Ramalinga Reddy Column: ದೇಗುಲಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಕಟಿಬದ್ಧ
ಅರ್ಚಕ ವೃತ್ತಿಯ ಅಭ್ಯಾಸ ನಡೆಸಿರುವ ಇನ್ನುಳಿದ ಸುಮಾರು ಎರಡೂವರೆ ಸಾವಿರ ಅಭ್ಯರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಮಾಣಪತ್ರ ಪಡೆಯಲು ಅಭ್ಯರ್ಥಿಗಳು ಶೈವಾಗಮ, ವೈಖಾನಸಾಗಮ, ಪಾಂಚರಾತ್ರಾಗಮ, ತಂತ್ರಸಾರಾಗಮ, ವಾತುಲಾಗಮ, ವೀರಶೈವಾಗಮ ಹಾಗೂ ಜೈನಾಗಮಗಳ ವಿಷಯದಲ್ಲಿ ಐದು ವರ್ಷಗಳ ಕಾಲ ಅಭ್ಯಾಸ ಮಾಡಿ, ಪ್ರವರ್ಗ ಪ್ರವೀಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.


ದೇವಮೂಲೆ
ರಾಮಲಿಂಗಾರೆಡ್ಡಿ
ಸರಕಾರಿ ಕೆಲಸ ದೇವರ ಕೆಲಸ’ ಎನ್ನುವ ಮಾತಿದೆ. ಆದರೆ ದೇವರ ಅಥವಾ ದೇವಾಲಯದ ಕೆಲಸವನ್ನು ಮಾಡುವ ಮುಜರಾಯಿ ಇಲಾಖೆಯ ವಿಷಯದಲ್ಲಿ ಮಾತ್ರ ಹಲವು ವರ್ಷಗಳಿಂದ ನಿರ್ಲಕ್ಷ್ಯ ತೋರುತ್ತಲೇ ಬರಲಾಗುತ್ತಿದೆ. ಅದರಲ್ಲಿಯೂ, ಹಿಂದುತ್ವವನ್ನು ಬ್ರ್ಯಾಂಡ್ ಮಾಡಿಕೊಂಡಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಮುಜರಾಯಿ ಇಲಾಖೆಯಲ್ಲಿ ನನೆಗುದಿಗೆ ಬಿದ್ದಿರುವ ಕೆಲಸಗಳ ಪಟ್ಟಿಯನ್ನು ನೋಡುತ್ತಾ ಹೋದರೆ, ಅದು ಹನುಮನ ಬಾಲವಾಗುವುದರಲ್ಲಿ ಅನುಮಾನವಿಲ್ಲ.
ಇದೀಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಬಹುವರ್ಷಗಳಿಂದ ಮರೆತಿದ್ದ ‘ಆಗಮ ಘಟಿಕೋತ್ಸವ’ ವನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ನಾನು ವಹಿಸಿಕೊಂಡ ತರುವಾಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಡಿ ಬರುವ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ನಡೆಸಿಕೊಂಡು ಬಂದಿರುವ ಪ್ರವರ್ಗ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಪದವಿ ಪತ್ರ ವಿತರಿಸುವ ಘಟಿಕೋತ್ಸವ ಕಾರ್ಯಕ್ರಮವನ್ನೇ ನಡೆಸದಿರುವುದು ನನ್ನ ಗಮನಕ್ಕೆ ಬಂತು.
ಅದರಲ್ಲಿಯೂ ಕಡೆಯ ಬಾರಿಗೆ ಆಗಮ ಘಟಿಕೋತ್ಸವ ನಡೆದಿರುವುದು 2006ರಲ್ಲಿ ಎಂದರೆ ಅದು ನಿಜಕ್ಕೂ ಆಘಾತಕಾರಿ ಸಂಗತಿ. ಆದ್ದರಿಂದ 2006ರಿಂದ ಬಾಕಿಯಿರುವ ಅಭ್ಯರ್ಥಿಗಳಿಗೆ (800 ಅರ್ಚಕರಿಗೆ), ಕೆಲ ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಿಸಲಾಗಿತ್ತು.
ಇದನ್ನೂ ಓದಿ: Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ
ಆದರೀಗ, ಅರ್ಚಕ ವೃತ್ತಿಯ ಅಭ್ಯಾಸ ನಡೆಸಿರುವ ಇನ್ನುಳಿದ ಸುಮಾರು ಎರಡೂವರೆ ಸಾವಿರ ಅಭ್ಯರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಮಾಣಪತ್ರ ಪಡೆಯಲು ಅಭ್ಯರ್ಥಿಗಳು ಶೈವಾಗಮ, ವೈಖಾನಸಾಗಮ, ಪಾಂಚರಾತ್ರಾಗಮ, ತಂತ್ರಸಾರಾಗಮ, ವಾತುಲಾಗಮ, ವೀರಶೈವಾಗಮ ಹಾಗೂ ಜೈನಾಗಮಗಳ ವಿಷಯದಲ್ಲಿ ಐದು ವರ್ಷಗಳ ಕಾಲ ಅಭ್ಯಾಸ ಮಾಡಿ, ಪ್ರವರ್ಗ ಪ್ರವೀಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಈ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವವರು, ಆರ್ಚಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅರ್ಹ ರಾಗಿರುತ್ತಾರೆ. ರಾಜ್ಯದಲ್ಲಿ ಏಳು ಆಗಮ ಶಿಕ್ಷಣವನ್ನು ನೀಡಲಾಗುತ್ತಿದ್ದು, ಅದರಲ್ಲಿ ಶಿವ ದೇವಾಲಯದ ಪೂಜಾ ವಿಧಿ-ವಿಧಾನಕ್ಕೆ ಶೈವಾಗಮ, ವೀರಶೈವಾಗಮ ಹಾಗೂ ವಾತುಲಾಗಮ ಎನ್ನುವ ತರಬೇತಿ ನೀಡಲಾಗುತ್ತದೆ.
ಇನ್ನು ವಿಷ್ಣು ಸಂಬಂಧಿತ ದೇವಾಲಯದಲ್ಲಿ ಪೂಜಾ ಕೈಂಕರ್ಯಕ್ಕೆ ಪಾಂಚರಾತ್ರಾಗಮ, ವೈಖಾನ ಸಾಗಮ ಹಾಗೂ ತಂತ್ರಸಾರಾಗಮ ತರಬೇತಿ ನೀಡಲಾಗುವುದು. ಇವುಗಳೊಂದಿಗೆ ಜೈನಾಗಮ ವಿಧಿ-ವಿಧಾನವನ್ನು ಅವರವರ ಧರ್ಮ-ಮತಕ್ಕನುಗುಣವಾಗಿ ಆಯಾ ಆಗಮದಲ್ಲಿ ಅಧ್ಯಯನ ಪೀಠದಲ್ಲಿ ನೀಡಲಾಗುತ್ತಿದೆ.
ಇಂಥ ಪ್ರಮುಖ ತರಬೇತಿಯನ್ನು ಪ್ರತಿವರ್ಷ ನಡೆಸಿಕೊಂಡು ಬರಬೇಕಿತ್ತು. ಆದರೆ ಕಳೆದ 18 ವರ್ಷ ಗಳಿಂದ ಈ ವಿಷಯದಲ್ಲಿ ಬಹುತೇಕ ಎಲ್ಲ ಸರಕಾರಗಳು ನಿರ್ಲಕ್ಷ್ಯ ವಹಿಸಿವೆ. ಅದರಲ್ಲಿಯೂ ಎರಡು ಅವಧಿಗೆ ಅಧಿಕಾರ ನಡೆಸಿದ್ದ ಬಿಜೆಪಿ ನಾಯಕರಿಗೆ ಮುಜರಾಯಿ ಇಲಾಖೆಯಲ್ಲಿ ಇಂಥ ಒಂದು ಅಂಗವಿದೆ ಎನ್ನುವುದೇ ಮರೆತುಹೋಗಿತ್ತು. ಹಿಂದುತ್ವದ ವಿಷಯದಲ್ಲಿ ರಾಜಕಾರಣ ಮಾಡುವ ನಾಯಕರು, ಶಾಸ್ತ್ರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಇಂಥ ವಿಷಯವನ್ನು ನಿರ್ಲಕ್ಷಿಸಿದ್ದೇಕೆ ಎನ್ನುವುದು ನನ್ನ ಮೂಲಪ್ರಶ್ನೆ.
ಹಾಗೆ ನೋಡಿದರೆ, ಕೇವಲ ಆಗಮ ಘಟಿಕೋತ್ಸವ ಅಷ್ಟೇ ಅಲ್ಲದೇ, ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಬಹುತೇಕ ದೇವಾಲಯಗಳ ಅಭಿವೃದ್ಧಿಗೆ ಯಾವುದೇ ಕ್ರಮವಹಿಸಿಲ್ಲ. ದೇವಾಲಯಗಳ ಅಭಿವೃದ್ಧಿ ಎಂದರೆ ಕೇವಲ ಅನುದಾನ ನೀಡುವುದಲ್ಲ. ಬದಲಿಗೆ ದೇವಾಲಯಗಳು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಅಥವಾ ಆಯಾ ವ್ಯಾಪ್ತಿಯಲ್ಲಿರುವ ದೇವಾಲಯಗಳು ಅಲ್ಲಿರುವ ಸಣ್ಣಸಣ್ಣ ದೇವಾಲಯಗಳ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ನೋಡಿಕೊಳ್ಳುವುದು. ಈ ಕಾರಣಕ್ಕಾಗಿಯೇ ನಾನು ಅಧಿಕಾರ ಸ್ವೀಕರಿಸಿದ ಬಳಿಕ ಮುಜರಾಯಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ, ‘ಎ’ ದರ್ಜೆ ದೇವಾಲಯಗಳ ಆದಾಯದ ಇಂತಿಷ್ಟು ಹಣವನ್ನು ಸ್ಥಳೀಯ ವಾಗಿರುವ ‘ಸಿ’ ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಮೀಸಲಿಡಬೇಕು ಎನ್ನುವ ಕಾನೂನು ತರಲು ವಿಧೇಯಕ ಮಂಡಿಸಿದ್ದೆ.
ಆದರೆ ಬಡ ದೇವಾಲಯಗಳ ಅಭಿವೃದ್ಧಿಯನ್ನೂ ವಿರೋಧಿಸಿದ್ದ ಬಿಜೆಪಿಗರು, ಕಾಯಿದೆಗೆ ರಾಜ್ಯಪಾಲರಿಂದ ಸಹಿಯಾಗದಂತೆ ಒತ್ತಡ ಹೇರಿದ್ದರು. ಒಂದು ವೇಳೆ ಈ ಕಾನೂನು ಜಾರಿಯಾ ಗಿದ್ದರೆ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಹಣವು ‘ಸಿ’ ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಸಿಗುತ್ತಿತ್ತು ಎನ್ನುವುದು ವಾಸ್ತವ.
ಇನ್ನು ನಮ್ಮ ಅವಧಿಯಲ್ಲಿ ದೇವಾಲಯಗಳ ಆಸ್ತಿ ದೇವಾಲಯದಲ್ಲಿಯೇ ಉಳಿಯುವಂತೆ ನೋಡಿ ಕೊಂಡಿದ್ದೇವೆ. ಮುಜರಾಯಿ ದೇವಾಲಯದ ಸುಪರ್ದಿಯಲ್ಲಿದ್ದ ಸಾವಿರಾರು ಎಕರೆ ಆಸ್ತಿಯು ಭೂ ಕಬಳಿಕೆದಾರರ ಪಾಲಾಗಿತ್ತು. ಆದರೆ ದಾಖಲೆಗಳನ್ನು ಪರಿಶೀಲಿಸಿ, ದೇವಾಲಯಗಳಿಗೆ ಮರಳಿ ಭೂಮಿ ಸಿಗುವಂಥ ಮಹತ್ವದ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ. ಈಗಾಗಲೇ ಒತ್ತುವರಿ ಯಾಗಿದ್ದ ಶೇ.70ಕ್ಕಿಂತ ಹೆಚ್ಚು ಭೂಮಿಯನ್ನು ದೇವಾಲಯಗಳ ಸ್ವಾಧೀನಕ್ಕೆ ವಾಪಸು ಪಡೆದುಕೊಂಡಿದ್ದೇವೆ.
ಒತ್ತುವರಿಯಾಗಿರುವ ಎಲ್ಲ ಭೂಮಿಯನ್ನು ಶೀಘ್ರದಲ್ಲಿಯೇ ಹಿಂಪಡೆಯುವ ಕೆಲಸವನ್ನು ಮಾಡುವ ವಿಶ್ವಾಸವಿದೆ. ಇದೇ ರೀತಿ, ದೇವಾಲಯಗಳಿಗೆ ಭೇಟಿ ನೀಡುವ ಹಿರಿಯ ನಾಗರಿಕರ ಅನುಕೂಲಕ್ಕಾಗಿ ವಿಶೇಷ ದರ್ಶನ, ಹಸುಳೆಗಳಿಗೆ ಹಾಲುಣಿಸಲು ಪ್ರತ್ಯೇಕ ಬೇಬಿ ಕೇರ್ ಕೊಠಡಿ ಸೇರಿದಂತೆ ಹಲವು ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಇನ್ನು ರಾಜ್ಯದ ಪ್ರಮುಖ ದೇವಾಲಯಗಳು ಎನಿಸಿರುವ ಹುಲಿಗೆಮ್ಮ ದೇವಾಲಯ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯ, ಘಾಟಿ ಸುಬ್ರಮಣ್ಯ ದೇವಾಲಯ ಹಾಗೂ ಯಲ್ಲಮ್ಮ ದೇವಿ ದೇವಾಲಯಗಳಿಗೆ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಗಿದೆ. ಈ ಎಲ್ಲ ಪ್ರಾಧಿಕಾರಗಳ ಮೂಲಕ, ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ಮಾಸ್ಟರ್ ಪ್ಲಾನ್‌ಗಳನ್ನು ರೂಪಿಸಲಾಗಿದೆ.
ಆಂಜನೇಯನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟಕ್ಕೆ 200 ಕೋಟಿ ರುಪಾಯಿಗಳನ್ನು ಮಂಜೂರು ಮಾಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಎಲ್ಲ ದೇವಾಲಯಗಳ ಅಭಿವೃದ್ಧಿಯ ಜತೆಜತೆಗೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಗಳಲ್ಲಿ ಒಂದಾಗಿರುವ ‘ಶಕ್ತಿ’ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ.
ಇತ್ತೀಚೆಗಷ್ಟೇ 500ನೇ ಕೋಟಿ ಟಿಕೆಟ್ ಅನ್ನು ವಿತರಿಸಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದಾಗಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗಮನಾರ್ಹ.
ದೇವಾಲಯಗಳ ಅಭಿವೃದ್ಧಿ ಒಂದು ಭಾಗವಾದರೆ, ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆಸುವ ಅರ್ಚಕರು ಹಾಗೂ ಅವರ ಕುಟುಂಬಕ್ಕೂ ಯಾವುದೇ ಸಮಸ್ಯೆಯಾಗದಂತೆ ನೋಡಿ ಕೊಳ್ಳುವುದು ಇಲಾಖೆಯ ಜವಾಬ್ದಾರಿಯಾಗಿತ್ತು. ಆದ್ದರಿಂದ ಮುಜರಾಯಿ ಇಲಾಖೆಯಲ್ಲಿ ಅರ್ಚಕರ ತಸ್ತಿಕ್ ಹಣವನ್ನು ಹೆಚ್ಚಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿತ್ತು. ಇದರೊಂದಿಗೆ ಅರ್ಚಕ ಸಮುದಾಯದ ಬಹುದಿನದ ಬೇಡಿಕೆಯಾಗಿದ್ದ, ಆರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಆರ್ಚಕರು ಮೃತಪಟ್ಟರೆ ಕುಟುಂಬಕ್ಕೆ ಎರಡು ಲಕ್ಷ ರುಪಾಯಿ ಸಹಾಯಧನ ನೀಡುವ ಕಾರ್ಯ ಆರಂಭವಾಗಿದ್ದೂ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ನಮ್ಮ ಪಕ್ಷ ಹಿಂದುತ್ವ ಎನ್ನುವುದನ್ನು ಕೇವಲ ಮತ ಬ್ಯಾಂಕ್ ವಿಷಯವಾಗಿ ನೋಡುತ್ತಿಲ್ಲ. ಹಿಂದುತ್ವದ ಪರ ಒಲವು ಎನ್ನುವುದು ಕೇವಲ ಮತಗಳಿಕೆಗೆ ಸೀಮಿತವಾಗದೇ, ಧರ್ಮದ ಉಳಿವಿಗಾಗಿರಬೇಕು. ಈ ಹಿಂದೆ ಅಧಿಕಾರದಲ್ಲಿದ್ದ ಸಮಯದಲ್ಲಿ ಬಿಜೆಪಿಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮುಜರಾಯಿ ಇಲಾಖೆ ಹಾಗೂ ದೇವಾಲಯಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
‘ಹಿಂದೂ ಪರ’ ಎನ್ನುವ ಬಿಜೆಪಿ ನಾಯಕರು, ಇನ್ನಾದರೂ ತಮ್ಮ ಮುಖವಾಡವನ್ನು ಕಳಚಿ ನಮ್ಮ ಸರಕಾರದ ಸಾಧನೆಯನ್ನು ನೋಡಲಿ.
(ಲೇಖಕರು, ಮುಜರಾಯಿ ಹಾಗೂ ಸಾರಿಗೆ ಸಚಿವರು)