ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಕಾರ್ಗಿಲ್‌ ಯುದ್ದಕ್ಕೆ ಆಯಿತು 26 ವರ್ಷಗಳು...

ಒಟ್ಟು 73 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಅಪಾರ ಪ್ರಮಾಣದ ಕಷ್ಟ-ನಷ್ಟ ಉಂಟಾ ಯಿತು. ಭಾರತದ ಸಶಸ್ತ್ರ ಪಡೆಗಳ 527 ಸೈನಿಕರು ದೇಶರಕ್ಷಣೆಯ ಈ ಕೈಂಕರ್ಯದಲ್ಲಿ ಹುತಾತ್ಮರಾದರು. ಪಾಕಿಸ್ತಾನದ ಸೈನಿಕರು ಭಾರತದ ಗಡಿಯೊಳಗೆ ನುಸುಳಿ ಕಾರ್ಗಿಲ್ ಪ್ರದೇಶ ವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ವಿಜಯ ಸಿಂದೂರ

ರವೀ ಸಜಂಗದ್ದೆ

ಕಾರ್ಗಿಲ್ ವಿಜಯ ದಿವಸ್. ಈ ಮೂರು ಶಬ್ದಗಳೊಳಗೆ ರಾಷ್ಟ್ರದ ಹೆಮ್ಮೆ, ಗೌರವ ಮತ್ತು ಸ್ಮರಣೀಯ ಚರಿತ್ರೆ ದಾಖಲಾಗಿವೆ. ಇದು ಭಾರತದ ಮಿಲಿಟರಿ ಇತಿಹಾಸದ ಅತ್ಯಂತ ಮಹತ್ವದ, ಸಂಕೀರ್ಣ ಮತ್ತು ಕೆಚ್ಚೆದೆಯ ವಿಜಯಗಳಲ್ಲಿ ಒಂದೆನಿಸಿಕೊಂಡಿ ರುವಂಥದ್ದು. ಇದನ್ನು ಅತ್ಯಂತ ಶ್ರದ್ಧೆ ಯಿಂದ, ಭಕ್ತಿ-ಭಾವದಿಂದ ಗುರುತಿಸಿ, ಪ್ರತಿವರ್ಷದ ಜುಲೈ 26ರಂದು ‘ಕಾರ್ಗಿಲ್ ವಿಜಯ್ ದಿವಸ್’ ಹೆಸರಿನಲ್ಲೇ ಆಚರಿಸಲಾಗುತ್ತದೆ.

1999ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸುವ, ಭಾರತೀಯ ಸಶಸ ಪಡೆಗಳ ಅಚಲ ಧೈರ್ಯ ಮತ್ತು ತ್ಯಾಗವನ್ನು ಗೌರವಿಸುವ ಮಹತ್ವದ ದಿನವಿದು. ಹಿಮಾಲಯದ ಕಠಿಣ ಮತ್ತು ದುರ್ಗಮ ಭೂಪ್ರದೇಶದ ನಡುವೆ, ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಸಾಧಿಸಿದ ಮಹತ್ತರ ವಿಜಯದ ಪ್ರಬಲ ಜ್ಞಾಪನೆಯ ಭಾಗವಾಗಿ, ಒಂದಿಡೀ ದೇಶ ಈ ದಿನವನ್ನು ಮತ್ತು ಗೆಲುವನ್ನು ಸ್ಮರಿಸಿ ಸಂಭ್ರಮಿಸುತ್ತದೆ.

ದೇಶದ ಶಿಖರಪ್ರಾಯದಂತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ನಮ್ಮ ‘ವ್ಯೂಹಾತ್ಮಕ ಕಾರ್ಯ ತಂತ್ರ ಸ್ಥಳಗಳನ್ನು’ 1972ರ ‘ಶಿಮ್ಲಾ ಕದನವಿರಾಮ ಒಪ್ಪಂದ’ವನ್ನು ಮುರಿದು, ಕಳ್ಳದಾರಿಯ ಮೂಲಕ ನುಸುಳಿ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯೆದುರು ವೀರಾವೇಶದಿಂದ ಹೋರಾಡಿ, ಮತ್ತೆ ಮರಳಿ ಪಡೆದು, ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ, ದೇಶವು ಸಡಗರದಿಂದ ಸಂಭ್ರಮಿಸಿದ ಆ ದಿನಕ್ಕೆ ಇದೇ ಜುಲೈ 26ಕ್ಕೆ ಭರ್ತಿ 26 ವರ್ಷಗಳು. ಕಾರ್ಗಿಲ್ ಪ್ರದೇಶದ ಗಡಿ ನಿಯಂತ್ರಣ ರೇಖೆಗುಂಟ ನಡೆದ ಪಾಕಿಸ್ತಾನದ ಶಸ್ತ್ರಸಜ್ಜಿತ ಸೇನೆ ಮತ್ತು ಅರೆಸೇನಾ ಪಡೆಗಳ ಅಪ್ರಚೋದಿತ ಒಳನುಸುಳುವಿಕೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ‘ಆಪರೇಷನ್ ವಿಜಯ್’ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.

ಇದನ್ನೂ ಓದಿ: Ravi Sajangadde Column: ಗ್ಯಾರಂಟಿ ಯುಗದಲ್ಲಿ ಜನಕಲ್ಯಾಣ ಸಾಕಾರವಾದೀತೇ ?

ಒಟ್ಟು 73 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಅಪಾರ ಪ್ರಮಾಣದ ಕಷ್ಟ-ನಷ್ಟ ಉಂಟಾಯಿತು. ಭಾರತದ ಸಶಸ್ತ್ರ ಪಡೆಗಳ 527 ಸೈನಿಕರು ದೇಶರಕ್ಷಣೆಯ ಈ ಕೈಂಕರ್ಯದಲ್ಲಿ ಹುತಾತ್ಮರಾದರು. ಪಾಕಿಸ್ತಾನದ ಸೈನಿಕರು ಭಾರತದ ಗಡಿಯೊಳಗೆ ನುಸುಳಿ ಕಾರ್ಗಿಲ್ ಪ್ರದೇಶ ವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಭಾರತೀಯ ಸೇನೆಯು ಕ್ಲಿಷ್ಟಕರ ಪರ್ವತ ಪ್ರದೇಶ ಮತ್ತು ಕಠಿಣ ಹವಾಮಾನದ ಹೊರತಾಗಿಯೂ ಧೈರ್ಯ ಮತ್ತು ಸಾಹಸದಿಂದ ಹೋರಾಡಿ, ಆ ಪ್ರದೇಶವನ್ನು ಮರಳಿ ಪಡೆದು ಸಂಭ್ರಮಿಸಿತು. ಹೀಗಾಗಿ, ದೇಶದ ಸಾರ್ವಭೌಮತ್ವದ ಸಂರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟ ಅಪ್ರತಿಮ ಸೈನಿಕರ ಶಕ್ತಿಯನ್ನು ಸ್ಮರಿಸಲು ಮೀಸಲಿರುವ ದಿನವಿದು.

ಸಮುದ್ರ ಮಟ್ಟದಿಂದ ಸುಮಾರು 11000 ಅಡಿಗಳಷ್ಟು ಎತ್ತರದಲ್ಲಿರುವ, ಲಡಾಖ್ ಪ್ರದೇಶದ ಕಾರ್ಗಿಲ್ ಜಿಲ್ಲೆಯ ದ್ರಾಸ್‌ನಲ್ಲಿರುವ ‘ಯುದ್ಧಭೂಮಿ ಸ್ಮಾರಕ’ದ ವಿವರಗಳು ರೋಮಾಂಚನ ಗೊಳಿಸುತ್ತವೆ. ಯುದ್ಧದಲ್ಲಿ ಹುತಾತ್ಮರಾದ ಹೆಮ್ಮೆಯ ಸೈನಿಕರನ್ನು ಬಿಂಬಿಸುವ 527 ನಾಮಫಲಕ ಗಳು ಇಲ್ಲಿವೆ. ಮಾತ್ರವಲ್ಲದೆ ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಬಳಸಲಾದ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ಇರಿಸಲಾಗಿದೆ.

ಗುಲಾಬಿ ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಸ್ಮಾರಕವು ಭಾರತದ ಸೈನಿಕರ ಶೌರ್ಯ-ತ್ಯಾಗಗಳ ಸಂಕೇತವಾಗಿದೆ. ಇಲ್ಲಿ ಹಾರುವ ಭಾರತದ ತ್ರಿವರ್ಣ ಧ್ವಜವನ್ನು ನೋಡಲು ಕಂಗಳೆರಡು ಸಾಲವು. ದೇಶಭಕ್ತಿಯನ್ನು ಬಡಿದೆಬ್ಬಿಸುವ, ಯೋಧರ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಸ್ಮಾರಕವಿದು.

ಕಾರ್ಗಿಲ್ ಯುದ್ಧ ನಡೆದ ಸ್ಥಳ-ಪರಿಸರದಲ್ಲೇ ನಿರ್ಮಾಣವಾಗಿರುವ ಈ ಸ್ಮಾರಕದ ಹಿನ್ನೆಲೆಯಲ್ಲಿ, ಅಂದು ಪಾಕಿಸ್ತಾನವು ವಶಪಡಿಸಿಕೊಂಡಿದ್ದ ಟೋಲೋಲಿಂಗ್ ಹಾಗೂ ಟೈಗರ್ ಬೆಟ್ಟಗಳನ್ನು ಕಾಣಬಹುದು. ಭಾರತವು ವಿಭಜನೆಯಾಗಿ ಪಾಕಿಸ್ತಾನ ಹುಟ್ಟಿದಾಗಿನಿಂದಲೂ ಕಾಶ್ಮೀರ ಎಂಬುದು ಸಮಸ್ಯೆಯ ಕೂಪವಾಗಿಯೇ ಉಳಿದಿರುವುದು ಕಹಿಸತ್ಯ. ತನ್ನ ಭೂಪ್ರದೇಶವನ್ನು ವಿಸ್ತರಿಸಿಕೊಳ್ಳ ಲೆಂದು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಪಿ ಪಾಕಿಸ್ತಾನವು ಚೀನಾದ ಜತೆಗೂಡಿ ನಿರಂತರ ವಾಗಿ ಯತ್ನಿಸಿದ ಕಥೆಗಳು ಸಾಕಷ್ಟು ಸಿಗುತ್ತವೆ.

ಅದು ಎಷ್ಟೇ ತಿಪ್ಪರಲಾಗ ಹಾಕಿದರೂ ನಮ್ಮ ವೀರಯೋಧರು ದೇಶದ ಒಂದಿಂಚು ಭೂಮಿ ಯನ್ನೂ ಬಿಟ್ಟುಕೊಡಲೇ ಇಲ್ಲ. ಆದರೆ ಇಂಥ ಯತ್ನಗಳಲ್ಲಿ ಪೆಟ್ಟು ತಿಂದರೂ, ಹಲವು ಬಾರಿ ಸೋತರೂ ಪಾಕಿಸ್ತಾನ ಬುದ್ಧಿ ಕಲಿಯಲೇ ಇಲ್ಲ. ಗಡಿಯಾಚೆಯಿಂದಲೇ ನಿರಂತರ ಭಯೋತ್ಪಾದನೆ ಮಾಡುತ್ತಾ, ಗಡಿ ನಿಯಂತ್ರಣ ರೇಖೆಯನ್ನು ಆಗೀಗ ಉಲ್ಲಂಘಿಸುತ್ತಾ, ನಂತರ ಬಾಲ ಸುಟ್ಟ ಬೆಕ್ಕಿನಂತೆ ಒಂದಷ್ಟು ದಿನ ಮುದುಡಿ ಕೂರುವ ಪಾಕ್, ನಂತರ ಮತ್ತದೇ ಚಾಳಿಯನ್ನು ಶುರು ಹಚ್ಚಿಕೊಳ್ಳುತ್ತದೆ.

ಇತ್ತೀಚಿನ ಪಹಲ್ಗಾಮ್ ಭೀಭತ್ಸ ದಾಳಿಯು ಪಾಕಿಸ್ತಾನದ ಇಂಥ ಕುತ್ಸಿತ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ‘ಐಎಸ್‌ಐ’, ವಿವಿಧ ಭಯೋತ್ಪಾದಕ ಸಂಘಟನೆಗಳ ಹೆಸರಿನಲ್ಲಿ ಭಾರತದ ಮೇಲೆ ದಾಳಿ ಮಾಡಲು ನಿರಂತರ ಯತ್ನಿಸಿ ವಿಫಲವಾಗಿರು ವುದು ಜಗಜ್ಜಾಹೀರು.

ಇಂಥ ಕಸರತ್ತುಗಳನ್ನು ಕಂಡಿದ್ದ ಭಾರತವು ಈ ಬಾರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೆಂದು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ, ಸಿಂಧೂ ನದಿ ನೀರನ್ನು ತಡೆ ಹಿಡಿಯುವಿಕೆ ಮತ್ತು ಆರ್ಥಿಕ ದಿಗ್ಬಂಧನವನ್ನು ಹಾಕಿದೆ. ತನ್ಮೂಲಕ ಪಾಕಿಸ್ತಾನಕ್ಕೆ ತಡವರಿಸಿಕೊಳ್ಳುವಂಥ ಪೆಟ್ಟು ನೀಡಿದೆ. ಆದರೆ ಅಕ್ಷರಶಃ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಬುದ್ಧಿ ಬಂದಂತಿಲ್ಲ.

ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದು 26 ವರ್ಷಗಳು ಸಂದಿವೆ. ಭಾರತದ ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ. ಅಂದು ಪಾಕಿಸ್ತಾನದ ಧೋರಣೆಯನ್ನು ಮತ್ತು ಅದರ ಭಯೋತ್ಪಾದನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲು ಭಾರತವು ತುಂಬಾ ಶ್ರಮಪಡಬೇಕಿತ್ತು ಮತ್ತು ಹಲವು ದೇಶಗಳು ತಂತಮ್ಮ ರಾಜಕೀಯ ಮತ್ತು ವಾಣಿಜ್ಯಿಕ ಬೇಳೆ ಬೇಯಿಸಿಕೊಳ್ಳಲು ನೇರವಾಗಿ ಅಥವಾ ಇನ್ನಿತರ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ಆಪ್ತವಾಗು ತ್ತಿದ್ದವು, ಅದರೊಡನೆ ವ್ಯವಹರಿಸುತ್ತಿದ್ದವು.

ಅಂಥ ದೇಶಗಳಿಗೆ ಭಾರತ ಮತ್ತು ಪಾಕಿಸ್ತಾನಗಳು ವ್ಯಾಪಾರ-ವ್ಯವಹಾರಕ್ಕಷ್ಟೇ ಬೇಕಾಗಿದ್ದವೇ ವಿನಾ, ಕಾಶ್ಮೀರದ ಸಮಸ್ಯೆಯನ್ನಾಗಲೀ ಭಯೋತ್ಪಾದನೆಯ ಪಿಡುಗನ್ನಾಗಲೀ ಹತ್ತಿಕ್ಕುವ ಬಗ್ಗೆ ಅವಕ್ಕೆ ಆಸಕ್ತಿ ಇರಲಿಲ್ಲ. ಈಗ ಕಾಲ ಬದಲಾಗಿದೆ. ಪಹಲ್ಗಾಮ್ ದಾಳಿಯ ತರುವಾಯ ಪಾಕಿಸ್ತಾನ ವನ್ನು ಬೆಂಬಲಿಸುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ದೇಶಗಳ ನಿಲುವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಆ ದೇಶಗಳ ಜತೆಗಿನ ವ್ಯವಹಾರವನ್ನೂ, ಮಾನವೀಯ ನೆಲೆಯಲ್ಲಿ ಅವಕ್ಕೆ ನೀಡುತ್ತಿದ್ದ ನೆರವನ್ನೂ ಸಂಪೂರ್ಣ ನಿಲ್ಲಿಸಿದೆ.

ಪಾಕಿಸ್ತಾನವನ್ನು ಬೆಂಬಲಿಸಿದ್ದ ಟರ್ಕಿ ದೇಶವು ಈಗ ಭಾರತದ ಆರ್ಥಿಕ ದಿಗ್ಬಂಧನದ ಬಿಸಿಗೆ ಪತರಗುಟ್ಟುತ್ತಿದೆ. ಪಾಕಿಸ್ತಾನ ಕುರಿತಾದ ತನ್ನ ನಿಲುವನ್ನು ಭಾರತವು ಜಗತ್ತಿನೆದುರು ಗಟ್ಟಿದನಿ ಯಲ್ಲಿ ತೆರೆದಿಟ್ಟಿದೆ. “ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಜಗತ್ತಿನ ಯಾವ ದೊಣೆನಾಯಕನೂ ಮೂಗು ತೂರಿಸುವ, ಹೇಳಿಕೆ ನೀಡುವ ಅಗತ್ಯ ಸುತರಾಂ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಪಹಲ್ಗಾಮ್ ಮಾರಣಹೋಮಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಬಿದ್ದ ಏಟು ಪ್ರಬಲವಾಗಿದೆ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯು ಯಶಸ್ವಿಯಾಗಿ ಸಂಪನ್ನಗೊಂಡ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, “ನೀರು ಮತ್ತು ರಕ್ತ ಜತೆಯಾಗಿ ಹರಿಯಲಾರವು. ವ್ಯವಹಾರ ಮತ್ತು ಭಯೋ ತ್ಪಾದನೆ ಜತೆಯಾಗಿ ಸಾಗಲಾರವು. ಪಾಕಿಸ್ತಾನದ ಜತೆಗೆ ಮಾತಾಡುವುದೇನಾದರೂ ಉಳಿದಿದ್ದರೆ, ಅದು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ. ಇದನ್ನು ನಿರ್ವಹಿಸಲು ಭಾರತ ಸಶಕ್ತವಾಗಿದೆ, ಸ್ವತಂತ್ರವಾಗಿದೆ" ಎಂಬ ಸ್ಪಷ್ಟ ಸಂದೇಶ ವನ್ನು ಜಗತ್ತಿಗೆ ತಿಳಿಸಿದರು.

ಅಂದಿನ ದಿನಮಾನದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಇದೇ ರೀತಿಯ ದಿಟ್ಟ ನಿಲುವನ್ನು ಹೊಂದಿದ್ದರು ಎಂಬುದು ಗಮನಾರ್ಹ. ಇದು ಸಶಕ್ತ ಮತ್ತು ಶ್ರೇಷ್ಠ ಭಾರತದ ದ್ಯೋತಕ. ಪಾಕಿಸ್ತಾನವು ಇನ್ನೆಂದೂ ಭಾರತದೆದುರು ನೇರವಾಗಿ ಸೆಣಸಲಾರದಷ್ಟು ಸೊರಗಿದೆ.

ಅದು ಭಾರತದ ಎದುರು ನೇರವಾಗಿ ಹೋರಾಡಲೇ ಇಲ್ಲ ಎಂಬುದು ಬೇರೆ ಮಾತು! ಪಾಕ್‌ನ ದೈನಂದಿನ ಸಾಮಾಜಿಕ ಬದುಕು ಮತ್ತು ಆಂತರಿಕ ಭದ್ರತೆಗೆ ಆತಂಕವಾಗುವಷ್ಟರ ಮಟ್ಟಿಗೆ ಅಲ್ಲಿ ಭಯೋತ್ಪಾದನೆ ಬೆಳೆದುನಿಂತಿದೆ. ಇಂಥ ಹೊರಗಿನ ಶತ್ರುಗಳನ್ನು ಮೂಲದಲ್ಲೇ ಹತ್ತಿಕ್ಕುವಷ್ಟು ಭಾರತದ ಭದ್ರತಾ ವ್ಯವಸ್ಥೆ ಮತ್ತು ಸೇನೆ ಸದೃಢವಾಗಿವೆ, ಸನ್ನದ್ಧವಾಗಿವೆ.

ಪಾಕಿಸ್ತಾನ ಪ್ರಚೋದಿತ ಆಕ್ರಮಣ ಮತ್ತು ಭಯೋತ್ಪಾದಕ ದಾಳಿಯಲ್ಲಿ ಮಡಿದ ವೀರಯೋಧರಿಗೆ ಮತ್ತು ಅಮಾಯಕ ದೇಶವಾಸಿಗಳಿಗೆ ಈ ಸಂದರ್ಭದಲ್ಲಿ ಗೌರವಯುತ ಪ್ರಣಾಮಗಳು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)