ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳೇ ತಲೆನೋವು

ಬಿಎಂಟಿಸಿ ನಿಗಮ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷ ದಲ್ಲಿ ಬಿಎಂಟಿಸಿ ಬಸ್‌ಗಳಿಂದ ಆಗಿರುವ ಬಹುತೇಕ ಅಪಘಾತ ಅಥವಾ ಅನಾಹುತದ ಹಿಂದೆ ಈ ಎಲೆಕ್ಟ್ರಿಕ್ ಬಸ್‌ಗಳಿವೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 2024-25ರಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಂದ 29 ಅಪಘಾತಗಳಾಗಿದ್ದು, 11 ಮಂದಿಯ ಜೀವ ಹೋಗಿದೆ.

ಅಪರ್ಣಾ ಎ.ಎಸ್ ಬೆಂಗಳೂರು

ಈವರೆಗೆ ನೂರಾರು ದೂರು: 67 ಲಕ್ಷ ರು. ದಂಡ

ಎಲೆಕ್ಟ್ರಿಕ್ ಬಸ್‌ಗಳಿಂದ ಬಿಎಂಟಿಸಿಗೆ ಕೆಟ್ಟ ಹೆಸರೆಂದು ಆಕ್ಷೇಪ ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳೇ ತಲೆನೋವು

ಉದ್ಯಾನನಗರಿ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪ್ರಮುಖ ಸಾರ್ವಜನಿಕ ಸಂಪರ್ಕವಾಗಿರುವ ಬಿಎಂಟಿಸಿಯು ಸಾವಿರಾರು ಎಲೆಕ್ಟ್ರಿಕ್ ಬಸ್‌ಗಳನ್ನು ಖಾಸಗಿ ಸಂಸ್ಥೆಯ ಒಪ್ಪಂದೊಂದಿಗೆ ರಸ್ತೆಗೆ ಇಳಿಸಿದೆ. ಆದರೀಗ ಈ ಬಸ್ ಗಳೇ ಬಿಎಂಟಿಸಿಗೆ ‘ಮಸಿ’ ಬಳಿಯುತ್ತಿವೆ ಎನ್ನುವ ಆರೋಪ ಶುರುವಾಗಿದೆ.

ಬಿಎಂಟಿಸಿ ನಿಗಮ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷದಲ್ಲಿ ಬಿಎಂಟಿಸಿ ಬಸ್‌ಗಳಿಂದ ಆಗಿರುವ ಬಹುತೇಕ ಅಪಘಾತ ಅಥವಾ ಅನಾಹುತದ ಹಿಂದೆ ಈ ಎಲೆಕ್ಟ್ರಿಕ್ ಬಸ್‌ಗಳಿವೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 2024-25ರಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಂದ 29 ಅಪಘಾತಗಳಾಗಿದ್ದು, 11 ಮಂದಿಯ ಜೀವ ಹೋಗಿದೆ.

ಇನ್ನು 2025-26ರ ಆರಂಭಿಕ ಆರು ತಿಂಗಳಲ್ಲಿಯೇ 26 ಅಪಘಾತಗಳಾಗಿದ್ದು, ಎಂಟು ಮಂದಿ ಈ ಅಪಘಾತದಲ್ಲಿ ಕೊನೆಯುಸಿರು ಎಳೆದಿದ್ದಾರೆ. ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಬಸ್‌ಗಳಿಂದ ಆಗುತ್ತಿ ರುವ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಚರ್ಚಿಸಿದ್ದಾರೆ. ಬಿಎಂಟಿಸಿ ನಿಗಮದಲ್ಲಿಯೇ ಈ ಬಸ್‌ಗಳು ಸಂಚರಿಸಿದರೂ, ಬಸ್‌ಗಳ ನಿರ್ವಹಣೆ, ಚಾಲಕರ ಆಯ್ಕೆ ಸೇರಿದಂತೆ ಪ್ರತಿ ಅಂಶವನ್ನು ಗುತ್ತಿಗೆ ಪಡೆದ ಕಂಪನಿಗಳೇ ನೋಡಿಕೊಳ್ಳಬೇಕು. ಈ ಬಸ್‌ಗಳ ವಿಷಯದಲ್ಲಿ ಬಿಎಂಟಿಸಿ ಸಿಬ್ಬಂದಿ ಪಾತ್ರ ಹೆಚ್ಚಿರುವುದಿಲ್ಲ. ಆದರೆ ಈ ಬಸ್ ಗಳಿಂದಾಗುವ ಎಲ್ಲ ಸಮಸ್ಯೆಗಳಿಗೂ ಬಿಎಂಟಿಸಿಯನ್ನೇ ಹೊಣೆಯಾಗಿಸಲಾಗುತ್ತಿದೆ. ಆದ್ದರಿಂದ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡಿದರೂ, ಮತ್ತಷ್ಟು ಷರತ್ತುಗಳನ್ನು ವಿಧಿಸಬೇಕು ಎನ್ನುವ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಇದನ್ನೂ ಓದಿ: BMTC bus fire: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಸುಟ್ಟು ಕರಕಲು, 75 ಪ್ರಯಾಣಿಕರು ಪಾರು

ಶೋಕಾಸ್ ನೋಟಿಸ್ ನೀಡಿರುವ ನಿಗಮ: ಅಜಾಗರೂಕ ಚಾಲನೆ, ಕಳಪೆ ನಿರ್ವಹಣೆ, ರ‍್ಯಾಶ್ ಡ್ರೈವಿಂಗ್ ಸೇರಿದಂತೆ ವಿವಿಧ ಕಾರಣಕ್ಕೆ ಹಲವು ಬಾರಿ ದೂರು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಈಗಾಗಲೇ ಮೂರ‍್ನಾಲ್ಕು ಬಾರಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಆದರೂ ಬಹುತೇಕ ಬಸ್‌ಗಳಲ್ಲಿರುವ ಸಮಸ್ಯೆ ಮುಂದುವರೆದಿದೆ. ಆದ್ದರಿಂದ ಸಚಿವರ ಮಟ್ಟದಲ್ಲಿ ಇನ್ನೊಮ್ಮೆ ಎಚ್ಚರಿಕೆ ಕೊಡಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಆಗಲೂ ಸಂಸ್ಥೆಗಳು ಪರಿಹಾರ ಕಂಡುಕೊಳ್ಳದಿದ್ದರೆ ಕಠಿಣ ಕ್ರಮದ ಆಲೋಚನೆ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಎಲೆಕ್ಟ್ರಿಕ್ ಬಸ್‌ಗಳಿಂದಾಗುತ್ತಿರುವ ಎಡವಟ್ಟುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಎಂಟಿಸಿ ಬಸ್ ಚಾಲಕರಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ತರಬೇತಿ ಕೊರತೆಯಿರುತ್ತದೆ. ಇದರೊಂದಿಗೆ ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತಗೆದುಕೊಳ್ಳುವುದರಿಂದ ಅವರ ಮೇಲೆ ಯಾವ ರೀತಿಯಲ್ಲಿಯೂ ಕ್ರಮವಹಿಸುವ ಅಥವಾ ಹೊಣೆಗಾರರನ್ನಾಗಿ ಮಾಡಲು ಅವಕಾಶವಿರುವುದಿಲ್ಲ. ಈ ಕಾರಣಕ್ಕಾಗಿಯೇ ಆ ಚಾಲಕರೂ, ಅಜಾಗರೂಕರತೆಯಿಂದ ಚಾಲನೆ ಮಾಡುತ್ತಾರೆ ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳಿದ್ದಾರೆ.

ಎಲೆಕ್ಟ್ರಿಕ್ ಬಸ್ ಖಾಸಗಿಯವರ ಒಡೆತನ

ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಸರಬರಾಜು ಮಾಡಿರುವ ಖಾಸಗಿ ಕಂಪನಿಗಳೊಂದಿಗೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಅಶೋಕ್ ಲೇಲ್ಯಾಂಡ್‌ನ ಸ್ವಿಚ್ ಮೊಬಿಲಿಟಿ ಸಂಸ್ಥೆಯ ಬಸ್‌ಗಳು ನಿತ್ಯ 225 ಕಿಮೀ ಸಂಚರಿಸಬೇಕು. ಪ್ರತಿ ಕಿಮೀಗೆ ಬಿಎಂಟಿಸಿ 48.10 ರು.ನ್ನು ಸಂಸ್ಥೆಗೆ ನೀಡಲಿದೆ. ಇದೇ ರೀತಿ, ಎನ್‌ಟಿಪಿಸಿ ಸಂಸ್ಥೆಯ ಬಸ್ ಪ್ರತಿ ಕಿಮೀಗೆ 52 ರು.ಗಳಂತೆ 180 ಕಿಮೀ, ಟಾಟಾ ಸಂಸ್ಥೆಯ ಬಸ್‌ಗಳು 41.10 ರು.ಗಳಂತೆ 200 ಕಿಮೀ ಹಾಗೂ ಒಎಂಎಚ್ ಸಂಸ್ಥೆಯ ಬಸ್‌ಗಳು ಪ್ರತಿ ಕಿಮೀಗೆ 65.80 ರು.ಗಳಂತೆ ನಿತ್ಯ 225 ಕಿಮೀ ಓಡಾಡಬೇಕು. ಆದರೆ ಬಹುತೇಕ ಎಲೆಕ್ಟ್ರಿಕ್ ಬಸ್‌ಗಳು ಈ ನಿಬಂಧನೆಯನ್ನು ಪದೇಪದೆ ಉಲ್ಲಂಘಿಸುತ್ತಿರುವುದು ಇದೀಗ ಬಿಎಂಟಿಸಿ ಅಧಿಕಾರಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಈ ರೀತಿ ಪದೇಪದೆ ನಿಯಮ ಉಲ್ಲಂಘಿಸಿ ಈಗಾಗಲೇ 67 ಲಕ್ಷ ರು. ದಂಡವನ್ನು ಕಂಪನಿಗಳಿಗೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

*

ಪರಿಸರವನ್ನು ಉಳಿಸುವ ಉದ್ದೇಶದಿಂದ ಈ ಹಿಂದಿನ ಯುಪಿಎ ಸರಕಾರ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅವಕಾಶ ಕಲ್ಪಿಸಿತ್ತು. ಈ ಬಸ್‌ಗಳು ಬಿಎಂಟಿಸಿ ಬಸ್‌ಗಳ ರೀತಿ ಯಲ್ಲಿಯೇ ಇದ್ದರೂ, ನಿರ್ವಹಣೆಯನ್ನು ಖಾಸಗಿ ಕಂಪನಿಗಳು ಮಾಡುತ್ತವೆ. ಆದರೆ ಇವುಗಳಿಂದ ಆಗುವ ಸಮಸ್ಯೆಗಳಿಗೆ ಬಿಎಂಟಿಸಿ ತಲೆ ಕೊಡಬೇಕಾಗುತ್ತಿದೆ. ಆದ್ದರಿಂದ ಮುಂದಿನ ದಿನದಲ್ಲಿ ಕಂಪನಿಗಳು ಲೋಪ ಸರಿಪಡಿಸಿಕೊಳ್ಳದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಲಿದೆ.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

*

ಕಳೆದ ಆರು ತಿಂಗಳಲ್ಲಿ 2656 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಯಲ್ಲಿಯೇ ಕೆಟ್ಟು ನಿಂತಿವೆ.

ಎಲೆಕ್ಟ್ರಿಕ್ ಬಸ್ ಚಾಲಕರ ವಿರುದ್ಧ ಸಾರ್ವಜನಿಕರಿಂದ ರ‍್ಯಾಶ್ ಡ್ರೈವಿಂಗ್ ಆರೋಪ

ಕಳೆದ ಒಂದುವರೆ ವರ್ಷದ ಅವಧಿಯಲ್ಲಿ 55 ಅಪಘಾತ; 19 ಸಾವು

ಬಿಎಂಟಿಸಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಸಂಚರಿಸದ ಬಸ್‌ಗಳು

ಬಸ್ ಚಾಲಕರಿಗೆ ಸೂಕ್ತ ತರಬೇತಿ ನೀಡದಿರುವುದೇ ಈ ಅನಾಹುತಗಳಿಗೆ ಕಾರಣ.