ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಕರ್ನಾಟಕ ಜಾತಿ ಗಣತಿ: ಮುಂದೈತೆ ಗೊಂದಲ ?

175 ಕೋಟಿ ವೆಚ್ಚದ 2024ರಲ್ಲಿ ಸಲ್ಲಿಸಿದ ಕಾಂತರಾಜು ಸಮಿತಿ ವರದಿಯ ಬಗ್ಗೆ ಸರಕಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡದಿರುವುದರಿಂದ ಕಪಾಟಿಗೆ ಸೇರಿದೆ ಎಂದು ಹೇಳಲಾಗುತ್ತಿದ್ದು,ಈಗ ಅದರ ಬದಲಿಗೆ ಅಂದಾಜು 425 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ಅಥವಾ ಸಾಮಾಜಿಕ-ಅರ್ಥಿಕ ಸಮೀಕ್ಷೆ ಅರಂಭ ವಾಗಿದೆ.

ಕರ್ನಾಟಕ ಜಾತಿ ಗಣತಿ: ಮುಂದೈತೆ ಗೊಂದಲ ?

-

Ashok Nayak Ashok Nayak Sep 30, 2025 8:54 AM

ಗಣತಿ ಗದ್ದಲ

ರಮಾನಂದ ಶರ್ಮಾ

ಗಣತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡದಿದ್ದರೂ ಅದು ವಿಧಿಸಿದ ಕಟ್ಟಳೆ ಗಣತಿಯಲ್ಲಿನ ಸಾರ ವನ್ನು ಬಹುವಾಗಿ ಹೀರಿದೆ. ಭಾಜಪ ಧುರೀಣರೊಬ್ಬರು ಎಲ್ಲಾ ಮಾಹಿತಿಗಳನ್ನು ನೀಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಭಾಜಪ ನೇತೃತ್ವದ ಕೇಂದ್ರ ಸರಕಾರ ಗಣತಿ ನಡೆಸುವುದಿದ್ದು, ಕಾಂಗ್ರೆಸ್ ಇದೇ ರೀತಿಯ ವಿರೋಧಿ ನಿಲುವನ್ನು ತಳೆಯಬಹುದು. ಒಟ್ಟಿನಲ್ಲಿ ಎಲ್ಲವೂ ಗೊಂದಲಮಯ.

175 ಕೋಟಿ ವೆಚ್ಚದ 2024ರಲ್ಲಿ ಸಲ್ಲಿಸಿದ ಕಾಂತರಾಜು ಸಮಿತಿ ವರದಿಯ ಬಗ್ಗೆ ಸರಕಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡದಿರುವುದರಿಂದ ಕಪಾಟಿಗೆ ಸೇರಿದೆ ಎಂದು ಹೇಳಲಾಗುತ್ತಿದ್ದು,ಈಗ ಅದರ ಬದಲಿಗೆ ಅಂದಾಜು 425 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ಅಥವಾ ಸಾಮಾಜಿಕ-ಅರ್ಥಿಕ ಸಮೀಕ್ಷೆ ಅರಂಭವಾಗಿದೆ.

ಆರಂಭದ ತಡೆ ಆಜ್ಞೆಯ ಭಯ ಮತ್ತು ಸ್ಟಾರ್ಟಿಂಗ್ ತೊಂದರೆಗಳನ್ನು ನಿವಾರಿಸಿಕೊಂಡು ಕಡತ ಮತ್ತು ಮೊಬೈಲ ಹಿಡಿದು ಶಿಕ್ಷಕರು ಪರೀಕ್ಷೆಗಳು, ಪಾಠ ಮಾಡುವುದು ಮತ್ತು ಇತರ ಶೈಕ್ಷಣಿಕ ಕರ್ತವ್ಯಗಳಿಗೆ ಹತ್ತು ದಿನಗಳ ಕಾಲ ಬೈಹೇಳಿ, ದಸರಾ ರಜೆ ಮತ್ತು ಹಬ್ಬವನ್ನು ಬಿಟ್ಟು ಸಮೀಕ್ಷೆಗಾಗಿ ರಸ್ತೆಗಿಳಿದು ಬಿಸಿಲು ಮಳೆ ಎನ್ನದೆ ಮನೆ- ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ.

ಸುಮಾರು 1.20 ಲಕ್ಷ ಸಮೀಕ್ಷಾ (ಶಿಕ್ಷಕರು)ಧಾರರು ಪ್ರತಿ ಮನೆಗೆ 100 ರೂ.ಗೌರವ ಧನದಲ್ಲಿ ಗಣತಿ ಕಾರ್ಯಮಾಡುತ್ತಿzರೆ. ಹಲವು ಕಡೆ ಅವರಿಗೆ ಹಾರ್ದಿಕ ಸ್ವಾಗತ ದೊರಕಿ ಉತ್ತಮ ಸ್ಪಂದನೆ ದೊರಕಿದರೆ, ಕೆಲವು ಕಡೆ ನಿರ್ಲಕ್ಷ ,ನಿರ್ಲಿಪ್ತತೆ ಮತ್ತು ಕಾಟಾಚಾರದ ಸ್ಪಂದನೆ ಸಿಗುತ್ತಿದೆ.

ಇದನ್ನೂ ಓದಿ: Ramanand Sharma Column: ರಸ್ತೆ-ಹೊಂಡಗಳು, ಗುಂಡಿ-ಗಂಡಾಂತರಗಳ ಚಕ್ರವ್ಯೂಹದಲ್ಲಿ

ಸಮೀಕ್ಷಕರು ಕೇಳುವ ಪ್ರಶ್ನೆಗಳಿಗೆ ಕೆಲವರು ಉತ್ತರಿಸಲು ಹಿಂಜರಿಯುತ್ತಾರೆ ಮತ್ತು ತಡವರಿಸುತ್ತಾರೆ ಮತ್ತು ಸಿಡಿಮಿಡಿಗೊಳ್ಳುತ್ತಾರಂತೆ..ಅದು,ಏಕೆ? ಇದು ಏಕೆ? ಎಂದು ಪ್ರತಿಯಾಗಿ ಪ್ರಶ್ನೆಕೇಳುತ್ತಾರಂತೆ. ಕೆಲವು ಮನೆಯಲ್ಲಿ, ಅವರಿಲ್ಲ,ಇವರಿಲ್ಲ, ಯಜಮಾನರು ಇಲ್ಲ, ಅವರಿದ್ದಾಗ ಬನ್ನಿ ಎನ್ನುತ್ತಾರಂತೆ..

ಇಷ್ಟೆ ಮಾಹಿತಿ ಏಕೆ ಎಂದು ಕೆಲವರು ಕೊರೆದರೆ, ಯಾರಿಗೆ ಮೀಸಲಾತಿ ಹೆಚ್ಚಿಗೆ ಮಾಡಲು, ಯಾರನ್ನು ಮೀಸಲಾತಿಗೆ ಒಳಪಡಿಸಲು ಈ ಗಣತಿ ಎಂದು ಕೇಳುತ್ತಾರಂತೆ. ಈ ಗಣತಿಗೆ ಖರ್ಚು ಮಾಡುವ ಹಣವನ್ನು ರಸ್ತೆ ಗುಂಡಿ ತುಂಬಲು ಬಳಸಬಹುದಿತ್ತಲ್ಲ ಎಂದು ಅಕ್ಷೇಪ ಮಾಡುತ್ತಾ ರಂತೆ. ಈ ಗಣತಿಯ ಉದ್ದೇಶ ಏನೆಂದು ಸಮೀಕ್ಷಕರನ್ನು ಕೇಳುವುದಲ್ಲದೇ, ಇದೇ ಕೊನೆಯ ಗಣತಿಯೋ ಅಥವಾ ಮುಂದೆ ಇನ್ನೂ ಇಂತಹ ಗಣತಿ ಇದೆಯೋ ಎಂದು ಕೊಂಕಿಸುತ್ತಾರಂತೆ.

ಗಣತಿ ವರದಿಯನ್ನು ಸರಕಾರ ಒಪ್ಪುತ್ತೋ ಅಥವಾ ವಿಧಾನ ಸೌಧದ ಕಪಾಟಿನಲ್ಲಿ ಸರೋಜಿನಿ ಮಹಿಷಿ ವರದಿಯಂತೆ ಧೂಳು ತಿನ್ನುತ್ತಾ ಬಿದ್ದಿರುತ್ತೋ ಎಂದು ಮೂದಲಿಸುತ್ತಾರಂತೆ. ಈ ವರದಿ ಅಂತಿಮವೋ,ಅಥವಾ ಈ ವರದಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಇನ್ನೊಂದು ತಜ್ಞರ ಸಮಿತಿಯನ್ನು ನೇಮಿಸಲಾಗುತ್ತೋ ಎಂದು ಲೇವಡಿ ಮಾಡುತ್ತಾರಂತೆ. ಈ ಸಮಿತಿಯ ವರದಿಗೂ ಹಿಂದಿನ ಸಮಿತಿಯ ವರದಿಯ ಗತಿಯಾದರೆ ಎಂದು ಪ್ರಶ್ನಾರ್ಥಕವಾಗಿ ತಿವಿಯುತ್ತಾರಂತೆ.

R sharma 30

ಕೆಲವು ಸಮೀಕ್ಷಕರು ಇದನ್ನು ಕೇಳಿ, ಮಜಾ ತೆಗೆದುಕೊಂಡರೆ, ಕೆಲವರು ನಮಗ್ಯಾಕೆ ಇದೆ ಉಸಾಬರಿ ಎಂದು ತುಟಿಯಲ್ಲಿಯೇ ನಕ್ಕು ಮುಂದೆ ಸಾಗುತ್ತಾರಂತೆ. ವಾಸ್ತವದಲ್ಲಿ ಜಾತಿ ಗಣತಿಯನ್ನು ತಪ್ಪು ಎನ್ನಲಾಗುವುದಿಲ್ಲ. ಯಾವುದೇ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸುವುದರಲ್ಲಿ ಅರ್ಥವಿದೆ. ಇಂಥಹ ಮಾಹಿತಿಗಳು ದಿಢೀರ್ ಎಂದು ಉಪಯೋಗಕ್ಕೆ ಬರದಿರಬಹುದು. ಅದರೆ, ಮುಂದೊಂದು ದಿನ ಇಂತಹ ಮಾಹಿತಿಗಳು ಯಾವುದಾದರೂ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದನ್ನು ಅಲ್ಲಗಳೆಯಲಾಗದು.

ಭಾರತದಲ್ಲಿ ಬ್ರಿಟಿಷ್ ಅಡಳಿತ ಇರುವಾಗ ಕಂದಾಯ ಅಧಿಕಾರಿಗಳು ಅಥವಾ ಹಳ್ಳಿಯಲ್ಲಿರುವ ಶ್ಯಾನುಬೋಗರು (ಗ್ರಾಮ ಲೆಕ್ಕಿಗರು) ಹಳ್ಳಿಗಳಲ್ಲಿ ತಿರುಗಾಡಿ ಮನೆ -ಮನೆಗೆ ಭೇಟಿ ನೀಡಿ ಬೆಳೆಯ ಸ್ಥಿತಿಗತಿ ಮತ್ತು ಇಳುವರಿಯ ಅಂದಾಜು ಮಾಡುತ್ತಿದ್ದರು. ಈ ಪ್ರಕ್ರಿಯೆಯನ್ನು ಅ ಕಾಲದಲ್ಲಿ ಪೀಕವಾಣಿ ಎನ್ನುತ್ತಿದ್ದರು. ಈಗ ಬೆಳೆ ಸಮೀಕ್ಷೆ ಎನ್ನುತ್ತಾರೆ. ಈ ವರ್ಷ ಬೆಳೆ ಬಂದಿಲ್ಲ, ಇಳುವರಿ ಇಲ್ಲ, ಅಂತೆಯೇ ತೀರ್ವೆ(ಕಂದಾಯ) ಕೊಡಲು ಅಗುತ್ತಿಲ್ಲ ಎಂದು ಯಾರಾದರೂ ಸಬೂಬು ಹೇಳಿದರೆ ಈ ಪೀಕವಾಣಿ ಮಾಹಿತಿಯನ್ನು ತೋರಿಸುತ್ತಿದ್ದರಂತೆ. ಇದೇ ರೀತಿ ಜಾತಿ ಗಣತಿಯಲ್ಲಿನ ಮಾಹಿತಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಜಾರಿಗೊಳಿಸಲು ಎದರೂ ಬಳಕೆ ಯಾಗಿಯೇ ತೀರುತ್ತದೆ.

ಜಾತಿಗಣತಿ ಪ್ರಕ್ರಿಯೆ ಮೊದಲ ಐದು ದಿನ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಅದರೂ ಅದು ನಿರೀಕ್ಷೆಯಷ್ಟು ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ದೂರು ಕೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಜನತೆ ಇದರಲ್ಲಿ ಅಷ್ಟು ಉತ್ಸಾಹವನ್ನು ತೋರಿಸುತ್ತಿಲ್ಲ. ಗಣತಿ ಮಾಡುವವರೂ ಕೂಡಾ ಒತಾಯಕ್ಕೆ ಮಾಡುತ್ತಿರುವಂತೆ ಕಾಣುತ್ತದೆ. ಅವರನ್ನು ಬಲವಂತವಾಗಿ ಫೀಲ್ಡಿಗೆ ಇಳಿಸಿದಂತೆ ಅನಿಸುತ್ತದೆ. ಸರಕಾರ ಅದೇಶ ನೀಡಿದ ಮೇಲೆ ಅವರು ಕರ್ತವ್ಯವನ್ನು ಪಾಲಿಸಲೇಬೇಕಿದ್ದು ಈಗ ಚುರುಕಾಗಿದೆಯಂತೆ.

ಮಕ್ಕಳಿಗೆ ಶಿಕ್ಷಣವನ್ನು ನೀಡುವುದು, ತನ್ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ಅಡಿಗಲ್ಲು ಇಡುವುದು ಅವರ ಕರ್ತವ್ಯ. ಆದರೆ, ಅವರನ್ನು ಶೈಕ್ಷಣಿಕ ಕಾರ್ಯಕ್ಕಿಂತ ಶೈಕ್ಷಣಿಕೇತರ ಕೆಲಸಗಳಿಗೆ ಹೆಚ್ಚು ಬಳಸಿಕೊಳ್ಳುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತದೆ. ಶಿಕ್ಷಕರನ್ನು ಶಿಕ್ಷಕೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಕ್ಷಣದ ಮೇಲೆ ಆದ ಪರಿಣಾಮದ ಬಗೆಗೆ ಒಂದು ರಾಷ್ಟ್ರೀಯ ಸಮೀಕ್ಷೆಯನ್ನು National Institute Of Education and Administration ನಡೆಸಿದ್ದು, ಅದರ ಪ್ರಕಾರ ಶಿಕ್ಷಕರು ಕೇವಲ 19.1% ಸಮಯವನ್ನು ಮಕ್ಕಳಿಗೆ ಕಲಿಸುವದರಲ್ಲಿ ಬಳಸುತ್ತಿದ್ದು, 42.6% ಸಮಯವನ್ನು non core non teaching ಚಟುವಟಿಕೆಯಲ್ಲಿ, 31.8% ಸಮಯವನ್ನು ಶಿಕ್ಷಕೇತರ ಶಾಲಾ ಚಟುವಟಿಕೆಯಲ್ಲಿ ಮತ್ತು 6.50% ಸಮಯವನ್ನು ಇಲಾಖಾ ಚಟುವಟಿಕೆಯಲ್ಲಿ ಕಳೆಯುತ್ತಾರಂತೆ.

ಯಾವುದೇ ಚುನಾವಣೆ ಅಥವಾ ಸಮೀಕ್ಷೆ ಇರಲಿ ಮೊದಲು ಕಣ್ಣಿಗೆ ಬೀಳುವವರು ಶಿಕ್ಷಕರು ಎನ್ನಲಾಗುತ್ತದೆ. ಅವರ ಬಹುತೇಕ ಸಮಯ ಚುನಾವಣಾ ಕರ್ತವ್ಯ, ವಿವಿಧ ರೀತಿಯ ಸಮೀಕ್ಷೆ ಪಲ್ಸ್ ಪೋಲಿಯೋ ಅಭಿಯಾನ, ಹಲವು- ಹತ್ತು ಜಯಂತಿಗಳನ್ನು ಆಚರಿಸುವುದರಲ್ಲಿಯೇ ವ್ಯಯ ವಾಗುತ್ತದೆಯಂತೆ.

ಒಂದು ಕಾಲಕ್ಕೆ ಚುನಾವಣೆಗಳು ಐದು ವರ್ಷಕ್ಕೊಮ್ಮೆ ಬರುತ್ತಿದ್ದವು. ಈಗ ಯಾವುದೇ ಸಮಯ ದಲ್ಲಿ ಚುನಾವಣೆಗಳು ಬರುವುದನ್ನು ತಳ್ಳಿಹಾಕಲಾಗದು. ಪಂಚಾಯತಿ, ತಾಲೂಕು ಬೋರ್ಡ್, ಜಿಲ್ಲಾ ಪಂಚಾಯತಿ, ವಿಧಾನಸಭಾ, ಲೋಕಸಭೆ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಕಾರ್ಪೋರೇಷನ್ ಈ ಎಲ್ಲಾ ಚುನಾವಣೆಗಳಿಗೆ ಶಿಕ್ಷಕರನ್ನು ಎರವಲು ಪಡೆಯುವುದು ಲಾಗಾಯ್ತ ನಿಂದ ಇದೆ.

ಈ ರೀತಿಯ ಬೋಧಕೇತರ ಕೆಲಸ ಮತ್ತು ಒತ್ತಡದಲ್ಲಿ ನಿರೀಕ್ಷೆ ಮಟ್ಟದಲ್ಲಿ ಬೋಧನೆ ಸಾಧ್ಯವೇ ಎನ್ನುವ ಶಿಕ್ಷಕರ ವಾದದಲ್ಲಿ ಹುರುಳಿಲ್ಲದಿಲ್ಲ. ಶಿಕ್ಷಕರನ್ನು ಗಣತಿ, ಚುನಾವಣೆಯಂಥ ಬೋಧಕೇ ತರ ಕರ್ತವ್ಯಗಳಿಗೆ ನಿಯೋಜನೆ ಮಾಡುವುದರಿಂದ ಶಾಲೆಗಳಲ್ಲಿ ಬೋಧನೆಗೆ ತೊಂದರೆಯಾಗುತ್ತದೆ, ಅಡಚಣೆಯಾಗುತ್ತದೆ ಎನ್ನುವ ಶಿಕ್ಷಕರ ವಾದದಲ್ಲಿ ಹುರುಳಿಲ್ಲದಿಲ್ಲ.

ಈ ಗಣತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡದಿದ್ದರೂ ಅದು ವಿಧಿಸಿದ ಕಟ್ಟಳೆ ಗಣತಿಯಲ್ಲಿನ ಸಾರವನ್ನು ಬಹುವಾಗಿ ಹೀರಿದೆ. ಯಾರನ್ನೂ ಒತ್ತಾಯ ಮಾಡಲಾಗದು. ಇದು ಸ್ವಇಚ್ಛೆಯಿಂದ ಅಗಬೇಕು ಮತ್ತು ಸಂಗ್ರಹಿಸಿದ ಮಾಹಿತಿಗಳನ್ನು ಗೋಪ್ಯವಾಗಿ ಇಡಬೇಕು ಎನ್ನುವುದು ಮುಖ್ಯ. ಈ ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳುತ್ತಿದ್ದು, ಹಲವು ಪ್ರಶ್ನೆಗಳು ತೀರಾ ವೈಯಕ್ತಿಕವಾಗಿವೆ.

ಸರಕಾರ ಈ ನಿಟ್ಟಿನಲ್ಲಿ ಮುತುವರ್ಜಿಯಿಂದ ಕೆಲಸ ಮಾಡಬಹುದು. ಅದರೆ, ಕಬ್ಬಿಣ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಬ್ಯಾಂಕ್ ಲಾಕರ್‌ನಿಂದಲೇ ನಗ-ನಗದು ಕಳುವಾಗುವ ಈ ದಿನಗಳಲ್ಲಿ ಗೋಪ್ಯತೆ ಎಷ್ಟು ಗೋಪ್ಯವಾಗಿ ಇರಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ 60 ಪ್ರಶ್ನೆಗಳಲ್ಲಿ ಕೆಲವು ಪತಿ-ಪತ್ನಿಗೆ , ಪತ್ನಿ- ಪತಿಗೆ ಮತ್ತು ಮಕ್ಕಳೊಡನೆ ಹಂಚಿಕೊಳ್ಳದಿರುವಷ್ಟು ಕೌಟುಂಬಿಕ ,ಹಣಕಾಸು ಗೋಪ್ಯತೆಗಳು ಇರುವಾಗ ಸಮೀಕ್ಷೆಯಲ್ಲಿ ಸಂಗ್ರಹವಾದ ಮಾಹಿತಿಗಳು ಪೂರ್ಣ ವಾಗಿರುತ್ತವೆಯೇ, ಸತ್ಯವಾಗಿರುತ್ತವೆಯೇ ಎನ್ನುವುದು ಸಂದೇಹಾಸ್ಪದ.

ಈ ಸಮೀಕ್ಷೆಯಲ್ಲಿ ಭಾಗವಹಿಸುವಿಕೆ ಕಡ್ಡಾಯವಾಗದಿರುವಾಗ ಇದನ್ನು ಪರಿಪೂರ್ಣ ಎನ್ನಬಹುದೇ? ಈ ಸಮೀಕ್ಷೆಯ ಬಗೆಗೆ ಜನತೆಯ ಮೂಡ್ ನೋಡಿದಾಗ, ಗಣನೀಯ ಪ್ರಮಾಣದಲ್ಲಿ ಜನರು ಭಾಗವಹಿಸು ವ ಸಾಧ್ಯತೆ ಕಡಿಮೆ ಎನ್ನಬಹುದೇನೋ? ಸಮೀಕ್ಷೆ ಮಾಡುವವರು ಮನೆ ಬಾಗಿಲಿಗೆ ಬಂದಾಗ ಅನಿವಾರ್ಯವಾಗಿ ಸ್ಪಂದಿಸಬಹುದು ಮತ್ತು ಯಾವುದೋ ಅವ್ಯಕ್ತ ಭಯ ದಿಂದ ಸಂಪೂರ್ಣ ಅಥವಾ ಕೇಳಿದ ಮಾಹಿತಿಯನ್ನು ಕೊಡದಿರಬಹುದು.

ತಮ್ಮ ಮನೆಗೆಲಸವನ್ನು, ಕಚೇರಿ, ಬಿಜಿನೆಸ್ ಕರ್ತವ್ಯವನ್ನು ಬಿಟ್ಟು ಅವರಿಗಾಗಿ ಕಾಯಲಾರರು. ಈ ಸಮೀಕ್ಷೆಯನ್ನು ಮಿಸ್ ಮಾಡಿಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವ ಲೆಕ್ಕಾಚಾರ ಇರಬಹುದು. ಕೇಂದ್ರ ಮಂತ್ರಿ ಪ್ರಹ್ಲಾದ ಜೋಷಿಯವರು ಸಮೀಕ್ಷೆಯಲ್ಲಿ ಭಾಗ ವಹಿಸುವುದಿಲ್ಲ ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲವೆಂದು ಹೇಳಿದ್ದು, ಇದನ್ನು ಸಮೀಕ್ಷೆ ಬಗೆಗೆ ಅ ಪಕ್ಷದವರ ನಿಲುವು ಇರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ಭಾಜಪ ಈ ಗಣತಿಗೆ ಸಹಕಾರ ನೀಡದಿರಬಹುದು. ಯುವ ಸಂಸದರೊಬ್ಬರು ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆ ಕೊಟ್ಟಿದಾರೆ. ಭಾಜಪ ಧುರೀಣರೊಬ್ಬರು ಎಲ್ಲಾ ಮಾಹಿತಿಗಳನ್ನು ನೀಡುವ ಅವಶ್ಯಕತೆ ಇಲ್ಲ ಎಂದಿzರೆ. ಮುಂದಿನ ದಿನಗಳಲ್ಲಿ ಭಾಜಪ ನೇತೃತ್ವದ ಕೇಂದ್ರ ಸರಕಾರ ಗಣತಿ ನಡೆಸುವುದಿದ್ದು, ಕಾಂಗ್ರೆಸ್ ಇದೇ ರೀತಿಯ ವಿರೋಧಿ ನಿಲುವನ್ನು ತಳೆಯಬಹುದು.

ಒಟ್ಟಿನಲ್ಲಿ ಎಲ್ಲವೂ ಗೊಂದಲಮಯ. ಈ ಸಮಿತಿಗೆ ಡಿಸೆಂಬರ್ ವರೆಗೆ ವರದಿ ನೀಡಲು ಅವಕಾಶವಿದೆ. ಕರ್ನಾಟಕದಲ್ಲಿ 1561 ಜಾತಿಗಳು ಇವೆಯಂತೆ. ಪ್ರತಿಯೊಂದು ಜಾತಿ ಮುಖಂಡರು ಸಮೀಕ್ಷೆಯಲ್ಲಿ ಹೀಗೆ ಬರೆಯಿರಿ , ಹಾಗೆ ಬರೆಯಿರಿ ಎಂದು ತಮ್ಮ ಜಾತಿ ಬಾಂಧವರಿಗೆ ನಿರ್ದೇಶನ ನೀಡುತ್ತಿದ್ದಾರೆ.

ಕೆಲವು ಮಠಾಧೀಶರುಗಳು ಕೂಡಾ ಇದರಲ್ಲಿ ಸಕ್ರಿಯರಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ಜಾತಿಯ ವರು ಒಂದಾದರೆ, ಕೆಲವು ಜಾತಿಯವರು ಒಂದಾಗಲಿಲ್ಲ. ಜಾತಿ ವಿಚಾರದಲ್ಲಿ ಎಲ್ಲೂ ಗೊದಲ ಕಾಣುತ್ತಿತ್ತು. ಅಂತಿಮ ವರದಿ ನೀಡುವವರ ಬಿಪಿಯನ್ನು ದಿನೇ ದಿನೇ ಹೆಚ್ಚಿಸುತ್ತಿದೆ. ಈ ಜಾತಿ ಸಮೀಕರಣವನ್ನು ಬಿಡಿಸುವುದು ಸಂಕೀರ್ಣವಾಗುತ್ತಿದ್ದು, ಎಲ್ಲರಿಗೂ ನ್ಯಾಯ ಒದಗಿಸುವುದು ಕಷ್ಟಸಾಧ್ಯ. ಇದು ಇನ್ನೊಂದು ಸಂಘರ್ಷಕ್ಕೆ ಕಾರಣವಾಗುವುದು ನಿಶ್ಚಿತ.

ಸಮೀಕ್ಷೆಯಲ್ಲಿ ಮೂಡಿಬಂದ ಅಂಕಿ ಸಂಖ್ಯೆ ಗಳು ವಾಸ್ತವಕ್ಕೆ ಬಲು ದೂರ ಎನ್ನುವ ದೂರು ತೀರಾ ಸಾಮಾನ್ಯವಾಗಿ ಬಂದೇ ಬರುತ್ತದೆ. ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತುವುದನ್ನೂ ಅಲ್ಲಗಳೆಯಲಾಗದು. ಇದು ಸ್ವಾಭಾವಿಕ. ಜಾತಿ ಎನ್ನುವುದು ಭಾರೀ ಭಾವನಾತ್ಮಕ ವಿಷಯ. ಇದನ್ನು ʼGlass handle with care’ ಎನ್ನುವಂತೆ ಹ್ಯಾಂಡಲ್ ಮಾಡಬೇಕಾಗುತ್ತದೆ.

ದಿನದ ಅದಾಯ, ತಿಂಗಳ ಅದಾಯ, ವಿಧವೆಯರು, ಸಾಲಸೋಲ, ಓದುಬರಹ ಬರುವವರು, ಮದುವೆ ಅದವರು,ಅಗದವರು, ಕುಟುಂಬ ಸದಸ್ಯರ ಸಾಮಾಜಿಕ ಸಂಸ್ಥೆಗಳ ಸಂಪರ್ಕ ಮುಂತಾದ ಮಾಹಿತಿಗಳು ತೀರಾ ವೈಯಕ್ತಿಕವಲ್ಲವೇ? ಮೀಸಲಾತಿ ಪ್ರಮಾಣವನ್ನು ನಿರ್ಧರಿಸುವುದರಲ್ಲಿ ಜಾತಿ ಪ್ರಮಾಣ ಮುಖ್ಯ. ಅಂತೆಯೇ ಜಾತಿ ಗಣತಿಗೆ ಅಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಎನ್ನಲಾಗುತ್ತಿದೆ.

ಜಾತಿ ಗಣತಿಯಿಂದ ಅಂಕಿಸಂಖ್ಯೆಗಳು ಹೊರಬೀಳುತ್ತಿರುವಂತೆ ಮೀಸಲಾತಿ ಸಮೀಕರಣ ಬದಲಾವಣೆಯ ಕೂಗು ಕೇಳುವ ಸಾಧ್ಯತೆ ಹೆಚ್ಚು. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು, ಹೊಸತಾಗಿ ಮೀಸಲಾತಿಗೆ ಒಳಪಡಿಸಲು ಒತ್ತಡ ಮತ್ತು ಸಂಘರ್ಷ ತಾರಕಕ್ಕೇರುವುದನ್ನು ಅಲ್ಲಗೆಳೆಯಲಾಗದು.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ನೆರವಾ ಗಬೇಕಾದ ಗಣತಿ ಇನ್ನೊಂದು ಸಂಘರ್ಷಕ್ಕೆ ಕಾರಣವಾಗಬಹುದು ಎನ್ನುವ ಭಯ ರಾಜಕೀಯ ಪಡಸಾಲೆಯಲ್ಲಿ ಕೇಳುತ್ತಿದೆ.