ಎದುರೇಟು
ಎನ್.ರವಿ ಕುಮಾರ್
ಅದು 1970ರ ಕಾಲಘಟ್ಟ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ದ್ವಿತೀಯ ಸರಸಂಘ ಚಾಲಕರಾದ ಪರಮಪೂಜ್ಯ ಶ್ರೀ ಗುರೂಜಿ ಗೋಲ್ವಲ್ಕರ್ ಅವರನ್ನು ವಿದೇಶಿ ಪತ್ರಕರ್ತರೊಬ್ಬರು, “ಆರೆಸ್ಸೆಸ್ ಎಂದರೇನು?" ಎಂದು ಪ್ರಶ್ನಿಸಿದರು. ಗುರೂಜಿ ಅವರ ಕಣ್ಣುಗಳು ಅರಳಿದವು. ತುಟಿ ಯಂಚಿನಲ್ಲಿ ನಗುವನ್ನು ಮೂಡಿಸುತ್ತ ಅವರು ಉತ್ತರಿಸಿದರು- “ನಿಸ್ವಾರ್ಥ ಸೇವೆಗೆ ಸಿದ್ಧರಾಗಿರು ವುದು" ( Ready for selfless service ). ಅವರು ಮಾತು ಮುಂದುವರಿಸಿ, “ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ನಿಸ್ವಾರ್ಥ ಸೇವೆಗೆ ಸಮರ್ಪಿತವಾಗಿದೆ.
ಅದು ಪ್ರವಾಹ, ಬರ, ಭೂಕಂಪದಂಥ ಪ್ರಾಕೃತಿಕ ವಿಪತ್ತುಗಳಾಗಿರಲಿ ಅಥವಾ ಯುದ್ಧದ ಸಂದರ್ಭ ವಾಗಿರಲಿ ಈ ಸೇವೆ ಅಬಾಧಿತವಾಗಿರುತ್ತದೆ; 1948, 1962 ಮತ್ತು 1965ರಲ್ಲಿ ನಾವು ಮಾಡಿದ್ದು ಇದನ್ನೇ. ನಾವು ಕೆಲಸಮಾಡುವುದು ಪ್ರಚಾರಕ್ಕಾಗಿ ಅಲ್ಲ, ದೇಶಸೇವೆಗಾಗಿ" ಎಂದರು.
ಗುರೂಜಿ ಅವರ ಈ ಉತ್ತರವೇ ಆರೆಸ್ಸೆಸ್‌ನ ಸಂಪೂರ್ಣ ಚಟುವಟಿಕೆ ಮತ್ತು ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸುತ್ತದೆ. 1966ರಲ್ಲಿ ಮದುರೈನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಭೆಯೊಂದ ರಲ್ಲಿ ನಡೆದ ಅನೌಪಚಾರಿಕ ಸಂಭಾಷಣೆಯ ವೇಳೆ ಗುರೂಜಿ, “ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ದೊರಕಿತು?" ಎಂದು ಪ್ರಶ್ನಿಸಿದರು. ಅದಕ್ಕೆ ಮಹಿಳೆಯೊಬ್ಬರು, “1947ರ ಆಗಸ್ಟ್ 15ರಂದು" ಎಂದು ಉತ್ತರಿಸಿದರು.
ಗುರೂಜಿ ಥಟ್ಟನೆ ಹೀಗೊಂದು ಪ್ರಶ್ನೆ ಕೇಳಿದರು- “ನಮಗೆ 1947ರಲ್ಲಿ ಸ್ವಾತಂತ್ರ್ಯ ದೊರಕಿತು ಸರಿ. ಆದರೆ ನಾವು ಯಾವಾಗ ಸ್ವಾತಂತ್ರ್ಯವನ್ನು ಕಳೆದುಕೊಂಡೆವು ಮತ್ತು ಏಕೆ?". ಇದಕ್ಕೆ ಉತ್ತರಿಸಲು ಯಾರಿಗೂ ಧೈರ್ಯಬರದೆ ಪರಸ್ಪರ ಮುಖ ನೋಡಿಕೊಂಡರು. ಗುರೂಜಿ ಮಾತು ಮುಂದುವರಿಸಿ, “ಇದುವೇ ಆರೆಸ್ಸೆಸ್‌ನ ಸ್ಥಾಪಕ ಪರಮಪೂಜ್ಯ ಡಾ.ಕೇಶವ ಬಲಿರಾಮ್ ಹೆಡ್ಗೆವಾರರನ್ನು ಕಾಡಿದ ಪ್ರಶ್ನೆಯಾಗಿತ್ತು.
ಇದನ್ನೂ ಓದಿ: Ban on RSS activities: ಆರ್‌ಎಸ್ಎಸ್‌ಗೆ ಅಂಕುಶ; ತಮಿಳುನಾಡು ಮಾದರಿ ಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ನಾವು ಸ್ವಾತಂತ್ರ್ಯವನ್ನು ಏಕೆ ಕಳೆದು ಕೊಂಡೆವು? ಒಂದು ಪ್ರಭಾವಶಾಲಿ, ವಿಶಾಲ ನಾಗರಿಕತೆಯು ಮೊದಲಿಗೆ ಮೊಘಲರ, ನಂತರ ಬ್ರಿಟಿಷರ ಅಧೀನವಾಗಿದ್ದು ಏಕೆ?". ಡಾ.ಹೆಡ್ಗೆವಾರರು ಈ ಪ್ರಶ್ನೆಗಳ ಬಗ್ಗೆ ಹಗಲು - ರಾತ್ರಿ ಆಲೋಚಿಸುತ್ತಿದ್ದರು. ಅಂತಿಮವಾಗಿ, ಭಾರತವು ದಾಸ್ಯಕ್ಕೆ ಒಳಗಾಗಲು ಈ ೩ ಪ್ರಮುಖ ಕಾರಣಗಳಿವೆ ಎಂಬುದು ಅವರಿಗೆ ಸ್ಪಷ್ಟವಾಗಿ ಅರಿವಾಯಿತು:
೧) ಹಿಂದೂಗಳ ಒಳಗಿನ ಒಡಕು
೨) ನಾಯಕರಲ್ಲಿಯೂ ಜನಸಾಮಾನ್ಯರಲ್ಲಿಯೂ ರಾಷ್ಟ್ರಚರಿತ್ರೆಯ ಅಭಾವ
೩) ಹಿಂದೂಕುಶ್ ಪರ್ವತಗಳಿಂದ ಮೊದಲ್ಗೊಂಡು ಹಿಂದೂ ಮಹಾಸಾಗರದವರೆಗೆ ವ್ಯಾಪಿಸಿದ್ದ ಪ್ರದೇಶದಲ್ಲಿ ‘ಏಕರಾಷ್ಟ್ರ’ ಎಂಬ ಭಾವನೆಯ ಕೊರತೆ. ಈ ಎಲ್ಲ ಸಮಸ್ಯೆಗಳಿಗಿರುವ ಏಕೈಕ ಪರಿಹಾರವೆಂದರೆ, ಹಿಂದೂಗಳನ್ನು ಏಕೀಕರಿಸುವುದು, ಅವರಲ್ಲಿ ರಾಷ್ಟ್ರಚರಿತ್ರೆಯನ್ನು ಬೆಳೆಸು ವುದು ಮತ್ತು ಸಮಾಜದೊಳಗೆ ದೇಶಭಕ್ತಿಯ ಮನೋಭಾವವನ್ನು ಬೆಸೆಯುವುದು ಎಂಬುದು ಹೆಡ್ಗೆವಾರರಿಗೆ ಸ್ಪಷ್ಟವಾಯಿತು.

ಭಾರತವು ಕಂಡ ಓರ್ವ ಮಹಾನ್ ವೇದಾಂತಿ ಮತ್ತು ದಾರ್ಶನಿಕರಾದ ಸ್ವಾಮಿ ವಿವೇಕಾನಂದರು ಕೂಡ ನಮ್ಮ ದೇಶದ ಬಗೆಗಿನ ತಮ್ಮ ಅಭಿಪ್ರಾಯದಲ್ಲಿ ಹೇಳಿದ್ದು ಇದೇ ವಿಚಾರ ಗಳನ್ನು; ಆರೆಸ್ಸೆಸ್ ಮಾಡಲು ಹೊರಟಿರುವುದೂ ಇದನ್ನೇ.
ಹೆಡ್ಗೆವಾರರು 1925ರ ವಿಜಯದಶಮಿಯ ದಿನದಂದೇ ಆರೆಸ್ಸೆಸ್ ಅನ್ನು ಪ್ರಾರಂಭಿಸಿದರು. ಶ್ರೀರಾಮನು ರಾವಣನನ್ನು ಸಂಹರಿಸಿದ್ದು ಮತ್ತು ಪಾಂಡವರ ವಿಜಯದೊಂದಿಗೆ ಕುರುಕ್ಷೇತ್ರ ಯುದ್ಧವು ಅಂತ್ಯಗೊಂಡಿದ್ದೂ ಇದೇ ದಿನದಂದು ಎಂದು ನಂಬ ಲಾಗಿದೆ. ಮಾತ್ರವಲ್ಲ, ದುಷ್ಟ ಶಕ್ತಿಗಳ ಮೇಲೆ ಸತ್ಕಾರ್ಯ ಮತ್ತು ಸಜ್ಜನಶಕ್ತಿಯು ಜಯ ಸಾಧಿಸುವ ದಿನವೇ ವಿಜಯದಶಮಿ ಎಂದೂ ಪರಿಗಣಿಸಲಾಗಿದೆ.
ಹೀಗಾಗಿ ಹೆಡ್ಗೆವಾರರು ಹಿಂದೂಗಳ ಏಕೀಕರಣದ ಪ್ರಕ್ರಿಯೆಯನ್ನು ಆರಂಭಿಸಲು ಈ ಶುಭದಿನ ವನ್ನೇ ಆಯ್ಕೆ ಮಾಡಿಕೊಂಡರು. ತಮ್ಮ ಉದ್ದೇಶವನ್ನು ಸಾಧಿಸಲು ‘ಒಂದು ಗಂಟೆಯ ಶಾಖಾ’ ಎಂಬ ವಿಶೇಷ ವಿಧಾನವನ್ನೂ ಅವರು ರೂಪಿಸಿದರು. ಇಂದು ಆರೆಸ್ಸೆಸ್ ಶತಮಾನೋತ್ಸವ ವನ್ನು ಆಚರಿಸುತ್ತಾ, ಆತ್ಮತೃಪ್ತಿ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದೆ.
ಆರೆಸ್ಸೆಸ್ ಏಕೆ ಮತ್ತು ಹೇಗೆ ಸ್ಥಾಪಿತವಾಯಿತು ಎಂಬುದನ್ನು ನಾನು ಸ್ವಲ್ಪ ದೀರ್ಘವಾಗಿಯೇ ವಿವರಿಸಿರುವೆ; ಹಿನ್ನೆಲೆಯನ್ನು ಸ್ಪಷ್ಟಪಡಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ. ತನ್ನ ಶತಮಾನದುದ್ದದ ಪಯಣದಲ್ಲಿ ಆರೆಸ್ಸೆಸ್ ಸಲ್ಲಿಸಿರುವ ಸೇವೆ ಅಮೋಘವಾದುದು; ಅದರಲ್ಲೂ ನಿರ್ದಿಷ್ಟವಾಗಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಆರೆಸ್ಸೆಸ್ ಸಲ್ಲಿಸಿದ ಸೇವೆಗಳ ಪಟ್ಟಿ ಭಾರಿಗಾತ್ರದ್ದು ಎನ್ನಬೇಕು.
1948ರ ಪಾಕಿಸ್ತಾನ ವಿರುದ್ಧದ ಯುದ್ಧದ ವೇಳೆ ವಿಮಾನಪಥವನ್ನು ಸಿದ್ಧಪಡಿಸಿದ್ದು, 1962ರ ಅಕ್ಟೋಬರ್‌ನಲ್ಲಿ ಚೀನಾ ವಿರುದ್ಧದ ಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಸಹಾಯ ಮಾಡಿದ್ದು, ಮೋರ್ವಿಯ ಪ್ರವಾಹ ಮತ್ತು ಭುಜ್‌ನ ಭೂಕಂಪನದ ವೇಳೆ ಜನರಕ್ಷಣೆ ಹಾಗೂ ಪರಿಹಾರ ಕಾರ್ಯಾ ಚರಣೆಗಳಲ್ಲಿ ತೊಡಗಿಸಿಕೊಂಡಿದ್ದು, 2005ರ ಸುನಾಮಿ ಅಪ್ಪಳಿಕೆ ಅಥವಾ ದೇಶದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡ ಬರ, 2019ರ ಕೋವಿಡ್ ದಾಳಿಯ ವೇಳೆ ತೋರಿದ ಸೇವಾಭಾವ ಹೀಗೆ ವಿವಿಧ ಸಂದರ್ಭಗಳಲ್ಲಿ ಆರೆಸ್ಸೆಸ್ ದಣಿವರಿಯದಂತೆ ದುಡಿದಿದೆ, ದೇಶದ ಮತ್ತು ಜನರ ಹಿತಾಸಕ್ತಿಯ ಸಂರಕ್ಷಣೆಗಾಗಿ ಕೆಲಸ ಮಾಡಿದೆ. ಅದರಲ್ಲೂ ನಿರ್ದಿಷ್ಟವಾಗಿ, 1962ರ ಭಾರತ - ಚೀನಾ ಯುದ್ಧದ ಸಂದರ್ಭದಲ್ಲಿ ಆರೆಸ್ಸೆಸ್ ನೀಡಿದ ಸೇವೆ ಅದೆಷ್ಟು ಮಹತ್ತರವಾಗಿತ್ತೆಂದರೆ, ಅದರಿಂದ ಪ್ರಭಾವಿತರಾದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1963 ಜನವರಿ 26ರ ಗಣರಾ ಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ಆರೆಸ್ಸೆಸ್‌ನ ಸದಸ್ಯರನ್ನು ಆಹ್ವಾನಿಸಿದರು.
ಆರೆಸ್ಸೆಸ್‌ನಿಂದ ಪ್ರೇರಿತಗೊಂಡ ಸಾಕಷ್ಟು ಸಂಸ್ಥೆಗಳು ಹತ್ತು ಹಲವು ಸೇವಾಯೋಜನೆಗಳನ್ನು ಕೈಗೊಂಡಿವೆ. ಏಕಲ್ ವಿದ್ಯಾಲಯ (ಏಕೋಪಾಧ್ಯಾಯ ಶಾಲೆ), ವನವಾಸಿ ಕಲ್ಯಾಣಾಶ್ರಮ (ವನ ವಾಸಿ ಕೇಂದ್ರಿತ), ಭಾರತೀಯ ಮಜ್ದೂರ್ ಸಂಘ್ (ಕಾರ್ಮಿಕ ಕೇಂದ್ರಿತ), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್-ಎಬಿವಿಪಿ (ವಿದ್ಯಾರ್ಥಿ ಕೇಂದ್ರಿತ), ಹಿಂದೂ ಸೇವಾ ಪ್ರತಿಷ್ಠಾನ (ಬಹುಮುಖಿ ಸೇವಾಚಟುವಟಿಕೆ ಸಂಬಂಧಿತ) ಹೀಗೆ ಅನೇಕ ಉದಾಹರಣೆಗಳನ್ನು ಈ ನಿಟ್ಟಿನಲ್ಲಿ ನೀಡಬಹುದು.
ರಾಷ್ಟ್ರವಿರೋಧಿ ಭಯೋತ್ಪಾದಕರ ವಿರುದ್ಧ ಆರೆಸ್ಸೆಸ್ ಹೋರಾಟ ನಡೆಸಿರುವುದುಂಟು, ಅನೇಕ ಸ್ವಯಂಸೇವಕರು ತಮ್ಮ ಪ್ರಾಣವನ್ನೇ ಅರ್ಪಿಸಿರುವುದುಂಟು. 1986ರಲ್ಲಿ, ಪಂಜಾಬಿನ ಮೋಘಾ ಪ್ರದೇಶದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಆರೆಸ್ಸೆಸ್‌ನ 18 ಮಂದಿ ಸ್ವಯಂ ಸೇವಕರನ್ನು ಗುಂಡಿಕ್ಕಿ ಕೊಂದರು. ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ‘ಸಿಖ್-ವಿರೋಧಿ’ ಗಲಭೆಗಳು ನಡೆದಾಗ, ಸಾವಿರಾರು ಸಿಖ್ ಬಂಧುಗಳನ್ನು ರಕ್ಷಿಸುವ ಧೈರ್ಯಶಾಲಿ ಕೆಲಸದಲ್ಲಿ ತೊಡಗಿಸಿಕೊಂಡಿತು ಆರೆಸ್ಸೆಸ್.
ಮಹಾತ್ಮ ಗಾಂಧಿಯವರ ಹತ್ಯೆ ಅಥವಾ ಯಾವುದೇ ಗಲಭೆಗಳ ಸಂಬಂಧವಾಗಿ, ಯಾವುದೇ ತನಿಖಾ ಆಯೋಗವು ಆರೆಸ್ಸೆಸ್ ವಿರುದ್ಧ ಯಾವುದೇ ಆರೋಪವನ್ನು ಮಾಡಿಲ್ಲ. ಆರೆಸ್ಸೆಸ್ ಮಾತ್ರ ಪ್ರತಿದಿನ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಮೊಳಗಿಸುತ್ತದೆ.
‘ನನ್ನ ಭಾರತ ಮಾತೆಗೆ ಜಯವಾಗಲಿ, ಆಕೆಗೆ ನಮಸ್ಕಾರ’ ಎಂಬ ಭಾವವು ಕೆನೆಗಟ್ಟಿರುವ ಈ ಘೋಷಣೆಯು ‘ವಿಭಜಕ’ ಆಶಯವನ್ನು ಹೊಂದಿದೆಯೇ? ಕಾಂಗ್ರೆಸ್ ನಾಯಕರಿಗೆ ಹಾಗೆ ತೋರುತ್ತ ದಷ್ಟೇ! ಇದು ಕಾಂಗ್ರೆಸ್ಸಿಗರ ಅಸಹಜ ಮತ್ತು ನಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸುತ್ತದೆ.
ಸ್ವಾತಂತ್ರ್ಯದ ಮುನ್ನ ಕಾಂಗ್ರೆಸ್ ಒಂದು ಜನ ಸಾಮಾನ್ಯರ ಚಳವಳಿ ಆಗಿತ್ತು; 130 ವರ್ಷಗಳ ನಂತರ ಈ ಜನ ಸಾಮಾನ್ಯರ ಚಳವಳಿಯು ವಿದೇಶಿ ಮೂಲದ ಮಹಿಳೆಯೊಬ್ಬರ ಮುಂದೆ ತಲೆ ತಗ್ಗಿಸಿದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯ ಮೂಲಕ ಪ್ರಾರಂಭಗೊಂಡ ಆರೆಸ್ಸೆಸ್, ಇಂದು 100 ವರ್ಷಗಳ ನಂತರ ಜನಸಾಮಾನ್ಯರ ಒಂದು ಚಳವಳಿಯಾಗಿ ಬೆಳೆದು ನಿಂತಿದೆ. ಈ ಎರಡೂ ಬೆಳವಣಿಗೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರೆ, ಕಾಂಗ್ರೆಸ್‌ನ ಕುಂಠಿತ ಸ್ಥಿತಿಯ ನೋಟವೂ, ಆರೆಸ್ಸೆಸ್‌ನ ಗುಣಾತ್ಮಕ ಪ್ರಗತಿಯೂ ಮನವರಿಕೆಯಾಗುತ್ತವೆ.
ಈ ಹಿಂದೆ ಕೆಲವು ಸರಕಾರಗಳು ಆರೆಸ್ಸೆಸ್ ಅನ್ನು ನಿಷೇಧಿಸಿ ಅದರ ಪರಿಣಾಮವನ್ನು ಚೆನ್ನಾಗಿ ಅನುಭವಿಸಿವೆ. ಆರೆಸ್ಸೆಸ್ ಅನ್ನು ನಿಷೇಧ ಮಾಡುತ್ತೇವೆ ಅಂದಾಗ ಲೆಲ್ಲಾ ಆರೆಸ್ಸೆಸ್ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತದೆ. ಹೀಗಾಗಿ ಯಾರಾದರೂ ನಿಷೇಧದ ಬಗ್ಗೆ ಯೋಚಿಸುವ ಮುನ್ನ, ಇತಿಹಾಸ ಕಲಿಸಿದ ಪಾಠವನ್ನು ಒಮ್ಮೆ ಅವಲೋಕಿಸುವುದು ಒಳಿತು.
(ಲೇಖಕರು ಕರ್ನಾಟಕ ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕರು)