Roopa Gururaj Column: ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ?
ಒಮ್ಮೆ ಜ್ಯೋತಿಷಿಯೊಬ್ಬರು ಅವರ ಮನೆಗೆ ಬಂದರು. ತಂದೆ-ಮಕ್ಕಳ ಕೈಗಳನ್ನು ಕೂಲಂಕಷವಾಗಿ ನೋಡಿದರು. ನಂತರ ‘ಜಮೀನುದಾರರೇ, ನಿಮ ಗೀಗ ಐವತ್ತು ವರ್ಷ ವಯಸ್ಸು. ನೀವು ಇನ್ನೂ 30 ವರ್ಷ ಬದುಕುತ್ತೀರಿ. ನಿಮ್ಮ ಮಗನು ಇನ್ನೂ 32 ವರ್ಷಗಳ ಕಾಲ ಬದುಕುತ್ತಾನೆ’ ಎಂದು ಭವಿಷ್ಯ ನುಡಿ ದರು
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಅಲ್ಲೊಬ್ಬ ಶ್ರೀಮಂತ ಜಮೀನುದಾರರಿದ್ದರು. ಸ್ವಶ್ರಮದಿಂದ ಸಿರಿವಂತರಾಗಿದ್ದವರು. ಐವತ್ತು ವರ್ಷ ವಯಸ್ಸಾಗಿದ್ದ ಅವರಿಗೆ ಮೂವತ್ತು ವರ್ಷ ವಯಸ್ಸಿನ ಮಗನಿದ್ದ. ಒಬ್ಬನೇ ಮಗ, ವಂಶೋದ್ಧಾರಕ ಎಂಬಿತ್ಯಾದಿ ಕಾರಣಗಳಿಂದ ಅವನನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು.
ಆದರೆ ಅವನು ತಿಂದುಂಡು, ಆಟವಾಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆಯುತ್ತಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ, ಏಕೆಂದರೆ ಅಪ್ಪ ಅವನಿಗೆ ಕೆಲಸ ಮಾಡುವುದನ್ನು ಕಲಿಸಿ ಕೊಟ್ಟಿರ ಲಿಲ್ಲ. ಇನ್ನೂ ಸಮಯವಿದೆ ಎಂದುಕೊಂಡು ಸುಮ್ಮನಿದ್ದರು. ಅವನೂ ಸುಮ್ಮನಿದ್ದ, ಏನೂ ಕಲಿಯಲಿಲ್ಲ.
ಒಮ್ಮೆ ಜ್ಯೋತಿಷಿಯೊಬ್ಬರು ಅವರ ಮನೆಗೆ ಬಂದರು. ತಂದೆ-ಮಕ್ಕಳ ಕೈಗಳನ್ನು ಕೂಲಂಕಷ ವಾಗಿ ನೋಡಿದರು. ನಂತರ ‘ಜಮೀನುದಾರರೇ, ನಿಮ ಗೀಗ ಐವತ್ತು ವರ್ಷ ವಯಸ್ಸು. ನೀವು ಇನ್ನೂ ೩೦ ವರ್ಷ ಬದುಕುತ್ತೀರಿ. ನಿಮ್ಮ ಮಗನು ಇನ್ನೂ 32 ವರ್ಷಗಳ ಕಾಲ ಬದುಕುತ್ತಾನೆ’ ಎಂದು ಭವಿಷ್ಯ ನುಡಿದರು.
ಜಮೀನುದಾರರು ತಾವು ಇನ್ನೂ ಮೂವತ್ತು ವರ್ಷ ಬದುಕುವ ಭರವಸೆ ಸಿಕ್ಕಿದ್ದರಿಂದ ಸಂತಸ ಗೊಂಡರು. ಆದರೆ ಅವರ ಮಗ ಗಟ್ಟಿಯಾಗಿ ಅಳಲಾರಂಭಿಸಿದ. ಅಪ್ಪ ಗಾಬರಿಗೊಂಡು ಅವನ ಅಳುವಿಗೆ ಕಾರಣ ಕೇಳಿದಾಗ ಆತ, ‘ನೀವು ಇನ್ನು ಮೂವತ್ತು ವರ್ಷಕ್ಕೆ ಸತ್ತು ಹೋಗುತ್ತೀರಿ. ನಾನು ಮೂವತ್ತೆರಡು ವರ್ಷ ಬದುಕಿರುತ್ತೇನೆ, ಅಂದರೆ ನೀವು ಸತ್ತ ನಂತರದ ಎರಡು ವರ್ಷ ನನ್ನನ್ನು ನೋಡಿಕೊಳ್ಳುವವರು ಯಾರು?’ ಎಂದು ಬಿಕ್ಕಳಿಸಿ ಅಳತೊಡಗಿದ.
‘ಜ್ಯೋತಿಷಿಯು ಇನ್ನೂ ಮೂವತ್ತು ವರ್ಷಗಳ ಕಾಲ ನಿಮ್ಮಪ್ಪ ಬದುಕಿರುತ್ತಾರೆ. ಅಲ್ಲಿಯವರೆಗೂ ನೀನು ನಿಶ್ಚಿಂತೆಯಾಗಿರಬಹುದು, ಆನಂತರ ನೋಡಿಕೊಳ್ಳೋಣ’ ಎಂದು ಹೇಳಿದರೂ ಆತ ಅಳು ನಿಲ್ಲಿಸಲಿಲ್ಲ. ಆಗ ಜಮೀನುದಾರರು ಮಗನ ತಲೆ ನೇವರಿಸುತ್ತಾ, ‘ಮಗು, ನಿನಗೆ ಐವತ್ತೊಂಬತ್ತು ವರ್ಷ ವಯಸ್ಸಾದಾಗ ಅಂದರೆ ನಾನು ಸಾಯುವುದಕ್ಕೆ ಒಂದು ವರ್ಷ ಮುಂಚೆ ನಿನಗೆ ವ್ಯವಸಾಯ ಮಾಡುವುದನ್ನೂ, ಜಮೀನುದಾರಿಕೆಯ ಕೆಲಸವನ್ನೂ ಹೇಳಿ ಕೊಡುತ್ತೇನೆ.
ನೀನು ಅದನ್ನು ಕಲಿತರೆ, ನಾನು ಸತ್ತ ಮೇಲೂ ಎರಡು ವರ್ಷಗಳ ಕಾಲ ನಿಶ್ಚಿಂತೆಯಾಗಿ ಬದುಕ ಬಹುದು, ಚಿಂತಿಸಬೇಡ’ ಎಂದು ಸಮಾಧಾನ ಹೇಳಿದರು. ಆತ ಅಳುವುದನ್ನು ನಿಲ್ಲಿಸಿ ನಿರುಮ್ಮಳ ನಾಗಿ ಕುಳಿತ. ಆಗ ಜ್ಯೋತಿಷಿಯು ‘ಸ್ವಾಮಿ, ನೀವು ಅವನಿಗೆ ಕೆಲಸ ಕಲಿಸಲು ಬದುಕಿನ ಕೊನೆಯ ವರ್ಷ ದವರೆಗೂ ಕಾಯಬೇಕೆ? ಐವತ್ತೊಂಬತ್ತು ವರ್ಷ ವಯಸ್ಸಾದಾಗ ವ್ಯವಸಾಯವನ್ನೂ, ಜಮೀನುದಾರಿಕೆಯನ್ನೂ ಹೇಳಿಕೊಟ್ಟು ಆತನ ಕೊನೆಯ ಎರಡು ವರ್ಷಗಳು ನಿಶ್ಚಿಂತೆ ಯಿಂದ ಬದುಕುವಂತೆ ಮಾಡುವುದರ ಬದಲು ಅದನ್ನು ಅವನಿಗೆ ಇಂದೇ ಹೇಳಿಕೊಟ್ಟರೆ ಇನ್ನೂ ಮೂವತ್ತೆ ರಡು ವರ್ಷಗಳ ಕಾಲವೂ ಆತ ನಿಶ್ಚಿಂತೆಯಾಗಿ ಬದುಕುವಂತೆ ಮಾಡಬಹುದಲ್ಲವೇ?’ ಎಂದು ಹೇಳಿದಾಗ, ಅಪ್ಪ-ಮಗ ಇಬ್ಬರಿಗೂ ಮಿಂಚು ಹೊಳೆದಂತಾಯಿತು.
ಅವರಿಬ್ಬರೂ ಒಮ್ಮೆಗೇ ‘ಅಯ್ಯೋ! ಇದರ ಬಗ್ಗೆ ನಾವು ಮೊದಲೇ ಏಕೆ ಚಿಂತಿಸಲಿಲ್ಲ?’ ಎಂದು ಉದ್ಘಾರ ತೆಗೆದರು. ಅಂದಿನಿಂದ ಅಪ್ಪ-ಮಕ್ಕಳ ದೃಷ್ಟಿಕೋನ ಬದಲಾಯಿತು, ಬದುಕೂ ಬದಲಾ ಯಿತು. ಬಹುತೇಕ ಅಪ್ಪ-ಅಮ್ಮಂದಿರು ಮಾಡುವುದು ಇದನ್ನೇ ಅಲ್ಲವೇ? ಮಕ್ಕಳನ್ನು ಮುದ್ದು ಮಾಡುವುದು.
ನಾವು ಬಾಲ್ಯದಲ್ಲಿ ಕಷ್ಟಪಟ್ಟೆವು, ಈಗ ಅವರೇಕೆ ಕಷ್ಟಪಡಬೇಕು, ಅವರು ಕಷ್ಟಪಟ್ಟರೆ ಎಲ್ಲಿ ಬಾಡಿ ಹೋಗುತ್ತಾರೋ ಎನ್ನುವ ಆಲೋಚನೆ ಗಳು ಅಪ್ಪಂದಿರಲ್ಲೂ ಇರಬಹುದು. ಮನೆ ಕೆಲಸಗಳನ್ನು, ಕಲಿಸಲು ಮಕ್ಕಳಿಗೆ ಯಾವುದೇ ವಯಸ್ಸು ಎಂಬುದು ಇರುವುದಿಲ್ಲ. ಹುಟ್ಟಿನಿಂದ ಅವರು ದೊಡ್ಡ ವರು ಕೆಲಸ ಮಾಡುವುದನ್ನು ನೋಡುತ್ತಿರುತ್ತಾರೆ. ನಿಧಾನವಾಗಿ ಅವರನ್ನು ಈ ಕೆಲಸಗಳಿಗೆ ಒಳ ಗೊಳ್ಳಬೇಕು.
ಊಟಕ್ಕೆ ಬಡಿಸುವಾಗ ನೀರು ಹಾಕಿ ತಟ್ಟೆ ಕ್ಲೀನ್ ಮಾಡುವುದು, ಟೇಬಲ್ ಕ್ಲೀನ್ ಮಾಡುವುದು ಚಿಕ್ಕ ಚಿಕ್ಕ ಪಾತ್ರೆ ತೊಳೆಯುವುದು ಇದನ್ನು ಮಕ್ಕಳು ಚಿಕ್ಕವರಾಗಿದ್ದಾಗಿನಿಂದ ಮಾಡುತ್ತಾ ಬಂದರೆ ಬೆಳೆಯುತ್ತಾ ಅದೇ ಒಂದು ಜೀವನಕ್ರಮವಾಗುತ್ತದೆ. ಅತ್ತ ಹೊರಗೆ ಹೋಗಿ ಜೀವನ ಕಟ್ಟಿಕೊಳ್ಳುವು ದಕ್ಕೂ ಕೂಡ ಅವರಿಗೆ ಒಳ್ಳೆ ವಿದ್ಯೆಯನ್ನು ಕೊಟ್ಟು ಮಾನಸಿಕ ವಾಗಿ ಅವರನ್ನ ಸಿದ್ಧ ಮಾಡಿದರೆ, ಜವಾಬ್ದಾರಿಯಿಂದ ಓದಿ ಒಳ್ಳೆಯ ಅವಕಾಶವನ್ನು ಸೃಷ್ಟಿಸಿಕೊಂಡು ಒಳ್ಳೆ ಕೆಲಸವನ್ನು ಪಡೆದುಕೊಳ್ಳುವಲ್ಲಿ ಅವರು ಸಫಲರಾಗುತ್ತಾರೆ.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ -ಹಿರಿಯರು ಅದಕ್ಕೇ ಹೀಗೆ ಹೇಳಿರುವುದು..