ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಅರಾಜಕತೆಯ ಕಿಚ್ಚನ್ನು ಭಾರತಕ್ಕೂ ಹಬ್ಬಿಸಲು ಸಂಚು

ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ದೇಶಗಳ ಪ್ರಧಾನಿ/ಅಧ್ಯಕ್ಷರು ಜೀವ ಉಳಿಸಿಕೊಳ್ಳಲು ರಾತ್ರೋ ರಾತ್ರಿ ದೇಶ ತೊರೆದು ಪರದೇಶಗಳಲ್ಲಿ ಆಶ್ರಯ ಪಡೆಯುವಂತಾದರೆ, ಪಾಕ್ ಮತ್ತು ಮ್ಯಾನ್ಮಾರ್ ಪ್ರಧಾನಿಗಳು ಸೆರೆಮನೆ ಸೇರಿದ್ದಾರೆ. 20 ವರ್ಷಗಳಿಂದ ನೆಲೆಯೂರಿದ್ದ ಅಮೆರಿಕದ ಸೇನೆಯು ಅಫ್ಘಾನಿಸ್ತಾನದಿಂದ ನಿರ್ಗಮಿಸಲು ಮುಂದಾಗುತ್ತಿದ್ದಂತೆ, ಆಫ್ಘನ್ ಸರಕಾರದ ವಿರುದ್ಧ ತಾಲಿಬಾನ್ ಯುದ್ಧವನ್ನು ಘೋಷಿಸಿತು.

ಅರಾಜಕತೆಯ ಕಿಚ್ಚನ್ನು ಭಾರತಕ್ಕೂ ಹಬ್ಬಿಸಲು ಸಂಚು

-

Ashok Nayak Ashok Nayak Sep 19, 2025 8:37 AM

ಪ್ರಕಾಶಪಥ

ಪ್ರಕಾಶ ಶೇಷರಾಘವಾಚಾರ್

ನೆರೆದೇಶಗಳಲ್ಲಿ ಪದೇಪದೆ ರಾಜಕೀಯ ಅಸ್ಥಿರತೆ ಸಂಭವಿಸುತ್ತಿದ್ದು, ಭಾರತದ ಮೇಲೂ ಇದರ ಪ್ರಭಾವ ಉಂಟಾಗುತ್ತಿದೆ. ಅಕ್ರಮ ವಲಸಿಗರು ಪರಿಸ್ಥಿತಿಯ ದುರ್ಲಾಭ ಪಡೆದು, ಗಡಿ‌ ದಾಟಿ ಬಂದು, ದೇಶದ ಕಾನೂನು-ಸುವ್ಯವಸ್ಥೆಗೆ ಸವಾಲಾಗಿದ್ದಾರೆ. ಇಂಥವರಿಗೆ ಆಶ್ರಯ ನೀಡುವವರು ನಮ್ಮಲ್ಲಿ ಸಾಕಷ್ಟಿದ್ದಾರೆ.

ನೆರೆಯ ರಾಷ್ಟ್ರಗಳಲ್ಲಿ ಉಂಟಾಗಿರುವ ಅರಾಜಕತೆಯ ಕಿಚ್ಚನ್ನು ಭಾರತದಲ್ಲೂ ಹಬ್ಬಿಸುವ ಷಡ್ಯಂತ್ರವನ್ನು ಮೋದಿ ವಿರೋಧಿಗಳು ಹೂಡಿದ್ದಾರಾ? ಎಂಬ ಅನುಮಾನ ಕಾಡುತ್ತಿದೆ. ಭಾರತದ ನೆರೆಹೊರೆಯಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ‘ಭಾರತೀಯರು ಅದೆಷ್ಟು ಅದೃಷ್ಟವಂತರು’ ಎಂದು ಹೆಮ್ಮೆ ಪಡಬೇಕಾಗಿತ್ತು. ಆದರೆ, ಹಿಂಸೆ, ಗಲಭೆ, ದೊಂಬಿಯಿಂದ ನಲುಗಿ ಹೋದ ಆ ದೇಶ ಗಳ ದುರ್ಭರ ಪರಿಸ್ಥಿತಿ ನಮಗೂ ಬರಲಿ ಎಂದು ಆಶಿಸುತ್ತಿದ್ದಾರೆ ವಿಕೃತ ಮನಸ್ಸಿನ ಕಾಂಗ್ರೆಸ್ ನಾಯಕರು.

ಇವರ ಜತೆಗೆ ಸಾಮಾಜಿಕ ಜಾಲತಾಣದ ‘ಕಾಗದದ ಹುಲಿಗಳು’ ಕೂಡ ತಲೆಯೆತ್ತಿವೆ. ರಾಜಕೀಯ ಅಸ್ಥಿರತೆ, ಅಧಿಕಾರಸ್ಥರ ಸ್ಥಾನಪಲ್ಲಟ/ಪದಚ್ಯುತಿ, ಆರ್ಥಿಕ ಕ್ಷೋಭೆ, ಮತಾಂಧತೆಯ ಅಟ್ಟಹಾಸ, ವ್ಯಾಪಕ ಹಿಂಸಾಚಾರ ಹೀಗೆ ಒಂದಲ್ಲಾ ಒಂದು ಬಾಧೆಯಿಂದ ನಮ್ಮ ನೆರೆಯ ಬಹುತೇಕ ರಾಷ್ಟ್ರ ಗಳು ಬಳಲಿ ಹೋಗಿವೆ.

ಪ್ರಭುತ್ವದ ವಿರುದ್ಧದ ಬಂಡಾಯದ ದನಿಯು ಹಿಂಸೆಗೆ ತಿರುಗಿ, ಸಾರ್ವಜನಿಕ ಸ್ವತ್ತುಗಳು ಲೂಟಿ ಯಾಗಿ, ಸಾವಿರಾರು ಕೋಟಿ ಹಣ ಕರಗಿಹೋಗಿ, ನೂರಾರು ಜನರ ಸಾವುಗಳಾಗಿ ಹೋರಾಟವು ದಿಕ್ಕುತಪ್ಪಿತು, ಆ ದೇಶಗಳನ್ನು 25 ವರ್ಷದಷ್ಟು ಹಿಂದಕ್ಕೆ ಕೊಂಡೊಯ್ದಿತು. ಸರಕಾರಗಳು ತಪತಪನೆ ಉದುರಿದವು.

ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ದೇಶಗಳ ಪ್ರಧಾನಿ/ಅಧ್ಯಕ್ಷರು ಜೀವ ಉಳಿಸಿಕೊಳ್ಳಲು ರಾತ್ರೋ ರಾತ್ರಿ ದೇಶ ತೊರೆದು ಪರದೇಶಗಳಲ್ಲಿ ಆಶ್ರಯ ಪಡೆಯುವಂತಾದರೆ, ಪಾಕ್ ಮತ್ತು ಮ್ಯಾನ್ಮಾರ್ ಪ್ರಧಾನಿಗಳು ಸೆರೆಮನೆ ಸೇರಿದ್ದಾರೆ. 20 ವರ್ಷಗಳಿಂದ ನೆಲೆಯೂರಿದ್ದ ಅಮೆರಿಕದ ಸೇನೆಯು ಅಫ್ಘಾನಿಸ್ತಾನದಿಂದ ನಿರ್ಗಮಿಸಲು ಮುಂದಾಗುತ್ತಿದ್ದಂತೆ, ಆಫ್ಘನ್ ಸರಕಾರದ ವಿರುದ್ಧ ತಾಲಿಬಾನ್ ಯುದ್ಧವನ್ನು ಘೋಷಿಸಿತು.

ಇದನ್ನೂ ಓದಿ: ‌Prakash Shesharaghavachar Column: ಅಚ್ಛೇ ದಿನ್‌ ಎಂದರೆ ಇದೇನೇ...

ಅಮೆರಿಕದ ಸೇನೆಯ ನೆರವಿಲ್ಲದೆ ಆಫ್ಘನ್ ಸೈನ್ಯವು ತಾಲಿ ಬಾನಿಗಳಿಗೆ ಸುಲಭದ ತುತ್ತಾಯಿತು. ಅಧ್ಯಕ್ಷ ಅಶ್ರಫ್ ಘನಿ ಯುಎಇಗೆ ಪರಾರಿಯಾದರು. ಅಫ್ಘಾನಿಸ್ತಾನವು ಮತ್ತೊಮ್ಮೆ ಕಟ್ಟರ್ ಮುಸ್ಲಿಂ ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿತು. ಮ್ಯಾನ್ಮಾರ್‌ನಲ್ಲಿ 2020ರಲ್ಲಿ ಚುನಾವಣೆ ಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದ ಅಂಗ್ ಸಾನ್ ಸೂಕಿಯವರ ವಿರುದ್ಧ 2021ರಲ್ಲಿ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಯಿಂದಾಗಿ ಸರಕಾರವು ಸೇನೆಯ ತೆಕ್ಕೆಗೆ ಹೋಯಿತು.

ಸೇನಾಡಳಿತವು ಪ್ರಧಾನಿ ಅಂಗ್ ಸಾನ್ ಸೂಕಿಯವರನ್ನು ಸೆರೆಮನೆಗೆ ದೂಡಿತು. 2016ರಿಂದ ನಡೆಯುತ್ತಿದ್ದ ಜನಾಂಗೀಯ ದಂಗೆಗೆ ರೋಹಿಂಗ್ಯಾ ಮುಸ್ಲಿಮರು ಗುರಿಯಾಗಿದ್ದಾರೆ. ಈ ರೋಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ ನಿರಾಶ್ರಿತರಾಗಿ, ಭಾರತಕ್ಕೆ ಬಂದು ನೆಲೆಸಿ ನಮಗೆ ದೊಡ್ಡ ತಲೆ ನೋವಾಗಿದ್ದಾರೆ.

ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆಯು ಅನಿಶ್ಚಿತವಾಗಿದ್ದು, ಅಧಿಕಾರ ಪಲ್ಲಟವು ಸರ್ವೇಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಪಾಕಿಸ್ತಾನದ ಡಿಎನ್ ಎಯಲ್ಲಿ ದ್ವೇಷದ ರಾಜಕೀಯ ಬೆರೆತು ಹೋಗಿದೆ. ಒಂದು ಕಾಲಕ್ಕೆ ಮೆರೆಯುತ್ತಿದ್ದ ಜಿಯಾ-ಉಲ್ -ಹಕ್ ಅವರು, ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ನ್ಯಾಯಾಲಯದ ಮೂಲಕ ನೇಣುಗಂಬಕ್ಕೆ ಕಳುಹಿಸಿದರು. ಇವರ ಪರಸ್ಪರ ದ್ವೇಷದ ಭೀಕರತೆಯನ್ನು ನೆನೆದರೆ ಮೈ ‘ಜುಂ’ ಎನ್ನುತ್ತದೆ.

ಇನ್ನು, 2022ರಲ್ಲಿ ಅಂದಿನ ಪ್ರಧಾನಿ ಇಮ್ರಾನ್ ಖಾನ್‌ರನ್ನು ಕೆಳಗಿಳಿಸಿ ಜೈಲಿಗೆ ಅಟ್ಟಲಾಯಿತು. ಇಮ್ರಾನ್‌ರು ಹೊರಗೇ ಬರಲಾಗದಷ್ಟು ಮೊಕದ್ದಮೆಗಳನ್ನು ಅವರ ಮೇಲೆ ಹಾಕಲಾಗಿದೆ. ಬಲೂಚಿ ವಿಮೋಚನಾ ಹೋರಾಟಗಾರರು ಮತ್ತು ಪಾಕಿಸ್ತಾನದ ಸೇನೆಯ ನಡುವಿನ ಸಂಘರ್ಷ ಮತ್ತು ಸಾವು-ನೋವು ದಿನನಿತ್ಯದ ಸುದ್ದಿಯಾಗಿಬಿಟ್ಟಿದೆ. ಒಟ್ಟಿನಲ್ಲಿ ಅರಾಜಕತೆಯಿಂದಾಗಿ ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿದೆ.

2022ರಲ್ಲಿ ಶ್ರೀಲಂಕಾ ದೇಶವು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತು. ವಿದೇಶಿ ವಿನಿಮಯ ಖಾಲಿ ಯಾಗಿ, ಇಂಧನ ಖರೀದಿಸಲೂ ಹಣವಿಲ್ಲದಂತಾಯಿತು. ಅಂದಿನ ರಾಷ್ಟ್ರಾಧ್ಯಕ್ಷ ಗೊಟಬಯ ರಾಜಪಕ್ಸೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಶುರುವಾಯಿತು. ನಾಗರಿಕರ ಉಗ್ರ ಪ್ರತಿಭಟನೆಗೆ ಬೆದರಿದ ಸಚಿವ ಸಂಪುಟದ 26 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜನಾಕ್ರೋಶವು ರಾಜಕೀಯ ನಾಯಕತ್ವದ ವಿರುದ್ಧ ತಿರುಗಿತು, ಪ್ರತಿಭಟನೆ ಹಿಂಸಾರೂಪವನ್ನು ತಳೆಯಿತು. ಪರಿಸ್ಥಿತಿ ವಿಕೋಪಕ್ಕೆ ತಲುಪಿದಾಗ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತು, ಪ್ರಾಣ ಉಳಿದರೆ ಸಾಕೆಂದು ಮಾಲ್ಡೀವ್ಸ್‌ಗೆ ಪರಾರಿಯಾದರು. 2024ರಲ್ಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಸರಕಾರದ ಮೀಸಲಾತಿ ನೀತಿಯ ವಿರುದ್ಧ ಶುರುವಾದ ವಿದ್ಯಾರ್ಥಿಗಳ ಪ್ರತಿಭಟನೆ ಯು ಹಿಂಸೆಗೆ ತಿರುಗಿತು.

ಸರಕಾರದ ವಿರುದ್ಧ ಜನರು ದಂಗೆಯೆದ್ದರು. ನೂರಾರು ಜನರ ಸಾವು ಸಂಭವಿಸಿ ಬಾಂಗ್ಲಾದೇಶ ಹೊತ್ತಿ ಉರಿಯಿತು. ದೌರ್ಭಾಗ್ಯದ ಸಂಗತಿಯೆಂದರೆ, ಆಡಳಿತಾರೂಢರ ವಿರುದ್ಧದ ಪ್ರತಿಭಟನೆಯು ಮೂಲಭೂತವಾದಿಗಳ ಹಿಡಿತಕ್ಕೆ ಸಿಕ್ಕಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮನೆ-ಮಂದಿರಗಳ ಮೇಲೆ ದಾಳಿಗಳಾದವು.

ಸಾವಿರಾರು ಹಿಂದೂಗಳು ಅಸಹಾಯಕರಾಗಿ ನಾನಾ ಸಂಕಟವನ್ನು ಅನುಭವಿಸಬೇಕಾಗಿ ಬಂತು. ಜನಾಕ್ರೋಶಕ್ಕೆ ಮಣಿದ ಪ್ರಧಾನಿ ಶೇಖ್ ಹಸೀನಾರು ದೇಶವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆಯಬೇಕಾಗಿ ಬಂತು. ನೇಪಾಳದ ‘ಜೆನ್-ಝೆಡ್’ ಪೀಳಿಗೆಯ ಯುವಜನರು, ಅಧಿಕಾರಸ್ಥರ ಭ್ರಷ್ಟಾಚಾರ, ಅವರಿಂದ ಸೃಷ್ಟಿಯಾದ ವ್ಯಾಪಕ ನಿರುದ್ಯೋಗ ಸಮಸ್ಯೆಯಿಂದ ಬಳಲಿ ಬೆಂಡಾಗಿ ದ್ದರು.

ಅಲ್ಲಿನ ಸರಕಾರವು ಯುವಜನರ ಭಾವನೆಯನ್ನು ಕಡೆಗಣಿಸಿ, ಅವರ ದನಿಯನ್ನು ಅಡಗಿಸಲು ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿತು. ಇದರಿಂದಾಗಿ ಯುವಜನರ ಸಹನೆಯ ಕಟ್ಟೆಯೊಡೆದು, ಅವರು ಬೀದಿಗಿಳಿದು ಅತ್ಯುಗ್ರವಾಗಿ ಪ್ರತಿಭಟಿಸಿದರು. ಪ್ರತಿಭಟನೆಯು ನಿಯಂತ್ರಣ ವನ್ನು ಕಳೆದುಕೊಂಡ ಕಾರಣದಿಂದಾಗಿ ಮಾಜಿ ಉಪಪ್ರಧಾನಿಗಳ ಪತ್ನಿಯ ಜೀವಂತ ದಹನ ವಾಯಿತು.

ಹಣಕಾಸು ಸಚಿವರನ್ನು ಅಟ್ಟಾಡಿಸಿಕೊಂಡು ಹೊಡೆಯಲಾಯಿತು. ಸಂಸತ್ ಭವನ ಮತ್ತು ಸರ್ವೋಚ್ಚ ನ್ಯಾಯಾಲಯದ ಕಟ್ಟಡಗಳು ಅಗ್ನಿಗಾಹುತಿಯಾದವು. ಎರಡು ದಿನಗಳ ಹೋರಾಟವು ನೇಪಾಳದ ಇತಿಹಾಸವನ್ನೇ ಬದಲಿಸಿ ಬಿಟ್ಟಿತು. ತತ್ಪರಿಣಾಮವಾಗಿ, ಪ್ರಧಾನಿ ಕೆ.ಪಿ.ಓಲಿ ಅವರು ದೇಶವನ್ನು ತೊರೆದು ಪರಾರಿಯಾಗುವಂಥ ಪರಿಸ್ಥಿತಿ ಸೃಷ್ಟಿಯಾಯಿತು.

ಇದು ಪ್ರಸಕ್ತ ವರ್ಷದಲ್ಲಿ ನೇಪಾಳದಲ್ಲಾದ ಬೆಳವಣಿಗೆ. ಒಟ್ಟಿನಲ್ಲಿ, ಭಾರತದ ನೆರೆಹೊರೆ ದೇಶ ಗಳಲ್ಲಿ ಪದೇಪದೆ ರಾಜಕೀಯ ಅಸ್ಥಿರತೆ ಸಂಭವಿಸುತ್ತಿರುವುದು ದುರ್ದೈವದ ಸಂಗತಿ. ಭಾರತದ ಮೇಲೂ ಇದರ ಪ್ರಭಾವ ಉಂಟಾಗುತ್ತಿದೆ. ಅಕ್ರಮ ವಲಸಿಗರು ಪರಿಸ್ಥಿತಿಯ ದುರ್ಲಾಭ ಪಡೆದು, ಗಡಿದಾಟಿ ಬಂದು, ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿದ್ದಾರೆ.

ಹೀಗೆ ಅಕ್ರಮವಾಗಿ ನುಸುಳಿ ಬಂದವರಿಗೆ ಆಶ್ರಯ ನೀಡುವವರು ನಮ್ಮಲ್ಲಿ ಸಾಕಷ್ಟಿದ್ದಾರೆ. ವೋಟಿ ಗೋಸ್ಕರ ಅವರಿಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಕೊಡಿಸಲು ಕೆಲವು ರಾಜಕೀಯ ಪಕ್ಷಗಳು ಪೈಪೋಟಿಗೆ ನಿಂತಿರುವುದು ಕಟುಸತ್ಯ. ಮತದಾನದ ಮೂಲಕ ನಮ್ಮ ಹಕ್ಕು ಚಲಾಯಿಸಿ, ಅಧಿಕಾರಸ್ಥರ ಭ್ರಷ್ಟಾಚಾರ, ಸ್ವಜನಪಕ್ಷಪಾತಗಳನ್ನು ಕಿತ್ತೊಗೆದು, ಸರ್ವಾಧಿಕಾರಿ ಆಡಳಿತಗಳನ್ನು ಬದಲಾಯಿಸುವ ಸುಸಂಸ್ಕೃತಿಯ ನಾಡು ನಮ್ಮದು.

1977ರಲ್ಲಿ, ಇಂದಿರಾ ಗಾಂಧಿಯವರ ದಮನಕಾರಿ ಸರಕಾರವನ್ನು ಮತದಾನದ ಮೂಲಕ ಗುಡಿಸಿ ಬಿಸಾಡಲಾಯಿತು. ಆದರೆ ಅದೇ ಜನರು 1980ರಲ್ಲಿ, ದೇಶದ ಹಿತವನ್ನು ಕಡೆಗಣಿಸಿ ಕಚ್ಚಾಟದಲ್ಲಿ ತೊಡಗಿ ರಾಜಕೀಯ ಅಸ್ಥಿರತೆಯನ್ನು ಹುಟ್ಟುಹಾಕಿದ್ದ ಜನತಾಪಾರ್ಟಿಯ ಸರಕಾರವನ್ನು ಕಿತ್ತೆಸೆದು, ತಾವೇ ದೂರ ತಳ್ಳಿದ್ದ ಇಂದಿರಾ ಗಾಂಧಿಯವರನ್ನು ಮತ್ತೆ ಅಧಿಕಾರಕ್ಕೆ ತಂದರು.

2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿತ್ತು, ಭಯೋತ್ಪಾದಕರ ಉಪಟಳವನ್ನು ನಿಯಂತ್ರಿಸಲು ಸೋತಿತ್ತು. ವಸೂಲಾಗದ ಸಾಲದ ಪ್ರಮಾಣವು ಮೇರೆ ಮೀರಿ, ಆರ್ಥಿಕ ಸಂಕಟ ತೀವ್ರವಾಗಿ, ಬ್ಯಾಂಕಿಂಗ್ ವ್ಯವಸ್ಥೆಯು ಕುಸಿಯುವ ಹಂತಕ್ಕೆ ತಲುಪಿದಾಗ, 2014ರ ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದರು.

ಕಾಂಗ್ರೆಸ್ಸಿಗರು ಮತ್ತು ‘ಮೋದಿ-ವಿರೋಧಿ’ ಶಕ್ತಿಗಳು, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಯನ್ನು ಮಣಿಸಲು ಹರಸಾಹಸಪಟ್ಟು ಅಕ್ಷರಶಃ ದಿಕ್ಕೆಟ್ಟವರಾಗಿದ್ದಾರೆ. ಅವರು ಉರುಳಿಸಿದ ದಾಳಗಳು ಅವರಿಗೇ ಉರುಳಾಗಿ ಪರಿಣಮಿಸಿವೆ. ಮೋದಿಯವರನ್ನು ಕಟ್ಟಿ ಹಾಕಲು ಹೂಡಿದ ತಂತ್ರಗಾರಿಕೆಗಳೇ ಮೋದಿಯವರನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಯಾವುದೇ ಕುತಂತ್ರ, ಷಡ್ಯಂತ್ರ ಗಳು ಮೋದಿಯವರ ಸರಕಾರವನ್ನು ಅಲುಗಾಡಿಸಲು ವಿಫಲವಾಗಿವೆ.

ಹೀಗಾಗಿ ‘ಮೋದಿ-ವಿರೋಧಿ’ ಶಕ್ತಿಗಳು ಮಣಿಸುವ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಇದೀಗ ಅವರು ಮೋದಿಯವರ ವಿರುದ್ಧ ಮತ್ತೊಂದು ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಭ್ರಷ್ಟಾಚಾರ, ದುರಾ ಡಳಿತ ಮುಂತಾದ ಕಾರಣಗಳಿಂದಾಗಿ ನೆರೆರಾಷ್ಟ್ರಗಳಲ್ಲಿ ಅಲ್ಲಿನ ಜನರು ಸರಕಾರದ ವಿರುದ್ಧ ಬಂಡಾಯವೆದ್ದರೆ, ಇವರು ಕೂಡಲೇ ಮುಗಿಬಿದ್ದು ‘ಮುಂದಿನ ಸರದಿ ಭಾರತದ್ದು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಬಂಡಾಯವೇಳಲು ಜನರನ್ನು ಪ್ರಚೋದಿ ಸುವ ಅಪಾಯಕಾರಿ ಚಟುವಟಿಕೆಗೆ ಮುಂದಾಗಿದ್ದಾರೆ.

ನೇರವಾಗಿ ಇದರ ನೇತೃತ್ವವನ್ನು ವಹಿಸುವ ಧೈರ್ಯವಿಲ್ಲದ ಕಾಂಗ್ರೆಸ್ಸಿಗರು, ತಮ್ಮ ಟ್ರೋಲ್‌ಗಳ ಮೂಲಕ ಅಥವಾ ಮೋದಿಯವರನ್ನು ಸದಾ ವಿರೋಧಿಸುವ ಖಾತೆಗಳ ಮೂಲಕ ಈ ‘ಮಹತ್ಕಾರ್ಯ’ಕ್ಕೆ ಇಳಿದಿದ್ದಾರೆ, ತನ್ಮೂಲಕ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕ ಉದಿತ್ ರಾಜ್, ಸಂಜಯ್ ಝಾ, ಶಿವಸೇನೆಯ ನಾಯಕ ಸಂಜಯ್ ರಾವತ್ ಮುಂತಾದವರ ಪಾತ್ರ ಗಮನಾರ್ಹವಾಗಿದೆ.

ಸ್ವತಃ ರಾಹುಲ್ ಗಾಂಧಿಯವರು, ಮತದಾರರ ಪಟ್ಟಿಯ ದೋಷವನ್ನು ‘ಮತಗಳ್ಳತನ’ ಎಂದು ಬಿಂಬಿಸಿ, ನಮ್ಮ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳುಮಾಡಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು ‘ಸತ್ತ ಆರ್ಥಿಕತೆ’ ಎಂದು ಲೇವಡಿ ಮಾಡಿದರೆ, ರಾಹುಲರು ಅದನ್ನು ಬೆಂಬಲಿಸುತ್ತಾರೆ.

ದಿನಗಳೆದಂತೆ ಅವರ ನಕಾರಾತ್ಮಕ ನಡೆ ಸಾಮಾನ್ಯವಾಗುತ್ತಿದೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ನಾಯಕರು ನರೇಂದ್ರ ಮೋದಿಯವರ ನಾಯಕತ್ವದ ಮುಂದೆ ಮಂಕಾಗಿದ್ದಾರೆ. ಮೋದಿ ಯವರನ್ನು ದೂಷಿಸಿ ದೂಷಿಸಿ, ಬಳಲಿ ಬೆಂಡಾಗಿರುವ ಕಾಂಗ್ರೆಸ್ಸಿಗರು, ಮೃತಪಟ್ಟಿರುವ ಅವರ ತಾಯಿಯವರನ್ನೂ ಹೀಯಾಳಿಸುವಂಥ ಹುಂಬತನವನ್ನು ಈಗ ತೋರಿದ್ದಾರೆ.

‘ಭಾರತ-ವಿರೋಧಿ’ಗಳು ಆಧಾರರಹಿತ ಭ್ರಷ್ಟಾಚಾರ ಆರೋಪಗಳ ಮೂಲಕ ಜನರನ್ನು ಎತ್ತಿಕಟ್ಟಿ, ಅಂತಿಮವಾಗಿ ಅರಾಜಕತೆಯನ್ನು ಸೃಷ್ಟಿಸುವ ಅತಿರೇಕದ ಹುನ್ನಾರಕ್ಕೆ ಮುಂದಾಗಿದ್ದಾರೆ. ಅಧಿಕಾರದ ಹಪಾಹಪಿಯಿಂದಾಗಿ, ‘ವಿಕಸಿತ ಭಾರತ’ದ ಕನಸಿಗೆ ಕೊಳ್ಳಿಯಿಡಲೂ ಅವರು ಹಿಂಜರಿ ಯುತ್ತಿಲ್ಲ. ಇನ್ನು ಮುಂದೆ ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ...

(ಲೇಖಕರು ಬಿಜೆಪಿಯ ವಕ್ತಾರರು)