ವೈದ್ಯಾಧ್ಯಾಯ
ಡಾ.ಮುರಲೀ ಮೋಹನ್ ಚೂಂತಾರು
ನಿನ್ನೆ (ಆಗಸ್ಟ್ 3ರಂದು) ಭಾರತದಾದ್ಯಂತ ‘ಅಂಗಾಂಗ ದಾನಿಗಳ ದಿನ’ವನ್ನು ಆಚರಿಸಲಾಗಿದೆ. ಅಂಗಾಂಗ ದಾನದ ಕುರಿತು ಅರಿವು ತುಂಬಿ ಪ್ರೇರೇಪಿಸುವ ಉದ್ದೇಶ ಆ ಆಚರಣೆಯದ್ದು. 140 ಕೋಟಿಗೂ ಜಾಸ್ತಿ ಜನಸಂಖ್ಯೆಯಿರುವ ಭಾರತದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯವಿದೆ.
ಆದರೆ ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ ಸಂಖ್ಯೆಯಲ್ಲಿರುವ ಅಂಗಾಂಗ ದಾನಿ ಗಳಿಂದಾಗಿ ಲಕ್ಷಾಂತರ ಮಂದಿಯ ಜೀವನಷ್ಟವಾಗುತ್ತಿದೆ. ಸಾಕಷ್ಟು ಮಾಹಿತಿಯ ಕೊರತೆ, ಕಾನೂನಿನ ಅಡಚಣೆ ಯಿಂದಾಗಿ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ, ಬದುಕಿ ಬಾಳಬೇಕಾದ ಜೀವಗಳು ಕಮರಿ ಹೋಗುತ್ತಿವೆ.
ಉದಾಹರಣೆಗೆ, ಭಾರತದಲ್ಲಿ ವಾರ್ಷಿಕ ಸರಾಸರಿ ಎರಡೂವರೆ ಲಕ್ಷ ಮಂದಿಗೆ ಮೂತ್ರಪಿಂಡ ಕಸಿಯ ಅವಶ್ಯಕತೆಯಿದೆ; ಆದರೆ 4 ರಿಂದ 5 ಸಾವಿರ ಮಂದಿಗೆ ಮಾತ್ರ ದಾನಿಗಳು ಸಿಗುತ್ತಾರೆ. ಹೀಗಾಗಿ, ಅಂಗಾಂಗ ದಾನಗಳ ಬಗ್ಗೆ ಜಾಗೃತಿ ನೀಡುವ ಮಹತ್ಕಾರ್ಯ ಆಗಲೇಬೇಕಿದೆ. ನಮ್ಮಲ್ಲಿ ಬಹಳಷ್ಟು ಮಂದಿಗೆ ಹಗಲು ಇರುಳಾಗುತ್ತದೆಯೇ ಹೊರತು, ಬದುಕಿಗೆ ಗೊತ್ತು-ಗುರಿ ಇಲ್ಲ. ಯಾಕೆ ಬದುಕು ತ್ತಿದ್ದೇವೆ ಎಂಬುದರ ಅರಿವೂ ಇಲ್ಲ. ಬದುಕಿದ್ದೂ ಸತ್ತಂತಿರುವ ಬದಲು, ಸತ್ತ ಮೇಲೂ ನಾವು ಬದುಕುವಂತಾಗುವುದು ಸಾರ್ಥಕತೆ ಎನಿಸಿಕೊಳ್ಳುತ್ತದೆ.
ಇದನ್ನೂ ಓದಿ: Dr Murali Mohan Chuntaru Column: ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯಲ್ಲೇ ಇದೆ
ಏನಿದು ಅಂಗಾಂಗ ದಾನ?
ಅಂಗಾಂಗ ದಾನದಲ್ಲಿ ಎರಡು ವಿಧಗಳಿವೆ. ಅವೆಂದರೆ- 1) ಜೀವಂತ ವ್ಯಕ್ತಿಗಳು ಮಾಡುವ ದಾನ; ೨) ಮೃತರು ಅಥವಾ ಮಿದುಳು ನಿಷ್ಕ್ರಿಯಗೊಂಡವರಿಂದ ಆಗುವ ದಾನ. ಜೀವಂತ ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಶಗಳು, ಜೀವಕೋಶಗಳು ಮತ್ತು ದ್ರ್ಯವಗಳನ್ನು ದಾನ ಮಾಡುವುದು ಮೊದಲ ವಿಧಕ್ಕೆ ಸೇರುತ್ತದೆ. ಉದಾಹರಣೆಗೆ, ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ತಿಮಜ್ಜೆ ದಾನ ಇತ್ಯಾದಿ. ಅಂತೆಯೇ, ದೇಹದ ಯಾವುದಾದರೂ ಅಂಗ ಅಥವಾ ಭಾಗಗಳನ್ನು ಇನ್ನೊಬ್ಬರಿಗೆ ದಾನ ಮಾಡುವುದೂ ಈ ವಿಧದಲ್ಲಿ ಸೇರಿದೆ.
ಉದಾಹರಣೆಗೆ ಎರಡು ಕಿಡ್ನಿಗಳಲ್ಲಿ ಒಂದನ್ನು ನೀಡುವುದು, ಯಕೃತ್ತಿನ ಒಂದು ಭಾಗ ಅಥವಾ ಸಣ್ಣ ಕರುಳಿನ ಒಂದು ಭಾಗವನ್ನು ನೀಡುವುದು ಇತ್ಯಾದಿ. ಇನ್ನು, ಮೃತರು ಅಥವಾ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಸಣ್ಣ ಕರುಳು, ಮೇದೋ ಜೀರಕಾಂಗ, ಕಾರ್ನಿಯಾ (ಅಕ್ಷಿಪಟಲ), ಮೂಳೆಗಳು, ಹೃದಯದ ಕವಾಟಗಳು ಇತ್ಯಾದಿ ಅಂಗಗಳು/ಭಾಗಗಳನ್ನು ತೆಗೆದು ಮತ್ತೊಬ್ಬ ರೋಗಿಗೆ ಅಳವಡಿಸುವುದು ಎರಡನೇ ವಿಧಕ್ಕೆ ಸೇರುತ್ತದೆ.
ಒಬ್ಬ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ-ಅಂಶಗಳ ಪ್ರಕಾರ, ನಿಮಿಷ ಕ್ಕೊಬ್ಬರು ಸಾಯುತ್ತಾರೆ. ಇಂಥ ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದಲ್ಲಿ ನಿಮಿಷಕ್ಕೆ 8 ಜೀವಗಳು ಪುರ್ನಜನ್ಮ ಪಡೆಯುವ ಸಾಧ್ಯತೆಯಿದೆ.
ಏನಿದು ಬ್ರೈನ್ ಡೆತ್?
ಅಪಘಾತದಿಂದಾಗಿ ತಲೆಗೆ ಏಟುಬಿದ್ದಾಗ ಅಥವಾ ಇನ್ನಾವುದೇ ಕಾರಣದಿಂದ ಮಿದುಳಿಗೆ ಘಾಸಿ ಯಾದಾಗ, ಅಲ್ಲಿಗೆ ರಕ್ತಸಂಚಾರ ಸಂಪೂರ್ಣ ನಿಂತಿರುತ್ತದೆ. ಆಮ್ಲಜನಕದ ಪೂರೈಕೆಯೂ ಸ್ಥಗಿತವಾಗಿರುತ್ತದೆ. ಆದರೆ ಹೃದಯ, ಶ್ವಾಸಕೋಶ ತಮ್ಮ ಪಾಡಿಗೆ ತಾವು ಕಾರ್ಯ ನಿರ್ವಹಿಸು ತ್ತಿರುತ್ತವೆ. ವ್ಯಕ್ತಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಕೃತಕ ಉಸಿರಾಟ ವ್ಯವಸ್ಥೆಯ ಮುಖಾಂತರ ಆಮ್ಲಜನಕದ ಪೂರೈಕೆ ನಡೆಯುತ್ತಿರುತ್ತದೆ.
ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಮೂತ್ರಪಿಂಡಗಳಿಗೆ ಆಮ್ಲಜನಕದ ಸರಬರಾಜು ಆಗುತ್ತಲೇ ಇರುತ್ತದೆ. ಆದರೆ ವ್ಯಕ್ತಿ ಮಾತ್ರ ಬದುಕಿದ್ದೂ ಸತ್ತಂತಿರುತ್ತಾನೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ‘ಬ್ರೈನ್ ಡೆತ್’ ಅಥವಾ ‘ಮಿದುಳು ನಿಷ್ಕ್ರಿಯತೆ’ ಎಂದು ಕರೆಯಲಾಗುತ್ತದೆ. ಇಂಥ ವ್ಯಕ್ತಿಯ ದೇಹದಿಂದ ಅಂಗಾಂಗಗಳನ್ನು ಆತನ ಬಂಧುಗಳ ಸಮ್ಮತಿಯೊಂದಿಗೆ ತೆಗೆದು, ಅವುಗಳ ಅಗತ್ಯ ವಿರುವ ರೋಗಿಗಳಿಗೆ ಅಳವಡಿಸಬಹುದು.
ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆದೊಡನೆಯೇ ಸಾವನ್ನಪ್ಪುತ್ತಾರೆ. ಅದಕ್ಕೂ ಮುನ್ನ ಹೀಗೆ ಅಂಗಾಂಗ ದಾನ ಮಾಡಿದಲ್ಲಿ, ಮತ್ತೊಬ್ಬ ವ್ಯಕ್ತಿಯಲ್ಲಿ ಮರುಹುಟ್ಟು ಪಡೆಯುತ್ತಾರೆ ಮತ್ತು ಸಾವಿನಲ್ಲೂ ಸಾರ್ಥಕತೆಯನ್ನು ಪಡೆಯುತ್ತಾರೆ.
ಮಿದುಳು ನಿಷ್ಕ್ರಿಯವಾಗಿರುವ ಬಗ್ಗೆ ವೈದ್ಯರು ಲಿಖಿತ ರೂಪದಲ್ಲಿ ವರದಿ ನೀಡಿದ ಬಳಿಕವೇ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿ ಅಂಗಾಂಗ ದಾನಕ್ಕೆ ಸಮ್ಮತಿಸಲಾಗುತ್ತದೆ. ದಾನಿ ಗಳಿಂದ ಹೀಗೆ ಪಡೆದ ಹೃದಯವನ್ನು 4-5 ಗಂಟೆಗಳ ಒಳಗೆ, ಪಿತ್ತಜನಕಾಂಗವನ್ನು 10-12 ಗಂಟೆಗಳ ಒಳಗೆ ಹಾಗೂ ಮೂತ್ರಪಿಂಡವನ್ನು 24 ಗಂಟೆಗಳ ಒಳಗೆ, ಅಗತ್ಯವಿರುವ ರೋಗಿಗಳಿಗೆ ಜೋಡಿಸ ಲಾಗುತ್ತದೆ.
ಇದೇ ರೀತಿಯಲ್ಲಿ, ಚರ್ಮ, ಹೃದಯದ ಕವಾಟಗಳು, ಮೂಳೆಗಳ ದಾನವೂ ಸಾಧ್ಯವಿದೆ. ಸಹಜವಾಗಿ ಸತ್ತ ವ್ಯಕ್ತಿಗಳಿಂದ ನೇತ್ರಗಳನ್ನು 4-5 ಗಂಟೆಗಳ ಒಳಗೆ ತೆಗೆದು ಅಗತ್ಯವಿರುವವರಿಗೆ ಜೋಡಿಸ ಲಾಗುತ್ತದೆ. ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಮತ್ತೆ ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳುತ್ತವೆ. ಒಟ್ಟಿನಲ್ಲಿ ಬದುಕಿರುವಾಗ ಮಾಡುವ ರಕ್ತದಾನದಂತೆಯೇ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನಗಳೂ ಬಹಳ ಪವಿತ್ರವಾದ ದಾನಗಳಾಗಿರುತ್ತವೆ ಎನ್ನಲಡ್ಡಿಯಿಲ್ಲ.
ಯಾರು ದಾನ ಮಾಡಬಹುದು?
ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರು ಕೂಡ ಸ್ವ-ಇಚ್ಛೆಯಿಂದ ಅಂಗಾಂಗ ದಾನ ಮಾಡಬಹುದು. ಆದರೆ ನಮ್ಮ ದೇಶದಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳಿಂದಾಗಿ ಅಂಗಾಂಗ ದಾನಿಗಳ ಸಂಖ್ಯೆ ಬಹಳ ಕಡಿಮೆ ಯಿದೆ. ಸಂಪೂರ್ಣ ಅಂಗಾಂಗಗಳಿಲ್ಲದ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡಿದರೆ ಪರಲೋಕ ಪ್ರಾಪ್ತಿಯಾಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ ಅಂಗಾಂಗ ದಾನಿಗಳ ಕೊರತೆ ಕಾಡುತ್ತಿದೆ.
ಅದೇ ರೀತಿಯಲ್ಲಿ, ಸರಿಯಾದ ನಿಯಂತ್ರಣ ಮತ್ತು ಸೂಕ್ತ ಕಾನೂನಿನ ಚೌಕಟ್ಟು ಇಲ್ಲದ ಕಾರಣ 80 ಮತ್ತು 90ರ ದಶಕದಲ್ಲಿ ಅಂಗಾಂಗ ಮಾರಾಟ ದಂಧೆ ವ್ಯಾಪಕವಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು ಮತ್ತು ಸ್ವಯಂಸೇವಕ ಸಂಸ್ಥೆಗಳು ಜನರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು ಹಾಗೂ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ತುರ್ತುಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
ಅಂಗಾಂಗ ದಾನಿಗಳು ಮತ್ತು ದಾನ ಪಡೆಯುವ ವ್ಯಕ್ತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ದಾನಿಗಳ ಬ್ಯಾಂಕ್ ಸ್ಥಾಪಿಸುವ ತುರ್ತು ಅವಶ್ಯಕತೆಯಿದೆ. ಹೀಗೆ ಮಾಡಿದಲ್ಲಿ, ಬದಲಿ ಅಂಗ ಸಿಗದೆ ಸಾಯುವ ರೋಗಿಗಳ ಸಂಖ್ಯೆ ಕಡಿಮೆಯಾಗಬಹುದು. ಬಡವ-ಬಲ್ಲಿದ ಎನ್ನದೆ, ಅಗತ್ಯವಿರುವ ಎಲ್ಲರಿಗೂ ಅಂಗಾಂಗಗಳು ಸಿಗುವಂತಾಗಲು ಸರಕಾರವು ತುರ್ತುಕ್ರಮ ಕೈಗೊಳ್ಳ ಬೇಕಾದ ಅನಿವಾರ್ಯತೆಯೂ ಇದೆ.
ಕಾನೂನು ಏನನ್ನುತ್ತದೆ?
ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರಕಾರವು ಕಾನೂನುಬದ್ಧಗೊಳಿಸಿದೆ. ಭಾರತ ದಲ್ಲಿ 1967ರಲ್ಲಿ ಮೊದಲ ಬಾರಿಗೆ ಮೂತ್ರಪಿಂಡದ ಕಸಿ ಮಾಡಲಾಯಿತು, 1994ರಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬದಲಿ ಹೃದಯವನ್ನು ಜೋಡಿಸಲಾಯಿತು ಮತ್ತು 1995ರಲ್ಲಿ ಮದ್ರಾಸಿನ ಆಸ್ಪತ್ರೆಯಲ್ಲಿ ಬದಲಿ ಅಂಗಾಂಗ ಜೋಡಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಇಂಥ ಕುಸುರಿ ಚಿಕಿತ್ಸೆಯನ್ನು ನಿರ್ವಹಿಸಬಲ್ಲ ನೂರಾರು ಸುಸಜ್ಜಿತ ಆಸ್ಪತ್ರೆಗಳು ಭಾರತದಲ್ಲಿವೆ; ಆದರೆ ಅಂಗಾಂಗ ದಾನಿಗಳದ್ದೇ ಕೊರತೆ ಎಂಬುದು ದುರದೃಷ್ಟಕರ ಸಂಗತಿ.
ಅಂಕಿ-ಅಂಶಗಳ ಪ್ರಕಾರ, 2012ರಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು ಇದರಲ್ಲಿ ಶೇಕಡ 1 ರಷ್ಟು ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ ಎಂಬುದು ಈ ವಸ್ತುಸ್ಥಿತಿಗೆ ಪುಷ್ಟಿ ನೀಡುತ್ತದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಗೆ ಮೂತ್ರಪಿಂಡದ ಅಗತ್ಯವಿದೆ, ಆದರೆ ಸಿಗುತ್ತಿರುವುದು 6000ರಿಂದ 7000 ಮಂದಿಗೆ ಮಾತ್ರ; 50ರಿಂದ 55 ಮಂದಿಗೆ ಹೃದಯದ ಅಗತ್ಯವಿದೆ, ಆದರೆ ಹತ್ತಿಪ್ಪತ್ತು ಮಂದಿಗೆ ಮಾತ್ರ ಹೃದಯ ಸಿಗುತ್ತಿದೆ; 50000 ಮಂದಿಗೆ ಯಕೃತ್ತಿನ ಅವಶ್ಯಕತೆಯಿದೆ, ಆದರೆ 800ರಿಂದ 1000 ಮಂದಿಗೆ ಮಾತ್ರ ಈ ಭಾಗ್ಯ ದೊರಕುತ್ತಿದೆ. ಸಂತಸದ ಸಂಗತಿಯೆಂದರೆ ನೇತ್ರದಾನಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
ನಾವೇನು ಮಾಡಬೇಕು?
ನಮ್ಮ ಬಂಧು-ಮಿತ್ರರು ಅಪಘಾತದಲ್ಲಿ ಮೃತಪಟ್ಟಲ್ಲಿ, ಅವರ ಹತ್ತಿರದವರಿಗೆ ತಿಳಿಹೇಳಿ ಮೃತರ ಅಂಗಾಂಗಗಳ ದಾನಕ್ಕೆ ವ್ಯವಸ್ಥೆ ಮಾಡಿಸಲು ಒಪ್ಪಿಸಬೇಕು. ನಾವು ಕೂಡ ದೇಹದಾನ ಮತ್ತು ನೇತ್ರದಾನಕ್ಕೆ ಒಪ್ಪಿಗೆ ನೀಡಬೇಕು. ಅಂಗಾಂಗ ದಾನಕ್ಕೂ ಮೊದಲೇ ಒಪ್ಪಿಗೆ ನೀಡಿದಲ್ಲಿ, ಆಕಸ್ಮಿಕ ವಾಗಿ ಸಾವು ಸಂಭವಿಸಿದಾಗ ಮೃತರ ಅಂಗಾಂಗಗಳಿಂದ ಮತ್ತಷ್ಟು ಜೀವಗಳಿಗೆ ಉಪಯೋಗವಾಗ ಬಹುದಲ್ಲವೇ? ಆದ್ದರಿಂದ ಸಹೃದಯಿಗಳೇ, ಸ್ಥಳೀಯ ನೇತ್ರಧಾಮಗಳಲ್ಲಿ, ವೈದ್ಯಕೀಯ ಕಾಲೇಜು ಗಳಲ್ಲಿ ನಿಮ್ಮ ಹೆಸರುಗಳನ್ನು ನೋಂದಾಯಿಸಿ ನೇತ್ರದಾನ-ಅಂಗಾಂಗ ದಾನ-ದೇಹ ದಾನಕ್ಕೆ ಸಿದ್ಧರಾಗಿ. ಬದುಕಿದ್ದೂ ಸತ್ತಂತೆ ಇರುವುದಕ್ಕಿಂತ, ಸತ್ತ ಬಳಿಕವೂ ಬದುಕುವುದರಲ್ಲಿಯೇ ಸಾರ್ಥಕತೆ ಅಡಗಿದೆ.
ನಾವು ಸತ್ತ ಬಳಿಕವೂ ನಮ್ಮ ಕಣ್ಣುಗಳಿಂದ ಇನ್ನೊಬ್ಬರು ನೋಡುವಂತಾಗುವುದಕ್ಕಿಂತ ದೊಡ್ಡ ಭಾಗ್ಯ ಇನ್ನಾವುದೂ ಇಲ್ಲ. ನಮ್ಮ ಮಿದುಳು ನಿಷ್ಕ್ರಿಯಗೊಂಡ ಕಾರಣಕ್ಕೆ ನಮ್ಮ ದೇಹದಿಂದ ತೆಗೆಯಲ್ಪಟ್ಟ ಹೃದಯವು ಇನ್ನೊಬ್ಬರ ದೇಹದಲ್ಲಿ ಮಿಡಿಯುತ್ತಲೇ ಇರುವಂತಾದರೆ ಅದಕ್ಕಿಂತ ಸಾರ್ಥಕತೆ ಬೇಕೇ?
ಒಟ್ಟಾರೆ ಹೇಳುವುದಾದರೆ, ನಾವು ಸತ್ತ ಬಳಿಕ ನಮ್ಮ ದೇಹವು ಮಣ್ಣಲ್ಲಿ ಮಣ್ಣಾಗಿ ಹೋಗುವು ದಕ್ಕಿಂತ, ನಮ್ಮ ಅಂಗಾಂಗಗಳು ದಾನವಾಗುವಂತಾದರೆ ನಾಲ್ಕಾರು ಜೀವಗಳು ಬದುಕಿ ಬಾಳ ಬಹುದು. ಆದ್ದರಿಂದ ಅಂಗಾಂಗ ದಾನಕ್ಕೆ ಸಂಕಲ್ಪಿಸೋಣ, ಮಾನವತೆಯನ್ನು ಎತ್ತಿ ಹಿಡಿಯೋಣ.
(ಲೇಖಕರು ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು)