ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಶತಮಾನ ಕಳೆದರೂ ತಗ್ಗದ ಅಮೃತಾಂಜನದ ಘಮ

ಅಂತೂ ಸುಗಂಧ ದ್ರವ್ಯಗಳಿಂದ ಆರಂಭವಾಗುವ ಜೀವನ, ಮಧ್ಯದಲ್ಲಿ ಬೇಬಿ ಪೌಡರ್‌ನಿಂದ ಶೃಂಗಾರಗೊಂಡು, ಅಮೃತಾಂಜನದಲ್ಲಿ ಮುಕ್ತಾಯವನ್ನು ಕಾಣುತ್ತದೆ ಎನ್ನಬಹುದು. ಆಗೆ ಮನೆ ಎಂದ ಮೇಲೆ ಅಮೃತಾಂಜನ, ಸುಟ್ಟಗಾಯಕ್ಕೆ ಹಚ್ಚುವ ಬರ್ನಾಲ ಮಲಾಮು ಇರಲೇಬೇಕು. ಇವಷ್ಟಿದ್ದರೆ, ಆ ಮನೆಗೆ ಯಾವ ವೈದ್ಯರ ಅಗತ್ಯವೂ ಇರುತ್ತಿರಲಿಲ್ಲ. ಪ್ರತಿ ಮನೆಯಲ್ಲಿ ಅದರಲ್ಲೂ ಹಳ್ಳಿಯ ಮನೆಗಳಲ್ಲಿ ಔಷಧಿ ಇಡುವುದಕ್ಕಾಗಿಯೇ ಒಂದು ಸಣ್ಣ ನಿರ್ದಿಷ್ಟ ಕಪಾಟು ಇರುತ್ತಿತ್ತು.

ವಿದ್ಯಮಾನ

vinayakvbhat@autoaxle.com

ಮದುವೆಯಾದ ಹೊಸತರಲ್ಲಿ ಮಲಗುವ ಕೋಣೆ ಸುಗಂಧ ದ್ರವ್ಯಗಳಿಂದ ಸುವಾಸಿತವಾಗಿ ಆಹ್ಲಾದಕರವಾಗಿರುತ್ತದೆ, ಒಂದೆರಡು ವರ್ಷಗಳು ಕಳೆದ ಮೇಲೆ, ಬೇಬಿ ಪೌಡರ್ ಮತ್ತು ಶಿಶುತೈಲ ಗಳ ಸುವಾಸನೆಯಿಂದ ಘಮ್ಮೆನ್ನುತ್ತದೆ. ಐವತ್ತು ದಾಟುತ್ತಿದ್ದಂತೆ, ಅಮೃತಾಂಜನ ಮಲಾಮಿನ ಘಮ, ಪ್ಯಾರಾಸಿಟಮೋಲ್ ಮುಂತಾದ ಗುಳಿಗೆಗಳಿಂದ, ಮಲಗುವ ಕೋಣೆ ಬೇರೆಯದೇ ಆಯಾಮವನ್ನು ಪಡೆದುಬಿಡುತ್ತದೆ.

ಅಂತೂ ಸುಗಂಧ ದ್ರವ್ಯಗಳಿಂದ ಆರಂಭವಾಗುವ ಜೀವನ, ಮಧ್ಯದಲ್ಲಿ ಬೇಬಿ ಪೌಡರ್‌ನಿಂದ ಶೃಂಗಾರಗೊಂಡು, ಅಮೃತಾಂಜನದಲ್ಲಿ ಮುಕ್ತಾಯವನ್ನು ಕಾಣುತ್ತದೆ ಎನ್ನಬಹುದು. ಆಗೆ ಮನೆ ಎಂದ ಮೇಲೆ ಅಮೃತಾಂಜನ, ಸುಟ್ಟಗಾಯಕ್ಕೆ ಹಚ್ಚುವ ಬರ್ನಾಲ ಮಲಾಮು ಇರಲೇಬೇಕು. ಇವಷ್ಟಿದ್ದರೆ, ಆ ಮನೆಗೆ ಯಾವ ವೈದ್ಯರ ಅಗತ್ಯವೂ ಇರುತ್ತಿರಲಿಲ್ಲ. ಪ್ರತಿ ಮನೆಯಲ್ಲಿ ಅದರಲ್ಲೂ ಹಳ್ಳಿಯ ಮನೆಗಳಲ್ಲಿ ಔಷಧಿ ಇಡುವುದಕ್ಕಾಗಿಯೇ ಒಂದು ಸಣ್ಣ ನಿರ್ದಿಷ್ಟ ಕಪಾಟು ಇರುತ್ತಿತ್ತು.

ಈಗೇನೋ ತಲೆನೋವು ಅಂದ್ರೆ ಇಂಗ್ಲಿಷ್ ಮಾತ್ರೆಗಳು, ಬೇರೆ ಬೇರೆ ಬಾಮಗಳು ಎ ಬಂದಿವೆ. ಆದ್ರೆ, ಅದೊಂದು ಕಾಲ ಇತ್ತು. ಯಾರಿಗಾದ್ರೂ ತಲೆನೋವು ಬಂದ್ರೆ ಅಮೃತಾಂಜನ ಹಚ್ಕೊಂಡರೆ ಸಾಕಾಗುತ್ತಿತ್ತು. ಯಾರಾದ್ರೂ ಸುಮ್ಮನೆ ತಲೆ ತಿನ್ನುವವರಿಗೆ ‘ಅಮೃತಾಂಜನ’ ಅಥವಾ ‘ಸಾರಿಡಾನ್’ ಅನ್ನೋ ಅಡ್ಡ ಹೆಸರೇ ಬಂದುಬಿಡ್ತಿತ್ತು.

ಅಮೃತಾಂಜನ ನೋವು ನಿವಾರಕ ಮಲಾಮು ಎನ್ನುವಷ್ಟರಮಟ್ಟಿಗೆ ದೇಶಾದ್ಯಂತ ಜನರ ನೆಚ್ಚಿನ ಔಷಧಿಯಾಗಿತ್ತು. ಈಗಲೂ ಹೌದು ಎನ್ನಿ. ಇಂದಿನ ಕಾಲದಲ್ಲೂ ಅಮೃತಾಂಜನಕ್ಕೆ ಸಾಟಿ ಯಾಗಬಲ್ಲ ಸರ್ವೋಪಯೋಗಿ ಮಲಾಮು ಇನ್ನೊಂದಿಲ್ಲ ಎನ್ನಬಹುದು. ಸರ್ವರೋಗಕ್ಕೂ ಒಂದೇ ಮದ್ದು ಎಂಬಂತಿದ್ದ ಅಮೃತಾಂಜನ, ತನ್ನ ಗುಣಪೂರ್ಣತೆಯಿಂದ ಇಂದಿಗೂ ತನ್ನ ಅಸ್ತಿತ್ವವನ್ನು ಹಾಗೂ ಪ್ರಸ್ತುತತೆಯನ್ನು ಭಾರತದ ಮನೆಮನೆಗಳಲ್ಲಿ ಉಳಿಸಿಕೊಂಡಿದೆ ಎನ್ನಬಹುದು.

ಇದನ್ನೂ ಓದಿ: Vinayak V Bhat Column: ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ತಲೆನೋವು, ಕೆಮ್ಮು, ಶೀತ ಬಂದ್ರೆ ಗಂಟಲು, ಎದೆ ಹಾಗೂ ಹಣೆಯ ಮೇಲೆ ಅಮೃತಾಂಜನವನ್ನು ನವಿರಾಗಿ ಸವರಿ, ಲೈಟಾಗಿ ಮಸಾಜ್ ಮಾಡಿದ್ರೆ, ಎಲ್ಲಾ ನೋವುಗಳೂ ಥಟ್ ಅಂತ ಮಾಯ. ಇನ್ನು, ಕುದಿಯುವ ನೀರಿಗೆ ಅಮೃತಾಂಜನವನ್ನು ಹಾಕಿ ಉಗಿ ತೆಗೆದುಕೊಳ್ಳುವುದು, ಹಲ್ಲು ನೋವು ಹಾಗು ಕಿವಿ ನೋವು ಬಂದಾಗಲೂ ಹತ್ತಿಯಲ್ಲಿ ಹಾಕಿ ಬಳಸುವುದೂ ಸೇರಿದಂತೆ, ಈ ಮುಲಾಮನ್ನು ಜನ ತಮಗೆ ಕಂಡ ಹಾಗೆ ದುರ್ಬಳಕೆ ಮಾಡಿರುವುದೂ ಇದೆ.

ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಈ ಜಾದೂಗಾರಿ ನೋವು ನಿವಾರಕ ಮಲಾಮಿನ ಖ್ಯಾತಿ ಗೇನೂ ಕಡಿಮೆಯಿಲ್ಲ. ಚೆಸ್ ದಂತಕಥೆ ಬಾಬಿ ಫಿಷರ್, ‘ನಮ್ಮಲ್ಲಿ ಈ ಅಮೃತಾಂಜನ ಸಿಗುತ್ತಿಲ್ಲ, ನೀವು ಭಾರತದಿಂದ ಬರುವಾಗ ನನಗೆ ತಂದುಕೊಡಿ’ ಎಂದು ವಿಶ್ವನಾಥನ್ ಆನಂದ್ ಅವರಿಂದ ಅಮೃತಾಂಜನ ನೋವು ನಿವಾರಕ ಮುಲಾಮನ್ನು ತರಿಸಿಕೊಂಡಿದ್ದರಂತೆ.

ಹಾಗಾದರೆ ಅಮೃತಾಂಜನ ಎನ್ನುವ ಈ ಬಹೂಪಯೋಗಿ ಮಾಂತ್ರಿಕ ನೋವು ನಿವಾರಕ ಮುಲಾಮಿನ ತಂದೆ-ತಾಯಿ ಯಾರು? ಇದರ ಹುಟ್ಟಿನ ಹಿಂದಿನ ಕಥೆ ಏನು? ಬೆಳೆದದ್ದು ಮತ್ತು ಜನಮಾನಸದಲ್ಲಿ ಇನ್ನೂ ಉಳಿದಿದ್ದು ಹೇಗೆ ಮುಂತಾದ ಎಲ್ಲಾ ಕುತೂಹಲಗಳಿಗೆ ಈ ಅಂಕಣ ಬರಹ ಉತ್ತರವನ್ನು ನೀಡಲಿದೆ.

ಸೆಕೆಂಡ್‌ಗಳಲ್ಲಿ ತಲೆನೋವು ಮಾಯ ಮಾಡೋ ಅಮೃತಾಂಜನದ ಮೂಲ ನಮ್ಮ ಭಾರತವೇ. ಭಾರತದ ಸ್ಥಾಪನೆಯಾದ ಸಂಸ್ಥೆ ಈ ಉತ್ಪನ್ನವನ್ನು ತಯಾರಿಸುತ್ತದೆ. ಈ ಸಂಸ್ಥೆಯನ್ನು ಸ್ಥಾಪಿಸಿದವರು ನಮ್ಮ ದಕ್ಷಿಣ ಭಾರತದವರು ಅನ್ನೋದು ಇನ್ನೊಂದು ಹೆಮ್ಮೆ. ಇಂದಿನ ಆಂಧ್ರ ಪ್ರದೇಶ ಮೂಲದವರಾದ ಕಾಸಿನಾಥುನಿ ನಾಗೇಶ್ವರ ರಾವ್ ಪಂತುಲು ಅಮೃತಾಂಜನ ಸಂಸ್ಥೆಯ ಸಂಸ್ಥಾಪಕರು.

ಹಾಗಂತ, ಇವರು ಕೇವಲ ಅಮೃತಾಂಜನ ಸಂಸ್ಥೆಯನ್ನು ಹುಟ್ಟುಹಾಕಿ ಫೇಮಸ್ ಆದವರಲ್ಲ. ಈ ಆಸಾಮಿ ಸ್ವಾತಂತ್ರ್ಯ ಹೋರಾಟಗಾರರೂ ಹೌದು, ಪತ್ರಕರ್ತರಾಗಿಯೂ ಸಮಾಜಸೇವಕರಾಗಿಯೂ ದೇಶಕ್ಕೆ ತಮ್ಮ ಸೇವೆಯನ್ನು ನೀಡಿದ್ದಾರೆ. ಭಾರತಕ್ಕೆ ತನ್ನ ನೆಚ್ಚಿನ ನೋವು ನಿವಾರಕ ಮುಲಾಮವನ್ನು ನೀಡಿದ ಈ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಸ್ವಲ್ಪ ತಿಳಿಯೋಣ.

ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಕೃಷ್ಣಾ ಜಿಲ್ಲೆಯ ಪೆಸರಮಿಲ್ಲಿ ಅನ್ನೋ ಗ್ರಾಮದಲ್ಲಿ 1867ರಲ್ಲಿ ಜನಿಸಿದ ನಾಗೇಶ್ವರ ರಾವ್, ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು, ನಂತರದ ಶಿಕ್ಷಣವನ್ನ ಮಚಿಲಿಪಟ್ನಂನಲ್ಲಿ ಪಡೆದರು. ಅವರು 1891ರಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಮುಗಿಸುತ್ತಾರೆ. ಮದ್ರಾಸ್‌ನಲ್ಲಿರುವಾಗಲೇ ಸ್ವಂತ ಬ್ಯುಸಿನೆಸ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ನಾಗೇಶ್ವರ್ ರಾವ್, ಅ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದರು. ಔಷಧಿ ಉದ್ಯಮದಲ್ಲಿ ಕೆಲಸಮಯ ಕೆಲಸ ನಿರ್ವಹಿಸಿದ ನಂತರ, ದೂರದ ಕಲ್ಕತ್ತಾಗೆ ಹೋಗಿ ಅಲ್ಲಿ ಔಷಧಿ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ.

ನಂತರ ಯುರೋಪಿಯನ್ ಸಂಸ್ಥೆಯಾದ ವಿಲಿಯಂ ಆಂಡ್ ಕಂಪನಿಯಲ್ಲಿ ಕೆಲಸ ಮಾಡಲು ಮುಂಬೈಗೆ ಶಿಫ್ಟ್‌ ಆಗ್ತಾರೆ. ಆದರೆ, ತಾವೇ ಸ್ವಂತವಾಗಿ ಏನಾದ್ರೂ ಮಾಡಬೇಕು ಅನ್ನೋ ತುಡಿತ ಅವರನ್ನ ಕಾಡುತ್ತಲೇ ಇರುತ್ತೆ. ಬಹುಶಃ ಇವರ ರಾಷ್ಟ್ರೀಯತಾವಾದಿ ನಂಬಿಕೆಗಳು ಅದಕ್ಕೆ ಕಾರಣ ವಾಗಿರಬಹುದು.

ಹೀಗೆ 1893ರಲ್ಲಿ ಹುಟ್ಟಿದ್ದೇ ‘ಅಮೃತಾಂಜನ ಲಿಮಿಟೆಡ್’ ಎನ್ನುವ ಸಂಸ್ಥೆ. ಇದರ ಮೂಲಕವೇ ಅವರು ಅಮೃತಾಂಜನ ಪೇನ್ ಬಾಮ್ ಅನ್ನು ಸಂಶೋಧಿಸಿ, ಮಾರುಕಟ್ಟೆಗೂ ತರ್ತಾರೆ. ಕಲ್ಕತ್ತಾದ ಔಷಧಿ ಉದ್ಯಮದಲ್ಲಿ ಕೆಲಸ ಮಾಡಿ ಪಡೆದ ಅನುಭವವನ್ನು ಬಳಸಿಕೊಂಡು, ರಾವ್ ಅವರು ಸುವಾಸನಾಯುಕ್ತ, ತಿಳಿ ಹಳದಿ ಬಣ್ಣದ ನೋವು ನಿವಾರಕ ಮುಲಾಮುವನ್ನು, ಪುದಿನಾ, ಕರ್ಪೂರ ಹಾಗೂ ಗಂಧಾಪುರ ಪತ್ರ ತೈಲ ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ರೂಪಿಸಿದರು.

1893ರಲ್ಲಿ ಮುಂಬೈನಲ್ಲಿ ದೊಡ್ಡ ಪ್ರಮಾಣದಲ್ಲಿ ಅದನ್ನು ತಯಾರಿಸಲು ಕಂಪನಿಯನ್ನು ಸ್ಥಾಪಿಸಿದರು. ಪ್ರತಿಯೊಂದು ವ್ಯವಹಾರದ ಆರಂಭಿಕ ಹಂತಗಳು ಹೂವಿನ ಹಾಸಿಗೆಯಾಗಿರುವು ದಿಲ್ಲ, ತುಂಬಾ ಕಠಿಣವಾಗಿಯೇ ಇರುತ್ತವೆ. ಹಾಗೆ, ಪ್ರಾರಂಭದಲ್ಲಿ ಕಷ್ಟಪಟ್ಟರೂ, ನಿಧಾನವಾಗಿ ನಾಗೇಶ್ವರ ರಾವ್ ಅವರ ಮುಲಾಮಿನ ವ್ಯವಹಾರವು ಚೇತರಿಸಿಕೊಂಡಿತು.

ಆರಂಭಿಕ ದಿನಗಳಲ್ಲಿ ಈ ಮುಲಾಮಿನ ಬೆಲೆ ಕೇವಲ ಹತ್ತು ಆಣೆಗಳಾಗಿತ್ತು. (ಹದಿನಾರು ಆಣೆಗಳಿಗೆ ಇಂದಿನ ಒಂದು ರೂಪಾಯಿ ಆಗುತ್ತದೆ). ಕೇವಲ ಹತ್ತು ಆಣೆಯ ಈ ಅಮೃತಾಂಜನ್, ಮುಂದೆ ಆಂಧ್ರದ ಉದ್ಯಮಿ ಯನ್ನು ಸಾವಿರಾರು ಕೋಟಿಗೆ ಅಧಿಪತಿಯನ್ನಾಗಿ ಮಾಡಿತು. ತಮ್ಮ ಪ್ರಾಡಕ್ಟ್ ಜನರಿಗೆ ತಲುಪಬೇಕು ಅನ್ನೋ ಉದ್ದೇಶ‌ದಿಂದ, ಮದ್ರಾಸಿನಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿ ಗಳಲ್ಲಿ ಸೇರುವ ಜನರಿಗೆ ನಾಗೇಶ್ವರ ರಾವ್ ಅಮೃತಾಂಜನವನ್ನು ಪುಕ್ಕಟೆಯಾಗಿ ಹಂಚುತ್ತಿದ್ದರಂತೆ.

ಜನರಿಗೆ ಪರಿಚಯಿಸಲೋಸುಗವಾಗಿ ಅಂದು ಫ್ರೀಯಾಗಿ ಹಂಚಿದಲ್ಲಿಂದ, ಅಮೃತಾಂಜನ ಪೇನ್ ಬಾಮ್ ಉತ್ಪಾದಿಸುವ ಸಂಸ್ಥೆಯ ಇವತ್ತಿನ ಒಟ್ಟು ಮೌಲ್ಯ ಎರಡುಸಾವಿರ ಕೋಟಿಯವರೆಗೆ ತಲುಪಿದೆ. ಹಾಗಾಗಿ, ನಾಗೇಶ್ವರ ರಾವ್ ಅವರನ್ನು, ‘ಫ್ರೀಯಾಗಿ ಹಂಚಿ, ಗ್ರಾಹಕರ ಮನೆಮನೆಗಳನ್ನು ತಲುಪುವ ಮಾರ್ಕೆಟಿಂಗ್ ಕೌಶಲದ ಪಿತಾಮಹ’ ಎನ್ನಬಹುದೇನೋ. ಪತ್ರಿಕೋದ್ಯಮದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗೇಶ್ವರ ರಾವ್, ‘ಆಂಧ್ರ ಪತ್ರಿಕಾ’ ಅನ್ನೋ ತೆಲುಗು ವಾರಪತ್ರಿಕೆ ಯನ್ನ ಬಾಂಬೆಯ 1909ರಲ್ಲಿ ಸ್ಥಾಪಿಸುತ್ತಾರೆ.

ಇದು ಹಂತ ಹಂತವಾಗಿ ಬೆಳೆದು ದಿನಪತ್ರಿಕೆಯಾಗಿ ರೂಪುಗೊಳ್ಳುತ್ತದೆ. ಅಮೃತಾಂಜನ ಲಿಮಿಟೆಡ್ ಸೇರಿದಂತೆ, ತಮ್ಮ ಎಲ್ಲಾ ವ್ಯವಹಾರಗಳನ್ನು 1914ರಲ್ಲಿ ನಾಗೇಶ್ವರ ರಾವ್ ಮದ್ರಾಸ್‌ಗೆ ವರ್ಗಾಯಿಸುತ್ತಾರೆ. ಸ್ವಾತಂತ್ರ ಹೋರಾಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗೇಶ್ವರ ರಾವ್, ಪ್ರಖರ ಗಾಂಧಿವಾದಿಯಾಗಿದ್ದವರು. ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಸೇರಿದಂತೆ, ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದವರು.

ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕ್ರಮಗಳಿಗೂ ಆರ್ಥಿಕ ನೆರವನ್ನ ನಾಗೇಶ್ವರ ರಾವ್ ನೀಡುತ್ತಿದ್ದರು. ಹತ್ತು ವರ್ಷಗಳ ಕಾಲ ರಾವ್ ಅವರು ಆಂಧ್ರ ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ತೆಲುಗು ನವೋದಯ ಚಳವಳಿಯ ಪಿತಾಮಹ, ಕಂದುಕುರಿ ವೀರೇಶಲಿಂಗಂ ಪಂತುಲು ಅವರಿಂದ ಪ್ರಭಾವಿತರಾಗಿದ್ದ ರಾವ್, ತಮ್ಮ ಭಾಷಿಕರ ಪರವಾಗಿ ಅನೇಕ ಹೋರಾಟ ಗಳಲ್ಲಿ ಭಾಗವಹಿಸಿದ್ದರು. ಹೀಗೆ, ತಮ್ಮ ಔಷಧಿಯ ವ್ಯವಹಾರವು ಪ್ರವರ್ಧಮಾನಕ್ಕೆ ಬರುತ್ತಿರುವಾಗ, ರಾವ್ ಅವರು ತಮ್ಮ ವ್ಯಾಪ್ತಿಯನ್ನು ಸಾಮಾಜಿಕ ಸುಧಾರಣೆಗಳನ್ನು ಕೈಗೊಳ್ಳಲು ಬೆಳಸಿಕೊಂಡರು.

ತೆಲುಗು ಜನರಿಗೆ ಪ್ರತ್ಯೇಕ ರಾಜ್ಯದ ಅಗತ್ಯವನ್ನು ಅವರು ದೃಢವಾಗಿ ನಂಬಿದ್ದರು. ಹೀಗಾಗಿ, ಅಮೃತಾಂಜನ್ ಲಿಮಿಟೆಡ್ ನೆಲೆಗೊಂಡಿದ್ದ ಮುಂಬೈನಲ್ಲಿ ತೆಲುಗು ಮಾತನಾಡುವ ಜನರನ್ನು ಸಂಘಟಿಸಲು ಪ್ರಾರಂಭಿಸಿದರು. ರಾವ್ ಅವರು ಆಂಧ್ರಪ್ರದೇಶ ರಾಜ್ಯದ ರಚನೆಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ, ಆ ಕಾಲದ ಆಂಧ್ರದ ಜನರು, ಅವರನ್ನು ‘ದೇಶಬಂಧು’ ಅಂತ ಕರೆಯುತ್ತಿದ್ದರು.

ಜತೆಗೆ, 1935ರಲ್ಲಿ ಆಂಧ್ರ ವಿಶ್ವವಿದ್ಯಾಲಯವು ‘ಕಲಾಪ್ರಪೂರ್ಣ’ ಅನ್ನೋ ಗೌರವವನ್ನ ನೀಡಿ ಸನ್ಮಾನಿಸಿದೆ. ನಾಗೇಶ್ವರ ರಾವ್ ಅವರ ಭಾವಚಿತ್ರವಿರುವ ಅಂಚೆ ಸ್ಟಾಂಪ್‌ಗಳನ್ನ ಮುದ್ರಿಸಿ, ಭಾರತ ಸರಕಾರವೂ ಇವರನ್ನು ಗೌರವಿಸಿದೆ. 2007ರ ನವೆಂಬರ್ 13ರಿಂದ ಅಮೃತಾಂಜನ ಲಿಮಿಟೆಡ್ ಸಂಸ್ಥೆ ಅಮೃತಾಂಜನ ಹೆಲ್ತ ಕೇರ್ ಲಿಮಿಟೆಡ್ ಆಗಿ ಬದಲಾಗಿದ್ದು, ಇದನ್ನ ನಾಗೇಶ್ವರ ರಾವ್ ಅವರ ಮೊಮ್ಮಗ ಎಸ್.ಶಂಭು ಪ್ರಸಾದ್ ಅವರು, ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ಅಮೃತಾಂಜನ ಉತ್ಪಾದಿಸುವ ಸಂಸ್ಥೆ, ಇಂದು ಕೇವಲ ಪೇನ್ ಬಾಮಗೆ ಸೀಮಿತವಾಗಿ ಉಳಿದಿಲ್ಲ. 2002ರಲ್ಲಿ ಡಯಾಬಿಟಿಕ್ ಔಷಧಿಯಾದ ‘ಡಯಾಕ್ಯೂರ್’ ಅನ್ನು ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ. 2004ರಲ್ಲಿ ‘ಅಫೇರ್’ ಹೆಸರಿನಹರ್ಬಲ್ ಮೌತ್ ಫ್ರೆಶ್ನರ್ ಅನ್ನು ಕೂಡ ಪರಿಚಯಿಸಿದೆ.

ಇಷ್ಟೇ ಅಲ್ಲದೆ, 2001ರಲ್ಲಿ ಸಂಸ್ಥೆ ಸಾಫ್ಟ್‌ ವೇರ್ ದುನಿಯಾಕ್ಕೂ ಕಾಲಿಟಿದ್ದು, ಅಮೃತಾಂಜನ ಇನೋಟೆಕ್ ಮೂಲಕ ಚೆನ್ನೈನಲ್ಲಿ ಕಾಲ್ ಸೆಂಟರ್‌ಗಳನ್ನೂ ನಡೆಸುತ್ತಿದೆ. 2011ರಲ್ಲಿ ಫುಡ್ ಸೆಕ್ಟರ್‌ನಲ್ಲೂ ತನ್ನ ಛಾಪು ಒತ್ತಲು ಮುಂದಾದ ಅಮೃತಾಂಜನ ಸಂಸ್ಥೆ, ಚೆನ್ನೈ ಮೂಲದ ಶಿವಾ ಸಾಫ್ಟ್‌ ಡ್ರಿಂಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನ 26 ಕೋಟಿ ರುಪಾಯಿಗೆ‌ ಖರೀದಿಸಿದೆ.

ಭಾರತದ ನೋವುನಿವಾರಕ ಮುಲಾಮಿನ ಮಾರುಕಟ್ಟೆಯಲ್ಲಿ ಅನೇಕ ಬಹುರಾಷ್ಟ್ರೀಯ ಸಂಸ್ಥೆ ಗಳು ಪ್ರವೇಶ ಮಾಡಿದರೂ, ಅಮೃತಾಂಜನವನ್ನು ಹಿಂದಿಕ್ಕಲು ಅವುಗಳಿಗೆ ಸಾಧ್ಯವಾಗಲೇ ಇಲ್ಲ. ಈ ಎಲ್ಲ ಸ್ಪರ್ಧೆಗಳ ನಡುವೆ, ಅಮೃತಾಂಜನ ಭಾರತದಲ್ಲಿ ತನ್ನ ಪಾರಮ್ಯವನ್ನು ಉಳಿಸಿಕೊಂಡಿರುವುದಲ್ಲದೇ, 2022ರಲ್ಲಿ ಅಮೃತಾಂಜನ ಹೆಲ್ತ್‌ ಕೇರ್ ಲಿಮಿಟೆಡ್, ಅಮೆರಿಕ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು, ತನ್ನ ಉತ್ಪನ್ನಗಳನ್ನು ಬೇರೆ ಬೇರೆ ದೇಶಗಳಿಗೆ ರಪ್ತು ಮಾಡುವುದರ ಮೂಲಕ, 2 ಸಾವಿರ ಕೋಟಿಯ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತಾರ ಮಾಡಲು ಹೊರಟಿದೆ.

18ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಯಾದ ಅಮೃತಾಂಜನ್ ಉತ್ಪಾದನಾ ಸಂಸ್ಥೆ, ಇಂದು ನಂಬಿಕೆ ಮತ್ತು ಪರಂಪರೆಯನ್ನು ಆನುವಂಶಿಕವಾಗಿ ಪಡೆದ, ಒಂದು ಶತಮಾನಕ್ಕೂ ಹೆಚ್ಚು ಹಳೆಯ, ಹೆಮ್ಮೆಯ ಭಾರತೀಯ ಬ್ರ್ಯಾಂಡ್ ಆಗಿ ಬೆಳೆದು ನಿಂತಿದೆ. ನೋವು ನಿವಾರಕ ಉದ್ಯಮದಲ್ಲಿ ಇರುವ ಒಂದು ಶತಮಾನಕ್ಕೂ ಹೆಚ್ಚಿನದಾದ ಅನುಭವದೊಂದಿಗೆ, ಇಂದು ಅಮೃತಾಂಜನ್ ಬಹುಕೋಟಿ ಮೌಲ್ಯದ ಸಂಘಟನೆಯಾಗಿ ಬೆಳೆದಿದೆ. ನೋವಿನ ಉಪಚಾರಗಳ ಉತ್ಪನ್ನಗಳ ಹೊರತಾಗಿ, ಕೆಮ್ಮು ಮತ್ತು ಶೀತ ಆರೈಕೆ, ಸಾಮಾನ್ಯ ಆರೋಗ್ಯ ಮತ್ತು ಗೃಹ ಆರೈಕೆ ಸೇರಿದಂತೆ ಇತರ ವಿಭಾಗಗಳನ್ನೂ ಈ ಸಂಸ್ಥೆ ಹೊಂದಿದೆ. ಈ ಸಂಸ್ಥೆಯ ಉತ್ಪನ್ನಗಳು ಗಲ್ಫ್, ಆಫ್ರಿಕನ್, ಆಗ್ನೇಯ ಏಷ್ಯಾದ ದೇಶಗಳಲ್ಲಿಯೂ ಲಭ್ಯವಿವೆ.

ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಯಶಸ್ಸು‌ ಗಳಿಸಲು ಯೋಜನೆಗಳು ಸಿದ್ಧವಾಗಿವೆ. ಆಯುರ್ವೇದ ಅಥವಾ ಪಾರಂಪರಿಕ ಪದ್ದತಿ ಆಧಾರಿತ ಪರಿಹಾರಗಳಿಂದ ತಂತ್ರಜ್ಞಾನಾಧಾರಿತ ಆಧುನಿಕ ಪರಿಹಾರಗಳವರೆಗೆ, ಇಡೀ ಕುಟುಂಬಕ್ಕೆ ಗುಣಮಟ್ಟದ ಮತ್ತು ಹೊಸ ಹೊಸ ಆರೋಗ್ಯ ರಕ್ಷಣಾ ಉತ್ಪನ್ನಗಳನ್ನು ನೀಡುತ್ತ ಸಾಗಿದೆ.

ಪ್ರತ್ಯೇಕ ಅಂಧ್ರ ರಾಜ್ಯದ ಕುರಿತಾದ ಚಳವಳಿಯಲ್ಲಿನ ನಾಗೇಶ್ವರ ರಾವ್ ಅವರ ನಿರಂತರ ಪ್ರಯತ್ನಗಳು, ಸ್ವಾತಂತ್ರ್ಯ ಹೋರಾಟದಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ರಾಷ್ಟ್ರೀಯತಾವಾದಿ ಆಲೋಚನೆಗಳ ಲೇಖನಗಳು, ಅವರಿಗೆ ಕೇವಲ ಉದ್ಯೋಗಪತಿ ಎನಿಸಿಕೊಳ್ಳುವುದಕ್ಕಿಂತ ಹೆಚ್ಚಿನದಾದ, ದೇಶೋದ್ಧಾರಕ ಎನ್ನುವ ಸ್ಥಾನವನ್ನು ತಂದುಕೊಟ್ಟವು.

ಅವರ ಸ್ವತಂತ್ರ ಭಾರತದ ಕನಸು ಮತ್ತು ಮದ್ರಾಸ್ ಪ್ರೆಸಿಡೆನ್ಸಿಯಿಂದ ಪ್ರತ್ಯೇಕವಾದ ಆಂಧ್ರ ಪ್ರದೇಶದ ಕನಸುಗಳು ನನಸಾಗುವುದಕ್ಕಿಂತ ಮೊದಲೇ, ಅಂದರೆ 1938ರಲ್ಲಿ ಅವರು ನಿಧನರಾದರು (ಆಂಧ್ರಪ್ರದೇಶ ರಾಜ್ಯವಾಗಿ ರೂಪುಗೊಂಡಿದ್ದು 1956ರಲ್ಲಿ). ಆದರೆ ‘ದೇಶಹಿತ ಮೊದಲು’ ಎನ್ನುವ ಅವರ ಆಲೋಚನೆ, ಅವರ ಪ್ರಕಾಶನ ಸಂಸ್ಥೆ (ಆಂಧ್ರ ಗ್ರಂಥಮಾಲಾ), ಅದು ರಚಿಸಿದ ಅನೇಕ ಗ್ರಂಥಾಲಯಗಳು ಮತ್ತು ಭಾರತದ ನೆಚ್ಚಿನ ನೋವು ನಿವಾರಕ ಔಷಧ ಎಂದು ಗುರುತಿಸಲಾಗುವ ಅಮೃತಾಂಜನ್ ಮುಂತಾದ ಗುಣಮಟ್ಟದ ಉತ್ಪನ್ನಗಳು, ಅವರ ಮೌಲ್ಯಯುತ ಪರಂಪರೆಯ ಗುರುತಾಗಿ ಇಂದಿಗೂ ಜೀವಂತವಾಗಿವೆ.

ಸ್ಪಷ್ಟೀಕರಣ: ಈ ಅಂಕಣ ಬರಹ, ಅಮೃತಾಂಜನ್ ಮುಲಾಮಿನ ಪ್ರಚಾರದ ಉದ್ದೇಶದಿಂದ ಬರೆದದ್ದಲ್ಲ. ಕಾರಣ, ಅಮೃತಾಂಜನ್ ಮುಲಾಮಿಗೆ ಇಂದು ಪ್ರಚಾರದ ಅಗತ್ಯವಿಲ್ಲ.

ವಿನಾಯಕ ವೆಂ ಭಟ್ಟ

View all posts by this author