ಕಳಕಳಿ
ಬಸವರಾಜ ಶಿವಪ್ಪ ಗಿರಗಾಂವಿ
ವಿಶ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುತ್ತಿವೆ. ಇಚ್ಛಿಸಿದ ಸೇವೆ ಮತ್ತು ವಸ್ತುಗಳು ಕ್ಷಣಾರ್ಧದಲ್ಲಿಯೇ ಮನೆ ಬಾಗಿಲಿಗೆ ಬರುತ್ತಿವೆ. ಇಂದು ಪ್ರೀತಿಪಾತ್ರರನ್ನು ಬೇಕೆನಿಸಿದಾಗ ಸಂಪರ್ಕಿಸಬಹುದು. ಕುಳಿತಲ್ಲಿಂದ ವಿಶ್ವದ ಯಾವುದೇ ಮೂಲೆಯಿಂದ ಹಣ ವರ್ಗಾ ವಣೆ, ಪತ್ರ ವ್ಯವಹಾರ, ಸಂಪರ್ಕ, ಸಂವಹನ ನಡೆಸಬಹುದಾಗಿದೆ, ಅವಶ್ಯಕ ಮಾಹಿತಿಗಳನ್ನು ಪಡೆಯಬಹುದಾಗಿದೆ. ಇವುಗಳಿಗೆಲ್ಲ ಪ್ರಮುಖ ಕಾರಣವೆಂದರೆ ಅಂಗೈಯಲ್ಲಿರುವ ಅತ್ಯಾಧುನಿಕ ಮೊಬೈಲ್ ಎಂಬ ಮಾಯಾಂಗನೆ! ಈ ಮೊಬೈಲ್‌ನಿಂದ ದೊರೆಯುವ ಅನುಕೂಲತೆಗಳ ಪಟ್ಟಿಯನ್ನು ಮಾಡುತ್ತ ಕೂತರೆ ಅದಕ್ಕೆ ಕೊನೆಯಿಲ್ಲವಾಗಬಹುದು. ಆದರೆ, ಸುಲಭಕ್ಕೆ ಕೈಗೆಟುಕುವ ಸೌಲಭ್ಯಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುವುದಂತೂ ಖರೆ.
ಹೀಗಾಗಿ, ಮೊಬೈಲ್ ಫೋನ್ ಬಳಕೆಯು ನಿಯಮಿತವಾಗಿರಬೇಕು ಎಂಬುದು ನಾವು ಈ ಕ್ಷಣಕ್ಕೆ ಅರಿಯಬೇಕಾದ ಸತ್ಯ. ಎರಡು ದಶಕಗಳ ಹಿಂದೆ, ಮೇಲೆ ಉಲ್ಲೇಖಿಸಿದಂಥ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಸುಲಭವಾಗಿರಲಿಲ್ಲ. ಅಂದು ಶಾರೀರಿಕ ಶ್ರಮ ಅನಿವಾರ್ಯವಾಗಿತ್ತು. ಅಂದರೆ ಸಂಬಂಧಿಸಿದ ಸ್ಥಳಗಳಿಗೆ ಸಾಕಷ್ಟು ಬಾರಿ ಅಲೆದಾಡಿದಾಗ ಮಾತ್ರವೇ, ತೃಪ್ತಿಕರ ವಲ್ಲದಿದ್ದರೂ ಕೆಲವಷ್ಟು ಸೌಲಭ್ಯಗಳನ್ನು ದಕ್ಕಿಸಿಕೊಳ್ಳಬಹುದಾಗಿತ್ತು.
ಹೀಗೆ ಅಲೆದಾಡುವ ಕಸರತ್ತು ಮೇಲ್ನೋಟಕ್ಕೆ ‘ತೊಂದರೆದಾಯಕ’ ಎನಿಸಿದರೂ, ಶರೀರಕ್ಕೆ ಆರೋಗ್ಯದಾಯಕವಾಗಿತ್ತು. ದಿನಗಳೆದಂತೆ, ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಹೊಸ ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಯಿತು. ಇದರಿಂದಾಗಿ ಶಾರೀರಿಕ ಶ್ರಮವು ಕಡಿಮೆಯಾಗಿ ದ್ದಲ್ಲದೆ, ಕಠಿಣವಾಗಿದ್ದ ಕೆಲಸಗಳು ಕುಳಿತಲ್ಲಿಂದಲೇ ನಿರ್ವಹಿಸಬಹುದಾದಷ್ಟು ಸರಳಗೊಂಡವು.
ಇಂಥ ತಂತ್ರಜ್ಞಾನಗಳ ಪೈಕಿ ಮೊಬೈಲ್ ಕೂಡ ಒಂದು. ಮೊಬೈಲ್ ಎಂಬ ಮಾಯಾಪೆಟ್ಟಿಗೆಯ ಕಾರಣದಿಂದಾಗಿ ಶಾರೀರಿಕ ಅಲೆದಾಟ ಇಂದು ಬಹುತೇಕ ಕಮ್ಮಿಯಾಗಿದೆ, ಆಗಬೇಕಾದ ಕೆಲಸಗಳು ಸುಲಭವಾಗಿ ನೆರವೇರುತ್ತಿವೆ ಮತ್ತು ಶ್ರಮದಾಯಕವಲ್ಲದ ಜೀವನಶೈಲಿ ಎಲ್ಲೆಂದರಲ್ಲಿ ಕಂಡು ಬರುತ್ತಿದೆ.
ಇದನ್ನೂ ಓದಿ: R T Vittalmurthy Column: ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ
ಆದರೆ, ಮೊಬೈಲ್ ಮಾಯಾಜಾಲದಿಂದ ಆಗುತ್ತಿರುವ ಅಗೋಚರ ಅನಾಹುತಗಳು ಮತ್ತು ಅನನುಕೂಲತೆಗಳನ್ನು ನಿರ್ಲಕ್ಷಿಸಲಾಗದು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮೊಬೈಲ್ ಅನ್ನು ನೆಚ್ಚುವುದರಲ್ಲಿ ತಪ್ಪೇನಿಲ್ಲ. ಆದರೆ ಕುಳಿತಲ್ಲೇ ಎಲ್ಲ ಕೆಲಸಗಳನ್ನೂ ಅದು ಮಾಡಿಕೊಡು ತ್ತಿರುವುದರಿಂದ ಜನರಲ್ಲಿ ಶಾರೀರಿಕ ಶ್ರಮ ಕಡಿಮೆಯಾಗಿ ಸೋಮಾರಿತನ ಹೆಚ್ಚುತ್ತಿದೆ.
ಇಂದು ಯಾರಿಗೂ ಮೊಬೈಲ್ ಸಾಧನವನ್ನು ಬಿಟ್ಟಿರುವುದಕ್ಕೇ ಸಾಧ್ಯವಾಗದಂಥ ಪರಿಸ್ಥಿತಿ ರೂಪುಗೊಂಡಿದೆ. ಕೆಲವೇ ವರ್ಷಗಳ ಹಿಂದೆ, ವಿವಿಧ ತಂತ್ರಜ್ಞಾನಗಳು ಇನ್ನೂ ಅಂಬೆಗಾಲಿಡು ತ್ತಿರುವಾಗ ಜನರ ಜೀವನಶೈಲಿ ನೈಸರ್ಗಿಕವಾಗಿತ್ತು, ಅವರಲ್ಲಿ ಆರೋಗ್ಯವು ತುಂಬಿ ತುಳುಕುತ್ತಿತ್ತು. ಮಾತಿಗಿಂತ ಕೃತಿಯೇ ಹೆಚ್ಚು ಪ್ರಚಲಿತದಲ್ಲಿತ್ತು. ಬಂಧು-ಮಿತ್ರರು ಮನೆಗೆ ಆಗಮಿಸಿದಾಗಲೋ, ಮದುವೆ-ಮುಂಜಿಯಂಥ ಸಮಾರಂಭಗಳಲ್ಲೋ ಜನರ ಪಾರಸ್ಪರಿಕ ಒಡನಾಟ ಗಮನಾರ್ಹ ವಾಗಿರುತ್ತಿತ್ತು. ಆದರೀಗ, ಬಗೆಬಗೆಯ ಸ್ಮಾರ್ಟ್ ಫೋನುಗಳು ದಾಂಗುಡಿ ಇಟ್ಟ ನಂತರ ಇಂಥ ಒಡನಾಟಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಅಪರೂಪಕ್ಕೆ ಸಿಕ್ಕಿರುವ ಬಂಧು-ಮಿತ್ರರೊಂದಿಗೆ ಹರಟುವ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವ, ಅವರ ಅನುಭವಗಳಿಗೆ ಕಿವಿಯಾಗುವ ಪರಿಪಾಠ ಕಮ್ಮಿಯಾಗಿ, ನೆಪಮಾತ್ರಕ್ಕೆ ಒಮ್ಮೆ ‘ಹಾಯ್’ ಎಂದು ವಿಶ್ ಮಾಡಿದ ನಂತರ ಒಬ್ಬೊಬ್ಬರೂ ಒಂದೊಂದು ಕಡೆ ತಮ್ಮ ಪಾಡಿಗೆ ತಾವು ಸ್ಮಾಟ್ ಫೋನುಗಳಲ್ಲಿ ಮುಖ ಹುದುಗಿಸಿಕೊಂಡು ಕೂತುಬಿಡುತ್ತಾರೆ.
ಇದನ್ನು ಕಂಡಾಗೆಲ್ಲ, ‘ಮಾನವ ಸಂಘಜೀವಿ’ ಎಂಬ ಮಾತು ಸುಳ್ಳಾಗುವ ಕಾಲ ಸಮೀಪಿಸು ತ್ತಿದೆಯೇನೋ ಎನಿಸುತ್ತದೆ. ಇದು ಬಹುತೇಕ ಕಾರ್ಯಕ್ರಮಗಳಲ್ಲಿ/ಸಮಾರಂಭಗಳಲ್ಲಿ ಸಾಮಾನ್ಯ ವಾಗಿ ಕಾಣಬರುವ ದೃಶ್ಯ. ಇನ್ನು, ಅಪ್ರಾಪ್ತರ ಕೈಗಳಿಗೂ ಈಗ ಸ್ಮಾರ್ಟ್ ಫೋನುಗಳು ಸುಲಭಕ್ಕೆ ಸಿಗುತ್ತಿರುವುದರಿಂದ, ಮನರಂಜನೆಯ ಹೆಸರಿನಲ್ಲಿ ಆ ವಯಸ್ಸಿಗೆ ಬೇಡದ ಬಾಬತ್ತು ಗಳೆಡೆಗೆ ಅವರು ಕಣ್ಣು ಹಾಯಿಸುವಂತೆ ಆಗುತ್ತಿದೆ. ತಮ್ಮ ಆ ನಿರ್ಣಾಯಕ ಕಾಲಘಟ್ಟದಲ್ಲಿ ಬದುಕನ್ನು ಕಟ್ಟಿ ಕೊಳ್ಳುವುದರ ಬದಲಿಗೆ ಅಪ್ರಾಪ್ತರು ಸುಲಭದಲ್ಲಿಯೇ ಅನಾರೋಗ್ಯಕರ ಚಟುವಟಿಕೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವಂತಾಗುತ್ತಿದೆ.
ಪರಿಣಾಮವಾಗಿ, ಮೋಸಗಾರಿಕೆ, ಅಪ್ರಾಮಾಣಿಕತೆ, ಬ್ಲ್ಯಾಕ್‌ಮೇಲ್/ಅಪರಾಧಿಕ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಯುವಕರು ನಸುಕಿನಿಂದಲೇ ಅತಿರೇಕದ ಮೊಬೈಲ್ ಬಳಕೆಗೆ ಒಡ್ಡಿಕೊಳ್ಳುತ್ತಿರುವುದರಿಂದಾಗಿ ಅವರಲ್ಲಿನ ದುಡಿಯುವ ಪ್ರವೃತ್ತಿ ಕುಸಿಯುತ್ತಿದೆ. ಹೆತ್ತವರಿಗೆ ಇಲ್ಲದ ಸಬೂಬು ಹೇಳಿ ಹಣ ಪಡೆದು, ‘ಆನ್‌ಲೈನ್ ಗೇಮಿಂಗ್’ ಚಾಳಿಗೆ ಸಿಲುಕಿ ಹಣ ಕಳೆದುಕೊಳ್ಳುವವರಿಗೇನೂ ಈಗ ಕಮ್ಮಿಯಿಲ್ಲ. ಇಂಥ ಚಾಳಿಯ ವಿಷವ್ಯೂಹಕ್ಕೆ ಸಿಲುಕಿದವರು ಅತಿಯಾದ ಸಾಲ ಮಾಡಿಕೊಂಡು, ಅದನ್ನು ತೀರಿಸಲೆಂದು ತಮ್ಮ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.
ಈ ಚಾಳಿ ಹೀಗೆಯೇ ಮುಂದುವರಿದರೆ ಯಾವ ಪರಿಸ್ಥಿತಿ ಎದುರಾಗಬಹುದು ಎಂಬುದನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಆದ್ದರಿಂದ, ಮನೆಯಲ್ಲಿರುವ ಹಿರಿಯರು ತಮ್ಮ ಮಕ್ಕಳು ಅತಿರೇಕದ ಪ್ರಮಾಣದಲ್ಲಿ ಮೊಬೈಲ್ ಬಳಸುವುದಕ್ಕೆ ಲಗಾಮು ಹಾಕಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ್ದು ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ಅವರು ಮನವರಿಕೆ ಮಾಡಿಕೊಡಬೇಕು.
ಜತೆಗೆ, ಮಕ್ಕಳ ಎದುರು ಅತಿರೇಕವೆಂಬಷ್ಟರ ಮಟ್ಟಿಗೆ ಮೊಬೈಲ್ ಬಳಸುವುದನ್ನು ದೊಡ್ಡವರೂ ನಿಲ್ಲಿಸಬೇಕು. ಆಗ ಮಾತ್ರವೇ ಮನೆಯಲ್ಲಿನ ಎಲ್ಲರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸುಧಾರಣೆಗೊಂಡೀತು, ಸೋಮಾರಿತನ ತೊಲಗಿ ಉತ್ಪಾದಕತೆ ಹೆಚ್ಚೀತು.
(ಲೇಖಕರು ಕೃಷಿ ತಜ್ಞರು)