ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manjunath Gowda Column: ಆರೆಸ್ಸೆಸ್‌ ಈ ನೆಲದ ಕಾನೂನಿಗೆ ಅತೀತವೇ ?

ಆರೆಸ್ಸೆಸ್‌ನವರು ರಾವಣ ಸಂಸ್ಕೃತಿ, ದ್ವೇಷ, ಅಸೂಯೆ, ದರ್ಪವನ್ನು ಮೆರೆಯುತ್ತಿದ್ದಾರೆ. ಅನುಮತಿ ಪಡೆಯುವಂತೆ ಹೇಳಿದರೆ ಜೀವ ಬೆದರಿಕೆ ಹಾಕಲು ಇವರು ಕಾನೂನಿಗೆ ಅತೀತರೇ? ತಾನು ದೇಶದ ಸಂವಿಧಾನ, ಕಾನೂನಿಗೆ ಅತೀತವೆಂದು ಬಿಜೆಪಿ ಭಾವಿಸಿ ದಂತಿದೆ. ಸರಕಾರಿ ಶಾಲೆಗಳು/ಶಾಲಾ ಆವರಣ ಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು,

ತಿರುಗೇಟು

ಮಂಜುನಾಥ ಗೌಡ

ಭಾರತ ದೇಶವು ಸಂವಿಧಾನ ಮತ್ತು ಅದರ ಕಾನೂನಿನ ಮೂಲಕ ಆಳಲ್ಪಡುವ ಪ್ರಜಾಪ್ರಭುತ್ವ ದೇಶ. ಇಲ್ಲಿ ಸರಕಾರ, ಸಂಘ-ಸಂಸ್ಥೆ, ಪ್ರಜೆಗಳು ಎಲ್ಲರೂ ಸಂವಿಧಾನ ಮತ್ತು ಕಾನೂನಿನ ಅಡಿ ಯಲ್ಲೇ ನಡೆಯಬೇಕು. ಅನಿಯಂತ್ರಿತ ಶಕ್ತಿ ಅಥವಾ ಕಾನೂನಿಗೆ ಅತೀತವಾದ ಅಧಿಕಾರಕ್ಕೆ ಅವಕಾಶವಿಲ್ಲ. ಇಂಥ ನೆಲದಲ್ಲಿ ಕಾನೂನಿಗೆ ಗೌರವ ಕೊಡದ ಆರೆಸ್ಸೆಸ್ ಎಂಬ ಭೂಗತ ಸಂಘಟನೆ 100 ವರ್ಷಗಳಿಂದ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ.

ತನ್ನ ಸಮಾಜ ವಿರೋಧಿ ಚಟುವಟಿಕೆಗಳಿಂದ ನಿಷೇಧಕ್ಕೂ ಒಳಗಾಗಿದೆ. ಕನಿಷ್ಠಪಕ್ಷ ಕಾನೂನು ಪ್ರಕಾರ ನೋಂದಣಿಯೂ ಆಗದ ಈ ಸಂಸ್ಥೆಯ ವಿರುದ್ಧ ಮತ್ತೆ ಜನಾಂದೋಲನ ಶುರುವಾಗಿದೆ. ಆದರೂ, ರಾಜ್ಯ ಸರಕಾರವು ಆರೆಸ್ಸೆಸ್ ಅನ್ನು ನಿಷೇಧ ಮಾಡಿಲ್ಲ. ಶಾಲೆ/ಶಾಲಾ ಆವರಣ ಸೇರಿದಂತೆ ಸಾರ್ವಜನಿಕ ಆಸ್ತಿಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳ ಚಟುವಟಿಕೆಗೆ ಪೂರ್ವಾನುಮತಿ ಕಡ್ಡಾಯ ಎಂಬ ನಿಯಮವನ್ನು ಮಾತ್ರ ಮಾಡಿದೆ.

ಆದೇಶದಲ್ಲಿ ಆರೆಸ್ಸೆಸ್‌ನ ಹೆಸರನ್ನೂ ಉಲ್ಲೇಖಿಸಿಲ್ಲ. ಇದೇ ರೀತಿಯ ಆದೇಶವನ್ನು ಬಿಜೆಪಿಯು 2013ರಲ್ಲೇ ಮಾಡಿತ್ತು. ಹೀಗಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ತನ್ಮೂಲಕ ಬಿಜೆಪಿಯವರು ಹಾಗೂ ಆರೆಸ್ಸೆಸ್‌ನ ಸ್ವಯಂಸೇವಕರು ತಾವು ಹೇಗೆ ನಾಥೂ ರಾಮ್ ಗೋಡ್ಸೆಯಂಥ ದೇಶದ ಭಯೋತ್ಪಾದಕನ ಹಿಂಬಾಲಕರು ಎಂಬುದನ್ನು ಸಾಬೀತುಪಡಿಸು ತ್ತಿದ್ದಾರೆ.

ಇದನ್ನೂ ಓದಿ: RSS procession: ನ.2ರಂದು ‘RSS’ ಪಥಸಂಚಲನಕ್ಕೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್

ಆರೆಸ್ಸೆಸ್‌ನವರು ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲು ಹೊರಟಿರು ವುದು ಹೇಡಿತನ. ಸಂವಿಧಾನದ ಮೇಲೆ ನಂಬಿಕೆಯಿಟ್ಟಿರುವ ಕೋಟ್ಯಂತರ ಜನರು ಅವರ ಬೆನ್ನಿಗೆ ಇದ್ದೇವೆ. ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಿ, ಎಳೆಯ ಕಂದಮ್ಮಗಳ ಮನಸ್ಸಿನಲ್ಲೂ ವಿಷಬೀಜವನ್ನು ಬಿತ್ತಲಾಗುತ್ತಿದೆ.

ದ್ವೇಷ, ಅಸೂಯೆಯನ್ನು ಬಿತ್ತಲಾಗುತ್ತಿದೆ; ನೋಂದಣಿ ಆಗದ ಸಂಘದ ಹೆಸರಿನಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ದಲಿತರು, ಹಿಂದುಳಿದ ವರ್ಗದವರನ್ನು ಬಳಸಿಕೊಂಡು ಸಂಘದ ಗರ್ಭಗುಡಿಗೆ ಪ್ರವೇಶ ನೀಡದೆ ಅಧಿಕಾರ ನಡೆಸುತ್ತಿದ್ದಾರೆ.

ಕಾನೂನಿಗೆ ಅತೀತರೇ?: ಆರೆಸ್ಸೆಸ್‌ನವರು ರಾವಣ ಸಂಸ್ಕೃತಿ, ದ್ವೇಷ, ಅಸೂಯೆ, ದರ್ಪವನ್ನು ಮೆರೆಯುತ್ತಿದ್ದಾರೆ. ಅನುಮತಿ ಪಡೆಯುವಂತೆ ಹೇಳಿದರೆ ಜೀವ ಬೆದರಿಕೆ ಹಾಕಲು ಇವರು ಕಾನೂನಿಗೆ ಅತೀತರೇ? ತಾನು ದೇಶದ ಸಂವಿಧಾನ, ಕಾನೂನಿಗೆ ಅತೀತವೆಂದು ಬಿಜೆಪಿ ಭಾವಿಸಿ ದಂತಿದೆ. ಸರಕಾರಿ ಶಾಲೆಗಳು/ಶಾಲಾ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು, ಶಿಕ್ಷಣೇತರ ಚಟುವಟಿಕೆಗಳಿಂದ ದೂರವಿರಬೇಕು, ಶೈಕ್ಷಣಿಕ ಚಟುವಟಿಕೆಗೆ ಸೀಮಿತವಾಗಿರಬೇಕು. ಈ ಆದೇಶವನ್ನು 2013 ರಲ್ಲಿ ಬಿಜೆಪಿ ಸರಕಾರವೇ ಹೊರಡಿಸಿತ್ತು.

ಬಿಜೆಪಿ ಪಕ್ಷಕ್ಕೆ ತನ್ನದೇ ಸರಕಾರ ಹೊರಡಿಸಿದ ಆದೇಶ, ತಾನೇ ರೂಪಿಸಿದ ಕಾನೂನಿನ ಅರಿವಿಲ್ಲವೇ? ಅಥವಾ ಅರಿವಿಲ್ಲದಂತೆ ಅದು ನಾಟಕವನ್ನು ಆಡುತ್ತಿದೆಯೇ? ಅಥವಾ ಈ ನೆಲದ ಕಾನೂನುಗಳು ಅದಕ್ಕೆ ಅನ್ವಯವೇ ಆಗುವುದಿಲ್ಲವೇ?

ದೇಶದ್ರೋಹಿ ಸಂಘಟನೆ: 1925ರಿಂದ ಸಂಘವು ಬೆಳೆದ ರೀತಿಯ ಬಗ್ಗೆ ಮಹಾತ್ಮ ಗಾಂಧೀಜಿ, ಬಿ. ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಗಣ್ಯರು ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ‘ಯಾವ ಸಂಘಟನೆಯು ಜಾತಿ, ಕೋಮು ಭಾವನೆಯನ್ನು ಪ್ರಚೋದಿಸುವುದೋ ಅದು ದೇಶದ್ರೋಹಿ ಸಂಘಟನೆ’ ಎಂದು ಅಂಬೇಡ್ಕರ್ ಹೇಳಿದ್ದರು.

‘ಆರೆಸ್ಸೆಸ್‌ನಂಥ ನಿರಂಕುಶ ತತ್ವದ ಸಂಘಟನೆ ದೇಶಕ್ಕೆ ಅಪಾಯಕಾರಿ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು 1948ರ ಜುಲೈ ೧೮ರಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ, “ಆರೆಸ್ಸೆಸ್ ಮತ್ತು ಹಿಂದೂ ಮಹಾಸಭೆಯ ಚಟುವಟಿಕೆಗಳಿಂದಲೇ ಗಾಂಧೀಜಿಯ ಹತ್ಯೆಯಂಥ ಭೀಕರ ದುರಂತಕ್ಕೆ ಕಾರಣವಾದ ವಾತಾವರಣ ನಿರ್ಮಾಣವಾಯಿತು" ಎಂದು ಹೇಳಿದ್ದರು.

ಇಂಥ ಹಿನ್ನೆಲೆಯ ಆರೆಸ್ಸೆಸ್, ಕಳೆದ ೧೦೦ ವರ್ಷದಿಂದ ಕೋಮುಭಾವನೆಯನ್ನು ಕೆರಳಿಸುವ ಕೆಲಸವನ್ನೇ ಮಾಡುತ್ತಿದೆ. ಹೀಗಾಗಿ, ಈಗಾಗಲೇ ೩ ಬಾರಿ ನಿಷೇಧಕ್ಕೊಳಗಾಗಿದ್ದ ಈ ಸಂಘಟನೆ ಯನ್ನು ಮತ್ತೆ ನಿಷೇಧಿಸಬೇಕು ಎಂಬ ಚರ್ಚೆ ಹುಟ್ಟಿಕೊಂಡಿದೆ. ಆರೆಸ್ಸೆಸ್ ದೇಶದ್ರೋಹಿ ಯಾಕೆಂದರೆ, ರಾಷ್ಟ್ರಧ್ವಜವನ್ನು ಹಾರಿಸಲು ಆರೆಸ್ಸೆಸ್‌ನವರು 50 ವರ್ಷಗಳನ್ನು ತೆಗೆದುಕೊಂಡರು, ದೇಶದ ಏಕತೆ, ಸಾಮರಸ್ಯ ಕಾಪಾಡಲು ಈ ಸಂಘಟನೆ ಇದುವರೆಗೂ ಮಾಡಿರುವ ಒಂದು ಉತ್ತಮ ಕೆಲಸವೂ ಇಲ್ಲ.

ರಾಜ್ಯದಲ್ಲೂ ಅನೈತಿಕ ಚಟುವಟಿಕೆ: ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಹಿಂದೊಮ್ಮೆ,

“ಬ್ಲ್ಯೂಫಿಲಂ ನೋಡುವುದನ್ನು ಕಲಿಯಲು ಆರೆಸ್ಸೆಸ್‌ಗೆ ಹೋಗಬೇಕೇ?" ಎಂದು ಪ್ರಶ್ನಿಸಿದ್ದರು. ದಿನೇಶ್ ನಾರಾಯಣ್ ಅವರ ‘ಆರೆಸ್ಸೆಸ್ ಆಂಡ್ ದಿ ಮೇಕಿಂಗ್ ಆಫ್ ದಿ ಡೀಪ್ ನೇಷನ್’ ಕೃತಿಯನ್ನು ಉಲ್ಲೇಖಿಸಿ, ಆರೆಸ್ಸೆಸ್‌ನಲ್ಲಿನ ಅವ್ಯವಹಾರ, ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಕುಮಾರಸ್ವಾಮಿ ಅವರು ವಿಸ್ತೃತ ಅಂಕಣವನ್ನೇ ಬರೆದಿದ್ದರು. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರಂತೂ, ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ದಾಳಿ ನಡೆದ ವೇಳೆ, “ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು" ಎಂದು ಆಗ್ರಹಿಸಿದ್ದರು. ಇವೆಲ್ಲವನ್ನೂ ಈ ಇಬ್ಬರೂ ರಾಜಕೀಯ ಲಾಭಗಳಿಗಾಗಿ ಮರೆತಿರಬಹುದು. ಆದರೆ, ಆಗ ಅವರು ಹೇಳಿದ್ದ ಸತ್ಯ ಇಂದಿಗೂ ಅನ್ವಯವಾಗುತ್ತದೆ.

ಅಧಿಕೃತತೆಯೇ ಇಲ್ಲ: ಆರೆಸ್ಸೆಸ್ ಎಲ್ಲಿ ನೋಂದಣಿ ಯಾಗಿದೆ? ಅದರ ಅಧಿಕೃತತೆಗೆ ಪುರಾವೆ ಯೇನು? ಅದು ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳೆಲ್ಲಾ ಅದರ ಸ್ವಂತದ್ದೇ ಅಥವಾ ಬೇನಾಮಿಯೇ? ಅದರ ಆಸ್ತಿ, ವಹಿವಾಟು ಇತ್ಯಾದಿಗಳ ಲೆಕ್ಕಪತ್ರ ಮಾಹಿತಿ ಎಲ್ಲಿದೆ? ಬರುತ್ತಿರುವ ಕೋಟ್ಯಂತರ ರುಪಾಯಿ ಆದಾಯಕ್ಕೆ ಲೆಕ್ಕ ಕೊಡಲಾಗುತ್ತಿದೆಯೇ? ಬಿಜೆಪಿಯು ಪ್ರತಿಯೊಬ್ಬರ ಮಾಹಿತಿಯನ್ನು ಹೊಂದಿದೆ, ಅದೇ ರೀತಿ ಸಂಘದ ಮಾಹಿತಿಯನ್ನೂ ಇಟ್ಟಿದೆಯೇ? ಎಂದು ಎಚ್ .ಡಿ. ಕುಮಾರಸ್ವಾಮಿಯವರು ಹಿಂದೊಮ್ಮೆ ಪ್ರಶ್ನಿಸಿದ್ದುಂಟು. ಇದನ್ನೇ ಈಗ ರಾಜ್ಯಾದ್ಯಂತ ಜನರು ಪ್ರಶ್ನಿಸುತ್ತಿದ್ದಾರೆ.

ಉಚಿತ ಶಿಕ್ಷಣವೇ ಪೊಳ್ಳು: ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ವಿವಿಧ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ‘ಉಚಿತ ಶಿಕ್ಷಣ’ ಎಂಬುದು ಪೊಳ್ಳು ತಾನೇ? ಆರೆಸ್ಸೆಸ್‌ನ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪೀಕಿಸುತ್ತಿರುವ ಶುಲ್ಕವೆಷ್ಟು? ಇದು ಸಮಾಜಸೇವೆಯೇ? ಬಡಬಗ್ಗರು ಈ ಶಾಲೆಗಳಲ್ಲಿ ಸೇರಲು ಸಾಧ್ಯವೇ? ಹಾಗಾದರೆ ಸರಕಾರದಿಂದ ಅನುದಾನ, ಜನರಿಂದ ದೇಣಿಗೆ ಪಡೆದು ನಿರ್ವಹಿಸು ತ್ತಿರುವುದು ಏಕೆ? ಎಂಬುದು ಎಲ್ಲರ ಪ್ರಶ್ನೆ.

ಸೇವೆಗಿಂತ ‘ಪವರ್’ಗೆ ಆದ್ಯತೆ: ಆರೆಸ್ಸೆಸ್ ಎಂಬುದು ಸೇವಾಸಂಸ್ಥೆಯಾಗಿ ಉಳಿಯದೆ, ‘ಪವರ್ ಸೆಂಟರ್’ ಆಗುವ ತವಕವನ್ನು ರೂಢಿಸಿಕೊಂಡಿದೆ. ಸಂವಿಧಾನಬದ್ಧವಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳನ್ನು ಕೀಲುಗೊಂಬೆಗಳನ್ನಾಗಿ ಮಾಡಿಕೊಂಡಿದೆ. ಹೀಗಾಗಿ, ಜನಪರ ಹೋರಾಟಗಳಿಂದ ಬಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿ.ಎಲ್.ಸಂತೋಷ್ ಮುಗಿಸಿದರು.

ಕೇಂದ್ರ ಸರಕಾರದ ಜುಟ್ಟು ನಾಗಪುರದ ಸಂಘದ ಕಚೇರಿಯಲ್ಲಿದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕೇಶವಕೃಪಾದಲ್ಲಿ ಅದರ ಜುಟ್ಟು ಇರುತ್ತದೆ. ಆ ಕಚೇರಿಯಿಂದ ಬಂದವರನ್ನು ಶಿಕ್ಷಣ ಸಚಿವ, ಗೃಹ ಸಚಿವರನ್ನಾಗಿ ಮಾಡಿದ್ದರಿಂದಲೇ ಶಾಲೆಗಳಿಗೆ ಕೇಸರಿ ಬಣ್ಣವನ್ನು ಹೊಡೆಯುವುದರಿಂದ ಹಿಡಿದು ಹಿಜಾಬ್, ಕೇಸರಿ ಶಾಲು ವಿವಾದಗಳೆಲ್ಲಾ ಹುಟ್ಟಿಕೊಂಡಿದ್ದು. ಸ್ವಾತಂತ್ರ್ಯಕ್ಕೂ ಮೊದಲು ಸಂಘ ಹೇಗಿತ್ತು? ಈಗ ಹೇಗಿದೆ? ಜನಾದೇಶವನ್ನು ಽಕ್ಕರಿಸಿ ಸರಕಾರಗಳನ್ನು ಉರುಳಿಸುವ ಮಟ್ಟಕ್ಕೆ ಅದು ಹೋಗಿದೆ,

ಇಂಥ ಸಂಘ ಬೇಕೇ? ಎಂಬ ಪ್ರಶ್ನೆ ಜನರಲ್ಲಿ ಹುಟ್ಟಿದೆ. ಸರಕಾರಿ ನೌಕರರ ನಿಯಂತ್ರಣ: ೨೦೧೬ರ ಒಂದೇ ವರ್ಷದಲ್ಲಿ 676 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇಷ್ಟೂ ಜನರು ಒಂದೇ ಸಂಸ್ಥೆಯಲ್ಲಿ ತರಬೇತಿ ಪಡೆದವರು. ಅದು ಆರೆಸ್ಸೆಸ್ ಅಧೀನದ ಸಂಸ್ಥೆ. ಹೀಗಾದರೆ, ಐಎಎಸ್ ಪರೀಕ್ಷೆ, ಆಯ್ಕೆ ನಡೆಸುವ ಸಂಸ್ಥೆಯ ಪಾವಿತ್ರ್ಯದ ಕಥೆಯೇನು? ಎಂಬುದಾಗಿ ಈಗ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿರುವವರೇ ಪ್ರಶ್ನಿಸಿದ್ದರು.

ಸಂಘದ ಚಟುವಟಿಕೆಗಳು ಅಷ್ಟು ಆಳವಾಗಿ ಹಾಗೂ ಕಾನೂನುಬಾಹಿರವಾಗಿ ಹರಡಿಕೊಂಡಿವೆ. ರಾಜ್ಯದಲ್ಲೂ ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಜನರ ಸೇವೆ ಬಿಟ್ಟು ಪಕ್ಷಗಳ ಸೇವೆ ಮಾಡುವುದು ನಡೆಯುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಸರಕಾರಿ ನೌಕರರು, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು-2021ರ ನಿಯಮ ೫(೧)ರ ಪ್ರಕಾರ, ಯಾವುದೇ ಸರಕಾರಿ ನೌಕರ, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರಬಾರದು.

ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಈ ನಿಯಮದ ಅಡಿ, ಕೋಮುವಾದಿ ಸಂಘಟನೆಯ ಚಟುವಟಿಕೆಯನ್ನು ನಿಯಂತ್ರಣ ಮಾಡಬೇಕು.

(ಲೇಖಕರು ಕೆಪಿಸಿಸಿ ಯುವ ಘಟಕದ

ರಾಜ್ಯಾಧ್ಯಕ್ಷರು)