ಬಾಪು ಚಿಂತನೆ
ರವೀಂದ್ರ ಸಿಂಗ್
ಇವತ್ತು ಮೈತುಂಬ ಬಟ್ಟೆ ಧರಿಸುವವರಿಗೆ, ಪ್ರಾಮಾಣಿಕ ದುಡಿಮೆಗೆ ಬೆಲೆಯಿಲ್ಲ, ಸರಳ ಬದುಕನ್ನು ಪ್ರೀತಿಸುವವರಿಲ್ಲ. ಮಾನವತಾವಾದವನ್ನೇ ಮರೆತು ಬದುಕು ಸಾಗಿಸುವುದು ಈಗಿನವರ ಮುಖ್ಯ ಗುರಿಯಾಗಿದೆ. ನಿಜವಾದ ಸುಖವು ಐಷಾರಾಮಿ ಜೀವನದಲ್ಲಿದೆ ಎಂಬ ಮೂಢಗ್ರಹಿಕೆಗೆ ಇಂದಿನ ಕೆಲವರು ಅಂಟಿಕೊಂಡಿರುವುದರಿಂದ ಗಾಂಧಿಯವರ ತತ್ವಗಳು ನಲುಗಿಬಿಟ್ಟಿವೆ. ಅವರ ಜೀವನದ ಸಂದೇಶಗಳನ್ನು ನಾವು ಸಂಪೂರ್ಣ ಮರೆತಿರುವುದೇ ಇದಕ್ಕೆ ಕಾರಣವೆನ್ನಬಹುದು.
ಇಡೀ ಪ್ರಪಂಚವೇ ಮಹಾತ್ಮ ಗಾಂಧಿಯವರನ್ನು, ಅವರ ಆದರ್ಶಗಳನ್ನು ಗೌರವಿಸುತ್ತಿದೆ. ಆದರೆ ಜಾತಿ-ಧರ್ಮಗಳೆಂದು ಬೇಲಿ ಹಾಕಿಕೊಂಡು ಈ ರಾಷ್ಟ್ರನಾಯಕನನ್ನು ಬೇರ್ಪಡಿಸಿಕೊಳ್ಳುವ ದುರ್ದೆಸೆಯಲ್ಲಿ ನಾವು ಬದುಕುತ್ತಿದ್ದೇವೆ. ಮಹಾತ್ಮ ಗಾಂಧಿಯವರಂಥ ಸತ್ಯಸಂಧರನ್ನೂ ಅನುಮಾನದ ಕಣ್ಣುಗಳಿಂದ ನೋಡುವಂಥ ಕಾಲಘಟ್ಟದಲ್ಲಿ ನಾವಿದ್ದೇವೆ.
ರಾಜಕೀಯ ಚೆಲ್ಲಾಟದ ದೃಷ್ಟಿಯಿಟ್ಟುಕೊಂಡು ಒಂದು ಗುಂಪು, ಮತ್ತೊಂದು ಗುಂಪಿನ ನಾಯಕ ನನ್ನು ಅವಹೇಳನಕಾರಿಯಾಗಿ ಬಿಂಬಿಸಿ ಮಜಾ ತೆಗೆದುಕೊಳ್ಳುವ ಪ್ರವೃತ್ತಿಯು ಸಾಮಾಜಿಕ ಜಾಲ ತಾಣಗಳಲ್ಲಿ ಎಗ್ಗಿಲ್ಲದಂತೆ ಸಾಗಿದೆ. ಒಬ್ಬ ಶಾಂತಿದೂತನನ್ನು ಅಥವಾ ಸಮಾಜ ಸುಧಾರಕನನ್ನು ಅವಮಾನಿಸುವ ಮಟ್ಟಿಗೆ ಅದು ಬೆಳೆದು ನಿಂತಿದೆ. ಸತ್ಯದ ಅರಿವಿಲ್ಲದೆಯೇ, ಕೂತಲ್ಲೇ ದೂರುವ ಜನರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇಂಥವರಿಗೆ ಕಾನೂನಾತ್ಮಕ ಕಡಿವಾಣದ ಬಿಸಿ ತಟ್ಟುತ್ತಿಲ್ಲ.
ಶಾಂತಿ-ನೆಮ್ಮದಿಯ ಪ್ರತೀಕವಾಗಿ, ಕರಿಯ-ಬಿಳಿಯ ಎನ್ನದೆ ಎಲ್ಲಾ ಜಾತಿಗಳನ್ನೂ, ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವುದು ಮಹಾತ್ಮ ಗಾಂಧಿಯವರು ಹೇಳಿಕೊಟ್ಟ ಸರಳಸೂತ್ರ. ಇದುವೇ ಮನುಷ್ಯನ ಮೊದಲ ಹೆಜ್ಜೆಯಲ್ಲವೇ? ತ್ಯಾಗದಿಂದ ಸಂತೋಷ ಪಡೆಯುವುದನ್ನು ಗಾಂಧಿಯವರು ಅನುಭವದಿಂದ ಕಲಿತರು. ರಾಜಕಾರಣದ ವೈಷಮ್ಯ, ಗಡಿ ವಿವಾದ, ಧರ್ಮಗಳ ನಡುವಿನ ಕಿಚ್ಚು, ಬಡವ-ಶ್ರೀಮಂತರ ನಡುವಿನ ತಾರತಮ್ಯ ಮುಂತಾದ ಇಂದಿನ ಹಲವಾರು ಸಮಸ್ಯೆಗಳಿಗೆ ಇರುವ ಒಂದೇ ಉತ್ತರವೆಂದರೆ, ಅದು ಗಾಂಧಿ ಯವರನ್ನು ಸರಿಯಾದ ಮಾರ್ಗದಲ್ಲಿ ಅರಿಯುವುದು.
ಇದನ್ನೂ ಓದಿ: Ramanand Sharma Column: ಕರ್ನಾಟಕ ಜಾತಿ ಗಣತಿ: ಮುಂದೈತೆ ಗೊಂದಲ ?
ಬುದ್ಧಿವಂತ ಸಮಾಜವು ಈಗ ಪ್ರತಿಯೊಂದನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ವಾಡಿಕೆಯಾಗಿ ಬಿಟ್ಟಿದೆ. ಚರಿತ್ರೆಯನ್ನೇ ಮರುಸೃಷ್ಟಿ ಮಾಡುವಂಥ ಧೀರರು ನಮ್ಮಲ್ಲಿದ್ದಾರೆ. ಸತ್ಯದ ಅರಿವಿಲ್ಲದ, ಸ್ವಂತ ಆಲೋಚನೆಗಳಿಲ್ಲದ ಜನರು ಸ್ವಾರ್ಥಕ್ಕೆಂದೋ ಅಥವಾ ಸತ್ಯಾಸತ್ಯತೆಗಳನ್ನು ಪರಾಮರ್ಶಿಸದೆ ಪ್ರಚಾರಕ್ಕೆ ಒಡ್ಡಿಕೊಳ್ಳುವುದಕ್ಕೆಂದೋ ತಿರುಚಿದ ವಿಷಯಗಳನ್ನು ಎಲ್ಲಿಯ ವರೆಗೂ ನಂಬುವರೋ, ಅಲ್ಲಿಯವರೆಗೂ ಸತ್ಯದ ಅಡಿಗಲ್ಲಿಗೆ ಕಂಟಕ ತಪ್ಪಿದ್ದಲ್ಲ.
ಸತ್ಯಕ್ಕೆ ಜಯ ಸಿಗುವುದಂತೂ ನಿಜ, ಆದರೆ ಅದರ ಫಲಿತಾಂಶ ತಡವಾಗಿ ಬೆಳಕಿಗೆ ಬರಬಹುದಷ್ಟೇ. ಇವತ್ತು ಮೈತುಂಬ ಬಟ್ಟೆ ಧರಿಸುವವರಿಗೆ ಗೌರವ ಕಡಿಮೆಯಾಗಿದೆ, ಪ್ರಾಮಾಣಿಕ ದುಡಿಮೆಗೆ ಬೆಲೆ ಯಿಲ್ಲ, ಸರಳ ಬದುಕನ್ನು ಪ್ರೀತಿಸುವವರಿಲ್ಲ. ಮಾನವತಾವಾದವನ್ನೇ ಮರೆತು ಬದುಕು ಸಾಗಿಸು ವುದು ಈಗಿನವರ ಮುಖ್ಯ ಗುರಿಯಾಗಿದೆ. ನಿಜವಾದ ಸುಖವು ಐಷಾರಾಮಿ ಜೀವನದಲ್ಲಿದೆ ಎಂಬ ಮೂಢಗ್ರಹಿಕೆಗೆ ಇಂದಿನ ಕೆಲವರು ಅಂಟಿಕೊಂಡಿರುವುದರಿಂದ, ಮಹಾತ್ಮ ಗಾಂಧಿಯವರ ತತ್ವಗಳು ಇಂದು ನಲುಗಿಬಿಟ್ಟಿವೆ. ಅವರ ಜೀವನದ ಸಂದೇಶಗಳನ್ನು ನಾವು ಸಂಪೂರ್ಣ ಮರೆತು ಹೋಗಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು.

ಗಾಂಧಿಯವರ ಕುರಿತು ಮಾತನಾಡಬೇಕಾದರೆ, ಅಂಥ ವ್ಯಕ್ತಿಯು ಮೊದಲಿಗೆ ಸತ್ಯವಾದಿಯಾಗಿರ ಬೇಕು. ಸತ್ಯದ ಮೌಲ್ಯವನ್ನು ಅರಿಯದವರು ಗಾಂಧಿಯವರ ತತ್ವವನ್ನು ಹೇಗೆ ತಾನೇ ಅರಿಯ ಬಲ್ಲರು? ಗಾಂಧಿಯವರ ಬದುಕು ಮತ್ತು ಸಿದ್ಧಾಂತದ ಆಳಕ್ಕೆ ಇಳಿಯಬೇಕೆಂದರೆ, ಅದಕ್ಕೂ ಮೊದಲು ಅಹಿಂಸಾ ಮಾರ್ಗದ ಪರಿಚಯ ಇರಬೇಕು. ಹಾಗಿದ್ದಾಗ ಮಾತ್ರವೇ ಗಾಂಧಿಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ತಿಪ್ಪೆಯು ಎಷ್ಟೇ ದುರ್ನಾತವನ್ನು ಬೀರುತ್ತಿದ್ದರೂ, ಅದರಲ್ಲಿ ಬೆಳೆದ ಗಿಡದಲ್ಲೊಂದು ಹೂವು ಅರಳಿದರೆ ಸಾಕು, ಅದರ ಸುವಾಸನೆಯ ಹಿತಾನುಭವ ಆಗುತ್ತದೆ. ಮರುಭೂಮಿಯಲ್ಲಿ ದಕ್ಕುವ ಬೊಗಸೆ ನೀರು ಅಮೃತಕ್ಕೆ ಸಮನಾದಂತೆಯೇ, ಸುವಿಚಾರ ಉಳ್ಳವರ ಸಂಗವೂ ಅಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ.
ಗಾಂಧಿಯವರಂಥ ಮಹನೀಯರ ಬಗ್ಗೆಯೇ ಕೊಂಕು ನುಡಿಯುವವರ ಬಗ್ಗೆ ನಾವು ತಲೆ ಕೆಡಿಸಿ ಕೊಳ್ಳುವ ಅವಶ್ಯಕತೆಯಿಲ್ಲ. ಏಕೆಂದರೆ, ಸಮಾಜದ ಶಾಂತಿಯನ್ನು ಕೆಡಿಸಲೆಂದೇ ಹುಟ್ಟಿರುವವರು ನಮ್ಮಲ್ಲಿ ಬಹಳ ಮಂದಿ ಇದ್ದಾರೆ. ಯಾರಿಂದ ಲೋಕಕ್ಕೆ ಕೆಡುಕಿಲ್ಲವೋ ಅಂಥವರು ಗಾಂಧಿಯವರ ತತ್ವಗಳನ್ನು ಒಪ್ಪಲು ಹಿಂಜರಿಯುವುದಿಲ್ಲ.
ಮನುಷ್ಯನು ಮನ್ಯಷ್ಯತ್ವವನ್ನು ಮರೆಯದೆ, ತಪ್ಪಾದರೆ ತನ್ನನ್ನು ತಾನು ಸರಿಪಡಿಸಿಕೊಂಡು ಬದುಕುವ ವಿಧಾನವೇ ಸನ್ನಡತೆಯುಳ್ಳ ವ್ಯಕ್ತಿಗಳ ಧ್ಯೇಯೋದ್ದೇಶವೂ ಆಗಿದೆ. ಮಹಾತ್ಮ ಗಾಂಧಿ ಯವರು ಪ್ರತಿಪಾದಿಸಿದ ತತ್ವಗಳ ಗೂಡಾರ್ಥವೂ ಇದೇ ಆಗಿದೆ. ಎಲ್ಲ ದುರ್ಗುಣಗಳನ್ನೂ ಹಿಮ್ಮೆಟ್ಟಿಸಿ, ಒಂದು ತಪಸ್ಸಿನ ರೀತಿಯಲ್ಲಿ ಒಳ್ಳೆಯ ಹಾದಿಯ ಕಡೆಗೆ ಮುಖ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.
ಅದರಲ್ಲಿ ಯಶಸ್ಸನ್ನು ಕಂಡವರು ಮಹಾತ್ಮ ಗಾಂಧಿಯವರಂಥ ಕೆಲವೇ ಮಂದಿ. ಗಾಂಧಿ ಯವರನ್ನು ಕೇವಲ ಒಬ್ಬ ರಾಷ್ಟ್ರವಾದಿಯಾಗಿ ಮಾತ್ರ ನೋಡಲು ಸಾಧ್ಯವಿಲ್ಲ. ಒಬ್ಬ ತತ್ವಜ್ಞಾನಿ, ಸಮಾಜ ವಿಜ್ಞಾನಿ, ಸಂತ ಹೀಗೆ ನಾನಾ ಪ್ರಕಾರವಾಗಿ ಅವರನ್ನು ಅರ್ಥೈಸಲು ಸಾಧ್ಯವಿದೆ. ಅವರಿಗೆ ‘ಕೊಳ್ಳುಬಾಕ ಸಂಸ್ಕೃತಿ’ ಬಗ್ಗೆ ಆಗಲೇ ಅರಿವಿತ್ತು. ಅವಶ್ಯಕತೆಗೆ ಮೀರಿದ ಆಸೆಯನ್ನು ಅವರು ವಿರೋಧಿಸುತ್ತಿದ್ದರು.
ಹೀಗಾಗಿ ಸರಳ ಜೀವನವನ್ನು ನೆಚ್ಚಿ ಅದರಂತೆಯೇ ಬದುಕಿದವರು ಗಾಂಧೀಜಿ. ಅವರ ಈ ನಡೆಯನ್ನು ಕೆಲವರು ‘ಯಂತ್ರವಿರೋಧಿ’ ಅಂತಲೂ ಕರೆದರು. ಅದಕ್ಕೆ ಗಾಂಧೀಜಿ ನೀಡಿದ ಉತ್ತರ ವೂ ಅಷ್ಟೇ ಸಮಂಜಸವಾಗಿತ್ತು- ‘ಈ ದೇಹವೇ ಒಂದು ಯಂತ್ರವಾಗಿರುವಾಗ, ವಿರೋಧ ಎನ್ನುವ ಮಾತೆಲ್ಲಿಂದ ಬಂತು?!’.
1901 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸಾಗುವ ಸಂದರ್ಭದಲ್ಲಿ, ಬಂಗಾರದ ಮತ್ತು ವಜ್ರದ ಬಹಳಷ್ಟು ಕಾಣಿಕೆಗಳನ್ನು ಅವರಿಗೆ ನೀಡಲಾಯಿತು. ಆದರೆ ಅವನ್ನು ಅಲ್ಲಿನ ಭಾರತೀಯರ ಕಲ್ಯಾಣಕಾರ್ಯಕ್ಕಾಗಿ ವಿನಿಯೋಗಿಸಲು ಗಾಂಽಜಿ ಮನಸ್ಸು ಮಾಡಿದರು. ಮಡದಿ ಕಸ್ತೂರಬಾ ಅವರು ಇದಕ್ಕೆ ಒಪ್ಪದಿದ್ದಾಗ, ಗಾಂಧೀಜಿ ಅವರ ಆಲೋಚನೆಯನ್ನು ತಿರಸ್ಕರಿಸಿದರು ಮತ್ತು ಕಾಣಿಕೆಗಳನ್ನು ಸ್ವಂತಕ್ಕೆ ಬಳಸಿಕೊಳ್ಳದೆ ತಾವು ಅಂದುಕೊಂಡಂತೆಯೇ ಕಲ್ಯಾಣ ಕಾರ್ಯಕ್ಕೆ ಉಪಯೋಗಿಸಿದರು.
ಬಂದೂಕು, ಕೋವಿ ಹಿಡಿಯದೆ ಸತ್ಯಾಗ್ರಹದ ಅಸ್ತ್ರವನ್ನು ಹಿಡಿದ ಪ್ರಚಂಡ ಗುಂಡಿಗೆಯ ಸೇನಾನಿ ಗಾಂಧೀಜಿ. ಇವರು ದೇಶದ ಬಡತನಕ್ಕೆ ಮಿಡಿದು ತಮ್ಮ ಒಂದು ಹೊತ್ತಿನ ಊಟವನ್ನು ಬಿಟ್ಟು, ತುಂಡು ಬಟ್ಟೆಯನ್ನಷ್ಟೇ ಧರಿಸಿದ ಹಠವಾದಿಯೂ ಹೌದು. ಕಾವಿ ಬಟ್ಟೆಯನ್ನು ಧರಿಸದೆಯೂ ತಮ್ಮ ಅಂತರಂಗದ ತೋಟದಲ್ಲಿ ಸ್ನೇಹ, ಸತ್ಯ, ಪ್ರೇಮಗಳನ್ನು ಬೆಳೆಸಿ ನೀರೆರೆದ ಸನ್ಯಾಸಿ ಈ ಮೋಹನದಾಸ ಕರಮಚಂದ್ ಗಾಂಧಿ. ‘ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಷ್ಟೇ ನಮ್ಮ ಗುರಿ’ ಎಂದು ಗಾಂಧೀಜಿ ಅಂದುಕೊಂಡಿರಲಿಲ್ಲ.
ಮಾನವರ ಅಂತರಂಗದ ಜಾಡ್ಯಗಳನ್ನು ದೂರ ಮಾಡುವುದು, ಹರಿಜನರನ್ನು ಉದ್ಧರಿಸುವುದು, ಅಸ್ಪೃಶ್ಯರನ್ನು ಮುಖ್ಯವಾಹಿನಿಗೆ ತರುವುದು ಮತ್ತು ಹೆಚ್ಚು ಪ್ರಬಲರನ್ನಾಗಿ ಬದಲಾಯಿಸುವುದು ಅವರ ಉದ್ದೇಶಗಳಲ್ಲಿ ಸೇರಿದ್ದವು. ಪಾಪದ ಬಗೆಗಿನ ತಪ್ಪು ಕಲ್ಪನೆಯನ್ನು ತೊಡೆದು ಅದನ್ನು ಖಂಡಿಸುವುದು ಮತ್ತು ಶಿಕ್ಷಿಸುವುದಕ್ಕಿಂತ ಕ್ಷಮಿಸಲು ಹೆಚ್ಚು ಶಕ್ತಿ ಬೇಕು ಎಂಬ ಧ್ಯೇಯೋಕ್ತಿಯನ್ನು ಬಿತ್ತುವುದು ಅವರ ಕನಸಾಗಿತ್ತು.
ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಬಂದರೂ ಬಹಳಷ್ಟು ಜನರಿಗೆ ತೃಪ್ತಿ ದೊರೆಯಲಿಲ್ಲ. ಮಹಮದ್ ಅಲಿ ಜಿನ್ನಾ ಹಟ ಹಿಡಿದು ಕೂತರು. ಹಿಂದೂ-ಮುಸ್ಲಿಮರ ಐಕಮತ್ಯವನ್ನು ಸಾಧಿಸುವುದು ಅಸಾಧ್ಯವೆಂದು ಅರಿತ ಗಾಂಧೀಜಿ, ದೇಶ ವಿಭಜನೆಗೆ ಒಪ್ಪಲೇಬೇಕಾಯಿತು. ಆದರೆ ನಂತರ ಕಂಡು ಬಂದ ಅಧಿಕಾರದ ಲಾಲಸೆ, ಹಣದ ದಾಹ, ಕೋಮುವಾದ, ಭಾಷಾ ತಕರಾರುಗಳು ಗೊತ್ತಿರು ವಂಥವೇ.
1948ರ ಜನವರಿ 30ರಂದು ಮಹಾತ್ಮ ಗಾಂಧಿಯವರು ಬಂದೂಕಿನ ಗುಂಡಿಗೆ ತುತ್ತಾದಾಗ, ಅಂದಿನ ವಿಶ್ವಸಂಸ್ಥೆಯ ಜನರಲ್ ಸೆಕ್ರೆಟರಿಯವರು ಬಾವುಟವನ್ನು ಅರ್ಧಕ್ಕೆ ಇಳಿಸಿ ಗಾಂಧಿಯವರಿಗೆ ಅಂತಿಮ ನಮನದ ಗೌರವವನ್ನು ವ್ಯಕ್ತಪಡಿಸಿದರು. ಗಾಂಧೀಜಿಯ ಸಾವಿಗೆ ಭಾರತದ ಅಂದಿನ 33 ಕೋಟಿ ಜನರು ಕಂಬನಿ ಮಿಡಿದರು.
ಇವತ್ತು ವಿಶ್ವಾದ್ಯಂತದ ನೂರಾರು ಭಾಷೆಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಗಣನೀಯ ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟಗೊಂಡಿವೆ. ನಮ್ಮ ಜನಗಳಿಗೆ ಅರ್ಥವಾಗದ ಗಾಂಧೀಜಿ, ತಮ್ಮ ಸತ್ಯ ಮತ್ತು ಆದರ್ಶದ ನಡೆಗಳಿಂದಾಗಿ ಇತರ ದೇಶದ ಜನರಿಗೆ ಸುಲಭವಾಗಿ ಅರ್ಥವಾಗಿದ್ದಾರೆ. ಭವಿಷ್ಯದಲ್ಲಿ ನಾವು ನಾನಾ ರೀತಿಯ ನಾಯಕರನ್ನು ನೋಡಬಹುದು, ವಿಶೇಷವಾದ ವ್ಯಕ್ತಿಗಳನ್ನು ಅಚ್ಚರಿಯಿಂದಲೂ ಕಾಣಬಹುದು.
ಆದರೆ, ಕಲ್ಮಶಗೊಂಡ ಸಮಾಜದ ಕನ್ನಡಿಯನ್ನು ಮಾನವತಾವಾದದ ಹತ್ತಿಯಿಂದ ನಯವಾಗಿ ಒರೆಸಿ ಚೊಕ್ಕವಾಗಿಸಲು ಇನ್ನಿಲ್ಲದಂತೆ ಯತ್ನಿಸಿದ ಮಹಾತ್ಮ ಗಾಂಧಿಯವರಂಥ ಒಬ್ಬ ಶಾಂತಿದೂತ ನನ್ನು ಮುಂಬರುವ ದಿನಗಳಲ್ಲಿ ನೋಡುವುದು ಕೊಂಚ ದುಸ್ತರವೇ...
(ಲೇಖಕರು ಹವ್ಯಾಸಿ ಬರಹಗಾರರು)