Ravi Sajangadde Column: ಗ್ಯಾರಂಟಿ ಯುಗದಲ್ಲಿ ಜನಕಲ್ಯಾಣ ಸಾಕಾರವಾದೀತೇ ?
ಉಚಿತವಾದರೆ ನನಗೂ ಇರಲಿ, ನನ್ನ ತಂದೆಗೂ ಒಂದಿರಲಿ’ ಎನ್ನುವ ಅರ್ಥ ಬರುವ ಒಂದು ಗಾದೆ ಮಾತಿದೆ. ಉಡುಗೊರೆಯಾಗಿ ಏನಾದರೊಂದು ಸಿಕ್ಕರೆ ಅಥವಾ ಕಡಿಮೆ ದರದಲ್ಲಿ ಇಲ್ಲವೇ ಉಚಿತ ವಾಗಿ ಯಾವುದೇ ಸೇವೆ, ವಸ್ತು ದಕ್ಕಿಬಿಟ್ಟರೆ ನಮಗಾಗುವ ಸಂತೋಷವೇ ಬೇರೆ! ಬಹುತೇಕ ರಾಜಕೀಯ ಪಕ್ಷಗಳು ಮನುಷ್ಯನ ಇಂಥಾ ಮಾನಸಿಕ ಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಂಡು, ಆ ಮನಸ್ಥಿತಿಯ ಮೇಲೆ ನಿರಂತರ ಸವಾರಿ ಮಾಡಿಕೊಂಡೇ ಕಾಲಕಾಲಕ್ಕೆ ‘ರಾಜಕಾರಣ’ ವನ್ನು ಮಾಡಿಕೊಂಡು ಬಂದಿವೆ.


ವಸ್ತುಸ್ಥಿತಿ
ರವೀ ಸಜಂಗದ್ದೆ
ವರ್ಷಗಳ ಹಿಂದೆ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲರು ದೆಹಲಿಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ‘ಗ್ಯಾರಂಟಿ’ ಹೆಸರಿನಲ್ಲಿ ಹಲವು ಉಚಿತ ಯೋಜನೆಗಳನ್ನು ಘೋಷಿಸಿದರು. ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ದ ಪ್ರಯೋಜನ ಪಡೆದು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲರು ‘ಗ್ಯಾರಂಟಿ’ ಯೋಜನೆಯ ಪರಿಕಲ್ಪನೆ ತಮಗೆ ಮತ್ತೊಮ್ಮೆ ಅಧಿಕಾರವನ್ನು ತಂದುಕೊಡಬಹುದು ಎಂದು ಸ್ವತಃ ನಿರೀಕ್ಷಿಸಿರಲಿಲ್ಲವೇನೋ?!
ಉಚಿತವಾದರೆ ನನಗೂ ಇರಲಿ, ನನ್ನ ತಂದೆಗೂ ಒಂದಿರಲಿ’ ಎನ್ನುವ ಅರ್ಥ ಬರುವ ಒಂದು ಗಾದೆ ಮಾತಿದೆ. ಉಡುಗೊರೆಯಾಗಿ ಏನಾದರೊಂದು ಸಿಕ್ಕರೆ ಅಥವಾ ಕಡಿಮೆ ದರದಲ್ಲಿ ಇಲ್ಲವೇ ಉಚಿತ ವಾಗಿ ಯಾವುದೇ ಸೇವೆ, ವಸ್ತು ದಕ್ಕಿಬಿಟ್ಟರೆ ನಮಗಾಗುವ ಸಂತೋಷವೇ ಬೇರೆ! ಬಹುತೇಕ ರಾಜಕೀಯ ಪಕ್ಷಗಳು ಮನುಷ್ಯನ ಇಂಥಾ ಮಾನಸಿಕ ಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಂಡು, ಆ ಮನಸ್ಥಿತಿಯ ಮೇಲೆ ನಿರಂತರ ಸವಾರಿ ಮಾಡಿಕೊಂಡೇ ಕಾಲಕಾಲಕ್ಕೆ ‘ರಾಜಕಾರಣ’ ವನ್ನು ಮಾಡಿಕೊಂಡು ಬಂದಿವೆ.
ಜನರಿಗೆ ವಿವಿಧ ಉಚಿತ ಸೌಲಭ್ಯಗಳ (ಫ್ರೀಬೀಸ್) ಆಮಿಷವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಭಾಷಣದಲ್ಲಿ ಒಡ್ಡಿ, ಆ ಮೂಲಕ ಅಽಕಾರ ಹಿಡಿಯುವುದು, ಅಧಿಕಾರಕ್ಕೆ ಬಂದ ನಂತರ ಬಹುತೇಕ ಭರವಸೆಗಳನ್ನು ಮರೆಯುವುದು, ಮುಂದಿನ ಚುನಾವಣೆಯ ವೇಳೆಗೆ ಈ ಹಿಂದೆ ನೀಡ ಲಾಗಿದ್ದ ಭರವಸೆಗಳನ್ನೇ ಒಂದಿಷ್ಟು ಬದಲಾಯಿಸಿ ಜನರ ಮುಂದೆ ಮಂಡಿಸಿ, ಮತ್ತೆ ಮತಭಿಕ್ಷೆಯೆತ್ತಿ ಅಧಿಕಾರಕ್ಕೆ ಬರಲು ಯತ್ನಿಸುವುದು- ಇದು ಭಾರತದ ಏಳೂವರೆ ದಶಕಗಳ ರಾಜಕೀಯ ಇತಿಹಾಸ ದಲ್ಲಿ ಕಂಡುಬಂದಿರುವ ನಿರಂತರ ಪ್ರಕ್ರಿಯೆ.
ದಶಕಗಳ ಹಿಂದೆ ‘ಗರೀಬಿ ಹಟಾವೊ’ ಎಂಬ ಘೋಷವಾಕ್ಯವನ್ನು ಮುಂದು ಮಾಡಿಕೊಂಡು ಚುನಾವಣೆಗಳು ನಡೆದಿದ್ದೇನೋ ಹೌದು. ಆದರೆ ಅದಾಗಿ ಇಷ್ಟೂ ವರ್ಷಗಳಿಂದ ನಡೆಯುತ್ತಿರುವ ಪ್ರತಿಯೊಂದು ಚುನಾವಣೆಯಲ್ಲೂ, ‘ಬಡತನವನ್ನು ನಿರ್ಮೂಲಗೊಳಿಸುವ’ ಆ ಆಶಯವನ್ನು ಹೇಳಿಕೊಂಡೇ ಜನರನ್ನು ಮೂರ್ಖರನ್ನಾಗಿಸಿಕೊಂಡು ಬರಲಾಗಿದೆ ಎಂಬುದು ವಿಷಾಧನೀಯ.
‘ಮೂರ್ಖರಾಗುವವರು ಇರುವವರೆಗೂ, ಮೂರ್ಖರನ್ನಾಗಿಸುವವರೂ ಇರುತ್ತಾರೆ’ ಎಂಬುದು ಸಾರ್ವಕಾಲಿಕ ಸತ್ಯ! ‘ಉಚಿತಗಳು’, ‘ಗ್ಯಾರಂಟಿಗಳು’, ‘ಭಾಗ್ಯಗಳು’ ಹೀಗೆ ಹೆಸರುಗಳು ಬೇರೆಬೇರೆ ಯಾಗಿದ್ದರೂ ಅವುಗಳ ಆಧಾರದ ಮೇಲೆ ದೇಶದಲ್ಲಿ ಕಳೆದೊಂದು ದಶಕದಿಂದ ಚುನಾವಣೆಗಳು ನಡೆಯುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ.
ಇದನ್ನೂ ಓದಿ: Ravi Sajangadde Column: ರಷ್ಯಾ ಮೇಲೆ ಉಕ್ರೇನ್ ದಾಳಿ!
ನಿಜ, ಈಗಿನ ರಾಜಕೀಯ ಮತ್ತು ಆಡಳಿತದ ಕಾಲಘಟ್ಟವು ‘ಗ್ಯಾರಂಟಿ ಯುಗ’ವಾಗಿ ಬದಲಾಗಿ ಬಿಟ್ಟಿದೆ. ವರ್ಷಗಳ ಹಿಂದೆ, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ‘ಗ್ಯಾರಂಟಿ’ ಹೆಸರಿನಲ್ಲಿ ಹಲವು ಉಚಿತ ಯೋಜನೆಗಳನ್ನು ಘೋಷಿಸಿದರು. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ‘ಭ್ರಷ್ಟಾ ಚಾರ ವಿರೋಧಿ ಆಂದೋಲನ’ದ ಪ್ರಯೋಜನ ಪಡೆದು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲರಿಗೆ ಎರಡನೆಯ ಬಾರಿಗೆ, ಅಂದರೆ 2020ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಣೆಗಳು ಸಹಕಾರಿ ಯಾದವು.
‘ಗ್ಯಾರಂಟಿ’ ಯೋಜನೆಯ ಪರಿಕಲ್ಪನೆ ತಮಗೆ ಇಷ್ಟು ದೊಡ್ಡ ಮಟ್ಟದಲ್ಲಿ ಮತ್ತೊಮ್ಮೆ ಅಧಿಕಾರ ವನ್ನು ತಂದುಕೊಡಬಹುದು ಎಂದು ಸ್ವತಃ ಕೇಜ್ರಿವಾಲರೇ ನಿರೀಕ್ಷಿಸಿರಲಿಲ್ಲವೇನೋ?! ಆದರೆ ಅದು ದೇಶದ ಬಹುತೇಕ ರಾಜಕೀಯ ಪಕ್ಷಗಳ ‘ಹಾಟ್ ಪಿಕ್’ ಆಗಿಬಿಟ್ಟಿತು!

ನಂತರದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಹುತೇಕ ಪಕ್ಷಗಳವರು ಪೈಪೋಟಿಗೆ ಬಿದ್ದವರಂತೆ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿ ಅಧಿಕಾರ ಪಡೆಯಲು ಯತ್ನಿಸುತ್ತಿದ್ದಾರೆ. ಪರಿಣಾಮವಾಗಿ, ಯಾವುದೇ ವಿಶಿಷ್ಟ ಅಥವಾ ಉತ್ಕೃಷ್ಟ ‘ಗ್ಯಾರಂಟಿ ಯೋಜನೆ’ ಯು ಅಧಿಕಾರವನ್ನು ತಂದುಕೊಡುವುದು ‘ಗ್ಯಾರಂಟಿ’ ಎನ್ನುವ ಹಂತಕ್ಕೆ ದೇಶದ ರಾಜಕಾರಣ ಬಂದು ನಿಂತಿದೆ!
ಗ್ಯಾರಂಟಿ ಯೋಜನೆಗಳು ತೀವ್ರವಾಗಿ ಅನುಷ್ಠಾನಕ್ಕೆ ಬಂದಿರುವ ರಾಜ್ಯಗಳ ಪೈಕಿ ಹೆಚ್ಚಿನವುಗಳಲ್ಲಿ ಆರ್ಥಿಕ ಪರಿಸ್ಥಿತಿಯು ‘ಐಸಿಯು’ನಲ್ಲಿರುವುದು ಖರೆ; ಇದು ಗ್ಯಾರಂಟಿ ಯೋಜನೆಗಳು ಆಯಾ ರಾಜ್ಯ ಗಳ ಆರ್ಥಿಕ ಶಿಸ್ತನ್ನು ಕೆಡಿಸಿ ಉಂಟು ಮಾಡಿದ ಅಸ್ತವ್ಯಸ್ತ ಸ್ಥಿತಿಗೆ ಹಿಡಿದ ಕೈಗನ್ನಡಿ. ಇಂಥ ಬಹುತೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ‘ಬಿಳಿ ಆನೆ’ಗಳಂತಾಗಿವೆ. ಈ ಗ್ಯಾರಂಟಿಗಳು ಪ್ರಜಾ ಪ್ರಭುತ್ವದ ಸಿದ್ಧಾಂತಗಳ ಮತ್ತು ಆರ್ಥಿಕ ಸ್ಥಿತಿಗತಿಯ ಬುಡವನ್ನೇ ಅಲುಗಾಡಿಸುತ್ತಿರುವುದು ಈ ಶತಮಾನದ ದೊಡ್ಡ ದುರಂತ. ಜನರು ಕಟ್ಟುವ ನೇರ ಮತ್ತು ಪರೋಕ್ಷ ತೆರಿಗೆಯ ಹಣದಿಂದಲೇ ಸರಕಾರಗಳು ತಮ್ಮ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕು.
ಹೀಗೆ ಸಂಗ್ರಹವಾದ ತೆರಿಗೆ ಹಣವು ಗ್ಯಾರಂಟಿ ಯೋಜನೆಗಳಂಥ ಅನುತ್ಪಾದಕ, ಅಭಿವೃದ್ಧಿರಹಿತ ಬಾಬತ್ತುಗಳಿಗೆ ಬಹುಪಾಲು ವ್ಯಯವಾದರೆ, ಆಯಾ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಕಡುಬಡವರ, ಸಾಮಾಜಿಕವಾಗಿ-ಆರ್ಥಿಕವಾಗಿ ಸಬಲರಲ್ಲದವರ ಏಳಿಗೆ ಆಗಲೇಬೇಕು ಎಂಬು ದರಲ್ಲಿ ಎರಡು ಮಾತಿಲ್ಲ.
ಆದರೆ ಸದ್ಯದ ಯಾವುದೇ ಗ್ಯಾರಂಟಿ ಯೋಜನೆಯೂ ಅಂಥವರನ್ನು ಮಾತ್ರವೇ ಉದ್ದೇಶಿಸಿ ರೂಪು ಗೊಂಡಂತೆ ಕಾಣುತ್ತಿಲ್ಲ. ಹಸಿದವನಿಗೆ ಉಚಿತ ಊಟ ನೀಡುವುದಕ್ಕೂ, ಮನೆಯಲ್ಲಿ ಊಟವಿದ್ದರೂ ಉಚಿತ ಊಟಕ್ಕೆ ಹಾತೊರೆಯುವವನಿಗೂ ವ್ಯತ್ಯಾಸವಿದೆ. ಮನೆಯಲ್ಲಿ ಊಟದ ಲಭ್ಯತೆಯಿದ್ದರೂ ಹೀಗೆ ಹಾತೊರೆಯುವುದು ನ್ಯಾಯಯುತವಲ್ಲ.
ಸಂಗ್ರಹವಾದ ಒಟ್ಟು ತೆರಿಗೆ ಯಲ್ಲಿ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲನ್ನು ರಾಜ್ಯ ಸರಕಾರಗಳು ಕೇಂದ್ರವನ್ನು ಕೇಳುವುದು ಸಮಂಜಸ ಎನ್ನುವುದಾದರೆ, ‘ವಿವಿಧ ರೂಪಗಳಲ್ಲಿ ಜನರು ತೆರಿಗೆಯಾಗಿ ಕಟ್ಟಿದ ಹಣವು ಜನಪರ ಕಾರ್ಯಕ್ಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಉಪಯೋಗಿಸಲ್ಪಡಬೇಕು’ ಎಂಬ ಬೇಡಿಕೆಯೂ ತಾರ್ಕಿಕ ಮತ್ತು ಸಮಂಜಸವಲ್ಲವೇ? ಆದರೆ ಅನುತ್ಪಾದಕ ಬಾಬತ್ತುಗಳಿಗೆ ಸಾವಿರಾರು ಕೋಟಿ ರುಪಾಯಿ ಹಣವು ವ್ಯಯವಾದರೆ, ಇತರೆ ಯೋಜನೆಗಳಿಗೆ ಗರಬಡಿದು ಅಭಿವೃದ್ಧಿ ಕುಂಠಿತ ಅಥವಾ ಸ್ಥಗಿತವಾಗುವುದು ನಿಶ್ಚಿತ.
ಗ್ಯಾರಂಟಿ ಯೋಜನೆಗೆ ಮೊರೆ ಹೋದ ಬಹುತೇಕ ರಾಜ್ಯಗಳಲ್ಲಿ ಈಗಾಗುತ್ತಿರುವುದು ಅದೇ. ರಾಜ್ಯ ವೊಂದರ ಅಭಿವೃದ್ಧಿ ಚಟುವಟಿಕೆಗಳು ಮತ್ತು ಆರ್ಥಿಕತೆಯ ಮೇಲೆ ಈ ಗ್ಯಾರಂಟಿ ಕೊಡುಗೆಗಳು ಹೇಗೆ ಮತ್ತು ಎಷ್ಟು ಪ್ರಭಾವ ಬೀರುತ್ತಿವೆ? ಸಂಗ್ರಹವಾದ ಒಟ್ಟಾರೆ ಮೊತ್ತದ ಗರಿಷ್ಠ ಎಷ್ಟು ಪ್ರತಿಶತ ಮೊತ್ತವನ್ನು ಸರಕಾರಗಳು ‘ಜನಾನುರಾಗಿ’ ಸೋಗಿನ ಆದರೆ ‘ಮತಬೇಟೆಯ ಉದ್ದೇಶ’ದ ಇಂಥ ಅನುತ್ಪಾದಕ ಯೋಜನೆಗಳಿಗೆ ಬಳಸಬಹುದು? ಎಂಬೆಲ್ಲಾ ಪ್ರಶ್ನೆಗಳಿಗೆ ಆರ್ಥಿಕ ತಜ್ಞರು ನಿಖರವಾದ ಆರ್ಥಿಕ ಮತ್ತು ವೈಜ್ಞಾನಿಕ ವಿಶ್ಲೇಷಣೆಯನ್ನು ಮಾಡಿದಂತೆ ಕಾಣುತ್ತಿಲ್ಲ.
ರಾಜಕೀಯ ಪಕ್ಷಗಳ ಆರ್ಥಿಕ ಸಲಹೆಗಾರರೂ ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸರಕಾರದ ಆಯಕಟ್ಟಿನ ಜಾಗಗಳಲ್ಲಿರುವ ಆರ್ಥಿಕ ಪರಿಣತರೂ ಈ ಕುರಿತು ಸರಕಾರಕ್ಕೆ ತಿಳಿ ಹೇಳಿ, ಆರ್ಥಿಕ ಶಿಸ್ತು ಉಳಿಸಿಕೊಳ್ಳಲು ನಿಜಪ್ರಯತ್ನ ಮಾಡಿದ್ದು ಎಲ್ಲೂ ಸುದ್ದಿಯಾಗಲಿಲ್ಲ! ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಆರ್ಥಿಕವಾಗಿ ಬಲಿಷ್ಠವಾಗಿರುವ ದೆಹಲಿ ಸರಕಾರವೇ ಗ್ಯಾರಂಟಿ ಯೋಜನೆಗಳಿಗೆ ನಿರಂತರವಾಗಿ ಹಣವನ್ನು ಪೂರೈಸಲು ಹೆಣಗಾಡುತ್ತಿದೆ.
ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶದ ಸರಕಾರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇ ನಿಲ್ಲ! ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಏದುಸಿರು ಬಿಡುತ್ತಿರುವ ಈ ಸರಕಾರ ಗಳು, ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ನೀಡಲಾಗದೆ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಆರ್ಥಿಕ ಸಂಕಷ್ಟವನ್ನು ಒಂದಷ್ಟು ಸರಿದೂಗಿಸಲು ಸರಕಾರಗಳು ದರ ಹೆಚ್ಚಳದ ಮೊರೆಹೋಗಿರುವುದು ಮತ್ತೊಂದು ದುರಂತ!
ಸಾರ್ವಜನಿಕ ಪ್ರಯಾಣದರ, ಡೀಸೆಲ್ -ಪೆಟ್ರೋಲ್ ಮೇಲಿನ ಸುಂಕ, ಹಾಲು-ನೀರು- ವಿದ್ಯುತ್-ಆಸ್ತಿನೋಂದಣಿ ದರ ಹೀಗೆ ಎಲ್ಲವನ್ನೂ ಹೆಚ್ಚಿಸಿ ಕರ್ನಾಟಕ ಸರಕಾರವೂ ತನ್ನ ಆದಾಯ ಹೆಚ್ಚಿಸಿಕೊಂಡು ಧನ ಸಂಗ್ರಹಿಸಲು ಹೆಣಗಾಡುತ್ತಿದೆ. ತಾವು ಪ್ರತಿನಿಽಸುವ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕವಾಗಿ ಅನುದಾನ ಸಿಗದೇ, ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಿಕ್ಕಂತೆ, ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಯಾಗದೆ ಅರ್ಧಕ್ಕೇ ನಿಂತು/ಕುಂಟುತ್ತಾ ಸಾಗಿ ಗುತ್ತಿಗೆದಾರರು ಚಡಪಡಿಸುತ್ತಿದ್ದಾರೆ.
ಕೂಲಂಕಷವಾಗಿ ನೋಡಿದರೆ, ಆರ್ಥಿಕ ವಿಷಯದ ಕುರಿತು ಕನಿಷ್ಠ ಜ್ಞಾನವಿರುವ ಯಾರೇ ಒಂದಷ್ಟು ಅವಲೋಕಿಸಿದರೂ ಸತ್ಯವು ಕಹಿಯಾಗಿದೆ, ಅಪಥ್ಯವಾಗಿದೆ. ಆದರೆ ಆಳುವ ವರ್ಗದವರು ಅದನ್ನು ಬಿಟ್ಟುಕೊಡುತ್ತಿಲ್ಲ. ‘ಹಲವು ವರ್ಷಗಳಿಂದ ದರವನ್ನು ಏರಿಸಿಲ್ಲ, ಈಗ ವಿಧಿಯಿಲ್ಲದೆ ಏರಿಸುತ್ತಾ ಇದ್ದೇವೆ’ ಎಂಬ ಅವರ ಹೇಳಿಕೆಗಳು ಬಾಲಿಶ ಮತ್ತು ರಾಜಕೀಯ ಪ್ರೇರಿತ. ಹೆಚ್ಚುವರಿ ತೆರಿಗೆ ಮತ್ತು ಶುಲ್ಕ ಕಟ್ಟುವ ಪ್ರಜೆಗಳೂ ಮತದಾರರೇ; ಆ ವರ್ಗಕ್ಕೆ ಏನೇನೂ ನೀಡದ/ಮಾಡದ ಈ ಅವಜ್ಞೆ ಮತ್ತು ನಿರ್ಲಕ್ಷ್ಯ ಏಕೆ? ಈ ಕುರಿತು ಹೇಳುವವರಾರು, ಕೇಳುವವರಾರು? ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಎದುರು ನಡೆಸುವ ‘ನಮ್ಮ ತೆರಿಗೆ, ನಮ್ಮ ಹಕ್ಕು’ ಆಂದೋಲನದ ಮಾದರಿ ಯಲ್ಲೇ, ತೆರಿಗೆ ಕಟ್ಟುವ ಜನಸಾಮಾನ್ಯರೂ ‘ನಮ್ಮ ತೆರಿಗೆಯ ಹಣವನ್ನು ನಮಗೇ ವಿನಿಯೋಗಿಸಿ’ ಮಾದರಿಯ ಆಂದೋಲನವನ್ನು ಆರಂಭಿಸುವ ಕಾಲ ಸನ್ನಿಹಿತವಾಗಿದೆಯೇ ಎನಿಸುತ್ತದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)