ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಭಾರತದ ಭವಿಷ್ಯವು ಅಮೆರಿಕದ ನಿರ್ಧಾರಗಳ ಮೇಲಾಗಲೀ, ಅದರೊಂದಿಗಿನ ಸಂಬಂಧ ವನ್ನಾಗಲೀ ಅವಲಂಬಿಸಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಒತ್ತಡ ತಂತ್ರವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಭಾರತಕ್ಕಿದೆ. ಭಾರತವನ್ನು ಬಗ್ಗಿಸಿ ತನ್ನ ದಾರಿಗೆ ತಂದುಕೊಳ್ಳಲು, ಆರ್ಥಿಕವಾಗಿ ಕಟ್ಟಿ ಹಾಕಲು, ಟ್ರಂಪ್ ಆಡಳಿತವು ಭಾರತದ ವಸ್ತುಗಳ ಮೇಲೆ ಮೊದಲಿಗೆ ಶೇ.25ರಷ್ಟು ಸುಂಕವನ್ನು ವಿಧಿಸಿತು.
ನಂತರ, ‘ರಷ್ಯಾದಿಂದ ಇಂಧನ ಖರೀದಿಸುತ್ತಿದೆ’ ಎಂಬ ಕುಂಟುನೆಪವೊಡ್ಡಿ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ಹೇರಿತು, ಔಷಧಿ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕವನ್ನು ಘೋಷಿಸಿತು. ‘ತಾರೀಖ್ ಪೆ ತಾರೀಖ್’ ಎನ್ನುವಂತೆ ಸುಂಕದ ಮೇಲೆ ಸುಂಕ ವಿಧಿಸಿ ಕಾಟ ಕೊಟ್ಟಿತು.
ಅಮೆರಿಕದ ‘ಎಚ್-1ಬಿ’ ವೀಸಾ ಪಡೆಯಲು 1 ಲಕ್ಷ ಡಾಲರ್ (88 ಲಕ್ಷ ರುಪಾಯಿ) ಶುಲ್ಕ ಪಾವತಿಸ ಬೇಕೆಂದು ಟ್ರಂಪ್ ಆದೇಶಿಸಿದ್ದಾರೆ. ಇದು ಭಾರತಕ್ಕಷ್ಟೇ ಅಲ್ಲದೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗುವಂಥದ್ದು. ಈ ತೀರ್ಮಾನ ನಮಗೇಕೆ ಹೆಚ್ಚು ಬಾಧಿಸುವುದೆಂದರೆ, ಪ್ರತಿ ವರ್ಷ 2 ಲಕ್ಷ ಭಾರತೀಯರು ‘ಎಚ್-1ಬಿ’ ವೀಸಾ ಪಡೆದು ಅಮೆರಿಕಕ್ಕೆ ತೆರಳುತ್ತಿದ್ದಾರೆ.
ಅಮೆರಿಕ ನೀಡುವ ಒಟ್ಟು ‘ಎಚ್-1ಬಿ’ ವೀಸಾಗಳಲ್ಲಿ ಭಾರತೀಯರ ಪಾಲೇ ಶೇ.70ರಷ್ಟಿದೆ. ಶೇ.6.5ರಷ್ಟು ಜಿಡಿಪಿ ಹೊಂದಿದ್ದು ವಿಶ್ವದ ೪ನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತವನ್ನು ‘ಸತ್ತ ಆರ್ಥಿಕತೆ’ಯ ದೇಶವೆಂದು ಟ್ರಂಪ್ ಕೀಳಾಗಿ ಟೀಕಿಸಿದ್ದಾರೆ. ತಮ್ಮ ಇಶಾರೆಯನ್ನೂ ಮೀರಿ ರಷ್ಯಾದೊಂದಿಗಿನ ಸಂಬಂಧ ತೊರೆಯಲು ನಿರಾಕರಿಸಿದ ಭಾರತದೆಡೆಗೆ ಅಸಹನೆ ತೋರಿ, ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯಾಗುವುದೆಂದು ಗೊತ್ತಿದ್ದರೂ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Prakash Shesharaghavachar Column: ಅರಾಜಕತೆಯ ಕಿಚ್ಚನ್ನು ಭಾರತಕ್ಕೂ ಹಬ್ಬಿಸಲು ಸಂಚು
ಸಾಲದೆಂಬಂತೆ, ಪಾಕಿಸ್ತಾನದ ಅಧ್ಯಕ್ಷ ಶೆಹಬಾಜ್ ಷರೀಫ್, ಸೇನಾಧ್ಯಕ್ಷ ಅಸಿಮ್ ಮುನೀರ್‌ರನ್ನು ಶ್ವೇತಭವನದಲ್ಲಿ ಆಧರಿಸಿ ಭಾರತವನ್ನು ಕೆಣಕಿದ್ದಾರೆ. ಸಾಲದ ಸುಳಿಯಲ್ಲಿ ಪರದಾಡುತ್ತಿರುವ ಪಾಕ್, ಅಮೆರಿಕದ ಪಾದಸೇವೆ ಮಾಡಲು ಹಾತೊರೆಯುತ್ತಿರುವಾಗ, ಟ್ರಂಪ್ ಬೆದರಿಕೆಗೆ ಕವಡೆ ಕಿಮ್ಮತ್ತನ್ನೂ ನೀಡದ ಭಾರತ ತನ್ನ ನಿಲುವಿಗೆ ಬದ್ಧನಾಗಿ ಗೌರವ ವನ್ನು ಕಾಪಾಡಿಕೊಂಡಿದೆ.
ಪರದೇಶದ ಅಧ್ಯಕ್ಷರೊಬ್ಬರು ‘ಭಾರತದ್ದು ಸತ್ತ ಆರ್ಥಿಕತೆ’ ಅಂದರೆ, ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಅದನ್ನು ಸಂಭ್ರಮಿಸುತ್ತಾರೆ. ಸುಂಕ ಹೆಚ್ಚಳದ ವಿರುದ್ಧ ಕೇಂದ್ರ ಸರಕಾರದ ಬೆಂಬಲಕ್ಕೆ ನಿಲ್ಲಬೇಕಿದ್ದ ರಾಹುಲರು, ರಾಜಕೀಯ ಕಾರಣಕ್ಕೆ ‘ಮೋದಿಯವರ ವಿದೇಶಾಂಗ ನೀತಿ ವಿಫಲ’ ಎಂದು ಟೀಕಿಸಿ, ಸ್ವಾರ್ಥಪರ ಅಧಿಕಾರ ರಾಜಕಾರಣವೇ ತಮಗೆ ಮುಖ್ಯವೆಂದು ತೋರಿಸಿ ಕೊಂಡಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿ ಟೈಗರ್ ಫೋರ್ಸ್‌ಗೆ ಸೇರಿದ್ದ ಉಗ್ರಗಾಮಿ ಹರ್‌ದೀಪ್‌ಸಿಂಗ್ ನಿಜ್ಜರ್ ಗುರುದ್ವಾರದ ಬಳಿ ಹತನಾದಾಗ, ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ಇದು ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ವನ್ನು ಹದಗೆಡಿಸಿತು.
ಹತ್ಯೆಯ ಆರೋಪವನ್ನು ಟ್ರೂಡೋ ಭಾರತ ಸರಕಾರದ ಮೇಲೆ ಹೊರಿಸಿದಾಗ ದೇಶಸ್ಥರೆಲ್ಲರೂ ಈ ವರ್ತನೆಯನ್ನು ಖಂಡಿಸಿ ಭಾರತ ಸರಕಾರದೊಂದಿಗೆ ನಿಲ್ಲಬೇಕಿರುವುದು ಅಪೇಕ್ಷಣೀಯ; ಆದರೆ ಕೆಲವರಿಗೆ ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಮುಖ್ಯವಾಗಿತ್ತು. ಕಾಂಗ್ರೆ ಸ್ಸಿಗ ರಶೀದ್ ಅಲ್ವಿ, “ದ್ವಿಪಕ್ಷೀಯ ಸಂಬಂಧಗಳು ಹಿಂದೆಂದೂ ಇಷ್ಟು ಹಳಸಿರಲಿಲ್ಲ" ಎಂದರೆ, ಟಿಎಂಸಿ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ‘ಎಕ್ಸ್’ ಮಾಧ್ಯಮದಲ್ಲಿ, “ಮತ್ತೊಂದು ದೇಶದ ಪೊಲೀಸರು ಮತ್ತು ಸರಕಾರದ ಮುಖ್ಯಸ್ಥರು ತಮ್ಮ ನೆಲದಲ್ಲಾದ ಆಘಾತಕಾರಿ ಅಪರಾಧ ಚಟುವಟಿಕೆಯ ಬಗ್ಗೆ ಮೋದಿ ಸರಕಾರದ ವಿರುದ್ಧ ಬಹಿರಂಗವಾಗಿ ಆರೋಪಿಸಿದ್ದಾರೆ.
ಹಾಗಿದ್ದ ಮೇಲೆ ’ನಾನ್-ಬಯೋ ಲಾಜಿಕಲ್’ ಪ್ರಧಾನಿ ಮೋದಿಯವರಿಂದ ಯಾರೂ ಉತ್ತರಗಳನ್ನು ಕೇಳ ಬಾರದೇ?" ಎಂದು ವ್ಯಂಗ್ಯವಾಡಿ ತಮ್ಮ ಮನದ ವಿಷವನ್ನೆಲ್ಲಾ ಕಕ್ಕಿದರು. ಸಿಪಿಎಂ ಹೊರತು ಪಡಿಸಿ ‘ಇಂಡಿಯಾ’ ಮೈತ್ರಿಕೂಟದ ಯಾವ ಪಕ್ಷವೂ ದೇಶದ ಪರವಾಗಿ ನಿಲ್ಲಲಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯ, ‘ಇಂಡಿಯಾ’ ಕೂಟದ ಪಕ್ಷಗಳ ನಡವಳಿಕೆ ಆಘಾತಕಾರಿಯಾಗಿತ್ತು.
ಭಾರತ-ಪಾಕ್ ನಡುವಿನ ಯುದ್ಧಸ್ವರೂಪದ ಘರ್ಷಣೆಯನ್ನು ಮುಂದಿಟ್ಟುಕೊಂಡು ಮೋದಿ ಯವರನ್ನು ಮುಜುಗರಕ್ಕೆ ಒಡ್ಡುವುದೇ ಕಾಂಗ್ರೆಸ್‌ಗೆ ಆಪ್ಯಾಯಮಾನವಾಗಿಬಿಟ್ಟಿತು. ಪುಲ್ವಾಮಾ ದಾಳಿಯ ತರುವಾಯ ನಡೆದ ‘ಸರ್ಜಿಕಲ್ ಸ್ಟ್ರೈಕ್’ನಿಂದ ಬಿಜೆಪಿಗೆ 2019ರ ಚುನಾವಣೆಯಲ್ಲಿ ಲಾಭವಾಯಿತು ಎಂಬ ಗ್ರಹಿಕೆಯಲ್ಲಿ, ಮತ್ತೆ ಅದರ ಪುನರಾವರ್ತನೆಯಾಗಬಾರದು ಅಂತ ‘ಆಪರೇಷನ್ ಸಿಂದೂರ’ದ ಯಶಸ್ಸಿನ ಬಗ್ಗೆ ಅನುಮಾನ ಹುಟ್ಟುಹಾಕಲು ಯತ್ನಿಸಿದ ಕಾಂಗ್ರೆಸ್, ‘ವೈಮಾನಿಕ ದಾಳಿಯ ವೇಳೆ ಭಾರತವು ನಾಲ್ಕಾರು ರ-ಲ್ ಜೆಟ್‌ಗಳನ್ನು ಕಳೆದುಕೊಂಡಿದೆ’ ಎಂದು ಆರೋಪಿಸಿತು.
ಇದು ಪಾಕಿಸ್ತಾನ ಸೇನೆಯೂ ಮಾಡದ ಆರೋಪ! ಇದರಿಂದಾಗಿ, ಮೊನ್ನೆ ಮುಕ್ತಾಯವಾದ ಏಷ್ಯಾ ಕಪ್ ಪಂದ್ಯಾವಳಿಯ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಪಾಕ್ ಆಟಗಾರರು ಭಾರತವನ್ನು ಹಂಗಿಸುವುದಕ್ಕೆ ಆಸ್ಪದ ನೀಡಿದಂತಾಯಿತು. ಭಾರತ-ಪಾಕ್ ಕದನ ಸ್ಥಗಿತಗೊಂಡಿದ್ದು ತಮ್ಮ ಆಗ್ರಹದಿಂದಲೇ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ.
ಅವರು ಹಾಗೆ ಪ್ರತಿಬಾರಿ ಹೇಳಿದಾಗಲೂ ಕಾಂಗ್ರೆಸ್ಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಯವರನ್ನು ಟೀಕಿಸುತ್ತಾರೆ. ‘ದೇಶದ ಗೌರವ ಮಣ್ಣುಪಾಲಾದರೂ ಪರವಾಗಿಲ್ಲ, ಮೋದಿಗೆ ಮಸಿ ಬಳಿಯುವುದು ಮುಖ್ಯ’ ಎಂಬಂತಿದೆ ಇವರ ಧೋರಣೆ. 2008ರ ನವೆಂಬರ್ 28ರಂದು ಮುಂಬೈ ಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ 150ಕ್ಕೂ ಹೆಚ್ಚು ಮಂದಿ ಬಲಿಯಾದರು. ಈ ದಾಳಿಯ ಹಿಂದೆ ಪಾಕ್‌ನ ಪಾತ್ರವಿದ್ದುದರ ಬಗ್ಗೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಬಳಿ ಸಾಕ್ಷ್ಯಗಳಿದ್ದವು.
ಆದರೆ ಶಿಕ್ಷಿಸುವ ರಾಜಕೀಯ ಇಚ್ಛಾಶಕ್ತಿ ಮತ್ತು ಎದೆಗಾರಿಕೆಯಿರಲಿಲ್ಲ. ಅಂದು ಗೃಹ ಸಚಿವರಾಗಿದ್ದ ಪಿ.ಚಿದಂಬರಂರವರು ತರುವಾಯದಲ್ಲಿ, ಅಮೆರಿಕದ ಅಂದಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಜಾ ರೈಸ್‌ರವರು ಪಾಕ್ ವಿರುದ್ಧ ಯಾವುದೇ ಕಾರ್ಯಾಚರಣೆಗೆ ಮುಂದಾಗದಂತೆ ತಡೆದರು ಎನ್ನುವ ಮೂಲಕ ತಮ್ಮ ಸರಕಾರವು ಒತ್ತಡಕ್ಕೆ ಮಣಿದ ವಿಚಾರವನ್ನು ಬಾಯಿಬಿಟ್ಟರು.
ಆದರೆ, ‘ಆಪರೇಷನ್ ಸಿಂದೂರ’ದ ಬಗ್ಗೆ ರಾಹುಲರು ‘ನರೇಂದರ್, ಸರೆಂಡರ್’ ಎಂದು ಬಾಲಿಶವಾಗಿ ಅಪಹಾಸ್ಯ ಮಾಡುವಾಗ, ತಮ್ಮ ಯುಪಿಎ ಸರಕಾರವು ಅಮೆರಿಕದ ಒತ್ತಡಕ್ಕೆ ಭಯ ಬಿದ್ದು, ಪಾಕ್ ವಿರುದ್ಧ ಸೊಲ್ಲೆತ್ತಲು ಧೈರ್ಯವಿಲ್ಲದೆ ತೆಪ್ಪಗಿದ್ದುದನ್ನು ಮರೆತಿದ್ದಾರೆ. ತಮ್ಮ ಕರಾಳ ಇತಿಹಾಸ ವನ್ನು ಮರೆ ಮಾಚಿ, ಈಗ ವೀರಾವೇಶದ ಮಾತನಾಡಿ ಜನರನ್ನು ಮರುಳು ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ.
ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಮೇಲೆ ಬದಲಾಗಿದ್ದು, ‘ಅಮೆರಿಕ ಮೊದಲು’ ಎಂಬ ನೀತಿಯನ್ನು ಅವರೀಗ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಆಯಾ ದೇಶದ ಮುಖ್ಯಸ್ಥರಿಗೆ ಸಹಜವಾಗಿಯೇ ‘ಸ್ವದೇಶಿ ಹಿತಾಸಕ್ತಿ’ಯನ್ನು ಕಾಪಾಡುವುದು ಆದ್ಯತೆಯ ವಿಷಯವಾಗುತ್ತದೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ‘ಮೋದಿಯ ಪರಮಾಪ್ತರಾಗಿರುವ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಣಯವೆಲ್ಲವೂ ಭಾರತದ ಹಿತಾಸಕ್ತಿಗೆ ಪ್ರತಿಕೂಲವಾಗಿವೆ’ ಎಂದು ಹಲುಬುವುದು ಮೋದಿ-ವಿರೋಧಿಗಳ ದಿನನಿತ್ಯದ ಗೋಳಾಗಿದೆ.
ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರುವುದು ಭಾರತದ ಹಿತಕ್ಕಾಗಿ ಕೆಲಸ ಮಾಡುವುದಕ್ಕಲ್ಲ ಎಂಬುದು ಮೋದಿ-ವಿರೋಧಿಗಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಮೋದಿಯವರನ್ನುದ್ದೇಶಿಸಿ ಅತಿರೇಕದ ಕುಹಕವಾಡುವ ದುರುದ್ದೇಶವಷ್ಟೇ ಇವರ ಅಜೆಂಡಾ. ಅಧ್ಯಕ್ಷೀಯ ಚುನಾವಣೆಯಲ್ಲಿ ತಮಗೆ ಪ್ರಬಲವಾಗಿ ಬೆಂಬಲಿಸಿದ್ದ ಉದ್ಯಮಿ ಎಲಾನ್ ಮಸ್ಕ್‌ರನ್ನೇ, ಅವರು ತಮ್ಮ ನಿರ್ಣಯದ ವಿರುದ್ಧ ಮಾತಾಡಿದ್ದಕ್ಕಾಗಿ ಪಕ್ಕಕ್ಕೆ ಸರಿಸಿಬಿಟ್ಟವರು ಟ್ರಂಪ್.
ಹೀಗಿರುವಾಗ, ‘ರಷ್ಯಾದೊಡನೆ ಸ್ನೇಹ ಮಾಡಬೇಡಿ’ ಎಂಬ ತಮ್ಮ ತಾಕೀತಿಗೆ ಸೊಪ್ಪು ಹಾಕದಿದ್ದುದಕ್ಕೆ ಭಾರತದ ವಿರುದ್ಧ ಅವರು ಕಿಡಿ ಕಾರುತ್ತಿರುವುದರಲ್ಲಿ ಅಚ್ಚರಿಯೇನಿದೆ? ಅಮೆರಿಕದ ಇಂಥ ನೀತಿಗೆ ಪ್ರತಿತಂತ್ರ ಹೂಡುವುದು ನಮಗೆ ಅತ್ಯಗತ್ಯವಾಗಿದೆ. ಹೀಗಾಗಿಯೇ ಚೀನಾದೊಂದಿಗಿನ ಸಂಬಂಧವನ್ನು ಸುಧಾರಿಸಲು ಭಾರತವು ಮುಂದಾದರೆ ಅದು ವಿಪಕ್ಷಗಳಿಗೆ ಸ್ವಾಗತಾರ್ಹವಲ್ಲ; ಹಳೆಯ ವೈರತ್ವವನ್ನು ಉಲ್ಲೇಖಿಸಿ ಮೋದಿಯವರ ನಡೆಯನ್ನು ಹಂಗಿಸುವ ಸಣ್ಣತನ ಇವುಗಳದ್ದು. ‘ಚೀನಾ ಕಾರಣಕ್ಕಾಗಿ ಅಮೆರಿಕವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಿದೆ, ಭಾರತ-ರಷ್ಯಾ ನಮ್ಮಿಂದ ದೂರವಾಗಿವೆ’ ಎಂದು ಟ್ರಂಪ್ ರೋದಿಸಿದ್ದಾರೆ.
ಈ ಪ್ರತಿಕ್ರಿಯೆಯು ಮೋದಿಯವರ ರಾಜಕೀಯ ಜಾಣ್ಮೆಗೆ ಸಾಕ್ಷಿಯಾಗಿದೆ. ದಶಕಗಳ ಕಾಲ ದೇಶವನ್ನಾಳಿದ ಪಕ್ಷಕ್ಕೆ ಮೋದಿಯವರ ತಂತ್ರವು ಅರ್ಥವಾಗದ ವಿಚಾರವೇನಲ್ಲ; ಆದರೆ ‘ಮೋದಿ ವಿಫಲರಾಗಿದ್ದಾರೆ’ ಎಂದು ಶತಾಯಗತಾಯ ಬಿಂಬಿಸುವುದಷ್ಟೇ ಅದರ ಉದ್ದೇಶ.
ಭಾರತವು, ಯಾರ ಮರ್ಜಿಗಾಗಲೀ ಒತ್ತಡಕ್ಕಾಗಲೀ ಬಗ್ಗಬೇಕಾದ ಪರಿಸ್ಥಿತಿಯನ್ನು ದಾಟಿ ಬಹುದೂರ ಸಾಗಿದೆ. ಬಡರಾಷ್ಟ್ರವಾಗಿದ್ದ ಭಾರತವಿಂದು ಬಲಾಢ್ಯ ಆರ್ಥಿಕತೆಯಾಗಿರುವುದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಅನೇಕ ದೇಶಗಳ ಕಣ್ಣು ಕೆಂಪಾಗಿಸಿದೆ. ಇದು ಜಾಗತಿಕ ಭೂರಾಜಕೀಯದಲ್ಲಿ ಮಾಮೂಲು. ಭಾರತದ ಪರ ನಿಲ್ಲಬೇಕಿದ್ದ ‘ಇಂಡಿಯಾ’ ಮೈತ್ರಿಕೂಟವು, ನಮಗೆ ಕಿರುಕುಳ ಕೊಡುವವರೊಂದಿಗೆ ನಿಲ್ಲುತ್ತಿರುವುದು ಮತ್ತು ‘ಮೋದಿ-ವಿರೋಧ’ವು ದಿಕ್ಕು ಬದಲಿಸಿ ‘ಭಾರತ-ವಿರೋಧಿ’ ಹಂತ ವನ್ನು ತಲುಪಿರುವುದು ಶೋಚನೀಯ. ಭಾರತದ ಬೆಳವಣಿಗೆಯನ್ನು ಸಹಿಸದವರ ವಿರುದ್ಧ ಭಾರತೀಯರು ಸೆಡ್ಡುಹೊಡೆದು ನಿಲ್ಲಬೇಕಿದೆ.
(ಲೇಖಕರು ಬಿಜೆಪಿಯ ವಕ್ತಾರರು)