ಪ್ರಸ್ತುತ
ಮಲ್ಲಪ್ಪ ಸಿ.ಖೊದ್ನಾಪೂರ
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರ್ಕಾರವನ್ನೇ ಪ್ರಜಾಪ್ರಭುತ್ವ ಎನ್ನಬಹುದು’ ಎಂದು ಅಬ್ರಹಾಂ ಲಿಂಕನ್ ಹೇಳಿದ್ದಾರೆ. ಪ್ರಜಾಪ್ರಭುತ್ವದ ತತ್ತ್ವಗಳು ಮತ್ತು ಮಹತ್ವವನ್ನು ಸಾರುವ ಸಲುವಾಗಿ ಸೆಪ್ಟೆಂಬರ್ 15ನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಎಂದು ಪರಿಗಣಿಸಲಾಗಿದೆ.
ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ನಿನ್ನೆ ಜಾಗತಿಕವಾಗಿ ಪ್ರಜಾಪ್ರಭುತ್ವ ದಿನಾಚರಣೆ ಮಾಡಲಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉತ್ತೇಜಿಸಲು ಮತ್ತು ಎತ್ತಿ ಹಿಡಿಯಲು, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು ಮತ್ತು ಗೌರವಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಮಾನವ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದ ಆಚರಣೆಗಳು ಮತ್ತು ತತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವದರ ಮೂಲಕ ದೇಶದೆಲ್ಲೆಡೆ ಆರೋಗ್ಯಕರವಾದ ಪ್ರಜಾ ಪ್ರಭುತ್ವಕ್ಕೆ ಅಗತ್ಯವಾದ ಮತದಾನ ಮತ್ತು ನಾಗರೀಕರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಒಳಗೊಳ್ಳುವಿಕೆ ಮತ್ತು ಸಕ್ರಿಯವಾಗಿ ಭಾಗವಹಿಸುವಿಕೆಗೆ ಪ್ರೋತ್ಸಾಹಿಸುತ್ತದೆ.
ಅಷ್ಟೇ ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ, ನಿರಂತರ ಸುಧಾರಣೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು, ಹೊಣೆಗಾರಿಕೆಯ ಪ್ರಾಮುಖ್ಯತೆ ಮತ್ತು ಪ್ರಜಾ ಪ್ರಭುತ್ವದ ಮೌಲ್ಯಗಳಿಗೆ ಬದ್ಧತೆಯಿಂದ ನಡೆದುಕೊಳ್ಳುವಂತೆ ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: Surendra Pai Column: ನಮ್ಮೆಲ್ಲರ ಮನೆಯೊಳಗಿರುವ ಟಿಕ್ ಟಿಕ್ ಟೈಮ್ ಬಾಂಬ್ !
ಮಹತ್ವ: ಪ್ರಜೆಗಳೇ ಪ್ರಭುಗಳು ಆಗಿರುವುದರಿಂದ ಮತ್ತು ಇಂದಿನ ಮಕ್ಕಳು-ಯುವಕರು ನಾಳಿನ ಭವ್ಯ ಭಾರತದ ಕುಡಿಗಳು ಎನ್ನುವಂತೆ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ರಾಜಕೀಯ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳು, ಸಮರ್ಥ ಮುಖಂಡತ್ವ, ವ್ಯಕ್ತಿ ಗೌರವ ಮತ್ತು ಶಿಕ್ಷಣ, ತಾಳ್ಮೆ, ಸಹಾನು ಭೂತಿ ಹಾಗೂ ಸಹಕಾರ ಮನೋಭಾವನೆ ಈ ಎಲ್ಲ ಮೂಲ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.
ಪ್ರಜಾಪ್ರಭುತ್ವವು ಸಾರ್ವತ್ರಿಕ ಮೌಲ್ಯವನ್ನು ಹೊಂದಿದ್ದು, ಅದು ಪ್ರತಿಯೊಂದು ದೇಶವು ತನ್ನದೇ ಆದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ನಿರ್ಧರಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಪ್ರಜಾಪ್ರಭುತ್ವದಲ್ಲಿ ಆಡಳಿತವು ಅತ್ಯಂತ ಪಾರದರ್ಶಕ, ಹೊಣೆ ಗಾರಿಕೆಯುತ ಮತ್ತು ಅಭಿವೃದ್ಧಿ ಪರವಾದ ಕಾರ್ಯಗಳನ್ನು ಕೈಕೊಳ್ಳುವಂತೆ ಪ್ರೋತ್ಸಾಹಿಸು ತ್ತದೆ.
2025ನೆಯ ವರ್ಷದ ಧ್ಯೇಯವಾಕ್ಯ: ‘ಲಿಂಗ ಸಮಾತನೆಯ ಸಾಧನೆಗಾಗಿ ಪ್ರತಿ ಹಂತದಲ್ಲಿಯೂ ಕಾರ್ಯ ಯೋಜನೆಗಳನ್ನು ಮತ್ತು ಕಾರ್ಯಸೂಚಿಗಳನ್ನು ಕೈಗೊಳ್ಳುವುದು’... ಇದು 2025ನೆಯ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಧ್ಯೇಯವಾಕ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಎಲ್ಲರೂ ಸಮಾನರೂ ಎಂಬ ಸಮಾನತೆ ತತ್ವವನ್ನು ಪ್ರತಿಪಾದಿಸುವುದು. ಹೀಗೆ ಯುವಕರ ಸಬಲೀಕರಣ, ಎಲ್ಲ ವರ್ಗದ ಜನತೆಯ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿಕೊಟ್ಟು ಪ್ರಜಾ ಪ್ರಭುತ್ವದ ಪ್ರಕ್ರಿಯೆಗಳನ್ನು ಸದೃಢ ಮತ್ತು ಸಶಕ್ತಗೊಳಿಸುವುದು ಈ ದಿನದ ಪ್ರಮುಖ ಉದ್ಧೇಶ ವಾಗಿದೆ.
ಕೊನೆಯ ನುಡಿ: ಆಧುನಿಕ ಯುಗದಲ್ಲಿ ಜನರಿಂದ ಆಡಳಿತವು (ಡೆಮಾಕ್ರಟಿಕ್) ಪ್ರಜಾಸತ್ತಾತ್ಮಕ ಸ್ವರೂಪದ ಆಧಾರಸ್ತಂಭವಾಗಿದೆ. ಅದು ಸಾಮಾನ್ಯ ಜನರಿಗೆ ಅಸಾಧಾರಣ ಅವಕಾಶವಾಗಿದೆ. ಇಡೀ ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅತ್ಯಂತ ದೊಡ್ಡದಾಗಿದೆ. ಅದಕ್ಕಂತಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಬೇಕು ಎಂದು ಹೇಳಿದ್ದಾರೆ.
ಮತದಾನ ಎಂಬುದು ಪ್ರಜಾಪ್ರಭುತ್ವದ ಅತಿ ದೊಡ್ಡ ಅಸ್ತ್ರ. ನಮ್ಮ ಪ್ರಜಾಪ್ರಭುತ್ವವು ಇತರ ರಾಷ್ಟ್ರಗಳಿಗೆ ಮಾದರಿಯಾಗಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದ್ದರಿಂದ ದೇಶದ ಎಲ್ಲ ಜನತೆ ಮತದಾನದ ಹಕ್ಕನು ಬಳಸಿಕೊಂಡು ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಜತೆಗೆ ವಿಶ್ವದೆಲ್ಲೆಡೆ ಭಾರತವು ಸರ್ವೋತ್ತಮ ಪ್ರಜಾಪ್ರಭುತ್ವವನ್ನು ಹೊಂದುವಂತೆ ಮಾಡಲು ನಾವೆಲ್ಲರೂ ಕಂಕಣಬದ್ಧ ರಾಗಬೇಕು ಎಂಬುದು ನನ್ನ ಅಂಬೋಣ.