ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rohith Kumar H G Column: ಕೋವಿಡ್-19 ಲಸಿಕೆಯಿಂದಲೇ ಹೃದಯಾಘಾತವಾಗುತ್ತಿದೆಯೇ?

ಮಧುಮೇಹದಂತೆ ಕೋವಿಡ್ ಅನ್ನು ಸಹ ಹೃದಯ ಸಂಬಂಧಿತ ರೋಗಗಳಿಗೆ ಅಪಾಯಕಾರಿ ಅಂಶ ವೆಂದು ಪರಿಗಣಿಸಬಹುದು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಕೋವಿಡ್‌ ನಿಂದಲೇ ಹೃದಯಸಂಬಂಧಿ ರೋಗಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಲಭಿಸಿದೆ.

ಕೋವಿಡ್-19 ಲಸಿಕೆಯಿಂದಲೇ ಹೃದಯಾಘಾತವಾಗುತ್ತಿದೆಯೇ?

Profile Ashok Nayak Jul 12, 2025 7:37 PM

ಹೃದಯವೀಣೆ

ಡಾ.ರೋಹಿತ್‌ ಕುಮಾರ್‌ ಎಚ್.ಜಿ

ಹಾಸನದಲ್ಲಿ 40 ದಿನಗಳ ಅವಧಿಯಲ್ಲಿ 22 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ರಾಜ್ಯಾದ್ಯಂತದ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. ಅದರಲ್ಲೂ, ಮೃತರಲ್ಲಿ 13 ಮಂದಿ 45 ವರ್ಷದೊಳಗಿನವರಾಗಿರುವುದು (ಐದು ಮಂದಿ 19-25 ವರ್ಷದೊಳಗಿನವರು, ಎಂಟು ಮಂದಿ 25-45 ವರ್ಷದೊಳಗಿನವರು) ಯುವಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ‘ಇದು ಕರೋನಾ ಸಂಬಂಧಿತವಾದುದು’ ಎನ್ನುವುದು ಹಲವರ ವಾದ.

‘ಕೋವಿಡ್-19 ಲಸಿಕೆಯ ಅಡ್ಡ ಪರಿಣಾಮ ಇರಬಹುದು’ ಎನ್ನುವುದು ಇನ್ನೂ ಹಲವರ ಅನುಮಾನ. ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ಸರಕಾರವು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ರವೀಂದ್ರನಾಥ್ ರವರ ಅಧ್ಯಕ್ಷತೆಯಲ್ಲಿ ರಚಿಸಿದ ತಜ್ಞ ಸಮಿತಿಯು ತನ್ನ ವರದಿಯನ್ನು ಇದೀಗ ಬಿಡುಗಡೆ ಮಾಡಿದೆ.

ಅದರೆ, ಇಲ್ಲಿಯವರೆಗೆ ವಿಜ್ಞಾನಿಗಳು ಕೈಗೊಂಡಿರುವ ಸಂಶೋಧನೆಗಳು ಈ ಬಗ್ಗೆ ಏನು ಹೇಳುತ್ತವೆ? ಕರೋನಾ ಲಸಿಕೆಗಳಿಂದ ಹೃದಯಾಘಾತವಾಗುತ್ತಿರುವುದು ನಿಜವೇ? ಹಾಗಿದ್ದರೆ, ಲಸಿಕೆ ಪಡೆದಿರುವ ನಾವೆ ಹೃದಯಾಘಾತಕ್ಕೆ ಒಳಗಾಗುವ ಅಪಾಯದಲ್ಲಿದ್ದೇವೆಯೇ? ತಜ್ಞ ಸಮಿತಿಯ ವರದಿಯ ವಿವರವನ್ನು ವಿಶ್ಲೇಷಿಸುವ ಜತೆಗೆ ಈ ಕುರಿತು ಪ್ರಕಟವಾಗಿರುವ ಸಂಶೋಧನೆಗಳ ಆಧಾರಿತ ವರದಿ ಇಲ್ಲಿದೆ.

ಇದನ್ನೂ ಓದಿ: Vishweshwar Bhat Column: ಏರ್‌ ಸ್ಪೇಸ್‌ ಎಂದರೇನು ?

ಅಮೆರಿಕದ ಸಂಶೋಧಕರ ವರದಿ

ಅಮೆರಿಕದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ (NIH)‌ ಸಂಸ್ಥೆಯ ಅನುದಾನದಿಂದ ಕೋವಿಡ್ -19ರ ಮೊದಲನೇ ಅಲೆಯ ಸಮಯದಲ್ಲಿ ಸೋಂಕಿತರಾದ ವ್ಯಕ್ತಿಗಳ ಮೇಲೆ ಕೈಗೊಂಡ ಅಧ್ಯಯನವು ಕೋವಿಡ್-19 ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದೆ.

ಲಾಸ್ ಏಂಜಲೀಸ್‌ನ ಯುನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ ಕೇಕ್ ಸ್ಕೂಲ್ ಆಫ್‌ ಮೆಡಿಸಿನ್‌ನ ಸಂಶೋಧಕರು‌ 2024ರಲ್ಲಿ ಪ್ರಕಟಿಸಿದ ಈ ಅಧ್ಯಯನವು ಕೋವಿಡ್-19ರಿಂದ ಸೋಂಕಿತರಾಗಿ ಯಾವುದೇ ಕೋವಿಡ್ ಲಸಿಕೆ ಪಡೆಯದ ವ್ಯಕ್ತಿಗಳಲ್ಲಿ ಹೃದಯಾಘಾತ, ಸ್ಟ್ರೋಕ್ ಮತ್ತು ಮರಣದ ಸಾಧ್ಯತೆಗಳು ಹೆಚ್ಚಿವೆ ಎಂದು ನಿರೂಪಿಸಿದೆ. ಅಲ್ಲದೇ, ಈ ಸಮಸ್ಯೆಗಳು ದೀರ್ಘಾ ವಧಿಯವರೆಗೆ ಇರಬಹುದು ಎಂಬುದನ್ನು ಸಹ ಈ ಅಧ್ಯಯನ ಸೂಚಿಸಿದೆ.

ಇಂಗ್ಲೆಂಡಿನ ಯುಕೆ ಬಯೋಬ್ಯಾಂಕ್‌ನ 10000ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಹಾಗೂ 2 ಲಕ್ಷಕ್ಕೂ ಹೆಚ್ಚು ಆರೋಗ್ಯವಂತ ವ್ಯಕ್ತಿಗಳು ಭಾಗವಹಿಸಿದ ಈ ಅಧ್ಯಯನದಲ್ಲಿ, ಗಂಭೀರ ಗುಣ ಲಕ್ಷಣವುಳ್ಳ ಕೋವಿಡ್-19 ಹೊಂದಿದ್ದವರಲ್ಲಿ ಹೃದಯಾಘಾತ ಅಥವಾ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ನಾಲ್ಕು ಪಟ್ಟು ಅಧಿಕವಿರುವುದು ಗೊತ್ತಾಗಿದೆ.

ಕುತೂಹಲಕಾರಿ ಅಂಶವೆಂದರೆ, ಸೋಂಕಿತರ ರಕ್ತದ ಗುಂಪಿಗೂ, ಅವರು ಎದುರಿಸುವ ಹೃದಯಾ ಘಾತದ ಅಪಾಯದ ಮಟ್ಟಕ್ಕೂ ಸಂಬಂಧವಿರುವುದು. ‘ಎ’, ‘ಬಿ’ ಅಥವಾ ‘ಎಬಿ’ ರಕ್ತದ ಗುಂಪು ಹೊಂದಿದವರಿಗೆ ಗಂಭೀರ ಸ್ವರೂಪದ ಹೃದಯ ಸಂಬಂಧಿತ ಆಘಾತಗಳಾಗುವ ಸಾಧ್ಯತೆ ಹೆಚ್ಚಿದ್ದು, ‘ಒ’ ರಕ್ತದ ಗುಂಪು ಹೊಂದಿದವರಲ್ಲಿ ಇಂಥ ಸಂಭವ ಅತ್ಯಂತ ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಇದು ಕೋವಿಡ್-19ರಿಂದಾಗುವ ಪರಿಣಾಮಗಳ ಮಟ್ಟವು ಅನುವಂಶೀಯ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಸೂಚಿಸಿದೆ. ಅಲ್ಲದೆ, ಮಧುಮೇಹದಂತೆ ಕೋವಿಡ್ ಅನ್ನು ಸಹ ಹೃದಯ ಸಂಬಂಧಿತ ರೋಗಗಳಿಗೆ ಅಪಾಯಕಾರಿ ಅಂಶವೆಂದು ಪರಿಗಣಿಸಬಹುದು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಕೋವಿಡ್‌ನಿಂದಲೇ ಹೃದಯಸಂಬಂಧಿ ರೋಗ ಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಲಭಿಸಿದೆ.

ವಿಶ್ವವಿದ್ಯಾಲಯದ ವಿಜ್ಞಾನಿಗಳ ವರದಿ: ದಕ್ಷಿಣ ಕೊರಿಯಾದ ಯೋನ್ಸೆ ವಿಶ್ವವಿದ್ಯಾಲಯದ ವಿಜ್ಞಾನಿಗಳು 33 ಲಕ್ಷಕ್ಕೂ ಅಧಿಕ ಜನರ ಮಾಹಿತಿಯನ್ನು ಬಳಸಿ ಕಳೆದ ವರ್ಷ ಪ್ರಕಟಿಸಿದ ಅಧ್ಯಯನದಲ್ಲಿ ತೀವ್ರ ಹೃದಯರೋಗದ ಅಪಾಯದ ಮೇಲೆ ಕೋವಿಡ್-19 ಸೋಂಕು ಮತ್ತು ಲಸಿಕೆಯು ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿಶ್ಲೇಷಿಸಿದ್ದಾರೆ.

ಇದು ಸಹ ಅಮೆರಿಕ ವಿಜ್ಞಾನಿಗಳ ಅಧ್ಯಯನದಂತೆ ಕೋವಿಡ್-19 ಸೋಂಕಿತರಲ್ಲದವರಿಗೆ ಹೋಲಿಸಿದರೆ, ಸೋಂಕಿತರಲ್ಲಿ ಹೃದಯರೋಗದ ಸಮಸ್ಯೆ ಹೆಚ್ಚು ಎಂದು ಮತ್ತೊಮ್ಮೆ ನಿರೂಪಿಸಿದೆ.

mRNA ಲಸಿಕೆ ಪಡೆದವರಲ್ಲಿ ಹೃದಯದ ಸ್ನಾಯುಗಳಲ್ಲಿ ಮತ್ತು ಹೃದಯವಿರುವ ಚೀಲದಲ್ಲಿ ಉರಿಯೂತಗಳು (ಮಯೊಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್), ಹೃದಯ ಬಡಿತದಲ್ಲಿ ಏರುಪೇರು ಮತ್ತು ಹೃದಯಾಘಾತಗಳಂಥ ತುರ್ತು ಸಮಸ್ಯೆಗಳು ಕಂಡುಬಂದಿವೆ. ಇವು ಗಮನಾರ್ಹವಾಗಿ ಲಸಿಕೆ ಪಡೆದ ಯುವಜನರಿಗೆ ಹೆಚ್ಚು ಬಾಧಿಸಿವೆ. ಆದರೆ, ಈ ಎಲ್ಲಾ ಸಮಸ್ಯೆಗಳು ಮೊದಲ ಡೋಸ್ ಲಸಿಕೆ ಪಡೆದ 19 ರಿಂದ 21 ದಿನಗಳಲ್ಲಿ ಕೋವಿಡ್ ಸೋಂಕಿತರಾದ ವ್ಯಕ್ತಿಗಳಲ್ಲಿ ಮಾತ್ರ ಕಾಣಿಸಿವೆ.

ಲಸಿಕೆ ಪಡೆದು 21 ದಿನದೊಳಗೆ ಸೋಂಕಿತರಾಗದವರಲ್ಲಿ ಈ ಸಮಸ್ಯೆಗಳು ಕಂಡುಬಂದಿಲ್ಲ. ಲಸಿಕೆ ಯಿಂದಲೇ ಈ ಸಮಸ್ಯೆಗಳು ಬರುವುದಾಗಿದ್ದರೆ, ಸೋಂಕು ಇಲ್ಲದವರಲ್ಲಿಯೂ ಹೃದಯ ಸಮಸ್ಯೆ ಕಾಣಿಸಬೇಕಿತ್ತು. ಹಾಗಾಗಿ, ಇದು ಲಸಿಕೆಯಿಂದಲೇ ಬಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಅಧ್ಯಯನದಲ್ಲಿ ಲಭ್ಯವಾಗಿಲ್ಲ. ಹಾಗಾಗಿ, ಲಸಿಕೆಗೂ ಹೃದಯ ಸಮಸ್ಯೆಗೂ ಸಂಬಂಧ ವಿಲ್ಲವೆಂದು ಈ ಅಧ್ಯಯನದಿಂದ ಹೇಳಬಹುದಾಗಿದೆ.

ಇಂಗ್ಲೆಂಡ್ ವಿಜ್ಞಾನಿಗಳ ಅಧ್ಯಯನ: ಇಂಗ್ಲೆಂಡಿನ 4.5 ಕೋಟಿ ಜನರನ್ನು ಒಳಗೊಂಡ ಒಂದು ಮಹತ್ವದ ಅಧ್ಯಯನದಲ್ಲಿ, ವಿವಿಧ ಬಗೆಯ ಕೋವಿಡ್-19 ಲಸಿಕೆಗಳ ಮೂರು (ಮೊದಲ, ಎರಡನೇ ಮತ್ತು ಬೂಸ್ಟರ್) ಡೋಸ್‌ಗಳ ಸಂದರ್ಭದಲ್ಲಿ ಎದುರಾಗುವ ಹೃದಯ ಹಾಗೂ ರಕ್ತನಾಳ ಸಂಬಂಧಿತ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಕೋವಿಶೀಲ್ಡ್ ( ChAdOx1), ಫೈಜರ್, ಮತ್ತು ಮೊಡರ್ನಾ ಲಸಿಕೆಗಳನ್ನು ಪಡೆದವರ ದತ್ತಾಂಶಗಳನ್ನು ಈ ಅಧ್ಯಯನದಲ್ಲಿ ವಿಜ್ಞಾನಿಗಳು ಕಲೆ ಹಾಕಿದ್ದಾರೆ.

2024ರಲ್ಲಿ ಪ್ರಕಟಗೊಂಡ ಈ ಅಧ್ಯಯನವೂ ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ಅಧ್ಯಯನದಂತೆ, ಲಸಿಕೆಗಳು ಕೋವಿಡ್-೧೯ ವೈರಸ್‌ನಿಂದ ರಕ್ಷಣೆ ನೀಡುವುದರ ಜತೆಗೆ ಹೃದಯಾ ಘಾತ, ಸ್ಟ್ರೋಕ್‌ಗಳು ಮತ್ತು ರಕ್ತದ ಹೆಪ್ಪುಗಟ್ಟುವಿಕೆಯಂಥ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತವೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ.

ಈ ಅಧ್ಯಯನದಲ್ಲಿ ಲಸಿಕೆಗಳು ಕೆಲವು ನಿರ್ದಿಷ್ಟ ಅಪರೂಪದ ದುಷ್ಪರಿಣಾಮಗಳನ್ನು ತೋರಿಸಿ ದ್ದವು. ಲಸಿಕೆಯ ವಿಧ ಮತ್ತು ಡೋಸ್ ಸಂಖ್ಯೆಯ ಆಧಾರದ ಮೇಲೆ ಹೃದಯ ಸಂಬಂಧಿತ ಪರಿಣಾಮಗಳಲ್ಲಿ ವ್ಯತ್ಯಾಸಗಳು ಇದ್ದವು. ಉದಾಹರಣೆಗೆ, ಆಡಿನೋವೈರಸ್ ಆಧಾರಿತ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರಲ್ಲಿ ಅಪರೂಪದ ರೀತಿಯ ಪ್ಲೇಟ್ಲೆಟ್‌ಗಳ ಕೊರತೆಯೊಂದಿಗೆ‌ ರಕ್ತದ ಹೆಪ್ಪು ಗಟ್ಟುವಿಕೆ ಕಾಣಿಸಿತ್ತು. mRNA ಆಧಾರಿತ ಲಸಿಕೆಗಳಾದ ಫೈಜರ್ ( BNT-162b2) ಮತ್ತು ಮೊಡರ್ನಾ ( mRNA-1273) ಲಸಿಕೆಗಳು ಹೃದಯದ ಉರಿಯೂತಗಳಿಗೆ ಕಾರಣವಾದವು.

ಇದು ವಿಶೇಷವಾಗಿ ತರುಣರಲ್ಲಿ ಹೆಚ್ಚು ಕಾಣಿಸಿತ್ತು. ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಎರಡನೇ ಡೋಸ್ ಅಥವಾ ಬೂಸ್ಟರ್ ಡೋಸ್ ನಂತರದ ಮೊದಲ ವಾರದಲ್ಲಿ ಸಂಭವಿಸುತ್ತಿದ್ದವು. ಆದರೆ, ಈ ಮೂರು ಲಸಿಕೆಗಳನ್ನು ಪಡೆದು ೪ ವಾರಗಳು ಕಳೆದ ನಂತರ, ಈ ದುಷ್ಪರಿಣಾಮಗಳು ಕಡಿಮೆಯಾಗಿದ್ದಲ್ಲದೇ, ಲಸಿಕೆಗಳು ಹೃದಯಕ್ಕೆ ಹೆಚ್ಚು ರಕ್ಷಣೆಯನ್ನು ನೀಡಲಾರಂಭಿಸಿದವು.

ಒಟ್ಟಿನಲ್ಲಿ, ಕೋವಿಡ್-19 ಲಸಿಕೆಗಳು ಕೆಲವು ತಾತ್ಕಾಲಿಕ ಅಡ್ಡ ಪರಿಣಾಮಗಳನ್ನು ಹೊಂದಿ ದ್ದರೂ, ದೀರ್ಘಾವಧಿಯಲ್ಲಿ ಗಂಭೀರ ಹೃದಯ ಸಮಸ್ಯೆಗಳಿಂದ ರಕ್ಷಣೆ ನೀಡುತ್ತವೆ ಹಾಗೂ ಹೃದಯದ ಆರೋಗ್ಯಕ್ಕೆ ಸುರಕ್ಷಿತವಾಗಿವೆ ಎಂಬುದನ್ನು ಈ ಅಧ್ಯಯನ ದೃಢಪಡಿಸಿತು.

ಸ್ವೀಡನ್‌ನಲ್ಲಿನ ಸಂಶೋಧನೆ: 2025ರ ಜನವರಿಯಲ್ಲಿ ಪ್ರಕಟಗೊಂಡ, ಸ್ವೀಡನ್‌ನ 80 ಲಕ್ಷಕ್ಕೂ ಅಧಿಕ ಜನರನ್ನು ಒಳಗೊಂಡ ಸಂಶೋಧನೆಯು, ಕೋವಿಡ್-19 mRNA ಲಸಿಕೆ ಪಡೆದವರಲ್ಲಿ ಹೃದಯ ಸಂಬಂಧಿತ ಅಸ್ವಸ್ಥತೆಗಳು ಹೇಗೆ ಬಾಧಿ ಸುತ್ತವೆ ಎಂದು ಅಧ್ಯಯನ ನಡೆಸಿದೆ.

ಅದರಂತೆ, mRNA ಲಸಿಕೆಗಳಾದ ಫೈಜರ್ ( BioNTech) ಮತ್ತು ಮೊಡರ್ನಾ ( mRNA-1273) ಪಡೆದವರಲ್ಲಿ ಮೊದಲ ಹಾಗೂ ಎರಡನೇ ಡೋಸ್ ನಂತರ ಹೃದಯದ ಉರಿಯೂತ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಂಡವು. ಇದು ಸಹ ಇಂಗ್ಲೆಂಡ್ ನ ವರದಿಯಂತೆ ಹೆಚ್ಚಾಗಿ ಯುವಕರಲ್ಲಿ, ಅದರಲ್ಲೂ ಸಾಮಾನ್ಯವಾಗಿ ಲಸಿಕೆ ಪಡೆದ ನಂತರದ ಮೊದಲ ಎರಡು ವಾರಗಳಲ್ಲಿ ಸಂಭವಿಸಿತು.

ಆದರೆ, ಮೂರನೇ ಡೋಸ್ ನಂತರ ಈ ತೊಂದರೆ ಕಂಡುಬರಲಿಲ್ಲ. ಇದು ಲಸಿಕೆ ಪಡೆಯುವಿಕೆ ಮುಂದುವರಿದಂತೆ ತೀವ್ರ ಹೃದಯ ಸಂಬಂಽತ ಸಮಸ್ಯೆಗಳಾದ ಹೃದಯಾಘಾತ, ಹೃದಯ ವೈಫಲ್ಯ, ಸ್ಟ್ರೋಕ್ ಮತ್ತು ಇತರೆ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದನ್ನು ದೃಢೀಕರಿಸಿದೆ.

ಒಟ್ಟಾರೆಯಾಗಿ ಈ ಅಧ್ಯಯನವು, ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು, ವೈರಸ್ ನಿಂದ ಉಂಟಾ ಗುವ ಗಂಭೀರ ಹೃದಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿರುವುದನ್ನು ಮತ್ತೆ ಸ್ಪಷ್ಟಪಡಿಸಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕುರಿತಾದ ಅಧ್ಯಯನ:‌ ಭಾರತದಲ್ಲಿ ಹೆಚ್ಚಿನ ಜನರು ಪಡೆದಿರುವುದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು. ಇವುಗಳ ಬಗ್ಗೆ ಭಾರತದಲ್ಲಿ‌ ನಡೆದ ಅಧ್ಯಯನಗಳು ಏನು ಹೇಳುತ್ತವೆ? ಭಾರತದಲ್ಲಿ ಕೈಗೊಂಡ ಎರಡು ಪ್ರತ್ಯೇಕ ಅಧ್ಯಯನಗಳು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಪರಿಣಾಮಗಳ ಬಗ್ಗೆ ವಿವರಿಸಿವೆ.‌

ದೆಹಲಿ ಮೂಲದ ಒಂದು ಪ್ರಮುಖ ಆಸ್ಪತ್ರೆಯಲ್ಲಿ 1578 ಕೋವಿಡ್ ರೋಗಿಗಳನ್ನು ಆರು ತಿಂಗಳು ಗಳವರೆಗೆ ಅನುಸರಿಸಿ, ತೀವ್ರ ಹೃದಯ ಸಮಸ್ಯೆ ಎದುರಾಗುವ ಬಗ್ಗೆ ಕೈಗೊಂಡ ಅಧ್ಯಯನ ವನ್ನು 2023ರಲ್ಲಿ ಪ್ರಕಟಿಸಲಾಗಿದೆ. ಇವರಲ್ಲಿ ಶೇ.68.8ರಷ್ಟು ಜನರು ಲಸಿಕೆ ಪಡೆದವರಾಗಿದ್ದು, ಹೆಚ್ಚಿನವರು ಕೋವಿಶೀಲ್ಡ್ ಪಡೆದಿದ್ದರು. ಉಳಿದ ಶೇ.31.2ರಷ್ಟು ಜನರು ಯಾವುದೇ ಕೋವಿಡ್ ಲಸಿಕೆ ಪಡೆದಿರಲಿಲ್ಲ. ಲಸಿಕೆ ಪಡೆದ ನಂತರ‌ ತಕ್ಷಣವೇ ಹೃದಯಾಘಾತಗಳು ಸಂಭವಿಸಿದಂಥ ಯಾವುದೇ ಘಟನೆಗಳು ಕಂಡುಬರಲಿಲ್ಲ. ಲಸಿಕೆ ಪಡೆದ ಎಲ್ಲಾ ವಯೋಮಾನದ ಜನರಲ್ಲಿ ಮಧುಮೇಹ ಮತ್ತು ರಕ್ತದೊತ್ತಡಗಳಂಥ ಸಮಸ್ಯೆಗಳಿದ್ದಾಗಿಯೂ ಮರಣ ಪ್ರಮಾಣವು ಕಡಿಮೆ ವರದಿಯಾಯಿತು. ಆದರೆ, ಲಸಿಕೆ ಪಡೆಯದೇ ಇದ್ದವರಲ್ಲಿ ಮರಣ ಪ್ರಮಾಣವು ಹೆಚ್ಚಿತ್ತು.

ಇದರಿಂದ ಲಸಿಕೆಗಳು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ ಎಂಬುದಕ್ಕೆ ಪುರಾವೆ ಸಿಕ್ಕಂತಾ ಯಿತು. ಅಷ್ಟೇ ಅಲ್ಲದೆ, ಭಾರತದಲ್ಲಿ ಲಭ್ಯವಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಕೋವಿಡ್‌ ಸೋಂಕಿನ ತೀವ್ರತೆ ಕಡಿಮೆ ಮಾಡುವ ಮೂಲಕ ಸೋಂಕಿನಿಂದ ಉಂಟಾಗಬಹುದಾದ ಹೃದಯ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತವೆ ಎಂದು ತಿಳಿಯಿತು. ಆ ಮೂಲಕ ಈ ಲಸಿಕೆಗಳಿಂದ ಹೃದಯಾಘಾತಗಳ ಅಪಾಯವಿರಬಹುದು ಎಂಬ ಅನುಮಾನವನ್ನು ಈ ಅಧ್ಯಯನ ಸ್ಪಷ್ಟವಾಗಿ ಪರಿಹರಿಸಿತು.

ಭಾರತದಲ್ಲಿ ನಡೆದ ಇನ್ನೊಂದು ಅಧ್ಯಯನದಲ್ಲಿ ಕೋವಿಡ್ ಲಸಿಕೆ ಪಡೆದ ನಂತರ ಬರಬಹು ದಾದ ಗಂಭೀರ ಅಡ್ಡಪರಿಣಾಮಗಳ ಕುರಿತು ವರದಿ ಮಾಡಲಾಗಿದೆ. 2023ರಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆದ ಈ ಅಧ್ಯಯನದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದ ಒಟ್ಟು 1112 ಪ್ರಕರಣಗಳನ್ನು ಅಧ್ಯಯನ‌ ಮಾಡಲಾಗಿದೆ. ಲಸಿಕೆ ಪಡೆದ ಸುಮಾರು 18 ಪ್ರತಿಶತ ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಸ್ಟ್ರೋಕ್‌ನಂಥ ಸಮಸ್ಯೆಗಳು ಉಂಟಾದರೂ, ಈ ಸಮಸ್ಯೆಗಳಿಗೂ ಆಯಾ ವ್ಯಕ್ತಿಗಳು ಪಡೆದ ಲಸಿಕೆಗಳಿಗೂ ನೇರ ಸಂಬಂಧವಿಲ್ಲ ಎಂದು ವರದಿ ಯಾಗಿದೆ. ಹಾಗಾಗಿ, ಈ ಅಧ್ಯಯನವು ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಭಾರತೀಯ ಜನಸಂಖ್ಯೆಯಲ್ಲಿ ಸಾಮಾನ್ಯವಾಗಿ ಸುರಕ್ಷಿತವಾಗಿವೆ ಎಂಬುದನ್ನು ಒತ್ತಿ ಹೇಳುತ್ತದೆ.

ತಜ್ಞ ಸಮಿತಿಯ ವರದಿ: ಹಾಸನದಲ್ಲಿ ಹೃದಯಾಘಾತದಿಂದ ಹಲವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ನೀಡಿದ ನಿರ್ದೇಶನದಂತೆ ಶ್ರೀ ಜಯದೇವ ಹೃದಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ 45 ವರ್ಷದೊಳಗಿನ 251 ರೋಗಿಗಳು ಭಾಗವಹಿಸಿದ್ದರು. ಬಹುಪಾಲು ಮಂದಿ (249 ಜನ) ಲಸಿಕೆ ಪಡೆದವರಾಗಿದ್ದರು- 144 ಜನ ಕೋವಿಶೀಲ್ಡ್ ಹಾಗೂ 64 ಜನ ಕೋವ್ಯಾಕ್ಸಿನ್ ಪಡೆದಿದ್ದರು. ‌

ಉಳಿದ 52 ಮಂದಿಗೆ ತಾವು ಪಡೆದ ಲಸಿಕೆ ಯಾವುದು ಎಂಬುದರ ಅರಿವು ಅಥವಾ ನೆನಪು ಇರಲಿಲ್ಲ. ಲಸಿಕೆ ಪಡೆದವರಲ್ಲಿ ಒಟ್ಟು 180 ಮಂದಿ ಎರಡು ಡೋಸ್ ಮತ್ತು 17 ಮಂದಿ ಮೂರು ಡೋಸ್ ಪಡೆದಿದ್ದರು. ಕೇವಲ 19 ಮಂದಿಗೆ ಈ ಹಿಂದೆ ಕೋವಿಡ್ ಸೋಂಕು ಬಂದಿತ್ತು.

ಅಧ್ಯಯನದಲ್ಲಿದ್ದ ಹೆಚ್ಚಿನವರಿಗೆ ಮಧುಮೇಹ ಅಥವಾ ರಕ್ತದೊತ್ತಡದಂಥ, ಹೃದಯರೋಗಕ್ಕೆ ಕಾರಣವಾಗುವ ಸಮಸ್ಯೆಗಳಿದ್ದವು. 77 ಮಂದಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಯುವಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಹೃದಯರೋಗಗಳಿಗೂ ಮತ್ತು ಹಿಂದಿನ ಕೋವಿಡ್-19 ಸೋಂಕು ಅಥವಾ ಲಸಿಕೆ ಪಡೆದಿರುವಿಕೆಗೂ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ಈ ಅಧ್ಯಯನವು ಮತ್ತೊಮ್ಮೆ ಸಾಬೀತುಪಡಿಸಿದೆ.

ಅಲ್ಲದೆ, ಈಗ ಕಾಣಿಸಿಕೊಳ್ಳುತ್ತಿರುವ ಹೃದಯ ಸಮಸ್ಯೆಗೆ ಇನ್ನೂ ಗುರುತಿಸಲಾಗದ ಅಥವಾ ಈಗ ತಾನೇ ಹೊಸದಾಗಿ ಬೆಳೆಯುತ್ತಿರುವ ಅಂಶಗಳು ಕಾರಣವಾಗುತ್ತಿರಬಹುದೆಂದು ಅಧ್ಯಯನ ನಡೆಸಿದ ತಜ್ಞ ಸಮಿತಿ ಅಭಿಪ್ರಾಯಪಟ್ಟಿದೆ.

ತಜ್ಞ ಸಮಿತಿ ಅಂತಿಮವಾಗಿ ನೀಡಿರುವ ವರದಿಯಲ್ಲಿನ ಪ್ರಮುಖ ಅಂಶಗಳು ಇಂತಿವೆ:

ಹೃದಯ ಸಂಬಂಧಿತ ತುರ್ತು ಘಟನೆಗಳ ಇತ್ತೀಚಿನ ಏರಿಕೆಗೆ ಯಾವುದೇ ಏಕೈಕ ಕಾರಣವಿಲ್ಲ. ಆಯಾ ವ್ಯಕ್ತಿಯ ಜೀವನಕ್ರಮ, ಅನುವಂಶೀಯ ಕಾಯಿಲೆಗಳು ಹಾಗೂ ಪರಿಸರ ಸಂಬಂಧಿತ ಅಂಶಗಳು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಿವೆ.

ಮಧುಮೇಹ, ಧೂಮಪಾನ, ರಕ್ತದೊತ್ತಡ ಮತ್ತು ಇತರ ಸಂಪ್ರದಾಯಿಕ ಅಂಶಗಳೇ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಪ್ರಬಲ ಕಾರಣ. ಇತ್ತೀಚಿನ ಹೃದಯಾಘಾತಗಳಿಗೆ ಕೋವಿಡ್ ಅಥವಾ ಕೋವಿಡ್ ಲಸಿಕೆ ಮುಖ್ಯ ಕಾರಣವೆಂದು ನಂಬಲು ಸಾಕ್ಷ್ಯಾಧಾರಗಳಿಲ್ಲ.

ಈ ಹಿನ್ನೆಲೆಯಲ್ಲಿ, ಶಾಲಾ ಹಂತದಲ್ಲಿ ಹೃದಯ ತಪಾಸಣೆ, ಆರೋಗ್ಯ ಜಾಗೃತಿ ಅಭಿಯಾನಗಳು, ಯುವಜನರ ಸಾವು ಪ್ರಕರಣಗಳ ಶವಪರೀಕ್ಷೆ ಹಾಗೂ ಐಸಿಎಂಆರ್‌ನಂಥ ರಾಷ್ಟ್ರೀಯ ಸಂಸ್ಥೆಗಳ ಮೂಲಕ ದೊಡ್ಡ ಪ್ರಮಾಣದ ಬಹುಆಯಾಮದ ಸಂಶೋಧನೆಗಳಿಗಾಗಿ ನಿಧಿ ಒದಗಿಸುವಿಕೆ ಸೇರಿದಂತೆ ಹಲವಾರು ಸಾರ್ವಜನಿಕ ಆರೋಗ್ಯ ತಂತ್ರವನ್ನು ಶಿಫಾರಸು ಮಾಡಿದೆ. ಈ ಎಲ್ಲಾ ಅಧ್ಯಯನಗಳ ಮೂಲಕ ನಾವು ಅರಿಯಬೇಕಾಗಿರುವ ಅಂಶಗಳು ಹೀಗಿವೆ. ಮೊದಲಿಗೆ, ಕೋವಿಡ್ ಸೋಂಕು ಹೃದಯ ಸಂಬಂಧಿ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿರುವುದು ಹೌದು. ಆದರೆ, ಕೋವಿಡ್ ಲಸಿಕೆಗಳಿಂದ ಹೃದಯ ಸಮಸ್ಯೆ ಬರುವ ಸಾಧ್ಯತೆ ಕಡಿಮೆ. ಲಸಿಕೆಗಳ ಅಡ್ಡ ಪರಿಣಾಮ ಗಳು ಲಸಿಕೆ ಪಡೆದ ನಂತರ ಕೇವಲ ಅಲ್ಪ ಸಮಯದವರೆಗೆ (2 ವಾರದೊಳಗೆ) ಮಾತ್ರ ಕಂಡು ಬರುತ್ತವೆಯೇ ಹೊರತು ದೀರ್ಘಾವಧಿಯವರೆಗೆ ಇರುವುದು ಇಲ್ಲಿಯವರೆಗಿನ ಯಾವುದೇ ವರದಿಯಲ್ಲಿ ಕಂಡುಬಂದಿಲ್ಲ.

ಬದಲಾಗಿ, ಲಸಿಕೆಗಳು ಹೃದಯ ಸಂಬಂಧಿತ ರೋಗಗಳ ವಿರುದ್ಧ ರಕ್ಷಣಾತ್ಮಕವಾಗಿವೆ. ಲಸಿಕೆ ಪಡೆದವರು ಲಸಿಕೆಯನ್ನು ಪಡೆಯದವರಿಗಿಂತ ಹೆಚ್ಚು ಸುರಕ್ಷಿತರು. ಮೂರು ಡೋಸ್ ಲಸಿಕೆ ಪಡೆದವರಲ್ಲಿ ಕೋವಿಡ್ ಸಂಬಂಧಿತ ಹೃದಯ ಸಮಸ್ಯೆ ಕಾಣಿಸುವ ಸಾಧ್ಯತೆ ಅತ್ಯಂತ ಕಡಿಮೆ. ಆದರೆ, ಹೃದಯದ ಆರೋಗ್ಯವನ್ನು ಕಾಪಾಡಲು ಆರೋಗ್ಯಕರ ಆಹಾರ ಸೇವನೆ, ಉತ್ತಮ ಜೀವನಕ್ರಮ ಹೊಂದುವುದು ಅತ್ಯವಶ್ಯಕ.

ಕೊನೆಯದಾಗಿ, ಕಾಲಕಾಲಕ್ಕೆ ಹೃದಯ ತಪಾಸಣೆ ಕೈಗೊಳ್ಳುವುದು ಮುಖ್ಯವೇ ಹೊರತು, ಯಾವುದೇ ರೀತಿಯ ಭಯಕ್ಕೆ ಒಳಗಾಗುವ ಅವಶ್ಯಕತೆ ಖಂಡಿತಾ ಇಲ್ಲ.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)