Vishweshwar Bhat Column: ರಾಜನೇ ಅರಸೊತ್ತಿಗೆ ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ !
ಅಧಿಕಾರದ ವಿಷಯದಲ್ಲಿ ಎಲ್ಲರೂ ಪರಮ ಸ್ವಾರ್ಥಿಗಳೇ. ತಾವು ಅನುಭವಿಸುತ್ತಿರುವ ಅಧಿಕಾರ ವನ್ನು ಪತ್ನಿಗೋ, ಮಗನಿಗೋ ಕೊಡುವ ಸಂದರ್ಭದಲ್ಲೂ ಪೂರ್ಣ ಮನಸ್ಸಿನಿಂದ ವರ್ತಿಸಿದವರ ನಿದರ್ಶನ ಗಳು ವಿರಳ. ಹೆಂಡತಿಗೆ ಅಧಿಕಾರವನ್ನು ಹಸ್ತಾಂತರಿಸಿದಾಗಲೂ, ಅದನ್ನು ತಾವೇ ಚಲಾಯಿಸುವ ಒಂದು ತಂತ್ರದಂತೆ ಪ್ರಯೋಗಿಸಿದವರು ಚರಿತ್ರೆಯಲ್ಲಿ ಸಿಗುತ್ತಾರೆ.


ಇದೇ ಅಂತರಂಗ ಸುದ್ದಿ
vbhat@me.com
ಅಧಿಕಾರದ ಮಹಿಮೆಯೇ ಅಂಥದ್ದು. ಸಾಮಾನ್ಯವಾಗಿ ಅಧಿಕಾರವನ್ನು ಯಾರೂ ಬಿಟ್ಟು ಕೊಡು ವುದಿಲ್ಲ. ಒಮ್ಮೆ ಗಿಟ್ಟಿಸಿಕೊಂಡ ಅಧಿಕಾರವನ್ನು ಬಿಟ್ಟುಕೊಟ್ಟ ನಿದರ್ಶನ ಜಾಗತಿಕ ಇತಿಹಾಸದಲ್ಲಿ ಅಪರೂಪ. ವರ್ಷಗಳವರೆಗೆ ಅಧಿಕಾರ ನಡೆಸಿದವರು ಸಹ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತ ರಿಸುವ ಸಮಯದಲ್ಲಿ ಅದನ್ನು ತಮ್ಮಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂದು ಯೋಚಿಸಿದ್ದೇ ಹೆಚ್ಚು. 58 ವರ್ಷಗಳ ಕಾಲ ಆಳಿದ ಅಕ್ಬರ್,
52 ವರ್ಷಗಳ ಕಾಲ ಕ್ಯೂಬಾವನ್ನು ಆಳಿದ ಫಿಡೆಲ್ ಕ್ಯಾಸ್ಟ್ರೋ ಹಾಗೂ ಇತ್ತೀಚಿನ ವರ್ಷಗಳಲ್ಲಿ 24 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಜ್ಯೋತಿ ಬಸು ಸಹ ಅಧಿಕಾರವನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಯಾವ ರೀತಿ ವರ್ತಿಸಿದರು ಎಂಬುದು ಗೊತ್ತೇ ಇದೆ. ತಂದೆಯು ಮಗನಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಎಷ್ಟೊಂದು ನಿರ್ದಯವಾಗಿ, ಲಜ್ಜೆಗೇಡಿ ಯಾಗಿ ವರ್ತಿಸಿದ್ದನ್ನು ಮೊಘಲರ ಆಳ್ವಿಕೆಯಲ್ಲಿ ಜಹಾಂಗೀರ್ ಮತ್ತು ಷಹಜಹಾನ್ ಮಧ್ಯೆ ನೋಡಿದ್ದೇವೆ.
ಅಧಿಕಾರದ ವಿಷಯದಲ್ಲಿ ಎಲ್ಲರೂ ಪರಮ ಸ್ವಾರ್ಥಿಗಳೇ. ತಾವು ಅನುಭವಿಸುತ್ತಿರುವ ಅಧಿಕಾರ ವನ್ನು ಪತ್ನಿಗೋ, ಮಗನಿಗೋ ಕೊಡುವ ಸಂದರ್ಭದಲ್ಲೂ ಪೂರ್ಣ ಮನಸ್ಸಿನಿಂದ ವರ್ತಿಸಿದವರ ನಿದರ್ಶನಗಳು ವಿರಳ. ಹೆಂಡತಿಗೆ ಅಧಿಕಾರವನ್ನು ಹಸ್ತಾಂತರಿಸಿದಾಗಲೂ, ಅದನ್ನು ತಾವೇ ಚಲಾ ಯಿಸುವ ಒಂದು ತಂತ್ರದಂತೆ ಪ್ರಯೋಗಿಸಿದವರು ಚರಿತ್ರೆಯಲ್ಲಿ ಸಿಗುತ್ತಾರೆ.
ಇದನ್ನೂ ಓದಿ: Vishweshwar Bhat Column: ತುರ್ತುಸ್ಥಿತಿ ಅಲ್ಲದ ತುರ್ತುಸ್ಥಿತಿ
ಹೀಗಿರುವಾಗ, ಸಿಕ್ಕಿದ ಅಧಿಕಾರವನ್ನು ಬೇರೆಯವರಿಗೆ ನೀಡುವುದನ್ನು ಊಹಿಸಿಕೊಳ್ಳಲೂ ಸಾಧ್ಯ ವಿಲ್ಲ. ಇಡೀ ಆಟ ಕೆಟ್ಟರೂ ಪರವಾಗಿಲ್ಲ, ಅಧಿಕಾರವನ್ನು ಬೇರೆಯವರಿಗೆ ನೀಡುವ ಪ್ರಶ್ನೆಯೇ ಇಲ್ಲ. ಆದರೆ ಭೂತಾನ್ನಲ್ಲಿ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯಾದುದು ಪ್ರಪಂಚದ ಒಂದು ಅನನ್ಯ ಘಟನೆಯಾಗಿದೆ.
ಸಾಮಾನ್ಯವಾಗಿ, ಜನತಾ ಚಳವಳಿಗಳು, ಕ್ರಾಂತಿಗಳು ಅಥವಾ ಒತ್ತಡಗಳ ಮೂಲಕ ಪ್ರಜಾ ಪ್ರಭುತ್ವ ವನ್ನು ಸ್ಥಾಪಿಸಲಾಗುತ್ತದೆ; ಆದರೆ ಭೂತಾನ್ನಲ್ಲಿ ಈ ಬದಲಾವಣೆಯನ್ನು ಸ್ವತಃ ಅಂದಿನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಮುನ್ನಡೆಸಿದ್ದು ತೀರಾ ಅಪರೂಪದ ಘಟನೆಯೇ. ಅಷ್ಟಕ್ಕೂ ಭೂತಾನ್ ನಲ್ಲಿ ರಾಜಪ್ರಭುತ್ವದಿಂದ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಪರಿವರ್ತನೆ ಒಂದು ಶಾಂತಿಯುತ ಮತ್ತು ಉದ್ದೇಶಪೂರ್ವಕ ಪ್ರಕ್ರಿಯೆಯಾಗಿತ್ತು.
2005ರಲ್ಲಿ, ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು ಸ್ವಯಂಪ್ರೇರಿತವಾಗಿ ಅಽಕಾರ ವನ್ನು ತ್ಯಜಿಸಿ, ತಮ್ಮ ಮಗ ಯುವರಾಜ ಜಿಗ್ಮೆ ಖೇಸರ್ ನಮ್ಗ್ಯಾಲ್ ವಾಂಗ್ಚುಕ್ ಅವರಿಗೆ ಪಟ್ಟಾ ಭಿಷೇಕ ಮಾಡಿ, ದೇಶವನ್ನು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಪರಿವರ್ತಿಸುವುದಾಗಿ ಘೋಷಿಸಿದರು.
ಇದು ವಿಶ್ವದ ಕಂಡುಬರದ ಒಂದು ಅಸಾಧಾರಣ ನಿರ್ಧಾರವಾಗಿತ್ತು. ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು ದೇಶದ ಜನರಿಗೆ ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿದಾಗ ಸ್ವತಃ ಜನರೇ ಅದನ್ನು ವಿರೋ ಧಿಸಿದರು. “ನಮಗೆ ಅರಸೊತ್ತಿಗೆಯೇ ಇರಲಿ, ಪ್ರಜಾಪ್ರಭುತ್ವ ಬೇಡ" ಎಂದು ಹೇಳಿದರು.
ಆದರೆ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅವರು ದೇಶವ್ಯಾಪಿ ಸಂಚರಿಸಿ ಜನಾಭಿಪ್ರಾಯವನ್ನು ಸಂಗ್ರಹಿಸಿ, ತಮ್ಮ ನಿರ್ಧಾರದ ಹಿಂದಿರುವ ಉತ್ತಮ ಆಶಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ತಾವು ನಂಬಿದ್ದ “ಒಬ್ಬ ರಾಜನಾಗಿ ನಾನು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಜನರು ತಮ್ಮ ಭವಿಷ್ಯದ ಬಗ್ಗೆ ಸ್ವತಃ ನಿರ್ಧರಿಸಬಹುದು. ಜನರಿಂದ ಚುನಾಯಿತವಾದ ಸರಕಾರದಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ. ಆಗಲೇ ಸರಕಾರ ಪ್ರಜೆಗಳ ಸರಕಾರವಾಗುತ್ತದೆ" ಎಂಬ ತತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಈ ಪ್ರಕ್ರಿಯೆಯ ಭಾಗವಾಗಿ, ರಾಜರು ಹಿರಿಯ ಸರಕಾರಿ ಅಧಿಕಾರಿಗಳ ಸಮಿತಿಯನ್ನು ರಚಿಸಿ, ಸಂವಿ ಧಾನದ ಕರಡನ್ನು ಸಿದ್ಧಪಡಿಸಿದರು. ಈ ಕರಡನ್ನು ಅಂತಿಮಗೊಳಿಸುವ ಮೊದಲು, ರಾಜರು ಜನರ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಂಗ್ರಹಿಸಿದರು. ಇದು ಜನಸಾಮಾನ್ಯರಿಗೆ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಿತು. ಜನರ ಅಭಿಪ್ರಾಯಗಳನ್ನು ಒಳಗೊಂಡಂತೆ, ಜುಲೈ 18, 2008ರಂದು ಭೂತಾನ್ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಿತು.
ಇದು ಭೂತಾನ್ನ ಸರ್ವೋಚ್ಚ ಕಾನೂನಾಯಿತು. ಈ ದಿನದಿಂದ ಭೂತಾನ್ ಸಂಪೂರ್ಣ ರಾಜ ಪ್ರಭುತ್ವದಿಂದ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಅಧಿಕೃತವಾಗಿ ಬದಲಾಯಿತು. ಇದೇ ವರ್ಷದಲ್ಲಿ, ಭೂತಾನ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚುನಾವಣೆಯನ್ನು ನಡೆಸಿತು. ಎರಡು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿದವು.
ಭೂತಾನಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚುನಾವಣೆಗಳು ಮಾರ್ಚ್ 24, 2008 ರಂದು ನಡೆದವು. ಈ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯ ಪ್ರಮುಖ ಹೆಜ್ಜೆಯಾಗಿ ದ್ದವು. ಚುನಾವಣೆಯಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ಭೂತಾನ್ ಪೀಸ್ ಆಂಡ್ ಪ್ರಾಪರಿಟಿ ಪಾರ್ಟಿ (Druk Phuensum Tshogpa- DPT) ಆಗಿನ ಪ್ರಧಾನ ಮಂತ್ರಿ ಜಿಗ್ಮೆ ಥಿನ್ಲೆ ಅವರ ನಾಯಕತ್ವದಲ್ಲಿತ್ತು.
ಈ ಪಕ್ಷವು ರಾಜಪ್ರಭುತ್ವ ಮತ್ತು ಸಂಪ್ರದಾಯಗಳಿಗೆ ಹತ್ತಿರವಾಗಿತ್ತು. ಇನ್ನೊಂದು ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ (PDP). ಇದು ಸಾಂಘೇ ನಿಗ್ಡು ಅವರ ನಾಯಕತ್ವದಲ್ಲಿತ್ತು. ಡಿಪಿಟಿ ಪಕ್ಷವು ಪ್ರಚಂಡ ಬಹುಮತದೊಂದಿಗೆ ಗೆದ್ದಿತು. ಒಟ್ಟು 47 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಡಿಪಿಟಿ ಪಡೆದು ಕೊಂಡಿತು. ಪಿಡಿಪಿ ಕೇವಲ ೨ ಸ್ಥಾನಗಳನ್ನು ಗೆಲ್ಲಲು ಶಕ್ತವಾಯಿತು. ಈ ಚುನಾವಣೆಗಳು ಭೂತಾನಿ ನಲ್ಲಿ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಮತ್ತು ಯಶಸ್ವಿ ಪರಿವರ್ತನೆ ಯನ್ನು ಸೂಚಿಸುತ್ತವೆ.
ಇದು ಭೂತಾನ್ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ ದೂರದೃಷ್ಟಿಯ ಫಲಿತಾಂಶ ವಾಗಿತ್ತು. ಜನರು ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಪಡೆದರು. ಇದು ಭೂತಾನ್ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಿತು. ಈ ಚುನಾವಣೆಗಳು ಭೂತಾನಿನ ಪ್ರಜಾಪ್ರಭುತ್ವ ಪ್ರಯಾಣದ ಆರಂಭಕ್ಕೆ ಸಾಕ್ಷಿಯಾದವು. ಅಲ್ಲಿಂದೀಚೆಗೆ, ದೇಶವು ನಿಯತವಾಗಿ ಚುನಾವಣೆಗಳನ್ನು ನಡೆಸುತ್ತಿದೆ.
ಭೂತಾನಿನ ಹೆಸರುಗಳು
ಭೂತಾನಿಗೆ ಹೋದಾಗ ಅಲ್ಲಿನ ವ್ಯಕ್ತಿಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಹೇಳುವುದು ತುಸು ಕಷ್ಟ ಎಂದು ಅನಿಸಿದ್ದು ಸುಳ್ಳಲ್ಲ. ಆದರೆ ಅದರ ಹಿನ್ನೆಲೆಯನ್ನು ಅರ್ಥ ಮಾಡಿ ಕೊಂಡ ಬಳಿಕ, ಹೆಸರುಗಳನ್ನು ನೆನಪಿಟ್ಟುಕೊಳ್ಳಬಹುದು ಎಂದು ಅನಿಸಲಾರಂಭಿಸಿತು.
ಭೂತಾನಿಯರ ಹೆಸರುಗಳು ಭೂತಾನ್ನ ಸಂಸ್ಕೃತಿ, ಬೌದ್ಧ ಧರ್ಮ ಮತ್ತು ಟಿಬೆಟಿಯನ್ ಪ್ರಭಾವ ದಿಂದ ಆಳವಾಗಿ ಪ್ರಭಾವಿತವಾಗಿವೆ. ಇವುಗಳು ಆಧ್ಯಾತ್ಮಿಕ ಅರ್ಥ, ಸ್ಥಳೀಯ ಸಂಪ್ರದಾಯ ಗಳು ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ರೂಪಿತವಾಗಿವೆ. ಭೂತಾನಿನಲ್ಲಿ ಹೆಸರಿನ ಜತೆಗೆ ಕುಟುಂಬ ದ ಹೆಸರು ಇರುವುದಿಲ್ಲ. ರಾಜವಂಶದವರನ್ನು (ಉದಾಹರಣೆಗೆ, ವಾಂಗ್ಚುಕ್ ಕುಟುಂಬ) ಹೊರತು ಪಡಿಸಿ, ಕುಟುಂಬದ ಹೆಸರು ಅಥವಾ ಉಪನಾಮದ ಸಂಪ್ರದಾಯವಿಲ್ಲ. ಬದಲಿಗೆ, ಒಬ್ಬ ವ್ಯಕ್ತಿ ಯನ್ನು ಒಂದು ಅಥವಾ ಎರಡು ವೈಯಕ್ತಿಕ ಹೆಸರುಗಳಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ, ಒಗ್ಯೆನ್ ವಾಂಗ್ಡು, ದೇಚೆನ್ ವಾಂಗ್ಮೋ.
ಭೂತಾನಿನಲ್ಲಿ ಎರಡು ಹೆಸರುಗಳ ಸಂಪ್ರದಾಯವಿದೆ. 1990ರ ದಶಕದವರೆಗೆ ಭೂತಾನಿಯರಿಗೆ ಒಂದೇ ಹೆಸರಿತ್ತು (ಉದಾ., ನಿಮಾ, ಕರ್ಮ). ಆದರೆ, ಗೊಂದಲವನ್ನು ತಪ್ಪಿಸಲು, ಎರಡು ಹೆಸರುಗಳ ಸಂಪ್ರದಾಯವು ಜನಪ್ರಿಯವಾಯಿತು. ಎರಡನೇ ಹೆಸರು ಕೆಲವೊಮ್ಮೆ ಲಿಂಗವನ್ನು ಸೂಚಿಸ ಬಹುದು. ಆದರೆ ಇದು ಯಾವಾಗಲೂ ಹಾಗೆಯೇ ಇರುತ್ತದೆ ಎಂದು ಹೇಳಲಾಗದು. ಹೆಚ್ಚಿನ ಭೂತಾನಿ ಹೆಸರುಗಳು (ಉದಾ.,ಕರ್ಮ, ಸೋನಮ, ತ್ಶೆರಿಂಗ್, ಪೆಮಾ) ಲಿಂಗ-ತಟಸ್ಥವಾಗಿರುತ್ತವೆ,
ಅಂದರೆ ಗಂಡಸರು ಮತ್ತು ಹೆಂಗಸರಿಬ್ಬರಿಗೂ ಬಳಸಲ್ಪಡುತ್ತವೆ. ಕೆಲವು ಹೆಸರುಗಳು ಮಾತ್ರ (ಉದಾ., ವಾಂಗ್ ಮೋ, ಲ್ಹಾಮೋ) ಸಾಮಾನ್ಯವಾಗಿ ಮಹಿಳೆಯರಿಗೆ ಸೀಮಿತವಾಗಿವೆ.
ಭೂತಾನಿ ಹೆಸರುಗಳು ಬೌದ್ಧ ಧರ್ಮ, ಟಿಬೆಟಿಯನ್ ಸಂಸ್ಕೃತಿ ಮತ್ತು ಸ್ಥಳೀಯ ಜ್ಯೋತಿಷ್ಯದಿಂದ ಗಾಢವಾಗಿ ಪ್ರಭಾವಿತವಾಗಿವೆ. ಈ ಹೆಸರುಗಳನ್ನು ಸಾಮಾನ್ಯವಾಗಿ ಲಾಮಾ (ಬೌದ್ಧ ಗುರು), ರಿನ್ ಪೋಚೆ ಅಥವಾ ಜ್ಯೋತಿಷಿಗಳು ನೀಡುತ್ತಾರೆ, ಮಗುವಿನ ಜನ್ಮದಿನಾಂಕ ಮತ್ತು ಜಾತಕದ ಆಧಾರದ ಮೇಲೆ. ಹೆಚ್ಚಿನ ಹೆಸರುಗಳು ಬೌದ್ಧ ತತ್ವಗಳು ಅಥವಾ ಗುರುಗಳನ್ನು ಪ್ರತಿಬಿಂಬಿಸುತ್ತವೆ.
ಉದಾಹರಣೆಗೆ: ಸಾಂಗೇ (Sangay). ಇದು ಬುದ್ಧನನ್ನು ಸೂಚಿಸುತ್ತದೆ. ತ್ಶೆರಿಂಗ್ ದೀರ್ಘಾಯುಷ್ಯ ವನ್ನು ಸೂಚಿಸುತ್ತದೆ. ದೊರ್ಜಿ ವಜ್ರ (diamond) ಅಥವಾ ಒಂದು ಧಾರ್ಮಿಕ ಸಾಧನ. ಇದು ಶಕ್ತಿ ಮತ್ತು ಶಾಶ್ವತತೆಯನ್ನು ಸಂಕೇತಿಸುತ್ತದೆ. ಜಾಮ್ಯಾಂಗ್ ಎಂಬುದು ‘ಗೌರವಾನ್ವಿತ ಧ್ವನಿ’ ಅಥವಾ ಬೋಧಿಸತ್ವ ಮಂಜುಶ್ರೀಗೆ ಸಂಬಂಧಿಸಿದೆ. ಒಗ್ಯೆನ್ ಎಂಬುದು ಗುರು ಪದ್ಮಸಂಭವ (ಗುರು ರಿನ್ಪೋಚೆ) ಗೆ ಸಂಬಂಧಿಸಿದೆ.
ಜನನದ ಸಮಯ, ದಿನ ಮತ್ತು ಜಾತಕವನ್ನು ಆಧರಿಸಿ ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ, ಭಾನುವಾರ ಜನಿಸಿದ ಮಗುವಿಗೆ ‘ದಾವಾ’ (ಅಂದರೆ ಚಂದ್ರ) ಎಂದು ಹೆಸರಿಡ ಬಹುದು. ಕೆಲವು ಹೆಸರುಗಳು ಸ್ಥಳೀಯ ದೇವತೆಗಳು, ಪ್ರಕೃತಿಯ ಅಂಶಗಳು ಅಥವಾ ಸ್ಥಳಗಳಿಂದ ಪಡೆದಿದ್ದಾಗಿರಬಹುದು.
ಉದಾಹರಣೆಗೆ, ಯಾಂಗ್ಚೆನ್ ಎಂದರೆ ‘ಗಾಯಕ’ ಅಥವಾ ಸರಸ್ವತಿಯನ್ನು ಸೂಚಿಸುತ್ತದೆ. ಭೂತಾನಿನಲ್ಲಿ, ಮಗುವಿನ ಜನನದ ನಂತರ ಕೆಲವು ದಿನಗಳು ಅಥವಾ ವಾರಗಳ ನಂತರ, ಒಂದು ಧಾರ್ಮಿಕ ಸಮಾರಂಭದಲ್ಲಿ ಲಾಮಾ ಅಥವಾ ಧಾರ್ಮಿಕ ವ್ಯಕ್ತಿಯಿಂದ ಹೆಸರನ್ನು ನೀಡಲಾಗು ತ್ತದೆ. ಈ ಸಮಯದಲ್ಲಿ, ಜಾತಕವನ್ನು (ಕೀತ್ಸೆ) ರಚಿಸಲಾಗುತ್ತದೆ. ಇದು ಮಗುವಿನ ಹಿಂದಿನ ಜನ್ಮ, ಈ ಜನ್ಮದ ಗುಣಲಕ್ಷಣಗಳು ಮತ್ತು ಭವಿಷ್ಯದ ಸವಾಲುಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರು ತ್ತದೆ.
ಕೆಲವು ಗ್ರಾಮೀಣ ಪ್ರದೇಶಗಳಲ್ಲಿ, ತಾಯಿಯರು ಅಥವಾ ತಾಯಿಯ ಕಡೆಯ ಸಂಬಂಧಿಗಳು (ಅಜ್ಜ) ಹೆಸರನ್ನು ಆಯ್ಕೆ ಮಾಡುವ ಸಂಪ್ರದಾಯವಿದೆ, ಏಕೆಂದರೆ ಬೌದ್ಧ ಸಂಸ್ಕೃತಿಯಲ್ಲಿ ತಾಯಿಯನ್ನು ‘ವಿಶ್ವದ ಮೂಲ’ ಎಂದು ಪರಿಗಣಿಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ, ಮಗುವಿನ ಜನ್ಮದ ಸಂದರ್ಭ, ಸ್ಥಳ ಅಥವಾ ಗುಣಲಕ್ಷಣಗಳ ಆಧಾರದ ಮೇಲೆ ಹೆಸರುಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ಗುಹೆಯಲ್ಲಿ ಜನಿಸಿದ ಮಗುವಿಗೆ ‘ಜಾಕು’ ಅಥವಾ ‘ಜಾಕುಮ’ ಎಂದು ಹೆಸರಿಡಬಹುದು. ಭೂತಾನಿ ನಲ್ಲಿ ಸುಮಾರು 19000 ವಿಶಿಷ್ಟ ಹೆಸರುಗಳಿವೆ. ಆದರೆ ಕೆಲವು ಹೆಸರುಗಳು ಬಹಳ ಜನಪ್ರಿಯ ವಾಗಿವೆ. ಕೆಲವು ಸಾಮಾನ್ಯ ಹೆಸರುಗಳು ಮತ್ತು ಅವುಗಳ ಅರ್ಥ: ತ್ಶೆರಿಂಗ್ ಅಂದ್ರೆ ದೀರ್ಘಾಯುಷ್ಯ. ಸೋನಮ್ ಅಂದ್ರೆ ಧಾರ್ಮಿಕ ಯೋಗ್ಯತೆ.
ಕಿನ್ಲೇ ಅಂದ್ರೆ ಚಿಮಿಲಾಖಂಗ್ ದೇವಾಲಯಕ್ಕೆ ಸಂಬಂಧಿಸಿದ್ದು. ಸಾಂಗೇ ಅಂದ್ರೆ ಬುದ್ಧ. ವಾಂಗ್ ಮೋ ಮಹಿಳೆಯರಿಗೆ ಸಾಮಾನ್ಯವಾಗಿ ಬಳಸಲಾಗುವ ಹೆಸರು. ಪೆಮಾ ಅಂದ್ರೆ ಕಮಲ, ಶಾಂತಿ ಮತ್ತು ಶುದ್ಧತೆ. ಜಿಗ್ಮೆ ಅಂದ್ರೆ ಭಯವಿಲ್ಲದವನು, ರಾಜವಂಶಕ್ಕೆ ಸೇರಿದವನು.
ಇತ್ತೀಚಿನ ವರ್ಷಗಳಲ್ಲಿ, ಕೆಲವು ಭೂತಾನಿಯರು ತಮ್ಮ ತಂದೆಯ ಅಥವಾ ಗಂಡನ ಹೆಸರನ್ನು ಉಪನಾಮವಾಗಿ ಸೇರಿಸುವ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ, ವಿಶೇಷವಾಗಿ ವಿದೇಶದಲ್ಲಿ. ಉದಾಹರಣೆಗೆ, ಒಗ್ಯೆನ್ ದೊರ್ಜಿಯನ್ನು ಒಗ್ಯೆನ್ ದೊರ್ಜಿ ವಾಂಗ್ಚುಕ್ ಎಂದು ಕರೆಯಬಹುದು.
ಕೆಲವು ಆಧುನಿಕ ಭೂತಾನಿಯರು ತಮ್ಮ ಸಾಂಪ್ರದಾಯಿಕ ಹೆಸರುಗಳನ್ನು ವಿದೇಶಿ ಹೆಸರು ಗಳೊಂದಿಗೆ ಸಂಯೋಜಿಸುತ್ತಾರೆ. ಆದರೆ ಭೂತಾನ್ನಲ್ಲಿ ಸಾಂಪ್ರದಾಯಿಕ ಹೆಸರಿನ ಸಂಪ್ರದಾ ಯವು ಬಹಳ ಪ್ರಬಲವಾಗಿದೆ. ಕೆಲವು ಹೆಸರುಗಳು, ಉದಾಹರಣೆಗೆ ಜಿಗ್ಮೆ, ಭೂತಾನ್ನ ರಾಜವಂಶ ದಿಂದ (ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್ಚುಕ್) ಸೂರ್ತಿಯಾಗಿವೆ.
ಭೂತಾನಿನಲ್ಲಿ ಕೇವಲ 50-60 ಮೂಲಭೂತ ಹೆಸರುಗಳಿವೆ, ಆದ್ದರಿಂದ ಒಂದೇ ಹೆಸರು ಹಲವಾರು ಜನರಿಗೆ ಸಾಮಾನ್ಯವಾಗಿದೆ. ಇದರಿಂದ ಗೊಂದಲವನ್ನು ತಪ್ಪಿಸಲು, ಕೆಲವೊಮ್ಮೆ ಸ್ಥಳದ ಹೆಸರು (ಉದಾ: ಪಾರೋ ಪೆಮಾ) ಅಥವಾ ಇತರ ವಿವರಣೆಯನ್ನು ಸೇರಿಸಲಾಗುತ್ತದೆ. ಕೆಲವು ಹೆಸರುಗಳು, ಉದಾಹರಣೆಗೆ ವಾಂಗ್ಮೋ, ಚೋಡೆನ್, ಕಿಬಾ, ಯಾಂಗ್ಕಿ, ಲ್ಹಾಮೋ, ಮಹಿಳೆಯರಿಗೆ ಸಾಮಾನ್ಯ ವಾಗಿವೆ.
ಆದರೆ ಇವನ್ನು ಕೂಡ ಕೆಲವೊಮ್ಮೆ ಗಂಡಸರಿಗೂ ಬಳಸಬಹುದು.‘ಡ್ರಕ್’ ಎಂಬ ಹೆಸರು ಭೂತಾನ್ ಗೆ ವಿಶಿಷ್ಟವಾದುದು, ಹೀಗೆಂದರೆ ‘ಥಂಡರ್ ಡ್ರಾಗನ್’ ಎಂದರ್ಥ. ಇದು ಭೂತಾನಿನ ರಾಷ್ಟ್ರೀಯ ಗುರುತನ್ನು ಪ್ರತಿಬಿಂಬಿಸುತ್ತದೆ (ಭೂತಾನಿನ ಆಧಿಕೃತ ಹೆಸರು ಡ್ರಕ್ ಯುಲ್). ಭೂತಾನಿ ಹೆಸರು ಗಳು ಕೇವಲ ಗುರುತಿಗಾಗಿ ಮಾತ್ರವಲ್ಲ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನೂ ಪ್ರತಿಬಿಂಬಿಸು ತ್ತವೆ.
ಈ ಹೆಸರುಗಳನ್ನು ಒಬ್ಬ ವ್ಯಕ್ತಿಯ ಜೀವನದಲ್ಲಿ ಶುಭವನ್ನು ತರಲು ಮತ್ತು ಬೌದ್ಧ ತತ್ವಗಳನ್ನು ನೆನಪಿಸುವ ಉದ್ದೇಶದಿಂದ ಇಡಲಾಗುತ್ತದೆ. ಆಧುನಿಕ ಬದಲಾವಣೆಗಳ ಹೊರತಾಗಿಯೂ, ಭೂತಾನ್ ನಲ್ಲಿ ಸಾಂಪ್ರದಾಯಿಕ ಹೆಸರಿನ ಪ್ರಭಾವ ಇನ್ನೂ ಬಲವಾಗಿದೆ. ಇದು ದೇಶದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.
ಇತರರಿಗೂ ಮಾದರಿ
ಭೂತಾನ್ನಲ್ಲಿ ಸಂಚರಿಸಿ, ಅಲ್ಲಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಂಡಾಗ ಗಮನಕ್ಕೆ ಬರುವ ಸಂಗತಿಯೆಂದರೆ, ಅಲ್ಲಿನ ಅನನ್ಯವಾದ ಆಡಳಿತ ತತ್ವಗಳು, ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆ. ಇದರಿಂದ ಭೂತಾನ್ ಜಗತ್ತಿನಲ್ಲಿ ಒಂದು ವಿಶೇಷ ಸ್ಥಾನವನ್ನು ಗಳಿಸಿರುವುದು ಗಮನಾರ್ಹ. ಹಣಕಾಸಿನ ಬೆಳವಣಿಗೆಗಿಂತ ಜನರ ಸಂತೋಷ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದ ಜಗತ್ತಿನ ಮೊದಲ ರಾಷ್ಟ್ರ ಭೂತಾನ್.
ಭೂತಾನಿನ ಯಶಸ್ಸಿನ ಹಿಂದಿನ ಮುಖ್ಯ ತತ್ವ ಒಟ್ಟು ರಾಷ್ಟ್ರೀಯ ಸಂತೋಷ (Gross National Happiness ). ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ರೂಪಿಸಿದ ಈ ಪರಿಕಲ್ಪನೆಯು ಕೇವಲ ಆರ್ಥಿಕ ಪ್ರಗತಿ, ಅಂದರೆ ಒಟ್ಟು ದೇಶೀಯ ಉತ್ಪನ್ನ (GDP) ವನ್ನು ಮಾತ್ರವಲ್ಲದೆ, ಮಾನವನ ಸಂಪೂರ್ಣ ಸಂತೋಷ ಮತ್ತು ಯೋಗಕ್ಷೇಮವನ್ನು ಅಳೆಯುವ ಉದಾತ್ತ ಉದ್ದೇಶ ಹೊಂದಿರು ವುದು ವಿಶೇಷ.
ಭೂತಾನ್ ಸರಕಾರವು ನೀತಿಗಳನ್ನು ರೂಪಿಸುವಾಗ, ಶಿಕ್ಷಣ, ಆರೋಗ್ಯ, ಜೀವನ ಗುಣಮಟ್ಟ ಮತ್ತು ಸಂಸ್ಕೃತಿ ಈ ನಾಲ್ಕು ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ಸುಧಾರಣೆ ತರಲು ಒಟ್ಟು ರಾಷ್ಟ್ರೀಯ ಸಂತೋಷ (GNH) ಸೂಚಕಗಳನ್ನು ಬಳಸುತ್ತದೆ. ಭೂತಾನ್ನ ಈ ತತ್ವವು ಬ್ರಿಟನ್, ಫ್ರಾನ್ಸ್, ಬ್ರೆಜಿಲ್ ಮುಂತಾದ ದೇಶಗಳಿಗೆ ಹಾಗೂ ವಿಶ್ವಬ್ಯಾಂಕ್ನಂಥ ಸಂಸ್ಥೆಗಳಿಗೆ ಸ್ಪೂರ್ತಿ ನೀಡಿದೆ. ಭೂತಾನ್ ಪರಿಸರ ಸಂರಕ್ಷಣೆಯಲ್ಲಿ ವಿಶ್ವಕ್ಕೇ ಒಂದು ಮಾದರಿಯಾಗಿದೆ. ರಾಜರ ಆಡಳಿತದಲ್ಲಿ ಪ್ರಕೃತಿ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿತ್ತು.
ಭೂತಾನ್ ವಿಶ್ವದ ಏಕೈಕ ಕಾರ್ಬನ್ ನೆಗೆಟಿವ್ ರಾಷ್ಟ್ರವಾಗಿದೆ. ಅಂದರೆ, ಅದು ಉತ್ಪಾದಿಸುವು ದಕ್ಕಿಂತ ಹೆಚ್ಚು ಇಂಗಾಲವನ್ನು ಹೀರಿಕೊಳ್ಳುತ್ತದೆ. ಇದು ಶೇ.70ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಕಾಪಾಡಿಕೊಂಡಿರುವುದರಿಂದ ಸಾಧ್ಯವಾಗಿದೆ. ಇಲ್ಲಿನ ದಟ್ಟವಾದ ಅರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳು ಅಪಾಯದಲ್ಲಿರುವ ಅನೇಕ ಪ್ರಾಣಿಗಳಿಗೆ ಸುರಕ್ಷಿತ ಆವಾಸಸ್ಥಾನವನ್ನು ಒದಗಿಸಿವೆ.
ಉದಾಹರಣೆಗೆ ಹಿಮ ಚಿರತೆ (snow leopard) ಮತ್ತು ಬಂಗಾಳ ಹುಲಿ (Bengal tiger). ಪ್ಲಾಸ್ಟಿಕ್ ಚೀಲಗಳ ನಿಷೇಧ, ಹೈಡ್ರೊಇಲೆಕ್ಟ್ರಿಸಿಟಿ ಉತ್ಪಾದನೆಗೆ ಒತ್ತು ನೀಡುವುದು ಮತ್ತು ಮರಗಳ ನಾಶ ವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಭೂತಾನ್ನ ಕೆಲವು ಪರಿಸರ ಸ್ನೇಹಿ ನೀತಿಗಳಾಗಿವೆ.
ಬೌದ್ಧ ಧರ್ಮವು ಭೂತಾನ್ ಸಂಸ್ಕೃತಿಯ ಅವಿಭಾಜ್ಯ ಅಂಗ. ಇಲ್ಲಿನ ಅನೇಕ ಸ್ಮಾರಕಗಳು, ದೇವಸ್ಥಾನಗಳು ಮತ್ತು ಉತ್ಸವಗಳು ಧಾರ್ಮಿಕ ಮಹತ್ವವನ್ನು ಹೊಂದಿವೆ. ಟಿಬೆಟಿಯನ್ ಬೌದ್ಧ ಧರ್ಮದ ಶಾಖೆ ಇಲ್ಲಿ ಪ್ರಮುಖವಾಗಿದೆ. ಯಾವುದೇ ಒತ್ತಡವಿಲ್ಲದೇ, ಇಲ್ಲಿ ನ ಜನ ನೆಮ್ಮದಿಯಿಂದ ಜೀವನ ಸಾಗಿಸುವ ವಿಧಾನ ಉಳಿದವರಿಗೆ ಒಂದು ಆದರ್ಶವೇ.
ರಾಜಮನೆತನ ಮತ್ತು ಜನರ ಸಂಬಂಧ
ಈಗ ಭೂತಾನಿನಲ್ಲಿ ರಾಜಮನೆತನದವರ ದರ್ಬಾರು ಇಲ್ಲ. ಪ್ರಜಾಪ್ರಭುತ್ವ ನೆಲೆಸಿ 18 ವರ್ಷ ಗಳಾದರೂ, ಅಲ್ಲಿನ ಜನರಿಗೆ ರಾಜಮನೆತನದ ಮೇಲಿನ ಪ್ರೀತಿ, ಗೌರವ ಮತ್ತು ಅಭಿಮಾನ ಸ್ವಲ್ಪವೂ ಕಮ್ಮಿಯಾಗಿಲ್ಲ. ಭೂತಾನಿನ ಜನರ ಮತ್ತು ರಾಜಮನೆತನದ ನಡುವಿನ ಸಂಬಂಧವು ಕೇವಲ ಆಡಳಿತಾತ್ಮಕವಾದದ್ದಲ್ಲ. ಅದು ಭಾವನಾತ್ಮಕ ಮತ್ತು ಆಳವಾದದ್ದು. ರಾಜಮನೆತನದವರನ್ನು ಅವರು ಕೇವಲ ಆಡಳಿತಗಾರರಂತೆ ನೋಡುವುದಿಲ್ಲ,
ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ಮತ್ತು ಪೂಜನೀಯ ವ್ಯಕ್ತಿಗಳಂತೆ ನೋಡುತ್ತಾರೆ ಎಂಬುದು ಎಂಥವರಿಗಾದರೂ ಗಮನಕ್ಕೆ ಬರದೇ ಹೋಗುವುದಿಲ್ಲ. ಭೂತಾನಿನ ಬಹುತೇಕ ಮನೆ ಗಳಲ್ಲಿ, ವಿಶೇಷವಾಗಿ ಲಿವಿಂಗ್ ರೂಮ್ಗಳಲ್ಲಿ ಮತ್ತು ಪೂಜಾ ಕೋಣೆಗಳಲ್ಲಿ, ರಾಜ, ರಾಣಿ ಮತ್ತು ರಾಜಮನೆತನದ ಇತರ ಸದಸ್ಯರ ದೊಡ್ಡ ಚಿತ್ರಗಳನ್ನು ಇರಿಸಲಾಗುತ್ತದೆ.
ಈ ಚಿತ್ರಗಳನ್ನು ಬುದ್ಧನ ವಿಗ್ರಹಗಳ ಪಕ್ಕದಲ್ಲಿಯೇ ಇಡುವುದು, ಅವರು ರಾಜಮನೆತನವನ್ನು ದೈವಿಕ ವ್ಯಕ್ತಿಗಳಂತೆ ಗೌರವಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಇದು ಕೇವಲ ಪ್ರದರ್ಶನಕ್ಕಲ್ಲ, ಬದಲಾಗಿ ರಾಜನ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾ ಇರಲಿ ಎಂಬ ನಂಬಿಕೆಯ ಪ್ರತೀಕ ವಾಗಿದೆ. ಅಂಗಡಿ, ಹೋಟೆಲು ಸೇರಿದಂತೆ ಎಲ್ಲಿಯೇ ಹೋದರೂ ರಾಜಮನೆತನದವರ ಫೋಟೋ ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಕೆಲವರು ತಮ್ಮ ಮನೆಯ ಪೂಜಾಮಂದಿರಗಳಲ್ಲಿ ದೇವರ ಪಕ್ಕದಲ್ಲಿ ರಾಜಮನೆತನದವರ ಫೋಟೋಗಳನ್ನಿಡುವುದು ಸಾಮಾನ್ಯ. ಕಳೆದ ಒಂದು ಶತಮಾನದಿಂದ ರಾಜಮನೆತನವು ಭೂತಾ ನಿಗೆ ತಂದಿರುವ ಪ್ರಗತಿ, ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಜನರು ಈಗಲೂ ಹೆಮ್ಮೆಯಿಂದ ಮಾತ ನಾಡುತ್ತಾರೆ. ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು ದೇಶವನ್ನು ಪ್ರಜಾಪ್ರಭುತ್ವಕ್ಕೆ ಪರಿವರ್ತಿಸಿದ ಐತಿಹಾಸಿಕ ನಿರ್ಧಾರವು, ರಾಜನ ಮೇಲಿನ ಜನರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಅವರ ಈ ದೂರದೃಷ್ಟಿಯು ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಜನರು ನಂಬಿದ್ದಾರೆ.
ರಾಜ ಮತ್ತು ರಾಜಮನೆತನದ ಸದಸ್ಯರು ಜನರೊಂದಿಗೆ ಬೆರೆಯುವ ಮತ್ತು ಅವರ ಕಷ್ಟ-ಸುಖ ಗಳಲ್ಲಿ ಭಾಗವಹಿಸುವ ಸಂಪ್ರದಾಯವು ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಭೂತಾ ನಿನ ರಾಷ್ಟ್ರೀಯ ದಿನಾಚರಣೆ (ಡಿಸೆಂಬರ್ 17) ಜನರ ಪಾಲಿಗೆ ಒಂದು ವಿಶೇಷ ಹಬ್ಬ. ಈ ದಿನ, ರಾಜರು ಪ್ರತಿ ವರ್ಷ ದೇಶದ ಬೇರೆ ಬೇರೆ ಜಿಗಳಿಗೆ ಪ್ರಯಾಣಿಸಿ ಅಲ್ಲಿನ ಜನರೊಂದಿಗೆ ಉತ್ಸವದಲ್ಲಿ ಭಾಗವಹಿಸುತ್ತಾರೆ. ಇದು ರಾಜ ಮತ್ತು ಜನರ ನಡುವಿನ ನೇರ ಸಂಪರ್ಕಕ್ಕೆ ಅವಕಾಶ ನೀಡುತ್ತದೆ. ಈ ರಾಷ್ಟ್ರೀಯ ದಿನಾಚರಣೆಯನ್ನು ನೋಡಲು ಮತ್ತು ವಿಶೇಷವಾಗಿ ರಾಜರನ್ನು ಖುದ್ದಾಗಿ ಭೇಟಿ ಯಾಗಲು, ದೂರದ ಊರುಗಳಿಂದ ಮತ್ತು ಗ್ರಾಮೀಣ ಪ್ರದೇಶಗಳಿಂದ ಜನರು ಬರುತ್ತಾರೆ. ರಾಜರು ಅವರೊಂದಿಗೆ ಬೆರೆತು, ಅವರ ಕಷ್ಟಗಳನ್ನು ಆಲಿಸುತ್ತಾರೆ. ಈ ನಿಕಟ ಸಂಪರ್ಕವು ಪ್ರಪಂಚದ ಬೇರೆಡೆ ಎಲ್ಲೂ ನೋಡಲು ಸಾಧ್ಯವಿಲ್ಲವೇನೋ? ಭೂತಾನಿನ ರಾಜಮನೆತನ ಮತ್ತು ಜನರು ಪರಸ್ಪರ ನಂಬಿಕೆ, ಪ್ರೀತಿ ಮತ್ತು ಗೌರವದ ಆಧಾರದ ಮೇಲೆ ಒಂದು ಅನನ್ಯ ಸಂಬಂಧ ವನ್ನು ಹಂಚಿಕೊಳ್ಳುವ ಪರಿಯೇ ಒಂದು ಉಜ್ವಲ ಪರಂಪರೆ ಇನ್ನೂ ಜೀವಂತವಾಗಿರುವುದರ ದ್ಯೋತಕ.