ಬುದ್ದಿ ವೃಕ್ಷ
ಶಿವಪ್ರಸಾದ್ ಎ.
ಕೃತಕ ಬುದ್ಧಿಮತ್ತೆಯ ಬಗೆಗಿನ ಹೆಚ್ಚಿನ ಚರ್ಚೆ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿದೆ. ಹೊಸ ತಂತ್ರಜ್ಞಾನವನ್ನು ಪರಿಚಯಿಸಿದಾಗ ಸಾಮಾನ್ಯವಾಗಿ ಅದರ ಸಕಾರಾತ್ಮಕ ಅಂಶಗಳನ್ನು ಪ್ರಚಾರ ಮಾಡಲು ಕೆಲವು ಬಲವಾದ ಪ್ರತಿಪಾದಕರು ಟೊಂಕ ಕಟ್ಟಿ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ, ಸಿಲಿಕಾನ್ ವ್ಯಾಲಿಯ ತಂತ್ರeನ ಕಂಪನಿಗಳು ಅದರ ಸಮರ್ಥನೆ ಮಾಡುತ್ತಿವೆ.
ಈಗಾಗಲೇ ಕಾರ್ಮಿಕ ಮಾರುಕಟ್ಟೆಯ ಏರುಪೇರುಗಳು ಮತ್ತು ಇತರ ಕಪೋಲಕಲ್ಪಿತ ನಕಾರಾತ್ಮಕ ಸಾಧ್ಯತೆಗಳನ್ನು ಹಾಲಿವುಡ್‌ನ ಅನೇಕ ಹೊಸ ಚಲನಚಿತ್ರಗಳಲ್ಲಿ ಸ್ಪಷ್ಟವಾಗಿ ಬಿಂಬಿಸತೊಡಗಿ ದ್ದಾರೆ. ಸಾಮಾನ್ಯವಾಗಿ, ನಿಜವಾದ ಸಂಗತಿಯು ಎಲ್ಲಾ ಮಧ್ಯದಲ್ಲಿರುತ್ತದೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ, ಕಾರ್ಮಿಕ ಮಾರುಕಟ್ಟೆಗೆ ಕಡುಗತ್ತಲೆಯ ಭವಿಷ್ಯವಿದೆಯೆಂಬ ಸಾಮಾನ್ಯ ಸಂವಾದಗಳು ವ್ಯಾಪಕವಾಗಿವೆ.
ಉದಾಹರಣೆಗೆ, ನಿಕಟ ಭವಿಷ್ಯದಲ್ಲಿ, ಜನರು ತಮ್ಮ ಜೀವನದಲ್ಲಿ ಉದ್ಯೋಗದಲ್ಲಿರಲೇಬೇಕೆಂದು ಆಯ್ಕೆ ಮಾಡದೆ ಹೋದರೆ ಅವರು ಕೆಲಸ ಮಾಡಲೇಬೇಕಾದ ಪರಿಸ್ಥಿತಿಯಿರಲಾರದೆಂದೂ ಮತ್ತು ತಂತ್ರಜ್ಞಾನವು ಪರಿಣಾಮಕಾರಿಯಾಗಿ ಆ ಕೆಲಸಗಳನ್ನು ನೋಡಿಕೊಳ್ಳುತ್ತದೆಯೆಂದೂ ಸ್ಪಷ್ಟ ವಾಗುತ್ತದೆ. ಚರ್ಚೆಯ ಇನ್ನೊಂದು ತುದಿಯಲ್ಲಿ, ಯಂತ್ರಗಳು ಸಂಪೂರ್ಣವಾಗಿ ಮಾನವರ ಕೆಲಸಗಳನ್ನು ವಹಿಸಿಕೊಳ್ಳಬಹುದೆಂಬ ಅಹಿತಕರ ಸಲಹೆಗಳಿವೆ. ಕೆಲಸ ಮಾಡುತ್ತಿರು ವಾಗಲೇ ಕಲಿಯುತ್ತ, ಕೃತಕ ಬುದ್ಧಿಮತ್ತೆಯು ತನ್ನ ಕೌಶಲಗಳನ್ನು ನವೀಕರಿಸಿಕೊಂಡು ಕ್ರಿಯೆಗಳಿಗೆ ಕಾರಣವಾಗುವ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತ ಮಾನವರ ಬುದ್ಧಿಮತ್ತೆಯ ಅಗಾಧತೆಯನ್ನು ಮೀರಿ ಕಾರ್ಯ ನಿರ್ವಹಿಸುವ ಎಲ್ಲ ವಿಭಿನ್ನ ಸಾಧ್ಯತೆಗಳೂ ಈಗ ಕಾಣಿಸುತ್ತಿವೆ. ಈಗ ಕೆಲವು ಗೊಂದಲಮಯವಾದ ಪ್ರಶ್ನೆಗಳು ಉದ್ಭವಿಸುತ್ತವೆ.
ಇದನ್ನೂ ಓದಿ: Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್ ಗಳ ಪರಮ ಧ್ಯೇಯ !
ಕೃತಕ ಬುದ್ಧಿಮತ್ತೆಯ ಏಜೆಂಟ್‌ಗಳು ಹೆಚ್ಚು ಹೆಚ್ಚು ಮನುಷ್ಯರಂತಾಗುತ್ತ ಸಾಗಿದರೆ, ಅಜೈವಿಕ ಜೀವನದ ಹೊಸ ರೂಪವನ್ನು ಅವುಗಳು ಹುಟ್ಟುಹಾಕಬಹುದೇ? ದುಷ್ಟಬುದ್ಧಿಯನ್ನು ಹೊಂದಿ, ಕಿಡಿಗೇಡಿತನಕ್ಕೆ ಕಾರಣವಾಗಬಹುದೇ? ಅಂಥ ಜೀವನಕ್ರಮವು ವಿಕಾಸದ ಮುಂದಿನ ಹಂತವಾಗ ಬಹುದೇ? ಮಾನವರನ್ನು ಅದು ಹಿಂದಕ್ಕೆ ತಳ್ಳುತ್ತದೆಯೇ? ಮೊದಲಿಗೆ ಯಂತ್ರಗಳಿಗೆ ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ಅನಂತರ ಅವರು ಸಂಪೂರ್ಣವಾಗಿ ಅನಗತ್ಯರಾಗುತ್ತಾರೆಯೇ? ಈ ಎಲ್ಲ ಬದಲಾವಣೆಗಳು ಸಮಯ ತೆಗೆದುಕೊಳ್ಳುತ್ತವೆ.
ಆದರೆ ಅದು ಸಾಧ್ಯವೇ ಎಂಬುದು ನಿರ್ಣಾಯಕ ಅನಿಶ್ಚಿತತೆಯಲ್ಲ; ಬದಲಿಗೆ, ಎಷ್ಟು ವೇಗವಾಗಿ ಮತ್ತು ಯಾವಾಗ ಸಂಭವಿಸುತ್ತದೆಯೆಂಬುದೇ ಈಗಿನ ಪ್ರಶ್ನೆ. ಇದರಲ್ಲಿ ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರದ ಪ್ರಶ್ನೆಗಳು ಮಾತ್ರವಲ್ಲದೆ, ನೈತಿಕತೆ, ಸರಕಾರಿ ನಿಯಮಗಳು ಮತ್ತು ರಾಜಕೀಯದ ಪ್ರಶ್ನೆಗಳೂ ಉದ್ಭವಿಸಿವೆ.
ಕೃತಕ ಬುದ್ಧಿಮತ್ತೆಯು ಮಾನವರ ಅಸ್ತಿತ್ವಕ್ಕೇ ಸಂಚಕಾರ ತರುವ ಸಾಧ್ಯತೆಯಿದೆಯೆಂಬುದು ಈಗ ದೊಡ್ಡ ಸಮಸ್ಯೆ. ಯಂತ್ರಗಳಿಗೆ ತರಬೇತಿ ನೀಡಬಹುದು. ಪುನರಾವರ್ತಿತ ಸ್ವಭಾವದ ದಿನನಿತ್ಯದ ಕೆಲಸಗಳನ್ನು ಮಾಡಲು ಕಂಪ್ಯೂಟರ್ ಅನ್ನು ಹೀಗೆಯೇ ತರಬೇತು ಮಾಡಲಾಗುತ್ತದೆ, ಸಾಮಾನ್ಯ ವಾಗಿ ಪಠ್ಯ ಮತ್ತು ಕೋಡ್ ಅನ್ನು ಒಳಗೊಂಡಿರುವ ಬೃಹತ್ ಪ್ರಮಾಣದ ಡೇಟಾವನ್ನು ಕಂಪ್ಯೂಟರ್‌ಗೆ ನೀಡಲಾಗುತ್ತದೆ.
ಪ್ರಾಸಂಗಿಕವಾಗಿ, ಈ ಪ್ರಕ್ರಿಯೆಯು ಅತ್ಯಂತ ‘ಶಕ್ತಿ-ತೀವ್ರ’ ವಾಗಿರುವುದರಿಂದಾಗಿ ಇದು ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ, ಇದರಿಂದಾಗಿ ಹವಾಮಾನಕ್ಕೆ ಅಪಾಯಗಳು ಹೆಚ್ಚುತ್ತವೆ. ಈ ‘ತರಬೇತಿ ಪಡೆದ’ ಯಂತ್ರಗಳು ಅನುವಾದಿಸುವ, ಪಠ್ಯ ಸಾರಾಂಶಗಳನ್ನು ಮಾಡುವ, ವಿಷಯ ರಚನೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುವಂಥ ವಿವಿಧ ಕಾರ್ಯಗಳನ್ನು ನಿರ್ವಹಿಸಬಲ್ಲವು. ಜನರೇಟಿವ್ AI ಎಂಬ ಹೆಸರಿನ ಈ ತಂತ್ರಜ್ಞಾನವು, ಮಾನವ ಪ್ರಯತ್ನಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಈ AI ಏಜೆಂಟ್‌ಗಳು ಮಾನವ ಧ್ವನಿಯಲ್ಲಿ ಮಾತನಾಡಬಲ್ಲವು,
ಚಿತ್ರಗಳನ್ನು ರಚಿಸಬಲ್ಲವು ಮತ್ತು ವಿಡಿಯೊಗಳನ್ನು ಸಹ ನಿರ್ಮಿಸಬಲ್ಲವು. ಡೇಟಾದ ದೊಡ್ಡ ಭಂಡಾರದ ಮಾದರಿಗಳನ್ನು ವಿಶ್ಲೇಷಿಸುತ್ತ ಯಂತ್ರಗಳು ಕಲಿಯುತ್ತವೆ. ನಮ್ಮಲ್ಲಿ ಬಹುಪಾಲು ಜನರು ಈಗಾಗಲೇ ChatGPT ಅಥವಾ ಜನರೇಟಿವ್ AI ನ ಇತರ ಆವೃತ್ತಿಯನ್ನು ಬಳಸಲು ಪ್ರಾರಂಭಿಸಿದ್ದಾರೆ.
ಅತ್ಯಾಧುನಿಕವಾದ AI ನ ಮತ್ತೊಂದು ರೂಪವು ಅಭಿವೃದ್ಧಿ ಹಂತದಲ್ಲಿದೆ; ಅದೇನೆಂದರೆ, ಏಜೆಂಟಿಕ್ AI. ಇಲ್ಲಿ, AI ಏಜೆಂಟ್ ಸ್ವಾಯತ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಮಾನವ ಹಸ್ತಕ್ಷೇಪವಿಲ್ಲದೆ ನಿರ್ದಿಷ್ಟ ಗುರಿಗಳ ಮೇಲೆ ನಿರಂತರವಾಗಿ ಕ್ರಿಯೆಗಳನ್ನು ಕಾರ್ಯಗತ ಗೊಳಿಸು ತ್ತದೆ. ಸಂಕೀರ್ಣ ಕಾರ್ಯ ಪ್ರವಾಹಗಳನ್ನು ಸ್ವಯಂಚಾಲಿತಗೊಳಿಸಿ ಹಣಕಾಸಿನ ರಂಗದ ಅಪಾಯ ಗಳನ್ನು ನಿರ್ವಹಿಸುತ್ತ, ಷೇರು ಮಾರುಕಟ್ಟೆ ಕಾರ್ಯಾಚರಣೆಯನ್ನು ಅತ್ಯುತ್ತಮ ವಾಗಿಸಲು ಇದು ಸಹಾಯಮಾಡುತ್ತದೆ.
ಈ AI ಒಂದು ಪ್ರಮುಖ ವೈಶಿಷ್ಟ್ಯ ಹೊಂದಿದೆ: ಹಿಂದಿನ ತಂತ್ರಜ್ಞಾನಗಳಿಗಿಂತ ಭಿನ್ನವಾಗಿ, ಈ AI ಸ್ವಾಯತ್ತ ನಿರ್ಧಾರ ತೆಗೆದುಕೊಳ್ಳುತ್ತ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ತತ್ವಶಾಸ್ತ್ರದಲ್ಲಿ ‘ಏಜೆನ್ಸಿ’ ಎಂಬ ಹೆಸರಿದೆ, ಇದು ಮಾನವ ಜಾತಿಯು ಹೊಂದಿರಬೇಕಾದ ಲಕ್ಷಣ. ಅಂಥ ಅಐ ಏಜೆಂಟ್‌ಗೆ ಕೊಡಬಹುದಾದ ಕಾರ್ಯಗಳನ್ನು ನಾವು ಚೆನ್ನಾಗಿ ಊಹಿಸಿಕೊಳ್ಳಬಹುದು. ಅಐ ಏಜೆಂಟ್ ಎಂದಿಗೂ ಅನಾರೋಗ್ಯ ಹೊಂದುವುದಿಲ್ಲ ಅಥವಾ ದಣಿಯುವುದಿಲ್ಲ, ಸ್ಥಿರ ವೇಗದಲ್ಲಿ ಕೆಲಸ ಮಾಡುತ್ತದೆ, ಯಾವುದೇ ಮಾನವ ಉದ್ಯಮವು ಸಾಧಿಸುವುದಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತದೆ. ಅದು ತಪ್ಪುಗಳನ್ನು ಮಾಡುತ್ತದೆಯೇ? ಸಾಮಾನ್ಯವಾಗಿ ಮಾಡುವುದಿಲ್ಲ.
ಹೀಗಿದ್ದರೂ, ಕೆಲವೊಮ್ಮೆ ಯಂತ್ರಗಳು ತಪ್ಪುಗಳನ್ನು ಮಾಡುತ್ತವೆ ಅಥವಾ ಸಮಗ್ರವಾಗಿ ಕೆಲಸ ಮಾಡಲು ವಿಫಲವಾಗುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದನ್ನು ಅಐ ಏಜೆಂಟ್ ನ ‘ಭ್ರಮೆಯ ಸ್ಥಿತಿ’ ಎಂದು ಕರೆಯಲಾಗುತ್ತದೆ. ಸ್ವಾಯತ್ತ ಯಂತ್ರಗಳು ತಮ್ಮದೇ ಆದ ನಿರ್ಧಾರ ಗಳನ್ನು ತೆಗೆದುಕೊಳ್ಳುವ ಶಕ್ತಿಹೊಂದಿವೆಯಾದ್ದರಿಂದ, ಅವು ಇಲ್ಲಿಯವರೆಗೆ ತಿಳಿದಿಲ್ಲದ ಅಥವಾ ಪ್ರಯತ್ನಿಸಿರದ ಹೊಸ ಪರಿಹಾರಗಳನ್ನು ಸೂಚಿಸಲು ಶಕ್ತವಾಗಿವೆ, ಆದರೆ ಇದು ಕೂಡ ಭ್ರಮೆ ಯಾಗಿರಬಹುದು. ಇದರಲ್ಲಿ ಭ್ರಮೆ ಮತ್ತು ವಾಸ್ತವಗಳನ್ನು ಪ್ರತ್ಯೇಕಿಸುವುದು ಕಷ್ಟ.
ಮಾಹಿತಿಯನ್ನು ನಕಲು ಮಾಡುವ ಮೂಲಕ ತರಬೇತಿ ಪಡೆದ ಯಂತ್ರವನ್ನು ಕ್ಷಣಮಾತ್ರದಲ್ಲಿ ಮಿಲಿಯನ್ ಯಂತ್ರಗಳಾಗಿ ಮಾಡಬಹುದು. ಮನುಷ್ಯರಲ್ಲಿ, ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಕಲಿಸಬೇಕಾಗುತ್ತದೆ; ಹೀಗಿದ್ದರೂ, ಅವರ ಕಲಿಕೆಯ ಮತ್ತು ಗ್ರಹಿಕೆಯ ನಿಜವಾದ ಪರಿಣಾಮಗಳು ಸಮಾನವಾಗಿರುವುದಿಲ್ಲ.
ಒಂದು ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಗಳು, ಕ್ಷಣಾರ್ಧದಲ್ಲಿ ನಿಖರವಾಗಿ ಕಲಿಯುತ್ತವೆ. ಮೂಲಭೂತವಾಗಿ, ಇಂಥ ಯಂತ್ರವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮತ್ತು ಮಾನವ ಚಿಂತನೆಯನ್ನು ಮೀರಿಸುವ ಸಾಮರ್ಥ್ಯ ಹೊಂದಿದೆ.
ಯಂತ್ರವು ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಮತ್ತು ತಕ್ಷಣವೇ ನಕಲು ಮಾಡಬಹುದಾದ ಕಲಿಕೆಯ ಸಾಮರ್ಥ್ಯ ಹೊಂದಿರುವ ಬಗ್ಗೆ ಗಂಭೀರ ಚಿಂತನೆಯ ಅಗತ್ಯ ವಿದೆ. ಭೂಮಿಯ ಮೇಲೆ ಅಜೈವಿಕ ಜೀವನದ ಹೊಸ ರೂಪದ ಸಾಧ್ಯತೆ ಈಗ ಕಾಣುತ್ತಿದೆ. ಅದು ತುಂಬಾ ಆಶ್ಚರ್ಯದ ಸಂಗತಿಯಾಗಿದೆ. ಈ ಯಂತ್ರಗಳು ಸ್ವಾಯತ್ತ ಕಲಿಕೆ ಮತ್ತು ಕಾರ್ಯ ನಿರ್ವಹಣೆಯ ಶಕ್ತಿ ಹೊಂದಿವೆ, ಅವುಗಳ ಸಾಮರ್ಥ್ಯಗಳು ಮಾನವರು ಹೊಂದಿರುವ ಸಾಮರ್ಥ್ಯ ಗಳಿಗಿಂತ ಹೆಚ್ಚಿನದಾಗಿವೆ. ಅವು ಅಂತಿಮವಾಗಿ ಅಜೈವಿಕ ಜೀವನದ ಹೊಸ ರೂಪವನ್ನು ಹುಟ್ಟು ಹಾಕಿ ಮಾನವ ಜಾತಿಯನ್ನು ಅನಗತ್ಯವಾಗಿಸುವ ಸಾಧ್ಯತೆಯಿರುವುದರಿಂದ ನಾವು ನಶಿಸಿಹೋಗ ಬಹುದೇ? ತಜ್ಞರ ಅಭಿಪ್ರಾಯದಲ್ಲಿ, ಕೃತಕ ಬುದ್ಧಿಮತ್ತೆಯು ಈ ಸ್ಥಿತಿಗೆ ಇನ್ನೂ ಹತ್ತಿರ ಬಂದಿಲ್ಲ, ಆದರೂ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯು ಘಾತಕ ವೇಗದಲ್ಲಿ ನಡೆಯುತ್ತಿದೆ.
ಅದು ಐದರಿಂದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಮಾನವ ಜಾತಿಯನ್ನು ಅನಗತ್ಯವಾಗಿಸುವ ಸಾಧ್ಯತೆಯಿದೆ. ಕೃತಕ ಬುದ್ಧಿಮತ್ತೆಯ ಆಗಮನದಿಂದ ಹೊರಹೊಮ್ಮಿರುವ ವರ್ತಮಾನದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಕಾಳಜಿಯಿದೆ. ಮೊದಲನೆಯದು, ಕಟ್ಟಡಗಳಿಂದ ವರ್ಚುವಲ್ ಸ್ಥಳಗಳಿಗೆ ಮಾರ್ಪಾಡು ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಯ ಸ್ವರೂಪ. ಇನ್ನು ಮುಂದೆ, ಡೇಟಾ ಸಾರ್ವ ಭೌಮತ್ವ ಪಡೆಯುತ್ತದೆ.
ದೈತ್ಯ ತಂತ್ರಜ್ಞಾನ ಕಂಪನಿಗಳು ಅದನ್ನು ಬಳಸುತ್ತವೆ, ಆದರೆ ಅದಕ್ಕಾಗಿ ಹಣ ಪಾವತಿಸುವುದಿಲ್ಲ. ವಾಸ್ತವವಾಗಿ, ಬಳಕೆದಾರರಾದ ನಾವು ಸೃಷ್ಟಿಸುವ ಡೇಟಾಗಾಗಿ ನಾವು ಆ ಕಂಪನಿಗಳಿಗೆ ಹಣ ಪಾವತಿ ಸುತ್ತೇವೆ. ಉದಾಹರಣೆಗೆ, ಅಮೆಜಾನ್ ಅನ್ನೇ ತೆಗೆದುಕೊಳ್ಳಿ. ಈ ಕಂಪನಿ ಹೊಂದಿರುವ ಸಂಪತ್ತು ಅತ್ಯಂತ ಅದ್ಭುತವಾಗಿದೆ. ಆದರೆ ಅದು ಏನನ್ನೂ ಉತ್ಪಾದಿಸುವುದಿಲ್ಲ. ಆದರೆ ಅದು ಕೇವಲ ಖರೀದಿದಾರರು ಮತ್ತು ಮಾರಾಟಗಾರನ್ನು ಒಟ್ಟಿಗೆ ಸೇರಿಸುವ ವೇದಿಕೆಯಾಗಿದೆ.
ಅಮೆಜಾನ್ ತನ್ನ ಸೇವೆಗಳನ್ನು ಉಪಯೋಗಿಸಿಕೊಳ್ಳುವ ಮಾರಾಟಗಾರರ ಮೇಲೆ ಶೇ.40ರಷ್ಟು ಶುಲ್ಕ ವಿಧಿಸುತ್ತದೆ. ಅಮೆಜಾನ್ ತನ್ನ ವೇದಿಕೆಯನ್ನು ಬಳಕೆಗೆ ಲಭ್ಯವಾಗುವಂತೆ ಮಾಡುತ್ತಿರುವು ದರಿಂದ, ಇದು ಒಂದು ರೀತಿಯ ಬಾಡಿಗೆ. ಆದರೆ ಅಮೆಜಾನ್ ಕಂಪನಿ ಗಳಿಸುತ್ತಿರುವುದು ಹಣ ಮಾತ್ರವಲ್ಲ. ನಮ್ಮ ಮೇಲೆ ಪ್ರಭಾವ ಬೀರಲು, ನಮ್ಮ ಆಲೋಚನೆಗಳನ್ನು ನಿಯಂತ್ರಿಸಲು, ತಾನು ಬಯಸಿದ ರೀತಿಯಲ್ಲಿ ನಾವು ವರ್ತಿಸುವಂತೆ ಮಾಡಲು ಬಳಸಬಹುದಾದ ಅಪಾರ ಪ್ರಮಾಣದ ಡೇಟಾದ ನಿಯಂತ್ರಣವನ್ನು ಈ ಕಂಪನಿ ಹೊಂದಿದೆ. ಅಂಥ ಕಂಪನಿಗಳು ತೆರಿಗೆ ಪಾವತಿಸಲು ಷ್ಟಪಡುವುದಿಲ್ಲ,
ಆದರೆ ಅದಕ್ಕಿಂತ ಮಿಗಿಲಾಗಿ ಸರಕಾರದ ನಿಯಂತ್ರಣದ ಬಗ್ಗೆ ಆ ಕಂಪನಿಗಳಿಗೆ ಭಯವಿರುತ್ತದೆ. ಅಂತೆಯೇ ಫೇಸ್‌ಬುಕ್, ಇನ್ಸ್ಟಾಗ್ರಾಮ, ಎಕ್ಸ್ (ಟ್ಟಿಟರ್), ಗೂಗಲ್ ಮುಂತಾದ ಹಲವು ಸೋಷಿ ಯಲ್ ಮೀಡಿಯಾ ಕಂಪನಿಗಳು. ಇಡೀ ವಿಶ್ವದಲ್ಲಿರುವ ಬಹುಪಾಲು ಜನರ ವೈಯಕ್ತಿಕ ವಿವರಗಳ ಅಪಾರವಾದ ಮತ್ತು ಆಗರ್ಭ ಭಂಡಾರವನ್ನು ತಮ್ಮ ಡೇಟಾಬೇಸ್‌ನಲ್ಲಿ ಶೇಖರಿಸಿಟ್ಟು ಕೊಂಡಿರುವ ಇಂಥ ಕಂಪನಿಗಳು ಇವುಗಳನ್ನು ಹೇಗೆ ಬಳಸಿಕೊಳ್ಳುತ್ತವೋ, ಅಂತೆಯೇ ಕೃತಕ ಬುದ್ಧಿಮತ್ತೆಯು ಈ ಕಂಪನಿಗಳ ಬಹುಪಾಲು ಕಾರ್ಯಗಳನ್ನು ನಿರ್ವಹಿಸುವ ಭವಿಷ್ಯದ ದಿನಗಳಲ್ಲಿ ಈ ಭಂಡಾರದ ಬಳಕೆ/ದುರ್ಬಳಕೆಯ ಮೇಲೆ ಕಡಿವಾಣ ಹಾಕಲಾಗುತ್ತದೆಯೇ, ಇವೇ ಮುಂತಾದ ವಿಷಯಗಳನ್ನು ಊಹಿಸಿಕೊಳ್ಳಲೂ ಭಯವಾಗುತ್ತದೆ.
ವಾಸ್ತವವಾಗಿ ಇಂಥ ನಿಚ್ಚಳ ಸಾಧ್ಯತೆ ನಮ್ಮೆದುರಿಗಿರುವಾಗ ನಾವೇನು ಮಾಡಬೇಕು? ಹೀಗಾಗಿ, ತಂತ್ರeನ ಕ್ಷೇತ್ರದ ಇಂಥ ಕಂಪನಿಗಳು ಅಮೆರಿಕದ ಅಂದಿನ ಜೋ ಬೈಡನ್ ಆಡಳಿತದೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದವು. ಏಕೆಂದರೆ, ಬೈಡನ್ ಅವರು ಈ ಕಂಪನಿಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಉದ್ದೇಶ ಹೊಂದಿದ್ದರು; ಆದರೆ ವಿeನ ಮತ್ತು ತಂತ್ರಜ್ಞಾನದ ದೊಡ್ಡ ಅಭಿಮಾನಿಯೇನೂ ಆಗಿರದ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಈ ಕಂಪನಿಗಳು ನಿಂತವೆಂಬುದರಲ್ಲಿ ಆಶ್ಚರ್ಯವೇನಿಲ್ಲ.
ಸರಕಾರಗಳನ್ನು ರಚಿಸುವ ಮತ್ತು ಕೆಡವುವ ಶಕ್ತಿ ಹೊಂದಿರುವ ತಂತ್ರeನ ಕಂಪನಿಗಳ ಮಾಲೀಕರ ನ್ನೊಳಗೊಂಡ ಹೊಸ ಸರ್ವಾಧಿಕಾರಿ ಗುಂಪೊಂದು ಹೊರಹೊಮ್ಮುತ್ತಿದೆ. ಡೇಟಾ ಸಂಪತ್ತಿನ ಸೃಷ್ಟಿ ಮತ್ತು ಬಂಡವಾಳದ ಹೊಸ ಬಗೆಯ ಮಾಲೀಕತ್ವ- ಇದು 19ನೇ ಮತ್ತು 20ನೇ ಶತಮಾನ ಗಳಲ್ಲಿ ಪ್ರಚಲಿತವಾಗಿ ಇದ್ದುದಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿರಬಹುದಾದ ಒಂದು ಸನ್ನಿವೇಶ ವಾಗಿದೆ.
ಉತ್ಪಾದನೆ, ಮಾರುಕಟ್ಟೆ, ಹಣಕಾಸು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಮುಖ ಸೇವೆಗಳನ್ನು ಒದಗಿಸುವಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ವಿಸ್ತರಿಸಿದಂತೆ ಉದ್ಯೋಗದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕ ಉದ್ಯೋಗಗಳು, ವಿಶೇಷವಾಗಿ ವೈಟ್-ಕಾಲರ್ (ಮ್ಯಾನೇಜರ್) ಉದ್ಯೋಗಗಳು ಕಣ್ಮರೆಯಾಗುತ್ತವೆ. ಏಜೆಂಟ್ AI ಮತ್ತು ಜನರೇಟಿವ್ ಅಐ ಕೃತಕ ಸಾಮಾನ್ಯ ಬುದ್ಧಿಮತ್ತೆಯಾಗಿ ರೂಪಾಂತರಗೊಂಡರೆ, ಉದ್ಯೋಗ ನಷ್ಟಗಳು ಹೆಚ್ಚಾಗುತ್ತವೆ.
ಮತ್ತೊಂದೆಡೆ, AI ವಲಯದಲ್ಲಿ ಹೊಸ ಬಗೆಯ ಉದ್ಯೋಗಗಳು ಸೃಷ್ಟಿಯಾಗುತ್ತವೆ; ಆದರೆ ಅದು ಬೌದ್ಧಿಕ ಪರಿಸರದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ಬೇಗನೆ ಕಲಿಯುತ್ತ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡಬಲ್ಲ ಸೀಮಿತ ಕೆಲವರಿಗೆ ಮಾತ್ರ ಉದ್ಯೋಗಾವಕಾಶವನ್ನೊದಗಿಸುತ್ತದೆ. ಕೆಲವು ಉದ್ಯೋಗಗಳು ವೇಗವಾಗಿ ಕಣ್ಮರೆಯಾಗುತ್ತವೆ, ಇತರ ಹಲವು, ಸ್ವಲ್ಪ ತಡವಾಗಿ ಕಣ್ಮರೆ ಯಾಗುತ್ತವೆ.
ಒಂದು ಪ್ರಮುಖ ಸಾಮಾಜಿಕ-ಆರ್ಥಿಕ ಪ್ರಶ್ನೆಯೆಂದರೆ: ನಿರುದ್ಯೋಗಿಗಳು ಅಥವಾ ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಉದ್ಯೋಗಕ್ಕೆ ಅನರ್ಹರಾಗುವವರ ವಿಶಾಲ ಗುಂಪು ಭವಿಷ್ಯದಲ್ಲಿ ಏನು ಮಾಡಬೇಕು? ಇಂಥ ಒಂದು ವಿಶಾಲವಾದ ಗುಂಪಿನ ಸದಸ್ಯರಾಗುವ ಸಾಧ್ಯತೆಯಿರುವ ನಮ್ಮೆಲ್ಲರಿಗೂ ಸರಕಾರಗಳು ಯಾವ ರೀತಿಯಲ್ಲಿ ಭದ್ರತೆ ಒದಗಿಸುತ್ತವೆ? ಸ್ವಾರಸ್ಯಕರವಾದ ವಿಷಯವೇನೆಂದರೆ, ಮುಂದೊಂದು ದಿನ ಕೃತಕ ಬುದ್ಧಿಮತ್ತೆಯು ರಾಜಕಾರಣಿಗಳ ಕೆಲಸವನ್ನು ಅವರಿಗಿಂತ ಸಮರ್ಥವಾಗಿ ನಿರ್ವಹಿಸಲು ಶಕ್ತವಾದರೆ, ಅವರೆಲ್ಲರೂ ನಿರುದ್ಯೋಗಿಗಳಾಗುವು ದಿಲ್ಲವೇ? ಆಗ ‘ Idle mind is a devil's workshop’ ಎಂಬ ನಾಣ್ಣುಡಿಗನಗುಣವಾಗಿ, ಇಂಥ ರಾಜಕಾರಣಿಗಳ ದೊಡ್ಡ ಗುಂಪೊಂದು ಕೃತಕ ಬುದ್ಧಿಮತ್ತೆಯನ್ನೇ ಸಂಪೂರ್ಣವಾಗಿ ವಿನಾಶ ಗೊಳಿಸುತ್ತದೆಯೇ? ರಾಜಕಾರಣಿಗಳು ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಏರ್ಪಡುವ ಮಹಾಯುದ್ಧ ಪ್ರಳಯಾಂತಕವಾಗುವುದೇ? ಅಂತಿಮವಾಗಿ ಏರ್ಪಡುವ ಪರಿಸ್ಥಿತಿಗಳು ಮತ್ತು ಅಂತಿಮವಾಗಿ ಏರ್ಪಡುವ ಪರಿಸ್ಥಿತಿಗಳು ಮತ್ತು ಆ ಗಮ್ಯಸ್ಥಾನಕ್ಕೆ ತಲುಪುವ ದಾರಿಯು ಅಸ್ಪಷ್ಟ ವಾಗಿದೆಯಾದರೂ, ಪರಮಾಣು ವಿನಾಶ ಮತ್ತು ಹವಾಮಾನ ಬದಲಾವಣೆಗಳ ಜತೆಗೆ ಕೃತಕ ಬುದ್ಧಿಮತ್ತೆಯೂ ಮಾನವನ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದೆಂಬುದಂತೂ ಸ್ಪಷ್ಟ.
ಕೃತಕ ಬುದ್ಧಿಮತ್ತೆಯು ಮಾನವರು ಸಾಧಿಸುವ ಕೊನೆಯ ನಾವೀನ್ಯವಾಗಿರಬಹುದೇ?- ನಮ್ಮ ಎಲ್ಲಾ ದುಃಖಗಳಿಗೆ ಅಂತಿಮ ಪರಿಹಾರವಾಗಬಹುದೇ? ಇದರ ಪ್ರವರ್ತಕರು ನಮ್ಮ ಮನಸ್ಸುಗಳ ಮೇಲೆ ಅಂತಿಮ ನಿಯಂತ್ರಣ ಹೊಂದಬೇಕೆಂಬ ತವಕದಲ್ಲಿದ್ದಾರೆ. ಇವರೆಲ್ಲರೂ ಕೃತಕ ಬುದ್ಧಿಮತ್ತೆ ಯೆಂಬ ಹೊಸ ಧರ್ಮದ ಪ್ರವರ್ತಕರೇ?
(ಲೇಖಕರು ಪತ್ರಕರ್ತರು)