Keshava Prasad B Column: ನೋಟಿಸ್ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್ !
‘ಯುಪಿಐ ಬೇಡ, ಕ್ಯಾಶ್ ಕೊಡ್ರಪ್ಪಾ’ ಎಂದು ವ್ಯಾಪಾರಿಗಳು ಹೊಸ ರಗಳೆಯನ್ನು ಸೃಷ್ಟಿಸಿದರೆ ಏನಾಗಲಿದೆ? ಕ್ರಮೇಣ ಅವರ ಬಿಸಿನೆಸ್‌ಗೇ ಹೊಡೆತ ಬೀಳುವುದು ಪಕ್ಕಾ. ಏಕೆಂದರೆ ಗ್ರಾಹಕರಿಗೆ ಬೇರೆ ಆಯ್ಕೆಗಳು ಸಾಕಷ್ಟಿವೆ. ನಾವೀಗ ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭರದಿಂದ ಸಾಗುತ್ತಿದ್ದೇವೆ. ಇಲ್ಲಿ ನಗದನ್ನು ಹೆಚ್ಚು ದಿನ ಕದ್ದುಮುಚ್ಚಿ ಬಳಸುವುದು ಕಷ್ಟಕರವಾಗಲಿದೆ.


ಮನಿ ಮೈಂಡೆಡ್
ಕೊನೆಗೂ ರಾಜ್ಯದಲ್ಲಿ ಜಿಎಸ್‌ಟಿ ಗದ್ದಲಕ್ಕೆ ತೆರೆ ಬಿದ್ದಿದೆ. 9000ಕ್ಕೂ ಹೆಚ್ಚು ವ್ಯಾಪಾರಸ್ಥರು ನಿರಾಳ ರಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಣ್ಣ ವರ್ತಕರ ಸಂಘಟನೆಗಳ ಜತೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
2021ರಿಂದ ತೆರಿಗೆ ಬಾಕಿಯ ವಸೂಲಾತಿಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿನಾಯಿತಿ ಇರುವ ವಸ್ತುಗಳನ್ನು ಮಾರಾಟ ಮಾಡುವವರನ್ನು ಹೊರತುಪಡಿಸಿ, ಇತರರು ವರ್ಷಕ್ಕೆ 40 ಲಕ್ಷ ರುಪಾಯಿಗಿಂತ ಹೆಚ್ಚು ವ್ಯವಹಾರ ನಡೆಸುತ್ತಿದ್ದರೆ ಜಿಎಸ್‌ಟಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂಬ ಕಾನೂನು ಅಂಶಗಳನ್ನು ವಿವರಿಸುವುದರೊಂದಿಗೆ ಗದ್ದಲಕ್ಕೆ ತೆರೆ ಬಿದ್ದಿದೆ.
ಮುಷ್ಕರದ ನಿರ್ಧಾರವನ್ನು ಸಣ್ಣ ವ್ಯಾಪಾರಿಗಳು ಕೈಬಿಟ್ಟಿದ್ದಾರೆ. ಆದರೆ ಈ ಘಟನೆ ಹಲವಾರು ಪಾಠಗಳನ್ನು ಕಲಿಸಿದೆ. ಅದನ್ನು ಸರಕಾರಗಳು, ಸಣ್ಣ ವ್ಯಾಪಾರಿಗಳು ಮನನ ಮಾಡಿಕೊಂಡು ಮತ್ತಷ್ಟು ಸುಧಾರಣೆಗೊಳಿಸಿ ಮುಂದುವರಿಸಬೇಕಾಗಿದೆ. ಮತ್ತೆ ನಗದು ಬಳಕೆಯ ಗತಕಾಲಕ್ಕೆ ಹೆಜ್ಜೆಯನ್ನು ಇಡುವುದು ಬೇಡವೇ ಬೇಡ. ಯುಪಿಐ ಮತ್ತು ಜಿಎಸ್‌ಟಿಯ ಬಳಕೆಯು ಎಲ್ಲರಿಗೂ ಅನುಕೂಲವೇ ಹೊರತು ಅಪಾಯಕಾರಿಯಲ್ಲ.
ಇದನ್ನೂ ಓದಿ: Keshava Prasad B Column: 40 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಣ್ಣದೇ? ಯುಪಿಐ, ಜಿಎಸ್‌ಟಿ ಬೇಡವೇ?!
ಮುಂದಿನ ದಿನಗಳಲ್ಲಿ ಪ್ರೈಮರಿ ಕಮಾಡಿಟಿ ಅಥವಾ ಪ್ರಿನ್ಸಿಪಲ್ ಕಮಾಡಿಟಿಗಳ ಮಾರಾಟದ ಜತೆಗೆ ಉಳಿದ ಹಲವಾರು ವಸ್ತುಗಳು ಮಾರಾಟಕ್ಕಿದ್ದರೂ, ಉದಾರವಾಗಿ ಸ್ಪಂದಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಮುಖ್ಯವಾಗಿ ಹಾಲಿನ ಅಂಗಡಿ ಇಟ್ಟಿದ್ದಾನೆ ಎಂದಿಟ್ಟುಕೊಳ್ಳಿ. ಅಲ್ಲಿ ಹಾಲೇ ಪ್ರಿನ್ಸಿಪಲ್ ಕಮಾಡಿಟಿ, ಪ್ರಧಾನ ವಸ್ತು. ಅದಕ್ಕೆ ಸರಕಾರದ ವಿನಾಯಿತಿ ಇದೆ. ಆದರೆ ಅದರ ಜತೆಗೆ ಒಂದಷ್ಟು ಜ್ಯೂಸ್, ಕುರುಕಲು ತಿಂಡಿಗಳನ್ನು ಮಾರಾಟಕ್ಕೆ ಇಟ್ಟಿದ್ದರೂ, ಇನ್ನು ಮುಂದೆ ವ್ಯಾಪಾರಿ ಆತಂಕಪಡಬೇಕಿಲ್ಲ. ಏಕೆಂದರೆ ಅವುಗಳಿಗೆ ಟ್ಯಾಕ್ಸ್ ಸಂಗ್ರಹಿಸಬೇಕಿಲ್ಲ ಎಂದು ಸರಕಾರ ತಿಳಿಸಿದೆ.
ಇಂಥ ಉಪಯುಕ್ತ ಮಾಹಿತಿಗಳು ಜನರಿಗೆ ಈಗ ಬೇಕಾಗಿದೆ. ಆಗ ಗೊಂದಲಗಳು ಪರಿಹಾರವಾಗಿ ಬಿಕ್ಕಟ್ಟು ತಿಳಿಯಾಗುತ್ತದೆ. ‘ಯುಪಿಐ ಬೇಡ, ಕ್ಯಾಶ್ ಕೊಡ್ರಪ್ಪಾ’ ಎಂದು ವ್ಯಾಪಾರಿಗಳು ಹೊಸ ರಗಳೆಯನ್ನು ಸೃಷ್ಟಿಸಿದರೆ ಏನಾಗಲಿದೆ? ಕ್ರಮೇಣ ಅವರ ಬಿಸಿನೆಸ್‌ಗೇ ಹೊಡೆತ ಬೀಳುವುದು ಪಕ್ಕಾ. ಏಕೆಂದರೆ ಗ್ರಾಹಕರಿಗೆ ಬೇರೆ ಆಯ್ಕೆಗಳು ಸಾಕಷ್ಟಿವೆ. ನಾವೀಗ ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭರದಿಂದ ಸಾಗುತ್ತಿದ್ದೇವೆ. ಇಲ್ಲಿ ನಗದನ್ನು ಹೆಚ್ಚು ದಿನ ಕದ್ದುಮುಚ್ಚಿ ಬಳಸುವುದು ಕಷ್ಟಕರ ವಾಗಲಿದೆ. ವಾಣಿಜ್ಯ ತೆರಿಗೆ ಇಲಾಖೆಯ ಕಣ್ಣಿಂದ ನೀವು ತಪ್ಪಿಸಿಕೊಂಡಿರುವಿರಿ ಎಂದಾದರೆ ಅದು ನಿಮ್ಮ ತಪ್ಪಾಗಬಹುದು. ಭವಿಷ್ಯದಲ್ಲಿ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ನಿಮ್ಮ ದುಬಾರಿ ಖರ್ಚು ವೆಚ್ಚಗಳು ಬೀಳಬಹುದು. ಆಗ ನಗದು ಇದ್ದರೂ, ಬಳಸಲಾಗದಿದ್ದರೆ ಏನುಪಯೋಗ? ಹಾಲು, ಹಣ್ಣು, ತರಕಾರಿ, ಎಳನೀರು ಮಾರಾಟ ಮಾಡುವವರಿಗೆ ಜಿಎಸ್‌ಟಿ ಇಲ್ಲವಾದ್ದರಿಂದ ನಗದು ಬಳಸಿದರೆ ತೊಂದರೆಯಾಗಲು ಹೇಗೆ ಸಾಧ್ಯ? ಇವತ್ತು ಜನ ಕ್ಯಾಶನ್ನು ಮರೆತರೂ ಜೀವನ ನಡೆಸಬಹುದು ಎನ್ನುವಷ್ಟರಮಟ್ಟಿಗೆ ಯುಪಿಐ ಜನಪ್ರಿಯವಾಗಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಸರಕಾರಿ ಸ್ವಾಮ್ಯದ ಭೀಮ್ ಹೀಗೆ ಎಷ್ಟೊಂದು ಆಯ್ಕೆಗಳು ಜನರ ಮುಂದಿವೆ!

ಹೀಗಾಗಿ ಇವತ್ತು ಎಟಿಎಂ ಮುಂದೆ ‘ನೋ ಕ್ಯಾಶ್’ ಬೋರ್ಡ್ ಹಾಕಿದ್ದರೂ, ಸಾರ್ವಜನಿಕರು ನಿಶ್ಚಿಂತೆಯಿಂದ ಇದ್ದಾರೆ. ಈಗಿನ ಟ್ರೆಂಡ್ ಗಮನಿಸಿದರೆ ಇನ್ನೂ ಹತ್ತು ವರ್ಷ ಕಳೆದಾಗ, ನಗದು ಬಳಕೆ ಮತ್ತಷ್ಟು ಇಳಿಮುಖವಾಗುವುದು, ವ್ಯಾಪಾರಾದಿಗಳು ಬಹುತೇಕ ಔಪಚಾರಿಕವಾಗುವುದು ನಿಶ್ಚಿತ.
ಆದರೆ ಒಂದು ವೇಳೆ ವರ್ತಕ ಸಮುದಾಯವು ಯುಪಿಐ ಬಳಕೆಗೆತಿಲಾಂಜಲಿ ಇತ್ತು ‘ಕ್ಯಾಶ್ ಕೊಡಿ’ ಎಂದು ಕುಳಿತರೆ ಜನರಿಗೆ ಆಗುವ ತೊಂದರೆಯನ್ನು ಕೇಳುವವರು ಯಾರು? ಎಟಿಎಂ ನಲ್ಲಿ ಎಷ್ಟೋ ಸಲ ನಗದು ಇರುವುದಿಲ್ಲ. ಚಿಲ್ಲರೆ ಎಲ್ಲಿಂದ ತರುವುದು ಎಂಬ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಆದರೆ ಇವಿಷ್ಟೇ ಅಲ್ಲ, ಇದರ ಆಯಾಮ ಹತ್ತಾರು. ಮತ್ತೆ ನಗದು ವ್ಯವಸ್ಥೆಗೆ ಹಿಂತಿರುಗುವುದು ಎಂದರೆ ತೆರಿಗೆ ಸೋರಿಕೆ, ವಂಚನೆಗೂ ಒಂದು ಹಂತದ ತನಕ ಅದು ಎಡೆಮಾಡಿ ಕೊಡುತ್ತದೆ.
ನೋಟುಗಳ ಚಲಾವಣೆ ಪ್ರಬಲವಾಗಿದ್ದಾಗ, ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. ಆದರೆ ಭವಿಷ್ಯ ಇದೇ ರೀತಿ ಇರುವುದಿಲ್ಲ ಎಂಬುದನ್ನು ಮರೆಯುವಂತಿಲ್ಲ. ವಾರ್ಷಿಕ 40 ಲಕ್ಷ ರು. ವ್ಯವಹಾರ ದಾಟಿದ ಬಳಿಕ ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾಗುವುದರಿಂದ ಲಾಭವೂ ಇದೆ. ಮುಖ್ಯವಾಗಿ ವ್ಯಾಪಾರ ಸಂಘಟಿತವಾಗುತ್ತದೆ. ವಹಿವಾಟಿನ ಲೆಕ್ಕಾಚಾರಗಳು ನಡೆಸುವವರ ಕೈಯ ಇರುತ್ತದೆ.
ಜತೆಗೆ ಅದರ ಆಧಾರದಲ್ಲಿ ಸಾಲ ಪಡೆಯಲೂ ಅನುಕೂಲವಾಗುತ್ತದೆ. ಹಾಗೂ ಜಿಎಸ್ ಟಿದಾರನಾಗಿ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ಸಲ್ಲಿಸಿದ ಹೆಮ್ಮೆಯೂ ನಿಮ್ಮದಾಗುತ್ತದೆ. ನೋಟುಗಳ ಬಳಕೆ ಹೆಚ್ಚು ಇದ್ದಾಗ ಚೀಟಿ ವ್ಯವಹಾರಗಳು ಹೆಚ್ಚು. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಅನೇಕ ಮಂದಿ ಅಮಾಯಕರು,
ಚೀಟಿ ವ್ಯವಹಾರದಲ್ಲಿ ನಡೆಯುವ ಅಕ್ರಮಗಳಿಂದ ಉಳಿತಾಯದ ಹಣವನ್ನೂ ಕಳೆದುಕೊಂಡಿzರೆ. ಅವರೆಲ್ಲ ಸುರಕ್ಷಿತ ಹೂಡಿಕೆಯ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ ಲೈನ್ ಹಣಕಾಸು ವರ್ಗಾವಣೆಗಳು ಪುಷ್ಟಿ ನೀಡುತ್ತವೆ. ಇಂದು ಅಂಶವನ್ನು ಗಮನಿಸಬೇಕು. ಇದು ಸರಳ ವಿಚಾರ. ಯಾರು ವರ್ಷಕ್ಕೆ 40 ಲಕ್ಷ ರುಪಾಯಿಗಿಂತ ಹೆಚ್ಚು ಉತ್ಪನ್ನಗಳು ಅಥವಾ ವಸ್ತುಗಳನ್ನು ಮಾರಾಟ ಮಾಡುತ್ತಾರೆಯೋ, ಅವರು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ವ್ಯಾಪ್ತಿಗೆ ಬರಬೇಕು ಹಾಗೂ ಜಿಎಸ್‌ಟಿಯನ್ನು ಸಂಗ್ರಹಿಸಿ ಸರಕಾರಗಳಿಗೆ ಕೊಡಬೇಕು.
ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪಾಲು ಹೋಗುತ್ತದೆ. ಒಂದು ವೇಳೆ ಸೇವೆಗಳ ಮಾರಾಟ ವಲಯದಲ್ಲಿ ಇದ್ದರೆ, ವರ್ಷಕ್ಕೆ 20 ಲಕ್ಷ ರುಪಾಯಿಗಿಂತ ಹೆಚ್ಚು ವಹಿವಾಟು ನಡೆಸು ತ್ತಿದ್ದರೆ, ಅವರೂ ಜಿಎಸ್‌ಟಿಯ ವ್ಯಾಪ್ತಿಗೆ ಒಳಪಡುತ್ತಾರೆ. ಇದು ಕಾನೂನು. ಈ ಮಿತಿಯನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಅದು ಬೇರೆ ವಿಚಾರ.
ಹಾಗೆಯೇ ಜಿಎಸ್‌ಟಿ ಅಡಿಯಲ್ಲಿಯೇ ರಾಜಿ ತೆರಿಗೆ ಎಂಬ ವಿಧವಿದೆ. ಇದನ್ನು ಕಂಪೋಸಿಷನ್ ಸ್ಕೀಮ್ ಎಂದು ಕರೆಯುತ್ತಾರೆ. ಇದರ ಅಡಿಯಲ್ಲಿ ವ್ಯಾಪಾರಿಗಳು ವರ್ಷಕ್ಕೆ 1.50 ಕೋಟಿ ರುಪಾಯಿ ವಹಿವಾಟು ನಡೆಸಿದರೂ, ಕೇವಲ 1 ಪರ್ಸೆಂಟ್ ತೆರಿಗೆ ಸಂಗ್ರಹಿಸಿದರೆ ಸಾಕು. ಅಂದರೆ ಕೇವಲ ಒಂದೂವರೆ ಲಕ್ಷ ರುಪಾಯಿ! ನಿಜ, ಇಲ್ಲೂ ಕೆಲ ಉಪನಿಯಮಗಳು ಇವೆ. ಉದಾಹರಣೆಗೆ ಇದರಲ್ಲಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗುವುದಿಲ್ಲ, ಅಂತಾರಾಜ್ಯ ವಹಿವಾಟು ಮಾಡಲಾಗುವುದಿಲ್ಲ.
ಪಾನ್ ಮಸಾಲಾ, ತಂಬಾಕು, ಐಸ್ ಕ್ರೀಂ ಮಾರಾಟ ಮಾಡುವವರಿಗೆ ಇದು ಆಗುವುದಿಲ್ಲ ಎಂಬಿ ತ್ಯಾದಿ. ಆದರೆ ಅಂತಾರಾಜ್ಯ ವ್ಯವಹಾರ ಮಾಡದಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳಿಗೆ ಇದು ವರದಾನ. ಜಿಎಸ್‌ಟಿಯಿಂದ ವಿನಾಯಿತಿ ಇರುವ ವಸ್ತುಗಳನ್ನು ಯಾರಾದರೂ ಎಷ್ಟು ಬೇಕಾದರೂ, ಮಾರಾಟ ಮಾಡಲಿ, ಕೋಟಿಗಟ್ಟಲೆ ಆದಾಯ ಬಂದರೂ, ಅದಕ್ಕೆ ಈ ತೆರಿಗೆಯನ್ನು ಕಟ್ಟಬೇಕಿಲ್ಲ.
ಉದಾಹಣೆಗೆ ಎಳನೀರು, ಹಾಲು, ಬ್ರೆಡ್, ಅಗತ್ಯ ವಸ್ತುಗಳು, ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದರೆ, ಎಷ್ಟೇ ಕೋಟಿ ವ್ಯಾಪಾರವಾದರೂ, ಅಂಥವರು ಜಿಎಸ್‌ಟಿ ರಿಜಿಸ್ಟ್ರೇಶನ್ ಕೂಡ ಮಾಡಬೇಕಿಲ್ಲ. ಇಂಥ ಸಂದರ್ಭದಲ್ಲಿ ಮತ್ತೆ ಅನೌಪಚಾರಿಕ ಇಕಾನಮಿಗೆ ಜಾರುವುದು ದೊಡ್ಡ ದುರಂತಕ್ಕೆ ಕಾರಣವಾಗಬಹುದು.
ಆದ್ದರಿಂದ ಜಿಎಸ್‌ಟಿ ಪದ್ಧತಿಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂಬುದನ್ನು ಯಾರೂ ಮರೆಯಬಾರದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧಕರ ತಂಡ ಇತ್ತೀಚೆಗೆ ಜಿಎಸ್‌ಟಿಗೆ 8 ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಕರ್ನಾಟಕದಲ್ಲಿ ಉಂಟಾಗಿದ್ದ ವಿವಾದವನ್ನು ಪ್ರಸ್ತಾಪಿಸಿದ್ದರಿಂದ ಸುದ್ದಿಯಾಗಿತ್ತು.
ಜಿಎಸ್‌ಟಿ ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿಯೇ ಮಹತ್ವದ ಪರೋಕ್ಷ ತೆರಿಗೆ ಸುಧಾರಣೆ ಯಾಗಿದೆ. ಪಾರದರ್ಶಕತೆ, ಏಕರೂಪದ ಮಾರುಕಟ್ಟೆ, ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳ ಉಂಟು ಮಾಡುವುದು ಹಾಗೂ ಅನೌಪ ಚಾರಿಕ ವ್ಯಾಪಾರಗಳನ್ನು ಸಂಘಟಿತಗೊಳಿಸುವುದು ಇದರ ಉದ್ದೇಶವಾಗಿದೆ. ಈ ಉದ್ದೇಶಗಳು ಈಡೇರುತ್ತಿರುವುದರ ಬಗ್ಗೆ ನಾವು ಸಂಭ್ರಮಿಸುತ್ತಿರುವ ಹೊತ್ತಿನಲ್ಲಿಯೇ, ಈಗ ಉಂಟಾಗಿರುವ ಸವಾಲುಗಳ ಬಗ್ಗೆ ಯೋಚಿಸಬೇಕಾಗಿದೆ.
ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನೇಕ ಮಂದಿ ಸಣ್ಣ ವ್ಯಾಪಾರಿಗಳು, ಬೀದಿ ಬದಿಯ ವರ್ತಕರಿಗೆ, ಅವರ ಯುಪಿಐ ಟ್ರಾನ್ಸಾಕ್ಷನ್‌ಗಳನ್ನು ಅಧರಿಸಿದ ಭಾರಿ ಮೊತ್ತದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳನ್ನು ಕಳಿಸಿರುವುದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಎಸ್‌ಬಿಐನ ವರದಿ ಹೇಳಿದೆ.
ಆರ್ಥಿಕ ಚಟುವಟಿಕೆಗಳ ನಿಖರ ಚಿತ್ರಣವನ್ನು ಪಡೆಯುವುದು, ತೆರಿಗೆ ಸೋರಿಕೆಯನ್ನು ತಡೆಯುವುದು ಈ ಜಿಎಸ್‌ಟಿ ನೋಟಿಸ್‌ಗಳ ಹಿಂದಿನ ಉದ್ದೇಶವಾದರೂ, ನೋಟಿಸ್ ಕಳಿಸಿರುವ ರೀತಿಯಲ್ಲಿ ಸಮತೋಲನ ಮತ್ತು ಸಂವೇದನಾಶೀಲತೆ ಇರಲೇಬೇಕಿತ್ತು. ಈ ರೀತಿಯ ತೀಕ್ಷ್ಣ, ಕಠಿಣ ಕ್ರಮಗಳನ್ನು ದಿಢೀರ್ ಕೈಗೊಳ್ಳುವುದರಿಂದ ಸಣ್ಣ ವ್ಯಾಪಾರಿಗಳ ಸಮುದಾಯವು ಮತ್ತೆ ನಗದು ವ್ಯವಹಾರಕ್ಕೆ ಹಿಂತಿರುಗುವ ಸಾಧ್ಯತೆ ಇದೆ.
ಇದರಿಂದಾಗಿ ಸಣ್ಣ ವ್ಯಾಪಾರಿಗಳನ್ನು ಔಪಚಾರಿಕ ವಲಯಕ್ಕೆ ಸೇರ್ಪಡೆಗೊಳಿಸುವ ಮೂಲ ಅಶಯಕ್ಕೇ ಧಕ್ಕೆಯಾಗಲಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಕಳವಳ ವ್ಯಕ್ತಪಡಿಸಿದೆ. ಜಿಎಸ್‌ಟಿಯ ಹಿಂದೆ ಪಾರದರ್ಶಕತೆ ಮತ್ತು ಕಂದಾಯ ಸೃಷ್ಟಿಯ ಭದ್ರ ಬುನಾದಿಯಿದೆ. ಆದರೆ ಇದು ದೀರ್ಘಕಾಲೀನವಾಗಿ, ಯಶಸ್ವಿಯಾಗಿ ಮುಂದುವರಿಯಬೇಕಿದ್ದರೆ, ಅದರಿಂದ ಎಲ್ಲ ಪಾಲುದಾರರಿಗೂ ಅನುಕೂಲ ಸಿಗುವಂತಿರಬೇಕು.
ಯಾರಿಗೂ ಅದರಿಂದ ತೊಂದರೆ ಆಗಬಾರದು. ವಿಶೇಷವಾಗಿ ಸಣ್ಣ ವ್ಯಾಪಾರಿಗಳನ್ನು ದಂಡಿಸು ವಂತಿರದೆ, ಅವರನ್ನು ಬಲಪಡಿಸುವಂತಿರಬೇಕು. ಸಮಗ್ರತೆ, ನ್ಯಾಯಸಮ್ಮತ ಅನುಷ್ಠಾನ ಇಲ್ಲಿ ನಿರ್ಣಾಯಕ ಎಂದು ಎಸ್ ಬಿಐ ವರದಿ ಹೇಳಿದೆ ಜಾರಿಯಾಗಿ 5 ವರ್ಷಗಳಲ್ಲಿಯೇ ಜಿಎಸ್‌ಟಿ ಸಂಗ್ರಹದ ಪ್ರಮಾಣ ಡಬಲ್ ಆಗಿದೆ.
ಪ್ರತಿ ತಿಂಗಳಿನ ಸರಾಸರಿ ಕಲೆಕ್ಷನ್ 2 ಲಕ್ಷ ಕೋಟಿ ರುಪಾಯಿಗಳಾಗಿವೆ. ಆದ್ದರಿಂದಲೇ ಇದೊಂದು ಕ್ರಾಂತಿಕಾರಕ ಪರೋಕ್ಷ ತೆರಿಗೆಯಾಗಿದೆ. ಇದೇ ನೂರಕ್ಕೆ ನೂರು ಪರಿಪೂರ್ಣ ಎಂದಲ್ಲ. ಆದರೆ ಸುಧಾರಣೆಗೆ ಅವಕಾಶ ಇದ್ದೇ ಇದೆ. ಅಂದಹಾಗೆ ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್ 5ರಲ್ಲಿರುವ ರಾಜ್ಯ ಗಳೆಂದರೆ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡು ಮತ್ತು ಹರಿಯಾಣ. ಸ್ವಾರಸ್ಯ ವೇನೆಂದರೆ ಸಣ್ಣ ವ್ಯಾಪಾರಿಗಳ ಸಂಖ್ಯೆ ಹೆಚ್ಚು. ಪಬ್ಲಿಕ್ ಮತ್ತು ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಸಂಖ್ಯೆ ಕಡಿಮೆ.
ಆದರೆ ಜಿಎಸ್‌ಟಿ ಆದಾಯದ ಸಂಗ್ರಹಣೆಯಲ್ಲಿ ಹೆಚ್ಚು ಪಾಲು ಕೊಡುವವರು ಪಬ್ಲಿಕ್ (ಶೇಕಡಾ 34.83) ಮತ್ತು ಪ್ರೈವೇಟ್ ಲಿಮಿಟೆಡ್ (ಶೇಕಡಾ 27.94) ಕಂಪನಿಗಳು. ಮೂರನೇ ಸ್ಥಾನದಲ್ಲಿ ಪ್ರೊಪ್ರೈಟರ್‌ಶಿಪ್ (13.28) ಅಥವಾ ಸಣ್ಣ ವ್ಯಾಪಾರಿಗಳು ಬರುತ್ತಾರೆ. ಇರಲಿ, ಇನ್ನಾದರೂ ಯುಪಿಐಗೆ ಬೆನ್ನು ಹಾಕದಿರಲಿ.