Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್ ಗಳ ಪರಮ ಧ್ಯೇಯ !
ಐಸಿಐಸಿಐ ಬ್ಯಾಂಕಿನ ‘ಪಂಚತಾರಾ ಸೇವೆ’ ಪಡೆಯಲು ಅರ್ಹತೆ ಇಲ್ಲದ ಬಡ ಬ್ಯಾಂಕ್ ಗ್ರಾಹಕರದ್ದು ಇನ್ನೊಂದು ವರ್ಗ. ಐಸಿಐಸಿಐ ಬ್ಯಾಂಕಿನ ಈ ನಿರ್ಧಾರದ ಸರಿ-ತಪ್ಪುಗಳನ್ನು ಬ್ಯಾಂಕಿನ ಗ್ರಾಹಕರಿಗೆ ಬಿಟ್ಟು ಬಿಡೋಣ. ಆದರೆ ದೇಶದ ಬ್ಯಾಂಕಿಂಗ್ ಸೇವೆಯನ್ನು ನಿಯಂತ್ರಿಸುವ ಆರ್‌ಬಿಐ ಈ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.


ಲೋಕಮತ
ದೇಶದ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಪೈಕಿ ನಾಯಕ ಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸರಕಾರಿ ರಂಗ ಹೆಚ್ಚಿನ ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿರಬೇಕಾದ ಕನಿಷ್ಠ ಮೊತ್ತವನ್ನು ಶೂನ್ಯಕ್ಕಿಳಿಸಿವೆ. ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತ ಉಳಿಸಿಕೊಳ್ಳ ಲಾಗದೆ ದಂಡ ತೆತ್ತವರಿಗೆ ಇದು ಸಿಹಿ ಸುದ್ದಿಯಾಗಿತ್ತು.
ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರಿಗೆ ಸೇವೆ ನೀಡಲು ಪೈಪೋಟಿ ಆರಂಭವಾಗಿದೆ ಎಂಬ ನಿರೀಕ್ಷೆ ಯಲ್ಲಿದ್ದವರಿಗೆ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಕ್ ನೀಡಿದೆ. ಈ ಬ್ಯಾಂಕ್ ಗ್ರಾಹಕರು ಉಳಿತಾಯ ಖಾತೆಯಲ್ಲಿ ಕಾಯ್ದುಕೊಳ್ಳಬೇಕಾದ ಕನಿಷ್ಠ ಸರಾಸರಿ ಮಾಸಿಕ ಠೇವಣಿ ಪ್ರಮಾಣವನ್ನು 50 ಸಾವಿರ ರು.ಗಳಿಗೆ ನಿಗದಿಪಡಿಸಿದೆ.
ಅರ್ಥಾತ್ ಇನ್ನು ಈ ಬ್ಯಾಂಕಿನ ಉಳಿತಾಯ ಖಾತೆದಾರರ ಅಕೌಂಟ್‌ನಲ್ಲಿ ಎಲ್ಲ ಕಾಲದಲ್ಲೂ ಕನಿಷ್ಠ 50 ಸಾವಿರ ಇರಲೇಬೇಕು. ಇಲ್ಲವಾದರೆ ಪ್ರತಿ ತಿಂಗಳು ಕನಿಷ್ಠ 500 ರು. ದಂಡ ಮತ್ತು ಇದರ ಮೇಲಿನ ಸೆಸ್ ಮೊತ್ತವನ್ನು ಪಾವತಿ ಸಬೇಕು. ಹೊಸ ಗ್ರಾಹಕರಿಗಷ್ಟೇ ಈ ನಿಯಮ ಅನ್ವಯ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿರುವ ಕಾರಣ ಸದ್ಯಕ್ಕೆ ಹಾಲಿ ಗ್ರಾಹಕರು ಭಯಪಡಬೇಕಿಲ್ಲ.
ಇದನ್ನೂ ಓದಿ: Lokesh Kaayarga Column: ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ
ಆದರೆ ಮುಂದೊಂದು ದಿನ ಎಲ್ಲ ಗ್ರಾಹಕರಿಗೂ ಈ ನಿಯಮ ಅನ್ವಯವಾದರೆ ಅಚ್ಚರಿ ಏನಿಲ್ಲ. ಈ ಬೆಳವಣಿಗೆಯನ್ನು ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸಬಹುದು. ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಕ್ಷಣಗಣನೆಯಲ್ಲಿರುವವರ ಪಾಲಿಗೆ ಇದು ದೇಶದ ಬೆಳವಣಿಗೆಯ ದ್ಯೋತಕ.
ಭಾರತೀಯರ ಜೇಬಿನಲ್ಲಿ ದುಡ್ಡು ಹರಿದಾಡುತ್ತಿದೆ. 50 ಸಾವಿರ ರು. ತಮ್ಮದಲ್ಲದ ದುಡ್ಡು ಎಂಬ ಭಾವದಲ್ಲಿ ಖಾತೆಯಲ್ಲಿ ಬಿಟ್ಟು ಬಿಡುವ ಆರ್ಥಿಕ ಚೈತನ್ಯ ಅವರಲ್ಲಿದೆ. ತಿಂಗಳ ಪಗಾರವನ್ನೆಲ್ಲ ಇಎಂಐ, ಕೈ ಸಾಲ, ದೈನಂದಿನ ಖರ್ಚಿಗೆ ಹೊಂದಿಸಿ, ಕನಿಷ್ಠ 10 ಸಾವಿರ ರು. ಖಾತೆಯಲ್ಲಿ ಉಳಿಸಿ ಕೊಳ್ಳಲು ಪರದಾಡುವವರ ಪಾಲಿಗೆ ಇದು ಪಕ್ಕಾ ಹಗಲು ದರೋಡೆ.
ಖಾಸಗಿ ಬ್ಯಾಂಕಿನ ಈ ನಿರ್ಧಾರವನ್ನು ನಮ್ಮ- ನಿಮ್ಮಂಥ ಸಾಮಾನ್ಯ ಗ್ರಾಹಕರು ಸಮರ್ಥಿಸಿ ಕೊಳ್ಳುವುದು ಸಾಧ್ಯವಿಲ್ಲದ ಮಾತು. ಆದರೆ ತಜ್ಞರೆನಿಸಿಕೊಂಡವರು ಹಲವು ರೀತಿಯಲ್ಲಿ ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಪ್ರೀಮಿಯಮ್ ಸೇವೆ ಬಯಸುವ ಬ್ಯಾಂಕ್ ಗ್ರಾಹಕರಷ್ಟೇ ಖಾಸಗಿ ವಲಯದ ಈ ಬ್ಯಾಂಕ್ ಸೇವೆ ನೆಚ್ಚಿಕೊಂಡಿದ್ದಾರೆ. ಅವರು ಖಾತೆಯಲ್ಲಿ 50 ಸಾವಿರ ರು.ಗಳ ಕನಿಷ್ಠ ಶಿಲ್ಕು ಉಳಿಸಿಕೊಳ್ಳುವ ಸಾಮರ್ಥ್ಯ ಉಳ್ಳವರು. ಹಾಗಿದ್ದ ಮೇಲೆ ಬ್ಯಾಂಕ್ ಈ ನಿರ್ಧಾರ ಕೈಗೊಂಡಿ ದ್ದರಲ್ಲಿ ಅಚ್ಚರಿ ಏನೂ ಇಲ್ಲ ಎನ್ನುವುದು ಅವರ ವಾದ.
ಬ್ಯಾಂಕಿಂಗ್ ವಲಯದ ಬಗ್ಗೆ ಕಾಳಜಿ ಉಳ್ಳ ಇನ್ನು ಕೆಲವರ ಪ್ರಕಾರ, ಕನಿಷ್ಠ ಠೇವಣಿ ಮೊತ್ತ ನಿಗದಿ ಪಡಿಸುವ ಮೂಲಕ ಬ್ಯಾಂಕ್, ಅನಪೇಕ್ಷಿತ ಅಕೌಂಟ್‌ಗಳನ್ನು ದೂರ ಮಾಡಲಿದೆ. ಇದರಿಂದ ಬ್ಯಾಂಕಿನ ನೈಜ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ. ಇಲ್ಲಿ ಅನಪೇಕ್ಷಿತ ಖಾತೆ ಎಂದರೆ, ಮೂರ್ನಾಲ್ಕು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ್ದು, ಐಸಿಐಸಿಐ ಬ್ಯಾಂಕ್‌ನಲ್ಲಿ ಹಿಂದೆಂದೋ ತೆರೆದ ಖಾತೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಗ್ರಾಹಕ ರದ್ದು ಒಂದು ವಿಭಾಗ.
ಐಸಿಐಸಿಐ ಬ್ಯಾಂಕಿನ ‘ಪಂಚತಾರಾ ಸೇವೆ’ ಪಡೆಯಲು ಅರ್ಹತೆ ಇಲ್ಲದ ಬಡ ಬ್ಯಾಂಕ್ ಗ್ರಾಹಕರದ್ದು ಇನ್ನೊಂದು ವರ್ಗ. ಐಸಿಐಸಿಐ ಬ್ಯಾಂಕಿನ ಈ ನಿರ್ಧಾರದ ಸರಿ-ತಪ್ಪುಗಳನ್ನು ಬ್ಯಾಂಕಿನ ಗ್ರಾಹಕರಿಗೆ ಬಿಟ್ಟು ಬಿಡೋಣ. ಆದರೆ ದೇಶದ ಬ್ಯಾಂಕಿಂಗ್ ಸೇವೆಯನ್ನು ನಿಯಂತ್ರಿಸುವ ಆರ್‌ಬಿಐ ಈ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.
ಆರ್‌ಬಿಐನ ಪ್ರತಿಕ್ರಿಯೆ ನಮ್ಮನ್ನು ಇನ್ನಷ್ಟು ದಿಗಿಲು ಮೂಡಿಸುತ್ತಿದೆ. ಆರ್‌ಬಿಐ ಪ್ರಕಾರ, ಉಳಿತಾಯ ಖಾತೆಗಳ ಮೇಲಿನ ಕನಿಷ್ಠ ಬ್ಯಾಲೆನ್ಸ್ ನಿಗದಿಪಡಿಸುವ ಅಧಿಕಾರವು ಆಯಾ ಬ್ಯಾಂಕ್ ಗಳ ನಿರ್ಧಾರಕ್ಕೆ ಒಳಪಟ್ಟಿದೆ. ಇದನ್ನು ವರಿಷ್ಠ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಇನ್ನು ಬಡವರಿಗಾಗಿ ಎಲ್ಲ ಬ್ಯಾಂಕುಗಳಲ್ಲೂ ಜನ್‌ಧನ್‌ನಂತಹ ಶೂನ್ಯ ಬ್ಯಾಲೆನ್ಸ್‌ಗೆ ಅವಕಾಶ ಇರುವ ‘ ಮೂಲಭೂತ ಉಳಿತಾಯ ಬ್ಯಾಂಕ್ ಠೇವಣಿ ಖಾತೆ’ (ಆಖಆಈಅ) ಗಳನ್ನು ತೆರೆಯಲು ಅವಕಾಶವಿದೆ.
ಇಲ್ಲಿಗೆ ಆರ್‌ಬಿಐ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎನ್ನುವುದು ಸ್ಪಷ್ಟ. ಮುಂದಿನ ದಿನಗಳಲ್ಲಿ ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಇನ್ನಷ್ಟು ಬ್ಯಾಂಕುಗಳು ಬಡ ಗ್ರಾಹಕರನ್ನು ಹೊರ ಗಟ್ಟಿ, ಶ್ರೀಮಂತ ಗ್ರಾಹಕರನ್ನಷ್ಟೇ ನೆಚ್ಚಿಕೊಳ್ಳಲು ಹೊರಟರೆ ಆರ್‌ಬಿಐ ಪ್ರತಿಕ್ರಿಯೆ ಇದಕ್ಕಿಂತ ಭಿನ್ನವಾಗಿರುವುದಿಲ್ಲ ಎನ್ನುವುದು ದಿಟ.
ವಾರ್ಷಿಕ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಂಡು ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಳ್ಳುವುದು ಪ್ರತಿಯೊಂದು ಬ್ಯಾಂಕಿನ ಆದ್ಯತೆಯಾಗಿರುವ ಕಾರಣ ಎಲ್ಲ ಬ್ಯಾಂಕುಗಳಿಗೆ ಈ ಮಾರ್ಗ ಸುಲಭ ದ್ದೆನಿಸಬಹುದು. 10 ಸಾವಿರ ರು. ಓವರ್‌ಡ್ರಾಫ್ಟ್ ಅವಕಾಶ ಇರುವ ಜನ್‌ಧನ್ ಖಾತೆ ಇರುವ ಕಾರಣ ಕಡು ಬಡವರಿಗೆ ಇದರಿಂದ ತೊಂದರೆ ಇಲ್ಲ. ಆದರೆ ಆರಕ್ಕೇರದ ಮೂರಕ್ಕಿಳಿಯದ ನಮ್ಮ-ನಿಮ್ಮಂಥ ಮಧ್ಯಮ ವರ್ಗದ ಗ್ರಾಹಕರು ಏನು ಮಾಡಬೇಕು ? ಮೂರ್ನಾಲ್ಕು ದಶಕಗಳ ಹಿಂದೆ ಹಳ್ಳಿಯಾಗಲಿ, ದಿಲ್ಲಿಯಾಗಲಿ ಎಲ್ಲರ ಉಳಿತಾಯ ಖಾತೆಗಳಿಗೆ ಇಂದೇ ನಿಯಮವಿತ್ತು.
ಕನಿಷ್ಠ ಶಿಲ್ಕು 100 ರು., ಚೆಕ್ ಪುಸ್ತಕ ಅವಶ್ಯಕತೆ ಇರುವವರಿಗೆ 500 ರು. ಕನಿಷ್ಠ ಮೊತ್ತ ನಿಗದಿ ಮಾಡಲಾಗಿತ್ತು. ಬ್ಯಾಂಕಿಂಗ್ ಸೇವೆ ವಿಸ್ತರಣೆ ಕಾಣುತ್ತಿದ್ದಂತೆ ಆಯಾ ಪ್ರದೇಶಕ್ಕನುಗುಣವಾಗಿ ಕನಿಷ್ಠ ಮೊತ್ತ ನಿಗದಿಪಡಿಸುವ ಪರಿಪಾಠ ಆರಂಭವಾಯಿತು. ಕೆಲವು ಬ್ಯಾಂಕ್‌ಗಳು ಮೆಟ್ರೋ ನಗರಗಳಲ್ಲಿ 10000 ರು.ವರೆಗೆ, ಉಳಿದ ನಗರ ಪ್ರದೇಶಗಳಲ್ಲಿ 5000 ರು. ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ 2000 ರು.ಗಳ ಕನಿಷ್ಠ ಬ್ಯಾಲೆನ್ಸ್ ನಿಯಮ ಜಾರಿಗೆ ತಂದವು.
ಇದೀಗ ಮೆಟ್ರೋ ನಗರಗಳಲ್ಲಿ ಕನಿಷ್ಠ ಸರಾಸರಿ ಮಾಸಿಕ ಮೊತ್ತ 50000 ರು.ವರೆಗೆ ಹೆಚ್ಚಳ ಕಂಡಿದೆ. ಉಳಿತಾಯ ಖಾತೆಯ ಕನಿಷ್ಠ ಮೊತ್ತ ಒಂದೇ ಅಲ್ಲ, ಬ್ಯಾಂಕುಗಳ ಸೇವಾ ಶುಲ್ಕದ ದರವೂ ಪ್ರತೀ ವರ್ಷ ಹೆಚ್ಚಾಗುತ್ತಲೇ ಬಂದಿದೆ. ಈ ಸೇವೆ ಯಾವ ಮಟ್ಟಕ್ಕೆ ಬಂದಿದೆ ಬಂದರೆ, ಈಗ ಕೆಲವು ಬ್ಯಾಂಕುಗಳಲ್ಲಿ ಆದೇ ಬ್ಯಾಂಕಿನ ಖಾತೆಗೆ ಹಣ ಹಾಕುವುದಾದರೆ, ರಶೀದಿ ತುಂಬಿ ಕೌಂಟರ್‌ಗಳ ಮುಂದೆ ನಿಂತು ನಗದು ಪಾವತಿಗೆ ಅವಕಾಶವಿಲ್ಲ.
ನಿಗದಿತ ಮೊತ್ತಕ್ಕಿಂತ ಕಡಿಮೆ ನಗದು ಹಣವನ್ನು ಆಯಾ ಬ್ಯಾಂಕಿನ ಟೆಲ್ಲರ್ ಮೆಷಿನ್‌ಗಳಲ್ಲಿಯೇ ತುಂಬಬೇಕು. ಕೌಂಟರ್‌ಗಳಲ್ಲಿ ತುಂಬಬೇಕಾದರೆ ಕನಿಷ್ಠ 100 ರು.ಹೆಚ್ಚುವರಿ ಶುಲ್ಕ ಪಾವತಿಸಬೇಕು. ಡಿಜಿಟಲ್ ತಂತ್ರಜ್ಞಾನ ಬಗ್ಗೆ ತಿಳಿವಳಿಕೆ ಉಳ್ಳವರಿಗೆ ಇದು ಸಮಸ್ಯೆಯಲ್ಲ. ಆದರೆ ಬಹುತೇಕ ಹಿರಿಯ ನಾಗರಿಕರು ತಮ್ಮದೇ ದುಡ್ಡನ್ನು ತಮ್ಮದೇ ಖಾತೆಗೆ ತುಂಬಲು ದಂಡ ಪಾವತಿಸಬೇಕಾಗಿದೆ.
ಐಸಿಐಸಿಐ ಬ್ಯಾಂಕ್ ವಿಚಾರಕ್ಕೆ ಬಂದರೆ ಬ್ಯಾಂಕ್ ಕಚೇರಿಯಲ್ಲಿ ಮತ್ತು ಕ್ಯಾಷ್ ರೀಸೈಕ್ಲರ್ ಮೆಷಿನ್ ಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಶುಲ್ಕರಹಿತವಾಗಿ ತಿಂಗಳಿಗೆ ಮೂರು ಬಾರಿ ಮಾತ್ರ ನಗದು ತುಂಬ ಬಹುದು. ಹೆಚ್ಚುವರಿ ನಗದು ಮೊತ್ತ ತುಂಬಲು 150 ರೂ ಶುಲ್ಕ ವಿಧಿಸಲಾಗುತ್ತದೆ.
ಮೊದಲು ವಾಸ್ತವ್ಯ ದೃಢೀಕರಣ ಉದ್ದೇಶಕ್ಕೆ, ಬ್ಯಾಂಕಿನ ಖಾತೆದಾರರು ಎಂಬ ಪ್ರಮಾಣ ಪತ್ರ ಉಚಿತವಾಗಿಯೇ ಸಿಗುತ್ತಿತ್ತು. ಈಗ ಅದಕ್ಕೂ ನಿರ್ದಿಷ್ಟ ಶುಲ್ಕ ಪಾವತಿಸಲೇಬೇಕು. ಪಿಂಚಣಿದಾರರ ಜೀವಿತ ಪ್ರಮಾಣಪತ್ರವನ್ನು ಈಗ ಬಹುತೇಕ ಬ್ಯಾಂಕುಗಳು ಹೊರಗುತ್ತಿಗೆ ನೀಡಿವೆ. ಕಂಪ್ಯೂಟರ್ ಸೆಂಟರ್‌ಗಳಲ್ಲಿ ವಿವರ ನೀಡಿ ಈ ಪ್ರಮಾಣ ಪತ್ರ ಪಡೆಯಲು ಕನಿಷ್ಠ 500 ರು. ತೆರಬೇಕು.
ಯುಪಿಎ ಮೂಲಕ ಹಣ ಪಾವತಿಸುವ, ಮೊಬೈಲ್‌ನಲ್ಲೇ ಬಹುತೇಕ ಎಲ್ಲ ಬ್ಯಾಂಕ್ ಸೇವೆಯನ್ನು ಪಡೆಯಬಲ್ಲ ಈಗಿನ ಯುವ ಪೀಳಿಗೆಗೆ ಬ್ಯಾಂಕ್ ಸೇವೆ ಸಮಸ್ಯೆಯಾಗಿ ಕಾಡುತ್ತಿಲ್ಲ. ಆದರೆ ಡಿಜಿಟಲ್ ಸ್ಪರ್ಶವಿಲ್ಲದ, ಎಟಿಎಂಗಳಿಂದ ಹಣ ಪಡೆಯಲೂ ಅನ್ಯರ ನೆರವು ಬಯಸುವ ನಮ್ಮ ಹಿರಿಯರಿಗೆ ಬ್ಯಾಂಕುಗಳ ಸೇವೆ ಎಂದರೆ ಈಗ ಬಲು ತ್ರಾಸದ ಕೆಲಸ.
ಇವರು ಬ್ಯಾಂಕುಗಳಿಗೆ ಕಾಲಿಟ್ಟ ಕೂಡಲೇ ಕೆಲವು ಸಿಬ್ಬಂದಿಗಳ ಮೂತಿ ತಿರುಗುವುದನ್ನು ಕಂಡಾ ಗಲೇ ಅಲ್ಲಿನ ಸೇವೆಯ ದರ್ಶನವಾಗುತ್ತದೆ. ಇನ್ನು ಜನ್‌ಧನ್ ಖಾತಾದಾರರದ್ದು ಬೇರೆಯೇ ಸಮಸ್ಯೆ. ಇವರು ಒಂದು ತಿಂಗಳಲ್ಲಿ ಖಾತೆಯಿಂದ ಗರಿಷ್ಠ 10000 ರು. ಹಣವನ್ನು ಮಾತ್ರ ಹಿಂಪಡೆ ಯಬಹುದು. ಇವರ ಖಾತೆಯಲ್ಲಿ ಯಾವುದೇ ಸಮಯದಲ್ಲಿ ಮೊತ್ತ 50000 ರು. ಮೀರುವಂತಿಲ್ಲ.
ಒಂದು ಹಣಕಾಸು ವರ್ಷದಲ್ಲಿ ಖಾತೆಗೆ ಜಮೆ ಆಗುವ ಒಟ್ಟು ಮೊತ್ತ 1 ಲಕ್ಷ ಮೀರುವಂತಿಲ್ಲ. ಸರಕಾರದ ಹಲವು ಭಾಗ್ಯಗಳಿಂದ, ಉದ್ಯೋಗ ಖಾತರಿ ಯೋಜನೆಗಳಿಂದ ಹಣ ಪಡೆಯುವವರು ಈ ಮಿತಿಯಲ್ಲಿ ವಹಿವಾಟು ಮುಗಿಸುವುದು ಕಷ್ಟ. ಬ್ಯಾಂಕುಗಳಿಂದ ಸಾಲ ಪಡೆಯ ಬಯಸುವವರು, ಚೆಕ್ ಬುಕ್, ಎಟಿಎಂ ಕಾರ್ಡ್ ಪಡೆಯಲು ಬಯಸುವವರು ಸಾಮಾನ್ಯ ಖಾತೆಗಳಿಗೆ ವರ್ಗಾವಣೆ ಹೊಂದುವುದು ಅನಿವಾರ್ಯ.
ಸರಕಾರವಾಗಲಿ, ಬ್ಯಾಂಕುಗಳಾಗಲಿ ಯಾವುದೇ ನಿಯಮ ಜಾರಿಗೆ ಮುನ್ನ ಪ್ರಚಲಿತ ವಾಸ್ತವವನ್ನು ಮನದಟ್ಟು ಮಾಡಿಕೊಂಡಿರಬೇಕು. ಸರಕಾರದ ಅಂಕಿ ಅಂಶಗಳ ಪ್ರಕಾರವೇ ನಮ್ಮ ದೇಶದ ಜನರ ತಲಾ ಆದಾಯ ಈಗಷ್ಟೇ 2 ಲಕ್ಷ ರು. (2,05,324 ರು.) ದಾಟಿದೆ. ಅರ್ಧಕ್ಕಿಂತ ಹೆಚ್ಚು ಜನರ ಮಾಸಿಕ ಸಂಬಳ 25 ಸಾವಿರ ರು.ಗಳಿಂದ 32 ಸಾವಿರ ರು.ಗಳ ಒಳಗಿದೆ.
ಅಂದರೆ ಸರಾಸರಿ ಮಾಸಿಕ ಸಂಬಳ ಪ್ರಮಾಣ ಕೇವಲ 27300 ರು.ಗಳು. ಈ ವರ್ಗದವರು ಸಂಬಳದ ಖಾತೆಗಳಲ್ಲಿ 50 ಸಾವಿರ ರು. ಗಳಷ್ಟು ದೊಡ್ಡ ಮೊತ್ತವನ್ನು ಕನಿಷ್ಠ ಶಿಲ್ಕು ಮೊತ್ತವಾಗಿ ಕಾಪಿಟ್ಟು ಕೊಂಡು ಬರಲು ಸಾಧ್ಯವಿದೆಯೇ ? ಬ್ಯಾಂಕುಗಳ ಈ ಸೇವಾಧರ್ಮದ ಹಿಂದಿನ ಮರ್ಮ ತಿಳಿಯ ಬೇಕಾದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ವಹಿವಾಟಿನ ಪ್ರಗತಿ ಪರಿಶೀಲನೆ ಮಾಡಬೇಕು.
ಖಾಸಗಿ ಬ್ಯಾಂಕುಗಳಾಗಲಿ, ಸಾರ್ವಜನಿಕ ರಂಗ ಬ್ಯಾಂಕುಗಳಾಗಲಿ ಅವುಗಳ ವಹಿವಾಟಿನಲ್ಲಿ ಬಡ್ಡಿಯೇತರ ಆದಾಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅಂದರೆ ಬ್ಯಾಂಕುಗಳು ತಾವು ನೀಡಿದ ಸಾಲಕ್ಕೆ ಬಡ್ಡಿ ರೂಪದಲ್ಲಿ ಪಡೆದ ಹಣಕ್ಕಿಂತ ಹೆಚ್ಚಿನ ಹಣವನ್ನು ಸೇವಾ ಶುಲ್ಕ ಮತ್ತು ದಂಡದ ರೂಪದಲ್ಲಿ ಸಂಗ್ರಹಿಸಿವೆ.
ಕಳೆದ ಆರ್ಥಿಕ ಸಾಲಿನಲ್ಲಿ ಐಸಿಐಸಿಐ ಬ್ಯಾಂಕಿನ ಬಡ್ಡಿಯೇತರ ಆದಾಯ ಶೇ.14ರಷ್ಟು ಹೆಚ್ಚಳ ಕಂಡಿದ್ದು ಬರೋಬ್ಬರಿ 27700 ಕೋಟಿ ರು. ಈ ಬಾಬ್ತಿನಲ್ಲೇ ಸಂಗ್ರಹವಾಗಿದೆ. ಇದರಲ್ಲಿ ಶೇ 80ರಷ್ಟು ಮೊತ್ತ (24, 357) ಶುಲ್ಕ ಸಂಗ್ರಹ ರೂಪದಲ್ಲಿ ಬಂದಿರುವುದು ಗಮನಾರ್ಹ. ಎಸ್‌ಬಿಐ ಈ ನಿಟ್ಟಿನಲ್ಲಿ ಇನ್ನೂ ಮುಂದಿದೆ. ಕಳೆದ ಜೂನ್‌ಗೆ ಅಂತ್ಯವಾದ ತ್ರೈಮಾಸಿಕ ವರದಿ ಪ್ರಕಾರ ಬ್ಯಾಂಕ್ ಬಡ್ಡಿಯೇ ತರ ಆದಾಯ ಕಳೆದ ಸಾಲಿಗಿಂತ ಶೇ. 55ರಷ್ಟು ಏರಿಕೆ ಕಂಡಿದ್ದು 17,346 ಕೋಟಿ ರು. ಸಂಗ್ರಹ.
ಸಾಮಾನ್ಯ ಗ್ರಾಹಕರಿಗೆ ಸೇವೆ ನೀಡಲು ನೂರೆಂಟು ದಾಖಲೆ, ನಿಯಮಗಳನ್ನು ಕೇಳುವ ಇದೇ ಬ್ಯಾಂಕುಗಳು ತಮ್ಮ ಪ್ರೀಮಿಯಂ ಗ್ರಾಹಕರ ಮನೆ ಬಾಗಿಲಿಗೆ ಧಾವಿಸಿ ಅವರ ಷರತ್ತಿನ ಅನ್ವಯವೇ ನೂರಾರು ಕೋಟಿ ರು. ಸಾಲ ನೀಡುವಾಗ ಈ ನಿಯಮಗಳು ಅನ್ವಯವಾಗುವುದಿಲ್ಲ. ಇದೇ ಐಸಿಐಸಿಐ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದ ಚಂದಾ ಕೊಚ್ಚಾರ್, ವಿಡಿಯೋಕಾನ್ ಗ್ರೂಪ್‌ಗೆ 300 ಕೋಟಿ ರೂ. ಸಾಲ ಮಂಜೂರು ಮಾಡಲು ಬರೋಬ್ಬರಿ 64 ಕೋಟಿ ರೂ. ಲಂಚ ಪಡೆದಿರುವುದು ಇತ್ತೀಚೆಗೆ ಸಾಬೀತಾಗಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕೊಚ್ಚಾರ್ ಕಥೆ ಇದಾದರೆ ವಿಜಯ ಮಲ್ಯ, ಅನಿಲ್ ಅಂಬಾನಿ ಯವರಂತಹ ಕಾರ್ಪೋರೇಟ್ ಕುಳಗಳಿಗೆ ಸಾವಿರಾರು ಕೋಟಿ ಸಾಲ ನೀಡಲು ಖಾಸಗಿ ಬ್ಯಾಂಕುಗಳಿ ಗಿಂತಲೂ ಸಾರ್ವಜನಿಕ ವಲಯದ ಬ್ಯಾಂಕುಗಳೇ ಮುಂಚೂಣಿಯಲ್ಲಿದ್ದವು. ‘ಒಳ ವ್ಯವಹಾರ’ ನಡೆಯದ ಹೊರತು ಇಷ್ಟೊಂದು ದೊಡ್ಡ ಮೊತ್ತದ ಸಾಲ ಹಂಚಿಕೆಯಾಗಲು ಸಾಧ್ಯವಿಲ್ಲ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವ ಸತ್ಯ.
ಇಲ್ಲಿ ನಷ್ಟವಾಗಿರುವುದು, ತೊಂದರೆ ಅನುಭವಿಸಿದ್ದು ದೇಶದ ಶ್ರೀ ಸಾಮಾನ್ಯರು. ಕಾರ್ಪೋರೇಟ್ ಕುಳಗಳಿಗೆ ಸಿಗುವಂತೆ ಮಿತ ಬಡ್ಡಿ ದರದಲ್ಲಿ ಜನಸಾಮಾನ್ಯರಿಗೂ ಸಾಲ ಸಿಗುತ್ತಿದ್ದರೆ, ಈ ದೇಶದ ಕೋಟ್ಯಂತರ ಜನರ ಬಾಳು ಹಸನಾಗುತ್ತಿತ್ತು.