Lingadahalli Chethan Kumar Column: ನಾಯಕರ ಮಹತ್ವಾಕಾಂಕ್ಷೆ ಸ್ವಾರ್ಥವಾಗಿ ಬದಲಾದಾಗ..
ಒಂದೆರಡು ಉದಾಹರಣೆಗಳನ್ನು ವಿಶ್ಲೇಷಿಸಿದರೆ ಈ ಮಾತು ನಿಮಗೆ ಮತ್ತಷ್ಟು ಮನದಟ್ಟಾಗ ಬಹುದು. ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಯಾರಿಗೆ ತಾನೇ ಗೊತ್ತಿಲ್ಲ? ‘ಭ್ರಷ್ಟಾಚಾರ ವಿರೋಧಿ ಭಾರತ’ ಎಂಬ ಅರ್ಥನೀಡುವ ಅಭಿಯಾನವನ್ನು ಹುಟ್ಟು ಹಾಕಿದ ಸಾಮಾಜಿಕ ಹೋರಾಟ ಗಾರ ಅಣ್ಣಾ ಹಜಾರೆಯವರ ತೆಕ್ಕೆಗೆ ಸೇರಿಕೊಂಡು ಶುರುವಿನಲ್ಲಿ ಗುರುತಿಸಿಕೊಂಡವರು ಈ ಕೇಜ್ರಿವಾಲ್.


ಚೇತನ - ಚಿಂತನ
ಲಿಂಗದಹಳ್ಳಿ ಚೇತನ್ ಕುಮಾರ್
ಈ ಸಮಾಜದಿಂದ ವಿವಿಧ ರೀತಿಯಲ್ಲಿ ನೆರವನ್ನು ಪಡೆದು ಬದುಕಿನ ದಾರಿಯನ್ನು ಸುಗಮ ಗೊಳಿಸಿಕೊಂಡವರು, ತಾವು ಒಂದು ಹಂತಕ್ಕೆ ತಲುಪಿದ ನಂತರ ಈ ಸಮಾಜಕ್ಕೆ ಏನನ್ನಾದರೂ ಮರಳಿ ಕೊಡಬೇಕು, ಅದು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿಯಾಗಬೇಕು ಹಾಗೂ ತನ್ಮೂಲಕ ತಮ್ಮ ಹೆಜ್ಜೆಗುರುತುಗಳನ್ನು ಸ್ಪಷ್ಟವಾಗಿ ಉಳಿಸಿ ಹೋಗುವಂತಾಗಬೇಕು ಎಂಬ ‘ಸಾರ್ವಕಾಲಿಕ’ ಸದಾಶಯವನ್ನು ಮೆರೆಯುವುದುಂಟು. ಇದು ರಾಜಕೀಯ ಕ್ಷೇತ್ರಕ್ಕೂ ಅನ್ವಯವಾಗುವ ಮಾತು. ಆದರೆ ಶುರುವಿನಲ್ಲಿ ಇಂಥ ಆಶಯವನ್ನೇ ಉಸಿರಾಡುತ್ತಿದ್ದವರು (ಅಥವಾ ಆ ರೀತಿಯಲ್ಲಿ ತೋರಿಸಿಕೊಂಡವರು), ಕ್ರಮೇಣ ಅಧಿಕಾರದ ಹಪಾಹಪಿಯಲ್ಲಿ ‘ಹತ್ತರಲ್ಲಿ ಹನ್ನೊಂದನೆಯವರು’ ಎಂಬಂತೆ ಬದಲಾಗಿಬಿಡುವುದೇಕೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!
ಒಂದೆರಡು ಉದಾಹರಣೆಗಳನ್ನು ವಿಶ್ಲೇಷಿಸಿದರೆ ಈ ಮಾತು ನಿಮಗೆ ಮತ್ತಷ್ಟು ಮನದಟ್ಟಾಗ ಬಹುದು. ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಯಾರಿಗೆ ತಾನೇ ಗೊತ್ತಿಲ್ಲ? ‘ಭ್ರಷ್ಟಾಚಾರ ವಿರೋಧಿ ಭಾರತ’ ಎಂಬ ಅರ್ಥನೀಡುವ ಅಭಿಯಾನವನ್ನು ಹುಟ್ಟು ಹಾಕಿದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ತೆಕ್ಕೆಗೆ ಸೇರಿಕೊಂಡು ಶುರುವಿನಲ್ಲಿ ಗುರುತಿಸಿ ಕೊಂಡವರು ಈ ಕೇಜ್ರಿವಾಲ್.
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಆನೆ ಸಾಗಾಟ ಹೇಗೆ ?
ಈ ಅಭಿಯಾನ ಜನಪ್ರಿಯವಾಗುತ್ತಾ ಹೋದಂತೆ ಅರವಿಂದ ಕೇಜ್ರಿವಾಲರ ವರ್ಚಸ್ಸೂ ಗಟ್ಟಿ ಯಾಗುತ್ತಾ ಹೋಯಿತು ಎನ್ನಬೇಕು. ದೆಹಲಿಯ ಜನಸಾಮಾನ್ಯರನ್ನು ಕಾಡುತ್ತಿದ್ದ ಕೆಲವಷ್ಟು ದೈನಂದಿನ ಸಮಸ್ಯೆಗಳ ನಿವಾರಣೆಗೆ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಮುಂದಾದ ಕೇಜ್ರಿವಾಲ್, ತತ್ಫಲವಾಗಿ ಭರ್ಜರಿ ಜನಪ್ರಿಯತೆಯನ್ನೇ ದಕ್ಕಿಸಿಕೊಂಡು ಬಿಟ್ಟರು.

ಈ ಜನಪ್ರಿಯತೆಯನ್ನೇ ‘ಎನ್ ಕ್ಯಾಶ್’ ಮಾಡಿಕೊಂಡು ಯಾಕೆ ರಾಜಕೀಯಕ್ಕೆ ಇಳಿಯಬಾರದು ಎಂಬ ಚಿಂತನೆ ಅವರಲ್ಲಿ ಮೊಳಕೆಯೊಡೆದಾಗ ಹುಟ್ಟಿಕೊಂಡಿದ್ದೇ ಆಮ್ ಆದ್ಮಿ ಪಕ್ಷ. ಹೀಗೆ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಚಿಮ್ಮುಹಲಗೆಯಾಗಿಸಿಕೊಂಡು ರಾಜಕೀಯ ವೇದಿಕೆಗೆ ಜಿಗಿದ ಕೇಜ್ರಿವಾಲರು ನಂತರದಲ್ಲಿ ದೆಹಲಿ ಗದ್ದುಗೆಯನ್ನೂ ಏರಿಬಿಟ್ಟರು, ಹತ್ತು ವರ್ಷಕ್ಕೂ ಹೆಚ್ಚು ಅವಧಿಯವರೆಗೆ ದರ್ಬಾರ್ ಕೂಡ ನಡೆಸಿದರು.
ಮೊದಲ ಕೆಲ ವರ್ಷಗಳು ಅವರ ಆಡಳಿತ ಚೆನ್ನಾಗೇ ಇತ್ತು. ಆದರೆ ದಿನಗಳೆದಂತೆ ಅವರಲ್ಲಿ ‘ಹೆಚ್ಚುವರಿ’ ಮಹತ್ವಾಕಾಂಕ್ಷೆ ಚಿಗುರೊಡೆಯಿತು. ಪ್ರಾಯಶಃ ಅದು, ಬಿಜೆಪಿಯ ನರೇಂದ್ರ ಮೋದಿ ಯವರಿಗೆ ಪರ್ಯಾಯ ನಾಯಕನೆಂಬ ರೀತಿಯಲ್ಲಿ ತಮ್ಮನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿಕೊ ಳ್ಳಬೇಕು ಎಂಬ ‘ಅಕಾಲಿಕ ಆಸೆ’ಯಿಂದಾಗಿ ಚಿಗುರಿಕೊಂಡ ಮಹತ್ವಾಕಾಂಕ್ಷೆ ಇದ್ದಿರಬೇಕು.
ಹೀಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸಾಕ್ಷಾತ್ ಮೋದಿಯವರ ಎದುರಿಗೇ ವಾರಾಣಸಿ ಯಲ್ಲಿ ಸ್ಪರ್ಧಿಸಿ ಸೆಡ್ಡು ಹೊಡೆದುಬಿಟ್ಟರು. ಅದರಲ್ಲಿ ಗೆಲುವು ಸಿಗಲಿಲ್ಲ, ಅದು ಬೇರೆಯ ಮಾತು. ಹಾಗೆಂದ ಮಾತ್ರಕ್ಕೆ ವ್ಯಕ್ತಿಯೊಬ್ಬನಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇರಬಾರದೇ? ಆತ ತಾನು ರಾಷ್ಟ್ರೀಯ ನಾಯಕನಾಗಬೇಕು ಎಂಬ ನಿಟ್ಟಿನಲ್ಲಿ ಕಸರತ್ತು ಮಾಡಬಾರದೇ? ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡಬಹುದು.

ರಾಜಕೀಯ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ; ಆದರೆ ಅದಕ್ಕೆ ಮೂಲ ಸೆಲೆಯಾಗಿರುವುದು ‘ಜನಕಲ್ಯಾಣ’ದ ಆಶಯವೇ ಅಥವಾ ‘ಸ್ವಾರ್ಥ ಸಾಧನೆ’ಯೇ? ಎಂಬ ಅಂಶವೂ ಇಲ್ಲಿ ಮುಖ್ಯವಾಗುತ್ತದೆ. ಕೇಜ್ರಿವಾಲರ ವಿಷಯದಲ್ಲಿ ‘ಜನಕಲ್ಯಾಣ’ಕ್ಕಿಂತ ಹೆಚ್ಚಾಗಿ ‘ಸ್ವಾರ್ಥ’ವೇ ಹೆಡೆಯಾಡಿಸುತ್ತಿತ್ತು ಎನಿಸುತ್ತದೆ. ಹೀಗಾಗಿ ಕಾಲಕ್ರಮೇಣ ಜನರು ಅವರಲ್ಲಿ ವಿಶ್ವಾಸವನ್ನು ಕಳೆದುಕೊಳ್ಳಲಾರಂಭಿಸಿದರು.
ದೆಹಲಿಯ ಮದ್ಯ ಹಗರಣ, ಅದರಿಂದಾಗಿ ಜೈಲುಪಾಲಾಗಿದ್ದು ಮುಂತಾದ ಬೆಳವಣಿಗೆಗಳಿಂದಾಗಿ ಅವರ ವರ್ಚಸ್ಸು ಕೂಡ ಸಾಕಷ್ಟು ಮಟ್ಟಿಗೆ ಕುಸಿಯಿತು ಎನ್ನಬೇಕು. ಮುಂದೆ ಪಂಜಾಬ್‌ನಲ್ಲಿ ಕೂಡ ಆಮ್ ಆದ್ಮಿ ಪಕ್ಷದ ಸರಕಾರವು ಸ್ಥಾಪನೆಯಾಗುವಂತೆ ಆಯಿತಾದರೂ, ವೈಯಕ್ತಿಕ ನೆಲೆಗಟ್ಟಿನಲ್ಲಿ ಕೇಜ್ರಿವಾಲರಿಗಿದ್ದ ಚರಿಷ್ಮಾ ಈಗ ಸಾಕಷ್ಟು ಕುಸಿದಿದೆ ಎನ್ನಬೇಕಾಗುತ್ತದೆ.
ಇನ್ನು ಪಶ್ಚಿಮ ಬಂಗಾಳದ ವಿಷಯಕ್ಕೆ ಬರೋಣ. ಪ್ರಸ್ತುತ ಅಲ್ಲೀಗ ಮುಖ್ಯಮಂತ್ರಿಯಾಗಿ ದರ್ಬಾರು ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಕೂಡ ಒಂದು ಕಾಲಕ್ಕೆ ಜನರಿಗೆ ಭರವಸೆಯ ಆಶಾಕಿರಣವಾಗಿ ಗೋಚರಿಸಿದವರೇ. ಕೇಂದ್ರ ಸರಕಾರದಲ್ಲಿ ಸಚಿವೆಯಾಗಿ ರೈಲ್ವೆ, ಕಲ್ಲಿದ್ದಲು, ಗಣಿಗಾರಿಕೆ ಮುಂತಾದ ಮಹತ್ವದ ಖಾತೆಗಳನ್ನು ಆಕೆ ನಿರ್ವಹಿಸಿ ದವರೇ. ನೊಂದವರ ಮತ್ತು ಅಸಹಾಯಕರ ಕಣ್ಣೀರನ್ನು ಮಮತಾ ಬ್ಯಾನರ್ಜಿ ಒರೆಸಬಲ್ಲರು ಎಂಬ ಭಾವನೆ ಜನಮಾನಸದಲ್ಲಿ ಗಟ್ಟಿಯಾಗುತ್ತಿರುವಾಗಲೇ, ಈಕೆ ಜನಕಲ್ಯಾಣದ ಸದಾಶಯಕ್ಕೆ ತಿಲಾಂಜಲಿಯಿತ್ತು, ಸ್ವಾರ್ಥಸಾಧನೆಗೆ ಮುಂದಾದರು.

ಜತೆಗೆ, ಹಠಮಾರಿತನ, ರಾಜಕೀಯ ದ್ವೇಷಸಾಧನೆ ಮುಂತಾದ ಅನಪೇಕ್ಷಿತ ಗುಣಗಳೂ ಸೇರಿಕೊಂಡು ತಮಿಳುನಾಡಿನ ಜೆ.ಜಯಲಲಿತಾರ ಮತ್ತೊಂದು ಅವತಾರವೇ ಆಗಿಬಿಟ್ಟರು ಮಮತಾ. ಒಬ್ಬ ರಾಷ್ಟ್ರ ನಾಯಕಿಯಾಗಿ ಮಿಂಚಬಹುದಾಗಿದ್ದ ಮಮತಾ, ಹೀಗೆ ಸ್ವಯಂಕೃತಾಪರಾಧದಿಂದಾಗಿ ಈಗ ಪಶ್ಚಿಮ ಬಂಗಾಳಕ್ಕೆ ಮಾತ್ರವೇ ಸೀಮಿತಗೊಳ್ಳುವಂತಾಗಿದೆ.
ರಾಷ್ಟ್ರ ರಾಜಕೀಯದಲ್ಲಿ ಪ್ರಭಾವ ಬೀರಬಲ್ಲವರು ಅಥವಾ ಪರಿಗಣಿಸಬೇಕಾದವರು ಎಂಬ ಸಂದರ್ಭ ಬಂದಾಗಲೆ ಮಮತಾ ಬ್ಯಾನರ್ಜಿ ಅವರ ಹೆಸರು ಪ್ರಸ್ತಾಪವಾಗುವುದು ಹೌದಾದರೂ, ಹಿಂದೊಂದು ಕಾಲಕ್ಕೆ ಅವರಿಗಿದ್ದ ವರ್ಚಸ್ಸಿನ ಮಟ್ಟದಲ್ಲಿ ಈ ಪ್ರಸ್ತಾಪದ ಬೇರು ಗಟ್ಟಿಯಾಗಿರುವು ದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ‘ತೆಲುಗುದೇಶಂ’ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ಹಾಗೂ ಸಂಯುಕ್ತ ಜನತಾ ದಳದ ಮುಖ್ಯಸ್ಥ ನಿತೀಶ್ ಕುಮಾರ್ ಕೂಡ ಈ ನೆಲೆಯಲ್ಲಿ ಉಲ್ಲೇಖಿಸಬಹುದಾದ ಮತ್ತೆರಡು ಹೆಸರುಗಳು.
ಈ ಪೈಕಿ ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗೆ ಕೆಲ ಕಾಲ ಕೈಜೋಡಿ ಸಿದ, ತರುವಾಯದಲ್ಲಿ ಮುನಿಸಿಕೊಂಡು ಹೊರಬಂದ ಹಾಗೂ ಕೆಲ ಹಗರಣಗಳಲ್ಲಿ ಹೆಸರು ಕೆಡಿಸಿಕೊಂಡ ಕಾರಣಗಳಿಗೆ ರಾಜಕೀಯ ವಿಶ್ವಾಸಾರ್ಹತೆಗೂ, ಜನರ ನಂಬಿಕೆಗೂ ಧಕ್ಕೆ ತಂದು ಕೊಂಡರು.
ನಿತೀಶ್ ಕುಮಾರ್ ಕೂಡ ಹೀಗೆ ರಾಜಕೀಯ ಮೈತ್ರಿಕೂಟಗಳನ್ನು ಮತ್ತೆ ಮತ್ತೆ ಬದಲಿಸುವ ಕಾರಣಕ್ಕೇ ಜನರಿಂದ ‘ಪಲ್ಟೂರಾಮ’ ಎಂಬ ಗೇಲಿಗೆ ಒಳಗಾಗಬೇಕಾಯಿತು. ಜನಕಲ್ಯಾಣದ ಸದಾಶಯಕ್ಕಿಂತ ಹೆಚ್ಚಾಗಿ ಅಧಿಕಾರಕ್ಕೆ ಅಂಟಿಕೊಂಡೇ ಇರಬೇಕೆಂಬ ಸ್ವಾರ್ಥವೇ ಅವರಲ್ಲಿ ಹೆಚ್ಚಾದ ಪರಿಣಾಮವಾಗಿ, ಕೆಲ ವರ್ಷದ ಹಿಂದೆ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷದ ಜತೆಗೆ ಕೈಜೋಡಿಸಿದ್ದ ನಿತೀಶರು ಬದಲಾದ ರಾಜಕೀಯ ಸಮೀಕರಣಕ್ಕೆ ತಕ್ಕಂತೆ ಪಾಳಯ ವನ್ನು ಬದಲಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಕುಲುಕಿ ಮುಖ್ಯಮಂತ್ರಿ ಯಾಗಿ ದರ್ಬಾರು ನಡೆಸುತ್ತಿದ್ದಾರೆ.
ಇದೇ ಸಖ್ಯದಲ್ಲಿ ಮುಂದಿನ ಅವಽಗೂ ಸಿಂಹಾಸನವನ್ನು ಉಳಿಸಿಕೊಳ್ಳುವ ತವಕದಲ್ಲಿರುವ ನಿತೀಶರು, ತಮ್ಮ ಈ ವಿಲಕ್ಷಣ ನಡೆಯಿಂದಾಗಿಯೇ ಜನರ ವಿಶ್ವಾಸವನ್ನೂ ನಿಧಾನಕ್ಕೆ ಕಳೆದು ಕೊಳ್ಳುತ್ತಿದ್ದಾರೆ ಹಾಗೂ ರಾಷ್ಟ್ರನಾಯಕನಾಗುವ ಅವಕಾಶವನ್ನೂ ‘ಮಿಸ್’ ಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತದೆ.
ಹೇಳುತ್ತ ಹೋದರೆ ರಾಷ್ಟ್ರದ ಉದ್ದಗಲಕ್ಕೂ ಇಂಥ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಆದರೆ ಒಂದಂತೂ ಸತ್ಯ. ‘ಜನಕಲ್ಯಾಣ’ದ ಆಶಯ ಹೊತ್ತಿರುವ ತಥಾಕಥಿತ ನಾಯಕನೊಬ್ಬ, ಆ ಆಶಯವನ್ನು ಬದಿಗೆ ಸರಿಸಿ ‘ಸ್ವಾರ್ಥಸಾಧನೆ’ಗೆ ಮುಂದಾದಾಗಲೆಲ್ಲ, ಅಂಥ ಕಸರತ್ತಿನ ಫಲವಾಗಿ ಒಂದೊಮ್ಮೆ ಅಧಿಕಾರವನ್ನು ದಕ್ಕಿಸಿಕೊಂಡಿದ್ದರೂ, ಜನರ ದೃಷ್ಟಿಯಲ್ಲಿ ‘ಸ್ವಾರ್ಥಿ’ ಎಂಬ ಹಣೆಪಟ್ಟಿಯನ್ನೇ ಲಗತ್ತಿಸಿಕೊಳ್ಳಬೇಕಾಗುತ್ತದೆ. ಆದರೆ ಶತಾಯಗತಾಯ ರಾಜಕೀಯ ಸಿಂಹಾಸನ ದಲ್ಲಿ ಒಮ್ಮೆ ಮೆರೆಯಬೇಕು ಎಂಬ ಹಪಾಹಪಿ ಇರುವವರು ಇಂಥ ಸೂಕ್ಷ್ಮವನ್ನೆ ಅರ್ಥಮಾಡಿ ಕೊಳ್ಳುವುದಿಲ್ಲ. ಅದೇ ನಮ್ಮ ದೇಶದ ಒಂದಿಷ್ಟು ನಾಯಕರ ದುರಂತ..!!
(ಲೇಖಕರು ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರು)