Dr Murali Mohan Chuntaru Column: ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯಲ್ಲೇ ಇದೆ
ಜಗತ್ತಿನ ಯಾವ ರಾಷ್ಟ್ರವೂ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಉಚಿತ ಆರೋಗ್ಯ ಸೌಲಭ್ಯ ನೀಡಲು ಸಾಧ್ಯವಾಗದು; ಆದರೆ ಕನಿಷ್ಠಪಕ್ಷ ಮೂಲಭೂತ ವೈದ್ಯಕೀಯ ಸೌಲಭ್ಯ ವನ್ನು ನೀಡಿ, ಹಂತಹಂತವಾಗಿ ಅದನ್ನು ಉನ್ನತ ಮಟ್ಟಕ್ಕೇರಿಸಲು ಪ್ರತಿಯೊಂದು ದೇಶವೂ ಆದ್ಯತೆ ನೀಡಬೇಕು.


ತನ್ನಿಮಿತ್ತ
ಡಾ.ಮುರಲೀ ಮೋಹನ ಚೂಂತಾರು
(ಇಂದು ವಿಶ್ವ ಆರೋಗ್ಯ ದಿನ)
ಪ್ರತಿ ವರ್ಷ ಏಪ್ರಿಲ್ 7ರಂದು ‘ವಿಶ್ವ ಆರೋಗ್ಯ ದಿನ’ವನ್ನು ಆಚರಿಸಲಾಗುತ್ತದೆ. 1948ರ ಏಪ್ರಿಲ್ 7ರಂದು ವಿಶ್ವ ಆರೋಗ್ಯ ಸಂಸ್ಥೆ ಉದಯವಾದುದರ ಸವಿನೆನಪಿಗಾಗಿ, 1950ರ ವರ್ಷದಿಂದ ಈ ದಿನವನ್ನು ಆಚರಿಸಿ, ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ. ‘ನಿಮ್ಮ ಆರೋಗ್ಯ ಸೇವೆಗಳ ಬಗ್ಗೆ ತಿಳಿದುಕೊಳ್ಳಿ’ ಎಂಬುದು ಮೊದಲ ಸಲದ ದಿನಾ ಚರಣೆಯ ಧ್ಯೇಯ ವಾಕ್ಯವಾಗಿತ್ತು. ‘ಆರೋಗ್ಯಕರ ಆರಂಭ, ಆಶಾದಾಯಕ ಭವಿಷ್ಯ’ (Healthy begining, hopeful future) ಎಂಬುದು 2025ರ ವರ್ಷದ ವಿಶ್ವ ಆರೋ ಗ್ಯ ದಿನದ ಧ್ಯೇಯವಾಕ್ಯವಾಗಿದೆ. ಜಗತ್ತಿನ ಎಲ್ಲ ಜನರಿಗೆ ಪರಿಪೂರ್ಣ ಆರೋಗ್ಯ ಸೌಲಭ್ಯ ಇನ್ನೂ ದೊರಕುತ್ತಿಲ್ಲ. ವಿಶ್ವದ ಒಟ್ಟು 800 ಕೋಟಿ ಜನಸಂಖ್ಯೆಯಲ್ಲಿ 150 ದಶಲಕ್ಷ ಮಂದಿ ಬಡತನ ರೇಖೆಗಿಂತ ಕೆಳಗಿನವ ರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ ‘ಆರೋಗ್ಯಭಾಗ್ಯ’ವು ಅವರಿಗೆ ಮರೀಚಿಕೆಯೇ ಆಗಿಬಿಟ್ಟಿದೆ.
ದುಡಿದ ಹಣವನ್ನೆಲ್ಲ ಆರೋಗ್ಯ ಸಂರಕ್ಷಣೆಗೇ ವ್ಯಯಿಸ ಬೇಕಾದ ಅನಿವಾರ್ಯತೆ ಇವರ ದ್ದಾಗಿರುವುದು ಬಹುದೊಡ್ಡ ವಿಪರ್ಯಾಸ. ಆದ್ದರಿಂದ, ವಿಶ್ವದ ಜನಸಂಖ್ಯೆಯ ಅರ್ಧ ದಷ್ಟು ಜನಕ್ಕಾದರೂ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸು ವುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯವಾಗಿದೆ.
ಜಗತ್ತಿನ ಯಾವ ರಾಷ್ಟ್ರವೂ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಉಚಿತ ಆರೋಗ್ಯ ಸೌಲ ಭ್ಯ ನೀಡಲು ಸಾಧ್ಯವಾಗದು; ಆದರೆ ಕನಿಷ್ಠಪಕ್ಷ ಮೂಲಭೂತ ವೈದ್ಯಕೀಯ ಸೌಲಭ್ಯ ವನ್ನು ನೀಡಿ, ಹಂತಹಂತವಾಗಿ ಅದನ್ನು ಉನ್ನತ ಮಟ್ಟಕ್ಕೇರಿಸಲು ಪ್ರತಿಯೊಂದು ದೇಶ ವೂ ಆದ್ಯತೆ ನೀಡಬೇಕು.
ಇದನ್ನೂ ಓದಿ: Dr Murali Mohan Choontaru Column: ಬಾಯಿಯಲ್ಲೇ ಬ್ರಹ್ಮಾಂಡ
ವೈದ್ಯಕೀಯ ನೆರವು ಎಂದ ಮಾತ್ರಕ್ಕೆ ಬರೀ ಆಸ್ಪತ್ರೆ ಕಟ್ಟಿಸಿ ಉಚಿತ ಜೆನೆರಿಕ್ ಔಷಧಿ ನೀಡಿ ಬಿಡುವುದಲ್ಲ; ಜನರಿಗೆ ರೋಗ ಬಾರದಂತೆ ಮತ್ತು ಬಂದ ರೋಗ ಉಲ್ಬಣಿಸದಂತೆ ಪೂರಕ ವಾತಾವರಣವನ್ನೂ ಸೃಷ್ಟಿಸಬೇಕು. ಜತೆಗೆ, ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ರೋಗದ ಚಿಕಿತ್ಸೆಗಿಂತ ಅದನ್ನು ತಡೆಗಟ್ಟುವುದಕ್ಕಿರುವ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.
ಹಿಂದೆಲ್ಲಾ ಅಪ್ಪಳಿಸುತ್ತಿದ್ದ ಕುಷ್ಠ, ಸಿಫಿಲಿಸ್ ಮುಂತಾದ ಕಾಯಿಲೆಗಳು ಈಗ ಬಹುತೇಕ ಮಾಯವಾಗಿದ್ದರೂ, ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದಿನ ಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಖಿನ್ನತೆ ಮುಂತಾದ ರೋಗಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.
ಸಾಲದೆಂಬಂತೆ ಎಬೋಲಾ, ಕೋವಿಡ್, ಎಚ್1 ಎನ್1 ವೈರಾಣು ಸೋಂಕುಗಳು ಮನುಷ್ಯ ರನ್ನು ಇನ್ನಿಲ್ಲದಂತೆ ಕಾಡಿವೆ. ಇಂದಿನ ಧಾವಂತದ ಮತ್ತು ಒತ್ತಡದ ಜೀವನಕ್ರಮದಿಂದಾಗಿ ಬಹುತೇಕರಿಗೆ ಆರೋಗ್ಯ ಸಂರಕ್ಷಣೆಯ ಕಡೆಗೆ ಗಮನಹರಿಸಲು ಸಮಯವಿಲ್ಲದಿರುವುದೇ ಬಹುದೊಡ್ಡ ದುರಂತ.
‘ಆರೋಗ್ಯವೇ ಭಾಗ್ಯ’ ಎಂಬ ಜಾಣನುಡಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದರ ಜತೆಗೆ, ಇಲ್ಲಿ ನೀಡಲಾಗಿರುವ ಕ್ರಮಗಳನ್ನು ಅನುಸರಿಸಿದಲ್ಲಿ ಸ್ವಸ್ಥ ಬದುಕು ನಿಮ್ಮದಾಗುತ್ತದೆ:
1)ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. ಆರೋಗ್ಯಕ್ಕಿಂತ ಮಿಗಿಲಾದ ವಸ್ತು ಯಾವು ದೂ ಇಲ್ಲ. ಧೂಮಪಾನ- ಮದ್ಯಪಾನದಂಥ ದುಶ್ಚಟಗಳಿಂದ ದೂರವಿರಿ. ಕ್ಯಾನ್ಸರ್ ನಂಥ ಮಾರಕ ರೋಗಗಳು ಇಂಥ ದುಶ್ಚಟಗಳಿಂದಲೇ ಬರುತ್ತವೆ ಎಂಬುದನ್ನು ಮರೆಯದಿರಿ.
2) ಯೋಗ, ಪ್ರಾಣಾಯಾಮ, ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಈಜುಗಾರಿಕೆ ಮುಂತಾದ ಚಟುವಟಿಕೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತ ನಿಮ್ಮ ಹತ್ತಿರ ಸುಳಿಯುವುದಿಲ್ಲ.
3)ನಾರಿನಂಶ ಮತ್ತು ಪೌಷ್ಟಿಕಾಂಶ ಇರುವ ಆಹಾರಗಳಿಗೆ ಹೆಚ್ಚು ಒತ್ತುಕೊಡಿ. ಹಸಿ ತರಕಾರಿ, ಹಸಿರು ಸೊಪ್ಪು, ಬೇಳೆ- ಕಾಳುಗಳು ನಿಮ್ಮ ಆಹಾರದ ಭಾಗವಾಗಿರಲಿ. ತಾಜಾ ಹಣ್ಣು-ಹಂಪಲು, ನೀರು, ನೈಸರ್ಗಿಕ ಪೇಯಗಳನ್ನು ಧಾರಾಳವಾಗಿ ಸೇವಿಸಿ. ದಿಢೀರ್ ಆಹಾರ/ಸಿದ್ಧ ಆಹಾರ, ಕೃತಕ ಪೇಯಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ಜಂಕ್ ಫುಡ್ ಬೇಡವೇ ಬೇಡ.
4)‘ಬೇಗ ಮಲಗಿ, ಬೇಗ ಏಳು’ ಎಂಬ ಹಿರಿಯರ ಮಾತನ್ನು ನಿಮ್ಮ ಆರೋಗ್ಯದ ಹಿತದೃಷ್ಟಿ ಯಿಂದ ಪಾಲಿಸಿ. ತಡರಾತ್ರಿ ವರೆಗೆ ಮೋಜು-ಮಸ್ತಿ, ಕುಡಿತ-ಕುಣಿತ ಮಾಡಿ ಮಲಗಿ, ಸೂರ್ಯ ನಡುನೆತ್ತಿಗೆ ಬಂದಾಗ ಹಾಸಿಗೆಯಿಂದೇಳುವ ಹವ್ಯಾಸ ಬಹಳ ಅಪಾಯಕಾರಿ.
5)ಸ್ಮಾರ್ಟ್ ಫೋನ್, ಕಂಪ್ಯೂಟರ್‌ಗಳ ಅತಿಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ; ಆದರೆ ದೈನಂದಿನ ಜೀವನ ದಲ್ಲಿ ಅತಿ ಅನಿವಾರ್ಯವಾದಲ್ಲಿ ಮಾತ್ರವೇ ಇವನ್ನು ಬಳಸಿ.
6)ಅನಾರೋಗ್ಯ ಉಂಟಾದಾಗ ಸ್ವಯಂವೈದ್ಯಕ್ಕೆ ಮುಂದಾಗಬೇಡಿ, ‘ಡಾ.ಗೂಗಲ್’ನ ಸಹವಾಸ ಬೇಡವೇ ಬೇಡ. ನಿಮ್ಮೆಲ್ಲಾ ಸಮಸ್ಯೆ-ಸಂದೇಹಗಳನ್ನು ವೈದ್ಯರು ಪರಿಹರಿಸ ಬಲ್ಲರು ಎಂಬ ನಂಬಿಕೆ ಗಟ್ಟಿಯಾಗಿರಲಿ. ನಿಯತವಾಗಿ ವೈದ್ಯರ ಸಲಹೆ-ಮಾರ್ಗದರ್ಶನ ಪಡೆಯುತ್ತಿರುವುದು ಒಳ್ಳೆಯ ಪರಿಪಾಠ.
ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಾವು ತಿನ್ನುವ ಆಹಾರ, ಸೇವಿಸುವ ಗಾಳಿ, ಜೀವನಶೈಲಿ ಎಲ್ಲವೂ ಕಲುಷಿತವಾಗಿವೆ. ಈ ಕಾರಣದಿಂದಲೇ ಪರಿಪೂರ್ಣ ಆರೋಗ್ಯವಂತ ಮನುಷ್ಯನನ್ನು ಹುಡುಕಿದರೂ ಸಿಗದಂಥ ಪರಿಸ್ಥಿತಿ ಬಂದಿದೆ. ಹೀಗಾಗಿ ‘ಆರೋಗ್ಯ’ ಎಂಬ ಪರಿಭಾಷೆಯನ್ನು ‘ರೋಗವಿಲ್ಲದ ದೇಹಸ್ಥಿತಿ’ ಎಂಬುದರ ಬದಲಾಗಿ ‘ಜೀವನೋತ್ಸಾಹ’ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮಧುಮೇಹ, ರಕ್ತದೊತ್ತಡಗಳು ಇದ್ದರೂ ಪ್ರತಿದಿನ ಬೆಳಗ್ಗೆ ಬೇಗ ಎದ್ದು ಕೆಲಸ ಮಾಡುವ ಹುಮ್ಮಸ್ಸು ಹೊಂದಿರುವ ವ್ಯಕ್ತಿಯನ್ನು ‘ಆರೋಗ್ಯವಂತ’ ಎಂದು ಕರೆಯಬೇಕಾದ ಅನಿ ವಾರ್ಯತೆ ಎದುರಾಗಿದೆ. ಜತೆಗೆ, ಯಾವುದೇ ರೋಗವಿಲ್ಲದಿದ್ದರೂ ಖಿನ್ನತೆ ಅಥವಾ ಇನ್ನಾ ವುದೇ ಕಾರಣದಿಂದಾಗಿ ಕೆಲಸ ಮಾಡುವ ಹುಮ್ಮಸ್ಸಿಲ್ಲದಾತನನ್ನು ‘ರೋಗಿ’ ಎನ್ನುವಂತಾ ಗಿದೆ.
ಆರೋಗ್ಯವೆಂಬುದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ ಎಂಬುದನ್ನು ಜನರು ಅರಿಯ ಬೇಕು. ವೈದ್ಯರು ಸೂಚಿಸಿದ ಹತ್ತಾರು ಔಷಧಿಗಳನ್ನು ಸೇವಿಸಿ ನೂರುಕಾಲ ಬದುಕುತ್ತೇವೆ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ವೈದ್ಯರು ಏನಿದ್ದರೂ ರೋಗಲಕ್ಷಣಗಳನ್ನು ಅಭ್ಯಸಿಸಿ ಔಷಧಿ/ ಚಿಕಿತ್ಸೆ ನೀಡುತ್ತಾರೆ ಮತ್ತು ಕೆಲವೊಂದು ಕಾಯಿಲೆಗಳನ್ನು ಗುಣಪಡಿ ಸುವುದಕ್ಕಿಂತ ನಿಯಂತ್ರಣದಲ್ಲಿ ಇರಿಸುವುದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ ಎಂಬ ಸಂಗತಿ ಯನ್ನು ಜನರು ಜೀರ್ಣಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿತು ನಿಭಾಯಿ ಸಬೇಕು.
ಎಲ್ಲ ರೋಗಗಳಿಗೂ ಔಷಧಿಯಿದೆ ಮತ್ತು ಎಲ್ಲ ರೋಗಗಳನ್ನೂ ವೈದ್ಯರು ಗುಣಪಡಿಸು ತ್ತಾರೆ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಎಲ್ಲವನ್ನೂ ಸರಕಾರವೇ ನೀಡಬೇಕು, ನಿಗಾ ನೋಡಬೇಕು ಎಂದು ನಿರೀಕ್ಷಿಸುವುದು ತರವಲ್ಲ.
ಸರಕಾರ ಏನಿದ್ದರೂ ಆಸ್ಪತ್ರೆ-ವೈದ್ಯರು-ಔಷಧಿಗಳನ್ನು ಒದಗಿಸ ಬಹುದು; ಆದರೆ ಆರೋಗ್ಯಕರ ಪರಿಸರವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಜನರೂ ಸಹಕಾರದೊಂದಿಗೆ ಕೈಜೋಡಿಸಬೇಕಾಗುತ್ತದೆ. ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆಗಳ ಹುಟ್ಟು ಹೆಚ್ಚಿ, ಅವುಗಳಿಂದ ರೋಗ ಹಬ್ಬುವ ಸಾಧ್ಯತೆಯಿರುವುದರಿಂದ ತಂತಮ್ಮ ಪರಿಸರವನ್ನು ಚೊಕ್ಕವಾಗಿಟ್ಟು ಕೊಳ್ಳುವ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ, ದಿನಕ್ಕೊಂದು ಹೊಸರೋಗ ಮತ್ತು ಹೊಸ ತಜ್ಞವೈದ್ಯ ಹುಟ್ಟಿಕೊಳ್ಳಬಹುದೇ ಹೊರತು, ಸ್ವಸ್ಥ-ಸದೃಢ-ಸುಂದರ ಸಮಾಜ ನಿರ್ಮಾಣ ವಾಗುವುದಿಲ್ಲ.
ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯೊಳಗೇ ಇದೆ ಎಂಬ ಸಾರ್ವಕಾಲಿಕ ಸತ್ಯವನ್ನು ನಾವೆಲ್ಲರೂ ಅರಿಯ ಬೇಕು. ಇಂಥ ಅರಿವು ಮೂಡಿಸುವ ಕೆಲಸವನ್ನು ಸರಕಾರ, ಸಮಾಜ ಮತ್ತು ವೈದ್ಯರು ಮಾಡಬೇಕು. ಇಲ್ಲವಾದಲ್ಲಿ, ‘ಎಲ್ಲರಿಗೂ ಆರೋಗ್ಯ’ ಎಂಬ ಆಶಯದ ಈಡೇರಿಕೆ ಮರೀಚಿಕೆ ಯಾಗಬಹುದು.
ಹೀಗಾಗಿ ವಿಶ್ವ ಆರೋಗ್ಯ ದಿನದಂದು ‘ಸ್ವಸ್ಥ-ಸದೃಢ-ಸುಂದರ’ ಸಮಾಜವನ್ನು ನಿರ್ಮಿಸ ಲು ಸಂಕಲ್ಪಿಸೋಣ. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಒಳಿತು ಅಡಗಿದೆ ಎಂಬು ದನ್ನು ಮರೆಯದಿರೋಣ.
(ಲೇಖಕರು ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು)