡಿಯನ್’ ಹೀಗೆ ವರದಿ ಮಾಡಿದೆ:
Though Porter said they were looking for the “best book” above all else, he called Heart Lamp a “really special book in terms of its politics”. The stories""contain the feminism for which [Mushtaq] is known. And they contain extraordinary accounts of patriarchal systems and resistance,” he added. “But they aren’t activist stories. First and foremost they’re beautiful accounts of everyday life and particularly the lives of women.''
ಇನ್ನೊಂದು ವರದಿಯಲ್ಲಿ ಮ್ಯಾಕ್ಸ್ ಪೋರ್ಟರ್ ಅವರ ಅಭಿಪ್ರಾಯ ಹೀಗೆ ದಾಖಲಾಗಿದೆ. “ Heart Lamp is something genuinely new for English readers,'' wrote Max Porter, chair of the judges, in a statement announcing the win. "It speaks of women's lives, reproduc tive rights, faith, caste, power and oppression ."
ನಂಬಿಕೆ, ಅಧಿಕಾರ ಮತ್ತು ಶೋಷಣೆ-ದಬ್ಬಾಳಿಕೆಗಳ ನಡುವೆ ಜಾತಿಯೂ ಪೋರ್ಟರ್ ಅವರ ಅಭಿಪ್ರಾಯದೊಳಗೆ ನುಸುಳಿಕೊಂಡದ್ದನ್ನು ಗಮನಿಸಿ. ಒಟ್ಟಿನಲ್ಲಿ, ಇಂಗ್ಲಿಷ್ ಜಗತ್ತಿನ ದೇಶಗಳಲ್ಲಿ ಬಂದ ವಿಮರ್ಶೆಗಳಲ್ಲಿ ಬಾನು ಅವರ ಕತೆಗಳು ಸಮುದಾಯ ನಿರ್ದಿಷ್ಟತೆಯನ್ನು ಕಳೆದುಕೊಂಡು ದಕ್ಷಿಣ ಭಾರತದಲ್ಲಿ ಮಹಿಳೆಯರ ಮೇಲೆ ಪುರುಷ ವ್ಯವಸ್ಥೆಯು ಹೊಂದಿರುವ ನೇರ ಅಥವಾ ಪರೋಕ್ಷ ಹಿಡಿತ ಮತ್ತು ದೌರ್ಜನ್ಯದ ಚಿತ್ರಣವೆಂಬಂತೆ ಬಿಂಬಿತವಾದುದರಲ್ಲಿ ಆಶ್ಚರ್ಯವಿಲ್ಲ.
ಇಂಗ್ಲಿಷಿನಲ್ಲಿದ್ದ ಒಂದು ವಿಮರ್ಶೆ/ಸಮೀಕ್ಷೆಯಂತೂ ಆ ಕತೆಗಳಲ್ಲಿರುವ ಪಾತ್ರಗಳು ಮಾತ್ರ ಪೇಟ್ರಿಯಾರ್ಖಿಯಿಂದ ಕಷ್ಟಪಡುತ್ತಿರುವುದಲ್ಲ; ಇಡೀ ದಕ್ಷಿಣ ಭಾರತವೇ ಅಂಥ ಪ್ರಗತಿವಿರೋಽ ಪೇಟ್ರಿಯಾರ್ಖಿಯಲ್ಲಿ ನರಳುತ್ತಿದೆ ಅಂತ ಭಾಸವಾಗುವಂತೆ ಇತ್ತು!
ಹೀಗಾಗಿಯೇ ಈ ಸಂಕಲನದ ಬಗೆಗೆ, ‘ celebration of marginalized voices’ ಮುಂತಾದ ಅರ್ಥ ಗಳುಳ್ಳ ಸಾಲುಗಳು ಕಾಣುತ್ತವೆ. ಹಾಗಿದ್ದರೂ ಪಶ್ಚಿಮದಲ್ಲಿ ಬಂದ ಕೆಲವು ವಿಮರ್ಶೆ/ ಸಮೀಕ್ಷೆಗಳು ಈ ಕತೆಗಳಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿಯಿದೆ ಎಂದು ಸರಿಯಾಗಿಯೇ ಗುರುತಿಸಿದ್ದೂ ಉಂಟು.
ಅಂತೆಯೇ, ಭಾರತದ ‘ದ ಹಿಂದೂ’ವಿನಂಥ ಪತ್ರಿಕೆಗಳಲ್ಲಿ ಹಾಗೂ ಇತರ ಕೆಲವು ಕಡೆಗಳಲ್ಲಿ ಬಂದ ಪುಸ್ತಕ ಸಮೀಕ್ಷೆಗಳು ಮುಸ್ಲಿಂ ಮಹಿಳೆಯರ ಕಷ್ಟಗಳನ್ನು ಹೇಳುವ ಕತೆಗಳೆಂದೇ ಗುರುತಿಸುತ್ತವೆ ಎನ್ನುವುದನ್ನೂ ಗಮನಿಸಬೇಕು. ಏನೇ ಇದ್ದರೂ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ‘ಅನುವಾದಕರ ಟಿಪ್ಪಣಿ’ಯ ಮಹತ್ತ್ವ ಗೊತ್ತಾದೀತು. ಅಷ್ಟೇ ಅಲ್ಲ; ಕನ್ನಡವು ಈ ಬಾರಿ ಅಂತಾ ರಾಷ್ಟ್ರೀಯ ಬುಕರ್ ಬಹುಮಾನವನ್ನು ಪಡೆಯುವಲ್ಲಿ ಅನುವಾದಕರ ಶ್ರಮ ಎಷ್ಟು ದೊಡ್ಡದು ಅಂತಲೂ ಗೊತ್ತಾದೀತು.
***
ಬಹುಮಾನವು ಘೋಷಣೆಯಾದ ಬಳಿಕ ಮುದ್ರಿತವಾದ ‘ಎದೆಯ ಹಣತೆ’ ಕನ್ನಡ ಸಂಕಲನದ ಮುಖಪುಟದಲ್ಲಿ ‘2025ರ ಬುಕರ್ ಪ್ರಶಸ್ತಿ’ ಪಡೆದ ಕತೆಗಳು ಎನ್ನುವ ಮಾಹಿತಿಯೂ ಹಿಂಬದಿ ರಕ್ಷಾಪುಟದಲ್ಲಿ ಬಾನು ಮುಷ್ತಾಕ್ ಅವರು ಬಹುಮಾನವನ್ನು ಹಿಡಿದಿರುವ ಪಟವೂ ಇದೆ. ಆದರೆ ಅನುವಾದ ಮಾಡಿ ಬುಕರ್ ಬಹುಮಾನವನ್ನೂ ಹಂಚಿಕೊಂಡ ದೀಪಾ ಭಾಸ್ತಿಯವರ ಹೆಸರು ಪುಸ್ತಕದಲ್ಲಾಗಲೀ ‘ಲೇಖಕಿಯ ಮಾತು’ವಿನಲ್ಲಾಗಲೀ ಇಲ್ಲ! ಇದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ....
‘ಚಾಮುಂಡೇಶ್ವರಿಯ ಹರಕೆ ತೀರಿಸಲು ತಾಯಿ ಚಾಮುಂಡೇಶ್ವರಿಯೇ ಕರೆಸಿಕೊಂಡಿದ್ದಾಳೆ’ ಎಂದು ಹೇಳಿ, ‘ದಸರಾ ನಮ್ಮ ಸಮಗ್ರ ಸಂಸ್ಕೃತಿಯ ಪ್ರತೀಕ; ಎಲ್ಲರೂ ಒಳಗೊಂಡು ಆಚರಿಸುವಂಥ ಒಂದು ಸಂಸೃತಿಯ ಉತ್ಸವ’ ಎಂದು ಹೇಳಿ, ‘ಈ ನೆಲದ ಸಂಸ್ಕೃತಿ ನನಗೆ ಕಲಿಸಿದ ಪಾಠ ಅಂದರೆ, ಎಲ್ಲರನ್ನೂ ಒಳಗೊಳ್ಳುವ ಮನಸ್ಸು, ಎಲ್ಲರ ಬದುಕನ್ನು ಗೌರವಿಸುವ ಹೃದಯ..’ ಎಂದು ಹೇಳಿ, ಹಿಂದೂಗಳು ಪ್ರೀತಿಯಿಂದ ಕೊಟ್ಟ ಬಾಗಿನವನ್ನು ಸ್ವೀಕರಿಸಿ ಸಂಭ್ರಮಿಸಿದವರು ಬಾನು ಮುಷ್ತಾಕ್ ಅವರು.
ಹಾಗೆ ಸಂಭ್ರಮಿಸಿದ ಅವರು ‘ಸರ್ವಜನಾಂಗದ ಶಾಂತಿಯ ತೋಟ’ವಾಗಿರುವ ಈ ಭಾರತ ದೇಶದ ಕುರಿತು ಕೆಟ್ಟ ಚಿತ್ರಣ ಕೊಟ್ಟವರ ಬಗೆಗೆ ಮತ್ತು ತಮ್ಮ ಸಮುದಾಯದ ಎಷ್ಟೋ ಮಂದಿಯ ಕೆಂಗಣ್ಣಿಗೆ ಗುರಿಯಾಗಿಯೂ ಹೆದರದೆ, ‘ಮೂಲಭೂತವಾದಿ’ಗಳ ವಿರುದ್ಧವಾಗಿ ಬರೆದ ತಮ್ಮ ಕೃತಿಯನ್ನು ಆ ‘ಬಂಡಾಯ’ದ ನಿರ್ದಿಷ್ಟ ಸಂದರ್ಭದಿಂದ ಹೊರಗೆ ತೆಗೆದು, ಅಪವ್ಯಾಖ್ಯಾನಿಸಿ, ‘ಅನುವಾದಕರ ಟಿಪ್ಪಣಿ’ಯನ್ನು ಅಂತಾರಾಷ್ಟ್ರೀಯ ಓದುಗರಿಗಾಗಿ ಬರೆದವರ ಬಗೆಗೆ ತುಸು ಮುನಿಸಿಕೊಂಡು, ತಮ್ಮ ಕನ್ನಡ ಸಂಕಲನದಲ್ಲಿ ಅವರ ಹೆಸರು ಹಾಕದೆ ಬಿಟ್ಟರೆಂದರೆ ಅದರಲ್ಲಿ ಅಚ್ಚರಿಯೇನಿಲ್ಲ!
(ಲೇಖಕರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು)